05:46 am Wednesday, July 24, 2019
 • ಕೆಲವು ಕನ್ನಡ ಚಾನಲ್ಗಳ ಮನೆಹಾಳು ಧೋರಣೆ

  By admin - Mon Feb 04, 1:42 am

  • Comments Off on ಕೆಲವು ಕನ್ನಡ ಚಾನಲ್ಗಳ ಮನೆಹಾಳು ಧೋರಣೆ
  • 0 views

  ಕೆಲವು ಕನ್ನಡ ಚಾನಲ್ಗಳ ಮನೆಹಾಳು ಧೋರಣೆ “_____________ ________
  ಕನ್ನಡ ಪತ್ರಿಕೆಗಳಿಗೆ ಒಂದೂವರೆ ಶತಮಾನದ ಇತಿಹಾಸ. 1841ರ ಜುಲೈ ಒಂದರಂದು ಬಾಸೆಲ್ ಮಿಷನ್ ಪಾದ್ರಿ ಹರ್ಮನ್ ಮೋಗ್ಲಿಂಗ್ ಪ್ರಾರಂಭ ಮಾಡಿದ `ಮಂಗಳೂರು ಸಮಾಚಾರ’ಕ್ಕೆ ಜನತೆಯಲ್ಲಿ ಸತ್ಯ ಸಂಗತಿಯನ್ನು ತಿಳಿಸುವ ಇರಾದೆ ಇತ್ತು. ಸುತ್ತಲಿನ ಪರಿಸರದ ಅರಿವು, ದೇಶ ವಿದೇಶಗಳ ಸುದ್ದಿಯನ್ನು ಜನರಿಗೆ ಕೊಡುವ ಉದ್ದೇಶವೂ ಇತ್ತು. ಜನರ ಸಮಸ್ಯೆಗಳನ್ನು ಸರ್ಕಾರಕ್ಕೆ ತಿಳಿಸಿ ಅದರ ಪರಿಹಾರಕ್ಕೆ ಒತ್ತಾಯಿಸುವ ಜವಾಬ್ದಾರಿಯೂ ಇತ್ತು. ಮುದ್ರಣ ತಂತ್ರಜ್ಞಾನ ದೇಶದಲ್ಲಿ ಉದ್ಯಮವಾಗಿ ಪ್ರವೇಶ ಪಡೆಯುತ್ತಿದ್ದಂತೆ ಆಗಿನ ವಿದ್ಯಾವಂತ ಜನರಿಗೆ ಮತ್ತು ಸಾಮಾನ್ಯ ಜನರಿಗೆ ಹೆಚ್ಚಿನ ಅರಿವನ್ನು ಮೂಡಿಸುವ ದೃಷ್ಟಿಯಿಂದ ಅನೇಕ ವೃತ್ತಿಪರರು ಪತ್ರಿಕೆಗಳನ್ನು ಆರಂಭಿಸಿದರು. ಅವರ ದೃಷ್ಟಿ ಬೋಧನೆ. ಶೈಕ್ಷಣಿಕ ಉದ್ದೇಶದಿಂದ ಪ್ರಾರಂಭವಾದ ಪತ್ರಿಕೆಗಳು ಕ್ರಮೇಣ ತಮ್ಮದೇ ಆದ ಓದುಗ ವರ್ಗವನ್ನು ಸೃಷ್ಟಿಸಿಕೊಂಡು ಅಭಿಪ್ರಾಯ ರೂಪಿಸುವ ಮಟ್ಟಕ್ಕೆ ಬೆಳೆದಾಗ ಅಂದಿನ ಸರ್ಕಾರಗಳು ಈ ಪ್ರಭಾವವನ್ನು ಗುರುತಿಸತೊಡಗಿದವು. ಪತ್ರಿಕೆಗಳಿಗೆ ಸಂಬಂಧಿಸಿದ ಕಾನೂನುಗಳನ್ನು ರಚಿಸುವುದಕ್ಕೆ ಕಾರಣವಾದದ್ದು ಪತ್ರಿಕೆಗಳು ಜನತೆಯಲ್ಲಿ ಮೂಡಿಸಿದ್ದ ಜಾಗೃತಿಯ ಪ್ರಭಾವ. ಆಡಳಿತಕ್ಕೆ ಇರಿಸುಮುರಿಸನ್ನು ತರುವ ಸಂಗತಿಗಳು ಪತ್ರಿಕೆಗಳ ಮೂಲಕ ಜನತೆಯ ಗಮನಕ್ಕೆ ಬರುವುದನ್ನು ನಿಯಂತ್ರಿಸಲು ಅನೇಕ ಕಟ್ಟಳೆಗಳನ್ನು ಅಂದಿನ ಪ್ರಭುತ್ವ ಯೋಚಿಸಿ ಕಾಯ್ದೆಗಳನ್ನು ರೂಪಿಸಿತು.
