07:26 pm Tuesday, June 25, 2019
 • ದೇವರಾಜು ಅರಸು ವ್ಯಕ್ತಿತ್ವ ಮಾಲಿಕೆಯಲ್ಲಿ

  By admin - Wed Jun 06, 10:58 pm

  • Comments Off on ದೇವರಾಜು ಅರಸು ವ್ಯಕ್ತಿತ್ವ ಮಾಲಿಕೆಯಲ್ಲಿ
  • 0 views

  ದೇವರಾಜು ಅರಸು ವ್ಯಕ್ತಿತ್ವ ಮಾಲಿಕೆಯಲ್ಲಿ

  ಲೋಹಿಯಾವಾದಿ ಡಿ.ಎಸ್.ನಾಗಭೂಷಣ ಅವರ ಒಳ ನೋಟ…

  – 60ರ ದಶಕದ ಕೊನೆ ಮತ್ತು 70ರ ದಶಕದ ಆರಂಭದ ಕಾಲ, ಹೊಸ ತಲೆಮಾರು ತಲೆ ಎತ್ತಿದ್ದ ಕಾಲವದು. ಅಖಿಲ ಭಾರತ ಮಟ್ಟದಲ್ಲಿ ರಾಜಕಾರಣದಲ್ಲಿ ಪಲ್ಲಟಗಳು ನಡೆದಿದ್ದ ದಿನಗಳವು. ಕಾಲೆಳೆಯುವ ರಾಜಕಾರಣ ನಡೆಯುತ್ತಿದ್ದ ಸಂದರ್ಭದಲ್ಲಿ ಅಖಿಲ ಭಾರತ ಕಾಂಗ್ರೆಸ್, ಬೆಂಗಳೂರಿನ ಲಾಲ್ಬಾಗ್ನಲ್ಲಿರುವ ಗಾಜಿನ ಮನೆಯಲ್ಲಿ ವಿಭಜನೆ ಆಯಿತು. ಸುಮಾರು 25 ವರ್ಷಗಳ ಕಾಲ ಇಡೀ ರಾಷ್ಟ್ರದಲ್ಲಿ ಸತತವಾಗಿ ಆಳ್ವಿಕೆ ನಡೆಸಿದ್ದ ಕಾಂಗ್ರೆಸ್ ದೇಶಾದ್ಯಂತ ಅಲುಗಾಡಿತ್ತು. ಕೆಲ ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನ ಕಳೆದುಕೊಂಡಿತ್ತು. ಕಾಂಗ್ರೆಸ್ನ ಅನಭಿಷಕ್ತ ದೊರೆ ರೀತಿಯಲ್ಲಿ ವರ್ತಿಸಿ, ಅದರಲ್ಲಿ ಯಶಸ್ವಿಯೂ ಆಗಿದ್ದ ಇಂದಿರಾಗಾಂಧಿ ಅವರ ಹಿಡಿತದಿಂದ ಕಾಂಗ್ರೆಸ್ ಕೈ ಜಾರಿತ್ತು. ನಿಜಲಿಂಗಪ್ಪ, ಮೊರಾರ್ಜಿ ದೇಸಾಯಿ ಸೇರಿ ಇನ್ನೂ ಹಲವರು ಕಾಂಗ್ರೆಸ್ನ್ನ ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಯತ್ನಿಸುತ್ತಿದ್ದರು. ಹೀಗೆಂದು ಭಾವಿಸಿದ್ದು ಇಂದಿರಾಗಾಂಧಿ. ಅದೇ ಸಂದರ್ಭದಲ್ಲಿ ಕಾಂಗ್ರೆಸ್ನಲ್ಲಿ ಯಂಗ್ ಟರ್ಕ್ಗಳ ಪ್ರವೇಶ ಆಯಿತು. ಕಾಂಗ್ರೆಸ್ನ್ನ ಕಾಂಗ್ರೆಸ್ ಒಳಗಡೇ ಜನಪರ ಮಾಡಲಿಕ್ಕೆ ಯಂಗ್ ಟರ್ಕ್ಗಳ ಪ್ರವೇಶ ಬೇಕಾಗಿತ್ತು.
