03:23 am Friday, June 21, 2019
 • ಮಾಜಿ ಪ್ರಧಾನಿ ಸನ್ಯಾನ್ಯ ಹೆಚ್ ಡಿ ದೇವೇಗೌಡ್ರು ಅವರ ಮನದಾಳದ ಮಾತು…..

  By admin - Sun Jun 03, 6:18 am

  • Comments Off on ಮಾಜಿ ಪ್ರಧಾನಿ ಸನ್ಯಾನ್ಯ ಹೆಚ್ ಡಿ ದೇವೇಗೌಡ್ರು ಅವರ ಮನದಾಳದ ಮಾತು…..
  • 0 views

  ಪ್ರಧಾನಿ ಹುದ್ದೆ ರಾಜಕೀಯದ ಉರುಳಾಗಿತ್ತು. ಮಾಜಿ ಪ್ರಧಾನಿ ಸನ್ಯಾನ್ಯ ಹೆಚ್ ಡಿ ದೇವೇಗೌಡ್ರು ಅವರ ಮನದಾಳದ ಮಾತು…..

  -ಪ್ರಧಾನಿಯಾಗಿ 20 ವರ್ಷ –

  ದೇವೇಗೌಡ್ರು ಸಂದರ್ಶನ:

  ವೈ ಗ ಜಗದೀಶ –

  ಪ್ರಧಾನಿಯಾದಾಗ ನನ್ನ ಪಕ್ಷ ದವರೇ ಸೌಜನ್ಯಕ್ಕಾದರೂ ಚಹಾಕೂಟ ನೀಡಲಿಲ್ಲ, ಇದು ಕರ್ನಾಟಕದ ರಾಜಕೀಯ ಸಂಸ್ಕೃತಿ!? ‘ಮದ್ರಾಸಿ’ಗಳೆಂದು ಉತ್ತರದ ಮಂದಿ ಹೀಗಳೆಯುವ ಕಾಲ ಇನ್ನೂ ಜೀವಂತವಾಗಿ ಇರುವಾಗ ದಕ್ಷಿಣ ಭಾರತದ, ಅದರಲ್ಲೂ ಕನ್ನಡಿಗರೊಬ್ಬರು ದೇಶದ ಅತ್ಯುತ್ಕೃಷ್ಟ ಹುದ್ದೆಯಾದ ಪ್ರಧಾನಿ ಪದವಿ ಅಲಂಕರಿಸಿ ಇಂದಿಗೆ ಸರಿಯಾಗಿ ಎರಡು ದಶಕ. 1996ರ ಜೂ.1ರಂದು ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ ಅವರು ಪ್ರಧಾನಿ ಪಟ್ಟಕ್ಕೇರಿದ್ದರು. ಇಂಥ ಅಯಾಚಿತ ಅದೃಷ್ಟವೊಂದು ಕನ್ನಡಿಗರಿಗೆ ಒದಗಿ ಬಂದಿತ್ತು. ಅಪ್ಪಟ ರೈತನ ಮಗ, ಪಂಚೆವಾಲಾ, ಮುದ್ದೆ ಉಪ್ಸಾರು ತಿಂದು ಬೆಳೆದ, 84ರ ಏರುವಯಸ್ಸಿನಲ್ಲಿಯೂ ರಾಜಕೀಯ ರಂಗದಲ್ಲಿ ತಮ್ಮದೊಂದು ದಾಳವನ್ನು ಉರುಳಿಸಿ ಎದುರಾಳಿಯನ್ನು ಮಣಿಸುವ ಶಕ್ತಿ ಹೊಂದಿರುವ ಗೌಡರು ಪ್ರಧಾನಿಯಾಗಿ 20 ವರ್ಷ ಕಳೆದಿದೆ. ತಮ್ಮದೇ ಶೈಲಿಯಲ್ಲಿ ಅಂದಿನ ಅನುಭವ, ಕಾಲಮಾನದ ಇತಿಹಾಸ, ಘಟನಾವಳಿಗಳನ್ನು ಗೌಡರು ಮೆಲುಕು ಹಾಕಿದ್ದಾರೆ. –
  20 ವರ್ಷದ ಹಿಂದೆ ಪ್ರಧಾನಿ ಹುದ್ದೆ ಅಲಂಕರಿಸಿದ್ದೀರಿ, ಈಗ ಏನನ್ನಿಸುತ್ತೆ? ಎಚ್‌ಡಿಡಿ: 20 ವರ್ಷದ ಕತೆ ಬಿಡಿ. ನಾನು 365 ದಿನ ಕೂಡ ಪ್ರಧಾನಿಯಾಗಿರಲಿಲ್ಲ. ಕೇವಲ 325 ದಿನದ ಪ್ರಧಾನಿ ಅಷ್ಟೆ. ಇದ್ದಷ್ಟು ದಿನ ನನ್ನ ಸಾಮರ್ಥ್ಯ‌ ಮೀರಿ ಏನು ಕೆಲಸ ಮಾಡಿದ್ದೇನೆ ಎಂದು ಈ ದೇಶ, ಈ ರಾಜ್ಯದ ಜನ ಗುರುತಿಸಿಲ್ಲ. ಪ್ರಧಾನಿಯಾದಾಕ್ಷ ಣ ಈತನಿಗೆ ದೇಶದ ಭೂಪಟ, ರಾಜ್ಯಗಳ ಸಂಸ್ಕೃತಿ, ಭಾಷೆ ಏನೂ ಗೊತ್ತಿಲ್ಲ. ನೆಹರು ಅಂಥವರು ಕುಳಿತುಕೊಂಡ ಜಾಗದಲ್ಲಿ ಈತ ಹೇಗೆ ಕುಳಿತು ದೇಶ ನಿಭಾಯಿಸುತ್ತಾನೆ ಎಂದು ಅತ್ಯಂತ ಕೀಳು ಮಟ್ಟದ, ಲಘುವಾದ ಭಾವನೆಗಳನ್ನು ದೇಶಾದ್ಯಂತ ತುಂಬಿತ್ತು. ಇದನ್ನು ಹೆಗಡೆ ಪ್ರಚಾರ ಮಾಡಿದರು ಎಂಬ ಟೀಕೆ ಬಿಟ್ಟುಬಿಡಿ. ಇಡೀ ಹಿಂದೂಸ್ತಾನದಲ್ಲಿ ಮಾತ್ರವಲ್ಲದೇ ಹೊರದೇಶಗಳಲ್ಲಿ, ಪ್ರಪಂಚ ವ್ಯಾಪಿ ಇಂಥ ಭಾವನೆ ಇತ್ತು. ಹೇಗೆ ಆಡಳಿತ ನಡೆಸುತ್ತಾನೆ ಎಂದು ವ್ಯಂಗ್ಯದ ಮಾತುಗಳನ್ನು ಆಡುತ್ತಿದ್ದರು. –

