03:40 am Friday, June 21, 2019
 • ದತ್ತಾಂಶಗಳಿಗೆ ರಕ್ಷಣೆ ನೀಡದೆ ಸಂವಹನಗಳ ಮೇಲೆ ಕಣ್ಗಾವಲೇಕೆ?

  By admin - Sat Jan 05, 12:59 pm

  • Comments Off on ದತ್ತಾಂಶಗಳಿಗೆ ರಕ್ಷಣೆ ನೀಡದೆ ಸಂವಹನಗಳ ಮೇಲೆ ಕಣ್ಗಾವಲೇಕೆ?
  • 0 views

  ದತ್ತಾಂಶಗಳಿಗೆ ರಕ್ಷಣೆ ನೀಡದೆ ಸಂವಹನಗಳ ಮೇಲೆ ಕಣ್ಗಾವಲೇಕೆ?
  ದತ್ತಾಂಶ ರಕ್ಷಣೆಯ ಕಾಯಿದೆಯೊಂದರ ತುರ್ತು ಅಗತ್ಯವೇಕಿದೆಯೆಂಬುದಕ್ಕೆ ಇತ್ತೀಚೆಗೆ ಗೃಹ ಇಲಾಖೆ ಹೊರಡಿಸಿರುವ ಅಧಿಸೂಚನೆಯು ಮತ್ತೊಂದು ಕಾರಣವನ್ನು ಒದಗಿಸಿದೆ.

  ಕಳೆದ ವಾರ ಕೇಂದ್ರ ಗೃಹ ಇಲಾಖೆಯು ಮಾಹಿತಿ ತಂತ್ರಜ್ನಾನ ಕಾಯಿದೆ-೨೦೦೦ ಮತ್ತು ಅದರ ೨೦೦೯ರ ನಿಯಮಾವಳಿಗಳ ಅಡಿಯ ಯಾವುದೇ ಕಂಪ್ಯೂಟರಿನಲ್ಲಿ ಶೇಖರಣೆಗೊಂಡ, ಪಡೆದುಕೊಂಡ ಅಥವಾ ಕಳಿಸಿರುವ ಯಾವುದೇ ಮಾಹಿತಿಗಳನ್ನು ತಡೆದು ನೋಡುವ, ನಿಗಾ ಇಡುವ ಮತ್ತು ರಹಸ್ಯಲಿಪಿಯನ್ನು ಬೇಧಿಸಿ ಓದುವ ಅಧಿಕಾರವನ್ನು ಸರ್ಕಾರದ ೧೦ ಏಜೆನ್ಸಿಗಳಿಗೆ ನೀಡುವ ಅಧಿಸೂಚನೆಯೊಂದನ್ನು ಹೊರಡಿಸಿದೆ. ಆ ನಂತರದಲ್ಲಿ ಸರ್ಕಾರವು ವಾಟ್ಸಾಪ್ ಮತ್ತು ಟೆಲಿಗ್ರಾಂಗಳಂತ ಸೇವೆಗಳನ್ನು ನೀಡುವ ಸಂವಹನ ಮಧ್ಯವರ್ತಿಗಳಿಗೆ ಮಾರ್ಗದರ್ಶಿ ನಿಯಮಗಳನ್ನು ರೂಪಿಸಲಿದೆಯೆಂಬ ಸುದ್ದಿಯೂ ಹೊರಬಿದ್ದಿದೆ. ವ್ಯಕ್ತಿಗಳಿಬ್ಬರ ನಡುವಿನ ಸಂವಹನವನ್ನು ಗೂಢಲಿಪಿಗೊಳಿಸುವ ಮೂಲಕ ಅದು ಅವರಿಬ್ಬರನ್ನು ಹೊರತುಪಡಿಸಿ ಇತರರಿಗೆ ದಕ್ಕದಂತೆ ಮಾಡುವ (ಎಂಡ್ ಟು ಎಂಡ್ ಎನ್ಕ್ರಿಪ್ಷನ್) ಸೌಲಭ್ಯವನ್ನು ಮೊಟಕುಗೊಳಿಸಿ ಆ ಸಂವಹಗ ಸಾರದ ಮೂಲದ ಪತ್ತೆಯನ್ನು ಸರ್ಕಾರಕ್ಕೆ ನೀಡುವ ಮತ್ತು ಹೆಚ್ಚುಕಾಲ ದತ್ತಾಂಶಗಳನ್ನು ಸಂಗ್ರಹಿಸಿಡುವಂತೆ ನಿರ್ದೇಶಿಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಕಾನೂನುಬಾಹಿರ ಸಾರವುಳ್ಳ ಮಾಹಿತಿಗಳನ್ನು ನಿಯಂತ್ರಿಸುವ ಪ್ರಸ್ತಾಪಗಳನ್ನು ಸರ್ಕಾರ ಮುಂದಿರಿಸಿದೆ. ಸರ್ಕಾರದ ಈ ಅಧಿಸೂಚನೆಯಿಂದ ದೇಶದಲ್ಲಿ ಆತಂಕ ಮತ್ತು ಕೋಲಾಹಲಗಳೇ ಉಂಟಾಗಿದೆ. ಅದರ ಬಗ್ಗೆ ಸರ್ಕಾರವು ಯುಪಿಎ ಸರ್ಕಾರದ ಕಾಲದಲ್ಲಿ ಜಾರಿಯಾದ ಕಾನೂನನ್ನು ಜಾರಿಗೆ ತರುತ್ತಿದ್ದೇವೆಯಷ್ಟೆ ಎಂದು ತಣ್ಣಗೆ ಪ್ರತಿಕ್ರಿಯಿಸಿದೆ.

