05:43 am Wednesday, July 24, 2019
 • ಅಂಬೇಡ್ಕರರ ಯಶಸ್ಸನಿನ ಬೆನ್ನೆಲುಬು ಮಹಾಮಾತೆ ರಮಾಬಾಯಿ

  By admin - Wed Feb 07, 8:19 am

  • Comments Off on ಅಂಬೇಡ್ಕರರ ಯಶಸ್ಸನಿನ ಬೆನ್ನೆಲುಬು ಮಹಾಮಾತೆ ರಮಾಬಾಯಿ
  • 0 views

  ಜಗತ್ತಿನ ಮಹಾಮಾತೆ ಅಂಬೇಡ್ಕರರ ಯಶಸ್ಸನಿನ ಬೆನ್ನೆಲುಬು ರಮಾಬಾಯಿಯವರ ಜನ್ಮದಿನದ ಶುಭಾಷಯಗಳು. ಅವರ ಬದುಕಿನ ಕುರಿತು

  ಆಧುನಿಕ ವಿದ್ಯಾವಂತರೇ…
  ನಿಮಗೆಷ್ಟು ಗೊತ್ತು
  ಮಾತೆ *ರಮಾಬಾಯಿ ಅಂಬೇಡ್ಕರ್?*

  ನಿಮಗೆಲ್ಲರಿಗೂ ಪೆ.07ರ ಮಾತೆ ರಮಾಬಾಯಿ ಅಂಬೇಡ್ಕರ್ ಅವರ ಹುಟ್ಟು ಹಬ್ಬದ ಶುಭಾಷಯಗಳು….

  ಒಬ್ಬ ಪ್ರಬುದ್ಧ ಯಶಸ್ವಿ ಪುರುಷನ ಹಿಂದೆ ಮಾತೆಯಂತಹ ಹೆಂಡತಿ ಇರುತ್ತಾರೆ ಎನ್ನುವುದು ಸತ್ಯ ಎನ್ನಿಸುವುದೆ ಇಂತಹ ನೂರಾರು ರಮಾಬಾಯಿ ಹೆಣ್ತನದವರಿಂದ ಮಾದರಿಯಾಗಲಿ..

  ಈ ಜಗತ್ತಿನ ಯಾವ ನಾಯಕರಿಗೂ ಸಿಗದಂತಹ ತ್ಯಾಗಮಯಿ ಸತಿ. ಮಾತೆ “ರಮಾಬಾಯಿ”ಯವರು ಸಂಗಾತಿಯಾಗಿ ಅಂಬೇಡ್ಕರ್ ರವರಿಗೆ ಸಿಕ್ಕಿದ್ದೆ ಒಂದು ರೀತಿಯಲ್ಲಿ ಅಂಬೇಡ್ಕರ್ ಭಾರತದೇಶಕ್ಕೆ ಸಂವಿಧಾನ ರಚಿಸಿ ಆ ಮೂಲಕ ಸಮಸಮಾಜಕ್ಕೆ ಅಡಿಗಲ್ಲು ಹಾಕಲು ಕಾರಣವಾಯಿತು.
  ರಮಾಬಾಯಿಯವರು ಮಹಾರಾಷ್ಟ್ರದ ದಾಭೋಳ ನಗರದ ಸಮುದ್ರದಂಡೆಯ ಪಕ್ಕದ ವಣಂದಗಾವ ಎಂಬ ಊರಿನ ಭಿಕೊವಲಂಗಕರ ಮತ್ತು ರುಕ್ಮಿಣಿ ಎಂಬ ದಂಪತಿಗಳ 2ನೇ ಮಗಳು. ತಂದೆಯದು ಹಡಗಿನಿಂದ ಮೀನಿನ ಬುಟ್ಟಿಯನ್ನು ಹೊರುವ ಕಾಯಕ. ಈ ಕೆಲಸದಿಂದ ಅವರಿಗೆ ಎದೆ ನೋವು ಬಂದು ತೀರಿಕೊಂಡರು. ತಾಯಿ ರುಕ್ಮಿಣಿಯವರು ಸಹ ಅದೆ ಯೋಚನೆಯಲ್ಲಿಯೆ ತೀರಿಹೋದಾಗ, ಭಿಕೋ ವಲಂಗಕರನ ಅಣ್ಣ ಗೋಪಾಳ ಬಾಬಾ ಈ ರಮಾಬಾಯಿ ಮತ್ತು ಇವರ ತಂಗಿ, ತಮ್ಮನನ್ನು ಮುಂಬೈಗೆ ಕರೆದುಕೊಂಡು ಬಂದರು. ಅಲ್ಲಿ ಗೋಪಾಲ ಬಾಬಾ ಸೌದೆಡಿಪೊ ಒಂದರಲ್ಲಿ ಕೆಲಸ ಮಾಡುತ್ತಿದ್ದರು.