  ಪ್ರಧಾನಿ ಹುದ್ದೆ ನೀವು ಬಯಸದೇ ಬಂದ ಭಾಗ್ಯವೇ? ಎಚ್‌ಡಿಡಿ: ಪ್ರಧಾನಿಯಾಗುವೆ ಎಂದು ಕನಸು ಮನಸಿನಲ್ಲೂ ನಾನು ಯೋಚನೆ, ಯೋಜನೆ ಮಾಡಿದವನಲ್ಲ. ನಾನು ದೇವರಲ್ಲಿ ಅಪಾರ ನಂಬಿಕೆ ಇಟ್ಟುಕೊಂಡವನು. 13 ಪಕ್ಷ ಗಳ ಯುನೈಟೆಡ್‌ ಫ್ರಂಟ್‌ನ ನಾಯಕರು ಅದನ್ನು ನನ್ನ ಕುತ್ತಿಗೆಗೆ ಕಟ್ಟಿದರು. ಅದೇ ನನ್ನ ರಾಜಕೀಯಕ್ಕೆ ಉರುಳಾಯಿತು. ಕಾಂಗ್ರೆಸ್‌ನವರು ಯಾರನ್ನೂ ಸುದೀರ್ಘ ಕಾಲ ಅಕಾರ ನಡೆಸುವುದಕ್ಕೆ ಬಿಡುವುದಿಲ್ಲ ಎಂಬುದು ಗೊತ್ತಿತ್ತು. ನನ್ನನ್ನು ಬಿಜೆಪಿ ಪರ ಎಂದಾದರೂ ಅಂದುಕೊಳ್ಳಲಿ, ಏನಾದರೂ ಹೇಳಿಕೊಳ್ಳಲಿ. ಕಾಂಗ್ರೆಸ್‌ ನಾಯಕರು ಅನ್ಯ ಪಕ್ಷ ದ ನಾಯಕರನ್ನು ನಿರುಮ್ಮಳವಾಗಿ ಅಕಾರ ನಡೆಸಲು ಬಿಟ್ಟಿದ್ದೇ ಇಲ್ಲ. ವಿ.ಪಿ.ಸಿಂಗ್‌, ಚಂದ್ರಶೇಖರ್‌ ಅವರನ್ನೇ ಬಿಡಲಿಲ್ಲ. ಚರಣಸಿಂಗ್‌ ಅವರನ್ನು ಒಳಕ್ಕೇ ಬಿಡಲಿಲ್ಲ. ವಾಜಪೇಯಿ ಸರಕಾರ ಹೋದ ಮೇಲೆ 13 ಪಾರ್ಟಿಯವರು ಸೇರಿಕೊಂಡು ಸರಕಾರ ರಚಿಸುವ ಚಿಂತನೆ ಶುರುವಾಯಿತು. ಯಾವುದೇ ಕಾರಣಕ್ಕೂ ನನಗೆ ಪ್ರಧಾನಿ ಹುದ್ದೆ ಬೇಡ ಎಂದು ಕಣ್ಣಲ್ಲಿ ನೀರು ಹಾಕಿ, ಕಾಂಗ್ರೆಸ್‌ನವರ ಸಹವಾಸವೇ ಬೇಡ ಎಂದೆ. ವಿ.ಪಿ.ಸಿಂಗ್‌, ಜ್ಯೋತಿಬಸು ಮೊದಲಾದವರು ಬಿಡಲಿಲ್ಲ. –

  ಅಲ್ಪಕಾಲದ ಅದೃಷ್ಟ ಕೈಕೊಟ್ಟಾಗ? ಎಚ್‌ಡಿಡಿ: ಅತ್ಯಂತ ಕಡುನೋವಿನ ದಿನ ಅದು. ಲೋಕಸಭೆ ವಿಸರ್ಜಿಸಿ ಚುನಾವಣೆಗೆ ಹೋಗೋಣ ಎಂಬುದು ನನ್ನ ತೀರ್ಮಾನ. ಆದರೆ, ದಕ್ಷಿಣದವರು ಪ್ರಧಾನಿಯಾಗಿ ಇಷ್ಟು ಒಳ್ಳೆಯ ಕೆಲಸ ಮಾಡಿದರಲ್ಲ ಎಂಬುದನ್ನು ಸಹಿಸಿಕೊಳ್ಳಲಾಗದ ವಿ.ಪಿ.ಸಿಂಗ್‌ ಇನ್ನೂ 40 ತಿಂಗಳು ಇದೆ, ರಾಜೀನಾಮೆ ಕೊಟ್ಟುಬಿಡಿ ಎಂದರು. ಅವರಿಗೆ ಐ.ಕೆ. ಗುಜ್ರಾಲ್‌ ಅವರನ್ನು ಪ್ರಧಾನಿ ಮಾಡುವುದು ಬೇಕಿತ್ತು. 13 ಪಕ್ಷ ಗಳ ಸರಕಾರ ಮಾಡಿದ ಕೆಲಸವನ್ನು ದೇಶದ ಜನತೆಗೆ ತಿಳಿಸಲು ಅವೇಶನ ಕರೆದು, ಅಲ್ಲಿಯೇ ತೀರ್ಮಾನಿಸುವೆ ಎಂದು ನಿಷ್ಠುರವಾಗಿ ಹೇಳಿದೆ. ಯಾವುದೇ ವೈಫಲ್ಯವಿಲ್ಲದೇ ನನ್ನ ದೇಶಕ್ಕೆ ನನ್ನ ಕೊಡುಗೆಯನ್ನು ನೀಡಲು ಶಕ್ತಿಮೀರಿ ಶ್ರಮಿಸಿದ್ದೇನೆ ಎಂದು ಕೊನೆಯದಾಗಿ ಹೇಳಿದೆ. ಭಾಷಣ ಮುಗಿಸಿದಾಗ 12.05 ನಿಮಿಷ. ಉಮಾಭಾರತಿ ಕಣ್ಣಲ್ಲಿ ನೀರು ತಂದುಕೊಂಡರು. ಕಾಂಗ್ರೆಸ್‌ ದೇಶಕ್ಕೆ ಅಪರಾಧ ಎಸಗಿದೆ ಎಂದು ಅಂದು ಪಿ.ವಿ. ನರಸಿಂಹರಾಯರು ಹೇಳಿದರೆ, ಚಂದ್ರಶೇಖರ್‌ ಅವರು ಶೃಂಗೇರಿ ಶಾರದಾಂಬೆಯೇ ನಿಮ್ಮ ನಾಲಿಗೆ ಮೇಲೆ ನರ್ತಿಸಿದಳು ಎಂದು ಭಾವುಕವಾಗಿ ಹೇಳಿದರು. –