  ಆದರೆ ೨೦೧೭ರ ಕೆ. ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ನೀಡಿರುವ ಮಹತ್ವದ ಮಾರ್ಗದರ್ಶಿ ಆದೇಶದ ಹಿನ್ನೆಲೆಯಲ್ಲಿ ಕೇವಲ ಈ ಅಧಿಸೂಚನೆಯನ್ನು ಮಾತ್ರವಲ್ಲದೆ ಅದಕ್ಕೆ ಕಾರಣವಾದ ಮಾಹಿತಿ ತಂತ್ರಜ್ನಾನ ಕಾಯಿದೆಯನ್ನು ಮತ್ತು ಭಾರತದ ಕಣ್ಗಾವಲು ಪ್ರಕ್ರಿಯೆಯ ಚೌಕಟ್ಟನ್ನೇ ಪುನರ್‌ವಿಮರ್ಶೆಗೊಳಪಡಿಸುವ ಅಗತ್ಯವಿದೆ. ಇದರರ್ಥ ಸರ್ಕಾರವು ಈ ಹಿಂದೆ ನಾಗರಿಕರ ದತ್ತಾಂಶಗಳನ್ನು ತಡೆದು ಓದುತ್ತಿರಲಿಲ್ಲವೆಂದಾಗಲೀ ಅಥವಾ ಕಣ್ಗಾವಲು ನಡೆಸುತ್ತಿರಲಿಲ್ಲವೆಂದಾಗಲೀ ಅಲ್ಲ; ೨೦೧೪ರ ವರದಿಯೊಂದರ ಪ್ರಕಾರ ಭಾರತದಲ್ಲಿ ಪ್ರತಿ ತಿಂಗಳು ೯೦೦೦ ಫೋನುಗಳನ್ನು ಸರ್ಕಾರವು ಕದ್ದಾಲಿಸುತ್ತಿತ್ತು. ಸರ್ಕಾರದ ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಟೆಲಿಮಾಟಿಕ್ಸ್ (ಸಿ-ಡಾಟ್) ಕೇಂದ್ರವು ೨೦೧೩ರಲ್ಲೇ ಒಂದು ಸ್ವಯಂಚಾಲಿತ ಸಾಮೂಹಿಕ ಕಣ್ಗಾವಲು ಯೋಜನೆಯನ್ನು ಜಾರಿಗೊಳಿಸಲು ಪ್ರಾರಂಭಿಸಿತ್ತು. ಮತ್ತು ಈ ವರ್ಷದ ಮೊದಲಲ್ಲಿ ಬಿಡುಗಡೆಯಾದ ಅದರ ವಾರ್ಷಿಕ ವರದಿಯ ಪ್ರಕಾರ ಈ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೊಳಿಸಲಾಗಿದೆ.

