07:15 pm Tuesday, June 25, 2019
 • ವೈಜ್ಞಾನಿಕ ಮಾನದಂಡಗಳೊಂದಿಗೆ ರೈತರ ಸಾಲ ಮನ್ನಾ:ಕುಮಾರಸ್ವಾಮಿ

  By admin - Tue Jun 19, 2:46 pm

  • Comments Off on ವೈಜ್ಞಾನಿಕ ಮಾನದಂಡಗಳೊಂದಿಗೆ ರೈತರ ಸಾಲ ಮನ್ನಾ:ಕುಮಾರಸ್ವಾಮಿ
  • 0 views

  ವೈಜ್ಞಾನಿಕ ಮಾನದಂಡಗಳೊಂದಿಗೆ ರೈತರ ಸಾಲ ಮನ್ನಾ : ಹೆಚ್ ಡಿ ಕುಮಾರಸ್ವಾಮಿ

  ಬೆಂಗಳೂರು, ಜೂನ್ 19 ( ಕರ್ನಾಟಕ ವಾರ್ತೆ ) :
  ಅತ್ಯಂತ ವೈಜ್ಞಾನಿಕ ಮಾನದಂಡಗಳನ್ನು ರೂಪಿಸಿ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಇಲ್ಲಿ ಇಂದು ಪ್ರಕಟಿಸಿದರು.
  ಬೆಂಗಳೂರು ವರದಿಗಾರರ ಕೂಟದ ಸಹಯೋಗದೊಡನೆ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ಮುಖ್ಯಮಂತ್ರಿಯವರ ಜೊತೆ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
  ಜಾತ್ಯಾತೀತ ಜನತಾದಳ ಪಕ್ಷಕ್ಕೆ ಸಂಪೂರ್ಣ ಬಹುಮತ ಕೊಟ್ಟರೆ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ನೀಡಿದ ಹೇಳಿಕೆಗೆ ತಾವು ಈಗಲೂ ಬದ್ಧ. ತಮ್ಮ ಈ ಬದ್ಧತೆಯಿಂದ ತಾವೆಂದೂ ಹಿಂದಕ್ಕೆ ಸರಿಯುವುದಿಲ್ಲ ಎಂದು ಪುನರುಚ್ಛರಿಸಿದ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮದು ಸಂಪೂರ್ಣ ಬಹುಮತದ ಸರ್ಕಾರವಲ್ಲ. ಸಮ್ಮಿಶ್ರ ಸರ್ಕಾರ. ಈ ಹಿನ್ನೆಲೆಯಲ್ಲಿ ಇಂತಹ ಪ್ರಮುಖ ನಿಲುವು-ನಿರ್ಧಾರಗಳನ್ನು ಒಮ್ಮೆಲೇ ಕೈಗೊಳ್ಳುವುದು ಕಷ್ಟವಾಗುತ್ತದೆ ಎಂದರು.
  ಯಾವುದೇ ಕಾರಣಕ್ಕೂ ಸಾಲ ಮನ್ನಾ ಘೋಷಣೆಯಿಂದ ತಾವು ಹಿಂದೆ ಸರಿಯುವುದಿಲ್ಲ. ಆದರೆ, ಹಣ ಹೊಂದಾಣಿಕೆಗೆ ಹಾಗೂ ಸಂಪನ್ಮೂಲ ಕ್ರೋಢಿಕರಣಕ್ಕೆ ಸಮಯದ ಬೇಕಾಗುತ್ತದೆ. ಅನಾವಶ್ಯಕ ವೆಚ್ಚಗಳನ್ನು ಕಡಿಮೆ ಮಾಡುವುದು ಹೇಗೆ ? ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದು ಹೇಗೆ ? ಸೋರಿಕೆ ತಡೆ ಹೇಗೆ ? ಎಂಬುದಕ್ಕೆ ಪರಿಹಾರ ಕಂಡು ಹಿಡಿಯಲು ಕಾಲಾವಕಾಶದ ಅಗತ್ಯವಿದೆ.
  ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಹಿನ್ನೆಲೆಯಲ್ಲಿ ಬಾಂಡ್ ಮೂಲಕ ಎರಡು ಲಕ್ಷ ಕೋಟಿ ರೂ. ಸಂಗ್ರಹಿಸಲು ಕೇಂದ್ರ ಸರ್ಕಾರವು ಬ್ಯಾಂಕ್‍ಗಳಿಗೆ ಅವಕಾಶ ಕಲ್ಪಿಸಿರುವ ಮಾದರಿಯಲ್ಲೇ ಸಾಲದ ಸಂಕಷ್ಟದಿಂದ ರೈತರನ್ನು ಪಾರು ಮಾಡಲು ಈ ಮೊತ್ತದಲ್ಲಿ ಕನಿಷ್ಠ ಶೇಕಡಾ 25 ರಷ್ಟು ಮೀಸಲಿರಿಸಲು ಪ್ರಧಾನಿಗೆ ಎಂದು ಮನವಿ ಮಾಡಿದ್ದೇನೆ.
  ರಾಷ್ಟ್ರೀಕೃತ ಬ್ಯಾಂಕ್‍ಗಳ ಮುಖ್ಯಸ್ಥರ ಸಭೆ
  ಇನ್ನೆರಡು ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳ ಮುಖ್ಯಸ್ಥರ ಸಭೆಯನ್ನು ಆಯೋಜಿಸಿ ರಾಜ್ಯದ ಜನತೆಗೆ ಹೊರೆಯಾಗದಂತೆ ಸಾಲ ಮನ್ನಾ ಮಾಡುವ ಬಗ್ಗೆ ಅಭಿಪ್ರಾಯಗಳನ್ನು ಸಂಗ್ರಹಿಸುತ್ತೇನೆ. ರಾಜ್ಯದಲ್ಲಿ ಅಭಿವೃದ್ಧಿ ಪೂರಕ ವಾತಾವರಣವನ್ನು ಮುಂದುವರೆಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರು ನಾಡಿನ ಜನತೆಗೆ ಭರವಸೆ ನೀಡಿದರು..
  ರೈತರ ಸಾಲ ಮನ್ನಾ ಆದಲ್ಲಿ, ಉತ್ತರ ಕರ್ನಾಟಕದ ರೈತರಿಗೆ ಹೆಚ್ಚು ಲಾಭವಾಗಲಿದೆ ಎಂಬುದು ವಾಸ್ತವ. ಆದರೆ, ಸಾಲ ಮನ್ನಾ ಎಲ್ಲಕ್ಕೂ ಪರಿಹಾರವಲ್ಲ. ಕೃಷಿ ಪದ್ಧತಿಯಲ್ಲಿ ಬದಲಾವಣೆ ತರುವ ಅಗತ್ಯವಿದೆ ಎಂಬುದರ ಅರಿವು ತಮಗಿದೆ. ರೈತರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ದೊರಕಿಸಿಕೊಡುವ, ಉಗ್ರಾಣ ಮತ್ತು ಶೀತಲೀಕರಣ ಸೌಲಭ್ಯ ಕಲ್ಪಿಸುವ, ಆಹಾರ ಸಂಸ್ಕರಣೆ ಹಾಗೂ ಪೊಟ್ಟಣಿಕರಣ ವ್ಯವಸ್ಥೆ ಮತ್ತು ಪದ್ಧತಿಗಳ ಅನುಷ್ಠಾನಕ್ಕೆ ತರುವಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕು. ಕೃಷಿ ಕ್ಷೇತ್ರದಲ್ಲಿ ಹೊಸ ಅವಿಷ್ಕಾರಗಳನ್ನು ಅಳವಡಿಸಿಕೊಂಡಲ್ಲಿ ರೈತರ ಬವಣೆ ಕಡಿಮೆ ಆಗಲಿದೆ. ಮಾವು