  ಜನತೆಯಲ್ಲಿ ಪ್ರಭಾವ ಬೀರುವ ಪತ್ರಿಕೆಗಳ ಸಾಮರ್ಥ್ಯ ಅಂದಿನ ಸ್ವಾತಂತ್ರ್ಯ ಹೋರಾಟ ಕಾಲದಲ್ಲಿಯೂ ಬಳಕೆಗೆ ಬಂದಿದೆ. ಬ್ರಿಟಿಷರ ವಿರುದ್ಧ ಜನಾಭಿಪ್ರಾಯವನ್ನು ಮೂಡಿಸುವುದಕ್ಕೆ ಅಂದಿನ ಸ್ವಾತಂತ್ರ್ಯ ಹೋರಾಟಗಾರರು ಪತ್ರಿಕಾ ಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಂಡರು. ರಾಷ್ಟ್ರಪಿತ ಮಹಾತ್ಮ ಗಾಂಧಿ ತಮ್ಮ ವಿಚಾರಗಳನ್ನು ಜನತೆಯ ಮುಂದೆ ಇಡುವುದಕ್ಕೆ `ನವ ಜೀವನ’, `ಹರಿಜನ’, `ಯಂಗ್ ಇಂಡಿಯಾ’ ಮೊದಲಾದ ಪತ್ರಿಕೆಗಳನ್ನು ಹೊರಡಿಸಿದರು. ನೆಹರೂ, ಅಂಬೇಡ್ಕರ್, ರಾಮಮನೋಹರ ಲೋಹಿಯಾ ಮೊದಲಾದ ರಾಷ್ಟ್ರ ನಾಯಕರು ಪತ್ರಿಕೆಗಳನ್ನು ತಮ್ಮ ವಿಚಾರಗಳ ವಾಹಕವನ್ನಾಗಿ ಬಳಸಿಕೊಂಡರು. ಮೊಳೆ ಜೋಡಿಸಿ, ಕಾಲಿನಿಂದ ಒತ್ತಿ ಪತ್ರಿಕೆಗಳನ್ನು ಮುದ್ರಿಸುವ ತಾಂತ್ರಿಕತೆ ಇದ್ದ ದಿನಗಳಲ್ಲಿ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳು ಹೊರ ಬರುತ್ತಿದ್ದವು. ಅವು ಜನತೆಯನ್ನು ಜಾಗೃತರನ್ನಾಗಿಸುವ ಪ್ರಯತ್ನದಲ್ಲಿ ತೊಡಗಿದ್ದು ಇಪ್ಪತ್ತನೆಯ ಶತಮಾನದ ಸಾಮಾಜಿಕ ಬದುಕಿನಲ್ಲಿ ಗಮನಾರ್ಹವಾದ ವಿದ್ಯಮಾನ.
  ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಅನೇಕ ಶತಮಾನಗಳಿಂದ ಪರಕೀಯರ ಆಳ್ವಿಕೆಯಲ್ಲಿ ನಲುಗಿ ಹೋಗಿದ್ದ ದೇಶವನ್ನು ಆಧುನಿಕವಾಗಿ ನಿರ್ಮಿಸುವ ಗುರುತರ ಹೊಣೆಯನ್ನು ನಿರ್ವಹಿಸುವುದರಲ್ಲಿ ಪತ್ರಿಕೆಗಳೂ ಮುಂದಾದವು. ಜನತೆಯನ್ನು ಜಾಗೃತಗೊಳಿಸುವ ವೈಚಾರಿಕ ಪ್ರಯತ್ನಕ್ಕೆ ಪತ್ರಿಕೆಗಳು ಪ್ರಮುಖ ವಾಹಕಗಳಾದವು. ಸುಶಿಕ್ಷಿತ ಜನರನ್ನು ಮಾತ್ರವೇ ಉದ್ದೇಶಿಸಿದ್ದರೂ ಇಡೀ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸ್ವಾತಂತ್ರ್ಯಾನಂತರ ಅಸ್ತಿತ್ವಕ್ಕೆ ಬಂದ ಪತ್ರಿಕೆಗಳ ದೃಷ್ಟಿಯಾಯಿತು. ಜನರಲ್ಲಿ ತಿಳುವಳಿಕೆ ನೀಡುವುದು, ಮನರಂಜನೆ ಒದಗಿಸುವುದು, ಒಳ್ಳೆಯ ಅಭಿರುಚಿಯನ್ನು ಬೆಳೆಸುವುದು, ದೇಶ ವಿದೇಶಗಳ ಸಂಗತಿಯನ್ನು ನೀಡಿ ಅವರಲ್ಲಿ ನಾಗರಿಕ ಪ್ರಜ್ಞೆಯನ್ನು ಬೆಳೆಸುವುದು ಅವುಗಳ ಉದ್ದೇಶವಾಯಿತು. ಪತ್ರಿಕೆಗಳು ಕ್ರಮೇಣ ತಮ್ಮ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ನಗರ ಪ್ರದೇಶಗಳನ್ನು ದಾಟಿ ಗ್ರಾಮೀಣ ಪ್ರದೇಶಗಳಲ್ಲಿಯೂ ಪ್ರಭಾವಳಿಯನ್ನು ವಿಸ್ತರಿಸಿಕೊಳ್ಳುತ್ತಾ ಬರುತ್ತಿದ್ದಂತೆ ಅವುಗಳನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆಂದು ಭಾವಿಸಲಾಯಿತು. ದೇಶವು ಅಂಗೀಕರಿಸಿದ ಸಂವಿಧಾನದಲ್ಲಿ ನೀಡಲಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಅವಕಾಶವನ್ನು ಬಳಸಿಕೊಂಡು ಪ್ರಬಲ ಶಕ್ತಿಯಾಗಿ ರೂಪುಗೊಂಡ ಪತ್ರಿಕಾ ಮಾಧ್ಯಮ ಕ್ಷೇತ್ರ ಅನೇಕ ಸಲ ಚುನಾಯಿತ ಸರ್ಕಾರಗಳ ಅಕ್ರಮಗಳನ್ನು ಬಯಲಿಗೆ ಎಳೆದು ಅವುಗಳ ಬದಲಾವಣೆಗೆ, ಪತನಕ್ಕೆ ಕಾರಣವಾಯಿತು. ಮಾಧ್ಯಮಗಳ ಈ ಶಕ್ತಿಯನ್ನು ಮನಗಂಡ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ವ್ಯಾಪಾರೋದ್ಯಮಿಗಳು ಆ ಕ್ಷೇತ್ರವನ್ನು ತಮ್ಮ ಅನುಕೂಲಕ್ಕೂ, ತಮ್ಮ ಕ್ಷೇತ್ರದ ವಿರೋಧಿಗಳ ದಮನಕ್ಕೂ ಬಳಸಿಕೊಳ್ಳಲು ಆರಂಭಿಸಿದ್ದು ವರ್ತಮಾನದ ವಿದ್ಯಮಾನ.