  – ಆಗ ಕಾಂಗ್ರೆಸ್ ಒಳಗಡೇ ಇಂದಿರಾ ಮತ್ತೊಂದು ಆಂದೋಲನ ಶುರು ಮಾಡಿದರು. ಅದರ ಪರಿಣಾಮ 1969ರಲ್ಲಿ ಕಾಂಗ್ರೆಸ್ ವಿಭಜನೆ ಆಯಿತು. ಹೀಗೆ ಕಾಂಗ್ರೆಸ್ ವಿಭಜನೆ ಆಗುತ್ತಿದ್ದಂತೆ ದೇವರಾಜು ಅರಸು, ಕರ್ನಾಟಕದದಲ್ಲಿ ಪ್ರಥಮ ಬಾರಿಗೆ ಮುಂಚೂಣಿಗೆ ಬಂದರು. 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆ ನಡೆಯುವ ಹೊತ್ತಿಗಾಗಲೇ ದೇವರಾಜು ಅರಸು ಅವರು ಶಾಸನ ಸಭೆ ಪ್ರವೇಶಿಸಿದ್ದರು. 2 ಬಾರಿ ಮಂತ್ರಿ ಪದವಿ ಅಲಂಕರಿಸಿದ್ದರು. ಆದರೂ ದೇವರಾಜು ಅರಸು ರಾಜಕಾರಣದ ಹಿನ್ನೆಲೆಯಲ್ಲೇ ಇದ್ದರು. ಹೀಗಾಗಿ ಜನಪ್ರಿಯ ನಾಯಕರಾಗಲು ಅವಕಾಶ ಸಿಕ್ಕಿರಲಿಲ್ಲ.
  – ದೇವರಾಜು ಅರಸು ಎಂದೂ ವೃತ್ತಿ ರಾಜಕಾರಣಿ ಆಗಿರಲಿಲ್ಲ. ಆ ರೀತಿ ನಡೆದುಕೊಳ್ಳಲೂ ಇಲ್ಲ. ಇಂದಿರಾ ನೇತೃತ್ವದಲ್ಲಿ ಕಾಂಗ್ರೆಸ್ ವಿಭಜಿತವಾಗಿ ಕಾಂಗ್ರೆಸ್ ಐ , ಅಂದರೆ ಇಂಡಿಕೇಟ್ ಅಥವಾ ಇಂದಿರಾ ಗುಂಪು ಹೊರ ಹೊಮ್ಮಿತು. ಈ ಗುಂಪು, ಬ್ಯಾಂಕ್ ರಾಷ್ಟ್ರೀಕರಣ, ರಾಜಧನ ರದ್ಧತಿ ಸೇರಿ ಎಡಪಂಥೀಯ ಧೋರಣೆಯುಳ್ಳ ಈ ಗುಂಪಿಗೆ ಕರ್ನಾಟಕದಲ್ಲಿ ಸಂಚಾಲಕರಾಗಿ ಆಯ್ಕೆಯಾಗಿದ್ದು ದೇವರಾಜು ಅರಸು ಎಂಬುದು ಇಲ್ಲಿ ಗಮನಾರ್ಹ.