  ಪ್ರಧಾನಿ ಹುದ್ದೆಯಲ್ಲಿ ನಿಮ್ಮ ಅನುಭವ? ಎಚ್‌ಡಿಡಿ: ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ ಸವಾಲಾಗಿ ಸ್ವೀಕರಿಸುವುದು ನನ್ನ ಸ್ವಭಾವ. ಆ ಕೆಲಸ ನನ್ನ ಮುಂದೆ ಬಂದ ದಿನ ಏನು ಮಾಡಬೇಕು ಎಂದು ತೀರ್ಮಾನ ಮಾಡಿದ್ದೇನೋ ಅದನ್ನು ಮಾಡಿದೆ. ಕಾಂಗ್ರೆಸ್‌ ಅನ್ನು ಯಾವುದೇ ಕಾರಣಕ್ಕೂ ನಂಬಬಾರದು. ನಾಳೆಯೇ ನನ್ನನ್ನು ಈ ಹುದ್ದೆಯಿಂದ ಕೆಳಗಿಳಿಸಬಹುದು ಎಂಬುದು ಗೊತ್ತಿತ್ತು. ಹಾಗಾಗಿ ಅಲ್ಲಿಂದ ಪ್ರತಿಕ್ಷ ಣವನ್ನೂ ದೇಶಸೇವೆ, ದೇಶವಾಸಿಗಳ ಹಿತಕ್ಕಾಗಿ ಮುಡಿಪಿಡುವ ಸಂಕಲ್ಪ ಮಾಡಿದೆ. ಪಿ.ವಿ. ನರಸಿಂಹರಾವ್‌ ಅವರು ಐದು ವರ್ಷ ಕಾಂಗ್ರೆಸ್‌ ಯಾವುದೇ ಚರ್ಚೆ ಮಾಡುವುದಿಲ್ಲ, ನಿಮ್ಮನ್ನು ಐದು ವರ್ಷ ತೆಗೆಯುವುದಿಲ್ಲ ಎಂದು ಹೇಳಿದ್ದರು. 1996ರ ಜೂನ್‌ 11ರಂದು ವಿಶ್ವಾಸ ಮತ ಯಾಚಿಸಿದ ಮೇಲೆ ಪ್ರಧಾನಿಯಾಗಿ ಸದನದಲ್ಲಿ ಉತ್ತರ ನೀಡುವುದಿತ್ತು. ಐದು ದಿನ, ಐದು ತಿಂಗಳು, ಐದು ವರ್ಷ ಈ ಹುದ್ದೆಯಲ್ಲಿ ಇರುತ್ತೇನೋ ಗೊತ್ತಿಲ್ಲ. ದೇವರು ನನ್ನನ್ನು ಇಲ್ಲಿಗೆ ತಂದು ಬಿಟ್ಟಿದ್ದಾನೆ. ಈ ಕ್ಷ ಣದಿಂದ ದೇಶದ ಉದ್ಧಾರಕ್ಕೆ ಏನು ಮಾಡಲು ಸಾಧ್ಯವೋ ಅದನ್ನು ಶಕ್ತಿಮೀರಿ ಪ್ರಯತ್ನ ಪಡ್ತೀನಿ ಎಂದಷ್ಟೇ ಹೇಳಿದ್ದೆ. –