ಬೆಳೆಗಾರರನ್ನೇ ನೋಡಿ. ನಮ್ಮಲ್ಲಿ 40 ವರ್ಷಗಳ ಕಾಲ ಒಂದೇ ಮಾವಿನ ಗಿಡವನ್ನು ಅವಲಂಭಿಸುವವರೇ ಹೆಚ್ಚಾಗಿದ್ದಾರೆ. ಇತರೆಡೆಗಳಲ್ಲಿ ಒಂಭತ್ತು ವರ್ಷಗಳಿಗೇ ಗಿಡವನ್ನು ತೆಗೆಯುತ್ತಾರೆ. ಇವೆಲ್ಲದರ ಬಗ್ಗೆ ನಾವು ಗಮನಹರಿಸಬೇಕು. ನನ್ನ ಈ ಮಾತುಗಳು ಕೇವಲ ಭಾಷಣಕ್ಕೆ ಸೀಮಿತವಲ್ಲ. ಮುಂದಿನ ಐದು ವರ್ಷಗಳಲ್ಲಿ ಕೃತಿಯಲ್ಲಿ ತೋರಿಸುವೆ. ಮೂರು ತಿಂಗಳಲ್ಲಿ ಈ ನಿಟ್ಟಿನಲ್ಲಿ ಕಾರ್ಯ ಚಟುವಟಿಕೆ ಪ್ರಾರಂಭಿಸುತ್ತೇನೆ ಎಂದು ಅವರು ನುಡಿದರು.
  ರಾಜಧರ್ಮ ಪಾಲಿಸಲು ಸಲಹೆ !
  ನವದೆಹಲಿಯಲ್ಲಿ ಸೋಮವಾರ ತಾವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಯಾರನ್ನೂ ಧೂಷಣೆ ಮಾಡಿಲ್ಲ. ಯಾರ ಬಗ್ಗೆಯೂ ವಾಕ್ಪ್ರಹಾರ ಅಥವಾ ಗದಾ ಪ್ರಹಾರ ಮಾಡಲಿಲ್ಲ. ರಾಜಧರ್ಮವನ್ನು ಪಾಲಿಸಲು ಕೇವಲ ಸಲಹೆಗಳನ್ನು ಪಡೆದು ಬಂದಿದ್ದೇನೆ. ಸನ್ನಿಹಿತದಲ್ಲಿಯೇ ಸಚಿವ ಸಂಪುಟದಲ್ಲಿ ಬಜೆಟ್ ಅಧಿವೇಶನದ ದಿನಾಂಕವನ್ನು ನಿಷ್ಕರ್ಷೆಗೊಳಿಸಿ ಜುಲೈ ಮೊದಲನೆಯ ಅಥವಾ ಎರಡನೆಯ ವಾರದಲ್ಲಿ ರಾಜ್ಯ ಬಜೆಟ್ ಮಂಡಿಸಲು ಯೋಜಿಸಿದ್ದೇನೆ ಎಂದು ಮುಖ್ಯಮಂತ್ರಿ ವಿವರಿಸಿದರು.
  ಒಂದು ವರ್ಷಕ್ಕೆ ಮೊಟುಕುಗೊಳ್ಳುವುದಿಲ್ಲ
  ತಮ್ಮ ಸರ್ಕಾರ ಎಷ್ಟು ದಿನ ಇರುತ್ತದೆಯೋ ? ಎಂದು ಲೆಕ್ಕಾಚಾರ ಹಾಕುತ್ತಿರುವವರನ್ನು ಗಮನಿಸಿ ಬಹುತೇಕರ ಅಭಿಪ್ರಾಯದಂತೆಯೇ ತಮ್ಮ ಸರ್ಕಾರವು ಲೋಕಸಭಾ ಚುನಾವಣೆಯವರೆಗೂ ಇದ್ದೇ ಇರುತ್ತದೆ ಎಂದು ಹೇಳಿದ್ದೇನೆಯೇ ಹೊರತು ನನ್ನ ಅಧಿಕಾರವಧಿ ಒಂದು ವರ್ಷಕ್ಕೇ ಮುಕ್ತಾಯವಾಗುತ್ತದೆ ಎಂದು ಎಲ್ಲೂ ಎಂದೂ ಹೇಳಿಲ್ಲ. ತಮ್ಮ ಸರ್ಕಾರ ಐದು ವರ್ಷಗಳ ಕಾಲ ಸುಭದ್ರವಾಗಿರುತ್ತದೆ ಎಂದು ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿದರು.
