ಮೊನ್ನೆ ಪ್ರಜಾವಾಣಿಯಲ್ಲಿ ದಲಿತ ಮುಖ್ಯಮಂತ್ರಿ 2023ಕ್ಕೆ ಸಾಧ್ಯವೇ ಎಂಬ ಚರ್ಚೆ ಇತ್ತು. ಚರ್ಚೆಯಲ್ಲಿ ಕೊಳ್ಳೇಗಾಲದ ಶಾಸಕರಾದ ಎನ್.ಮಹೇಶ್, ಕಾಂಗ್ರೆಸ್‍ನ ನಾಯಕರಾದ ಬಿ.ಎಲ್.ಶಂಕರ್ ಮತ್ತು ನಾನು ಇದ್ದೆವು. ಮಾರನೆಯ ದಿನದ ಪತ್ರಿಕೆಯಲ್ಲಿ ಅದು ವರದಿಯಾದ ರೀತಿ ನೋಡಿ ನನಗೇ ಗಾಬರಿಯಾಯಿತು. ಹಲವು ಗೆಳೆಯರು ಅಲ್ಲೇನು ಮಾತಾಡಿದಿರಿ ಅಂತಲೇ ಗೊತ್ತಾಗುತ್ತಿಲ್ಲ, ಗೊತ್ತಾಗಿದ್ದಷ್ಟೂ ಗೊಂದಲಕಾರಿಯಾಗಿದೆ ಎಂದರು. ಸಾರಾಂಶದಲ್ಲಿ ಅಲ್ಲಿ ಮಾತಾಡಿದ್ದನ್ನು ಇಲ್ಲಿ ಬರೆದಿದ್ದೇನೆ.

ದಲಿತ ಸಮುದಾಯಕ್ಕೆ ಸೇರಿದವರು ಮುಖ್ಯಮಂತ್ರಿ ಆಗಬೇಕು. ಈಗಾಗಲೇ ಅಂತಹ ಸಮರ್ಥರಿದ್ದರೂ ಅವಕಾಶ ಸಿಗದಂತೆ ಆಗಿದೆ. ಆ ನಂತರ ಮುಸ್ಲಿಮರು, ಮಹಿಳೆಯರೂ ಮುಖ್ಯಮಂತ್ರಿಗಳಾಗಬೇಕು.

ಆದರೆ, ಇದೇ ರೀತಿಯಲ್ಲಿ ಚುನಾವಣೆಗಳು ನಡೆದು, ಇದೇ ರೀತಿಯಲ್ಲೇ ಗೆಲುವು ಸಾಧಿಸುವುದಾದಲ್ಲಿ ಶೋಷಿತ ಸಮುದಾಯಗಳಿಂದ ಬಂದವರು ಮುಖ್ಯಮಂತ್ರಿಯಾಗುವುದು ಸಾಧ್ಯವಿಲ್ಲ. ಒಂದು ವೇಳೆ ಸಾಧ್ಯವಾಗುವುದಾದರೂ ಅವರು ಇನ್ಯಾರದ್ದೋ ಡಮ್ಮಿಯಾಗಿ ಮಾತ್ರ ಆ ಜಾಗದಲ್ಲಿರುತ್ತಾರೆ. ಗೋವಿಂದ ಕಾರಜೋಳರನ್ನು ಪಿಡಬ್ಲ್ಯುಡಿ ಮಂತ್ರಿ ಮಾಡಿರುವುದೇ ಸೂಪರ್ ಸಿಎಂ ಆ ಖಾತೆಯನ್ನು ನಿಭಾಯಿಸಿ ತಿಜೋರಿ ತುಂಬಿಸಿಕೊಳ್ಳಲಿಕ್ಕೆ ಆಗಿದೆ. ಹಾಗೆ ನೋಡಿದರೆ ಇಂದು ಯಾರು ಮುಖ್ಯಮಂತ್ರಿ ಅಭ್ಯರ್ಥಿಗಳಾಗಬೇಕು, ಮುಖ್ಯಮಂತ್ರಿಯಾಗಬೇಕು ಎಂಬುದನ್ನು ನಿರ್ಧರಿಸುವುದು ಸರಸಂಘಸಂಚಾಲಕರು ಅಥವಾ ಕಾಂಗ್ರೆಸ್‍ನ ಹೈಕಮ್ಯಾಂಡ್ ಆಗಿದೆ. ಹಾಗಾಗಿ ಆ ಜಾಗದಲ್ಲಿ ದಲಿತರು ಬೇಕು ಎಂಬುದನ್ನೂ ಹೇಳಬೇಕು (ಅದಾಗಿಬಿಡುತ್ತದೆಂದಲ್ಲಾ, ಆ ಹಿಪಾಕ್ರಸಿಯನ್ನು ಬಯಲುಗೊಳಿಸಲು).

ದಲಿತ ಮುಖ್ಯಮಂತ್ರಿಯಾಗುವ ಅಲ್ಪಸ್ವಲ್ಪ ಸಾಧ್ಯತೆಯಿರುವ ಕಾಂಗ್ರೆಸ್‍ನಲ್ಲಿ ಏನಾಗಬೇಕು ಎಂದು ಕಾಂಗ್ರೆಸ್‍ನ ಹೊರಗಿರುವವರೇ ಜಾಸ್ತಿ ಮಾತಾಡುವುದೊಂದು ಸೋಜಿಗ. ವಾಸ್ತವದಲ್ಲಿ ಅವರ ಉದ್ದೇಶ ದಲಿತ ಮುಖ್ಯಮಂತ್ರಿ ಆಗಬೇಕು ಎಂಬುದಕ್ಕಿಂತ ಇಂತಹ ಚರ್ಚೆಯಿಂದ ಕಾಂಗ್ರೆಸ್ ದುರ್ಬಲವಾಗಬೇಕು ಎಂಬುದೇ ಆಗಿರುವಂತೆ ತೋರುತ್ತದೆ. ನಿಜವಾಗಲೂ ಮುಖ್ಯಮಂತ್ರಿ ಅಥವಾ ಇನ್ನಿತರ ಅಧಿಕಾರ ಸ್ಥಾನಗಳಲ್ಲಿ ದಲಿತರು ಮತ್ತು ಇತರ ಶೋಷಿತ ಸಮುದಾಯಗಳವರು ಬರಬೇಕೆಂದು ಬಯಸುವವರು, ಆ ಸಮುದಾಯಗಳಿಗೆ ಸೇರಿದವರ ನಾಯಕತ್ವ ಬೆಳೆಯುವಂತೆ ಮಾಡಬೇಕಾಗುತ್ತದೆ. ಅದಕ್ಕೆ ಗಂಭೀರ ಪ್ರಯತ್ನ ಮಾಡಬೇಕಾಗುತ್ತದೆ. ಅದು ಹೊಸ ರಾಜಕೀಯದಿಂದ ಸಾಧ್ಯ. ಈಗಿನದ್ದು ಹಳೆಯ ರೀತಿಯ ರಾಜಕಾರಣ ಮತ್ತು ಅದು ಇನ್ನೂ ಪಾತಾಳಕ್ಕೆ ಇಳಿಯುತ್ತಿದೆ. ಎಲ್ಲಾ ಪ್ರತಿಗಾಮಿತನಗಳ ಪ್ರತೀಕವಾಗಿ ಬಿಜೆಪಿ ಬೆಳೆದು ನಿಂತಿದೆ. ಹೀಗಿರುವಾಗ ಹೊಸ ರೀತಿಯ ರಾಜಕಾರಣ ಅಥವಾ ನಿಜವಾದ ರಾಜಕಾರಣ ಸಾಧ್ಯವೇ ಇಲ್ಲ ಎಂಬಂತೆ ಎಲ್ಲರೂ ಕೈ ಚೆಲ್ಲಿದ್ದಾರೆ. ಇದೇ ಸಮಸ್ಯೆ.

