02:52 am Friday, June 21, 2019
 • ಸಾವು ಅಗ್ಗವಾಗುತ್ತಿದೆ !

  By admin - Thu Dec 06, 5:51 am

  • Comments Off on ಸಾವು ಅಗ್ಗವಾಗುತ್ತಿದೆ !
  • 0 views


  ಸಾವು ಅಗ್ಗವಾಗುತ್ತಿದೆ
  ಜೀವನದ ನೈತಿಕ ಮೌಲ್ಯವು ಉದ್ಯೋಗವನ್ನು ಸೃಷ್ಟಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಸರ್ಕಾರವನ್ನು ಪ್ರಶ್ನಿಸುವುದರಲ್ಲಿದೆ.

  ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಕಳೆದ ನವಂಬರ್ ೨೦ರಂದು ಮೂವರು ಯುವಕರು ತಾವು ಮಾಡಿಕೊಂಡ ಪೂರ್ವ ಒಪ್ಪಂದದಂತೆ ಧಾವಿಸಿಬರುತ್ತಿದ್ದ ಟ್ರೈನಿಗೆದುರು ಧುಮುಕಿ ಆತ್ಮಹತ್ಯೆ ಮಾಡಿಕೊಂಡರು. ಇದು ಭಾರತವು ಮೂಕಸಾಕ್ಷಿಯಾಗುತ್ತಿರುವ ಸಾವುಗಳ ಸರಣಿಗೆ ಮತ್ತೊಂದು ದುರಂತ ಸೇರ್ಪಡೆಯಾಗಿದೆ. ಭಾರತೀಯರ ಸಾಮಾನ್ಯ ನೈತಿಕ ವಿವೇಕವು ಸಾವನ್ನು ಒಂದೋ ದೀರ್ಘ ಬದುಕಿನ ಹಿನ್ನೆಲೆಯಲ್ಲಿ ಅಥವಾ ಒಂದು ದೊಡ್ಡ ಉದ್ದೇಶಕ್ಕಾಗಿ ಅಲ್ಪಾವಧಿಗೆ ಮಾತ್ರ ಬದುಕುವ ಮಾನದಂಡದಲ್ಲಿ ಅಳೆಯುತ್ತದೆ. ಅದೇನೇ ಇದ್ದರೂ ದೊಡ್ಡ ಉದ್ದೇಶಕ್ಕಾಗಿ ಅಲ್ಪಾವಧಿ ಮಾತ್ರ ಬದುಕಿ ಸಾಯುವುದನ್ನು ದೀರ್ಘಕಾಲ ಬದುಕುವುದಕ್ಕಿಂತ ಮೌಲಿಕವಾದುದೆಂದು ಭಾವಿಸಲಾಗುತ್ತದೆ. ನಿತ್ಯದ ಸೃಜಶೀಲ ಕಾರ್ಯಕ್ಷೇತ್ರದಲ್ಲಿ ಶ್ರಮಶಕ್ತಿಯನ್ನು ವಿನಿಯೋಗಿಸುವ ಮೂಲಕ ಮಾತ್ರ ಒಬ್ಬ ವ್ಯಕ್ತಿಯ ಜೀವನವು ಅರ್ಥವನ್ನು ಪಡೆದುಕೊಳ್ಳುತ್ತದೆ. ಆದರೆ ಬದುಕನ್ನು ಹಾಗೆ ಅರ್ಥಪೂರ್ಣಗೊಳಿಸಿಕೊಳ್ಳಬೇಕೆಂದರೆ ತಮ್ಮ ಬೌದ್ಧಿಕ ಮತ್ತು ಬೌತಿಕ ಶಕ್ತಿಯನ್ನು ಬಳಸಿಕೊಳ್ಳಲು ಬೇಕಾದ ಪೂರಕ ಅವಕಾಶಗಳಿರಬೇಕಾಗುತ್ತದೆ. ಆಗ ಮಾತ್ರ ಮನುಷ್ಯರು ತಮ್ಮ ಬದುಕಿನ ಸಾತತ್ಯವನ್ನು ಕಂಡುಕೊಳ್ಳಲು ಸಾಧ್ಯ. ಆದರೆ ಅನಾನುಕೂಲ ಪರಿಸ್ಥಿತಿಗಳಿಂದಲೇ ಸುತ್ತುವರೆಯಲ್ಪಟ್ಟ ವ್ಯಕ್ತಿಗಳು ತಮ್ಮ ಆತ್ಮಪ್ರತ್ಯಯವನ್ನೇ ಕಳೆದುಕೊಳ್ಳುತ್ತಾರೆ. ವಾಸ್ತವವೆಂದರೆ ಮೇಲ್ನೋಟಕ್ಕೆ ಆಶಾದಾಯಕವೆಂದು ಕಾಣುತ್ತಿರುವ ಪರಿಸ್ಥಿತಿಗಳು ದಿನಗಳೆದಂತೆ ಯುವಕರಿಗೆ ಅದರಲ್ಲೂ ಮೇಲ್ಚಲನೆಯ ಬಗ್ಗೆ ಆಶಯವನ್ನಿಟ್ಟುಕೊಂಡಿರುವ ಯುವಜನತೆಗೆ ಅತ್ಯಂತ ಹತಾಷವಾದ ಮತ್ತು ಉಸಿರುಗಟ್ಟಿಸುವ ಸನ್ನಿವೇಶವಾಗಿ ಬದಲಾಗುತ್ತಿವೆ. ವಿಪರ್ಯಾಸವೆಂದರೆ, ವ್ಯಕ್ತಿಗಳ ಶಿಕ್ಷಣವೇ ಅವರ ಆಶೋತ್ತರಗಳನ್ನು ಸಾಕಾರಾಗೊಳಿಸಿಕೊಳ್ಳುವಲ್ಲಿ ಅಡ್ಡಿಯಾಗುವ ಮಿತಿಯೂ ಆಗಿಬಿಟ್ಟಿದೆ. ಉನ್ನತ ಶಿಕ್ಷಣದಲ್ಲಿ ಹೆಚ್ಚೆಚ್ಚು ಯುವಕರು ಅವಕಾಶ ಪಡೆದುಕೊಳ್ಳುತ್ತಿರುವುದು ಮತ್ತು ಒಂದು ಸುಭದ್ರ ಭವಿಷ್ಯವನ್ನು ಪಡೆದುಕೊಳ್ಳಬೇಕೆಂದರೆ ಸ್ಪರ್ಧಾತ್ಮಕ ಪರೀಕ್ಷೆಗಳೇ ಏಕೈಕ ದಾರಿಯಾಗುತ್ತಿರುವ ಸನ್ನಿವೇಶಗಳು ಈ ದುರ್ಭರ ಪರಿಸ್ಥಿತಿಗಳು ಮುಂದುವರೆಯುತ್ತಿರುವುದರ ಸಂಕೇತಗಳಾಗಿಬಿಟ್ಟಿವೆ.

