07:35 pm Tuesday, June 25, 2019
 • ಐತಿಹಾಸಿಕ ಪ್ರಮಾದವೊಂದಕ್ಕೆ ಈಗ ೭೦ ವರ್ಷ

  By admin - Tue May 22, 4:13 am

  • Comments Off on ಐತಿಹಾಸಿಕ ಪ್ರಮಾದವೊಂದಕ್ಕೆ ಈಗ ೭೦ ವರ್ಷ
  • 0 views

   

  ಐತಿಹಾಸಿಕ ಪ್ರಮಾದವೊಂದಕ್ಕೆ ಈಗ ೭೦ ವರ್ಷ!.
  ಇಸ್ರೇಲ್ ರಾಷ್ಟ್ರವು ತಾನು ಅಸ್ಥಿತ್ವಕ್ಕೆ ಬಂದ ಕ್ಷಣದಿಂದಲೂ ಪ್ಯಾಲೇಸ್ತೀನ್ ಮತ್ತು ಇತರ ನೆರೆಹೊರೆ ದೇಶಗಳ ಮೇಲೆ ಯುದ್ಧವನ್ನು ನಡೆಸುತ್ತಲೇ ಇದೆ.

  ಯುದ್ಧವನ್ನು ಮಾಡುತ್ತಲೇ ಅಸ್ಥಿತ್ವಕ್ಕೆ ಬಂದ ಇಸ್ರೇಲ್ ತನ್ನ ೭೦ನೇ ವಾರ್ಷಿಕೋತ್ಸವದ ಸನಿಹದಲ್ಲಿರುವಾಗಲೂ ಯುದ್ಧದ ಚಾಳಿಯನ್ನು ಮುಂದುವರೆಸಿದೆ. ಅರಬ್ ಪ್ರಪಂಚದಲ್ಲಿ ನಡೆಯುತ್ತಿರುವ ಕದನಗಳಲ್ಲಿ ಹಲವಾರು ವರ್ಷಗಳಿಂದ ಒಂದಲ್ಲ ಒಂದು ಬಣಕ್ಕೆ ಗುಟ್ಟಾಗಿ ಸಹಕಾರವನ್ನೀಯುತ್ತಾ ಅಥವಾ ಯಾವುದಾದರೊಂದು ದೇಶದ ವಿರುದ್ಧ ಗುಪ್ರ ಕಾರ್ಯಾಚರಣೆ ನಡೆಸುತ್ತಾ ಬಂದ ಇಸ್ರೇಲ್ ಇದೀಗ ಇರಾನ್ ವಿರುದ್ಧ ಪರೋಕ್ಷ ಯುದ್ಧವನ್ನೆ ಸಾರುತ್ತಿದೆ. ಸಿರಿಯಾದ ನೆಲದಲ್ಲಿ ಈಗ ನಡೆಯುತ್ತಿರುವ ಯುದ್ಧದಲ್ಲಿ ಎಲ್ಲ ಯುದ್ಧಕೋರರೂ ಸೇರಿಕೊಳ್ಳುತ್ತಿದ್ದಾರೆ. ಆದರೆ ಮೇ ತಿಂಗಳಲ್ಲಿ ಈ ಯುದ್ಧತೀವ್ರತೆಯಲ್ಲಿ ಆದ ಅಪಾಯಕಾರಿ ಹೆಚ್ಚಳವನ್ನು ಗಮನಿಸಿದರೆ ಅತ್ಯಂತ ಸನಿಹದಲ್ಲೇ ದೊಡ್ಡ ಮಟ್ಟದ ಯುದ್ಧವು ಸ್ಪೋಟವಾಗುವ ಸಾಧ್ಯತೆಗಳನ್ನು ನಿಚ್ಚಳವಾಗಿದೆ.