  ಈಗಲೂ ರಾಜ್ಯರಾಜಕಾರಣ ಎಂದು ಹಪಹಪಿಸುವ ನೀವು ದಿಲ್ಲಿಯತ್ತ ಮುಖ ಮಾಡಿದ್ದು ಏಕೆ? ಎಚ್‌ಡಿಡಿ: ಪ್ರಧಾನಿಯಾಗುವ ಶಕ್ತಿ ಕೊಡಲು ಕಾರಣ ದಿವಂಗತ ಹೆಗಡೆಯವರು. ಇವತ್ತು ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಆಳ್ತಾ ಇದ್ದಾರಲ್ಲಾ(ಸಿದ್ದರಾಮಯ್ಯ)ಅವರೆಲ್ಲಾ ನಮ್ಮ ಕಂಪನಿಯಲ್ಲೇ ಇದ್ದರು. ಎಲ್ಲರೂ ಸೇರಿ 1989ರಲ್ಲಿ ನನ್ನನ್ನು ಹೊರಗೆ ಹಾಕಿದರು. ಇದೇ ನಾನು ಪ್ರಧಾನಿಯಾಗಲು ಅಡಿಪಾಯ. ಇದನ್ನು ಹಾಕಿಕೊಟ್ಟವರು ಹೆಗಡೆಯವರೇ. ಹಾಗಾಗಿ 1991ರಲ್ಲಿ ಸಮಾಜವಾದಿ ಜನತಾಪಕ್ಷ ದಿಂದ ಹಾಸನದಿಂದ ಲೋಕಸಭೆಗೆ ನಿಂತೆ. ದೇವೇಗೌಡ ಸೋತೇ ಬಿಟ್ಟ, ಅವನ ರಾಜಕೀಯ ಮುಗೀತು ಎಂದು ಪ್ರಚಾರ ಮಾಡಿದರು. ನನ್ನ ಪುಣ್ಯ ನನ್ನ ಜಿಲ್ಲೆಯ ಜನತೆ ನನ್ನ ಗೆಲ್ಲಿಸಿದರು. ಭಗವಂತ, ಶೃಂಗೇರಿ ಶಾರದಾಂಬೆ ಶ್ರೀರಕ್ಷೆ ನನ್ನ ಮೇಲಿತ್ತು. ಸಂಸತ್‌ಗೆ ಹೋದ ಮೇಲೆ ಮಣಿಶಂಕರ್‌ ಅಯ್ಯರ್‌ಗೆ ನನಗೆ ಕಾವೇರಿ ವಿವಾದಕ್ಕೆ ಸಂಬಂಸಿದ ದೊಡ್ಡ ಫೈಟ್‌ ಆಯ್ತು. ಒಂದೂವರೆ ಗಂಟೆ ನಿರರ್ಗಳವಾಗಿ ಮಾತನಾಡಿದೆ. ಕೃಷಿ ಮೇಲೆ ಮಾತನಾಡುತ್ತಿದ್ದಾಗ ಸ್ಪೀಕರ್‌ ಶಿವರಾಜ ಪಾಟೀಲ್‌ ಅವರು, ಐದು ನಿಮಿಷಕ್ಕೆ ಸಾಕು ನಿಲ್ಲಿಸ್ರೀ ಎಂದರು. 10 ನಿಮಿಷ ಆದ ಮೇಲೆ ಪುನಃ ಬೆಲ್‌ ಹೊಡೆದರು. ಆಗ ಕೃಷಿ ಸಚಿವರಾಗಿದ್ದ ಬಲರಾಂ ಜಾಖಡ್‌ ಅವರು, ಈ ಮನುಷ್ಯ ವ್ಯವಸಾಯದ ಬಗ್ಗೆ ಚೆನ್ನಾಗಿ ಮಾತನಾಡುತ್ತಿದ್ದಾನೆ. ಸರಕಾರದ ಸಮಯವನ್ನು ಅವರಿಗೆ ಕೊಟ್ಟು ಬಿಡುತ್ತೇವೆ ಬಿಡಿ ಎಂದರು. ಒಂದೂ ಕಾಲು ಗಂಟೆ ಮಾತನಾಡಿದ್ದೆ. ನನ್ನನ್ನು ಕರ್ನಾಟಕದಿಂದ ಹೊರಹಾಕಿದ್ದಕ್ಕೆ ನನಗೆ ಧೈರ್ಯ ಬಂತು. ಮೂರು ವರ್ಷ ಸಂಸತ್‌ನಲ್ಲಿ ಕಳೆದ ದಿನಗಳು ಸಂಸದೀಯ ಪಟುವಾಗಿ ಬೆಳೆಯಲು, ನನ್ನ ತಿಳಿವಳಿಕೆ ಹೆಚ್ಚಿಸಿಕೊಳ್ಳುವ ಅಡಿಪಾಯ ಹಾಕಿಕೊಳ್ಳಲು ನೆರವಾಯಿತು. ರಾಷ್ಟ್ರೀಯ ಮಟ್ಟದಲ್ಲಿನ ಸವಾಲುಗಳನ್ನು ಎದುರಿಸಲು ಇದು ನೆರವಾಯಿತು. ಹಾಗಂತ ಸುಮ್ಮನೆ ಹೋಗಿ ಚರ್ಚೆ ಮಾಡುತ್ತಿರಲಿಲ್ಲ. ಕರ್ನಾಟಕದಲ್ಲಿ ಆರ್ಥಿಕ ತಜ್ಞರಾದ ಬ್ರಹ್ಮದತ್ತ, ಜಿ.ವಿ.ಕೆ.ರಾವ್‌, ತಿಮ್ಮಯ್ಯ, ಡಿ.ಎಂ. ನಂಜುಂಡಪ್ಪ ಮುಂತಾದ ಮಹನೀಯರು ಇದ್ದರು. ಅವರ ಹತ್ತಿರ ಹೋಗಿ ಜಸ್ಟ್‌ ಲೈಕ್‌ಎ ಸ್ಟೂಡೆಂಟ್‌ ಥರ ಕುಳಿತು ಅಂಕಿ ಅಂಶ ಪಡೆದು, ಚರ್ಚಿಸಿದ್ದರಿಂದ ಪಕ್ವತೆ ಬರಲು ಸಾಧ್ಯವಾಯಿತು. –

  ಪ್ರಧಾನಿಯಾಗಿ ನೀವು ಮಾಡಿದ ಮೊದಲ ಕೆಲಸ? ಎಚ್‌ಡಿಡಿ: ಮುಖ್ಯಮಂತ್ರಿಯಾದಾಗ ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದೆ. 96ರಲ್ಲಿ ಪ್ರಧಾನಿಯಾದಾಗ ಈ ದೇಶದ ಅಗತ್ಯತೆ ಏನು ಎಂದು ಕಂಡುಕೊಂಡು ಸಮಯ ಹಾಳು ಮಾಡದೇ ಕೆಲಸಕ್ಕೆ ಮುಂದಾದೆ. 1996ರ ಜೂನ್‌ 14ರಂದು ಸಚಿವ ಸಂಪುಟದ ಮೊದಲ ಸಭೆ ಕರೆದೆ. ಬಜೆಟ್‌ ಸಿದ್ಧತೆ ಕೂಡ ಆಗಿರಲಿಲ್ಲ. ರೈತರಿಗೆ ಅತಿ ಅಗತ್ಯವಾದ ರಸಗೊಬ್ಬರದ ಬೆಲೆ ಆ ಕಾಲದಲ್ಲಿ ಟನ್‌ಗೆ 9 ಸಾವಿರ ರೂ. ದಾಟಿತ್ತು. 2 ಸಾವಿರ ರೂ. ಕಡಿಮೆ ಮಾಡೋಣ ಎಂದು ಸಲಹೆ ಮಾಡಿದೆ. ನರಸಿಂಹರಾಯರು ಲೇಖಾನುದಾನ ತೆಗೆದುಕೊಂಡಿದ್ದಾರೆ, ಪೂರ್ಣ ಬಜೆಟ್‌ ಅಲ್ಲ. ಹಣ ಎಲ್ಲಿಂದ ಕೊಡೋದು ಎಂದು ಅಕಾರಿಗಳು ತಕರಾರು ತೆಗೆದರು. 13 ಪಾರ್ಟಿಗಳ ಸರಕಾರದಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಕೂಡ ರೂಪಿಸಿರಲಿಲ್ಲ. ರೈತರಿಗೆ ಕೊಡಲೇಬೇಕ್ರಿ ಎಂದು ಹೇಳಿದ ನಾನು ಸಂಚಿತ ನಿಯಿಂದ ಹಣ ಕೊಡೋಣ ಎಂದು ಸಲಹೆ ಕೊಟ್ಟೆ. ಜುಲೈ 19ರಂದು ಬಜೆಟ್‌ ಮಂಡನೆ ಮಾಡಲಿಕ್ಕಿದೆ, ಬಜೆಟ್‌ ಅನ್ನು ಮತಕ್ಕೆ ಹಾಕಿ(ಕಟ್‌ ಆಫ್‌ ಮೋಷನ್‌) ಅನುಮೋದನೆ ಸಿಗದೇ ಇದ್ದರೆ ನೀವು ರಾಜೀನಾಮೆ ಕೊಡುವುದು ಅನಿವಾರ್ಯವಾಗಲಿದೆ ಎಂದು ಅಕಾರಿಗಳು ಹೆದರಿಸಿದರು. ಈ ಕಾರಣಕ್ಕೆ ಸರಕಾರ ಹೋದರೆ ಹೋಗಲಿ, ಡೋಂಟ್‌ ಕೇರ್‌ ಎಂದೆ. ಅಲ್ಲದೇ 2800 ಕೋಟಿ ರೂ. ಗಳನ್ನು ರೈತರಿಗೆ ಕೊಡಿಸಿದೆ. –

