07:14 pm Tuesday, June 25, 2019
 • ಶಾಲಾ ಶಿಕ್ಷಣದ ಮರುಪರೀಕ್ಷೆಯಾಗಬೇಕಿದೆ

  By admin - Thu Apr 12, 3:30 pm

  • Comments Off on ಶಾಲಾ ಶಿಕ್ಷಣದ ಮರುಪರೀಕ್ಷೆಯಾಗಬೇಕಿದೆ
  • 0 views

  ಶಾಲಾ ಶಿಕ್ಷಣದ ಮರುಪರೀಕ್ಷೆಯಾಗಬೇಕಿದೆ
  ವಿದ್ಯಾರ್ಥಿಗಳ ಕಲಿಕೆಯ ಮೌಲ್ಯಮಾಪನದಲ್ಲಿ ಪರೀಕ್ಷೆಗಳು ಒಂದು ಸಣ್ಣ ಭಾಗವಷ್ಟೇ ಆಗಿರಬೇಕು.
  ಸಿಬಿಎಸ್‌ಇ (ಸೆಂಟ್ರಲ್ ಬೋರ್ಡ್ ಆಫ್ ಸ್ಕೂಲ್ ಎಜುಕೇಷನ್) ಯು ಇತ್ತೀಚೆಗೆ ನಡೆಸಿದ ಪರೀಕ್ಷೆಗಳಲ್ಲಿ ೧೦ನೇ ತರಗತಿಯ ಗಣಿತದ ಪ್ರಶ್ನೆಪತ್ರಿಕೆ ಮತ್ತು ೧೨ನೇ ತರಗತಿಯ ಅರ್ಥಶಾಸ್ತ್ರದ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದೆಯೆಂಬ ಆರೋಪವು ಕಳವಳ ಹುಟ್ಟಿಸುವ ಸಂಗತಿಯಾಗಿದೆ. ಒಂದೆಡೆ, ಇಂಥಾ ಘಟನೆಗಳು, ಲಕ್ಷಾಂತರ ವಿದ್ಯಾರ್ಥಿಗಳು ಮತ್ತವರ ಕುಟುಂಬದ ಮೇಲೆ ಪ್ರತಿಕೂಲ ಪ್ರಭಾವವನ್ನು ಉಂಟುಮಾಡಿದರೆ ಮತ್ತೊಂದೆಡೆ ವ್ಯವಸ್ಥೆಯಲ್ಲಿ ವ್ಯಾಪಕವಾಗಿ ಹರಡಿಕೊಂಡಿರುವ ಭ್ರಷ್ಟಾಚಾರ ಮತ್ತು ಅಕ್ರಮಗಳ ತೀವ್ರತೆಯನ್ನು ಬಯಲು ಮಾಡಿವೆ. ಸಿಬಿಎಸ್‌ಸಿ ಯು ತಾನು ಮಾನ್ಯತೆ ನೀಡಿರುವ ಎಲಾ ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ೧೦ ಮತ್ತು ೧೨ನೇ ತರಗತಿಗಳ ವಿದ್ಯಾರ್ಥಿಗಳ ಕಲಿಕೆಯ ಬಗ್ಗೆ ಮೌಲ್ಯಮಾಪನ ಮಾಡಲು ರಾಷ್ಟ್ರೀಯ ಮಟ್ಟದ ಪರೀಕ್ಷೆಗಳನ್ನು ನಡೆಸುತ್ತದೆ. ತಾನು ನಡೆಸುವ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಪರೀಕ್ಷೆಯ ದಿನ ವಿದ್ಯಾರ್ಥಿಗಳನ್ನು ತಲುಪುವ ತನಕ ಗೋಪ್ಯವಾಗಿಟ್ಟುಕೊಳ್ಳಬೇಕಾದ ತನ್ನ ಪ್ರಾಥಮಿಕ ಕರ್ತವ್ಯವನ್ನೂ ಸರಿಯಾಗಿ ಮಾಡದ ಈ ಸಂಸ್ಥೆಯ ಬೇಜವಾಬ್ದಾರಿಯು ಕಳೆದ ಕೆಲವು ವಾರಗಳಿಂದ ಸಾರ್ವಜನಿಕ ಪರಿಶೀಲನೆಗೊಳಪ್ಪಟಿದೆ.