  ಸಾಮಾಜಿಕ ಭದ್ರತೆ
  ಹಿರಿಯ ನಾಗರೀಕರಿಗೆ, ಗರ್ಭಿಣಿ ಸ್ತ್ರೀಯರಿಗೆ ಹಾಗೂ ಮದುವೆಯಾಗದೇ ಇರುವ ಹೆಣ್ಣು ಮಕ್ಕಳಿಗೆ ಸಾಮಾಜಿಕ ಭದ್ರತಾ ಯೋಜನೆಯ ವ್ಯಾಪ್ತಿಯಲ್ಲಿ ತರಬೇಕೆಂಬುದು ತಮ್ಮ ಅಭಿಪ್ರಾಯ.

  ಆರ್ ಟಿ ಇ ದುರುಪಯೋಗ ತಡೆ : ಕುಂದು-ಕೊರತೆ ನಿವಾರಣಾ ಸಮಿತಿಗಳಿಗೆ ಮರು ಚಾಲನೆ
  ಶಿಕ್ಷಣ ಹಕ್ಕು ಕಾಯಿದೆ ಬಡವರ ಮಕ್ಕಳಿಗೆ ಅನುಕೂಲವಾಗುತ್ತಿಲ್ಲ. ಇದು ದುರುಪಯೋಗವಾಗುತ್ತಿದೆ. ಒಂದೆಡೆ ಖಾಸಗಿ ಶಾಲೆಗಳ ಮೇಲೆ ಒತ್ತಡ ಹಾಗೂ ಬೇಡಿಕೆ ಎರಡೂವರೆ ಪಟ್ಟು ಹೆಚ್ಚಾಗಿದೆ. ಮತ್ತೊಂದಡೆ ಸರ್ಕಾರ ಶಾಲೆಗಳಲ್ಲಿನ ದಾಖಲಾತಿ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವ ಹಿನ್ನೆಲೆಯಲ್ಲಿ ಕುಂದು-ಕೊರತೆ ನಿವಾರಣೆಗಾಗಿ ಮೀಸಲಿರುವ ಜಿಲ್ಲಾ ಮಟ್ಟದ ಸಮಿತಿಗಳಿಗೆ ಮರು ಚಾಲನೆ ನೀಡಿ ಅವುಗಳನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು.

  ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯಕ್ಕೆ ಮತ್ತೆ ಚಾಲನೆ
  ಪ್ರಜೆಗಳ ಕುಂದುಕೊರತೆಗಳನ್ನು ಆಲಿಸುವ ಮುಖ್ಯಮಂತ್ರಿಯವರ ಜನತಾ ದರ್ಶನ ಹಾಗೂ ಜನತೆಯ ಮನೆಯ ಬಾಗಿಲ ಬಳಿ ಮುಖ್ಯಮಂತ್ರಿಯವರೇ ತೆರಳಿ ಅವರ ದುಃಖ ದುಮ್ಮಾನಗಳನ್ನು ಕಣ್ಣಾರೆ ಕಂಡು ಅವುಗಳಿಗೆ ಪರಿಹಾರ ಹುಡುಕುವ ಗ್ರಾಮ ವಾಸ್ತವ್ಯ ಎರಡೂ ಕಾರ್ಯಕ್ರಮಗಳಿಗೂ ಮತ್ತೆ ಚಾಲನೆ ನೀಡುವುದಾಗಿ ತಿಳಿಸಿದ ಹೆಚ್ ಡಿ ಕುಮಾರಸ್ವಾಮಿ ಅವರು ಕೃಷಿ ಮಾತ್ರವಲ್ಲದೆ ಆರೋಗ್ಯ, ವಸತಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿಯೂ ದೊಡ್ಡ ಮಟ್ಟದ ಬದಲಾವಣೆ ತರಬೇಕೆನ್ನುವುದು ತಮ್ಮ ಮಹದಾಸೆಯಾಗಿದೆ.