  ಈ ವೇಳೆಗೆ ಅಂಬೇಡ್ಕರರ ತಂದೆ ರಾಮ್ಜಿ ಸಕ್ಪಾಲರು ಅಂಬೇಡ್ಕರರಿಗೆ 4-5 ಕಡೆ ವಧು ನೋಡಿ ರಮಾನೇ ನಮ್ಮ ಮನೆಗೆ ತಕ್ಕ ಸೊಸೆ, ಚಿಕ್ಕ ವಯಸ್ಸಿನಲ್ಲೆ ತಂದೆ-ತಾಯಿ ಕಳೆದುಕೊಂಡು ತುಂಬ ಕಷ್ಟ ಅನುಭವಿಸಿದ್ದಾಳೆ. ಇಂಥವಳೆ ನಮಗೆ ಸೊಸೆಯಾಗಲಿ ಎಂದು, ೧೯೦೬ ರಲ್ಲಿ ಆ ಕಾಲಕ್ಕೆ ಅಸ್ಪೃಶ್ಯರಿಗೆ ಮದುವೆ ನಡೆಸಲು ಜಾಗ ಸಿಗದಿಲ್ಲದ್ದರ ಕಾರಣದಿಂದ ಮುಂಬೈ ನಗರದ ಬಾಯಖಳಿ ಮೀನಿನ ಮಾರ್ಕೆಟ್ನ ನ ಜಾಗದಲ್ಲಿ 9ನೇ ವಯಸ್ಸಿನ ರಮಾಬಾಯಿ ಜೊತೆ ಮಧ್ಯರಾತ್ರಿಯಲ್ಲಿ 10ನೇ ತರಗತಿ ಪಾಸಾದ17ನೇ ವಯಸ್ಸಿನ ಅಂಬೇಡ್ಕರ್ ಅವರಿಗೆ ವಿವಾಹ ನಡೆಸಿದರು. ಅಲ್ಲಿಂದಲೆ ಬಡತನದ ಕ್ರೂರತೆ ರಮಾಬಾಯಿಯವರಿಗೆ ಹೆಚ್ಚುತ್ತಾ ಹೋಯಿತು.
  ಅಂಬೇಡ್ಕರ್ ರವರು ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿದ್ದಾಗ ಅವರ 2ನೇ ಮಗ ರಮೇಶ್, ಲಂಡನ್ನಲ್ಲಿದ್ದಾಗ ಗಂಗಾಧರ್, ಹಾಗೆಯೇ ಅವರ ಒಬ್ಬಳ ಮಗಳು ಇಂದು ಹಾಗೂ ಕೊನೆಯ ಮಗ ರಾಜರತ್ನ ಸಹ ಅಪೌಷ್ಠಿಕತೆ ಮತ್ತು ನಿಮೋನಿಯದಿಂದ ತೀವ್ರತರವಾಗಿ ಬಳಲಿ ತೀರಿಕೊಂಡರು.
  ಇಂತಹ ಸನ್ನಿವೇಶದಲ್ಲಿ ಗಟ್ಟಿ ನಿರ್ಧಾರ ಮಾಡಿ, ಎದೆಯೊಡೆದು ಹೋಗುವ ದುಃಖವನ್ನು ತಾವೊಬ್ಬರೆ ಅನುಭವಿಸಿ ಬಾಬಾ ಸಾಹೇಬರಿಗೆ ಅವರ ಶಿಕ್ಷಣಕ್ಕೆ ಮತ್ತು ಹೋರಾಟಕ್ಕೆ ಯಾವುದೇ ಭಂಗ ಬರದಂತೆ ನಿಭಾಯಿಸಿದ ತ್ಯಾಗಮಯಿ ಮಾತೆ ರಮಾಬಾಯಿ.
