08:12 pm Tuesday, June 25, 2019
 • ಕೃಷ್ಣಾರೆಡ್ಡಿಯನ್ನು ಬೆಂಬಲಿಸಿ ಯೋಗೇಂದ್ರ ಯಾದವ್‌ರಿಂದ ಪ್ರಚಾರ

  By admin - Sun Apr 01, 1:52 pm

  • Comments Off on ಕೃಷ್ಣಾರೆಡ್ಡಿಯನ್ನು ಬೆಂಬಲಿಸಿ ಯೋಗೇಂದ್ರ ಯಾದವ್‌ರಿಂದ ಪ್ರಚಾರ
  • 0 views

   

  ಜಯನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ

  ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ರವಿ ಕೃಷ್ಣಾರೆಡ್ಡಿಯವರನ್ನು ಬೆಂಬಲಿಸಿ ಸ್ವರಾಜ್ ಇಂಡಿಯಾದ ಅಧ್ಯಕ್ಷರಾದ ಯೋಗೇಂದ್ರ ಯಾದವ್‌ರಿಂದ ಪ್ರಚಾರ ಮತ್ತು “ಒಂದು ವೋಟು, ಒಂದು ನೋಟು” ದೇಣಿಗೆ ಸಂಗ್ರಹ ಅಭಿಯಾನಕ್ಕೆ ಚಾಲನೆ ***

  ಬಂಧುಗಳೇ,

  ಜಯನಗರ ವಿಧಾನಸಭಾ ಕ್ಷೇತ್ರದಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ನಮ್ಮ ಸಂಗಾತಿಗಳೊಡಗೂಡಿ ಕಳೆದ ಐದಾರು ತಿಂಗಳಿನಿಂದ ಇಡೀ ಕ್ಷೇತ್ರದಲ್ಲಿ ಮನೆಮನೆ ಭೇಟಿ ಅಭಿಯಾನ ಮಾಡಿ, ಸಾವಿರಾರು ಜನ ಮತದಾರರೊಡನೆ ಸಂವಾದ ಮಾಡಿ, ಮತ್ತು ಆ ಸಂದರ್ಭದಲ್ಲಿ ಕ್ಷೇತ್ರದ ಹಲವಾರು ಸಮಸ್ಯೆಗಳಿಗೆ ಪರಿಹಾರವೂ ಸಿಗುವಂತೆ ಮಾಡಿರುವ ವಿಚಾರ ತಮಗೆ ಗೊತ್ತಿದೆ. ಈ ಸಂದರ್ಭದಲ್ಲಿ ನಮಗೆ ಸಿಕ್ಕ ಜನಬೆಂಬಲ ಮತ್ತು ಅಭಿಪ್ರಾಯದ ಹಿನ್ನೆಲೆಯಲ್ಲಿ ಇಲ್ಲಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ.

  ಇಂದು ಚುನಾವಣೆಗಳನ್ನು ಕೇವಲ ಹಣ, ಜಾತಿ, ಮತ್ತು ತೋಳ್ಬಲಗಳು ನಿರ್ಧರಿಸುತ್ತಿವೆ. ಎಲ್ಲಕ್ಕಿಂತ ಮುಖ್ಯವಾಗಿ ಅಕ್ರಮ ಮತ್ತು ಭ್ರಷ್ಟಾಚಾರದಿಂದ ಗಳಿಸಿರುವ ಕಪ್ಪುಹಣವೇ ಪ್ರಾಮುಖ್ಯತೆ ಪಡೆದಿದೆ ಮತ್ತು ಚುನಾವಣಾ ಆಯೋಗ ನಿಗದಿಪಡಿಸಿರುವ ವೆಚ್ಚದ ಮಿತಿಯ ಹತ್ತು-ನೂರು ಪಟ್ಟು ಹಣವನ್ನು ಅಭ್ಯರ್ಥಿಗಳು ಕಾನೂನುಬಾಹಿರವಾಗಿ ಖರ್ಚು ಮಾಡಿ ಚುನಾವಣೆಗಳನ್ನು ಕೊಳ್ಳುತ್ತಿದ್ದಾರೆ.

  ನಮ್ಮ ರಾಜ್ಯದ ಪರಂಪರೆಯಲ್ಲಿ ಶಾಂತವೇರಿ ಗೋಪಾಲಗೌಡರಂತಹ ಆದರ್ಶವಾದಿ ಮತ್ತು ಜನಪರ ರಾಜಕಾರಣಿಗಳು ನಾಲ್ಕೈದು ದಶಕಗಳ ಹಿಂದೆಯೇ ಹಣವಂತರೇ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿರುತ್ತೇಜಿಸಲು “ಒಂದು ವೋಟು, ಒಂದು ನೋಟು” ಕಲ್ಪನೆಯನ್ನು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಯಶಸ್ವಿಯಾಗಿ ಹುಟ್ಟುಹಾಕಿ, ಜನರ ದೇಣಿಗೆ ಹಣದಿಂದಲೇ ನ್ಯಾಯಯುತವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುತ್ತಾರೆ. ಈ ಸಂದರ್ಭದಲ್ಲಿ ಅಂತಹುದೇ ಪರಿಕಲ್ಪನೆಯನ್ನು ನಾವು ಪ್ರಸ್ತುತ ಮಾಡಿಕೊಳ್ಳದಿದ್ದರೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ನೈಜ ಉದ್ದೇಶಗಳನ್ನು ಕಳೆದುಕೊಂಡು ತನ್ನ ಅರ್ಥವನ್ನೇ ಕಳೆದುಕೊಳ್ಳಲಿದೆ.