  – ದೇವರಾಜು ಅರಸು ಸಂಚಾಲಕತ್ವದ ಇಂದಿರಾ ಗುಂಪು, ಕರ್ನಾಟಕದಲ್ಲಿ ನಿಜಲಿಂಗಪ್ಪ ಅವರ ಗುಂಪಿಗೆ ಸವಾಲು ಹಾಕಿದ್ದರು.ಇದೇ ಸಂದರ್ಭದಲ್ಲಿ ವೀರೇಂದ್ರ ಪಾಟೀಲ್ ಪರವಾಗಿ ಇದ್ದಿದ್ದು ಬುದ್ಧಿಜೀವಿಗಳು, ಲೇಖಕರು, ಮಧ್ಯಮ ವರ್ಗದವರು. ವೀರೇಂದ್ರ ಪಾಟೀಲರಂತೂ ಮಧ್ಯಮ ವರ್ಗದವರ ಆರಾಧ್ಯ ದೈವವಾಗಿದ್ದರು.
  – ಇಂಥ ವೀರೇಂದ್ರ ಪಾಟೀಲರಿಗೆ ಸವಾಲು ಹಾಕಿದ್ದು ದೇವರಾಜು ಅರಸು. ಅರಸು ಅವರ ರಾಜಕೀಯದ ಏರುಗಾಲದ ಹಾದಿಯಲ್ಲಿ ಕರ್ನಾಟಕದ ಬುದ್ಧಿಜೀವಿಗಳು, ಚಿಂತಕರು ಅರಸು ಪರವಾಗಿರಲಿಲ್ಲ. ಇದೇ ಅರಸು ಮುಖ್ಯಮಂತ್ರಿ ಆದ ನಂತರ ಅವರು ಕೊಟ್ಟ ಅನೇಕ ಕಾರ್ಯಕ್ರಮಗಳಿಂದಾಗಿ ಅರಸು ವ್ಯಕ್ತಿತ್ವ ಅನಾವರಣಗೊಂಡಿತು. ಆಗ ಬುದ್ಧಿಜೀವಿಗಳು, ಲೇಖಕರು ಅರಸು ಪರವಾಗಿ ನಿಂತರು.
  – ಇಂದಿರಾಗಾಂಧಿ ಬಗ್ಗೆ ಬುದ್ಧಿಜೀವಿಗಳು, ಲೇಖಕರು ಪ್ರತಿಕೂಲ ಆಗಿದ್ದರೂ ಅರಸು ಬಗ್ಗೆ ಸ್ವಲ್ಪ ಮೆದುವಾಗಿದ್ದರು. ಅರಸು ಬೇರೆ ಮುಖ್ಯಮಂತ್ರಿಗಳ ಥರ ಸಾಂಪ್ರದಾಯಿಕ ಮುಖ್ಯಮಂತ್ರಿಗಳಾಗಿರಲಿಲ್ಲ. ಅವರ ಮುಖ್ಯಮಂತ್ರಿ ಅವಧಿಯಲ್ಲಿ ಸಮಾಜವಾದಿ ಪಕ್ಷ ವಿರೋಧ ಪಕ್ಷವಾಗಿದ್ದರೂ ಕಾಂಗ್ರೆಸ್ ಪಕ್ಷವನ್ನೇ ಸಮಾಜವಾದಿಯನ್ನಾಗಿ ಮಾಡಲು ಅರಸು ಪ್ರಯತ್ನಿಸಿದ್ದು ಈಗ ರಾಜಕೀಯ ಇತಿಹಾಸ.