  ಪ್ರಸ್ತುತ ಯುಗಮಾನದಲ್ಲಿ ಜನರ ಜೀವನವು ಡಿಜಿಟಲೀಕರಣಗೊಂಡಿದ್ದು ಒಬ್ಬ ವ್ಯಕ್ತಿಯ ಫೋನ್ ಆಥವಾ ಕಂಪ್ಯೂಟರ್‌ಗಳು ಆ ವ್ಯಕ್ತಿಯ ವಿಸ್ತರಣೆಯೇ ಆಗಿಬಿಟ್ಟಿದೆ. ಈ ದೇಶವನ್ನು ಡಿಜಿಟಲ್ ಭಾರತವಾಗಿಸುವ ಕಡೆ ಸರ್ಕಾರವೇ ಎಲ್ಲಾ ಬಗೆಯ ಪ್ರೋತ್ಸಾಹಗಳನ್ನು ನೀಡುತ್ತಿದೆ. ಹೀಗಿರುವಾಗ ದೇಶದ ಭದ್ರತೆಯ ಹೆಸರಿನಲ್ಲಿ ಸರ್ಕಾರದ ಕ್ರಮಗಳಿಗೆ ರಕ್ಷಣೆ ನೀಡುವ ಕಾನೂನುಗಳಿಗಿಂತ ಈ ದೇಶz ನಾಗರಿಕರ ಮತ್ತು ವ್ಯಕ್ತಿಗಳ ಆಸಕ್ತಿಯನ್ನು ರಕ್ಷಿಸುವ ಪ್ರಬಲವಾದ ದತ್ತಾಂಶ ರಕ್ಷಣಾ ಕಾಯಿದೆಯ ಅಗತ್ಯವಿದೆ. ವಾಸ್ತವವಾಗಿ ಭಾರತದ ಕಣ್ಗಾವಲು ಕಾಯಿದೆಯ ಚೌಕಟ್ಟಿನ ಮೂಲಗಳನ್ನು ೧೮೮೫ರ ಇಂಡಿಯಾ ಟೆಲಿಗ್ರಾಫ್ ಆಕ್ಟ್ ಮತ್ತು ೧೮೯೮ರ ಇಂಡಿಯನ್ ಪೋಸ್ಟ್ ಆಫೀಸ್ ಆಕ್ಟ್‌ನಲ್ಲೂ ಕಾಣಬಹುದು. ಮಾಹಿತಿ ತಂತ್ರಜ್ನಾನ ಕಾಯಿದೆಯ ಸೆಕ್ಷನ್ ೬೯ರ ಪ್ರಕಾರ ಸರ್ಕಾರವು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ಪ್ರಭುತ್ವದ ಭದ್ರತೆ, ವಿದೇಶೀ ಪ್ರಭುತ್ವಗಳೊಡನೆ ಸ್ನೇಹ ಸಂಬಂಧಗಳನ್ನು ರಕ್ಷಿಸಿಕೊಳ್ಳಲು ಅಥವಾ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಅಥವಾ ಯಾವುದೇ ಸಂಜ್ನೇಯ ಅಪರಾಧಗಳು ಘಟಿಸದಂತೆ ತಡೆಯಲು ಮಾಹಿತಿ ಸಂವಹನವನ್ನು ಪ್ರತಿಬಂಧಿಸುವ, ನಿಗಾ ಇಡುವ ಮತ್ತು ರಹಸ್ಯ ಲಿಪಿಯನ್ನು ಬೇಧಿಸುವ ಅಧಿಕಾರವನ್ನು ಪಡೆದುಕೊಂಡಿದ್ದು ಇದು ವಸಾಹತುಶಾಹಿ ಕಾಲಘಟ್ಟದ ಕಾನೂನುಗಳ ಪಡಿಯಚ್ಚಿನಂತೇ ಇವೆ.