  ಯುದ್ಧ ತೀವ್ರತೆಯನ್ನು ಹೆಚ್ಚಿಸುವುದಕ್ಕೆ ಅಮೆರಿಕವೇ ಮೇ ೮ ರಂದು ಹಸಿರು ನಿಶಾನೆಯನ್ನು ತೋರಿಸಿತು. ಜನಾಂಗೀಯವಾದಿಗಳ ಮತ್ತು ಎಲ್ಲಾ ಬಗೆಯ ಯೆಹೂದಿ ದುರಭಿಮಾನಿಗಳ ನಿಕಟ ಸ್ನೇಹದಲ್ಲಿರುವ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಇಸ್ರೇಲಿನ ಯೆಹೂದಿ ಪ್ರಬುತ್ವವು ಬಹಳ ವರ್ಷಗಳಿಂದ ನಿರಂತರವಾಗಿ ಮಾಡುತ್ತಿದ್ದ ಆಗ್ರಹವೊಂದಕ್ಕೆ ಅಂದು ಒಪ್ಪಿಗೆ ನೀಡಿತು. ಅಂದು ಟ್ರಂಪ್ ಅವರು ತನ್ನ ಎಂದಿನ ಆತ್ಮರತಿ ಮತ್ತು ದುರಭಿಮಾನಗಳಿಂದ ಕೂಡಿದ ಭಾಷಣ ಮಾಡುತ್ತಾ ಇರಾನಿನ ಅಣುಶಕ್ತಿ ಸಂಶೋಧನಾ ಕಾರ್ಯಕ್ರಮಗಳ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿ ಅಮೆರಿಕವು ಮಾಡಿಕೊಂಡ ಒಪ್ಪಂದದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದರು.

  ಈ ಒಪ್ಪಂದಕ್ಕೆ ಇರಾನ್, ಅಮೆರಿಕ ಮತ್ತು ಇನ್ನಿತರ ಐದು ಪಾಲುದಾರ ರಾಷ್ಟ್ರಗಳು ಸುದೀರ್ಘ ಮಾತುಕತೆಗಳ ನಂತರ ೨೦೧೫ರಲ್ಲಿ ಸಹಿ ಮಾಡಿದ್ದವು. ಬಹಳಷ್ಟು ಪರಿಣಿತರು ಈ ಒಪ್ಪಂದವನ್ನು ಜಾರಿ ಮಾಡಬಲ್ಲ ವಿಶ್ವಾಸಾರ್ಹ ಪ್ರಕ್ರಿಯೆಗಳಿರುವ ಉತ್ತಮ ಒಪ್ಪಂದವೆಂದು ಪರಿಗಣಿಸಿದ್ದರು. ಇದಕ್ಕೂ ಮುನ್ನ ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದವು ಹೇರುವ ಕೆಲವು ಹೊಣೆಗಾರಿಕೆಗಳನ್ನು ಇರಾನ್ ಸ್ವಲ್ಪ ಮಟ್ಟಿಗೆ ಉಲ್ಲಂಘಿಸಿದ್ದರಿಂದ ಅದನ್ನು ಜಾಗತಿಕ ಸಮುದಾಯವು ದೂರವಿಟ್ಟಿತ್ತು. ಆದರೆ ಈ ಒಪ್ಪಂದದ ಮೂಲಕ ಅ ಬಹಿಷ್ಕಾರದಿಂದ ಹೊರಬರಲು ಇರಾನ್‌ಗೆ ಸಣ್ಣ ಅವಕಾಶವೊಂದು ದಕ್ಕುತ್ತಿತ್ತು. ಆದರೆ ಅದನ್ನು ಸಹ ಇಸ್ರೇಲ್ ತನ್ನ ಅಸ್ಥಿತ್ವಕೆ ಒದಗಿರುವ ಸಂಚಕಾರವೆಂದು ಬಗೆಯುತ್ತಿದೆ.