  – ಭೂ ಸುಧಾರಣೆ, ಹಾವನೂರು ಆಯೋಗ ರಚನೆ, ರಾಜಕೀಯದಲ್ಲಿ ಬಹುದೊಡ್ಡ ತಳಮಳ ಸೃಷ್ಟಿಯಾಗಲಿಕ್ಕೆ ಕಾರಣವಾಗಿತ್ತು. ಅನಾಮಿಕರಾಗಿ ಉಳಿದಿದ್ದ ಹಿಂದುಳಿದ ವರ್ಗದ ಪ್ರತಿಭೆಗಳು ರಾಜಕೀಯದಲ್ಲಿ ಸ್ಥಾನ ಸಿಕ್ಕಿದ್ದೇ ಹಾವನೂರು ಆಯೋಗದ ಶಿಫಾರಸ್ಸಿನಿಂದ ಎಂಬುದನ್ನು ಇಲ್ಲಿ ಮುಖ್ಯವಾಗಿ ಗಮನಿಸಬೇಕು. ಒಕ್ಕಲಿಗ, ಲಿಂಗಾಯತ ಸಮುದಾಯದವರೇ ರಾಜಕಾರಣವನ್ನ ನಿರ್ಧರಿಸುತ್ತಿದ್ದ ಕಾಲಘಟ್ಟದಲ್ಲಿ ಹಿಂದುಳಿದ ವರ್ಗಗಳ ಪ್ರತಿನಿಧಿಗಳನ್ನ ಯಾರೂ ಕೇಳುತ್ತಿರಲಿಲ್ಲ. ಇಂತಹ ಅವಧಿಯಲ್ಲಿ ಅರಸು ಸಮತೋಲನ ಕಾಯ್ದುಕೊಂಡು ಪರಿವರ್ತನಾ ಶೀಲ ರಾಜಕಾರಣಕ್ಕೆ ಚಾಲನೆ ನೀಡಿದರು. ಅನುಷ್ಠಾನದ ಸಂದಧರ್ಭದಲ್ಲಿ ಮೇಲ್ಜಾತಿಗಳನ್ನ ಕಡೆಗಣಿಸಲಿಲ್ಲ. ಹೀಗಾಗಿ ಅರಸು, ಒಬ್ಬ ಹದಗೊಂಡ ರಾಜಕಾರಣಿ.
  – ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲು ಹಿಂದೇಟು ಹಾಕುತ್ತಿದ್ದ ದಿನದಲ್ಲೂ ಕರ್ನಾಟಕ ಎಂದು ನಾಮಕರಣ ಮಾಡುವ ಮೂಲಕ ಹಳೇ ಮೈಸೂರು ಭಾಗವನ್ನ ಎದುರು ಹಾಕಿಕೊಂಡರು. ಅರಸು ನಿಧಾನವಾಗಿ ತಮ್ಮ ಕಾರ್ಯಕ್ರಮ, ನಡೆನುಡಿ ಮೂಲಕ ಜನಪ್ರಿಯರಾದರು. ತಾವೊಬ್ಬ ಹೊಸ ರೀತಿಯ ಮುಖ್ಯಮಂತ್ರಿ ಎಂದು ತೋರಿಸಿಕೊಟ್ಟರು.
  – ಇಂದಿರಾ ಅವರ ಬೆನ್ನಿಗೆ ನಿಂತಿದ್ದ ಅರಸು, ನಂತರದ ಅವಧಿಯಲ್ಲಿ ಅದೇ ಇಂದಿರಾ ಅವರ ಕಾಕದೃಷ್ಟಿಗೆ ಒಳಗಾಗಿದ್ದು ಮಾತ್ರ ರಾಜಕೀಯ ವಿಪರ್ಯಾಸ. ಅರಸು ಆಡಳಿತದ ಬಗ್ಗೆ ಖುದ್ದು ಇಂದಿರಾ ಅವರಿಗೇ ಒಂದಷ್ಟು ಪೂರ್ವಾಗ್ರಹ, ಅನುಮಾನಗಳಿದ್ದವು. ಅರಸು ಅವರು ಕರ್ನಾಟಕದ ಅತ್ಯುತ್ತಮ ಮುಖ್ಯಮಂತ್ರಿ ಆಗಿದ್ದರಾ ಎಂದು ಅಂದ್ರೆ, ಸಂಪೂರ್ಣವಾಗಿ ಹೌದು ಎಂದು ಹೇಳುವುದು ಕಷ್ಟ ಆಗುತ್ತೆ.
  – ಸಿ.ಎಂ. ಆಗಿ ವಿಕಾಸವಾಗಿದ್ದ ಅರಸು, ರಾಜ್ಯ ರಾಜಕಾರಣ ಬದಲಿಸುವಾಗ ಅನೇಕ ಸಂಕೀರ್ಣಗಳನ್ನ ಎದುರಿಸಿದ್ದರು. ಹಿಂದುಳಿದ ವರ್ಗದವರನ್ನ ಗುರುತಿಸಿ, ನಾಯಕತ್ವ ಕಟ್ಟಿಕೊಟ್ಟರು. ನಾಯಕತ್ವ ಗುರುತಿಸಿದ್ದು ಹೌದು, ಆದರೆ ಕಟ್ಟಿದ್ದರು ಎಂದರೆ ಅನುಮಾನ. ಯಾಕಂದರೇ, ಹಿಂದುಳಿದ ನಾಯಕರಿಗೆ ರಾಜಕೀಯ ತರಬೇತಿ, ಶಿಕ್ಷಣ ಸಿಗಲೇ ಇಲ್ಲ. ಇವರೆಲ್ಲ ರಾಜಕಾರಣಕ್ಕೆ ಯಾತಕ್ಕಾಗಿ ಬಂದಿದ್ದೇವೆ ಎಂಬುದರ ಬಗ್ಗೆಯೂ ಅರಿವಂತೂ ಇರಲೇ ಇಲ್ಲ. ಆದರೂ ಅರಸು ಅವರು ಇಂಥವರನ್ನ ಇಟ್ಟುಕೊಂಡು ಬಹಳ ಸುಲಭವಾಗಿ ಹಿಂದುಳಿದ ರಾಜಕಾರಣ ಮಾಡಿದರು.
  – ಅರಸು ತಮ್ಮ ರಾಜಕೀಯ ಉಳಿವಿಗಾಗಿ ಹಿಂದುಳಿದ ವರ್ಗದ ನಾಯಕರನ್ನ ಸಾಕಬೇಕಾಗಿತ್ತು. ಹೀಗಾಗಿ ಅರಸು ಭ್ರಷ್ಟರಾಗಬೇಕಾಯಿತು. ಅರಸು ಕಾಲದಲ್ಲಿ ಭ್ರಷ್ಟಾಚಾರ ಅನ್ನುವುದು ಸಂಸ್ಥೀಕರಣ ಆಯಿತು. ಇಂಥ ಕೆಲಸಕ್ಕೆ ಇಂತಿಷ್ಟು ರೇಟು ಎಂದು ನಿಗದಿನೂ ಆಗಿತ್ತು. ಇದರ ಬೆನ್ನ ಹಿಂದೆನೇ ಬಂದಿದ್ದು ರೌಡಿ ರಾಜಕಾರಣ.
  – ವೀರೇಂದ್ರ ಪಾಟೀಲ್ರಿಗೆ ಸವಾಲು ಹಾಕಿದ್ದ ಸಂದರ್ಭವದು. ಜಪಾನ್ನಲ್ಲಿ ನಡೆಯುತ್ತಿದ್ದ ಏಷಿಯಾಡ್ಗೆ ಕಳಿಸುವ ಸಂದರ್ಭದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಸರಿ ಇರಲಿಲ್ಲ. ಆ ಸಂದರ್ಭದಲ್ಲಿ ಹುಟ್ಟಿಕೊಂಡಿದ್ದು ವಿದ್ಯಾರ್ಥಿ ಚಳವಳಿ. ಗಂಗರಾಜು, ರಘುಪತಿ ಥರದವರು ರಾಜಕೀಯ ನಾಯಕರಾದರು. ಅರಸು ಅಳಿಯ ಎಂ.ಡಿ.ನಟರಾಜು ದಾಂಧಲೆ ಎಬ್ಬಿಸಿ ರೌಡಿ ರಾಜಕಾರಣಕ್ಕೆ ಸಾಕ್ಷಿಯಾದರು. ಕೆ.ಕೆ.ಮೂರ್ತಿ ಎಂಬುವರು ಅರಸು ಅವರಿಗೆ ಮಧ್ಯವರ್ತಿಗಳಾದರು.