  ಪಕ್ಷಾತೀತ ಸಲಹೆ
  ಕೇವಲ ಜಾತ್ಯಾತೀತ ಜನತ ಪಕ್ಷದಲ್ಲಿನ ತಮ್ಮ ಸ್ನೇಹಿತರು ಮಾತ್ರವಲ್ಲ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಕ್ಷದಲ್ಲಿನ ಗೆಳೆಯರೂ ಕೂಡಾ ರಾಜಕೀಯ ನಿರ್ವಹಣೆಗೆ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ. ಅಭಿವೃದ್ಧಿ ನಿರ್ವಹಣೆಗೆ ಸಮಯ ಕೊಡಿ ಎಂದು ಪಕ್ಷಾತೀತವಾಗಿ ಸಲಹೆ ನೀಡಿದ್ದಾರೆ ಎಂಬ ಅಂಶವನ್ನು ಇದೇ ಸಂದರ್ಭದಲ್ಲಿ ಅವರು ಹೊರಹಾಕಿದರು.
  ಚಲನಶೀಲ ಸರ್ಕಾರ
  ಉಪ ಮುಖ್ಯಮಂತ್ರಿ ಡಾ ಜಿ. ಪರಮೇಶ್ವರ್, ಕಂದಾಯ ಸಚಿವ ಆರ್. ವಿ. ದೇಶಪಾಂಡೆ, ಲೋಕೋಪಯೋಗಿ ಸಚಿವ ಹೆಚ್. ಡಿ. ರೇವಣ್ಣ, ಕೃಷಿ ಸಚಿವ ಎನ್. ಹೆಚ್. ಶಿವಶಂಕರರೆಡ್ಡಿ ಅವರು ಅತ್ಯಂತ ಕ್ರಿಯಾಶೀಲರಾಗಿ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಈಗಾಗಲೇ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ತಾವೇ ದಾಖಲಿಸುತ್ತ್ತಿದ್ದೀರಿ. ತಮ್ಮದು ಮೈಮರೆಯುವ ಸರ್ಕಾರವಲ್ಲ, ಚಲನಶೀಲ ಸರ್ಕಾರ ಎಂಬುದಕ್ಕೆ ಇದೇ ಸಾಕ್ಷಿ ಎಂದು ಕುಮಾರಸ್ವಾಮಿ ಅವರು ಬಣ್ಣಿಸಿದರು.
  ಕ್ಷಿಪ್ರ ಸ್ಪಂದನೆ
  ನವದೆಹಲಿಯಲ್ಲಿ ಸೋಮವಾರ ವ್ಯಾಯಾಮ ಮಾಡುತ್ತಿದ್ದ ಸಂದರ್ಭದಲ್ಲಿ ಏಕ ಕಾಲಕ್ಕೆ ಟಿವಿ ಕೂಡಾ ನೋಡುತ್ತಿದ್ದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಲೋಂಡದಲ್ಲಿರುವ ಸರ್ಕಾರಿ ಶಾಲೆಗೆ ಮಕ್ಕಳು ಐದಾರು ಕಿ. ಮೀ ಕಾಡಿನಲ್ಲಿ ನಡೆದು ಬರುತ್ತಿದ್ದಾರೆ ಎಂಬ ಸುದ್ದಿಯನ್ನು ದೃಶ್ಯ ಮಾಧ್ಯಮದಲ್ಲಿ ಕಂಡೊಡನೆಯೇ ಅದೇ ದಿನ ಮಧ್ಯಾಹ್ನ ಎರಡು ಗಂಟೆಯೊಳಗೆ ಬಸ್ ಸಂಪರ್ಕ ಕಲ್ಪಿಸಲು ಸೂಚಿಸಿದೆ. ಇದೀಗ ಬಸ್ ಸಂಚಾರ ಪ್ರಾರಂಭವಾಗಿದೆ.