  ಪ್ರಧಾನಿಯಾಗಿದ್ದಾಗ ನಿಮ್ಮ ಸರಕಾರ ಮಂಡಿಸಿದ್ದ ಬಜೆಟ್‌ ಹೇಗಿತ್ತು? ಎಚ್‌ಡಿಡಿ: ಮೊನ್ನೆ ದಾವಣಗೆರೆಗೆ ಬಂದಾಗ ಪ್ರಧಾನಿಯವರು ರೈತರಿಗೆ ಏನೇನೋ ಕೊಡುವುದಾಗಿ ಹೇಳಿದ್ದಾರೆ. ನನ್ನ ಸರಕಾರ ಮಂಡಿಸಿದ ಮೊದಲ ಬಜೆಟ್‌ನಲ್ಲಿಯೇ ಸ್ಪಿಂಕ್ಲರ್‌, ಡ್ರಿಪ್‌ ಇರಿಗೇಶನ್‌, ಪವರ್‌ ಟಿಲ್ಲರ್‌ಗೆ ಶೇ.75-90ರಷ್ಟು ಸಬ್ಸಿಡಿ ಕೊಟ್ಟಿದ್ದೆ. ಕೀಟನಾಶಕಕ್ಕೂ ಅಷ್ಟೇ ಸಬ್ಸಿಡಿ ಕೊಡಿಸಿದ್ದೆ. ಟ್ರಾಕ್ಟರ್‌ಗೆ ಶೇ.50ರಷ್ಟು ಸಬ್ಸಿಡಿ ಕೊಡಿಸಿದ್ದೆ. ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಅವರು ಕೀಟನಾಶಕ, ಕೃಷಿ ಉಪಕರಣಗಳಿಗೆ ಸಬ್ಸಿಡಿ ಕೊಡಲು ಸಾಧ್ಯವೇ ಇಲ್ಲ ಎಂದರು. ಕೊನೆಗೆ ಒಪ್ಪಿಕೊಂಡರು. ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕೇಂದ್ರ ಸರಕಾರದ ಧನ ಸಹಾಯಕ್ಕಾಗಿ ಎಐಬಿಪಿ ಯೋಜನೆ ಜಾರಿ ಮಾಡಿದೆ. ಮೊದಲ ವರ್ಷವೇ ಕೃಷ್ಣಾ ಮೇಲ್ದಂಡೆ ಯೋಜನೆಗೆ 1000 ಕೋಟಿ ರೂ. ನೀಡಿದ್ದು, ಇಲ್ಲಿಯವರೆಗೆ ಯುಕೆಪಿ ಒಂದಕ್ಕೆ 9000 ಕೋಟಿ ರೂ. ಎಐಬಿಪಿ ಯೋಜನೆಯಡಿ ಅನುದಾನ ಸಿಕ್ಕಿದೆ. ಇಂದಿರಾಗಾಂ ನಾಲೆ, ಬಾಕ್ರಾನಂಗಲ್‌ ನಾಲೆ ಯೋಜನೆಗಳು ನನೆಗುದಿಗೆ ಬಿದ್ದಿದ್ದವು. ಅವೆಲ್ಲವಕ್ಕೂ ಹಣ ನೀಡಿದ್ದೆ. ಕಳೆದ 20 ವರ್ಷದಲ್ಲಿ ಯಾರೂ ಇಂತಹ ಕೆಲಸ ಮಾಡಿಲ್ಲ. –

  ಕೈಗೊಂಡ ಪ್ರಮುಖ ನಿರ್ಣಯಗಳು? ಎಚ್‌ಡಿಡಿ: ಬಾಂಗ್ಲಾ ಮತ್ತು ಇಂಡಿಯಾ ಮಧ್ಯೆ ಗಂಗಾನದಿ ನೀರು ಹಂಚಿಕೆ ವಿವಾದ ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಅದನ್ನು ಮಾತುಕತೆ ಮೂಲಕ ಬಗೆಹರಿಸಿದ್ದು, ಇವತ್ತಿನವರೆಗೂ ಯಾವುದೇ ತಕರಾರಿಲ್ಲ. ವಿಶ್ವಬ್ಯಾಂಕ್‌ ಹಣತಂದು ಟೆಹ್ರಿ ಡ್ಯಾಂ ಕಟ್ಟಲು ನರಸಿಂಹರಾವ್‌ ಸರಕಾರ 4000 ಕೋಟಿ ರೂ. ಕೊಟ್ಟಿತ್ತು. ಅದನ್ನು ವಿರೋಸಿ ಸುಂದರಲಾಲ್‌ ಬಹುಗುಣ ಹೋರಾಟ ನಡೆಸಿದ್ದರು. ಅವರ ಜತೆ ಮಾತುಕತೆಯಾಡಿ ಯೋಜನೆ ಪೂರ್ಣಗೊಳಿಸಿದೆ. ಇವತ್ತು 1000 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಈಶಾನ್ಯದ ಏಳು ರಾಜ್ಯಗಳಿಗೆ ಅಲ್ಲಿಯವರೆಗಿನ ಯಾವುದೇ ಪ್ರಧಾನಿ ಭೇಟಿ ನೀಡಿರಲಿಲ್ಲ. ಮೊದಲ ಬಾರಿಗೆ ಏಳು ರಾಜ್ಯಗಳಿಗೆ ಭೇಟಿ ಕೊಟ್ಟೆ. ಏರ್‌ಪೋರ್ಟ್‌, ರೈಲು ಯೋಜನೆ, ರಾಷ್ಟ್ರೀ ಹೆದ್ದಾರಿ, ವಿಶ್ವವಿದ್ಯಾನಿಲಯಗಳು ಈಶಾನ್ಯ ರಾಜ್ಯಕ್ಕೆ ಸಿಕ್ಕಿದ್ದು ನಮ್ಮ ಅವಯಲ್ಲಿ. ಈಶಾನ್ಯರಾಜ್ಯಗಳಿಗೆ 6100 ಕೋಟಿ ರೂ. ಮೊತ್ತದ ಪ್ಯಾಕೇಜ್‌ ಕೊಟ್ಟೆ. 10 ವರ್ಷಗಳಿಂದ ಕಾಶ್ಮೀರಕ್ಕೆ ಯಾವುದೇ ಪ್ರಧಾನಿ ಹೋಗಿರಲಿಲ್ಲ. ಐದು ಬಾರಿ ಕಾಶ್ಮೀರಕ್ಕೆ ಭೇಟಿ ನೀಡಿದೆ. ನಾನಾ ಯೋಜನೆಗಳು ಸೇರಿ 3000 ಕೋಟಿ ರೂ. ಪ್ಯಾಕೇಜ್‌ ಅಲ್ಲದೇ ಅನುದಾನವನ್ನೂ ಕೊಟ್ಟೆ. ಬೋಗಸ್‌ ಹೇಳಿಕೆ ನೀಡಿ ಬರುವ ಜಾಯಮಾನವೇ ನನ್ನದಲ್ಲ. 14 ವರ್ಷದಿಂದ ಡೆಲ್ಲಿ ಮೆಟ್ರೋ ಯೋಜನೆ ಕಡತ ಹಾಗೆಯೇ ಬಿದ್ದಿತ್ತು. ಕಾಲಮಿತಿಯಲ್ಲಿ ಯೋಜನೆ ಅನುಷ್ಠಾನಕ್ಕೆ ತಾಕೀತು ಮಾಡಿ, ಅನುದಾನವನ್ನೂ ಕೊಟ್ಟೆ. ವಾಜಪೇಯಿ ಅವರು ಸುವರ್ಣಚತುಷ್ಪಥ ಹೆದ್ದಾರಿ ಮಾಡಿದರು ಎಂದು ಹೇಳಿಕೊಂಡರು. ಯೋಜನೆ ರೂಪಿಸಿದ್ದು ನಾನು. ನಾಗಾ ಬಂಡುಕೋರರ ನಾಯಕ ಸ್ವಿಟ್ಜರ್‌ಲ್ಯಾಂಡ್‌ನಲ್ಲಿದ್ದರು. ಅವರ ಜತೆ ಮಾತುಕತೆ ನಡೆಸಿ, ಯುದ್ಧವಿರಾಮ ಘೋಷಿಸಲು ಮನವೊಲಿಸಿದೆ. ಈ ವಿಷಯಗಳು ಅನೇಕರಿಗೆ ಗೊತ್ತಿಲ್ಲ. –

