02:27 am Tuesday, June 18, 2019
 • ಈಶಾನ್ಯ ಭಾರತದ ಚುನಾವಣೆಗಳು ಮೂರು ಭಿನ್ನ ಭಿನ್ನ ಕಥೆಗಳನ್ನು ಹೇಳುತ್ತವೆ.

  By admin - Sun Mar 18, 6:04 pm

  • Comments Off on ಈಶಾನ್ಯ ಭಾರತದ ಚುನಾವಣೆಗಳು ಮೂರು ಭಿನ್ನ ಭಿನ್ನ ಕಥೆಗಳನ್ನು ಹೇಳುತ್ತವೆ.
  • 0 views

  ಅಧಿಕಾರ ಮೂಲದ ಸಂಬಂಧಗಳು
  ಈಶಾನ್ಯ ಭಾರತದಲ್ಲಿ ಇತ್ತೀಚೆಗೆ ನಡೆದ ಮೂರೂ ವಿಧಾನಸಭಾ ಚುನಾವಣೆಗಳು ಮೂರು ಭಿನ್ನ ಭಿನ್ನ ಕಥೆಗಳನ್ನು ಹೇಳುತ್ತವೆ.

  ಇತ್ತೀಚೆಗೆ ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರಾಗಳಲ್ಲಿ ನಡೆದ ಚುನಾವಣೆಗಳಿಂದ ಉಳಿದ ಭಾರತವು ಬಹು ಮುಖ್ಯ ಪಾಠವೊಂದನ್ನು ಕಲಿಯಬೇಕಿದೆ. ಅದೇನೆಂದರೆ ಯಾವೊಂದು ಚುನಾವಣೆಯ ಫಲಿತಾಂಶಗಳ ಪಾಠಗಳನ್ನು ಸಾರ್ವತ್ರೀಕರಿಸಬಾರದು. ತ್ರಿಪುರಾದಲ್ಲಿ ಕಳೆದ ೨೫ ವರ್ಷಗಳಿಂದ ಅಧಿಕಾರದಲ್ಲಿದ್ದ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) (ಸಿಪಿಎಂ) ವನ್ನು ಭಾರತೀಯ ಜನತಾ ಪಕ್ಷವು (ಬಿಜೆಪಿ) ನಿರ್ಣಾಯಕವಾಗಿ ಸೋಲಿಸಿ ಅಧಿಕಾರವನ್ನು ಪಡೆದುಕೊಂಡಿತು. ಆದರೆ ಇದನ್ನೇ ನೆಪವಾಗಿಸಿಕೊಂಡು ಭಾರತದ ಪ್ರಧಾನ ಧಾರೆ ಮಾಧ್ಯಮಗಳೆಲ್ಲಾ ಈಶಾನ್ಯ ಭಾರತದಾದ್ಯಂತ ಕೇಸರಿ ಪಡೆಗಳ ವಿಜಯಯಾತ್ರೆ ಸಾಗಿದೆಯೆಂದು ಅತಿರಂಜಿಸಿ ಬರೆದವು. ಆದರೆ ಹಾಗೆ ಬರೆಯುವಾಗ ಅವು ಎಂದಿನಂತೆ ಈಶಾನ್ಯ ಭಾರತವೆಂದರೆ ವಿವಿಧ ರಾಜಕೀಯ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯುಳ್ಳ ಏಳು (ಈಗ ಸಿಕ್ಕಿಂ ಅನ್ನು ಸೇರಿಸಿದರೆ ಎಂಟು) ವಿಭಿನ್ನ ರಾಜ್ಯಗಳುಳ್ಳ ಪ್ರದೇಶವೆಂಬುದನ್ನು ನಿರ್ಲಕ್ಷಿಸಿದರು. ಆ ರಾಜ್ಯಗಳನ್ನು ಏಕರೂಪಿಯಾಗಿ ಭಾವಿಸುವುದೆಂದರೆ ಅವುಗಳ ನಿರ್ದಿಷ್ಟತೆಗಳನ್ನೂ ಮತ್ತು ಅನನ್ಯತೆಗಳನ್ನು ನಿರಾಕರಿಸುವುದು ಎಂದೇ ಅರ್ಥ. ವಾಸ್ತವವಾಗಿ ತಥಾಕಥಿತ ಪ್ರಧಾನ ಧಾರೆ ಭಾರತೀಯರು ಭಿನ್ನ ಸಂಸ್ಕೃತಿಯುಳ್ಳ ತಮ್ಮನ್ನು ಹೀಗೆ ಒಟ್ಟುರಾಶಿಯಾಗಿ ಸೇರಿಸಿ ಮೂಲೆಗುಂಪು ಮಾಡುವ ಬಗ್ಗೆ ಈ ರಾಜ್ಯಗಳ ಜನರಲ್ಲಿ ಅಪಾರ ಅಸಹನೆಯಿದೆ.
  ತ್ರಿಪುರಾದಲ್ಲಿ ಅಧಿಕಾರಸ್ಥರ ವಿರೋಧಿ ಭಾವನೆಯ ಅಂಶದೊಂದಿಗೆ ಮತ್ತೊಂದು ಪ್ರಮುಖ ಅಂಶ ಅಲ್ಲಿಯ ಬಿಜೆಪಿಯ ವಿಜಯಕ್ಕೆ ಕಾರಣವಾಯಿತು. ಬಿಜೆಪಿಯ ಹಿಂದೂ ಅಜೆಂಡಾಗಳಿಗೆ ಸ್ಪಂದಿಸುವಂಥ ಹಿಂದೂ ಜನಸಂಖ್ಯೆಯೂ ಅಲ್ಲಿ ದೊಡ್ಡಮಟ್ಟದಲ್ಲಿತ್ತು. ಆದರೆ ಕ್ರಿಶ್ಚಿಯನ್ನರು ಬಹುಸಂಖ್ಯಾತರಾಗಿರುವ ಗಿರಿರಾಜ್ಯಗಳ ಕಥೆ ಇದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿತ್ತು. ತ್ರ್ರಿಪುರಾzಲ್ಲಿ ಬಿಜೆಪಿಗೆ ಸ್ವಂತಬಲದ ಮೇಲೆ ಸರ್ಕಾರ ರಚಿಸುವಷ್ಟು ಬಹುಮತ ದೊರಕಿದ್ದರೂ ತ್ರಿಪುರಾದ ಗಿರಿಜನರಿಗೆ ಪ್ರತ್ಯೇಕ ರಾಜ್ಯದ ಬೇಕೆಂಬ ಬೇಡಿಕೆಯಿಟ್ಟುಕೊಂಡು ಚಳವಳಿ ನಡೆಸುತ್ತಿರುವ ಇಂಡೀಜೀನಿಯಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಟಿಎಫ್) ಎಂಬ ಪ್ರಾದೇಶಿಕ ಪಕ್ಷದೊಡನೆ ಹೊಂದಾಣಿಕೆ ಮಾಡಿಕೊಂಡಿತ್ತು ಎಂಬುದನ್ನು ಮರೆಯಬಾರದು. ತ್ರಿಪುರಾದ ಮಟ್ಟಿಗೆ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಐಪಿಟಿಎಫ್ ಒಂದು ಕಿರಿಯ ಪಾಲುದಾರನೇ ಆಗಿದ್ದರೂ ಕೇಂದ್ರ ಸರ್ಕಾರಕ್ಕೆ ಅದು ಸಾಕಷ್ಟು ತಲೆನೋವನ್ನು ಉಂಟು ಮಾಡುವುದಂತೂ ಖಂಡಿತಾ. ಏಕೆಂದರೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಪ್ರತ್ಯೇಕ ರಾಜ್ಯದ ಆಗ್ರಹಕ್ಕೆ ಮಣಿಯುವುದು ಅಸಂಭವ.
  ಮೇಘಾಲಯ ಮತ್ತು ನಾಗಾಲ್ಯಾಂಡುಗಳಲ್ಲಿ ಅಲ್ಲಿನ ಪ್ರಾದೇಶಿಕ ರಾಜಕಾರಣದ ಸ್ವರೂಪವೇ ಅಲ್ಲಿನ ನೈಜ ಕಥೆಗಳನ್ನು ಬಿಚ್ಚಿಡುತ್ತದೆ. ತಮಗೆ ಪ್ರತ್ಯೇಕ ರಾಜ್ಯ ಬೇಕೆಂದು ಆಲ್ ಪಾರ್ಟಿ ಹಿಲ್ ಲೀಡರ್ಸ್ ಕಾನ್ಫೆರೆನ್ಸ್ (ಎಪಿಎಚ್‌ಎಲ್‌ಸಿ)ಯ ನೇತೃತ್ವದಲ್ಲಿ ಖಾಸಿಗಳೂ, ಜಾಂತಿಯಾಗಳೂ, ಮತ್ತು ಗರೋವ್‌ಗಳು ಸತತವಾಗಿ ನಡೆಸಿದ ಸಂಘರ್ಷದ ಭಾಗವಾಗಿ ೧೯೭೨ರಲ್ಲಿ ಅಸ್ಸಾಮಿನ ಭಾಗವಾಗಿದ್ದ ಈ ಪ್ರದೇಶಗಳನ್ನು ಬೇರ್ಪಡಿಸಿ ಪ್ರತ್ಯೇಕ ರಾಜ್ಯವಾಗಿ ಘೋಷಿಸಲಾಯಿತು. ಆದರೆ ೧೯೭೬ರ ವೇಳೆಗೆ ಕಾಂಗ್ರೆಸ್‌ನ ಚಿತಾವಣೆಗಳಿಂದಾಗಿ ಎಪಿಎಚ್‌ಎಲ್‌ಸಿ ವಿಭಜಿತವಾಯಿತು. ಆ ವೇಳೆಗೆ ಕೇಂದ್ರದಲ್ಲಿ ಇಂದಿರಾ ಗಾಂಧಿ ಸರ್ಕಾರವಿತ್ತು ಮತ್ತು ದೇಶದ ಮೇಲೆ ತುರ್ತುಸ್ಥಿತಿಯನ್ನು ಘೋಷಿಸಿ ಒಂದು ವರ್ಷವಾಗಿತ್ತು. ಅದಾದ ನಂತರದಲ್ಲಿ ಎಪಿಎಚ್‌ಎಲ್‌ಸಿಯ ಬಹುಪಾಲು ಸದಸ್ಯರು ಒಂದೋ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡರು ಅಥವಾ ತಮ್ಮದೇ ಆದ ಸಣ್ಣ ಪುಟ್ಟ ಪ್ರಾದೇಶಿಕ ಗುಂಪುಗಳನ್ನು ರಚಿಸಿಕೊಂಡರು. ಮತ್ತೊಮ್ಮೆ ಅವರೆಲ್ಲರೂ ಒಟ್ಟಿಗೆ ಸೇರಿ ಕಾಂಗ್ರೆಸ್ಸೇತರ ಸರ್ಕಾರ ರಚಿಸುವ ಪ್ರಯತ್ನಪಟ್ಟಿದ್ದು ೨೦೦೮ರಲ್ಲಿ. ಆದರೆ ಅದು ಅಧಿಕಾರ ನಡೆಸಲು ಸಾಧ್ಯವಾದದ್ದು ಕೇವಲ ಒಂದು ವರ್ಷ ಮಾತ್ರ. ಆನಂತರ ರಾಷ್ಟ್ರಪತಿ ಆಡಳಿತ ಜಾರಿಗೆ ಬಂತು. ಹಾಗೂ ಮುಂದೆ ಚುನಾವಣೆ ಆಗುವ ತನಕ ಕಾಂಗ್ರೆಸ್ ಸರ್ಕಾರವೇ ಆಳ್ವಿಕೆಯಲ್ಲಿತ್ತು. ಹಾಲೀ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಪಕ್ಷವೇ ಆಯ್ಕೆಯಾದರೂ ಅದರ ದುರಾಡಳಿತದಿಂದಾಗಿ ಮತ್ತು ತನ್ನ ಎದುರಾಳಿಯಾದ ಬಿಜೆಪಿಗಿದ್ದಷ್ಟು ರಾಜಕಿಯ ಚಾತುರ್ಯವಿಲ್ಲದ ಕಾರಣದಿಂದಾಗಿ ಸರ್ಕಾರ ರಚಿಸಲು ಬೇಕಿದ್ದಷ್ಟು ಬಹುಮತವನ್ನು ಕುದುರಿಸಿಕೊಳ್ಳಲಾಗಲಿಲ್ಲ. ಈಗ ಹಾಲೀ ಅಧಿಕಾರದಲ್ಲಿರುವ ಮೈತ್ರಿಕೂಟವು ಒಂದು ವಿಚಿತ್ರ ಭಿನ್ನರಾಶಿಯಾಗಿದ್ದರೂ ಬಿಜೆಪಿಯೇ ಆ ಮಿತ್ರಕೂಟದಲ್ಲಿರುವುದರಿಂದ ತಾನೇ ಅದನ್ನು ಕೆಳಗುರುಳಿಸುವುದಕ್ಕೆ ಮುಂದಾಗಲಾರದು.