  ಸ್ಪರ್ಧಾತ್ಮಕ ಪರೀಕ್ಷೆಗಳು ವಾಸ್ತವಿಕವಾಗಿ ತಮ್ಮ ಅಂತಿಮ ಮಿತಿಯನ್ನು ಮುಟ್ಟಿರುವುದರಿಂದ ಕೇಂದ್ರದ ಎನ್‌ಡಿಎ ಸರ್ಕಾರದ ಬಿಕ್ಕಟ್ಟು ಸಹ ಬಿಗಡಾಯಿಸಿದೆ.

  ತಮ್ಮ ಪ್ರಾಣಗಳನ್ನು ಕಳೆದುಕೊಂಡ ಆ ಮೂವರು ಯುವಕರು ಸಹ ಈ ಸಂದರ್ಭದ ಬಲಿಪಶುಗಳೇ ಆಗಿದ್ದಾರೆ. ಏಕೆಂದರೆ ಅವರೂ ಸಹ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಡಳಿತ ಸೇವಾ ಕ್ಷೇತ್ರವನ್ನು ಪ್ರವೇಶಿಸಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಅವರ ಶೈಕ್ಷಣಿಕ ಅರ್ಹತೆಗಳನ್ನೂ ಮತ್ತು ಅವರು ಹಾಕುತ್ತಿದ್ದ ಪ್ರಾಮಾಣಿಕ ಪ್ರಯತ್ನಗಳನ್ನೂ ಗಮನಿಸಿದಲ್ಲಿ ಅವರಿಗೆ ಸರ್ಕಾರಿ ಕ್ಷೇತ್ರದಲ್ಲಿ, ಸುಭದ್ರ ಉದ್ಯೋಗವೊಂದು ದಕ್ಕಲೇ ಬೇಕಿತ್ತು. ಆದರೆ ತಮಗೆ ಮುಂದೆಂದಾದರೂ ಸಹ ಒಂದು ಸುಭದ್ರ ಉದ್ಯೋಗ ಪಡೆದುಕೊಳ್ಳಬಹುದಾದ ಅರ್ಹತೆಯೇ ಇಲ್ಲವೆಂಬ ಹತಾಷ ಭಾವನೆಯಿಂದ ತಮ್ಮ ಕಣ್ಣುಗಳಲ್ಲಿ ತಾವೇ ಕೆಳಗಿಳಿದು ಹೋಗಿದ್ದರು. ಅವರುಗಳ ಸ್ನೇಹಿತರ ಹೇಳಿಕೆಯ ಪ್ರಕಾರ ಆ ಮೂವರು ಸಮಾಜಕ್ಕೆ ಮತ್ತು ತಮ್ಮ ತಮ್ಮ ಕುಟುಂಬಗಳಿಗೆ ಹೊರೆಯಾಗಿದ್ದೇವೆಂದು ತೀವ್ರವಾಗಿ ಭಾವಿಸುತ್ತಿದ್ದರು. ತಾವೇನಾಗಬೇಕು ಎಂಬ ಆಶಯಕ್ಕೂ ಮತ್ತು ತಾವೇನಾಗಿಬಿಟ್ಟೆವು ಎಂಬ ಪ್ರಶ್ನೆಗಳಿಗೂ ನಡುವೆ ಕಂದರವೇರ್ಪಟ್ಟಾಗ ಈ ರೀತಿ ಆತ್ಮಪ್ರತ್ಯಯವನ್ನು ಕಳೆದುಕೊಳ್ಳುವುದು ಅಥವಾ ಬದುಕಿನ ಬಗ್ಗೆ ಅರ್ಥಶೂನ್ಯತೆಯೂ ಆವರಿಸಿಕೊಳ್ಳುವುದು ಸಂಭವಿಸುತ್ತದೆ. ದೇಶದ ಬಹುಪಾಲು ಯುವಕರು ಈ ಬಗೆಯಲ್ಲಿ ಆಶಯ ಮತ್ತು ವಾಸ್ತವಿಕತೆಯ ನಡುವಿನ ಕಂದರದಲ್ಲಿ ಸಿಲುಕಿಕೊಂಡಿದ್ದಾರೆ ಎಂದೇ ಹೇಳಬಹುದು. ಹಲವಾರು ಯುವಕರ ದುರಂತಮಯ ಸಾವುಗಳು ಈ ನಿರಂತರ ವಿಪರ್ಯಾಸವನ್ನು ಬೊಟ್ಟುಮಾಡಿ ತೋರಿಸುತ್ತದೆ.

  ಆದರೆ ರಾಜಕಾರಣಿಗಳು ಯುವಕರನ್ನು ರಾಷ್ಟ್ರೀಯವಾದಿ ನಿರ್ವಚನದ ಮೂಲಕ ಉದ್ದೀಪಿಸಿ ಅವರ ನೈತಿಕ ಸ್ಥೈರ್ಯವನ್ನು ಎತ್ತರಿಸುವ ಪ್ರಯತ್ನ ಮಾಡುತ್ತಾರೆ. ಅಂಥಾ ಭಾಷೆಯಲ್ಲಿ ಯುವಕರು ದೇಶದ ಅಭಿವೃದ್ಧಿಗೆ ಬೇಕಾಗಿರುವ ಸಂಪತ್ತಾಗಿಯೂ ಅಥವಾ ದೇಶದ ಭವಿಷ್ಯದ ಹೆಮ್ಮೆಯಾಗಿಯೂ ಕಾಣಿಸಲ್ಪಡುತ್ತಾರೆ. ರಾಜಕಾರಣಿಗಳು ಅದರಲ್ಲೂ ಹಾಲಿ ಸರ್ಕಾರದ ರಾಜಕಾರಣಿಗಳು ತಮ್ಮ ಮೇಕ್ ಇನ್ ಇಂಡಿಯಾ (ಭಾರತದಲ್ಲೇ ಉತ್ಪಾದಿಸಿ) ಆಂದೋಲನದಲ್ಲಿ ಯುವಶಕ್ತಿಯ ಪಾತ್ರವನ್ನು ವೈಭವೀಕರಿಸುತ್ತಾರೆ. ಆದರೆ ಆ ತರ್ಕದ ಮತ್ತೊಂದು ಮುಖದಲ್ಲಿ ಸಾಯುತ್ತಿರುವ ಯುವಕರು ಈ ಯೋಜನೆಯಲ್ಲಿ ಇಲ್ಲದಿದ್ದರೂ ನಡೆಯುತ್ತದೆ ಎಂಬ ತಿರಸ್ಕಾgವಿದೆ. ಬದುಕನ್ನು ಕೊನೆಗಾಣಿಸಿಕೊಳ್ಳುತ್ತಿರುವ ಯುವಕರ ಸಾಲು ಸಾಲು ಸಾವುಗಳ ಬಗ್ಗೆ ಕಿಂಚಿತ್ತೂ ದುಗುಡವನ್ನೂ ತೋರದ ಆಳುವ ವರ್ಗಗಳ ಧೋರಣೆಯಲ್ಲಿ ಇದು ಇನ್ನಷ್ಟು ಢಾಳಾಗಿ ಕಾಣುತ್ತದೆ. ಆದರೆ ಮಾರುಕಟ್ಟೆಯಾಗಲೀ, ಅಥವಾ ಸರ್ಕಾರಗಳಾಗಲೀ ಆ ಯುವಕರು ಬದುಕುಳಿಯಲು ಬೇಕಾದ ಪರಿಸ್ಥಿತಿಗಳನ್ನಾಗಲೀ, ಅವಕಾಶಗಳನ್ನಾಗಲೀ ಒದಗಿಸುವುದಿಲ್ಲ. ಯೋಗ್ಯವಾದ ಉದ್ಯೋಗಾವಕಾಶಗಳ ಕೊರತೆಯು ಮೊದಲು ಸಾಮಾಜಿಕ ಸಾವಿಗೂ ನಂತರ ಭೌತಿಕ ಸಾವಿಗೂ ಕಾರಣವಾಗುತ್ತದೆ.