  ಕನ್ನಡಿಗ ಪ್ರಧಾನಿಯಾಗಿ ನಾಡಿಗೆ ಕೊಟ್ಟಿದ್ದೇನು? ಎಚ್‌ಡಿಡಿ: ಕಾವೇರಿ ನಾಲ್ಕನೇ ಹಂತಕ್ಕೆ 9 ಟಿಎಂಸಿ ನೀರು ಕೊಡಲು ನಿರ್ಧರಿಸಿದ್ದು ನನ್ನ ಸರಕಾರ. ಆಲಮಟ್ಟಿ ಅಣೆಕಟ್ಟನ್ನು 524 ಅಡಿಗೆ ಎತ್ತರಿಸಲು ತೀರ್ಮಾನ ಮಾಡಿದಾಗ ಚಂದ್ರಬಾಬುನಾಯ್ಡು ಸಿಟ್ಟಾದರು. ಈ ವಿಷಯದಲ್ಲಿ ಮಾತ್ರ ನಮ್ಮ ಸಂಪುಟದಲ್ಲಿ ಸ್ವಲ್ಪ ಭಿನ್ನತೆ ಬಂತು. ಕೊನೆಗೂ ಒಪ್ಪಿಸಿದೆ. ಕಾವೇರಿ ವಿವಾದ ಬಗೆಹರಿಸಲು ಬಹಳ ಯತ್ನ ಮಾಡಿದೆ. ಆದರೆ, ಕರುಣಾನಿ ಒಪ್ಪಲೇ ಇಲ್ಲ. ಅಂದು ಮೇಕೆದಾಟು ಯೋಜನೆ ಅನುಷ್ಠಾನಕ್ಕೆ 650 ಕೋಟಿ ರೂ. ಸಾಕಾಗಿತ್ತು. ಭಾರತ ಸರಕಾರ ದುಡ್ಡುಕೊಡಲಿದೆ, ಎರಡೂ ರಾಜ್ಯಗಳಿಗೂ ಆಪತ್ಕಾಲದಲ್ಲಿ ನೀರು ಸಿಗಲಿದೆ ಎಂದು ಎಷ್ಟೇ ಮನವೊಲಿಸಿದರೂ ಕರುಣಾನಿ ಸಮ್ಮತಿ ಕೊಡಲೇ ಇಲ್ಲ. 45 ಸಕ್ಕರೆ ಕಾರ್ಖಾನೆ, 14 ರೈಲ್ವೆ ಯೋಜನೆ, ಮೈಸೂರು-ಬೆಂಗಳೂರು ರೈಲು ಮಾರ್ಗ ಡಬ್ಲಿಂಗ್‌, ಕೈಗಾ ಯೋಜನೆಗೆ ಅನುದಾನ ಕೊಟ್ಟೆ. – ನೆನಪಿನಲ್ಲಿ ಉಳಿದ ಕಠಿಣ ನಿರ್ಧಾರ ಯಾವುದಾದರೂ ಇದೆಯೇ? ಎಚ್‌ಡಿಡಿ: ವಿಶ್ವಬ್ಯಾಂಕ್‌ನ ಗವರ್ನರ್‌ ಉಲ್ಫತ್‌ಸನ್‌ ಎಂಬುವರು ದಿಲ್ಲಿಗೆ ಬಂದಿದ್ದರು. ಅವರಿಗೆ ಏರ್ಪಡಿಸಿದ್ದ ಭೋಜನಕೂಟದಲ್ಲಿ ವಿಶ್ವಬ್ಯಾಂಕ್‌ನ ಮಾರ್ಗಸೂಚಿಗಳನ್ನು ನಿಮ್ಮ ಸರಕಾರ ಪಾಲಿಸುತ್ತಿಲ್ಲ. ರೈತರಿಗೆ, ಅನುತ್ಪಾದಕ ಯೋಜನೆಗಳಿಗೆ ಅನುದಾನ ಕೊಡುವುದು ನಿಲ್ಲಿಸದೇ ಇದ್ದರೆ ವಿಶ್ವಬ್ಯಾಂಕ್‌ ಅನುದಾನ ನಿಲ್ಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ನಿಮ್ಮ ಗೊಡ್ಡು ಬೆದರಿಕೆಗೆ ನಾವು ಬಗ್ಗುವುದಿಲ್ಲ, ನೀವು ಹೇಳಿದಂತೆ ಸರಕಾರ ನಡೆಸಲಿಕ್ಕಾಗದು.

