03:03 am Friday, June 21, 2019
  • ಸ್ಥಳೀಯಾಡಳಿತ ಪ್ರತಿನಿಧಿಗಳ ಕ್ರೀಡಾಕೂಟ

    By admin - Sun Dec 09, 6:06 am

    • Comments Off on ಸ್ಥಳೀಯಾಡಳಿತ ಪ್ರತಿನಿಧಿಗಳ ಕ್ರೀಡಾಕೂಟ
    • 0 views

    ಜನಪ್ರತಿನಿಧಿಗಳಾದವರು ಸದಾ ಅಭಿವೃದ್ಧಿ, ಜನಸೇವೆ, ಕ್ಷೇತ್ರದ ಸಮಸ್ಯೆ ಮುಂತಾದ ರಾಜಕೀಯ ಚಟುವಟಿಕೆಗಳಲ್ಲೇ ತಲ್ಲೀನರಾಗಿರುತ್ತಾರೆ. ಹೀಗಾಗಿ ಇವರಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸುವ ಅವಕಾಶಗಳು ಸಿಗುವುದು ತುಂಬಾ ಕಡಿಮೆ. ಇದಕ್ಕಾಗಿಯೇ ಕೋಟದ ಕೋಟತಟ್ಟು ಗ್ರಾ.ಪಂ. ಹಾಗೂ ಡಾ| ಶಿವರಾಮ ಕಾರಂತ ಪ್ರತಿಷ್ಠಾನ ಆಶ್ರಯದಲ್ಲಿ ವಿಶೇಷ ಕ್ರೀಡಾಕೂಟ ’ಹೊಳಪು’ ಸ್ವರಾಜ್ಯ ಸಂಗಮಕ್ಕೊಂದು ಮುನ್ನುಡಿ ಎನ್ನುವ ಶೀರ್ಷಿಕೆಯಡಿ ಎರಡು ವರ್ಷದಿಂದ ಆಯೋಜಿಸುತ್ತಾ ಬಂದಿದೆ. ಈ ಬಾರಿ ಡಿ.೮ರಂದು ಕೋಟದ ವಿವೇಕ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಜರುಗಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಸತಿ ಮತ್ತು ನಗರಾಭಿವೃದ್ಧಿ ಸಚಿವರಾದ ಯು.ಟಿ.ಖಾದರ್ ಭಾಗವಹಿಸಿದ್ದರು.

    ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಂದ ಆಗಮಿಸಿದ ಪ್ರತಿನಿಧಿಗಳು ಬೆಳಗ್ಗೆ ೮.೩೦ಕ್ಕೆ ಕೋಟದ ವಿವೇಕ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಒಟ್ಟುಗೂಡಿ,ಪಥಸಂಚಲನ ನಡೆಯಿತು. ಪಥಸಂಚಲನದಲ್ಲಿ ಬೇರೆ- ಬೇರೆ ಪಂ.ಸದಸ್ಯರು ವಿಶಿಷ್ಟ ಸಮವಸ್ತ್ರದ ಮೂಲಕ ಕಂಗೊಳಿಸುತ್ತಿದ್ದರು. ಕ್ರೀಡಾಕೂಟವನ್ನು ಆಯೋಜಿಸಿದ ಕೋಟತಟ್ಟು ಗ್ರಾ.ಪಂ.ನಿಂದ ಕ್ರೀಡಾಜ್ಯೋತಿ ಆಗಮನ ಎಲ್ಲರ ಗಮನಸೆಳೆಯಿತು. ಸ್ಥಳೀಯಾಡಳಿತ ಸಂಸ್ಥೆಯನ್ನು ಪ್ರತಿನಿಧಿಸುವ ರಾಷ್ಟ್ರೀಯ, ರಾಜ್ಯ ಮಟ್ಟದ ಕ್ರೀಡಾಪಟುಗಳು ಕ್ರೀಡಾಜ್ಯೋತಿ ಮುನ್ನಡೆಸಿದರು. ಅನಂತರ ಕ್ರೀಡಾಕೂಟಗಳು ನಡೆದು ಆಗಮಿಸಿದವರಿಗೆ ಊಟದ ವ್ಯವಸ್ಥೆಯೂ ಆಯೋಜಿಸಲಾಗಿತ್ತು.