  ಈ ತಾಯಿ ಇಂತಹ ಸನ್ನಿವೇಶದಲ್ಲೂ ಅಂಬೇಡ್ಕರರಿಗೆ ಕಳೆದು ಹೋದ ಮಕ್ಕಳ ಬಗ್ಗೆ ಚಿಂತಿಸಬೇಡಿ. ಕೋಟ್ಯಾಂತರ ಶೋಷಿತರ ಮಕ್ಕಳು ಕೂಡ ನಮ್ಮ ಮಕ್ಕಳೆ. ನಿಮ್ಮ ಅಭ್ಯಾಸದೊಳಗೆ ನಮ್ಮ ಮತ್ತು ಈ ದೇಶದ ಹಿತವಿದೆ ಎಂದು ಪತ್ರ ಬರೆಯುತ್ತಾರೆ.
  ರಮಾಬಾಯಿಯವರು ಎಂತಹ ಸ್ವಾಭಿಮಾನಿ ಎಂದರೆ 1923 ರಲ್ಲಿ ಲಂಡನ್ನಿಂದ ಅಂಬೇಡ್ಕರ್ ಬ್ಯಾರಿಸ್ಟರ್ ಪದವಿ ಪಡೆದು ಭಾರತಕ್ಕೆ ಬಂದಾಗ, ಅಂಬೇಡ್ಕರ್ ಈ ದೇಶಕ್ಕೆ ಮೊಟ್ಟ ಮೊದಲ ಬ್ಯಾರಿಸ್ಟರ್. ಅವರನ್ನು ಮುಂಬೈ ಹಡಗು ನಿಲ್ದಾಣದಲ್ಲಿ ಸ್ವಾಗತಿಸಲು ಸಾವಿರಾರು ಜನ ಸೇರಿದ್ದರು. ಆದರೆ ರಮಾಬಾಯಿಯವರಿಗೆ ಬಹಳ ಕಠಿಣ ಸ್ಥಿತಿ, ಕಾರಣ ಇರುವ ಸೀರೆ ಹರಿದು ಹೋಗಿತ್ತು. ನಾನು ಹೋಗದಿದ್ದರೆ ಹೇಗೆ ಎಂದು ಬೇರೆ ಗತಿಯಿಲ್ಲದೆ ಶಾಹು ಮಹಾರಾಜರು ಅಂಬೇಡ್ಕರ್ ರವರಿಗೆ ಸನ್ಮಾನಿಸಿ ನೀಡಿದ್ದ ಜರಿ ಶಾಲನ್ನು ಸೀರೆಯಾಗಿ ಉಟ್ಟುಕೊಂಡು ಹೋಗಿದ್ದರು. ಇಂತಹ ಮಾನಸಿಕ ಹಿಂಸೆಯನ್ನು ಆ ತಾಯಿ ಹೇಗೆ ಅನುಭವಿಸಿರಬೇಕು.?
  ರಮಾಬಾಯಿಯವರು ತನ್ನ ಗಂಡ ಬ್ಯಾರಿಸ್ಟರ್ ಆಗಿದ್ದರು ಎಂತಹ ಸರಳ ಜೀವನ ನಡೆಸುತ್ತಿದ್ದರೆಂದರೆ, ಅದೆಷ್ಟೋ ದಿನಗಳು ಮಿತಿಯಾಗಿರುತ್ತಿದ್ದ ರೊಟ್ಟಿಗಳನ್ನು ಮಕ್ಕಳಿಗೆ ನೀಡಿ ಅರ್ಧರಾತ್ರಿಯವರೆಗೂ ಅಂಬೇಡ್ಕರರನ್ನು ಕಾದು ಅವರು ತಿಂದು ಉಳಿದರೆ ಮಾತ್ರ ತಿನ್ನು ತಿದ್ದರು. ಇಲ್ಲವೆಂದರೆ ತಿಂದಂತೆ ನಟಿಸುತ್ತಿದ್ದರು. ಹಾಗಾಗಿ ಬಡತನ ಅವರ ಅಂಗಾಂಗಗಳನ್ನು ತಿನ್ನುತಿತ್ತು.
  ಒಂದೆರಡು ಬೆಂಕಿ ಪೊಟ್ಟಣದಲ್ಲೆ ತಿಂಗಳುಗಳನ್ನು ಉರುಳಿಸುತ್ತಿದ್ದರು. ಹರಿದ ಸೀರೆಯ ಜೊತೆಗೆ ಸಂಸಾರಕ್ಕೆ ತೇಪೆ ಹಾಕುವುದು ಅವರ ಬದುಕಾಗಿತ್ತು. ಉಪ್ಪು, ಖಾರ, ಕಾಳು ಕಡ್ಡಿಗಳ ಮಿತಿಯಲ್ಲಿಯೇ ಬದುಕು ನಡೆಯುತಿತ್ತು. ಅಂಬೇಡ್ಕರ್ ರವರು ಬ್ಯಾರಿಸ್ಟರ್ ಪಡೆದಿದ್ದು, ಸಂಪ್ರದಾಯವಾದಿ ಸಮಾಜದಲ್ಲಿ ಅಸೂಯೆ ಮೂಡಿಸಿತ್ತು. ಬ್ಯಾರಿಸ್ಟರ್ ಓದಿದವನ ಹೆಂಡತಿ ವಿದೇಶಕ್ಕೆ ಹೋಗದೆ ಇಲ್ಲೇಕೆ ಸೌದೆಗಾಗಿ ಅಲೆಯುತ್ತಿದ್ದಾಳೆ, ಅದು ಬಿಸಿಲಿನಲ್ಲಿ ಬರಿಗಾಲಿನಲ್ಲಿ, ಹರಿದ ತೇಪೆ ಹಾಕಿದ ಸೀರೆಯಲ್ಲಿ,? ಮೈ ಮೇಲೆ ಒಂದು ಒಡವೆಯೂ ಇಲ್ಲ ಎಂದು ಹಂಗಿಸುತ್ತಿದ್ದರು. ಹಾಗಾಗಿ ರಮಾಬಾಯಿ ಈ ನಿಂದನೆಗಳಿಂದ ತಪ್ಪಿಸಿಕೊಳ್ಳಲು ಬೆಳಗಿನ ಜಾವದಲ್ಲಿ ಅಥವಾ ಮುಸ್ಸಂಜೆ ಮುಸುಕಿನಲ್ಲಿ ಮಾತ್ರ ಉರುವಲಿಗಾಗಿ ಅಲೆಯುತಿದ್ದರು.
  ಈ ತಾಯಿ ಬಾಬಾ ಸಾಹೇಬರನ್ನ ಹೇಗೆ ಅರ್ಥಮಾಡಿಕೊಂಡಿದ್ದರೆಂದರೆ, ಇವರ ಕೊನೆಯ ಮಗ ರಾಜರತ್ನ 1926 ರಲ್ಲಿ ತೀರಿಕೊಂಡಾಗ ಮಹಾಡ್ ಸಮ್ಮೇಳನದ ಸಿದ್ಧತೆಯಲ್ಲಿ ಹೊರಗೆ ಹೋಗಿದ್ದ ಬಾಬಾ ಸಾಹೇಬರು ಮನೆಗೆ ಬರುತ್ತಾರೆ. ರಮಾಬಾಯಿಯವರು ಗೋಳಾಡುತ್ತಾ ಒದ್ದಾಡುತ್ತಿರುತ್ತಾರೆ. ಅಕ್ಕಪಕ್ಕದ ಮನೆಯವರು ಬಂದು ರಮಾಬಾಯಿಯವರಿಗೆ ಸಾಂತ್ವನ ಹೇಳಿ ಶವ ಸಂಸ್ಕಾರಕ್ಕೆ ಸಿದ್ಧತೆ ನಡೆಸುವಾಗ ಅಂಬೇಡ್ಕರ್ ರವರ ಬಳಿ ಬಂದು ಮಗುವಿನ ಶವಕ್ಕೆ ಬಟ್ಟೆ ಹೊದಿಸಲು, ಹೊಸ ಬಟ್ಟೆ ತರಲು ಹಣ ಕೇಳಿದಾಗ ಅಂಬೇಡ್ಕರ್ ತಮ್ಮ ಬಳಿ ಹಣವಿಲ್ಲದೆ ವಿಚಲಿತರಾಗಿ ಒದ್ದಾಡುತ್ತಿರುವಾಗ, ತಮ್ಮನ್ನು ತಾನೆ ಸಮಾಧಾನ ಪಡಿಸಿಕೊಂಡ ತಾಯಿ ರಮಾಬಾಯಿ ತನ್ನ ಹರಿದ ಸೀರೆಯಲ್ಲಿಯೆ ಸ್ವಲ್ಪ ಹರಿದು ಮಗುವಿನ ಶವಕ್ಕೆ ಸುತ್ತಿ ಅಂತ್ಯಕ್ರಿಯೆಗೆ ಅಣಿಗೊಳಿಸಿ, ತನ್ನ ಗಂಡನ ಗೌರವಕ್ಕೆ ಚ್ಯುತಿ ಬರದಂತೆ ಕಾಪಾಡಿದ ಮಹಾಸತಿ. ಈ ಜಗತ್ತಿನ ಯಾವ ನಾಯಕರಿಗೂ ಇಂತಹ ಸ್ಥಿತಿ ಬಂದಿಲ್ಲ. ಹಾಗೂ ಈ ಜಗತ್ತಿನ ಯಾವ ನಾಯಕರಿಗೂ ಇಂತಹ ತ್ಯಾಗಮಯಿ ಬಾಳ ಸಂಗಾತಿಯಾಗಿ ಸಿಕ್ಕಿಲ್ಲ.

  ಈ ಮಹಾ ತಾಯಿ ನಮ್ಮ ಕರ್ನಾಟಕಕ್ಕೆ ಬಂದಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಲೇಬೇಕು. ಈ ಘಟನೆಯನ್ನು ತಾಯ್ತನದ ಮಮತೆ, ಕರುಣೆಯ ಸೆಲೆ ಗೋಚರಿಸುತ್ತದೆ. ಅಂಬೇಡ್ಕರ್ ದುಂಡು ಮೇಜಿನ ಪರಿಷತ್ತಿನ ಸಲುವಾಗಿ 1930 ರಲ್ಲಿ ಲಂಡನ್ಗೆ ಹೋಗುವಾಗ ರಮಾಬಾಯಿಯವರು ಅನಾರೋಗ್ಯ ಪೀಡಿತರಾಗಿದ್ದರು. ಆಗ ಅಂಬೇಡ್ಕರ್ ರವರ ಹಿತೈಶಿಗಳಾದ ವರಾಳೆ ದಂಪತಿಗಳೊಂದಿಗೆ ರಮಾಬಾಯಿ ಧಾರವಾಡಕ್ಕೆ ಬರುತ್ತಾರೆ. ಧಾರವಾಡದ ಕೊಪ್ಪದ ಕೇರಿಯಲ್ಲಿ ಡಾ. ಪರಾಂಜಪೆ ಅನ್ನೊ ಆಯುರ್ವೇದ ಪಂಡಿತರು ಮಾತೆ ರಮಾಬಾಯಿಯವರಿಗೆ ಚಿಕಿತ್ಸೆ ನೀಡುತ್ತಾರೆ. ಈ ಹಿಂದೆ ಅಂಬೇಡ್ಕರ್ ರವರು ಧಾರವಾಡದಲ್ಲಿ ಬುದ್ಧರಕ್ಕಿತ ವಸತಿಶಾಲೆಯನ್ನು ಸ್ಥಾಪಿಸಿದ್ದರು. ಅದಕ್ಕೆ ವರಾಳೆಯವರೆ ವಾರ್ಡನ್ ಆಗಿದ್ದರು. ರಮಾಬಾಯಿಯವರಿಗೆ ಚಿಕಿತ್ಸೆಯಿಂದ ಸ್ವಲ್ಪ ಚೇತರಿಕೆ ಕಂಡಾಗ, ಬುದ್ಧರಕ್ಕಿತ ವಸತಿ ನಿಲಯಕ್ಕೆ ಹೋಗುತ್ತಾರೆ. ಅಲ್ಲಿ ಮಕ್ಕಳು ತಿಂಡಿ ತಿಂದಿಲ್ಲ ಎಂಬುದನ್ನು ತಿಳಿದು, ವರಾಳೆಯವರನ್ನು ವಿಚಾರಿಸಿದಾಗ ಅವರು ಸರಕಾರದಿಂದ ಅನುಧಾನ ತಡವಾಗಿದೆ ಮತ್ತು ಅಂಗಡಿಯವನು ನಾವು ಬಾಕಿ ನೀಡದೆ ದವಸ ಧಾನ್ಯ ನೀಡುತ್ತಿಲ್ಲ ಎನ್ನುತ್ತಾರೆ. ಆಗ ” ಈ ನಿಲಯವನ್ನು ಬಾಬಾಸಾಹೇಬರು ಸ್ಥಾಪಿಸಿದ್ದು, ಇಲ್ಲಿರುವ ಎಲ್ಲಾ ಮಕ್ಕಳು ನಮ್ಮ ಮಕ್ಕಳೆ, ಇವರ ತಾಯಿಯಾದ ನಾನು ಹೇಗೆ ಸುಮ್ಮನಿರಲಿ’ ಎಂದು ಕೈಗಳಲಿದ್ದ 4 ಬಂಗಾರದ ಬಳೆಗಳನ್ನು ವರಾಳೆಯವರಿಗೆ ನೀಡಿ ಇದನ್ನು ಒತ್ತೆಯಿಡಿ ಇಲ್ಲ ಮಾರಿ. ಅದರಲ್ಲಿ ಬಂದ ಹಣದಲ್ಲಿ ಊಟಕ್ಕೆ ವ್ಯವಸ್ಥೆ ಮಾಡಿ ಎಂದು ನುಡಿದ ಆ ಮಹಾ ತಾಯಿಯ ತಾಯ್ತನದ ಮಮತೆಯನ್ನು ನಾವು ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದು ನಮ್ಮ ಕಲ್ಪನೆಗೆ ಮೀರಿದ ಸಂಗತಿ.
  ಈ ತಾಯಿಯೆ ಒಮ್ಮೆ ತ್ಯಾಗದ ಕುರಿತು ಅಂಬೇಡ್ಕರ್ ರವರು ಹೇಳಿದ್ದ ಕತೆಯನ್ನು ಒಂದು ಸಣ್ಣ ಸಭೆಯಲ್ಲಿ ಹೇಳುತ್ತಾರೆ. ಅದೇನೆಂದರೆ, ‘ಗ್ರೀಕ್ ಪುರಾಣದೊಳಗೆ ಬರುವ ಈ ಕತೆಯಲ್ಲಿ ಡಿಮೇಟರ್ ಅನ್ನೊದೇವತೆ, ಮಾನವ ರೂಪಧರಿಸಿ ಭೂಮಿಗೆ ಬಂದಾಗ ಇಲ್ಲಿರೋ ರಾಣಿ ಆ ಡಿಮೇಟರ್ಳನ್ನು, ತನ್ನ ದಾಸಿಯನ್ನಾಗಿ ನೇಮಿಸಿಕೊಳ್ಳುತ್ತಾಳೆ. ದಾಸಿಯ ಕೆಲಸ ಏನೆಂದರೆ ರಾಣಿಯ ಸಣ್ಣ ಮಗುವನ್ನು ನೋಡಿಕೊಳ್ಳೋದು, ಆದ್ರೆ ಮನುಷ್ಯ ರೂಪದಲ್ಲಿರುವ ಡಿಮೇಟರ್ಗೆ ಆ ಮಗುವನ್ನು ದೇವರು ಮಾಡಬೇಕು ಅನ್ನೋ ಆಸೆ. ಅದಕ್ಕೆ ರಾತ್ರಿ ಎಲ್ಲಾ ಮಲಗಿದ ಮೇಲೆ ಮಗುವಿನ ಬಟ್ಟೆ ಎಲ್ಲಾ ತೆಗೆದು ಬಿಸಿ ಬೂದಿ ಮೇಲೆ ಮಲಗಿಸಿ ಅಭ್ಯಾಸ ಮಾಡಿಸ್ತಿದ್ಲು. ಅದು ಮಗುಗೆ ಅಭ್ಯಾಸ ಆಗ್ತಿತ್ತು. ತೇಜಸ್ಸು ಕಾಣ್ತಿತ್ತು. ಆದ್ರೆ ಒಂದುದಿನ ಆ ರಾಣಿ ಅಚಾನಕ್ಕಾಗಿ ಈ ಮಗುವಿನ ಕೋಣೆಗೆ ಬಂದು ನೋಡ್ತಾಳೆ. ಇಲ್ಲಿ ನಡೆಯೋದ್ನೆಲ್ಲಾ ನೋಡಿ, ಹೆದರಿ ತನ್ನ ಕೂಸನ್ನ ಎತ್ಕೊಂಡು ಎದೆಗೆ ಅವಚಿಕೊಂಡು, ