06:30 am Wednesday, July 24, 2019
 • ರಾಜೇಂದ್ರ ಕುಮಾರ್‌ ಸಹಕಾರ ಕ್ಷೇತಕ್ಕೆ ಭೂಷಣ’ : ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ

  By admin - Sun Jan 20, 5:19 am

  • Comments Off on ರಾಜೇಂದ್ರ ಕುಮಾರ್‌ ಸಹಕಾರ ಕ್ಷೇತಕ್ಕೆ ಭೂಷಣ’ : ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ
  • 0 views

  ಮಂಗಳೂರು: “ವಿನೂತನ ಯೋಜನೆಗಳಿಂದ ಸಹಕಾರ ಕ್ಷೇತ್ರಕ್ಕೆ ನವಚೈತನ್ಯ ತುಂಬುವ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅನನ್ಯತೆ ತಂದುಕೊಟ್ಟಿರುವ ಸಹಕಾರ ರತ್ನ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರು ಸಹಕಾರ ಕ್ಷೇತಕ್ಕೆ ಭೂಷಣ’ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

   ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ (ಎಸ್‌ಸಿಡಿಸಿಸಿ) ಬ್ಯಾಂಕ್‌ ಅಧ್ಯಕ್ಷರಾಗಿ 25 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಎಂ.ಎನ್‌. ರಾಜೇಂದ್ರ ಕುಮಾರ್‌ ಅಭಿನಂದನ ಸಮಿತಿ ನಗರದ ನೆಹರೂ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ “ರಜತ ಸಂಭ್ರಮ’ ಹಾಗೂ ನವೋದಯ ಸ್ವ-ಸಹಾಯ ಸಂಘಗಳ “ವಿಂಶತಿ’ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು. ದ.ಕ. ಜಿಲ್ಲೆಯಲ್ಲಿ ಅನೇಕ ಹಿರಿಯರು ಕಟ್ಟಿ ಬೆಳೆಸಿದ ಸಹಕಾರ ಕ್ಷೇತ್ರವನ್ನು ಡಾ| ರಾಜೇಂದ್ರ ಕುಮಾರ್‌ ಜೋಪಾನವಾಗಿ ಸಂರಕ್ಷಿಸುತ್ತಾ ಪ್ರತಿ ಸಹಕಾರ ಸಂಸ್ಥೆಗೂ ಶಕ್ತಿ ನೀಡಿದವರು. ಇದರಿಂದಾಗಿ ಜಿಲ್ಲೆಯ ಸಹಕಾರ ಕ್ಷೇತ್ರವು ರಾಜ್ಯ ಮತ್ತು ರಾಷ್ಟ್ರದ ಸಹಕಾರ ಸಂಸ್ಥೆಗಳಿಗೆ ಮಾದರಿಯಾಗಿ ಬೆಳೆದು ನಿಂತಿದೆ ಎಂದರು.

  “ರಾಜೇಂದ್ರ ಕುಮಾರ್‌ ಅವರ ಸಾಧನೆ ಮತ್ತು ಬೆಳವಣಿಗೆ ನನಗೆ ಸಂತಸ ತಂದಿದೆ. ಇಂದು ಅಪಾರ ಸಂಖ್ಯೆಯಲ್ಲಿ ಸಹಕಾರಿ ಬಂಧುಗಳು ಹಾಗೂ ನವೋ ದಯ ಸ್ವ-ಸಹಾಯ ಸಂಘಗಳು ಸೇರಿ ವ್ಯಕ್ತಪಡಿಸಿರುವ ಈ ಅಭಿಮಾನ ಮತ್ತು ಗೌರವ ಡಾ| ರಾಜೇಂದ್ರ ಕುಮಾರ್‌ ಅವರ ಹೊಣೆಗಾರಿಕೆಯನ್ನು ಇನ್ನಷ್ಟು ಹೆಚ್ಚಿಸಿದೆ. ಅವರಿಂದ ಸಹಕಾರ ಕ್ಷೇತ್ರಕ್ಕೆ ಇನ್ನಷ್ಟು ಸೇವೆ ಲಭಿಸಲಿ’ ಎಂದರು.

  ಪರಿವರ್ತನೆಗೆ ಹೊಸ ದಿಕ್ಕು: ಡಿ.ವಿ.

  ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮಾತನಾಡಿ, ಡಾ| ರಾಜೇಂದ್ರ ಕುಮಾರ್‌ ಸತತ 25 ವರ್ಷಗಳ ಕಾಲ

  ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಹೊಸ ದಾಖಲೆ ಜತೆಗೆ ಬ್ಯಾಂಕನ್ನು ಉನ್ನತ ಸ್ಥಾನಕ್ಕೇರಿಸಿದ್ದಾರೆ. ಪರಿವರ್ತನೆಗಳಿಗೆ ವೇಗ ನೀಡಿ ಸಹಕಾರ ಕ್ಷೇತ್ರವನ್ನು ಹೊಸ ದಿಕ್ಕಿನೆಡೆಗೆ ಕೊಂಡೊಯ್ದ ಸಾಧಕರು ಅವರು ಎಂದು ಬಣ್ಣಿಸಿದರು.

  ಐತಿಹಾಸಿಕ: ಕಾಶೆಂಪುರ

  ರಜತ ಸಂಭ್ರಮ ರಾಜ್ಯದಲ್ಲೇ ಐತಿಹಾಸಿಕ ಕಾರ್ಯಕ್ರಮವಾಗಿ ಮೂಡಿಬಂದಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಹೇಳಿದರು. ಎಸ್‌ಸಿಡಿಸಿಸಿ ಬ್ಯಾಂಕ್‌ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. ಸಹಕಾರ ಕ್ಷೇತ್ರದಲ್ಲಿ ಇಲ್ಲಿ ಆಗಿರುವ ಪ್ರಗತಿಯ ಬಗ್ಗೆ ಜಿಲ್ಲೆಯ ತಜ್ಞರು, ಉತ್ತರ ಕರ್ನಾಟಕ ಭಾಗಕ್ಕೂ ಮಾರ್ಗದರ್ಶನ ನೀಡಬೇಕೆಂದ‌ು ಕೋರಿದರು.

  ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತ ನಾಡಿ, ಸಹಕಾರ ಕ್ಷೇತ್ರದ ಮೊಳಹಳ್ಳಿ ಶಿವರಾಯರು, ಬಂಟ್ವಾಳ ನಾರಾಯಣ ನಾಯಕ್‌ ದೊಡ್ಡ ಸಾಧಕರಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಮುಂದೆ ಅವರ ಸಾಲಿನಲ್ಲಿ ಡಾ| ರಾಜೇಂದ್ರ ಕುಮಾರ್‌ ಹೆಸರು ಕೂಡಾ ಚಿರಸ್ಥಾಯಿಯಾಗಲಿದೆ ಎಂದರು.

  ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ರಾಜೇಂದ್ರ ಕುಮಾರ್‌ ಹೃದಯ ಶ್ರೀಮಂತಿಕೆಯಲ್ಲೂ ಎತ್ತಿದ ಕೈ ಎಂದು ಅಭಿನಂದಿಸಿದರು. ಇಲ್ಲಿಯವರೆಗೆ ರಾಜಕೀಯ ಇಲ್ಲ “ನಾನು ಯಾವತ್ತೂ ರಾಜಕೀಯ ಉದ್ದೇಶದಿಂದ ನವೋದಯ, ಎಸ್‌ಸಿಡಿಸಿಸಿ ಬ್ಯಾಂಕ್‌ ಶಾಖೆಗಳನ್ನು ಸ್ಥಾಪಿಸಲಿಲ್ಲ. ಸಮಾಜಮುಖೀ ಕಾರ್ಯದ ಉದ್ದೇಶವಿರಿಸಿ ಈ ಕಾರ್ಯ ನಡೆಸಿದ್ದೇನೆ. ಈ ಕ್ಷಣದವರೆಗೂ ರಾಜಕೀಯ ಉದ್ದೇಶ ನನ್ನಲ್ಲಿಲ್ಲ. ಮುಂದೆ ಏನು ಎಂಬುದು ನನಗೆ ಗೊತ್ತಿಲ್ಲ’ ಎಂದು ಡಾ| ರಾಜೇಂದ್ರ ಕುಮಾರ್‌ ಹೇಳಿದರು.

  • Comments Off on ರಾಜೇಂದ್ರ ಕುಮಾರ್‌ ಸಹಕಾರ ಕ್ಷೇತಕ್ಕೆ ಭೂಷಣ’ : ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.