    ೧೦೦ ಮೀ. ಓಟ, ಗುಂಡೆಸೆತ, ರಿಂಗ್ ಇನ್ ದಿ ವಿಕೆಟ್, ಮಡಿಕೆ ಒಡೆಯುವುದು, ಸೂಪರ್ ಮಿನಿಟ್, ತ್ರೋಬಾಲ್, ಹಗ್ಗಜಗ್ಗಾಟ ಮುಂತಾದ ಕ್ರೀಡೆಗಳು, ಗಾಯನ, ಛದ್ಮವೇಷ, ಸೂಪರ್ ಮಿನಿಟ್ ಮುಂತಾದ ಸಾಂಸ್ಕೃತಿಕ ಸ್ಪರ್ಧೆಗಳು ಇದ್ದು, ಸೀನಿಯರ್, ಸಬ್‌ಸೀನಿಯರ್ ವಿಭಾಗದಲ್ಲಿ ಸ್ಪರ್ಧೆ ನಡೆಯುತ್ತಿದೆ. ಭಾಗವಹಿಸುವ ಸ್ಪರ್ಧಾಳುಗಳಿಗೆ ಸಮವಸ್ತ್ರ, ವಿಜೇತರಿಗೆ ಟ್ರೋಫಿ, ಪ್ರಮಾಣಪತ್ರ ನೀಡಲಾಯಿತು.

    ಪಂಚಾಯತ್ ಪ್ರತಿನಿಧಿಗಳ ಕ್ರೀಡಾಕೂಟ ವಿಭಿನ್ನವಾಗಿದ್ದು, ಪಕ್ಷಭೇದ ಮರೆತು ಎಲ್ಲರೂ ಒಟ್ಟಾಗಿ ತಮ್ಮ ಪಂಚಾಯತ್‌ನ್ನು ಪ್ರತಿನಿಧಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.ಸ್ಥಳೀಯಾಡಳಿತ ಪ್ರತಿನಿಧಿಗಳನ್ನು ಪರಿಚಯಿಸಿಕೊಳ್ಳಲು ಹಾಗೂ ಸ್ನೇಹ, ಸೌಹಾರ್ದತೆಗಾಗಿ ಕ್ರೀಡಾಕೂಟ ಸಹಕಾರಿಯಾಗಲಿದೆ ಎಂದು ವಿ.ಪರಿಷತ್ ವಿಪಕ್ಷ ನಾಯಕರು, ಹಾಗೂ ಕಾರ್ಯಕ್ರಮದ ಸಂಘಟನೆ ಪ್ರಮುಖರಾದ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.

    ದೇಶದಲ್ಲೇ ಪಂಚಾಯತ್ ಪ್ರತಿನಿಧಿಗಳ ಕ್ರೀಡಾಕೂಟ ಬೇರೆಲ್ಲೂ ಇಲ್ಲ. ಆದ್ದರಿಂದ ಪಂಚಾಯತ್ ಪ್ರತಿನಿಧಿಗಳ ಪಾಲಿಗೆ ಇದೊಂದು ಒಲಿಂಪಿಕ್ಸ್. ೧೩ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ, ೪೧೦ ಗ್ರಾ.ಪಂ.ಗಳ, ಎಂಟು ತಾ.ಪಂ., ಎರಡು ಜಿ.ಪಂ. ಹಾಗೂ ಎರಡು ಮಹಾನಗರ ಪಾಲಿಕೆ, ಎರಡು ನಗರಸಭೆ, ಹತ್ತು ಪ.ಪಂ.ಗಳ ೯,೨೦೦ ಜನಪ್ರತಿನಿಧಿಗಳಿಗೆ ಭಾಗಿಯಾಗಲು ಅವಕಾಶವಿದೆ. ೩೮೫ ಕ್ಕೂ ಮಿಕ್ಕಿ ಸ್ಥಳೀಯಾಡಳಿತ ಸಂಸ್ಥೆಗಳ ೫,೦೦೦ಕ್ಕೂ ಹೆಚ್ಚು ಮಂದಿಯಿಂದ ನೋಂದಣಿ ಮಾಡಿದ್ದರು. ತೀರ್ಪುಗಾರರಾಗಿ ೧೧೦ ಮಂದಿ ದೈ.ಶಿ.ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಸಾಂಸ್ಕೃತಿಕ ಸ್ಪರ್ಧೆಗೆ ೨೫ ಮಂದಿ ತೀರ್ಪುಗಾರರಿದ್ದಾರೆ

    • Comments Off on ಸ್ಥಳೀಯಾಡಳಿತ ಪ್ರತಿನಿಧಿಗಳ ಕ್ರೀಡಾಕೂಟ
    • 1 Star2 Stars3 Stars4 Stars5 Stars (No Ratings Yet)
      Loading...Loading...
    • 0 views

    Leave a Reply

    Comments are closed on this post.