  ಈ ಪರೀಕ್ಷೆಗಳು ಒಂದು ಔಪಚಾರಿಕ, ಸಾರ್ವತ್ರಿಕ, ಹಾಗೂ ಅಪಾರವಾದ ಪರಿಣಾಮಗಳುಳ್ಳ ಒಂದು ಅತಿ ದೊಡ್ಡ ವಿದ್ಯಮಾನವೇ ಆಗಿವೆ. ಏಕೆಂದರೆ ಅವು ವಿದ್ಯಾರ್ಥಿಗಳು ತಮ್ಮ ವ್ಯಾಸಂಗವನ್ನು ಮುಂದುವರೆಸಲು ಅಥವಾ ತಮಗೆ ಇಷ್ಟವಾದ ವಿಷಯಗಳ ಬಗ್ಗೆ ಉನ್ನತ ಶಿಕ್ಷಣವನ್ನು ಪಡೆಯಲು ಅವಕಾಶ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನೇ ಪ್ರಭಾವಿಸುವಂಥ ಪರಿಣಾಮವನ್ನು ಹೊಂದಿವೆ. ಆದರೆ ಈ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಪಡೆದುಕೊಳ್ಳುವ ಅಂಕಗಳು ವಾಸ್ತವದಲ್ಲಿ ಅವರ ಅರ್ಹತೆ, ಸಾಮರ್ಥ್ಯ ಅಥವಾ ಅಭಿರುಚಿಗಳ ಬಗ್ಗೆ ಏನನ್ನೂ ಹೇಳುವುದಿಲ್ಲ. ಆದರೂ ಅವು ವಿದ್ಯಾರ್ಥಿಗಳ ಕಲಿಕೆಯ ಮೌಲ್ಯಮಾಪನ ನಡೆಸಿ, ಅಂಕಪ್ರಮಾಣ ನೀಡಿ, ಪ್ರಮಾಣ ಪತ್ರವನ್ನೂ ನೀಡುವುದರಿಂದ ಈ ಪರೀಕ್ಷೆಯೆಂಬ ವಿಧಿವಿಧಾನಗಳು ಜನರ ಕಣ್ಣಲ್ಲಿ ಇನ್ನಿಲ್ಲದ ಮಹತ್ವವನ್ನು ಪಡೆದುಕೊಂಡಿವೆ. ಉತ್ತಮ ಭವಿಷ್ಯವನ್ನು ಪಡೆಯಲು ಹಾತೊರೆಯುವ ವಿದ್ಯಾರ್ಥಿಗಳಿಂದ, ತಮ್ಮ ಮಕ್ಕಳ ಬಗ್ಗೆ ಹಾಗೂ ತಮ್ಮದೇ ಬದುಕಿನ ಯಥಾರ್ಥತೆಯ ಬಗ್ಗೆ ಕಳವಳಗೊಂಡಿರುವ ಪೋಷಕರಿಂದ, ತಮ್ಮ ಉತ್ತರದಾಯಿತ್ವದ ಬಗ್ಗೆ ಆತಂಕಿತರಾಗಿರುವ ಉಪಾಧ್ಯಾಯರುಗಳಿಂದ ಮತ್ತು ಹೆಚ್ಚೆಚ್ಚು ವಿದ್ಯಾರ್ಥಿಗಳನ್ನು ತಮ್ಮ ಶಾಲೆಯತ್ತ ಆಕರ್ಷಿಸುವ ಸಲುವಾಗಿ ಉತ್ತಮ ಫಲಿತಾಂಶಗಳನ್ನು ಪಡೆದುಕೊಳ್ಳಲೇ ಬೇಕೆಂಬ ತೀವ್ರ ಒತ್ತಡದಲ್ಲಿರುವ ಶಾಲೆಗಳಿಂದಾಗಿ ಈ ಪರೀಕ್ಷೆಗಳು ಅಪಾರ ಮಹತ್ವ ಡೆದುಕೊಳ್ಳುತ್ತವೆ. ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳ ಸುತ್ತ ಸೃಷ್ಟಿಗೊಂಡಿರುವ ಈ ಉನ್ಮಾದವು ಒಂದು ಉದ್ಯಮವನ್ನೇ ಹುಟ್ಟುಹಾಕಿದೆ. ಮತ್ತು ಪ್ರಶ್ನೆಪತ್ರಿಕೆಯ ಸೋರಿಕೆಯ ಪರಿಣಾಮವು ಶಾಲೆಗಳು, ಕೋಚಿಂಗ್ ಸೆಂಟರ್‌ಗಳು ಮತ್ತು ಸಿಬಿಎಸ್‌ಇ ಅಧಿಕಾರಿಗಳ ನಡುವೆ ಏರ್ಪಟ್ಟಿರುವ ಅಪಾಯಕಾರಿ ಮೈತ್ರಿಯನ್ನು ಬಯಲುಗೊಳಿಸಿದೆ.