  ಈ ಹಿನ್ನೆಲೆಯಲ್ಲಿ, ಶಾಂತವೇರಿ ಗೋಪಾಲಗೌಡರ ಆದರ್ಶವನ್ನು ಪಾಲಿಸುವುದರ ಭಾಗವಾಗಿ ಮತ್ತು ಚುನಾವಣೆಯಲ್ಲಿ ಜನರ ಪಾಲುದಾರಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಇದೇ ಬುಧವಾರ, 04-04-2018 ರಿಂದ “ಒಂದು ವೋಟು, ಒಂದು ನೋಟು” ಹೆಸರಿನಲ್ಲಿ ಜನರಿಂದ ದೇಣಿಗೆ ಸಂಗ್ರಹ ಅಭಿಯಾನವನ್ನು ಆರಂಭಿಸುತ್ತಿದ್ದೇವೆ. ಈ ಅಭಿಯಾನಕ್ಕೆ ಅಂದು ಚಾಲನೆ ನೀಡಲು ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರಾಧ್ಯಕ್ಷ ಶ್ರೀ ಯೋಗೇಂದ್ರ ಯಾದವ್ ಆಗಮಿಸಲಿದ್ದಾರೆ. ಸ್ವರಾಜ್ ಇಂಡಿಯಾದ ಮುಖಂಡರಾದ ಹಿರಿಯ ಸಾಹಿತಿ ಶ್ರೀ ದೇವನೂರ ಮಹಾದೇವರವರು, ರಾಜ್ಯದ ಪ್ರಸಿದ್ಧ ಸಾಮಾಜಿಕ ಹೋರಾಟಗಾರ ಶ್ರೀ ಎಸ್ ಆರ್ ಹಿರೇಮಠರು ಸೇರಿದಂತೆ ಹಲವು ಗಣ್ಯರು ಅಂದಿನ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

  *** ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ “ಒಂದು ವೋಟು, ಒಂದು ನೋಟು” ಅಭಿಯಾನಕ್ಕೆ ಚಾಲನೆ ***
  ದಿನಾಂಕ : 04-04-2018, ಬುಧವಾರ
  ಸಮಯ : ಬೆಳಗ್ಗೆ 8:30
  ಸ್ಥಳ : ಮೈಯ್ಯಾಸ್ ಹೋಟೆಲ್ ವೃತ್ತ, ಜಯನಗರ ನಾಲ್ಕನೇ ಬ್ಲಾಕ್, ಬೆಂಗಳೂರು.

  ಆದರ್ಶಗಳು, ಮೌಲ್ಯಗಳು, ಮತ್ತು ಮಾದರಿಗಳಿಲ್ಲದ ಸಂದರ್ಭದಲ್ಲಿ ನಾವಿದ್ದೇವೆ, ಹಾಗಾಗಿ ನಾವೆಲ್ಲರೂ ಹೆಮ್ಮೆ ಪಡಬಹುದಾದಂತಹ ಇಂತಹ ಜನ-ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಮತ್ತು ಪ್ರಜಾಪ್ರಭ್ಹುತ್ವವನ್ನು ಗಟ್ಟಿಗೊಳಿಸುವ ಕಾರ್ಯಕ್ರಮ ಮತ್ತು ಅಭಿಯಾನಗಳಲ್ಲಿ ತಾವುಗಳೂ ಪಾಲ್ಗೊಂಡು, ಮಾದರಿಗಳನ್ನು ನಿರ್ಮಿಸಿಕೊಳ್ಳಲು ಯತ್ನಿಸಬೇಕೆಂದು ಈ ಮೂಲಕ ಕೋರುತ್ತೇನೆ.

  ನಿಮ್ಮಗಳ ಬರುವಿಕೆಯ ನಿರೀಕ್ಷೆಯಲ್ಲಿ…

  ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 7975625575.

  ವಂದನೆಗಳೊಂದಿಗೆ,
  ರವಿ ಕೃಷ್ಣಾರೆಡ್ಡಿ

  Photo Ravi Krishna redy with wife

  • Comments Off on ಕೃಷ್ಣಾರೆಡ್ಡಿಯನ್ನು ಬೆಂಬಲಿಸಿ ಯೋಗೇಂದ್ರ ಯಾದವ್‌ರಿಂದ ಪ್ರಚಾರ
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.