07:14 pm Tuesday, June 25, 2019
 • ಶಾಂತಿದೂತರಾಗಿದ್ದ ಗೂಢಚಾರರು

  By admin - Tue May 29, 6:26 am

  • Comments Off on ಶಾಂತಿದೂತರಾಗಿದ್ದ ಗೂಢಚಾರರು
  • 0 views

  ಶಾಂತಿದೂತರಾಗಿದ್ದ ಗೂಢಚಾರರು

  ಶೇಖರ್‌ ಗುಪ್ತ

  ಭಾರತ ಮತ್ತು ಪಾಕಿಸ್ತಾನದ ಗೂಢಚಾರರು ಉಭಯ ದೇಶಗಳ ಮಧ್ಯೆ ಶಾಂತಿ ನೆಲೆಸಲು ನಡೆಸಿದ ಪ್ರಯತ್ನಗಳ ಬಗ್ಗೆ ಕೆಲವು ಹೇಳಲಾಗದ ಮತ್ತು ಯಾವುದೇ ಮುಚ್ಚುಮರೆ ಇಲ್ಲದೇ ಹೇಳಿದ ಹಲವಾರು ನಿದರ್ಶನಗಳಿವೆ. ಎದುರಾಳಿಗಳು ಮುಖಾಮುಖಿ ಭೇಟಿಯಾಗಿ, ಮಾತುಕತೆ ನಡೆಸಿ, ಪರಸ್ಪರ ಗೌರವಿಸುವುದನ್ನು ಕಲಿತು, ವೈಯಕ್ತಿಕ ನೆಲೆಯಲ್ಲಿ ವಿಶ್ವಾಸಕ್ಕೂ ಪಾತ್ರರಾದ ಬೇಹುಗಾರರೂ ನಮ್ಮ ಮಧ್ಯೆ ಇದ್ದಾರೆ.

  ‘ಕಳ್ಳರಲ್ಲಿಯೂ ಕೆಲವರು ಗೌರವಕ್ಕೆ ಪಾತ್ರರಾಗಿರುತ್ತಾರೆ’ ಎನ್ನುವ ಮಾತೊಂದು ಚಾಲ್ತಿಯಲ್ಲಿ ಇದೆ. ಬೇಹುಗಾರರಿಗೂ ಈ ಮಾತನ್ನು ಅನ್ವಯಿಸಬಹುದೇ ಎನ್ನುವ ಪ್ರಶ್ನೆ ಅನೇಕ ಬಾರಿ ಅನೇಕರನ್ನು ಕಾಡುತ್ತಿರುತ್ತದೆ. ಬೇಹುಗಾರಿಕೆಯಲ್ಲಿ ಅನೇಕರು ಗೌರವದಿಂದಲೇ ನಡೆದುಕೊಂಡಿರುವ ಬಗ್ಗೆ ಹಲವು ನಿದರ್ಶನಗಳು ಇವೆ. ನಾವು ನಿರೀಕ್ಷೆ ಮಾಡಿರುವುದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಘಟನೆಗಳು ನಡೆದಿವೆ. ಶೀತಲ ಸಮರದ ಸಂದರ್ಭದಲ್ಲಿಯೂ ಈ ಬಗೆಯ ವಿದ್ಯಮಾನಗಳು ಘಟಿಸಿವೆ. ಎದುರಾಳಿಗಳು ಮುಖಾಮುಖಿ ಭೇಟಿಯಾಗಿ, ಮಾತುಕತೆ ನಡೆಸಿ, ಪರಸ್ಪರ ಗೌರವಿಸುವುದನ್ನು ಕಲಿತು, ವೈಯಕ್ತಿಕ ನೆಲೆಯಲ್ಲಿ ವಿಶ್ವಾಸಕ್ಕೂ ಪಾತ್ರರಾದ ಬೇಹುಗಾರರೂ ನಮ್ಮ ಮಧ್ಯೆ ಇದ್ದಾರೆ.