  ನಾಗಾಲ್ಯಾಂಡಿನ ಕಥೆ ಇವೆಲ್ಲಕ್ಕಿಂತ ಭಿನ್ನವಾದದ್ದು. ಪ್ರಾದೇಶಿಕ ಪಕ್ಷಗಳು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದೊಂದಿಗೆ ಮೈತ್ರಿಯಿಂದಿರಲು ಬಯಸುವ ರಾಜಕಾರಣವನ್ನು ಬಳಸಿಕೊಂಡು ಬಿಜೆಪಿಯು ಎರಡೂ ಪ್ರಾದೇಶಿಕ ಪಕ್ಷಗಳಿಗೂ ಚುನಾವಣೆಗೆ ಮುನ್ನ ಆಸೆ ಹುಟ್ಟಿಸಿತ್ತು. ಟಿ. ಆರ್. ಜೆಲಾಂಗ್ ನೇತೃತ್ವದ ನಾಗ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್)ನ ಸರ್ಕಾರವು ಕುಸಿದು ಬಿದ್ದು ಚುನಾವಣೆಗೆ ಮುನ್ನ ಸರ್ಕಾರ ರಚಿಸಿದ್ದ ನೆಯ್‌ಫಿಯು ರಿಯೋ ಅವರ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿಯ ಜೊv ಬಿಜೆಪಿಯು ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಂಡಿತ್ತು. ಯಾವುದೇ ಸತ್ವಯುತ ಕಾರಣವಿಲ್ಲದೆ ಕೇವಲ ರಿಯೊ ಮತ್ತು ಜೆಲಾಂಗ್ ಅವರ ನಡುವಿನ ವ್ಯಕ್ತಿ ಪ್ರತಿಷ್ಟೆಯ ಕಾರಣಗಳಿಂದಾಗಿಯೇ ಎನ್‌ಪಿಎಫ್ ನಲ್ಲಿ ಉಂಟಾದ ಒಡಕೇ ಬಿಜೆಪಿಗೆ ಮೇಲುಗೈ ಸಾಧಿಸಲು ಅನುವು ಮಾಡಿಕೊಟ್ಟಿತು. ಅಂತಿಮವಾಗಿ ಬಿಜೆಪಿಯು ಎನ್‌ಡಿಪಿಪಿ ಯೊಂದಿಗೇ ಗಟ್ಟಿಯಾಗಿ ಉಳಿದುಕೊಂಡಿತಲ್ಲದೆ ಇತರ ಸಣ್ಣಪುಟ್ಟ ಪಕ್ಷಗಳನ್ನು ಒಟ್ಟುಗೂಡಿಸಿ ಸರ್ಕಾರವನ್ನು ರಚಿಸಲು ಬೇಕಾದಷ್ಟು ಸಂಖ್ಯೆಯನ್ನು ಒಟ್ಟುಮಾಡಿತು. ಎಲ್ಲಾ ಪಕ್ಷಗಳ ಶಾಸಕರೂ ಆಳುವ ಕೂಟವನ್ನು ಸೇರಿಕೊಂಡು ವಿರೋಧ ಪಕ್ಷವೇ ಇಲ್ಲದಂತಾಗಿದ್ದ ಇತ್ತೀಚಿನ ಇತಿಹಾಸವನ್ನು ಹೊಂದಿರುವ ನಾಗಾಲ್ಯಾಂಡಿನಲ್ಲಿ ಇನ್ನು ಸ್ವಲ್ಪ ಸಮಯದಲ್ಲೇ ಎನ್‌ಪಿಎಫ್‌ನಲ್ಲಿ ಮತ್ತೊಂದು ವಿಭಜನೆಯಾಗಿ ಭಿನ್ನಮತೀಯರು ಆಳುವ ಕೂಟವನ್ನು ಸೇರಿಕೊಂಡರೆ ಆಶ್ಚರ್ಯವಿಲ್ಲ. ನಾಗಾಲ್ಯಾಂಡಿನಲ್ಲಿ ಅಧಿಕಾರ ದಾಹವೇ ಭಿನ್ನಭಿನ್ನ ರಾಜಕೀಯ ಶಕ್ತಿಗಳನ್ನು ಒಂದುಗೂಡಿಸುವ ಅಂಟಾಗಿದೆ.
  ಹೀಗಾಗಿ ಈಶಾನ್ಯ ಭಾರತದ ಈ ಮೂರು ರಾಜ್ಯಗಳ ಚುನಾವಣೆಗಳಿಂದ ಉಳಿದ ಭಾರತವು ಯಾವ ಪಾಠಗಳನ್ನು ಕಲಿಯಬಹುದು? ಮೊದಲನೆಯದಾಗಿ, ತ್ರಿಪುರಾದ ಫಲಿತಾಂಶವು ಇತರ ಎರಡು ರಾಜ್ಯಗಳ ರಾಜಕೀಯ ವಾಸ್ತವಗಳನ್ನು ಪ್ರತಿಫಲಿಸುವುದಿಲ್ಲ. ಬಿಜೆಪಿಯು ತ್ರಿಪುರಾದಲ್ಲಿ ಗೆದ್ದಿದ್ದರೂ ಉಳಿದೆರಡು ರಾಜ್ಯಗಳಲ್ಲಿ ಅದು ಅಲ್ಲಿಯ ಪ್ರಾದೇಶಿಕ ಪಕ್ಷಗಳನ್ನು ಆಧರಿಸಿದೆ. ಈ ಎರಡೂ ರಾಜ್ಯಗಳಲ್ಲಿ ಬಿಜೆಪಿಯು ತನ್ನ ಸ್ವಂತ ಬಲದಲ್ಲಿ ಅಧಿಕಾರ ರಚಿಸುವ ಸಾಧ್ಯತೆಯಂತೂ ಸದ್ಯಕ್ಕಿಲ್ಲ. ಎರಡನೆಯದಾಗಿ ತನ್ನನ್ನು ತಾನು ಇತರರಿಗಿಂತ ಭಿನ್ನ ಪಕ್ಷವೆಂದು ತೋರ್ಪಡಿಸಿಕೊಳ್ಳುವ ಬಿಜೆಪಿ ಪಕ್ಷವು ತಾನು ನಿರಂತರವಾಗಿ ವಿರೋಧಿಸುತ್ತಲೇ ಬಂದಿರುವ ಕಾಂಗ್ರೆಸ್ಸಿಗಿಂತ ಯಾವ ರೀತಿಯಿಂದಲೂ ಭಿನ್ನವಿಲ್ಲ. ಅಧಿಕಾರ ಪಡೆಯಲು ಏನು ಬೇಕಾದರು ಮಾಡಬಹುದೆಂಬ ತತ್ವವನ್ನು ಎರಡೂ ಪಕ್ಷಗಳೂ ಪಾಲಿಸುತ್ತವೆ. ಮೂರನೆಯದಾಗಿ, ಕಾಂಗ್ರೆಸ್ಸಿನಂತೆ ಬಿಜೆಪಿಗೆ ಆ ರಾಜ್ಯಗಳಲ್ಲಿ ದುರಾಡಳಿತದ ಹಿನ್ನೆಲೆಯಿರದಿರುವುದರಿಂದ ಚುನಾವಣೆಯಲ್ಲಿ ಅಭಿವೃದ್ಧಿ ಮಂತ್ರವನ್ನು ಜನರಿಗೆ ದಾಟಿಸಲು ಸಾಧ್ಯವಾಯಿತು. ಆದರೆ ಅದು ಕೊಟ್ಟಿರುವ ಭರವಸೆಗಳನ್ನು ಈಡೇರಿಸಲು ಅಸಾಧ್ಯವಾಗಿದ್ದು ಸಾರ್ವತ್ರಿಕ ಚುನಾವಣೆ ನಡೆಯಲಿರುವ ಮುಂದೊಂದು ವರ್ಷದಲ್ಲಿ ಅದರ ಪೊಳ್ಳುತನ ಬಯಲಾಗಬಹುದಾಗಿದೆ. ಹಾಗೂ ಕೊನೆಯದಾಗಿ ನೇರಾನೇರಾ ಹಣಾಹಣಿ ನಡೆದ ಅಸ್ಸಾಂ ಮತ್ತು ತ್ರಿಪುರಾಗಳಂಥ ಕಡೆಗಳಲ್ಲಿ ಬಿಜೆಪಿಯು ಪ್ರಬಲವಾದ ಪ್ರತಿಸ್ಪರ್ಧಿಯೆಂಬುದು ನಿಜವೇ ಆದರೂ ಉಳಿದ ಕಡೆಗಳಲ್ಲಿ ಅದು ಅಧಿಕಾರವೆಂಬ ಅಯಸ್ಕಾಂತವನ್ನು ಮುಂದೊಡ್ಡಿ ಪರಸ್ಪರ ತದ್ವಿರುದ್ಧವಾದ ಶಕ್ತಿಗಳನ್ನು ಒಟ್ಟುಗೂಡಿಸುವ ತಂತ್ರೋಪಾಯಗಳ ಮೂಲಕ ಮಾತ್ರವೇ ಗೆಲ್ಲುತ್ತಿದೆ.

  ಕೃಪೆ: Economic and Political Weekly Mar 10, 2018. Vol. 53. No.10
  ಅನು: ಶಿವಸುಂದರ್
  (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )xxxccccçccçccccccccccccvvvvvvvvvvvvvvvv

  ಒಂದು ವಾಣಿಜ್ಯ ಯುದ್ಧದ ಹಾದಿಯಲ್ಲಿ..
  ೧೯೩೦ರಲ್ಲಿ ಜಾಗತಿಕ ಆರ್ಥಿಕ ಹಿಂದ್ಸರಿತಕ್ಕೆ ಕಾರಣವಾದ ಸಂಗತಿಗಳು ಮರುಕಳಿಸುತ್ತಿವೆಯೇ?