  ಈ ವಿದ್ಯಮಾನದ ಬಗ್ಗೆ ಈವರೆಗೆ ನಡೆದಿರುವ ಚರ್ಚೆಗಳೆಲ್ಲಾ ಸೋರಿಕೆಯ ಹೊಣೆಗಾರಿಕೆಯನ್ನು ನಿಗದಿ ಮಾಡುವ ಸುತ್ತಾ, ತಪ್ಪಿತಸ್ತರ ಮೇಲೆ ಕ್ರಮಗಳನ್ನು ತೆಗೆದುಕೊಳ್ಳುವ ಸುತ್ತಾ, ಪ್ರಶ್ನೆಪತ್ರಿಕೆಗಳ ಗೋಪ್ಯತೆಯನ್ನು ಕಾಪಾಡಿಕೊಳ್ಳಲು ಬೇಕಾದ ಕಠಿಣ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದರ ಸುತ್ತಲೇ ಗಿರಕಿ ಹೊಡೆಯುತ್ತಿವೆ. ಸಿಬಿಎಸ್‌ಇ ಯ ನಿರ್ದೇಶಕರನ್ನೂ ಒಳಗೊಂಡಂತೆ ಉನ್ನತ ಅಧಿಕಾರಿಗಳ ರಾಜೀನಾಮೆಯನ್ನೂ ಮತ್ತು ಮಾನವ ಸಂಪನ್ಮೂಲ ಇಲಾಖೆಯ ಮಂತ್ರಿಯ ರಾಜೀನಾಮೆಯನ್ನೂ ಆಗ್ರಹಿಸಲಾಗುತ್ತಿದೆ. ಸೋರಿಕೆಯಾದ ಪತ್ರಿಕೆಗಳ ಮರುಪರೀಕ್ಷೆಯ ಬಗ್ಗೆ ದಾಖಲುಗೊಂಡ ಹಲವಾರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟು ಆ ಬಗ್ಗೆ ಸಿಬಿಎಸ್‌ಇ ಯೇ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಬೇಕೆಂದು ಸೂಚಿಸಿ ವಜಾ ಮಾಡಿದೆ. ಈ ಸೋರಿಕೆಯಿಂದ ಬಾಧೆsಗೊಳಗಾಗಿರುವ ವಿದ್ಯಾರ್ಥಿಗಳಿಗೆ ಸಿಬಿಎಸ್‌ಇ ಯು ಸೂಕ್ತ ಪರಿಹಾರವನ್ನು ಒದಗಿಸಬೇಕಲ್ಲದೆ, ಪ್ರಶ್ನೆಪತ್ರಿಕೆಯ ಸೋರಿಕೆಯಿಂದ ಹಾನಿಗೊಳಗಾಗಿರುವ ತನ್ನ ವಿಶ್ವಾಸಾರ್ಹತೆಯನ್ನು ಕೂಡ ಪುನರ್‌ಸ್ಥಾಪಿಸಿಕೊಳ್ಳಬೇಕಿದೆ. ಆದರೆ ಅದೇ ಸಮಯದಲ್ಲಿ ಈ ಅವಕಾಶವನ್ನು ಬಳಸಿಕೊಂಡು ತುಂಬಾ ಮೂಲಭೂತ ಪ್ರಶ್ನೆಯನ್ನೂ ಕೇಳಬೇಕಿದೆ: ವಾಸ್ತವದಲ್ಲಿ ಈ ಪರೀಕ್ಷೆಗಳು ಒಂದು ಉತ್ತಮ ಜೀವನ ನಡೆಸಲು ವಿದ್ಯಾರ್ಥಿಗಳಿಗೆ ಬೇಕಿರುವ ಅರ್ಹತೆಯನ್ನೇನೂ ಪ್ರತಿಫಲಿಸುವುದಿಲ್ಲ ಎಂದಾದಲ್ಲಿ ಈ ಪರೀಕ್ಷೆಗಳ ಬಗ್ಗೆ ಇಷ್ಟೊಂದು ಪ್ರಾಮುಖ್ಯತೆಯನ್ನೇಕೆ ನೀಡಬೇಕು?