  ಭಾರತ ಮತ್ತು ಪಾಕಿಸ್ತಾನಗಳ ಬೇಹುಗಾರಿಕಾ ಸಂಸ್ಥೆಗಳ ಮುಖ್ಯಸ್ಥರು ಎರಡೂ ದೇಶಗಳ ಮಧ್ಯೆ ಶಾಂತಿ ನೆಲೆಸುವಂತೆ ಮಾಡಲು ತೆರೆಮರೆಯಲ್ಲಿ ನಡೆಸಿದ ಪ್ರಶಂಸನೀಯ ಜಂಟಿ ಪ್ರಯತ್ನಗಳ ಬಗ್ಗೆ ಎರಡೂ ದೇಶಗಳ ಮಾಧ್ಯಮಗಳು ಇತ್ತೀಚೆಗೆ ವರದಿ ಮಾಡಿವೆ. ಹೀಗಾಗಿ ಈ ಅಪರೂಪದ ವಿದ್ಯಮಾನಗಳೇ ಈ ವಾರದ ಅಂಕಣದ ವಿಷಯವಾಗಿದೆ. ಭಾರತದ ರಿಸರ್ಚ್‌ ಅಂಡ್ ಅನಾಲಿಸಿಸ್‌ (ಆರ್‌ಎಡಬ್ಲ್ಯು–ರಾ) ಮುಖ್ಯಸ್ಥರಾಗಿದ್ದ ಎ.ಎಸ್‌. ದುಲತ್‌ ಮತ್ತು ಪಾಕಿಸ್ತಾನದ ಇಂಟರ್‌ ಸರ್ವಿಸಸ್‌ ಇಂಟೆಲಿಜೆನ್ಸ್‌ (ಐಎಸ್‌ಐ ಮುಖ್ಯಸ್ಥ ಅಸದ್‌ ದುರಾನಿ ಅವರು ಬೇರೆ, ಬೇರೆ ಸಮಯದಲ್ಲಿ ಅಧಿಕಾರದಲ್ಲಿದ್ದವರು. ಅವರಿಬ್ಬರೂ ಶಾಂತಿಯ ದೂತರಾಗಿ ನಡೆಸಿದ ಪ್ರಯತ್ನಗಳನ್ನು ಪತ್ರಕರ್ತ ಆದಿತ್ಯ ಸಿನ್ಹಾ ಅವರು ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ.

  ತಮ್ಮ ತಮ್ಮ ದೇಶಗಳ ಗೂಢಚಾರಿಕೆ ಸಂಸ್ಥೆಗಳ ಮುಖ್ಯಸ್ಥರಾಗಿದ್ದ ಇವರಿಬ್ಬರೂ ಬೇರೆ ದೇಶದಲ್ಲಿ ರಹಸ್ಯವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಭೇಟಿಗೆ ಥಾಯ್ಲೆಂಡ್‌ ಸೂಕ್ತ ತಾಣವಾಗಿತ್ತು. ಅಸದ್‌ ದುರಾನಿ ಅವರ ಪುತ್ರನನ್ನು ಮುಂಬೈ ಪೊಲೀಸರು ವೀಸಾ ಉಲ್ಲಂಘನೆಗಾಗಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದಾಗ ಅವರು ಐಎಸ್‌ಐನ ಮಾಜಿ ಮುಖ್ಯಸ್ಥನ ಮಗ ಎನ್ನುವುದು ಗೊತ್ತಾಗದಂತೆ ‘ರಾ’ ನೋಡಿಕೊಂಡಿತ್ತು ಎನ್ನುವ ವಿಶಿಷ್ಟ ಕಥನವೂ ಈ ಪುಸ್ತಕದಲ್ಲಿ ಇದೆ.

  ಅಷ್ಟೊತ್ತಿಗಾಗಲೇ ದುರಾನಿ ಸೇವೆಯಿಂದ ನಿವೃತ್ತರಾಗಿದ್ದರು. ದುರಾನಿ ಅವರು ದುಲತ್‌ ಅವರ ಜತೆ ಸೌಹಾರ್ದ ಸಂಬಂಧ ಹೊಂದಿದ್ದರು. ಹೀಗಾಗಿ ದುಲತ್‌ ಅವರು ಆ ಸಮಯದಲ್ಲಿ ‘ರಾ’ ಮುಖ್ಯಸ್ಥರಾಗಿದ್ದ ರಾಜಿಂದರ್‌ ಖನ್ನಾ ಅವರ ಜತೆ ಮಾತನಾಡಿ, ವಿವರಗಳು ಬಹಿರಂಗಗೊಳ್ಳದಂತೆ ನೋಡಿಕೊಂಡಿದ್ದರು.