  ಕಳೆದ ಶತಮಾನದ ತೊಂಬತ್ತರ ದಶಕದಲ್ಲಿ ಎಲ್ಲೆಡೆಯಂತೆ ಭಾರತವನ್ನೂ ಪ್ರವೇಶಿಸಿದ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ ಪ್ರಕ್ರಿಯೆ ಪತ್ರಿಕಾ ಕ್ಷೇತ್ರವನ್ನು ದೊಡ್ಡ ಪ್ರಮಾಣದಲ್ಲಿಯೇ ಪ್ರವೇಶಿಸಿತು. ಎಂಬತ್ತರ ದಶಕದಲ್ಲಿ ನಡೆದಿದ್ದ ಉಪಗ್ರಹ ತಾಂತ್ರಿಕತೆ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಪ್ರಾರಂಭಿಸಿತ್ತು. ಜಾಗತೀಕರಣ ಮತ್ತು ಖಾಸಗೀಕರಣದಿಂದ ಉಪಗ್ರಹ ತಾಂತ್ರಿಕತೆ ವಿದ್ಯುನ್ಮಾನ ಕ್ಷೇತ್ರದಲ್ಲಿ ತಂದ ಬದಲಾವಣೆ ಮಾಧ್ಯಮ ಕ್ಷೇತ್ರವನ್ನು ದೊಡ್ಡ ಪ್ರಮಾಣದಲ್ಲಿ ಪ್ರಭಾವಿಸಿ ನೂರಾರು ಖಾಸಗಿ ವಾಹಿನಿಗಳು ದೇಶದ ಮೂಲೆಮೂಲೆಗಳ ಮನೆಗಳನ್ನು ತಲುಪುವುದು ಸಾಧ್ಯವಾಯಿತು. ತೊಂಬತ್ತರ ದಶಕದಲ್ಲಿ ಸಂಪರ್ಕ ಕ್ಷೇತ್ರದಲ್ಲಿ ಪ್ರಾರಂಭವಾದ ಈ ಬದಲಾವಣೆಯಿಂದ ಈಗ ದಿನದ ಇಪ್ಪತ್ತು ನಾಲ್ಕು ಗಂಟೆಯೂ ಸುದ್ದಿ ಪ್ರಸಾರ, ಮನರಂಜನೆ, ಕ್ರೀಡೆ, ಶಿಕ್ಷಣ, ವೈಜ್ಞಾನಿಕ ಸಂಶೋಧನೆ ಮೊದಲಾದವನ್ನು ದೇಶದಾದ್ಯಂತ ಬಿತ್ತರಿಸುವ ಸಾವಿರಾರು ಖಾಸಗಿ ಟಿವಿ ಚಾನಲುಗಳು ಕಾರ್ಯ ನಿರ್ವಹಿಸುವಂತಾಗಿದೆ.
  ಕನ್ನಡದಲ್ಲಿ ಈಗ ಹಲವಾರು ಸುದ್ದಿಪ್ರಸಾರದ ಟಿವಿ ವಾಹಿನಿಗಳು ಕಾರ್ಯನಿರ್ವಹಿಸುತ್ತಿವೆ. ಮನರಂಜನೆಯ ಹತ್ತಾರು ವಾಹಿನಿಗಳೂ ನಾಡಿನ ಮೂಲೆ ಮೂಲೆಯ ಮನೆಗಳನ್ನು ತಲುಪುತ್ತಿವೆ. ತಾಂತ್ರಿಕವಾಗಿ ಉನ್ನತ ಮಟ್ಟದ ಪ್ರಸಾರ ಸಾಮರ್ಥ್ಯ ಉತ್ತಮ ಗುಣಮಟ್ಟದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ಜನರ ಜೀವನ ಮಟ್ಟವನ್ನು ಸುಧಾರಿಸಬಹುದೆನ್ನುವ ಸಮಾಜ ವಿಜ್ಞಾನಿಗಳ ನಿರೀಕ್ಷೆಯನ್ನು ಈ ಚಾನಲ್ಗಳ ಕಾರ್ಯಕ್ರಮಗಳು ಹುಸಿಗೊಳಿಸಿವೆ. ಶ್ರೇಷ್ಠ ಸಾಹಿತ್ಯಕ್ಕೆ ಕರ್ನಾಟಕ ದೇಶದಲ್ಲಿಯೇ ಹೆಸರು ಪಡೆದಿದ್ದರೂ ಈ ಚಾನಲ್ಗಳಲ್ಲಿನ ಮನರಂಜನೆ ಉದ್ದೇಶದ ಧಾರಾವಾಹಿಗಳಲ್ಲಿ ಹಿಂಸೆ, ಕ್ರೌರ್ಯದ ಕಥೆಗಳೇ ವಿಜೃಂಭಿಸುತ್ತಿರುವುದು ವಿಪರ್ಯಾಸ. ವಾಣಿಜ್ಯ ಉದ್ದೇಶವೇ ಪ್ರಧಾನವಾಗಿರುವ ಹತ್ತಾರು ದಿನನಿತ್ಯದ ಧಾರಾವಾಹಿಗಳಲ್ಲಿ ಕೀಳು ಅಭಿರುಚಿಯ ಪಾತ್ರಗಳೇ ಮೇಲುಗೈ ಪಡೆಯುವಂಥ ಕಥಾ ಹಂದರಗಳು ಬಿತ್ತರವಾಗುತ್ತವೆ. ಕೌಟುಂಬಿಕ ಧಾರಾವಾಹಿಗಳಲ್ಲಿಯೂ ದುಷ್ಟ ಹೆಣ್ಣು ಪಾತ್ರಗಳ ಕುತಂತ್ರಕ್ಕೆ ಪ್ರಾಧಾನ್ಯತೆ. ಅಪರಾಧಿ ಮನಃಸ್ಥಿತಿಯ ಪಾತ್ರಗಳನ್ನು ಸರಳ, ಸಜ್ಜನ ಪ್ರವೃತ್ತಿಯ ಪಾತ್ರಗಳನ್ನು ನಿರಂತರವಾಗಿ ಪೀಡಿಸುತ್ತಾ ವಿಕೃತಿಯನ್ನು ಮೆರೆಯುತ್ತಾ ಇರುವುದನ್ನು ಎಳೆದು ಎಳೆದು ತೋರಿಸುತ್ತಾ ಮನರಂಜನೆಗಾಗಿ, ಬೌದ್ಧಿಕ ಸಾಮರ್ಥ್ಯದ ವಿಸ್ತರಣೆಗಾಗಿ, ಸಾಮಾಜಿಕ ಅರಿವಿನ ಹೆಚ್ಚಳಕ್ಕಾಗಿ ಟಿವಿ ನೋಡಲು ಕುಳಿತುಕೊಳ್ಳುವ ಅಮಾಯಕ ಜನತೆಯನ್ನು ಮಾನಸಿಕವಾಗಿ ಕೆಡಿಸುವ ವಿಕೃತಿಯನ್ನು ಬಹುತೇಕ ಕನ್ನಡ ಮನರಂಜನಾ ಚಾನಲ್ಗಳು ಮಾಡುತ್ತಿವೆ.
  ದಿನದ ಇಪ್ಪತ್ತುನಾಲ್ಕು ಗಂಟೆಯೂ ಸುದ್ದಿ ಪ್ರಸಾರ ಮತ್ತು ವಿಶ್ಲೇಷಣೆಗೆ ಮೀಸಲಾದ ಕೆಲವು ಚಾನಲ್ಗಳು ರಾಜಕೀಯ ಪಕ್ಷವೊಂದರ ಮುಖವಾಣಿಗಳಂತೆ ಪಕ್ಷಪಾತದ ವರದಿಗಳನ್ನೇ ಮಾಡುತ್ತಾ ಪತ್ರಿಕಾ ಮಾಧ್ಯಮದ ಪಾವಿತ್ರ್ಯಕ್ಕೆ ಕಳಂಕ ತರುವಂತೆ ವರ್ತಿಸುತ್ತಿರುವುದನ್ನು ನೋಡಬಹುದು. ಕನ್ನಡ ವಾಹಿನಿಗಳು ಒಂದು ರಾಜಕೀಯ ಪಕ್ಷದ ವೇದಿಕೆಯಂತೆ ಚರ್ಚೆಗಳನ್ನು ಹುಟ್ಟು ಹಾಕುವುದು, ಸಂವಾದಗಳನ್ನು ಏರ್ಪಡಿಸುವುದು ಮತ್ತು ತನ್ನ ಗುಪ್ತ ಕಾರ್ಯಸೂಚಿಯಂತೆ ಕಾರ್ಯಕ್ರಮಗಳನ್ನು ಮುಗಿಸುವುದನ್ನು ನಿತ್ಯದ ಕಾಯಕವನ್ನಾಗಿ ಮಾಡಿಕೊಂಡಿವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಅವಕಾಶ ಮಾಧ್ಯಮ ಕ್ಷೇತ್ರದಲ್ಲಿ ಉನ್ನತ ಆದರ್ಶಗಳ ಪ್ರತಿಪಾದನೆಗೆ ಆಸ್ಪದ ನೀಡುತ್ತದೆ. ಸಾರ್ವಜನಿಕ ಬದುಕಿನಲ್ಲಿ ಮೌಲ್ಯಗಳ ಪಾತ್ರ ದೊಡ್ಡದಿದೆ. ಅನಕ್ಷರಸ್ಥರನ್ನೂ ಪ್ರಭಾವಿಸಬಲ್ಲ ದೃಶ್ಯ ಮಾಧ್ಯಮ ಸೌಲಭ್ಯ ಇರುವ ಟಿವಿ ಚಾನಲ್ಗಳು ತಮ್ಮ ಕಾರ್ಯಕ್ರಮಗಳ ಮೂಲಕ ಜನತೆಯನ್ನು ಅನ್ಯಾಯ, ಅಕ್ರಮ, ಭ್ರಷ್ಟಾಚಾರಗಳ ವಿರುದ್ಧ ಅಭಿಪ್ರಾಯ ತಾಳುವಂತೆ ಸಜ್ಜುಗೊಳಿಸಬಹುದು. ಆದರೆ, ಈಗಿನ ಚಾನಲ್ ಗಳು ನಡೆಸುತ್ತಿರುವ ಪಕ್ಷಪಾತದ ಕಾರ್ಯಕ್ರಮಗಳು ಭ್ರಷ್ಟಾಚಾರಿಗಳನ್ನು ವೈಭವಿಸುವ, ಅನ್ಯಾಯ ಮಾರ್ಗಗಳನ್ನು ಸಮರ್ಥಿಸಿಕೊಳ್ಳುವ ಅಪಾಯಕಾರಿ ಪರಿಣಾಮವನ್ನು ಬೀರುತ್ತವೆ. 2007ರಿಂದ 2013 ರವರೆಗೆ ರಾಜ್ಯದಲ್ಲಿ ನಡೆದಿದ್ದ ಆಡಳಿತದ ಅಕ್ರಮ, ಅನ್ಯಾಯ, ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ನಡವಳಿಕೆಯ ಬಗ್ಗೆ ಜಾಣಕುರುಡುತನ ಪ್ರದರ್ಶಿಸಿದ್ದ ಈ ವಾಹಿನಿಗಳು 2013 ರಿಂದ 2018ರ ಮೇ ವರೆಗಿದ್ದ ಆಡಳಿತದ ಬಗ್ಗೆ ಅತ್ಯಂತ ನಿಷ್ಠುರವಾಗಿ ವರ್ತಿಸಿದ್ದವು. ಅದಕ್ಕೆ ಕಾರಣವಾಗಿದ್ದು ರಾಜ್ಯದ ಆಡಳಿತ ಚುಕ್ಕಾಣಿಯನ್ನು ಹಿಡಿದಿದ್ದ ವ್ಯಕ್ತಿ ಅಷ್ಟೇನು ಬಲಿಷ್ಠವಲ್ಲದ ಸಮುದಾಯದಿಂದ ಬಂದುದಾಗಿತ್ತು ಎಂಬುದು ರಹಸ್ಯ ಸಂಗತಿಯಲ್ಲ.