  ಇನ್ನು ತಾನು ತನ್ನ ದೇಶದಲ್ಲಿ ಜನತೆಯ ಇಡೀ ಇತಿಹಾಸ ಮತ್ತು ಜನಾಂಗೀಯ ಗುರುತಗಳನ್ನೇ ನಾಶಮಾಡುವ ಉದ್ದೇಶದೊಂದಿಗೆ ಮಾಡುತ್ತಿರುವ ಯುದ್ಧವನ್ನು ಸಹ ಇಸ್ರೇಲ್ ಹೊಸ ಹಂತಕ್ಕೆ ಕೊಂಡೊಯ್ದಿದೆ. ಅಮೆರಿಕವು ಇಸ್ರೇಲಿನಲ್ಲಿರುವ ತನ್ನ ರಾಯಭಾರ ಕಛೇರಿಯನ್ನು ಜೆರುಸಲೇಮ್‌ಗೆ ಸ್ತಳಾಂತರಿಸುವಾಗ ಅಸ್ಥಿತ್ವದಲ್ಲಿದ್ದ ಎಲ್ಲಾ ನಿರ್ಬಂಧಗನ್ನೂ ಸಡಿಲಿಸಲಾಯಿತು. ಈ ಮಹತ್ವದ ಸ್ಥಳಾಂತರವು ಇಸ್ರೇಲ್ ಅಸ್ಥಿತ್ವಕ್ಕೆ ಬಂದ ದಿನವಾದ ಮೇ ೧೪ರಂದು ನಡೆಯಲಿದೆ. ಆ ದಿನವನ್ನು ಪ್ಯಾಲೆಸ್ತೀನೀಯರು ನಕ್ಬಾ ಅಥವಾ ವಿನಾಶದ ದಿನವೆಂದು ಆಚರಿಸುತ್ತಾರೆ. ಇಸ್ರೇಲ್ ಆಕ್ರಮಿಸಿಕೊಂಡಿರುವ ನೆಲವನ್ನೂ ಮತ್ತು ವಿಶಾಲ ಬಯಲು ಬಂದೀಖಾನೆಯಂತಿರುವ ಗಾಜಾ ಪ್ರದೇಶವನ್ನು ಪ್ರತ್ಯೇಕಿಸಲು ಇಸ್ರೇಲ್ ಅಬೇಧ್ಯ ಕೋಟೆಯಂತಿರುವ ಒಂದು ತಡೆಗೋಡೆಯನ್ನು ನಿರ್ಮಿಸಿದೆ. ಮೇ ೧೪ರಂದು ತಡೆಗೋಡೆಯತ್ತ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳುವ ಮೂಲಕ ನಕ್ಬಾವನ್ನು ಆಚರಿಸಲು ಪ್ಯಾಲೆಸ್ತೀನಿಯರು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ.

  ಗಾಜಾದಲ್ಲಿ ವಾಸಿಸುತ್ತಿರುವ ಮೂರನೇ ಎರಡು ಭಾಗದಷ್ಟು ಜನರು ನಿರಾಶ್ರಿತರು. ಅವರಲ್ಲಿ ಹಲವರು ಪದೇಪದೇ ನಡೆಯುತ್ತಿದ್ದ ಇಸ್ರೇಲ್ ದಾಳಿಯಿಂದಾಗಿ ಹಲವಾರು ಬಾರಿ ತಾವಿದ್ದ ಸ್ಥಳಗಳಿಂದ ಸ್ಥಳಾಂತರಕ್ಕೊಳಗಾಗಿದ್ದವರು. ತಡೆಗೋಡೆಯತ್ತ ಅವರು ಯೋಜಿಸುತ್ತಿರುವ ಮೆರವಣಿಗೆಯು ತಮ್ಮ ತಾಯ್ನೆಲವನ್ನು ಮರಳಿ ಪಡೆದುಕೊಳ್ಳಲು ಪ್ಯಾಲೆಸ್ತೀನೀಯರು ಮಾಡುತ್ತಿರುವ ಬಲವಾದ ಪ್ರತಿಪಾದನೆಯಾಗಿದೆ. ಕಳೆದ ಆರು ವಾರಗಳಿಂದ ಪ್ರತಿ ಶುಕ್ರವಾರದ ನಮಾಜಿನ ನಂತರ ಪ್ಯಾಲೆಸ್ತೀನಿಯರು ನಡೆಸುತ್ತಿರುವ ಪ್ರತಿಭಟನೆಗಳಲ್ಲಿ ಈವರೆಗೆ ೫೧ ಜನರನ್ನು ಇಸ್ರೇಲ್ ಕೊಂದುಹಾಕಿದೆ. ಹ್ಯೂಮನ್ಸ್ ರೈಟ್ ವಾಚ್ ಸಂಸ್ಥೆಯು ಇದನ್ನು ಕಾನೂನು ಬಾಹಿರ ಹತ್ಯೆಯೆಂದು ಘೋಷಿಸಿದೆ. ಹೀಗಾಗಿ ಇವು ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ತನಿಖೆ ಮಾಡಲು ಯೋಗ್ಯವಾದ ಪ್ರಕರಣಗಳಾಗಿವೆ.