  ನಮ್ಮ ಕೆಲ ಬೇಹುಗಾರಿಕೆ ಮುಖ್ಯಸ್ಥರು ಅಧಿಕಾರದಲ್ಲಿ ಇದ್ದಾಗಲೂ ರಹಸ್ಯ ಮಾತುಕತೆ ನಡೆಸಿದ ನಿದರ್ಶನಗಳು ಇವೆ. ರಾಜೀವ್‌ ಗಾಂಧಿ ಅವರ ಅಧಿಕಾರಾವಧಿಯಲ್ಲಿ ‘ರಾ’ ಮುಖ್ಯಸ್ಥರಾಗಿದ್ದ ಆನಂದ ವರ್ಮಾ, ‘ದಿ ಹಿಂದೂ’ ದಿನಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ, ಐಎಸ್‌ಐನ ಅಂದಿನ ಮುಖ್ಯಸ್ಥರಾಗಿದ್ದ ಲೆಫ್ಟಿನೆಂಟ್‌ ಜನರಲ್‌ ಹಮೀದ್‌ ಗುಲ್ ಅವರ ಜತೆ ನಡೆಸಿದ್ದ ರಹಸ್ಯ ಸಂಧಾನ ಮಾತುಕತೆಗಳು ಮತ್ತು ದೂರವಾಣಿ ಮೂಲಕ ರಹಸ್ಯ ಶಬ್ದಗಳು ಮತ್ತು ಸಂಕೇತಗಳ ನೆರವಿನಿಂದ ಸಂಭಾಷಣೆ ನಡೆಸಿದ ಬಗ್ಗೆ ವಿವರಿಸಿದ್ದರು. ಸಿಯಾಚಿನ್‌ ವಿವಾದ ಮತ್ತು ಕಾಶ್ಮೀರದಲ್ಲಿಯ ಉದ್ವಿಗ್ನ ಪರಿಸ್ಥಿತಿ ಶಮನಗೊಳಿಸಲು ಈ ಮಾತುಕತೆಗಳ ಸಂದರ್ಭದಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿತ್ತು ಎಂದೂ ಅವರು ಈ ಲೇಖನದಲ್ಲಿ ಬರೆದುಕೊಂಡಿದ್ದರು.

  ವಿಶ್ವಾಸ ವೃದ್ಧಿ ಕ್ರಮಗಳ ಅಂಗವಾಗಿ ಗುಲ್‌ ಅವರು ಭಾರತದ ನಾಲ್ವರು ಸಿಖ್‌ ಸೈನಿಕರನ್ನು ಭಾರತದ ವಶಕ್ಕೆ ಒಪ್ಪಿಸಿದ್ದರು. 1984ರ ಆಪರೇಷನ್ ಬ್ಲೂಸ್ಟಾರ್‌ ನಂತರ ದಂಗೆ ಎದ್ದಿದ್ದ ಸೇನೆಯ ಈ ನಾಲ್ವರು ಸೈನಿಕರು ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದರು. ಈ ಸಂಧಾನ ಪ್ರಕ್ರಿಯೆಗೆ ಪಾಕಿಸ್ತಾನವೇ ಚಾಲನೆ ನೀಡಿತ್ತು. ಇದಕ್ಕೆ ರಾಜೀವ್‌ ಗಾಂಧಿ ಮತ್ತು ಜಿಯಾ ಉಲ್ ಹಕ್‌ ಅವರ ಬೆಂಬಲವೂ ಇತ್ತು.

  ಮೊದಲ ಸಭೆ ನಡೆಸಲು ರಾಜೀವ್‌ ಗಾಂಧಿ ಅವರು ಜೋರ್ಡಾನ್‌ ರಾಜಕುಮಾರ ಹಸನ್‌ ಅವರ ನೆರವು ಬಯಸಿದ್ದರು. ಹಸನ್‌ ಅವರು ರಾಜೀವ್‌ ಅವರ ಆಪ್ತ ಸ್ನೇಹಿತರಾಗಿದ್ದರು. ರಾಯಲ್‌ ಜೋರ್ಡಾನ್‌ ಏರ್‌ಲೈನ್ಸ್‌ಗೆ ಭಾರತದ ವಾಯುಪ್ರದೇಶ ಬಳಸಿಕೊಳ್ಳಲು ರಾಜೀವ್‌ ಗಾಂಧಿ ಅನುಮತಿ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಹಸನ್‌, ರಾಜೀವ್‌ ಗಾಂಧಿ ಅವರಿಗೆ ಫ್ಯಾನ್ಸಿ ಕಾರ್‌ ಕೊಡುಗೆಯಾಗಿ ನೀಡಿದ್ದರು. ಇದು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಹಸನ್‌ ಅವರು ಪಾಕಿಸ್ತಾನದ ಜತೆಗೂ ಸುಮಧುರ ಬಾಂಧವ್ಯ ಹೊಂದಿದ್ದರು. ಅವರ ಪತ್ನಿ ಪಾಕಿಸ್ತಾನಕ್ಕೆ ಸೇರಿದವರಾಗಿದ್ದರು.