  ದತ್ತಾಂಶ ರಕ್ಷಣೆಯ ಬಗ್ಗೆ ಬಿ.ಎನ್. ಶ್ರೀ ಕೃಷ್ಣ ಸಮಿತಿಯು ಸೂಚಿಸಿರುವಂತೆ ಪುಟ್ಟಸ್ವಾಮಿ ಪ್ರಕರಣದಲ್ಲಿ ನಿರ್ದೇಶಿತವಾಗಿರುವ ಅಗತ್ಯತೆ, ಪ್ರಮಾಣ ಬದ್ಧತೆ ಮತ್ತು ಸೂಕ್ತ ಕಾನೂನು ಪ್ರಕ್ರಿಯೆಗಳ ಪರೀಕ್ಷೆಯಲ್ಲಿ ಉತ್ತೀರ್ಣವಾಗುವಷ್ಟು ಪಾರದರ್ಶಕತೆಯನ್ನು ಪ್ರದರ್ಶಿಸದೆ ಯಾವುದೇ ಕಣ್ಗಾವಲನ್ನು ಪ್ರಭುತವು ಇರಿಸುವಂತಿಲ್ಲ. ಅಗತ್ಯತೆ ಮತ್ತು ಬೇಹುಗಾರಿಕೆಯ ಪ್ರಮಾಣಗಳಿಗೆ ಸಂಬಂಧಪಟ್ಟಂತೆ ಖಾಸಗಿತನ ಮತ್ತು ಭದ್ರತೆಗಳ ನಡುವೆ ಯಾವುದು? ಎಷ್ಟು? ಎಂಬ ವಿವಾದ ತುಂಬಾ ಕಾಲದಿಂದಲೂ ನಡೆದುಕೊಂಡು ಬಂದಿದೆ. ಆದರೆ ಈ ಚರ್ಚೆ ಏಕಪಕ್ಷೀಯವಾಗಿಯೇ ಇದ್ದಿದೆ. ಏಕೆಂದರೆ ಒಂದು ದತ್ತಾಂಶ ರಕ್ಷಣೆ ಕಾಯಿದೆಯೇ ಇಲ್ಲದಿರುವ ಸಂದರ್ಭದಲ್ಲಿ ವ್ಯಕ್ತಿಗಳ ದತ್ತಾಂಶಗಳ ಮತ್ತಿತರ ಖಾಸಗಿತನದ ಹಕ್ಕನ್ನು ರಕ್ಷಿಸುವ ಯಾವುದೇ ಮಾರ್ಗದರ್ಶಿ ಸೂತ್ರಗಳ ಜಾರಿಯೂ ಹಿನ್ನೆಲೆಗೆ ಸರಿದುಬಿಟ್ಟಿದೆ. ಇನ್ನು ಕಾನೂನು ಪ್ರಕ್ರಿಯೆಗಳನ್ನು ಪಾಲಿಸುವ ವಿಷಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಶ್ರೀ ಕೃಷ್ಣ ಸಮಿತಿಯು ನೀಡಿರುವ ಕರಡು ಕಾಯಿದೆಯಂಥ ಒಂದು ಕಾಯಿದೆಯು ಜಾರಿಗೆ ಬರಬಹುದೆಂದು ನಿರೀಕ್ಷಿಸಲಾಗುತ್ತಿದೆ. ಆದರೆ ಹಾಲಿ ಇಂಥಾ ಕಣ್ಗಾವಲನ್ನು ನಡೆಸುವಾಗ ಎಂಥಾ ಪ್ರಕ್ರಿಯೆಗಳನ್ನು ಅನುಸರಿಸಲಾಗುತ್ತಿದೆಯೆಂಬ ಮಾಹಿತಿಯನ್ನು ಮಾತ್ರ ಸರ್ಕಾರ ಬಿಟ್ಟುಕೊಡಲು ತಯಾರಿಲ್ಲ. ಮೇಲಾಗಿ ಮಾಹಿತಿ ತಂತ್ರಜ್ನಾನ ಕಾಯಿದೆಯ ಹಲವಾರು ಅಂಶಗಳು ಅಮೂರ್ತ ಸ್ವರೂಪದಲ್ಲಿರುವುದರಿಂದ ಮತ್ತು ಅವುಗಳಿನ್ನೂ ನ್ಯಾಯಾಂಗ ಮೂಲಕವೂ ಖಚಿತ ಅರ್ಥ ಪಡೆದುಕೊಳ್ಳದಿರುವುದರಿಂದ ಒಟ್ಟಾರೆ ಪ್ರಕ್ರಿಯೆಗಳು ಇನ್ನಷ್ಟು ಅಪಾರದರ್ಶಕವಾಗಿಯೇ ಉಳಿದಿದೆ. ಹಾಲಿ ಸರ್ಕಾರವಂತೂ ತನ್ನೆಲ್ಲಾ ಕ್ರಮಗಳನ್ನು ಯಾವುದೇ ಶಾಸನಾತ್ಮಕ ಅಥವಾ ನ್ಯಾಯಾಂಗ ಪರಿಶೀಲನೆಗೆ ಒಳಪಡದಂತೆ ಆಡಳಿತಾತ್ಮಕ ಆದೇಶಗಳ ಮೂಲಕವೇ ಜಾರಿಗೊಳಿಸುತ್ತಿದೆ.