  ಭಾರತದ ಸಂದರ್ಭದಲ್ಲಿ ಅಪಾಯಕಾರಿ ಒಳಚರಂಡಿಯ ಮ್ಯಾನ್‌ಹೋಲ್‌ಗಳಿಗೂ ಮತ್ತು ಪ್ರಾಣಾಪಾಯದ ಅರಿವಿದ್ದು ಸಹ ಅದರಲ್ಲಿ ಇಳಿದು ಕೆಲಸ ಮಾಡುವ ಅನಿವಾರ್ಯತೆಗೆ ಗುರಿಯಾಗಿರುವ ಮನುಷ್ಯರ ಮಧ್ಯೆ ವ್ಯತ್ಯಾಸ ಗುರುತಿಸದ ಜಾತಿಗ್ರಸ್ಥ ನಾಗರಿಕ ಸಮಾಜದ ತಣ್ಣನೆಯ ಪ್ರತಿಕ್ರಿಯೆಗಳಲ್ಲಿ ಸಾಮಾಜಿಕ ಸಾವು ಸಾಮಾಜಿಕವಾಗುತ್ತಿರುತ್ತದೆ. ವಾಸ್ತವವಾಗಿ ದೈಹಿಕ ಸಾವೆಂಬುದು ಸಾಮಾಜಿಕ ಸಾವಿನ ತಾರ್ಕಿಕ ಅಂತ್ಯವಾಗಿದೆ. ತಮ್ಮನ್ನು ಆವರಿಸಿಕೊಳ್ಳುವ ಅವಮರ್ಯಾದೆ, ಅಪಮಾನಗಳಿಂದ ಆತ್ಮಪ್ರತ್ಯಯವನ್ನೇ ಕಳೆದುಕೊಂಡು ಸಾಮಾಜಿಕ ಸಾವಿಗೆ ಗುರಿಯಾಗುವ ರೈತಾಪಿ ಮತ್ತು ನಿರುದ್ಯೋಗಿ ಯುವಕರು ಅದರಿಂದ ಪಾರಾಗಲು ದೈಹಿಕ ಸಾವಿನ ದುರದೃಷ್ಟಕರ ಆಯ್ಕೆಯನ್ನು ಮಾಡಿಕೊಳ್ಳುತ್ತಾರೆ. ಯುವಕರ ಕ್ರಿಯಾಶೀಲ ಬದುಕಿಗಿಂತ ಇಂಥಾ ಸಾವುಗಳೆ ಅವರ ಅಸ್ಥಿತ್ವಕ್ಕೆ ಸಾಕ್ಷಿಯನ್ನು ಒದಗಿಸುತ್ತವೆ. ಪೊಲೀಸ್ ವಿಚಾರಣೆ, ವಿಧಿ ವಿಜ್ನಾನಗಳ ಪರೀಕ್ಷೆಗಳು ಮತ್ತು ಪರಿಹಾರ ಧನಗಳ ಮೂಲಕ ಯುವಕರ ಅಸ್ಥಿತ್ವವನ್ನು ಗುರುತಿಸಲಾಗುತ್ತದೆ.

