08:09 pm Tuesday, June 25, 2019
 • ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್ ತಂತ್ರಜ್ಞಾನದ ಕಾರ್ಯಾಗಾರ

  By admin - Tue Mar 27, 6:18 am

  • Comments Off on ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್ ತಂತ್ರಜ್ಞಾನದ ಕಾರ್ಯಾಗಾರ
  • 0 views
  ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್ ತಂತ್ರಜ್ಞಾನದ ಕುರಿತು                                   ಮಾಧ್ಯಮ ಪ್ರತಿನಿಧಿಗಳಿಗೆ ಕಾರ್ಯಾಗಾರ
  ಬೆಂಗಳೂರು, ಮಾರ್ಚ್ 26 (ಕರ್ನಾಟಕ ವಾರ್ತೆ)-
  ಚುನಾವಣೆಯಲ್ಲಿ ಮತ ಚಲಾಯಿಸಲು ಬಳಸಲಾಗುವ
  ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್
  ಯಂತ್ರದ ತಂತ್ರಜ್ಞಾನದ ಕುರಿತು  ಸಾರ್ವಜನಿಕರಿಗೆ ಇರುವ ಸಂದೇಹಗಳನ್ನು ಪರಿಹರಿಸುವಲ್ಲಿ ಮಾಧ್ಯಮಗಳ ಪಾತ್ರ ಅತಿ ಮುಖ್ಯವಾಗಿದೆ ಎಂದು
  ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವಕುಮಾರ್ ಅವರು ತಿಳಿಸಿದರು.
  ಇಂದು ಖಾಸಗಿ ಹೋಟೆಲ್‍ನಲ್ಲಿ ಮಾಧ್ಯಮದವರಿಗಾಗಿ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್
  ತಂತ್ರಜ್ಞಾನದ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿ ಭಾರತದಲ್ಲಿ 20 ವರ್ಷಗಳಿಂದ ಚಾಲ್ತಿಯಲ್ಲಿರುವ ವಿದ್ಯುನ್ಮಾನ ಮತಯಂತ್ರದ ಬಗ್ಗೆ ಸಾರ್ವಜನಿಕರಲ್ಲಿ ಇತ್ತೀಚೆಗೆ ಹಲವು ಅನುಮಾನಗಳಿಗೆ ಆಸ್ಪದ ಮಾಡಿಜೊಟ್ಟಿದೆ,  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವು ಸುಳ್ಳು ವದಂತಿಗಳಿಗೆ ಜನರು ಕಿವಿಗೊಡದಂತೆ ಹಾಗೂ ವಿದ್ಯುನ್ಮಾನ ಮತಯಂತ್ರದ ಕುರಿತು ಸರಿಯಾದ ಮಾಹಿತಿಯನ್ನು ಸಾರ್ವಜನಿಕರಿಗೆ ಮುಟ್ಟಿಸುವ ಜವಾಬ್ದಾರಿ ಮಾಧ್ಯಮಗಳಿಗೆ ಇದೆ.  ಹಾಗಾಗಿ ಈ ಕಾರ್ಯಾಗಾರವನ್ನು ಮಾಧ್ಯಮಗಳಿಗಾಗಿ ವಿಶೇಷವಾಗಿ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
  ವಿದ್ಯುನ್ಮಾನ ಮತಯಂತ್ರದ ಜೊತೆ ಈ ಬಾರಿ ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ವಿವಿ ಪ್ಯಾಟ್ ತಂತ್ರಜ್ಞಾನದ ಸಹಾಯದೊಂದಿಗೆ ಮತ ಚಲಾಯಿಸಿದ ನಂತರ ಮುದ್ರಿತ ರೂಪದಲ್ಲಿ ದಾಖಲೆಗಳನ್ನು ಪಡೆಯುವಂತ ಹೊಸ ತಂತ್ರಜ್ಞಾನವನ್ನು ಬಳಸಲಿದ್ದು, ಚಲಾವಣೆಯಾದ ಮುದ್ರಿತ ರೂಪದ ದಾಖಲೆಯನ್ನು ಸಾರ್ವಜನಿಕರು ಮತದಾನ ಮಾಡಿದ ನಂತರ ನೋಡಬಹುದಾಗಿದೆ ಹಾಗೂ ಈ ಮುದ್ರಿತ ದಾಖಲೆಯನ್ನು ಚುನಾವಣಾ ಆಯೋಗ ಮುಂದಿನ ಐದು ವರ್ಷದವರೆಗೆ ಕಾಯ್ದಿರಿಸಲಿದೆ ಎಂದರು.