  ಈ ಪರೀಕ್ಷಾ ಪದ್ಧತಿಯು ವಿದ್ಯಾರ್ಥಿಗಳಲ್ಲಿ ಒಂದು ವಿಮರ್ಶಾತ್ಮಕ ಕಲಿಕೆಯ ಸಂಸ್ಕೃತಿಯನ್ನು ಹುಟ್ಟುಹಾಕಲು ವಿಫಲವಾಗುತ್ತಿದೆಯೆಂಬ ವಿಮರ್ಶೆಗಳಿಗೆ ಗುರಿಯಾಗಿದೆ. ಹಾಗಿದ್ದರೂ, ಕಲಿಕೆಯೆಂದರೆ ನೆನಪಿನಲ್ಲಿಟ್ಟುಕೊಳ್ಳುವ ಸಾಮರ್ಥ್ಯವೆಂಬ, ಪಠ್ಯಪುಸ್ತಕಗಳೇ ಜ್ನಾನದ ಅಂತಿಮ ಮೂಲವೆಂಬ ಮತ್ತು ಪರೀಕ್ಷೆಗಳ ಫಲಿತಾಂಶಗಳು ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಶಕ್ತಿಯನ್ನು ಹೊಂದಿರುತ್ತವೆಂಬ ನಂಬಿಕೆಗಳಿಗೆ ಈಗಲೂ ಅದು ನೀರೆರೆಯುತ್ತಿವೆ.
  ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿರುವ ಈ ಆಳವಾದ ಲೋಪಗಳನ್ನು ಹಲವಾರು ಶಿಕ್ಷಣ ತಜ್ನರು ಮತ್ತು ಸರ್ಕಾರಿ ಸಮಿತಿಗಳು ಸ್ಪಷ್ಟವಾಗಿ ಗುರುತಿಸಿದ್ದಾರೆ. ಆದ್ದರಿಂದ ಈಗಿರುವ ಶಿಕ್ಷಣ ವ್ಯವಸ್ಥೆಗೆ ಪರ್ಯಾಯವಾದ ಶಿಕ್ಷಣ ದೃಷ್ಟಿಯೊಂದನ್ನು ಪ್ರತಿಪಾದಿಸುವ ಅಗತ್ಯವಿದೆ. ನಮ್ಮ ಶಿಕ್ಷಣ ವ್ಯವಸ್ಥೆಯು ತಾವು ಪಡೆದ ಜ್ನಾನವನ್ನು ಸ್ವಪರಿಶೀಲನೆ ಮಾಡಬಲ್ಲ, ಸಂವೇದನಾಶೀಲ ಮತ್ತು ಪ್ರಜ್ನಾವಂತ ಯುವಕ-ಯುವತಿಯರನ್ನು ಹುಟ್ಟುಹಾಕಬಲ್ಲ ಒಂದು ಪ್ರಜಾತಾಂತ್ರಿಕ ವಾತಾವರಣವನ್ನು ಕಲ್ಪಿಸಬೇಕೇ ವಿನಃ ಪರೀಕ್ಷೆಯನ್ನು ಮಾತ್ರ ಗೆದ್ದುಬರುವ ಯೋಧರನ್ನಲ್ಲ. ಇದು ಸಾಧ್ಯವಾಗಬೇಕೆಂದರೆ, ಈ ಪರೀಕ್ಷೆಗಳ ಸುತ್ತ ಹುಟ್ಟುಹಾಕಿರುವ ಮೌಲ್ಯಗಳನ್ನು ಮತ್ತು ಆಶಯಗಳನ್ನು ತೊಡೆದುಹಾಕಬೇಕು. ಮತ್ತು ಕಲಿಕೆ ಹಾಗೂ ಶಾಲೆಗಳ ಪಾತ್ರವನ್ನು ಪುನರ್ ನಿರ್ವಚನ ಮಾಡಬೇಕು.