  ಈ ಪ್ರಕರಣಗಳ ಬಗ್ಗೆ ಪರಿಣಿತರು ಕೊಟ್ಟಿರುವ ತೀರ್ಮಾನಗಳು ಅಮೆರಿಕ ವ್ಯಕ್ತಪಡಿಸುತ್ತಿರುವ ನಿರ್ಲಕ್ಷ್ಯಕ್ಕೆ ತದ್ವಿರುದ್ಧವಾಗಿವೆ. ಗಾಜಾ ಪ್ರದೇಶದಲ್ಲಿ ಇಸ್ರೇಲ್ ಮಾಡುತ್ತಿರುವ ಕೊಲೆಗಳನ್ನು ಮತ್ತು ಮತ್ತು ಸಿರಿಯಾದಲ್ಲಿ ತೀವ್ರಗೊಳ್ಳುತ್ತಿರುವ ಯುದ್ಧವನ್ನು ಅಮೆರಿಕವು ಇಸ್ರೇಲಿಗೆ ತನ್ನ ಆತ್ಮ ರಕ್ಷಣೆ ಮಾಡಿಕೊಳ್ಳುವ ಹಕ್ಕಿದೆಗೀಂದು ಹೇಳುತ್ತಾ ಸಮರ್ಥಿಸಿಕೊಳ್ಳುತ್ತಿದೆ. ಇಸ್ರೇಲ್ ಅಸ್ಥಿತ್ವಕ್ಕೆ ಬಂದು ೭೦ ವರ್ಷ ತುಂಬುತ್ತಿರುವ ಈ ಹೊತ್ತಿನಲ್ಲಿ ಯಾವ ಬಗೆಯ ಜಾಗತಿಕ ವ್ಯವಸ್ಥೆಯಡಿ ಇಸ್ರೇಲ್‌ನ ಅತಿರೇಕಗಳು ನಡೆಯುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಜರೂರಾಗಿದೆ. ಜಾಗತಿಕವಾಗಿ ಸಮ್ಮತವಾಗಿರುವ ವರುಮಾನ್ಯತೆಯ ಹಕ್ಕನ್ನು ಪ್ರತಿಪಾದಿಸುತ್ತಿರುವ ನಿರಾಯುಧರ ಮೆರವಣಿಗೆಯ ಮೇಲೆ ಆತ್ಮರಕ್ಷಣೆಯ ಹೆಸರಿನಲ್ಲಿ ಗುಂಡಿನಮಳೆಗೆರೆದು ಕೊಂದುಹಾಕುವ ಮತ್ತು ತನ್ನ ಕೊನೆಯಿಲ್ಲದ ಅಸ್ಥಿತ್ವದ ಆತಂಕಗಳನ್ನು ನೀಗಿಸಿಕೊಳ್ಳಲು ನೆರೆಹೊರೆ ದೇಶಗಳ ಮೇಲೆ ಯಾವುದೇ ಎಗ್ಗಿಲ್ಲದೆ ದಾಳಿ ಮಾಡುವ ಪ್ರಭುತ್ವವೊಂದರ ನಿಜ ಸ್ವರೂಪವೇನಿದ್ದಿರಬಹುದು?