  ಕಣ್ಗಾವಲನ್ನು ಜಾರಿಮಾಡುವಾಗ ಅಗತ್ಯತೆ, ಸರಿಪ್ರಮಾಣತೆ ಮತ್ತು ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಬೇಕೆಂಬ ಯಾವುದೇ ಶರತ್ತುಗಳನ್ನೂ ಪಾಲಿಸದ ಸರ್ಕಾರವೊಂದು ಏಕಾಏಕಿ ಸರ್ವವ್ಯಾಪಿ ಕಣ್ಗಾವಲು ಕ್ರಮಗಳಿಗೆ ಮುಂದಾದಾಗ ಸಹಜವಾಗಿಯೇ ಜನರ ಅವಿಶ್ವಾಸವನ್ನು ಎದುರಿಸಬೇಕಾಗುತ್ತದೆ. ಗೃಹ ಇಲಾಖೆಯ ಅಧಿಸೂಚನೆಯ ವಿರುದ್ಧ ಹುಟ್ಟಿಕೊಂಡಿರುವ ಆಕ್ರೋಶವು ಇದನ್ನೇ ಸೂಚಿಸುತ್ತದೆ. ಈ ಹಿಂದೆಯೂ ಸರ್ಕಾರವು ಆಧಾರ್ ಯೋಜನೆ ಮತ್ತು ನೋಟು ನಿಷೇಧದಂಥ ಹಲವಾರು ಪ್ರಶ್ನಾರ್ಹ ಕಾನೂನುಗಳನ್ನು ಮತ್ತು ಕ್ರಮಗಳನ್ನು ಅತ್ಯಂತ ಅಪಾರದರ್ಶಕವಾಗಿ ಮತ್ತು ರಾಷ್ಟ್ರದ ಭದ್ರತೆಯ ಹೆಸರಿನಲ್ಲೇ ಜಾರಿಗೆ ತಂದಿತ್ತು. ಅಂಥಾ ಕ್ರಮಗಳು ಪಾರದರ್ಶಕವಾಗಿರಬೇಕೆಂದು ಜನರು ಎಷ್ಟೇ ಒತ್ತಾಯಿಸಿದರೂ ಹಾಲಿ ಸರ್ಕಾರವು ಆಗಲೂ ಮತ್ತು ಈಗಲೂ ಸಹ ತನ್ನ ಜನರೊಡನೆ ಪಾರದರ್ಶಕವಾಗಿರಲು ಸಿದ್ಧವಿಲ್ಲ.