  ಇದೇ ಮಾರ್ಚ್ ೧ ರಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಅವರು ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಸ್ಟೀಲಿನ ಆಮದಿನ ಮೇಲೆ ಶೇ.೨೫ರಷ್ಟು ಆಮದು ಸುಂಕವನ್ನೂ, ಅಲ್ಯುಮಿನಿಯಂ ಆಮದಿನ ಮೇಲೆ ಶೇ. ೧೦ರಷ್ಟು ಆಮದು ಸುಂಕ ಹೆಚ್ಚಳವನ್ನು ಘೋಷಿಸಿದರು. ಇದು ನಿಧಾನವಾಗಿ ಜಗತ್ತಿನಲ್ಲಿ ಒಂದು ವಾಣಿಜ್ಯ ಯುದ್ಧಕ್ಕೆ ಎಡೆಮಾಡಿಕೊಡಬಹುದೆಂಬ ಆತಂಕವನ್ನು ಎಲ್ಲೆಡೆ ಹುಟ್ಟುಹಾಕಿದೆ. ಪತ್ರಿಕೆಯು ಅಚ್ಚಿಗೆ ಹೋಗುವ ವೇಳೆಗೆ ಅಂಥಾ ವಾಣಿಜ್ಯ ಯುದ್ಧವಿನ್ನೂ ಪ್ರಾರಂಭವಾಗಿಲ್ಲ. ವಿಶ್ವದ ಪ್ರಮುಖ ಅರ್ಥಿಕತೆಗಳ ನಡುವೆ ನಡೆಯಬಹುದಾದ ಇಂಥಾ ವಾಣಿಜ್ಯ ಯುದ್ಧವು ವಿಶ್ವದ ವ್ಯಾಪಾರ-ವಹಿವಾಟಿನಲ್ಲಿ ಗಮನಾರ್ಹ ಸಂಕುಚನವನ್ನು ಉಂಟುಮಾಡುತ್ತದೆಂಬುದು ಕೇವಲ ಆತಂಕದ ಮಾತಲ್ಲ. ಅಲ್ಲದೆ ಇದು ವಿಶ್ವದ ಆರ್ಥಿಕತೆಯ ಮೇಲೂ ಹಿಂದ್ಸರಿತದ ಪರಿಣಾಮವನ್ನುಂಟುಮಾಡಬಹುದು. ಇದು ಈಗಾಗಲೇ ನಡೆಯುತ್ತಿರುವ ಭೌಗೋಳಿಕ-ರಾಜಕೀಯ ಸಂಘರ್ಷಗಳ ಮೇಲೆ ಮತ್ತಷ್ಟು ಒತ್ತಡವನ್ನು ಹಾಕುವುದಂತೂ ಖಂಡಿತಾ. ಈಗಾಗಲೇ ರಾಷ್ಟ್ರೀಯವಾದದ ಅಲೆಯ ಮೇಲೆ ಸವಾರಿ ಮಾಡುತ್ತಾ ಅಮೆರಿಕ ಮೊದಲು ಎಂಬ ಆಕ್ರಮಣಶಿಲ ನೀತಿಯನ್ನು ಅನುಸರಿಸುತ್ತಿರುವ ಟ್ರಂ ಅವರ ಉದ್ದೇಶವೂ ಅದೇ ಆಗಿದ್ದರಲ್ಲಿ ಆಶ್ಚರ್ಯವಿಲ್ಲ. ತಮ್ಮ ದೇಶದ ಅಲ್ಯುಮಿನಿಯಂ ಮತ್ತು ಸ್ಟೀಲ್ ಉದ್ದಿಮೆಗಳನ್ನು ನಾಶ ಮಾಡಿರುವ ದೇಶಗಳನ್ನು ಹೆಸರಿಸದೇ ದೂಷಿಸುತ್ತಾ ತಾನು ವಿಧಿಸಿರುವ ಈ ಅತ್ಯಧಿಕ ಪ್ರಮಾಣದ ಆಮದು ಸುಂಕವನ್ನು ಸಮರ್ಥಿಸಿಕೊಂಡ ಟ್ರಂಪ್ ಅವರು: ಒಂದು ದೇಶವು ತನಗೆ ಬೇಕಾದ ಅಲುಮಿನಿಯಂ ಮತ್ತು ಸ್ಟೀಲ್ ಅನ್ನು ಉತ್ಪಾದಿಸಿಕೊಳ್ಳಲು ಅಶಕ್ಯವಾಗಿದೆಯೆಂದರೆ ಆ ದೇಶ ತನ್ನ ಬಹುಪಾಲು ಅಸ್ಥಿತ್ವವನ್ನು ಕಳೆದುಕೊಂಡಿದೆಯೆಂದೇ ಅರ್ಥ ಎಂದು ಗುಡುಗಿದರು.
  ಈ ಆಮದು ಸುಂಕದ ಹೆಚ್ಚಳದ ಘೋಷಣೆಯು ಹೊರಬಿದ್ದದ್ದು ಅಮೆರಿಕದ ಅಲ್ಯುಮಿನಿಯಂ ಮತ್ತು ಸ್ಟೀಲ್ ಉದ್ದಿಮೆದಾರರ ಉನ್ನತ ಮಟ್ಟದ ಸಭೆಯಲ್ಲಿ. ಹೀಗಾಗಿ ದೇಶೀಯ ಅಲ್ಯುಮಿನಿಯಂ ಮತ್ತು ಸ್ಟೀಲ್ ಉತ್ಪನ್ನಗಳ ಬೆಲೆ ಮತ್ತು ಲಾಭದ ದರಗಳೇ ಈ ನಿರ್ಧಾರದ ಹಿಂದಿನ ಪ್ರಧಾನ ಒತ್ತಾಸೆಗಳೆಂಬುದು ಅರ್ಥವಾಗುತ್ತದೆ. ಆದರೆ ಈ ಆಮದು ಸುಂಕದ ಹೆಚ್ಚಳವು ವಾಹನ ಯಂತ್ರೋಪಕರಣಗಳು, ವಾಯುಯಾನ, ನಿರ್ಮಾಣ ಸಾಮಗ್ರಿ, ಯಂತ್ರೋತ್ಪಾದನೆ ಹಾಗೂ ಇನ್ನಿತರ ಅಲ್ಯುಮಿನಿಯಂ ಮತ್ತು ಸ್ಟೀಲ್ ಅನ್ನು ಆಧಾರಿಸಿದ ಕೈಗಾರಿಕೆಗಳ ಮೇಲೆ ಮತ್ತು ಅದರಿಂದಾಗಿ ಅವುಗಳ ಅಂತರರಾಷ್ಟ್ರೀಯ ಸ್ಪರ್ಧಾತ್ಮಕತೆಯ ಮೇಲೆ ಏನು ಪರಿಣಾಮ ಬೀರಬಹುದೆಂಬುದು ಪರಿಗಣನೆಯಲ್ಲೇ ಇರಲಿಲ್ಲವೆಂಬುದು ಸ್ಪಷ್ಟ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆಗಳಲ್ಲಿ ಅಪಾರ ಪ್ರಮಾಣದ ಕಡಿತವನ್ನು ಮಾಡಿಸುವುದರಲ್ಲಿ ಯಶಸ್ವಿಯಾಗಿದ್ದ ಟ್ರಂಪ್ ಅವರ ಪ್ರಧಾನ ಆರ್ಥಿಕ ಸಲಹೆಗಾರ ಮತ್ತು ರಾಷ್ಟ್ರೀಯ ಆರ್ಥಿಕ ಪರಿಷತ್ತಿನ ಮುಖ್ಯಸ್ಥರೂ ಆಗಿದ್ದ ಗ್ಯಾರಿ ಕೋಹನ್ ಅವರು ಮಾರ್ಚ್ ೬ರಂದು ರಾಜೀನಾಮೆ ನೀಡಿದರು. ಈ ಹಿಂದೆ ಗೋಲ್ದ್‌ಮನ್ ಸಾಶೆ ಕಂಪನಿಯ ಮಾಜಿ ಮುಖ್ಯಸ್ಥರಾಗಿದ್ದ ಈ ಕೋಹೆನ್ ಅವರು, ಆಮದು ಸುಂಕ ಹೆಚ್ಚಳದ ಚರ್ಚೆಯಲ್ಲಿ, ಭಾಗವಹಿಸುತ್ತಾ, ಆಮದು ಸುಂಕ ಹೆಚ್ಚಳವು ಅಮೆರಿಕವನ್ನು ತನ್ನ ಭದ್ರತಾ ಕ್ಷೇತ್ರದ ಮಿತ್ರವೃಂದವಾದ ಜರ್ಮನಿ, ಫ್ರಾನ್ಸ್, ಕೆನಡಾ ಮತ್ತು ದಕ್ಷಿಣ ಕೊರಿಯಾಗಳಿಂದ ದೂರಸರಿಸುಬಹುದೆಂಬ ಆತಂಕವನ್ನು ವ್ಯಕ್ತಪಡಿಸಿದ್ದರು. ಮತ್ತು ಆ ತೀರ್ಮಾನವನ್ನು ವಿರೋಧಿಸಿದ್ದ ಟ್ರಂಪ್ ಸರ್ಕಾರದ ರಾಷ್ಟ್ರೀಯ ಭದ್ರತಾ ತಂಡದ ಸದಸ್ಯರಾದ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಚ್. ಆರ್. ಮ್ಯಾಕ್ ಮಾಸ್ಟರ್, ಗೃಹ ಕಾರ್ಯದರ್ಶಿ ರೆಕ್ಸ್ ಟಿಲ್ಲರ್‌ಸನ್ ಮತ್ತು ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಅವರುಗಳ ಜೊತೆಗೂಡಿದ್ದರು ಎಂದು ವರದಿಗಳು ಹೇಳುತ್ತವೆ.
  ಈ ಆಮದು ಸುಂಕ ಹೆಚ್ಚಳಕ್ಕೆ ಐರೋಪ್ಯ ಒಕ್ಕೂಟದಿಂದ ಮತ್ತು ಉತ್ತರ ಅಮೆರಿಕ ಮುಕ್ತ ವಾಣಿಜ್ಯ ಒಪ್ಪಂದ ದ ಸದಸ್ಯ ರಾಷ್ಟ್ರಗಳಾದ ಕೆನಡಾ ಮತ್ತು ಮೆಕ್ಸಿಕೋಗಳಿಂದ ತೀವ್ರ ಪ್ರತಿಕ್ರಿಯೆಗಳು ಬಂದಿವೆ. ಐರೋಪ್ಯ ಒಕ್ಕೂಟದ ವಾಣಿಜ್ಯ ಆಯುಕ್ತರಾದ ಸಿಸಿಲಾ ಮಾಮ್‌ಸ್ಟ್ರೋಮ್ ಅವರು ತಾವು ಈ ಕ್ರಮವನ್ನು ವಿಶ್ವ ವಾಣಿಜ್ಯ ಸಂಸ್ಥೆಯ ವಾಣಿಜ್ಯ ತಗಾದೆ ಪರಿಹಾರ ವ್ಯವ್ವಸ್ಥೆಯಲ್ಲಿ ಪ್ರಶ್ನಿಸುವುದಷ್ಟೇ ಅಲ್ಲದೆ ಪ್ರತಿಕ್ರಮವಾಗಿ ಅಮೆರಿಕಾದ ಹಲವಾರು ಸರಕುಗಳ ಮೇಲೆ ವಿಶ್ವ ವಾಣಿಜ್ಯ ಸಂಸ್ಥೆಯ ಚೌಕಟ್ಟಿನೊಳಗೆ ಪ್ರತೀಕಾರ ರೂಪದ ಆಮದು ಸುಂಕಗಳನ್ನು ಹೇರುವ ಸೂಚನೆಗಳನ್ನು ಕೊಟ್ಟಿದ್ದಾರೆ. ಅವರು ಈ ಕ್ರಮಗಳನ್ನು ವಾಣಿಜ್ಯ ಯುದ್ಧ ಎಂದು ಕರೆಯಲು ಒಪ್ಪಲಿಲ್ಲ. ಆದರೇನು ಐರೋಪ್ಯ ಒಕ್ಕೂಟವೇನಾದರೂ ಹಾಗೆ ಮಾಡಿದಲ್ಲಿ ಅದರ ಕಾರುಗಳ ಮೇಲೆ ಸುಂಕ ಹೆಚ್ಚಿಸುವುದಾಗಿ ಟ್ರಂಪ್ ತತ್‌ಕ್ಷಣವೇ ಗುಡುಗಿದ್ದಾರೆ. ಐರೋಪ್ಯ ಒಕ್ಕೂಟವು ಪ್ರತೀಕಾರರೂಪದಲ್ಲಿ ಸುಂಕ ಹೆಚ್ಚಿಸಲು ಮಾಡಿರುವ ಅಮೆರಿಕದ ಸರಕುಗಳ ಪಟ್ಟಿಯಲ್ಲಿ ಅಮೆರಿಕಾದ ಹಾರ್ಲಿ ಡೇವಿಡ್‌ಸನ್ ಮೋಟಾರ್ ಸೈಕಲ್ಗಳೂ ಇದ್ದದ್ದೇ ಟ್ರಂಪ್ ಅವರು ಯೂರೋಪಿನ ಕಾರುಗಳ ಮೇಲೆ ನಿರ್ಭಂಧಕಾರಿ ಎನಿಸುವಷ್ಟು ಸುಂಕವನ್ನು ಹೆಚ್ಚಿಸಲು ಕಾರಣವಿರಬೇಕು. ಅಮೆರಿಕಾದ ಅಧ್ಯಕ್ಷರ ಕಾರ್ಯಾಲಯದಲ್ಲಿರುವ ಅಮೆರಿಕವೇ ಪ್ರಥಮ ಎನ್ನುವ ಆರ್ಥಿಕ ರಾಷ್ಟ್ರಿಯವಾದಿಗಳಾದ ರಾಷ್ಟ್ರೀಯ ವಾಣಿಜ್ಯ ಪರಿಷತ್ತಿನ ನಿರ್ದೇಶಕ ಪೀಟರ್ ನವಾರೋ ಮತ್ತು ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರೋಸ್ ಅವರುಗಳು ಆ ವೇಳೆಗಾಗಲೇ ರಾಜೀನಾಮೆ ನೀಡಿದ್ದ ಕೋಹನ್ ಅವರ ಮೇಲೆ ಮೇಲುಗೈ ಸಾಧಿಸಿದ್ದರು. ಆದರೆ ಈ ನೀತಿಯನ್ನು ಹಲವಾರು ರಿಪಬ್ಲಿಕನ್ ಸಂಸದರೇ ವಿರೋಧಿಸಿದರು. ಅದರಲ್ಲಿ ಮುಖ್ಯರಾದವರು ಸಂಸತ್ತಿನ ಸಭಾಧ್ಯಕ್ಷರಾದ ಪಾಲ್ ಡಿ ರಾನ್ ಅವರು.