  ಜಿಯಾ ಉಲ್‌ ಹಕ್‌ ಅವರ ಹತ್ಯೆಯಾಗುತ್ತಿದ್ದಂತೆ ಈ ಸಂಧಾನ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಶಾಂತಿ ಮಾತುಕತೆ ಬೆಂಬಲಿಸದ ಪಾಕಿಸ್ತಾನದ ಸೇನಾ ಕಮಾಂಡರುಗಳಿಗೆ ಹಕ್ ಅವರ ಈ ಧೋರಣೆ ಇಷ್ಟವಾಗದ ಕಾರಣಕ್ಕೆ ಅವರ ಹತ್ಯೆ ನಡೆಯಿತು ಎಂದೇ ವರ್ಮಾ ಅನುಮಾನಪಟ್ಟಿದ್ದರು. ಭಾರತದಲ್ಲಿ ಪಾಕಿಸ್ತಾನದ ಹೈಕಮಿಷನರ್‌ ಆಗಿದ್ದ ನಿಯಾಜ್‌ ನಾಯಕ್‌ ಅವರೂ ಕೆಲ ಸಮಯದ ನಂತರ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು.

  ತುಂಬ ವ್ಯವಸ್ಥಿತ ರೀತಿಯಲ್ಲಿ ಸಂಚು ರೂಪಿಸಿ ಜಿಯಾ ಉಲ್‌ ಹಕ್‌ ಅವರನ್ನು ಹತ್ಯೆ ಮಾಡಲಾಗಿತ್ತು ಎನ್ನುವ ಅನುಮಾನವನ್ನು ಈ ವಿದ್ಯಮಾನಗಳೆಲ್ಲವೂ ಪುಷ್ಟೀಕರಿಸುತ್ತವೆ. ಮೂರು ದಶಕಗಳ ನಂತರ ಈ ಎಲ್ಲ ವಿವರಗಳು ಬಹಿರಂಗಗೊಂಡಿದ್ದವು. ವರ್ಮಾ ಅವರು ತಮ್ಮ ನೆನಪುಗಳನ್ನು ಹೆಕ್ಕಿ ತೆಗೆದು ಬರೆದಿದ್ದನ್ನು ನಾನೂ ನಂಬಿರುವೆ. ಹಿಂಬಾಗಿಲ ರಾಜತಾಂತ್ರಿಕ ಸಭೆಗಳಲ್ಲಿ ನಾನು ಕೂಡ ಭಾಗವಹಿಸಿರುವೆ. ಅವುಗಳ ಪೈಕಿ ಬಲುಸಾ ಗ್ರೂಪ್‌ ಹೆಸರಿನಲ್ಲಿ ಜೋರ್ಡಾನ್‌ ರಾಜಕುಮಾರ ಹಸನ್‌ ಅವರು ಅಮ್ಮಾನ್‌ನಲ್ಲಿ ಏರ್ಪಡಿಸಿದ್ದ ಸಭೆಯೂ ಒಂದಾಗಿತ್ತು. ಅದರಲ್ಲಿ ಭಾರತದ ಸೇನೆಯ ಮಾಜಿ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ಎಸ್‌.ಕೆ. ಕೌಲ್‌, ಅವರ ಸೋದರ ಪಿ.ಕೆ. ಕೌಲ್‌ (ಇವರು ಮಾಜಿ ಕ್ಯಾಬಿನೆಟ್‌ ಕಾರ್ಯದರ್ಶಿ ಮತ್ತು ಅಮೆರಿಕದಲ್ಲಿ ಭಾರತದ ರಾಯಭಾರಿ ಆಗಿದ್ದರು) ಮತ್ತು ಲೆಫ್ಟಿನೆಂಟ್‌ ಜನರಲ್‌ ಸತೀಶ್‌ ನಂಬಿಯಾರ್‌, ಪಾಕಿಸ್ತಾನದ ನಿವೃತ್ತ ವೈಸ್‌ ಚೀಫ್‌ ಜನರಲ್‌ ಕೆ.ಎಂ. ಆರೀಫ್‌ ಮತ್ತು ಉದ್ಯಮಿ ಬಾಬರ್‌ ಅಲಿ ಭಾಗಿಯಾಗಿದ್ದರು. ಬಾಬರ್‌ ಅಲಿ ಅವರು ಒಂದು ಬಾರಿ ಪಾಕಿಸ್ತಾನದ ಮ್ಯಾನೇಜ್‌ಮೆಂಟ್‌ ಸಂಸ್ಥೆ ಎಲ್‌ಯುಎಂಎಸ್‌ನಲ್ಲಿ ಇಂತಹ ಸಭೆ ಆಯೋಜಿಸಿದ್ದರು.