  1999 ರಿಂದ ಭಾರತದಲ್ಲಿ ಪ್ರಾರಂಭವಾದ ವಿದ್ಯುನ್ಮಾನ ಮತಯಂತ್ರದ ಅಭಿವೃದ್ಧಿ ಹಾಗೂ ಬಳಕೆ ಇಂದು ಹಲವು ಅಭಿವೃದ್ಧಿಗಳನ್ನು ಕಂಡು 2006 ರ ಮುಂಚೆ ತಯಾರಾದ ವಿದ್ಯುನ್ಮಾನ ಮತಯಂತ್ರಗಳನ್ನು ಎಂ-1 ಎಂದು ವರ್ಗೀಕರಿಸಲಾಗಿದೆ.  2006 ರ ನಂತರದಲ್ಲಿ ಅಭಿವೃದ್ಧಿಪಡಿಸಲಾದ ವಿದ್ಯುನ್ಮಾನ ಮತಯಂತ್ರಗಳನ್ನು ಎಂ-2 ಎಂದು ವರ್ಗೀಕರಿಸಲಾಗಿದ್ದು, ಎಂ-3 ತಂತ್ರಜ್ಞಾನದ ವಿದ್ಯುನ್ಮಾನ ಮತಯಂತ್ರಗಳ  ಅಭಿವೃದ್ಧಿ ಕಾರ್ಯ ನಡೆದಿದೆ.
  ಪ್ರತಿ 15 ವರ್ಷದ ಗ್ಯಾರಂಟಿ ಹೊಂದಿರುವ ಮತಯಂತ್ರಗಳನ್ನು ಇಂದು ಹಲವು ಹೊಸ ಆವಿಷ್ಕಾರದೊಂದಿಗೆ ಯಾವುದೇ ರೀತಿಯಲ್ಲಿ ದುರ್ಬಳಕೆ ಮಾಡಲಾಗದ ರೀತಿಯಲ್ಲಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.   ಇತ್ತೀಚೆಗೆ ಹಲವು ರಾಜ್ಯಗಳಲ್ಲಿ ನಡೆದ ಚುನಾವಣೆಗಳ ಫಲಿತಾಂಶ ವಿದ್ಯುನ್ಮಾನ ಮತಯಂತ್ರಗಳ ದುರ್ಬಳಕೆ ಸಾಧ್ಯವಿಲ್ಲ ಎಂಬುದನ್ನು ಸಾಬೀತುಪಡಿಸಿದೆ.
  ಭಾರತದಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ತಯಾರಿಸುವುದು ಕೇವಲ ಎರಡು ಸಂಸ್ಥೆಗಳು.  ಬೆಂಗಳೂರಿನ ಬಿ.ಇ.ಎಲ್. ಹಾಗೂ ಹೈದರಾಬಾದ್‍ನ ಇ.ಸಿ.ಐ.ಎಲ್. ಸಂಸ್ಥೆ. ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್ ತಂತ್ರಜ್ಞಾನದ ಅಭಿವೃದ್ಧಿಗಾಗಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದ್ದು, ಈ ಸಮಿತಿ ನೀಡುವ ಸಲಹೆ ಸೂಚನೆಗಳ ಆಧಾರದ ಮೇಲೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತದೆ.
  ತಯಾರಿಸಿದ ಸಂಸ್ಥೆ ಹಲವು ತಪಾಸಣೆಗಳ ನಂತರ ಚುನಾವಣಾ ಆಯೋಗಕ್ಕೆ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್  ಒಪ್ಪಿಸುತ್ತದೆ.   ಹೀಗೆ ತಯಾರಾದ ಮತಯಂತ್ರಗಳನ್ನು ಆಯಾಯ ರಾಜ್ಯದ ಚುನಾವಣೆಗಾಗಿ ಬಳಸಲು ಸಜ್ಜಾದ ಮೇಲೆ ಚುನಾವಣಾ ಆಯೋಗವು ಸಹ ಹಲವು ತಪಾಸಣೆಗಳನ್ನು ನಡೆಸಿದ ನಂತರ ರಾಜ್ಯಗಳಿಗೆ ರವಾನಿಸುತ್ತದೆ.  ಹೀಗೆ ರವಾನೆ ಆದ ಮತಯಂತ್ರಗಳನ್ನು ಸಹ ರಾಜಕೀಯ ಪಕ್ಷಗಳ ಸದಸ್ಯರ ಮುಂದೆ ತಪಾಸಣೆ ನಡೆಸಿ, ಪ್ರಯೋಗಿಸಿ, ಖಾತರಿಪಡಿಸಿಕೊಂಡು ನಂತರ ಜಿಲ್ಲೆಗಳಿಗೆ ರವಾನೆಯಾಗಲಿವೆ ಎಂದು ತಿಳಿಸಿದರು.