  – ಅರಸು ಪ್ರಗತಿಶೀಲ ನಾಯಕ ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ. ಆದರೆ ಪ್ರಗತಿಶೀಲ ನಾಯಕರಾಗುವುದಕ್ಕೆ ಬಳಸಿಕೊಂಡ ಮಾರ್ಗಗಳು ಇವೆಯಲ್ಲ, ಅವು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿತ್ತು.
  – ಅರಸರದ್ದು ವಿರೋಧಾಭಾಸ ರಾಜಕಾರಣ. ಇಂದಿರಾ ಗಾಂಧಿಯಿಂದ ಬೇರ್ಪಟ್ಟ ನಂತರ ಅವರು ಸಾಕಿದ್ದ ಜನರೇ ಅವರ ಕೈ ಹಿಡಿಲಿಲ್ಲ. ಇಂದಿರಾ ಹೆಸರಿನಲ್ಲಿ ಕಾರ್ಯಕ್ರಮ ಮಾಡುವುದು ಸರಿಯಲ್ಲ ಎಂದು ಅರಸು ಬೆಂಬಲಿಗರೇ ಹೇಳಿ ಎಚ್ಚರಿಸಿದ್ದರು. ಇದೆಲ್ಲ ಏನೇ ಇರಲಿ, ಇಂದಿರಾ ಗಾಂಧಿಗೆ ರಾಜಕೀಯವಾಗಿ ಪುನರ್ ಜನ್ಮ ಸಿಕ್ಕಿದ್ದೇ ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆಯಲ್ಲಿ.
  – ಆಗ ಇಂದಿರಾಗೆ ಸ್ಪರ್ಧೆಯೊಡ್ಡಿದ್ದೇ ಜನತಾ ಪಾರ್ಟಿಯಿಂದ ಸ್ಪರ್ಧಿಸಿದ್ದ ವೀರೇಂದ್ರ ಪಾಟೀಲ್‌. ಈ ಸ್ಪರ್ಧೆಯಲ್ಲಿ ಇಂದಿರಾಗೆ ಗೆಲವು ಸಿಕ್ಕಿದ್ದು ಕೂಡ ರಾಜಕೀಯವಾಗಿ ಐತಿಹಾಸಿಕ ಘಟನೆಗೆ ಸಾಕ್ಷಿಯಾಯಿತು.
  – ದೇವರಾಜು ಅರಸು ತುಂಬಾ ಎತ್ತರಕ್ಕೆ ಬೆಳೆಯುತ್ತಿದ್ದಂತೆ, ಅರಸು ಅವರನ್ನ ಹೀಗೆಯೇ ಬಿಟ್ಟರೆ ರಾಷ್ಟ್ರೀಯ ನಾಯಕರಾಗುತ್ತಾರೆ. ಹೀಗೆ ಇಂದಿರಾ ಇಂಥದ್ದೊಂದು ಅನುಮಾನ ಬರುತ್ತಿದ್ದಂತೆ, ಅರಸು ನಿಯಂತ್ರಣಕ್ಕೆ ಯತ್ನಿಸಿದರು.
  – ಈ ಹೊತ್ತಿಗಾಗಲೇ ಇಂದಿರಾ ಅವರ ಪುತ್ರ ಸಂಜಯಗಾಂಧಿ ಅವರು ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದಿದ್ದರು. ಸಂಜಯಗಾಂಧಿ ಅವರ ಕುಮ್ಮಕ್ಕಿನ ರಾಜಕಾರಣ, ಅರಸು ಅವರಿಗೆ ಸವಾಲಾಗಿ ಪರಿಣಿಮಿಸಿತ್ತು. ಸಂಜಯಗಾಂಧಿ ಕುಮ್ಮಕ್ಕಿನ ರಾಜಕಾರಣದ ಗುಂಪಿಗೆ ನಾಯಕನಾಗಿದ್ದು ಗುಂಡೂರಾಯರು. ದೊಡ್ಡ ನಾಯಕನಾಗಿ ಬೆಳೆಯಲು ಯತ್ನಿಸಿದ ಗುಂಡೂರಾಯರು ಮತ್ತು ಅವರ ಸಹವರ್ತಿಗಳ ಪುಂಡಾಟಿಕೆ ರಾಜಕಾರಣಕ್ಕೆ ರಾಜಕಾರಣಿಗಳು ಮಾನ್ಯತೆ ನೀಡಿದರು.
  – ಹೀಗಾಗಿ ಅರಸು ನಿಧಾನವಾಗಿ ಇಂದಿರಾ ಅವರಿಂದ ದೂರವಾದರು. ಗುಂಡೂರಾಯರೇ ಅರಸರಿಗೆ ಪ್ರತಿಸ್ಪರ್ಧಿ ನಾಯಕನಾಗಿ ಹೊರ ಹೊಮ್ಮಲು ಯತ್ನಿಸಿದ್ದರು. ಹೀಗಾಗಿ ಕಾಂಗ್ರೆಸ್ ಮತ್ತೊಮ್ಮೆ ವಿಭಜನೆ ಆಯಿತು. ಹಿಂದುಳಿದ ನಾಯಕರೆಲ್ಲ ಅರಸು ಅವರಿಗೆ ಕೈ ಕೊಟ್ಟರು. ಆಗ ಅವರ ಕೈ ಹಿಡಿದಿದ್ದು ಹಳೇ ತಲೆಮಾರಿನ ಕಾಂಗ್ರೆಸ್ಸಿಗರು. ಇದೇ ಹಳೇ ತಲೆಮಾರಿನ ಕಾಂಗ್ರೆಸ್ಸಿಗರನ್ನ ಅರಸು, ದೂರ ಇಟ್ಟಿದ್ದರು ಎಂಬುದನ್ನ ಇಲ್ಲಿ ಮರೆಯಬಾರದು.
  – ಇಂದಿರಾ ಕಾಂಗ್ರೆಸ್ ಬಿಡುವ ಹೊತ್ತಿಗೆ ಅರಸರ ಬಳಿ ಬಿಡಿಗಾಸು ಇರಲಿಲ್ಲ. ದಟ್ಟ ದಾರಿದ್ರ್ಯದ ಸ್ಥಿತಿಯಲ್ಲಿದ್ದರು ಅರಸು. ಅರಸು ರಾಜಕಾರಣ ಏನನ್ನ ಹೇಳುತ್ತೆ ಅಂದರೆ, ತಾತ್ವಿಕವಾಗಿ ರಾಜಕಾರಣವನ್ನ ಕಟ್ಟಿಕೊಳ್ಳದೇ ಜನಪ್ರಿಯ ರಾಜಕಾರಣ ದೀರ್ಘ ಕಾಲದವರೆಗೆ ಉಳಿಯುವುದಿಲ್ಲ ಎಂದು.