  ಇಸ್ರೇಲಿನ ರಾಜಕೀಯ ರಂಗದ ಕೆಲವು ಧಾರೆಗಳು ಈ ಪ್ರಶ್ನೆಗೆ ಸ್ಪಷ್ಟವಾದ ಉತ್ತರಗಳನ್ನು ನೀಡುತ್ತಿವೆ. ಕಳೆದ ವರ್ಷದ ಮಧ್ಯಭಾಗದಲ್ಲಿ ಇದ್ದಕ್ಕಿದ್ದಂತೆ ರಾಜಕೀಯ ರಂಗಕ್ಕೆ ಮರಳಿದ ಇಸ್ರೇಲಿನ ಮಾಜಿ ಪ್ರಧಾನಿ ಯೆಹೂದ್ ಬರಾಕ್ ಅವರು ಇಸ್ರೇಲ್ ಒಂದು ವರ್ಣಬೇಧವನ್ನು ಆಚರಿಸುವ ರಾಷ್ಟ್ರವಾಗುವೆಡೆ ಶೀಘ್ರವಾಗಿ ಜಾರುತ್ತಿದೆ ಎಂಬ ಎಚ್ಚರಿಕೆಯನ್ನು ನೀಡಿದರು. ಅವರ ಎಚ್ಚರಿಕೆಯಲ್ಲಿ ಹುರುಳಿತ್ತು. ಏಕೆಂದರೆ ೨೦೦೩ರಲ್ಲೇ ಇಸ್ರೇಲಿನ ಕುಲೀನ ವರ್ತುಲಗಳ ಸದಸ್ಯನಾಗಿದ್ದ ಮತ್ತು ಇಸ್ರೇಲಿನ ಶಾಸನ ಸಭೆಯ ಮಾಜಿ ಸಭಾಪತಿಯೂ ಆಗಿದ್ದ ಅಬ್ರಹಾಮ್ ಬರ್ಗ್ ಅವರು ವರ್ಣಬೇಧ ವ್ಯವಸ್ಥೆಯು ದೇಶದ ಭವಿಷ್ಯದ ಸಾಧ್ಯತೆಯಲ್ಲ ಬದಲಿಗೆ ಈಗಾಗಲೇ ಜಾರಿಯಲ್ಲಿರುವ ವ್ಯವಸ್ಥೆಯಾಗಿಬಿಟ್ಟಿದೆ ಎಂದು ಎಚ್ಚರಿಸಿದ್ದರು.

  ಯೆಹೂದಿ ದುರಭಿಮಾನಿ ಪ್ರಭುತ್ವವು ಸ್ಥಾಪಿತವಾದಾಗಿನಿಂದಲೂ ಇಸ್ರೇಲಿನ ರಾಜಕೀಯ ಪರಿಭಾಷೆಯಲ್ಲಿ ಜನಸಂಖ್ಯಾ ಸ್ವರೂಪದ ಸಮಸ್ಯೆ ಎಂದು ಕರೆಸಿಕೊಳ್ಳಲ್ಪಡುವ ವಿದ್ಯಮಾನದ ಬಗ್ಗೆ ಅತಿಯಾದ ಆತಂಕವಿದೆ. ಹೀಗಾಗಿ ಪ್ಯಾಲೇಸ್ತೀನೀ ಭೂಪ್ರದೇಶಗಳನ್ನು ಯೆಹೂದಿಗಳ ಒಡೆತನಕ್ಕೆ ತಂದುಕೊಳ್ಳುವ ಸಲುವಾಗಿ ದೊಡ್ಡ ಸಂಖ್ಯೆಯಲ್ಲಿ ಆ ಪ್ರದೇಶಗಳಲ್ಲಿ ಯೆಹೂದಿಗಳು ನೆಲೆಗೊಳ್ಳುವಂತೆ ಮಾಡುವುದು ಇಸ್ರೇಲಿ ವ್ಯೂಹತಂತ್ರದ ಮುಖ್ಯ ಭಾಗವಾಗಿದೆ. ಆದರೆ ಈ ತಂತ್ರವು ಒಂದು ಹಂತದ ನಂತರ ಅಷ್ಟಾಗಿ ಪ್ರಾಯೋಗಿಕವಲ್ಲ ಎಂದು ಅರಿವಾದ ಮೇಲೆ ಏಕಪಕ್ಷೀಯವಾಗಿ ಯೆಹೂದಿಯೇತರ ಪ್ರದೇಶಗಳನ್ನು ಪ್ರತ್ಯೇಕಗೊಳಿಸುವ ಯೋಜನೆ ಪ್ರಾರಂಭವಾಯಿತು. ೨೦೦೦ನೇ ಇಸವಿಯಲ್ಲ್ಲಿ ಬರಾಕ್ ಅವರು ಮುಂದಿಟ್ಟ ನಯವಂಚನೆಯ ಶಾಂತಿ ಒಪ್ಪಂದವು ಮುರಿದುಬೀಳುವುದರ ಜೊತೆಗೆ ದ್ವಿ ರಾಷ್ಟ್ರ ಪರಿಹಾರದ ಚರ್ಚೆಗಳೂ ಕೊನೆಗೊಂಡವು. ಆದರೂ ಈ ಜನಸಂಖ್ಯಾ ಸ್ವರೂಪದ ಸಮಸ್ಯೆಯ ಮುಜುಗರವನ್ನು ತಪ್ಪಿಸಿಕೊಳ್ಳಲು ಈ ಚರ್ಚೆಯನ್ನು ಆಗಾಗ ಹರಿಬಿಡಲಾಗುತ್ತದೆ.