  ಚುನಾಯಿತ ಸರಕಾರಕ್ಕೆ ನಿರ್ದೇಶನ ನೀಡಲು ನಿಮಗೆ ಅಕಾರ ಕೊಟ್ಟವರು ಯಾರು? ಜನತೆಗೆ ಅನುಕೂಲಕಾರಿಯಾದ ತೀರ್ಮಾನಗಳಿಂದ ಹಿಂದೆ ಸರಿಯಲಾರೆ ಎಂದು ಖಡಕ್‌ ಆಗಿ ಹೇಳಿದೆ. ಚಿದಂಬರಂ ವಿರೋಧದ ಮಧ್ಯೆಯೂ ವಾಲೆಂಟರಿ ಡಿಸ್‌ಕ್ಲೋಸರ್‌ ಸ್ಕೀಂ ಜಾರಿ ಮಾಡಿದೆ. ಇದರಿಂದಾಗಿ ದೇಶದಲ್ಲಿಯೇ ಮೊದಲ ಬಾರಿಗೆ 36 ಸಾವಿರ ಕೋಟಿ ರೂ. ಕಪ್ಪುಹಣ ಹೊರಬಂತು. ದೇಶದ ಬೊಕ್ಕಸಕ್ಕೆ 10800 ಕೋಟಿ ರೂ. ಆದಾಯ ಸಿಕ್ಕಿತು. ಅಕಾರ ಹಿಡಿದಾಗ 94 ಬಿಲಿಯನ್‌ ಡಾಲರ್‌ ವಿದೇಶಿ ಸಾಲ ಇತ್ತು, ಕೇವಲ 325 ದಿನಗಳಲ್ಲಿ ಈ ಮೊತ್ತವನ್ನು 1 ಬಿಲಿಯನ್‌ ಡಾಲರ್‌ಗೆ ಇಳಿಸಿ, ದಾಖಲೆ ಸೃಷ್ಟಿಸಿದೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸುವ ಒಪೆಕ್‌ ಒಕ್ಕೂಟಕ್ಕೆ 17 ಸಾವಿರ ಕೋಟಿ ರೂ. ಎಂಟು ತಿಂಗಳಿಂದ ಬಾಕಿ ಉಳಿಸಿಕೊಂಡಿದ್ದರು. ಪಾವತಿಮಾಡದೇ ಇದ್ದರೆ ಪೆಟ್ರೋಲಿಯಂ ಪೂರೈಕೆ ನಿಲ್ಲಿಸುವುದಾಗಿ ಒಪೆಕ್‌ ಒಕ್ಕೂಟ ಎಚ್ಚರಿಸಿತ್ತು. ರಾಜತಾಂತ್ರಿಕ ಮಾರ್ಗದಲ್ಲಿ ಸಮಸ್ಯೆ ಬಗೆಹರಿಸಿದ್ದೆ. 36 ಕೋಟಿ ರೂ. ಬಿಪಿಎಲ್‌ ಕಾರ್ಡುದಾರರಿಗೆ 3 ರೂ. ನಲ್ಲಿ 10 ಕೆಜಿ ಅಕ್ಕಿ 2 ರೂ. ನಲ್ಲಿ 5 ಕೆಜಿ ಗೋ, 3 ರೂ.ನಲ್ಲಿ ಸೀಮೆ ಎಣ್ಣೆ ಕೊಡಲು 8500 ಕೋಟಿ ರೂ. ಅನುದಾನ ನೀಡಿದ್ದೆ. –

  ಇಷ್ಟೆಲ್ಲಾ ಆದರೂ ನಿಮ್ಮನ್ನು ಅಕಾರದಿಂದ ಇಳಿಸಿದ್ದು ಯಾಕೆ? ಎಚ್‌ಡಿಡಿ: ಈ ಸತ್ಯ ಯಾರಿಗೂ ಹೇಳಿರಲಿಲ್ಲ. ಕಾಶ್ಮೀರ ವಿವಾದ ಬಗೆಹರಿಸಲು ನವಾಜ್‌ ಷರೀಫ್‌ ಜತೆ ಮಾತುಕತೆಗೆ ಮುಂದಾದೆ. ಎರಡೂ ರಾಷ್ಟ್ರಗಳ ವಿದೇಶ ಕಾರ್ಯದರ್ಶಿಗಳ ನಿಯೋಗ ದ್ವಿಪಕ್ಷೀಯ ಮಾತುಕತೆ ಆಡಿತ್ತು. ಇದೇ ರೀತಿ ಜನ ಪರ ಕಾರ್ಯಕ್ರಮ, ನಾಗಾ ಸಮಸ್ಯೆ, ಗಂಗಾನದಿ ಸಮಸ್ಯೆ, ಕಾಶ್ಮೀರ ಸಮಸ್ಯೆ ನಿವಾರಿಸಲು 13 ಪಕ್ಷ ಗಳ ಸರಕಾರಕ್ಕೆ ಬಿಟ್ಟರೆ ಮತ್ತೆ ಕಾಂಗ್ರೆಸ್‌ಗೆ ಭವಿಷ್ಯ ಇಲ್ಲ ಎಂದು ಅರಿವಾದ ನಾಯಕರು 1997ರ ಮಾರ್ಚ್‌ 31ರಂದು ಬೆಂಬಲ ವಾಪಸ್‌ ಪಡೆಯುವುದಾಗಿ ರಾಷ್ಟ್ರಪತಿಗೆ ಪತ್ರ ಕೊಟ್ಟರು. ಬಹಳ ದಿನ ಬಿಟ್ಟರೆ ಕಾಂಗ್ರೆಸ್‌ಗೆ ಧಕ್ಕೆ ಆಗಲಿದೆ ಎಂದು ಸರಕಾರ ಬೀಳಿಸುವ ತೀರ್ಮಾನ ಕೈಗೊಂಡರು. ಇದೇ ಕಾರಣಕ್ಕೆ ನನ್ನನ್ನು ಅಕಾರದಿಂದ ತೆಗೆದರು. –