  ಈ ತಂಡದಲ್ಲಿದ್ದ ಸೇನೆಯ ನಿವೃತ ಮೇಜರ್‌ ಜನರಲ್‌ ಮಹ್ಮದ್‌ ಅಲಿ ದುರಾನಿ (ಅಸದ್‌ ಅವರ ಸಂಬಂಧಿಕರಲ್ಲ) ಅವರು ಮೂಲತಃ ಯುದ್ಧದ್ವೇಷಿಯಾಗಿದ್ದರು. ಸೂಕ್ಷ್ಮ ಸಂವೇದನೆಯ ದುರಾನಿ, ಪಾಕಿಸ್ತಾನ ಸೇನೆಯ ಅಪರೂಪದ ಮೇಜರ್ ಜನರಲ್‌ ಆಗಿದ್ದರು. ಪಾಕಿಸ್ತಾನದ ಟೆಲಿವಿಷನ್‌ಗಳ ಚರ್ಚೆಗಳಲ್ಲಿ ಭಾಗವಹಿಸುವ ಟೀಕಾಕಾರರು ಇವರನ್ನು ‘ಜನರಲ್‌ ಶಾಂತಿ’ ಎಂದೇ ತಿರಸ್ಕಾರದಿಂದ ಕಾಣುತ್ತಿದ್ದರು.

  2008ರಲ್ಲಿ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ನೇಮಕಗೊಂಡಿದ್ದ ದುರಾನಿ ಅವರು ‘ಮುಂಬೈ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಸೆರೆಸಿಕ್ಕಿದ್ದ ಕಸಬ್‌ ಪಾಕಿಸ್ತಾನದ ಪ್ರಜೆಯಾಗಿದ್ದಾನೆ’ ಎಂದು ಒಪ್ಪಿಕೊಂಡು ಪ್ರಾಮಾಣಿಕತೆ ಮೆರೆದಿದ್ದರು. ಜತೆಗೆ ನೈತಿಕ ಧೈರ್ಯವನ್ನೂ ತೋರಿದ್ದರು. ಈ ವಾಸ್ತವ ಸಂಗತಿಯನ್ನು ಅಲ್ಲಗಳೆಯಲು ಸಾಧ್ಯವೇ ಇದ್ದಿರಲಿಲ್ಲ. ಸತ್ಯ ನುಡಿದದ್ದು ಅವರ ಹುದ್ದೆಗೇ ಎರವಾಯಿತು.

  ದುರಾನಿ ಅವರು ಪಾಕಿಸ್ತಾನದ ದೇಶಭಕ್ತರಾಗಿದ್ದರು. ದೃಢ ಚಿತ್ತದ ಸೈನಿಕನಾಗಿಯೂ ಕಾರ್ಯನಿರ್ವಹಿಸಿದ್ದರು. ಅವರ ಪಾಕಿಸ್ತಾನ ನಿಷ್ಠೆ ಬಗ್ಗೆ ಯಾರೊಬ್ಬರೂ ಅನುಮಾನ ಪಡಲು ಸಾಧ್ಯವೇ ಇದ್ದಿರಲಿಲ್ಲ. ಸಿಯಾಲ್‌ಕೋಟ್‌ ಸೆಕ್ಟರ್‌ನಲ್ಲಿ ಅವರು ಟ್ಯಾಂಕ್‌ ಪಡೆಯ ಯುವ ಕಮಾಂಡರನಾಗಿ ಭಾರತದ ವಿರುದ್ಧ ಸೆಣಸಿದ್ದರು. ಫಿಲೋರಾ ಮತ್ತು ಚವಿಂಡಾ ಪ್ರದೇಶದಲ್ಲಿ ಭಾರತದ ಸಶಸ್ತ್ರ ಪಡೆಯ ಸೈನಿಕರು ಮುನ್ನಡೆ ಸಾಧಿಸಿದ್ದಾಗ ಇವರು ನಿಷ್ಕರುಣೆಯಿಂದ ತಮ್ಮ ಪಡೆಗಳನ್ನು ಮುನ್ನಡೆಸಿದ್ದರು. ಇಟಲಿಯಲ್ಲಿ ನಡೆದಿದ್ದ ಬಲುಸಾ ಸಭೆಯಲ್ಲಿ ಭಾಗಿಯಾಗಿದ್ದ ದುರಾನಿ ಅವರು, ನನ್ನ ಜತೆಗಿನ ಮಾತುಕತೆಯಲ್ಲಿ 1965ರ ಯುದ್ಧದ ತಮ್ಮ ಸಾಧನೆಗಳನ್ನು ಹೇಳಿಕೊಂಡಿದ್ದರು.