  2018ರ ಮೇ ತಿಂಗಳಲ್ಲಿ ನಡೆದ ಚುನಾವಣೆಯ ನಂತರ ಅಸ್ತಿತ್ವಕ್ಕೆ ಬಂದ ಸಮ್ಮಿಶ್ರ ಸರ್ಕಾರದ ಬಗ್ಗೆ ಮೊದಲ ದಿನದಿಂದಲೇ ಪಕ್ಷಪಾತದ ವರದಿ, ವಿಶ್ಲೇಷಣೆಗಳನ್ನು ಪ್ರಕಟಿಸುತ್ತಿರುವ ಚಾನಲ್ ಗಳು ಪ್ರತಿಪಕ್ಷಕ್ಕಿಂತಲೂ ಹೆಚ್ಚಿನ ಜಿದ್ದಿನಿಂದ ವರ್ತಿಸತೊಡಗಿದೆ. ಆಡಳಿತ ಕೂಟದಲ್ಲಿ ಒಡಕನ್ನು ತರುವುದಕ್ಕೆ ಪ್ರಚೋದಿಸುತ್ತಿವೆ. ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುವ ಆಡಳಿತ ಪಕ್ಷದ ಶಾಸಕರನ್ನು ಭಿನ್ನಮತೀಯರೆಂದು ಬಿಂಬಿಸಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ. ಸರ್ಕಾರದ ಭದ್ರತೆಯ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡುವಂತೆ ಗಡುವುಗಳನ್ನು ನಿರ್ಧರಿಸಿ ಅವುಗಳನ್ನೇ ಪದೇ ಪದೇ ಬಿತ್ತರಿಸಿ ಜನರಲ್ಲಿ ಭ್ರಮನಿರಸನವಾಗುವುದಕ್ಕೆ ಕಸರತ್ತು ನಡೆಸುತ್ತಿವೆ. ತಮ್ಮ ಪ್ರಸಾರದ ಸಾಮರ್ಥ್ಯವನ್ನು ಪ್ರಭುತ್ವವನ್ನು ದುರ್ಬಲಗೊಳಿಸುವುದಕ್ಕೆ ಬಳಸಿಕೊಳ್ಳುತ್ತಿವೆ. ಸುಳ್ಳು ಸುದ್ದಿಗಳನ್ನು ದೊಡ್ಡದಾಗಿ ಬಿಂಬಿಸುತ್ತಾ ಒಂದು ಬಗೆಯ ಬ್ಲಾಕ್ ಮೇಲ್ ತಂತ್ರವನ್ನು ಮುಂದುವರಿಸುತ್ತಿವೆ. ಕೆಲವು ಕನ್ನಡ ಚಾನಲ್ಗಳ ಇಂಥ ಮನೆಹಾಳು ವರ್ತನೆಯ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಒಂದೆರಡು ಸಲ ಸಾರ್ವಜನಿಕವಾಗಿ ಹೇಳಿದ್ದುಂಟು. ಮಾಧ್ಯಮ ಕ್ಷೇತ್ರಕ್ಕೆ ಈಚಿನ ವರ್ಷಗಳಲ್ಲಿ ಉದ್ಯಮಿಗಳು ಪ್ರವೇಶಿಸಿದ್ದಾರೆ. ಉದ್ಯಮಿಗಳು ರಾಜಕೀಯ ಪಕ್ಷಗಳನ್ನು ಓಲೈಸುತ್ತಿದ್ದ ಕಾಲ ಈಗಿಲ್ಲ. ಕೆಲವು ಉದ್ಯಮಿಗಳೇ ರಾಜಕೀಯ ಕ್ಷೇತ್ರದಲ್ಲಿ ನಿರ್ಣಾಯಕ ಸ್ಥಾನಗಳನ್ನು ಹಿಡಿದಿದ್ದಾರೆ. ಅವರೇ ಮಾಧ್ಯಮ ಕ್ಷೇತ್ರಗಳನ್ನು ನಿಯಂತ್ರಿಸುವ ಹಂತಕ್ಕೆ ಬಂದಿದ್ದಾರೆ. ಕರ್ನಾಟಕದ ಮಟ್ಟಿಗೆ ಇಲ್ಲಿ ಅಧಿಕಾರಕ್ಕೆ ಬಂದಿರುವ ರಾಜಕಾರಣಿಗಳಲ್ಲಿ ಮಾಧ್ಯಮ ಸಂಸ್ಥೆಗಳ ಒಡೆತನ ಹೊಂದಿದವರು ಕಡಿಮೆ. ಆದ್ದರಿಂದ ಪ್ರತಿಕೂಲ ಪರಿಸ್ಥಿತಿಯ ನಿರಂತರ ಅಪಪ್ರಚಾರವನ್ನು ಪತ್ರಿಕಾ ಸ್ವಾತಂತ್ರ್ಯದ ಹೆಸರಿನಲ್ಲಿ ಆಡಳಿತಾರೂಢ ರಾಜಕಾರಣಿಗಳು ಸಹಿಸಿಕೊಳ್ಳುವುದು ಅನಿವಾರ್ಯವಾಗಿದೆ. 2007ರಲ್ಲಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಹಿರಿಯ ರಾಜಕಾರಣಿಯೊಬ್ಬರು ತಮ್ಮ ಅವಧಿಯಲ್ಲಿ ಮುದ್ರಣ ಮಾಧ್ಯಮ ಮತ್ತು ವಿದ್ಯನ್ಮಾನ ಮಾಧ್ಯಮ ಕ್ಷೇತ್ರದ ಆಯ್ದ ವ್ಯಕ್ತಿಗಳಿಗೆ ನಿರಂತರ ದ್ರವ್ಯ ಹರಿವಿನ ವ್ಯವಸ್ಥೆಯನ್ನು ಕಲ್ಪಿಸಿದ್ದರೆಂದು ಅಂದಿನ ಲೋಕಾಯುಕ್ತರೇ ಹೇಳಿದ್ದರು. ಆ ದಿನಗಳಲ್ಲಿ ವಿಧಾನ ಸೌಧಕ್ಕೆ ಕರ್ತವ್ಯನಿರ್ವಹಣೆಗಾಗಿ ಬರುತ್ತಿದ್ದ ಪತ್ರಿಕಾ ಛಾಯಾಗ್ರಾಹಕರಿಗೂ ಅಂಥ ದ್ರವ್ಯ ಹರಿವಿನ ವ್ಯವಸ್ಥೆ ಇತ್ತೆಂದು ಹೇಳಲಾಗಿದೆ. ನಂತರದ ದಿನಗಳಲ್ಲಿ ಆಡಳಿತ ಚುಕ್ಕಾಣಿ ಹಿಡಿದವರು ಈ ವ್ಯವಸ್ಥೆಯನ್ನು ಮುಂದುವರಿಸಲಿಲ್ಲವಂತೆ. ಆದ್ದರಿಂದಲೇ ಮುದ್ರಣ ಹಾಗೂ ವಿದ್ಯನ್ಮಾನ ಮಾಧ್ಯಮಗಳ ಆಯಕಟ್ಟಿನ ಜಾಗದಲ್ಲಿನ ವ್ಯಕ್ತಿಗಳು ದ್ರವ್ಯ ಹರಿವಿನ ವ್ಯವಸ್ಥೆಯ ಮರುಸ್ಥಾಪನೆಗಾಗಿ ಈಗಲೂ ನಾನಾ ಕಸರತ್ತುಗಳನ್ನು ನಡೆಸುತ್ತಿದ್ದಾರೆಂದು ಹೇಳಲಾಗಿದೆ.
  ಕೆಲವು ಕನ್ನಡ ಚಾನಲ್ ಗಳು ಮತ್ತು ಕೆಲವು ಪತ್ರಿಕೆಗಳ ಈ ಮನೆಹಾಳು ಧೋರಣೆ ಬದಲಾಗದಿದ್ದರೆ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆಂದು ಹೆಸರಾದ ಪತ್ರಿಕಾ ರಂಗಕ್ಕೆ ವಿಶ್ವಾಸಾರ್ಹತೆ ಬರುವುದು ಕಷ್ಟ.
  —ಲಕ್ಷ್ಮಣ ಕೊಡಸೆ

  • Comments Off on ಕೆಲವು ಕನ್ನಡ ಚಾನಲ್ಗಳ ಮನೆಹಾಳು ಧೋರಣೆ
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.