  ಈ ದೇಶದಲ್ಲಿ ಇಂಡಿಯನ್ ಟೆಲಿಗ್ರಾಫ್ ಆಕ್ಟ್ ಜಾರಿಯಾದ ಕಾಲಕ್ಕೆ ಹೋಲಿಸಿದರೆ ಸಂವಹನ ಸಂಪರ್ಕ ತಂತ್ರಜ್ನಾನದ ಸ್ವರೂಪಗಳು ಅಮೂಲಾಗ್ರವಾಗಿ ಬದಲಾಗಿವೆ. ಈ ಹಿಂದೆ ಎಷ್ಟು ಜನರೊಂದಿಗೆ ಎಷ್ಟು ಪ್ರಮಾಣದಲ್ಲಿ ಸಂವಹನ ಮಾಡುತ್ತಿದ್ದೆವೋ ಅದರ ಹಲವು ಪಟ್ಟು ಹೆಚ್ಚಿನ ಸಂವಹನವನ್ನು ಈಗ ಮಾಡುತ್ತಿದ್ದೇವೆ. ಅಂತರ್ಜಾಲದ ಅನ್ವೇಷಣೆಯಾದ ಂತರದಲ್ಲಿ ಫೋನುಗಳು ಮತ್ತು ಕಂಪ್ಯೂಟರ್‌ಗಳು ಅತ್ಯಗತ್ಯ ಸಂದೇಶಗಳನ್ನು ರವಾನಿಸುವ ಅಥವಾ ಕೆಲಸವನ್ನು ಮಾಡುವ ಸಾಧನವಾಗಿ ಮಾತ್ರ ಉಳಿದಿಲ್ಲ. ಬದಲಿಗೆ ಅವು ನಮ್ಮ ಅಭಿವ್ಯಕ್ತಿಯ ಮತ್ತು ನಿತ್ಯಜೀವನದ ಅಂತರ್ಗತ ಭಾಗವಾಗಿಬಿಟ್ಟಿವೆ. ಹೀಗಾಗಿ ಯಾವುದೇ ವ್ಯಕ್ತಿಯ ಫೋನು ಅಥವಾ ಕಂಪ್ಯೂಟರ್‌ಗಳನ್ನು ಪ್ರತಿಬಂಧಿಸುವುದೆಂದರೆ ಅಥವಾ ಅದರ ಮೇಲೆ ನಿಗಾ ಇಡುವುದೆಂದರೆ ಆ ವ್ಯಕ್ತಿಗಳ ಜೀವನದಲ್ಲಿ ಸರ್ಕಾರವು ಬಲಪ್ರಯೋಗದ ಮೂಲಕ ಮಧ್ಯಪ್ರವೇಶ ಮಾಡಿದಂತೆಯೇ ಆಗುತ್ತದೆ. ನಾವುಗಳು ಈ ಸಾಧನಗಳ ಮೂಲಕವೇ ಮಾತಾಡುತ್ತೇವೆ, ಓದುತ್ತೇವೆ, ಕಾರ್ಯ ನಿರ್ವಹಿಸುತ್ತೇವೆ, ಬ್ಯಾಂಕ್ ವ್ಯವಹಾರಗಳನ್ನು ಮಾಡುತ್ತೇವೆ, ಪ್ರತಿರೋಧ ಮತ್ತು ಭಿನ್ನಮತಗಳನ್ನು ಸಹ ವ್ಯಕ್ತಪಡಿಸುತ್ತೇವೆ. ಅದರ ಜೊತೆಜೊತೆಗೆ ಕಾನೂನುಬಾಹಿರ ಚಟುವಟಿಕೆಗಳು ಮತ್ತು ದೇಶದ ಭದ್ರತೆಗೆ ಅಪಾಯ ಒಡ್ಡುವ ಚಟುವಟಿಕೆಗಳೂ ಸಹ ಡಿಜಿಟಲ್ ಆಗಿಬಿಟ್ಟಿವೆ. ಅದೇನೇ ಇದ್ದರೂ, ಈ ಸಾಧನಗಳ ಮೇಲೆ ಸರ್ವವ್ಯಾಪಿ ಮತ್ತು ಅನಿರ್ಬಂಧಿತ ಪ್ರತಿಬಂಧಗಳನ್ನು ಹೇರುವುದರಿಂದ ಅಥವಾ ಅವುಗಳ ಮೇಲೆ ಕಣ್ಗಾವಲಿಡುವುದರಿಂದ ಸರ್ಕಾರವು ಎಲ್ಲೆಡೆ ಕಣ್ಣಿಡುವ ದೊಡ್ಡಣ್ಣನಂತೆ ವರ್ತಿಸುವಂತಾಗುತ್ತದೆ. ಹೀಗಾಗಿ ಭಾರತದ ಒಟ್ಟಾರೆ ಕಣ್ಗಾವಲು ಪ್ರಕ್ರಿಯೆಗಳ ಚೌಕಟ್ಟನ್ನೇ ಪುನರ್‌ವಿಮರ್ಶೆಗೊಳಪಡಿಸಬೇಕಿದೆ. ಪುಟ್ಟಸ್ವಾಮಿ ಪ್ರಕರಣದ ನ್ಯಾಯಾದೇಶದಲ್ಲಿ ನಿರ್ದೇಶಿತವಾಗಿರುವ ಖಾಸಗಿತನದ ತತ್ವಗಳನ್ನು ಅಳವಡಿಸಿಕೊಳ್ಳಬೇಕಿದೆ ಮತ್ತು ಪಾಲಿಸಬೇಕಿದೆ. ಹಾಗೂ ಅತ್ಯಂತ ತುರ್ತಾಗಿ ಒಂದು ದತ್ತಾಂಶ ರಕ್ಷಣಾ ಕಾಯಿದೆಯನ್ನು ಜಾರಿ ಮಾಡುವುದು ಅತ್ಯಗತ್ಯವಾಗಿದೆ.

  ಕೃಪೆ: Economic and Political Weekly Dec 29, 2018. Vol. 53. No.51
  ಅನು: ಶಿವಸುಂದರ್
  (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )

   

  • Comments Off on ದತ್ತಾಂಶಗಳಿಗೆ ರಕ್ಷಣೆ ನೀಡದೆ ಸಂವಹನಗಳ ಮೇಲೆ ಕಣ್ಗಾವಲೇಕೆ?
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.