  ಥಟ್ಟನೆ ನುಗ್ಗಿ ದಾಳಿ ನಡೆಸುವ ರಣತಂತ್ರ ರೂಪಿಸಿ ಕಾರ್ಯಗತಗೊಳಿಸುವ ವಿಷಯದಲ್ಲಿ ಭಾರತ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥರು ವಿಫಲಗೊಂಡಿದ್ದರು. ಒಂದು ಘಟನೆಯಲ್ಲಿ ಮಾತ್ರ ಹೀಗಾಗಿರಲಿಲ್ಲ. ಭಾರತದ ಲೆಫ್ಟಿನೆಂಟ್‌ ಕರ್ನಲ್‌ ಎ.ಬಿ. ತಾರಾಪೋರೆ ಅವರು ಮಾತ್ರ ತಮ್ಮ ರೆಜಿಮೆಂಟ್‌ ಅನ್ನು ಮುನ್ನಡೆಸುವಲ್ಲಿ ಹಠಾತ್‌ ಕಾರ್ಯಾಚರಣೆ ನಡೆಸಿದ್ದರು ಎಂದು ದುರಾನಿ ಹೇಳಿಕೊಂಡಿದ್ದರು. ಈ ಕಾರ್ಯಾಚರಣೆ ವೇಳೆಯಲ್ಲಿ ತಾರಾಪೋರೆ ಅವರು ಗುಂಡಿನ ದಾಳಿಗೆ ಬಲಿಯಾಗಿದ್ದರು. ಯುದ್ಧದಲ್ಲಿ ತೋರಿದ ಪರಾಕ್ರಮಕ್ಕೆ ಅವರಿಗೆ ಎರಡು ಬಾರಿ ಪರಮ ವೀರ ಚಕ್ರ ಪ್ರಶಸ್ತಿ ಘೋಷಿಸಲಾಗಿತ್ತು.

  ಪಾಕಿಸ್ತಾನ ಜತೆಗಿನ ಸಂಧಾನ ಮಾತುಕತೆಗಳು 1987–88ರಲ್ಲಿಯೂ ಎರಡು ಬಾರಿ ಮುರಿದು ಬಿದ್ದಿದ್ದವು. 1986–87ರಲ್ಲಿ ರಾಜಸ್ಥಾನದಲ್ಲಿ ಭಾರತದ ಸೇನೆ ಸಮರಾಭ್ಯಾಸ ನಡೆಸಿತ್ತು. ಇದಕ್ಕೆ ‘ಬ್ರಾಸ್‌ಸ್ಟ್ಯಾಕ್ಸ್‌’ ಎಂದು ಹೆಸರಿಡಲಾಗಿತ್ತು. ಪಾಕಿಸ್ತಾನವು ಇದೊಂದು ಭಾರತದ ಯುದ್ಧದ ಸಿದ್ಧತೆ ಎಂದೇ ಶಂಕಿಸಿತ್ತು. 1988ರಲ್ಲಿ ಗಡಿಯಲ್ಲಿ ಶಾಂತಿ ನೆಲೆಸಿದ್ದಾಗಲೂ ಈ ಶಾಂತಿ ಮಾತುಕತೆ ಫಲಪ್ರದವಾಗಿರಲಿಲ್ಲ.

  ಸಿಯಾಚಿನ್‌ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಎರಡೂ ಕಡೆಯವರು ಸಮ್ಮತಿಸಿದ್ದರು. ರಾಜತಾಂತ್ರಿಕ ಪ್ರಯತ್ನಗಳು ಮತ್ತು ಬೇಹುಗಾರಿಕೆಯ ಸಂಪರ್ಕಗಳು ಫಲ ನೀಡಿದ್ದರಿಂದ ಇದು ಸಾಧ್ಯವಾಗಿತ್ತು. ಆದರೆ, ಅಧಿಕೃತವಾಗಿ ಯಾರೊಬ್ಬರೂ ಇದನ್ನು ಖಚಿತಪಡಿಸಿರಲಿಲ್ಲ. ಹಿಂಬಾಗಿಲ ಮೂಲಕ ನಡೆದಿದ್ದ ಸಂಧಾನ ಮಾತುಕತೆಗಳು ಯುದ್ಧದ ಪರಿಸ್ಥಿತಿಯನ್ನು ಶಾಂತಿ ಎಡೆಗೆ ನಾಟಕೀಯವಾಗಿ ಬದಲಿಸುವಲ್ಲಿ ಸಫಲವಾಗಿದ್ದವು. ಆದರೆ, ನಂತರದ ದಿನಗಳಲ್ಲಿ ಈ ಪರಿಸ್ಥಿತಿಯಲ್ಲಿ ಮತ್ತೆ ಯಥಾಸ್ಥಿತಿಯೇ ಕಂಡು ಬಂದಿತ್ತು.