  ಕಾರ್ಯಾಗಾರವನ್ನು ಉದ್ಫಾಟಿಸಿ ಮಾತನಾಡಿದ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ. ಸಿದ್ದರಾಜು ಮಾತನಾಡಿ ಕರ್ನಾಟಕ ರಾಜ್ಯದ ಚುನಾವಣೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಾಧ್ಯಮ ಪ್ರತಿನಿಧಿಗಳಿಗೆ ಚುನಾವಣೆ ಹಾಗೂ ಮತಯಂತ್ರದ ತಾಂತ್ರಿಕತೆ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಂಡಿರುವುದು ಇದೇ ಮೊದಲು.  ಅದಕ್ಕೆ ರಾಜ್ಯ ಚುನಾವಣಾ ಆಯುಕ್ತರ ಈ ನಿರ್ಣಯ ಶ್ಲಾಘನೀಯವಾದದ್ದು ಎಂದು ಅವರು ತಿಳಿಸಿದರು.
  ಚುನಾವಣಾ ಕಾರ್ಯವೈಖರಿಗಳ ಬಗ್ಗೆ ಹಾಗೂ ಚುನಾವಣೆಯಲ್ಲಿ ಬಳಕೆಯಾಗುವ ವಿದ್ಯುನ್ಮಾನ ಮತಯಂತ್ರಗಳ ತಂತ್ರಜ್ಞಾನದ ಬಗ್ಗೆ ಪತ್ರಕರ್ತರು ತಿಳಿದುಕೊಳ್ಳುವುದು ಅವಶ್ಯಕವಾಗಿದ್ದು ಜನಸಾಮಾನ್ಯರ ಸಂದೇಹಗಳಿಗೆ ಉತ್ತರಿಸುವ ಮುನ್ನ ನಾವು ತಿಳಿದುಕೊಳ್ಳುವುದು ಉತ್ತಮ.  ಮೊದಲು ನಮ್ಮ ಸಂದೇಹಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.
  ಮುಖ್ಯ ಉಪ ಚುನಾವಣಾಧಿಕಾರಿ ರಾಘವೇಂದ್ರ ಅವರು ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್ ತಂತ್ರಜ್ಞಾನದ ಕುರಿತು ಪ್ರಾತ್ಯಕ್ಷಿಕೆ ನೀಡಿ ಪತ್ರಕರ್ತರೊಂದಿಗೆ ಸಂವಾದ ನಡೆಸಿ ಅವರ ಪ್ರಶ್ನೆಗಳಿಗೆ ಉತ್ತರಿಸಿದರು.   ಮಾಧ್ಯಮ ಪ್ರತಿನಿಧಿಗಳಿಗೆ ವಿದ್ಯುನ್ಮಾನ ಮತಯಂತ್ರದ ಮೂಲಕ ಮತ ಚಲಾಯಿಸಿ ನಂತರ ವಿವಿ ಪ್ಯಾಟ್‍ನಲ್ಲಿ ಹೇಗೆ ಕಾಣುತ್ತದೆ ಎನ್ನುವುದನ್ನು ಪ್ರಾಯೋಗಿಕ  ಮತಯಂತ್ರದ ಮೂಲಕ ಮತ ಚಲಾಯಿಸಲು ಅವಕಾಶ ನೀಡಿ ಸಂದೇಹಗಳನ್ನು ಪ್ರಾಯೋಗಿಕವಾಗಿಯೇ ಉತ್ತರಿಸಿದ್ದು ವಿಶೇಷವಾಗಿತ್ತು.
  ಈ ಕಾರ್ಯಾಗಾರದಲ್ಲಿ ಮುದ್ರಣ, ವಿದ್ಯುನ್ಮಾನ, ಕನ್ನಡ ಹಾಗೂ ಇತರ ಭಾಷೆಗಳ ಮಾಧ್ಯಮ ಪ್ರತಿನಿಧಿಗಳು,  ಹಿರಿಯ ಐ.ಎ.ಎಸ್. ಅಧಿಕಾರಿ ಶ್ರೀಮತಿ ಬಿ.ಆರ್. ಮಮತ, ರಾಜ್ಯ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಸಹನಾ ಎಂ ಅವರು ಸ್ವಾಗತಿಸಿದರು.
  • Comments Off on ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್ ತಂತ್ರಜ್ಞಾನದ ಕಾರ್ಯಾಗಾರ
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.