ರಾಜಕಾರಣವೆಂಬುದು ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಕ್ರಿಯೆ. ನಮ್ಮ ರಾಜಕಾರಣ ಹಾಗೂ ಚುನಾವಣೆಗಳು ಪೂರಾ ಎಕ್ಕುಟ್ಟಿ ಹೋಗಿದೆ ಎಂದು ಭಾವಿಸಲಾಗಿರುವ ಇಪ್ಪತ್ತೊಂದನೇ ಶತಮಾನದಲ್ಲೇ ಮೂರು ‘ಅಸಾಧ್ಯ’ವಾದ ಬೆಳವಣಿಗೆಗಳು ನಡೆದಿದೆ. ಒಂದು, ದಲಿತ ನಾಯಕತ್ವವನ್ನು (ಒಂದುಮಟ್ಟಿಗೆ ನಿಜಾರ್ಥದಲ್ಲಿ) ಹೊಂದಿದ್ದ ಬಿಎಸ್‍ಪಿಯು ದೇಶದ ಭಾರೀ ದೊಡ್ಡ ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿತು. ಜಾತಿ, ಹಣಬಲವನ್ನು ಆಧರಿಸದೇ ಆಮ್ ಆದ್ಮಿ ಪಕ್ಷವು ಒಂದು ಪುಟ್ಟ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತು. ಜಾತಿ ಮೀರಿ ಜನರು ಮತ ಹಾಕುವಂತೆ ಒಂದು ‘ಹಿಂದೂ’ ಐಡೆಂಟಿಟಿಯನ್ನು ಕಟ್ಟಲು ಬಿಜೆಪಿಗೆ ಸಾಧ್ಯವಾಯಿತು. ಈ ಮೂರೂ ನಮ್ಮ ಕಣ್ಣೆದುರಿಗೇ ನಡೆದಿವೆ ಮತ್ತು ಈ ಇಪ್ಪತ್ತು ವರ್ಷಗಳಲ್ಲಿ ನಡೆದಿವೆ. ಈ ಮೂರೂ ಪ್ರಯೋಗಗಳ ಕುರಿತು ನಮಗೆ ತಕರಾರಿಬಹುದು, ಅದರಲ್ಲೂ ಬಿಜೆಪಿಯದ್ದು ಅತ್ಯಂತ ಘಾತುಕ ರಾಜಕಾರಣವಾಗಿದೆ ಎಂಬ ಅನಿಸಿಕೆಯೂ ಇರಬಹುದು. ಆದರೆ ಇಂತಹ ಪ್ರಯೋಗಗಳು ಸಾಧ್ಯವಾಗಿರುವುದು ವಾಸ್ತವ.

ಹಾಗಾಗಿ ಹೊಸದೇ ರೀತಿಯ ರಾಜಕಾರಣ ಅಸಾಧ್ಯ ಎಂಬುದೇ ಇಂದಿನ ದೊಡ್ಡ ಶತ್ರು. ಅದರ ಅರ್ಥ, ಅಸಾಧ್ಯವಾದ ಆದರ್ಶಗಳನ್ನು ಹೇಳುವ, ಹೊಂದಾಣಿಕೆಗಳೇ ಇಲ್ಲದಂತೆ ಎಲ್ಲವನ್ನೂ ನಡೆಸುತ್ತೇವೆ ಎಂದಲ್ಲ. ರಾಜಕಾರಣವೆಂಬುದು ವಿಶಿಷ್ಟ ಹೊಂದಾಣಿಕೆಗಳನ್ನು ಸಾಧಿಸುವ ಒಂದು ಕ್ರಿಯೆಯೂ ಹೌದು. ಆದರೆ ತತ್ವಗಳ ಜೊತೆ ರಾಜಿ ಮಾಡಿಕೊಳ್ಳದೇ, ತಂತ್ರಗಳನ್ನೂ ಹೆಣೆದು ಶೋಷಿತ ಸಮುದಾಯಗಳ ನಾಯಕತ್ವವು ಸಂಘಟನೆಯಲ್ಲಿ, ಆಂದೋಲನದಲ್ಲಿ ಮತ್ತು ರಾಜಕಾರಣದಲ್ಲಿ ಮುನ್ನೆಲೆಗೆ ಬರುವಂತೆ ಮಾಡಬೇಕಿದೆ. ಅಂತಹ ಹೊಸ ರಾಜಕಾರಣಕ್ಕೆ ಮುಂದಾಗದಿರುವ ದೌರ್ಬಲ್ಯವನ್ನು ನಾವು ಎದುರಿಸಿ ನಿಂತಾಗ ಅದು ಸಾಧ್ಯ. ಅದು ಈ ದೇಶದಲ್ಲೇ, ಮುಂದಿನ ದಿನಗಳಲ್ಲಿ ಸಂಭವಿಸಲಿದೆ ಎಂಬ ವಿಶ್ವಾಸವಿದೆ.

ಸಾರಾಂಶದಲ್ಲಿ ನಾನು ಹೇಳಿದ್ದು ಇಷ್ಟು.

ಡಾ ವಾಸು.ಹೆಚ್.ವಿ.