  ಆ ಸಂದರ್ಭದಲ್ಲಿ ವರ್ಮಾ ಅವರು ನೀಡಿದ್ದ ಸಲಹೆಯನ್ನು ನಾನೂ ಒಪ್ಪಿಕೊಳ್ಳುವೆ. ಜಿಯಾ ಉಲ್ ಹಕ್‌ ಅವರು ಭಾರತದ ಬಗ್ಗೆ ಮೃದು ಧೋರಣೆ ತಳೆದಿರುವುದು ಪಾಕಿಸ್ತಾನದ ಸೇನೆಯಲ್ಲಿನ ಕೆಲವರಿಗೆ ಇಷ್ಟವಾಗಿರಲಿಲ್ಲ. ಶಾಂತಿಯ ಪ್ರತಿಪಾದಕರಂತೆ ಕಂಡುಬಂದಿದ್ದ ಐಎಸ್‌ಐ ಮುಖ್ಯಸ್ಥರಾಗಿದ್ದ ಲೆಫ್ಟಿನೆಂಟ್‌ ಜನರಲ್‌ ಹಮೀದ್‌ ಗುಲ್‌ ಅವರು ಕೂಡ ಈ ಸಂಧಾನ ಮಾತುಕತೆ ಮುರಿದುಬೀಳುವ ಸಂಚಿನ ಭಾಗವಾಗಿದ್ದರು ಎಂಬುದು ನನ್ನ ನಂಬಿಕೆಯಾಗಿದೆ.

  ಗುಲ್‌ ಅವರು ಐಎಸ್‌ಐ ಮುಖ್ಯಸ್ಥರಾಗಿದ್ದ ಅವಧಿಯಲ್ಲಿಯೇ ಪಾಕಿಸ್ತಾನದ ಅಧ್ಯಕ್ಷ ಮತ್ತು ಸೇನಾ ಸರ್ವಾಧಿಕಾರಿದ್ದ ಜಿಯಾ ಉಲ್‌ ಹಕ್‌ ಅವರು ವಿಮಾನ ಅಪಘಾತದಲ್ಲಿ ಮೃತಪಡುತ್ತಾರೆ. ಈ ಘಟನೆ ನಡೆದ ನಂತರವೂ ಗುಲ್‌ ಅವರು ಒಂದು ವರ್ಷದವರೆಗೆ ಅದೇ ಹುದ್ದೆಯಲ್ಲಿ ಮುಂದುವರೆಯುತ್ತಾರೆ. ಬೆನಜೀರ್ ಭುಟ್ಟೊ, ಅವರನ್ನು ಈ ಹುದ್ದೆಯಿಂದ ತೆರವುಗೊಳಿಸುತ್ತಾರೆ. ಅವರನ್ನು ಪದಚ್ಯುತಗೊಳಿಸದೆ, ಮುಲ್ತಾನ್‌ನಲ್ಲಿನ ಪ್ರಮುಖ ಸೇನಾಪಡೆಯ ಕಮಾಂಡರ್‌ರಾಗಿ ನೇಮಿಸುತ್ತಾರೆ.