  ಕೆನಡಾ ಮತ್ತು ಮೆಕ್ಸಿಕೋಗಳು ಈ ಆಮದು ಸುಂಕ ಹೆಚ್ಚಳದಿಂದ ತಮಗೆ ವಿನಾಯತಿ ಕೊಡಬೇಕೆಂದು ಕೋರಿವೆ. ಆದರೆ ಉತ್ತರ ಅಮೆರಿಕ ಮುಕ್ತ ವ್ಯಾಪಾg (ನಾಫ್ತಾ) ಒಪ್ಪಂದದ ಮುಂದಿನ ಮಾತುಕತೆಯಲ್ಲಿ ಆ ದೇಶಗಳು ತಮ್ಮ ಎಲ್ಲಾ ಶರತ್ತುಗಳುಗೆ ಒಪ್ಪುವುದಾದರೆ ಮಾತ್ರ ವಿನಾಯತಿಯನ್ನು ಕೊಡಲಾಗುವುದೆಂದು ಆ ದೇಶಗಳ ವಾಣಿಜ್ಯ ಪ್ರತಿನಿಧಿಗಳಿಗೆ ಅಮೆರಿಕವು ಸ್ಪಷ್ಟಪಡಿಸಿಬಿಟ್ಟಿದೆ. ಒಬ್ಬ ವಾಣಿಜ್ಯ ಪ್ರತಿನಿಧಿಯು ಬಣ್ಣಿಸಿದಂತೆ ಅಮೆರಿಕವು ಮೆಕ್ಸಿಕೋ ಮತ್ತು ಕೆನಡಾಗಳ ತಲೆಗೆ ಬಂದೂಕಿಟ್ಟು ತನ್ನ ಶರತ್ತುಗಳನ್ನು ಒಪ್ಪಿಕೊಳ್ಳುವಂತೆ ಮಾಡುತ್ತಿದೆ. ಕುತೂಹಲಕಾರಿಯಾದ ಅಂಶವೇನೆಂದರೆ ಬಿಡಿಬಿಡಿ ದೇಶಗಳಿಗೆ ವಿನಯತಿ ಸಿಗುವುದಿಲ್ಲವಾದರೂ ಅಲ್ಲಿನ ಕಂಪನಿಗಳು ಬೇಕಾದರೆ ವಿನಾಯತಿಯನ್ನು ಕೇಳಬಹುದೆಂದು ವಾಣಿಜ್ಯ ಮತ್ತು ಉತ್ಪಾದಕಾ ನೀತಿಗಳ ಕಾರ್ಯಾಲಯದ ಅಧ್ಯಕ್ಷರೂ ಆಗಿರುವ ನೋವಾರೋ ಅವರು ಹೇಳಿದ್ದಾರೆ. ಮತ್ತು ಆ ಮೂಲಕ ತೀವ್ರತರವಾದ ವಶೀಲಿಬಾಜಿಗಳಿಗೆ ದಿಡ್ಡಿ ಬಾಗಿಲನ್ನು ತೆರೆದಿಟ್ಟಿದ್ದಾರೆ.
  ಮತ್ತೊಂದು ಕುತೂಹಲಕಾರಿಯಾದ ಅಂಶವೇನೆಂದರೆ ಇಷ್ಟೆಲ್ಲ ಮತಬೇಧ ಮತ್ತು ಭಿನ್ನಾಭಿಪ್ರಾಯಗಳ ನಡುವೆಯೂ ಒಂದು ವಿಷಯದ ಸುತ್ತಾ ಸರ್ವಸಮ್ಮತಿ ಏರ್ಪಡುತ್ತಿರುವಂತೆ ಕಾಣುತ್ತಿದೆ. ಅದೇನೆಂದರೆ ಟ್ರಂಪ್ ಅವರು ತಮ್ಮ ಮೇಲೆ ಈ ರೀತಿ ವಾಣಿಜ್ಯ ಯುದ್ಧವನ್ನು ಮಾಡುವ ಬದಲಿಗೆ ಚೀನಾದ ವಿರುದ್ಧ ವಾಣಿಜ್ಯ ಯುದ್ಧ ಮಾಡಬೇಕು ಮತ್ತು ಚೀನಾದ ಸರ್ವಭಕ್ಷಕ ವಾಣಿಜ್ಯ ವರ್ತನೆಯ ವಿರುದ್ಧ ತನ್ನ ನೇತೃತ್ವದಲ್ಲಿ ಒಂದು ಮೈತ್ರಿಕೂಟವನ್ನೇ ರಚಿಸಬೇಕೆಂಬುದರ ಬಗ್ಗೆ ಎಲ್ಲರ ಸಮ್ಮತಿಯೂ ಇದ್ದಂತಿದೆ. ಚೀನಾದ ವಿರುದ್ಧ ಅಂಥ ವಾಣಿಜ್ಯ ಯುದ್ಧವನ್ನು ಅಮೆರಿಕ ನಡೆಸುವುದೇ ಆದಲ್ಲಿ ಅದರ ಮೈತ್ರಿಕೂಟದಲ್ಲಿ ಕಡ್ಡಾಯವಾಗಿ ಸದಸ್ಯರಾಗುವ ತಮ್ಮಂಥ ದೇಶಗಳ ಮೇಲೇಕೆ ಅಮೆರಿಕ ಈ ವಾಣಿಜ್ಯ ಯುದ್ಧವನ್ನು ನಡೆಸುತ್ತಿದೆ ಎಂಬ ಪ್ರಶ್ನೆಯನ್ನು ಕೇಳಲಾಗುತ್ತಿದೆ. ಚೀನಾದ ಸಾಫ್ತ್‌ವೇರ್ ಕಳ್ಳ ಸಾಗಾಣಿಕೆ, ವಾಣಿಜ್ಯ ರಹಸ್ಯಗಳ ಕಳ್ಳತನ, ಮತ್ತು ಅದು ನಡೆಸುತ್ತಲೇ ಬಂದಿರುವ ನಿರ್ಬಂಧಿತ ಸರಕುಗಳ ವಹಿವಾಟುಗಳು ಅವರೆಲ್ಲರ ದಾಳಿಗಳ ನಿರ್ದಿಷ್ಟ ಗುರಿಗಳಾಗಿವೆ. ಪ್ರಧಾನ ಶತ್ರು ಚೀನಾ ಅಗಿರುವುದರಿಂದ ೧೯೮೮ರ ಸರ್ವವ್ಯಾಪಿ ವಾಣಿಜ್ಯ ಮತ್ತು ಸ್ಪರ್ಧಾತ್ಮಕತೆಯ ಕಾಯಿದೆಯ ೩೦೧ನೇ ಸೆಕ್ಷನ್ ಅನ್ನು ಬಳಸಬೇಕು. ಚೀನಾ ನಡೆಸುತ್ತಿರುವ ತಂತ್ರಜ್ನಾನದ ಕಾನೂನುಬಾಹಿರ ವರ್ಗಾವಣೆ ಮತ್ತು ಬೌದ್ಧಿಕ ಸ್ವಮ್ಯ ಹಕ್ಕುಗಳ ಕಳ್ಳತನಗಳಿಂದ ಅಮೆರಿಕದ ವಾಣಿಜ್ಯ ಹಿತಾಸಕ್ತಿಗಳಿಗಾಗಿರುವ ಹಾನಿಗಾಗಿ ಶಿಕ್ಷಿಸಬೇಕು. ಅಷ್ಟು ಮಾತ್ರವಲ್ಲದೆ ಚೀನಾದಿಂದ ಆಮದು ಮಾಡಿಕೊಳ್ಳುವ ಸರಕುಗಳಾದ ಪಾದರಕ್ಷೆಗಳು, ಜವಳಿ ಮತ್ತು ವಸ್ತ್ರಗಳು ಹಾಗೂ ಎಲೆಕ್ಟ್ರಾನಿಕ್ ಗ್ರಾಹಕ ಸರಕುಗಳ ಮೇಲೆ ನಿರ್ಬಂಧಕಾರಿ ಮಟ್ಟಕ್ಕೆ ಆಮದು ಸುಂಕವನ್ನು ಹೆಚ್ಚಿಸಬೇಕೆಂಬ ಕೂಗೂ ಸಹ ದೊಡ್ಡ ಮಟ್ಟದಲ್ಲಿ ಎದ್ದಿದೆ.
  ಆದರೆ ಚೀನಾ ಇದರಿಂದ ವಿಚಲಿತಗೊಳ್ಳುತ್ತಿಲ್ಲ. ಟ್ರಂಪ್ ಅರ ಈ ಪ್ರಾರಂಭಿಕ ಹಂತದ ಸ್ವ ರಕ್ಷಣಾ ನೀತಿಗಳನ್ನು ವಿಶ್ವ ವಾಣಿಜ್ಯ ಸಂಸ್ಥೆಯ ನಿಯಮಗಳಿಗೊಳಪಟ್ಟ ಬಹುಪಕ್ಷೀಯ ವಾಣಿಜ್ಯ ವ್ಯವಸ್ಥೆಯ ಯೋಜಿತ ಉಲ್ಲಂಘನೆಯ ಭಾಗವಾಗಿಯೇ ಪರಿಗಣಿಸಬೇಕು. ಇದೇ ರೀತಿ ಅಮೆರಿಕವು ೧೯೩೦ರ ಜೂನ್‌ನಲ್ಲಿ ಸ್ಮೂತ್-ಹಾಲೀ ಸುಂಕ ಕಾಯಿದೆಯೊಂದನ್ನು ಜಾರಿಗೆ ತಂಂದಿತ್ತು. ಅದರ ಮೂಲಕ ಅಮೆರಿಕವು ೨೦೦೦೦ ಸರಕುಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕದೊಂದಿಗೆ ವಾಣಿಜ್ಯ ಸಂಬಂಧ ಹೊಂದಿದ್ದ ಎಲ್ಲಾ ಪ್ರಮುಖ ದೇಶಗಳು ಅಮೆರಿಕದ ಸರಕುಗಳ ವಿರುದ್ಧ ತಮ್ಮ ದೇಶದ ಆಮದು ಸುಂಕಗಳನ್ನು ಹೆಚ್ಚಿಸಿದವು. ಇದು ಒಂದು ತೀವ್ರ ವಾಣಿಜ್ಯ ಯುದ್ಧಕ್ಕೂ, ವಿಶ್ವ ವಾಣಿಜ್ಯ ವಹಿವಾಟಿನ ಪ್ರಮಾಣ ಕಡಿತಗೊಳ್ಳುವುದಕ್ಕೂ ಮತ್ತು ಆ ಮೂಲಕ ಜಗತ್ತಿನಲ್ಲಿ ಒಂದು ಮಹಾನ್ ಆರ್ಥಿಕ ಕುಸಿತ ಉಂಟಾಗುವುದಕ್ಕೂ ಕಾರಣವಾಯಿತು.
  ಕೃಪೆ: Economic and Political Weekly Mar 10, 2018. Vol. 53. No.10
  ಅನು: ಶಿವಸುಂದರ್
  (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )

  • Comments Off on ಈಶಾನ್ಯ ಭಾರತದ ಚುನಾವಣೆಗಳು ಮೂರು ಭಿನ್ನ ಭಿನ್ನ ಕಥೆಗಳನ್ನು ಹೇಳುತ್ತವೆ.
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.