  – ಅರಸರ ರಾಜಕಾರಣದಲ್ಲಿ ಪ್ರಗತಿಪರತೆಯ ಹಲವರು ಫಲ ಅನುಭವಿಸಿದ್ದರೇ, ಇದರಿಂದ ಅಸಮಾಧಾನಗೊಂಡಿದ್ದವರು ಅನೇಕರಿದ್ದರು. ನಷ್ಟಕ್ಕೆ ಒಳಗಾದವರೆಲ್ಲರೂ ಅರಸರ ಪದಚ್ಯುತಿಗೆ ಕಾಯುತ್ತ ಕುಳಿತಿದ್ದರು. ಅರಸು ಅವರ ಪ್ರಗತಿಶೀಲ ರಾಜಕಾರಣ ನೋಡಿಯೇ ಅಂದು ಪ್ರತಿಪಕ್ಷ ನಾಯಕರಾಗಿದ್ದ ದೇವೇಗೌಡರು, ಅಕ್ಷರಶಃ ಗಾಬರಿಗೊಂಡಿದ್ದರು. ಅರಸರ ಕಾರ್ಯಕ್ರಮಗಳ ವಿರುದ್ಧ ಅಪಪ್ರಚಾರ ಮಾಡಲು ಸಾಧ್ಯವಾಗದಿದ್ದಾಗ ಭ್ರಷ್ಟಾಚಾರದ ಆರೋಪಗಳ ಮೂಲಕ ಪದಚ್ಯುತಿಗೆ ಯತ್ನಿಸಿದರು. ಇದಕ್ಕೆಲ್ಲ ಸಂಜಯಗಾಂಧಿ ಕುಮ್ಮಕ್ಕು ಇತ್ತು. ಇದು ವ್ಯಕ್ತವಾಗಿದ್ದು ಗುಂಡೂರಾಯರ ಮೂಲಕ.
  – ಅರಸರು ಆಗಾಗ್ಗೆ ದೆಹಲಿಗೆ ಬರುತ್ತಿದ್ದರು. ಆ ಸಂದರ್ಭದಲ್ಲಿ ನನ್ನ ನೆನಪಿನಲ್ಲಿ ಉಳಿದಿದ್ದು ಈ ಘಟನೆ. ದೆಹಲಿ ಕರ್ನಾಟಕ ಭವನದಲ್ಲಿ ಗುಂಡೂರಾಯರು ಕಾಲು ಚಾಚಿ ಮಲಗಿದ್ದರು. ಅರಸರ ವಿರುದ್ಧ ಗುಂಡೂರಾಯರ ಬಂಡಾಯ ಉತ್ತುಂಗಕ್ಕೇರಿತ್ತು. ಅರಸರ ಮುಖ ಬಾಡಿತ್ತು…ದುಃಖ ಆವರಿಸಿತ್ತು. ಕರ್ನಾಟಕ ಭವನದ ಮೊಗಸಾಲೆಯಲ್ಲಿ ಬಂದ ಅರಸು ಅವರು, ಕಾಲು ಚಾಚಿ ಮಲಗಿದ್ದ ಗುಂಡೂರಾಯರನ್ನ ನೋಡಿದರು. ಆಗಿನ್ನೂ ಮುಖ್ಯಮಂತ್ರಿಯೇ ಆಗಿದ್ದ ದೇವರಾಜು ಅರಸು ತಮ್ಮ ಬಳಿ ಬಂದು ನಿಂತಿದ್ದರೂ ಗುಂಡೂರಾಯರು ಮಾತ್ರ ಚಾಚಿದ್ದ ಕಾಲನ್ನ ಮಡಚಲೇ ಇಲ್ಲ. ದೊಡ್ಡ ನಾಯಕನನ್ನ ಪುಟ್ಟ ನಾಯಕ ಗೌರವಿಸುವ ಪರಿಸ್ಥಿತಿ ಅಲ್ಲಿರಲಿಲ್ಲ. ಇದು ನಿಜಕ್ಕೂ ಕೀಳು ಮಟ್ಟದ ರಾಜಕಾರಣ.
  – ಅರಸು ಒಂದು ರೀತಿಯ ದೊಡ್ಡ ರಾಜಕಾರಣ ಮಾಡಿದವರು. ಅದನ್ನ ಯಾರೂ ಸಹಿಸಿಕೊಳ್ಳುತ್ತಿರಲಿಲ್ಲ.

  • Comments Off on ದೇವರಾಜು ಅರಸು ವ್ಯಕ್ತಿತ್ವ ಮಾಲಿಕೆಯಲ್ಲಿ
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.