  ಅದು ಸಾಧ್ಯವಾಗಬೇಕೆಂದರೆ, ಕಲಿಕೆ ಮತ್ತು ಮೌಲ್ಯಮಾಪನಗಳ ಸ್ವರೂಪ ಮತ್ತು ಉದ್ದೇಶಗಳನ್ನು ಇಂದು ಶಾಲೆಗಳು ಅರ್ಥಮಾಡಿಕೊಂಡಿರುವ ರೀತಿಗಳನ್ನೂ ಮತ್ತು ಇಂದಿನ ಔಪಚಾರಿಕ ಪಠ್ಯಗಳು ಮತ್ತು ಶೈಕ್ಷಣಿಕ ಚೌಕಟ್ಟಿನಲ್ಲಿ ಹುದುಗಿಹೋಗಿರುವ ಜ್ನಾನವನ್ನು ಅರ್ಥಮಾಡಿಕೊಳ್ಳುವಲ್ಲಿ ವಿದ್ಯಾರ್ಥಿ ಮತ್ತು ಉಪಾಧ್ಯಾಯರ ಪಾತ್ರಗಳನ್ನು ಮರುಪರೀಕ್ಷೆಗೆ ಒಡ್ಡಬೇಕಿದೆ. ಇಂದು ಶಾಲೆಗಳಲ್ಲಿ ಜ್ನಾನವನ್ನು ಕಟ್ಟಿಕೊಳ್ಳಲಾಗುತ್ತಿರುವ, ಪ್ರಮಾಣೀಕೃತವಾಗುತ್ತಿರುವ ಮತ್ತು ಆ ಮೂಲಕ ಸರ್ವಮಾನ್ಯಗೊಳ್ಳುತ್ತಿರುವ ರೀತಿಗೂ ಮತ್ತು ನಿಜಜೀವನ ಪರಿಸ್ಥಿತಿಗಳಲ್ಲಿ ವಿದ್ಯಾರ್ಥಿಗಳು ನಿರಂತರವಾಗಿ ಕಲಿಯುತಾ, ಈಗಾಗಲೇ ಕಲಿತದ್ದನ್ನು ಕಳಚಿಕೊಳ್ಳುತ್ತ ಜೀವನದ ಸವಾಲುಗಳನ್ನು ಎದುರಿಸುತ್ತಿರುವ ರೀತಿಗೂ ಅಜಗಜಾಂತರ ವ್ಯತ್ಯಾಸವಿದೆ. ಕಲಿಕೆಗೂ ನಿಗದಿ ಮಾಡಲ್ಪಟ್ಟ ಪಠ್ಯಪುಸ್ತಕಗಳ ಚೌಕಟ್ಟಿಗೂ ಇರುವ ಸಂಬಂಧವನ್ನು ಕೊನೆಗೊಳಿಸಬೇಕಿದೆ. ವಿದ್ಯಾರ್ಥಿಗಳ ಲೋಕ ಮತ್ತು ಅನುಭವಗಳು ತರಗತಿಳೊಳಗಿನ ಕಲಿಕೆಯ ಭಾಗವಾಗಬೇಕಿದೆ. ಮತ್ತು ಉಪಾಧ್ಯಾಯ ವರ್ಗ ಈ ಬಗೆಯ ಕಲಿಕಾ ಪ್ರಕ್ರಿಯೆಯನ್ನು ಆಗಮಾಡಿಸುವ ವಾಹಕ ಪಾತ್ರವನ್ನು ವಹಿಸಬೇಕಿದೆ.