  ಅಂತೆಯೇ, ಕಬಿನಿ ಜಲಾಶಯದಿಂದ ನೀರು ಹೊರ ಬಿಟ್ಟಾಗ ಭತ್ತದ ಗದ್ದೆಗೆ ನೀರು ಹರಿದು ಆತಂಕಕ್ಕೆ ಒಳಗಾದ ರೈತನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ದೃಶ್ಯವನ್ನು ನೋಡಿದ ಕೂಡಲೇ ಆತನನ್ನು ತಮ್ಮ ಕಚೇರಿಗೆ ಕರೆತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆತನ ಬವಣೆಯನ್ನು ಆಲಿಸಿ ಕೃಷಿ ಸಚಿವರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲೇ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲು ಮುಂದಾಗಿದ್ದೇನೆ. ಇದು ಮಾಧ್ಯಮಗಳಲ್ಲಿ ಬಿತ್ತರವಾದ ಕೆಲವು ಘಟನೆಗಳಿಗೆ ತಮ್ಮ ಕ್ಷಿಪ್ರ ಸ್ಪಂದನೆ ಎಂದರು.
  ಕಾವೇರಿ ಯೋಜನೆ ಅವೈಜ್ಞಾನಿಕ
  ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಚಿಸಿರುವ ಯೋಜನೆ ಅವೈಜ್ಞಾನಿಕ. ನಾವು ಭಾರತ ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುವುದಿಲ್ಲ. ಆದರೆ, ಎಲ್ಲಾ ಷರತ್ತುಗಳೂ ಕರ್ನಾಟಕಕ್ಕೇ ಅನ್ವಯಿಸಬೇಕೆಂಬ ಯೋಜನೆಯಲ್ಲಿನ ನೀತಿ ಒಪ್ಪಲಾಗದು. ಕಾಲ ಕಾಲಕ್ಕೆ ನೀರು ಬಿಡುವುದು, ನೀರು ಲಭ್ಯತೆಯ ಅಳತೆ ಮಾಡುವ ಅಧಿಕಾರ ಲಭ್ಯತೆಗೆ ಅನುಗುಣವಾಗಿ ಬೆಳೆ ಬೆಳೆಯಬೇಕೆಂಬ ಸೂಚನೆ ಎಲ್ಲವೂ ನಮಗೆ ಮಾತ್ರ ಏಕೆ ? ನಮ್ಮ ಪಾಲಿನ ನೀರು ನಮಗೆ ಹಂಚಿಕೆಯಾದ ಮೇಲೆ ಯಾವ ಬೆಳೆ ಬೆಳೆಯಬೇಕೆನ್ನುವುದು ನಮ್ಮ ರೈತರ ಇಚ್ಚೆ. ನೀರು ಇದೆಯೋ ಇಲ್ಲವೋ ನೀರು ಕೊಡಿ ಎಂಬ ಧೋರಣೆ ಸಲ್ಲ. ಅಂತೆಯೇ ತಮಿಳುನಾಡಿನ ನೀರು ಸಮುದ್ರಕ್ಕೆ ಹರಿದರೂ ಪ್ರಶ್ನಿಸುವ ಹಕ್ಕು ನಮಗಿಲ್ಲ ಎಂಬುದು ನ್ಯಾಯ ಸಮ್ಮತವಲ್ಲ ಎಂದು ಮುಖ್ಯಮಂತ್ರಿ ವಿಶ್ಲೇಷಿಸಿದರು.
  ಜುಲೈನಲ್ಲಿ ಮಹದಾಯಿ ತೀರ್ಪು
  ಜುಲೈನಲ್ಲಿ ಮಹಾದಾಯಿ ತೀರ್ಪು ಹೊರಬೀಳಲಿದೆ. ಈ ಹಂತದಲ್ಲಿ ಪ್ರಧಾನಿಯಾಗಲೀ ಬೇರಾರೇ ಆಗಲಿ ಮಧ್ಯಪ್ರವೇಶಿಸಲು ಆಗುವುದಿಲ್ಲ ಎಂದರು.
  ಕಸದ ಮಾಫಿಯಾ ಕತ್ತರಿಸುವೆ
  ಬೆಂಗಳೂರು ನಗರದಲ್ಲಿ ಕಸವನ್ನು ಕಂಡು ತಲೆ ತಗ್ಗಿಸುವಂತಾಗಿದೆ. ನಗರದಲ್ಲಿನ ಕಸದ ಮಾಫಿಯಾ ಬಗ್ಗೆ ಅರಿವಿದೆ. ಅದನ್ನು ಹೇಗೆ ಕತ್ತರಿಸಬೇಕೆಂಬುದೂ ತಮಗೆ ತಿಳಿದಿದೆ. ಆದರೆ ಸ್ವಲ್ಪ, ಕಾಲಾವಕಾಶ ಬೇಕಷ್ಟೆ. ಎಂದು ಅವರು ಮಾರ್ಮಿಕವಾಗಿ ನುಡಿದರು. ಅದೇ ರೀತಿ, ಮರಳು ದಂಧೆಗೆ ಕಡಿವಾಣ ಹಾಕಿ. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದಿರಿ. ಕಠಿಣ ಕ್ರಮ ಜರುಗಿಸಿ ಎಂದೂ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅವರು ಹೇಳಿದರು.
  ಶೂನ್ಯ ಸಂಚಾರ ( ಜೀರೋ ಟ್ರಾಫಿಕ್ ) ಬೇಡ. ಜನಾಕ್ರೋಶಕ್ಕೆ ಬಲಿಯಾಗುತ್ತೇನೆ ಎಂದು ಹೇಳಿ ಆರ್ಥಿಕ ಮಿತವ್ಯಯ ಸಾಧಿಸಲು ತಮ್ಮ ಮುಂಗಾವಲು ಹಾಗೂ ಬೆಂಗಾವಲು ವಾಹನಗಳÀ ಸಂಖ್ಯೆಯನ್ನು ತೀವ್ರವಾಗಿ ಕಡಿತಗೊಳಿಸುವಂತೆ ತಮ್ಮ ಭದ್ರತಾ ಸಿಬ್ಬಂದಿಗೆ ಸೂಚಿಸಿದಾಗ ಅದಕ್ಕೆ ಅವರು ಒಪ್ಪಲಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದರು.
  ಎಸಿಬಿ-ಲೋಕಾಯುಕ್ತದಲ್ಲಿ ಹಸ್ತಕ್ಷೇಪವಿಲ್ಲ
  ಭ್ರಷ್ಟಾಚಾರ ನಿಗ್ರಹ ದಳ ಮತ್ತು ಲೋಕಾಯುಕ್ತ ಸಂಸ್ಥೆಗಳ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದ ಅವರು ಯಶಸ್ವಿನಿ ಯೋಜನೆ, ಕೇಂದ್ರ ಸರ್ಕಾರದ ಆರೋಗ್ಯಶ್ರೀ ಯೋಜನೆಯೊಂದಿಗೆ ಮಿಳಿತಗೊಳಿಸಿ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ ಎಂದರು.
  *************
  ಡಿ ಪಿ ಎಂ

  • Comments Off on ವೈಜ್ಞಾನಿಕ ಮಾನದಂಡಗಳೊಂದಿಗೆ ರೈತರ ಸಾಲ ಮನ್ನಾ:ಕುಮಾರಸ್ವಾಮಿ
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.