  ಪ್ರಧಾನಿ ಹುದ್ದೆ ರಾಜಕೀಯಕ್ಕೆ ಉರುಳಾಯಿತು ಎಂದು ಹೇಳಿದಿರಿ, ಹೇಗೆ? ಎಚ್‌ಡಿಡಿ: ಆ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾದರೆ ತಮ್ಮನ್ನು ಮುಖ್ಯಮಂತ್ರಿ ಮಾಡಿದ ಕರ್ನಾಟಕ ಬಿಟ್ಟುಹೋಗಬೇಕಲ್ಲ ಎಂಬ ನೋವಿನಿಂದ ಹೋದೆ. ಅಲ್ಲಿ ಐದು ವರ್ಷ ಇರಲಾರೆ ಎಂಬ ಕಡುನೋವಿನಿಂದ ಹೋಗಿದ್ದೆ. ಆ ಬಳಿಕ 20 ವರ್ಷ ಕರ್ನಾಟಕದಲ್ಲಿ ಅನುಭವಿಸಿದ ನೋವು, ನಮ್ಮ ರಾಜಕೀಯ ಮುಖಂಡರು ನೀಡಿದ ಹಿಂಸೆ ಇವಕ್ಕೆಲ್ಲಾ ಪ್ರಧಾನಿ ಹುದ್ದೆಗೆ ಏರಿದ್ದೇ ಕಾರಣವಲ್ಲವೇ? –

  ಪ್ರಧಾನಿಯಾದಾಗ ನಿಮ್ಮ ಪಕ್ಷ ದ ಕರ್ನಾಟಕದ ನಾಯಕರು ಪ್ರತಿಕ್ರಿಯೆ ಹೇಗಿತ್ತು? ಎಚ್‌ಡಿಡಿ: ಪ್ರಧಾನಿ ಹುದ್ದೆಯಿಂದ ಇಳಿದಾಗ ಕರ್ನಾಟಕದಲ್ಲಿ ನನ್ನ ಸಚಿವ ಸಂಪುಟದಲ್ಲಿದ್ದ ಒಬ್ಬನೇ ಒಬ್ಬ ವ್ಯಕ್ತಿ ನನ್ನನ್ನು ಬಂದು ಮಾತನಾಡಿಸಲಿಲ್ಲ. ಯಾರೊಬ್ಬರು ಇರಲಿಲ್ಲ. ಕರ್ನಾಟಕದಿಂದ ಮುಂದೆ ಯಾರಾದರೂ ಪ್ರಧಾನಿಯಾಗುತ್ತಾರೋ ಗೊತ್ತಿಲ್ಲ. ಆದರೆ, ಪ್ರಧಾನಿಯಾಗಿ ಆಯ್ಕೆಯಾದಾಗ ಇಲ್ಲಿಂದ ಕಳಿಸಿದರಲ್ಲ, ಆಗ ಕನಿಷ್ಠ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಒಂದು ಚಹಾಕೂಟ ಏರ್ಪಡಿಸಲಿಲ್ಲ. ಸಚಿವ ಸಂಪುಟದಿಂದ ಕರೆದು ಗೌರವಿಸುವ ಕನಿಷ್ಠ ಸೌಜನ್ಯ ತೋರಲಿಲ್ಲ. ಕರ್ನಾಟಕದ ರಾಜಕಾರಣಿಗಳ ಸಂಸ್ಕೃತಿ ಹೇಗಿದೆ ಎಂಬುದನ್ನು ಇದು ತೋರಿಸುತ್ತದೆ. 20 ವರ್ಷದಿಂದ ಕಂಡ ರಾಜಕಾರಣದ ಬಗ್ಗೆ ಯೋಚನೆ ಮಾಡಿದರೆ ಅಸಹ್ಯ ಹುಟ್ಟುತ್ತೆ. ಕರ್ನಾಟಕಕ್ಕೆ ಇದ್ದ ತನ್ನದೇ ಆದ ಕೀರ್ತಿ ಇತ್ತು, ಅವೆಲ್ಲಾ ಹೋಗಿ ತಲೆ ತಗ್ಗಿಸುವ ಸ್ಥಿತಿ ಇದೆ. –

  84 ವರ್ಷ ಆಯ್ತು, ಇನ್ನೂ ರಾಜಕೀಯ ಯಾಕೆ ನಿಮಗೆ? ಎಚ್‌ಡಿಡಿ: ನೀವು ಹೇಳುವುದು ಸರಿ. ದೇಶದಲ್ಲಿ ಸಂಸ್ಥಾ ಕಾಂಗ್ರೆಸ್‌ನ ಯಾವುದೇ ಕಚೇರಿಯನ್ನು ಕಾಂಗ್ರೆಸ್‌ ಕಿತ್ತುಕೊಂಡಿಲ್ಲ. ಕರ್ನಾಟಕದಲ್ಲಿ ಮಾತ್ರ ಅದು ನಡೆದಿದೆ. ಪಕ್ಷ ಕ್ಕೆ ಹೊಸ ಕಚೇರಿ ಕಟ್ಟಿ ಜೆಪಿ ಭವನ ಎಂದು ಹೆಸರಿಡುತ್ತೇನೆ. ಈ ಪಕ್ಷ ರಾಷ್ಟ್ರ, ರಾಜ್ಯ ರಾಜಕೀಯದಲ್ಲಿ ತನ್ನದೇ ಆದ ಪಾತ್ರ ನಿರ್ವಹಿಸಿದೆ. ತನ್ನದೇ ಆದ ಕೊಡುಗೆ ಕೊಟ್ಟಿದೆ. ನನಗೆ ಪಿಎಂ, ಸಿಎಂ ಆಗಬೇಕಿಲ್ಲ. ನನ್ನ ಕೊನೆಯ ಉಸಿರು ಇರುವವರೆಗೂ ಪ್ರಾದೇಶಿಕ ಪಕ್ಷ ಉಳಿಸಲು, ಜನರ ಆಶೀರ್ವಾದ ಕೊಡಿಸಲು ಹೋರಾಡುವೆ. ಆ ಹುಚ್ಚು ನನಗಿದೆ. ಪ್ರಾದೇಶಿಕ ಪಕ್ಷ ಕ್ಕೆ ಭವಿಷ್ಯ ಇದೆ, ಮಾಡಿ ತೋರಿಸುವೆ.

  • Comments Off on ಮಾಜಿ ಪ್ರಧಾನಿ ಸನ್ಯಾನ್ಯ ಹೆಚ್ ಡಿ ದೇವೇಗೌಡ್ರು ಅವರ ಮನದಾಳದ ಮಾತು…..
  • 1 Star2 Stars3 Stars4 Stars5 Stars (1 votes, average: 1.00 out of 5)
   Loading...Loading...
  • 0 views

  Leave a Reply

  Comments are closed on this post.