  ಎಲ್ಲಕ್ಕಿಂತ ಮುಖ್ಯವಾಗಿ ಮೌಲ್ಯಮಾಪನ ಪದ್ಧತಿಯನ್ನು ಒಂದು ನಿಲುಕದ, ಔಪಚಾರಿಕ ಮತ್ತು ಪರಕೀಯಗೊಳಿಸುವ ವ್ಯವಸ್ಥೆಯನಾಗಿಸದೆ ಒಂದು ನೆರವು ನೀಡುವ ಕಲಿಕಾ ಪದ್ಧತಿಯನ್ನ್ನಾಗಿ ಬದಲಿಸಬೇಕಿದೆ. ಹೊರೆಯಿಲ್ಲದ ಕಲಿಕೆ (ಲರ್ನಿಂಗ್ ವಿದ್ ಔಟ್ ಬರ್ಡನ್) ಬಗ್ಗೆ ಯಶಪಾಲ್ ಸಮಿತಿ ಕೊಟ್ಟ ವರದಿಯ ಮುಂದುವರೆಕೆಯೇ ಆಗಿರುವ ೨೦೦೫ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಹಾಗೂ ೨೦೦೯ರ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣಾ ಹಕ್ಕಿನ ಕಾಯಿದೆಗಳು ಒಂದು ನಿರಂತರ ಮತ್ತು ಸಮಗ್ರ ಶಾಲಾಧಾರಿತ ಮೌಲ್ಯಮಾಪನ ಪದ್ಧತಿಯನ್ನು ಸಲಹೆ ಮಾಡಿವೆ. ಇವೆರಡೂ ಭರವಸೆದಾಯಕ ಪರ್ಯಾಯ ಮಾದರಿಗಳಾಗಿವೆ.
  ಜನರನ್ನು ಅವರವರ ಪ್ರತಿಭೆಗಳಿಗನುಸಾರವಾಗಿ ಶ್ರೇಣೀಕರಿಸಿ ತೋರಿಕೆಯ ನ್ಯಾಯಯುತ ಮತ್ತು ನಿಷ್ಪಕ್ಷಪಾತತೆಯನ್ನು ಪ್ರದರ್ಶಿಸುವ ಒಂದು ಅಸಮಾನ ಸಮಾಜದಲ್ಲಿ ನಾವು ಬದುಕುತ್ತಿರುವುದರಿಂದಲೇ ಇಂಥಾ ಪರೀಕ್ಷಾ ಪದ್ಧತಿಯನ್ನು ಒಪ್ಪಿಕೊಂಡು ಬಂದಿದ್ದೇವೆ. ಪ್ರಶ್ನೆಪತ್ರಿಕೆಗಳಿಗೆ ಬೇಧಿಸಲಾಗದ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಿ, ಹಣಕ್ಕಾಗಿ ಈ ವ್ಯವಸ್ಥೆಯನ್ನು ಬುಡಮೇಲು ಮಾಡುವವರನ್ನು ಒಡ್ಡೋಡಿಸುವ ಕ್ರಮಗಳತ್ತ ಮಾತ್ರ ನಮ್ಮ ಗಮನವನ್ನು ಕೇಂದ್ರೀಕರಿಸದೆ ಒಂದು ಭೀತಿ ಮುಕ್ತ ಕಲಿಕೆ ಹಾಗೂ ಮೌಲ್ಯ ಮಾಪನ ಪದ್ಧತಿಯಲ್ಲಿ ಪರೀಕ್ಷೆಗಳಿಗಿರುವ ಪಾತ್ರ ಮತ್ತು ಒತ್ತನ್ನು ಕಡಿಮೆ ಮಾಡುವತ್ತಲೂ ಗಮನವನ್ನು ಹರಿಸಬೇಕಿದೆ. ನಮ್ಮ ಮಕ್ಕಳು ಪರೀಕ್ಷೆಯನ್ನು ಹೇಗೆ ಎದುರಿಸಬೇಕೆಂಬುದನ್ನು ಅಥವಾ ತಮ್ಮಗಳ ನಡುವೆ ಹೇಗೆ ಸ್ಪರ್ಧಿಸಬೇಕೆಂಬುದನ್ನು ಮಾತ್ರ ಕಲಿಯದೆ ಒಂದು ಪ್ರಜ್ನಾವಂತ, ಅರ್ಥಪೂರ್ಣ, ಕ್ರಿಯಾಶೀಲ ಮತ್ತು ಸಂತಸದ ಜೀವನವನ್ನು ನಡೆಸಲು ಬೇಕಾದ ಸಾಮರ್ಥ್ಯವನ್ನೂ ಗಳಿಸಿಕೊಳ್ಳುವಂತಾಗಬೇಕು.

  ಕೃಪೆ: Economic and Political Weekly Apr 7, 2018. Vol. 53. No.14
  ಅನು: ಶಿವಸುಂದರ್
  (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )

  • Comments Off on ಶಾಲಾ ಶಿಕ್ಷಣದ ಮರುಪರೀಕ್ಷೆಯಾಗಬೇಕಿದೆ
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.