  ಶಾಂತಿ ಮಾತುಕತೆಯ ಪ್ರಕ್ರಿಯೆಯನ್ನು ಮುಂದುವರೆಸಿಕೊಂಡು ಹೋಗುವ ಕೊನೆಯ ಪ್ರಯತ್ನವಾಗಿ ೨೦೦೮ರಲ್ಲಿ ಅಮೆರಿಕದ ಅಂದಿನ ಅಧ್ಯಕ್ಷ ಜಾರ್ಜ್ ಬುಷ್ ಅವರು ಅಮೆರಿಕದ ಅನಾಪೊಲಿಸ್‌ನಲ್ಲಿ ಒಂದು ದ್ವಿಪಕ್ಷೀಯ ಮಾತುಕತೆಯನ್ನು ಏರ್ಪಡಿಸಿದ್ದರು. ಆಗ ಇಸ್ರೇಲ್ ಸುದೀರ್ಘ ಕಾಲದ ಬಲಪಂಥೀಯರ ಅಧಿಪತ್ಯದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿತ್ತು. ಆದರೆ ಆ ಗುಪ್ತ ಮಾತುಕತೆಯಲ್ಲಿ ಇಸ್ರೇಲಿನ ಪರವಾಗಿ ಭಾಗವಹಿಸಿದ್ದ ಅತ್ಯಂತ ವ್ಯವಹಾರಿಕ ಪ್ರಜ್ನೆಯುಳ್ಳವರೆಂದು ಹೆಸರು ಪಡೆದಿದ್ದ ಆ ದೇಶದ ವಿದೇಶಾಂಗ ಮಂತ್ರಿಯು ಹಾಲೀ ಮಾತುಕತೆಯು ನಡೆಯಬೇಕೆಂದರೆ ಪ್ಯಾಲೆಸ್ತೀನಿಯರು ಇಸ್ರೇಲನ್ನು ಒಂದು ಶಾಶ್ವತ ಯೆಹೂದಿ ಪ್ರಭುತ್ವವೆಂದು ಒಪ್ಪಿಕೊಳ್ಳುವುದು ಪೂರ್ವಶರತ್ತೆಂದು ಹಠ ಹಿಡಿದರು. ಅದರ ಅರ್ಥ ಇಸ್ರೇಲ್ ಆಕ್ರಮಿತ ಪ್ರದೇಶದಿಂದ ಹೊರದೂಡಲ್ಪಟ್ಟ ಪ್ಯಾಲೆಸ್ತೀನ್ ನಿರಾಶ್ರಿತರು ವಾಪಸ್ ತಮ್ಮ ಮನೆಗೆ ಮರಳುವ ಪ್ರಶ್ನೆಯೇ ಶಾಶ್ವತವಾಗಿ ಇಲ್ಲವಾಗುವಂತೆ ಮಾಡುವುದು ಮತ್ತು ಇಸ್ರೇಲ್ ಭೂಭಾಗದೊಳಗಿರುವ ಪ್ಯಲೇಸ್ತೀನ್ ಅಲ್ಪಸಂಖ್ಯಾತರ ನಾಗರಿಕತ್ವದ ಸ್ಥಾನಮಾನ ಅತಂತ್ರಗೊಳಿಸುವುದೇ ಆಗಿತ್ತು. ಪ್ಯಾಲೇಸ್ತೀನೀಯರ ಮಟ್ಟಿಗೆ ಇದು ಸಾಮೂಹಿಕ ಆತ್ಮಹತ್ಯೆಗೆ ನೀಡಿದ ಆಹ್ವಾನದಂತಿತ್ತು. ಅಮೆರಿಕದ ಅಂದಿನ ವಿದೇಶಾಂಗ ಕಾರ್ಯದರ್ಶಿ ಕಾಂಡೊಲಿಸಾ ರೈಸ್ ಅವರೇ ಇಸ್ರೇಲಿ ಪ್ರಭುತ್ವದ ಜನಂಗೀಯ ಪರಿಶುದ್ಧತೆಯ ಪ್ರತಿಪಾದನೆಯನ್ನು ಕಂಡು ಅವಾಕ್ಕಾಗಿದ್ದರು. ಆದರೆ ಅದು ಕ್ಷಣ ಮಾತ್ರದ ಮೈಮರೆವು ಮಾತ್ರವಾಗಿತ್ತು. ಕೂಡಲೇ ಸಾವರಿಸಿಕೊಂಡ ರೈಸ್ ಅವರು ಅಮರಿಕದ ವ್ಯೂಹಾತ್ಮಕ ನೀತಿಯಾದ ಇಸ್ರೇಲ್ ಮೊದಲು ನೀತಿಗೆ ಶರಣಾಗಿ ಇಸ್ರೇಲಿಗೆ ತಮ್ಮ ಅಚಲ ನಿಷ್ಟೆಯನ್ನು ಪ್ರದರ್ಶನ ಮಾಡಿದರು.

  ಒಬಾಮ ಆಡಳಿತದಡಿಯಲ್ಲಿ ಪ್ಯಾಲೇಸ್ತೀನಿಯರಿಗೆ ಸೈದ್ಧಾಂತಿಕವಾಗಿ ಒಂದಷ್ಟು ಮೇಲುಗೈ ಸಿಕ್ಕಿದ್ದಿರಬಹುದು. ಆದರೆ ಟ್ರಂಪ್ ಆಡಳಿತ ಇಸ್ರೇಲಿನ ಜನಾಂಗೀಯವಾದಿ ದಮನಕಾರಿ ಪ್ರಭುತ್ವಕೆ ಬೇಶರತ್ ಸಹಕರಿಸುವ ನೀತಿಗೆ ಸಂಪೂರ್ಣವಾಗಿ ಮರಳುವ ಸೂಚನೆಗಳನ್ನು ನೀಡಿದೆ. ಹೀಗೆ ಇಸ್ರೇಲ್ ಮತ್ತೊಮ್ಮೆ ತನ್ನ ನೆರೆಹೊರೆ ದೇಶಗಳ ಸ್ಪೋಟಕ ರಾಜಕೀಯ ಸಂದರ್ಭಕ್ಕೆ ಬೆಂಕಿ ಇಕ್ಕುವ ಪ್ರಯತ್ನ ನಡೆಸುತ್ತಿದೆ. ಈಗಲಾದರೂ ಅದರ ಆಘಾತಕಾರಿ ಪರಿಣಾಮಗಳನ್ನು ಜಗತ್ತು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ.

  ಈ ಎಲ್ಲಾ ಕಾರಣಗಳಿಂದಾಗಿಯೇ ಅತ್ಯಂತ ಪುರಸ್ಕೃತ ನಾಟಕಕಾರ ಟೋನಿ ಕೃಶ್ನರ್ ಅವರು ಇಸ್ರೇಲನ್ನು ಒಂದು ಐತಿಹಾಸಿಕ ಪ್ರಮಾದವೆಂದು ತೀರ್ಮಾನಿಸಿದ್ದರು. ಇದರ ಒಳಾರ್ಥಗಳನ್ನು ಈಗಲಾದರೂ ಅರ್ಥಮಾಡಿಕೊಳ್ಳಬೇಕು.

  ಕೃಪೆ: Economic and Political Weekly May 12, 2018. Vol. 53. No.19
  ಅನು: ಶಿವಸುಂದರ್
  (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )

  • Comments Off on ಐತಿಹಾಸಿಕ ಪ್ರಮಾದವೊಂದಕ್ಕೆ ಈಗ ೭೦ ವರ್ಷ
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.