  ಸರ್ಕಾರದ ಪ್ರತಿನಿಧಿಗಳು ಇಲ್ಲದ ಅನೌಪಚಾರಿಕ ಸಂಧಾನ ಮಾತುಕತೆ ಸಂದರ್ಭದಲ್ಲಿ ನಾನು ಮೊದಲ ಬಾರಿಗೆ ಅಸದ್‌ ದುರಾನಿ ಅವರನ್ನು ಭೇಟಿಯಾಗಿದ್ದೆ. ಮಾರಿಷಸ್‌ನ ಮಾಲಿ ಬಳಿಯ ರೆಸಾರ್ಟ್‌ನಲ್ಲಿ ಆಯೋಜಿಸಲಾಗಿದ್ದ ಭಾರತ ಮತ್ತು ಪಾಕಿಸ್ತಾನ ಸಮ್ಮೇಳನದಲ್ಲಿ ಈ ಭೇಟಿ ನಡೆದಿತ್ತು. ಲಂಡನ್ನಿನ ಪ್ರತಿಷ್ಠಿತ ಇಂಟರ್‌ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಟ್ರಾಟಜಿಕ್‌ ಸ್ಟಡೀಸ್‌, 1998ರ ಚಳಿಗಾಲದಲ್ಲಿ ಈ ಸಮ್ಮೇಳನ ಆಯೋಜಿಸಿತ್ತು. ಅಟಲ್‌ ಬಿಹಾರಿ ವಾಜಪೇಯಿ ಮತ್ತು ನವಾಜ್‌ ಷರೀಫ್‌ ಅವರ ನೇತೃತ್ವದಲ್ಲಿ ಎರಡೂ ದೇಶಗಳ ಮಧ್ಯೆ ಶಾಂತಿ ನೆಲೆಸಲು ವೇದಿಕೆ ಸಿದ್ಧಗೊಂಡಿತ್ತು. ಸಮ್ಮೇಳನದಲ್ಲಿ ಭಾರತದ ಬಣದಲ್ಲಿ ಸಂಬಂಧ ಸುಧಾರಣೆ ನಿಟ್ಟಿನಲ್ಲಿ ಹೆಚ್ಚಿನ ಉತ್ಸಾಹ ಕಂಡುಬಂದಿರಲಿಲ್ಲ. ಭಾರತದ ನಿಲುವಿನಲ್ಲಿ ನಾಟಕೀಯ ಬದಲಾವಣೆ ಗೋಚರಿಸಿತ್ತು. ದುರಾನಿ ಅವರು ಈ ಬದಲಾದ ನಿಲುವಿಗೆ ಅಚ್ಚರಿ ವ್ಯಕ್ತಪಡಿಸಿದ್ದರು. ಕಾಶ್ಮೀರದಲ್ಲಿ ಬಹುತೇಕ ಸಾಮಾನ್ಯ ಪರಿಸ್ಥಿತಿ ನೆಲೆಸಿರುವುದೇ ಇದಕ್ಕೆ ಕಾರಣ ಇದ್ದೀತು ಎಂದು ನಾನು ಹೇಳಿದ್ದೆ. ಈ ಮಾತು ಕೇಳುತ್ತಿದ್ದಂತೆ ಜನರಲ್‌ ದುರಾನಿ ತಮ್ಮ ಹುಬ್ಬು ಗಂಟಿಕ್ಕಿ ನನ್ನತ್ತ ತೀಕ್ಷ್ಣ ನೋಟ ಬೀರಿದ್ದರು. ‘ಯಾವುದೇ ಸಮಯದಲ್ಲಾದರೂ ಆ ಸಹಜ ಸ್ಥಿತಿಯನ್ನು ಬದಲಿಸಬಹುದು’ ಎಂದು ಹೇಳಿದ್ದರು.

  ಈ ಸಮಾವೇಶ ನಡೆದ ಆರು ತಿಂಗಳಿಗೆ ಸರಿಯಾಗಿ ಪಾಕಿಸ್ತಾನದ ಸೇನೆಯು ಕಾರ್ಗಿಲ್‌ನಲ್ಲಿ ಭಾರತದ ಗಡಿ ಒಳಗೆ ಅಕ್ರಮವಾಗಿ ನುಗ್ಗಿತ್ತು. ಇಂದಿಗೆ ಸರಿಯಾಗಿ 19 ವರ್ಷಗಳ ಹಿಂದೆ ಭಾರತ ಮತ್ತು ಪಾಕಿಸ್ತಾನದ ಸೇನೆಗಳು ಕಾರ್ಗಿಲ್‌ನಲ್ಲಿ ಹೋರಾಟ ನಡೆಸಿದ್ದವು. ಇದಾಗಿ ಐದು ವರ್ಷಗಳ ನಂತರ ದುರಾನಿ ಅವರು ಸೇವೆಯಿಂದ ನಿವೃತ್ತರಾಗಿದ್ದರು. ‘ಐಎಸ್‌ಐ’ನ ಮುಖ್ಯಸ್ಥರಾಗಿದ್ದರಿಂದ ದುರಾನಿ ಅವರು ಸದಾ ಕಾಲ ನೆನಪಿನಲ್ಲಿ ಉಳಿಯಲಿದ್ದಾರೆ.

  ಲೇಖಕ: ‘ದಿ ಪ್ರಿಂಟ್‌’ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ

  http://www.prajavani.net/news/article/2018/05/27/575372.html

  • Comments Off on ಶಾಂತಿದೂತರಾಗಿದ್ದ ಗೂಢಚಾರರು
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.