  ವಿಪರ್ಯಾಸವೆಂದರೆ ಪ್ರಭುತ್ವವು ಹಲವು ತಂತ್ರೋಪಾಯಗಳಿಂದ ಯುವಕರನ್ನು ಸಾಂಸ್ಕೃತಿಕ ರಾಷ್ಟ್ರೀಯತೆಯಿಂದ ಹಿಡಿದು ಧಾರ್ಮಿಕ ಸ್ಥಳಗಳನ್ನು ನಾಶಮಾಡುವಂಥಾ ಕೆಲಸಗಳಲ್ಲಿ ತೊಡಗಿಸುತ್ತಿರುವುದನ್ನು ಅರಿತೂ ಸಹ ಯುವಕರು ಅದರಲ್ಲಿ ಪಾಲ್ಗೊಳ್ಳುತ್ತಾರೆ. ಯುವಕರಿಗೆ ಉದ್ಯೋಗ ಕೊಡುವ ಸಾಮರ್ಥ್ಯ ತಮಗಿಲ್ಲವೆಂಬ ಸತ್ಯವನ್ನು ಯುವಕರೆದುರು ಒಪ್ಪಿಕೊಳ್ಳುವ ನೈತಿಕ ಸಾಮರ್ಥ್ಯ ಆಳುವ ಪಕ್ಷಗಳಿಗಾಗಲೀ, ಅದರ ನಾಯಕರಿಗಾಗಲೀ ಇಲ್ಲ. ಅವರು ನಡೆಸುವ ಕೌಶಲ್ಯ ಮತ್ತು ಉದ್ಯೋಗ ಮೇಳಗಳು ನಿರರ್ಥಕ ಮತ್ತು ಕೇವಲ ಮರೀಚಿಕೆಯೆಂಬ ಸತ್ಯವನ್ನು ಹೇಳಬಲ್ಲ ಎದೆಗಾರಿಕೆಯನ್ನು ಅವರ ರಾಜಕೀಯ ಅವರಿಗೆ ಕೊಡುವುದಿಲ್ಲ. ಸರ್ಕಾರದ ಇಂಥ ಗಿಮಿಕ್ಕುಗಳು ದೇಶದಲ್ಲಿ ಸಾಕಷ್ಟು ಉದ್ಯೋಗಗಳು ಲಭ್ಯವಿದ್ದು ಯುವಕರು ಅದನ್ನು ಪಡೆದುಕೊಳ್ಳಲು ತಕ್ಕಂಥ ಕೌಶಲ್ಯವನ್ನು ಪಡೆದುಕೊಂಡರೆ ಸಾಕೆಂಬ ಭ್ರಮೆಯನ್ನು ಮೂಡಿಸುತ್ತದೆ. ಇಂಥಾ ಪರಿಸ್ಥಿತಿಯಲ್ಲಿ, ನಿರುದ್ಯೋಗದಂಥಾ ಮೂಲಭೂತ ಸಮಸ್ಯೆಯನ್ನು ನಿವಾರಿಸುವ ಶಕ್ತಿ ಆಳುವ ಪಕ್ಷಕ್ಕಿಲ್ಲವೆಂಬ ಸತ್ಯವನ್ನು ಅವರ ಮುಖಕ್ಕೆ ಹೇಳುವ ನೈತಿಕ ಧೃಢತೆಯನ್ನು ಯುವಕರು ತೋರಬೇಕಿದೆ. ಆದರೆ ಸರ್ಕಾರಕ್ಕೆ ಸತ್ಯವನ್ನು ಮುಟ್ಟಿಸಲು ಬಳಸುವ ಮಾಧ್ಯಮ ದುರಂತಮಯವಾಗಿರಬಾರದು. ಅದು ವಾಸ್ತವವನ್ನು ಬದಲಿಸುವ ಪರಿವರ್ತನಾಶೀಲಿಯಾಗಿರಬೇಕು. ಯುವಕರನ್ನು ಧಾರ್ಮಿಕ ನೆಲೆಯಲ್ಲಿ ತಪ್ಪುದಾರಿಗೆಳೆಯುವ ಅಜೆಂಡಗಳು ರಾಜಕೀಯ ಪಕ್ಷಗಳಿಗಿರಬಹುದು, ಆದರೆ, ಇನ್ನಷ್ಟು ಯೋಗ್ಯ ಮತ್ತು ಸುಭದ್ರ ಜೀವನದ ಕುರಿತು ಪ್ರಶ್ನೆಗಳನ್ನು ಕೇಳಲು ಮುಂದಾಗುವ ಹೊಣೆಗಾರಿಕೆ ಯುವಕರದ್ದಲ್ಲವೇ?

  ಕೃಪೆ: Economic and Political Weekly Dec 1, 2018. Vol. 53. No.47
  ಅನು: ಶಿವಸುಂದರ್
  (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )

  • Comments Off on ಸಾವು ಅಗ್ಗವಾಗುತ್ತಿದೆ !
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.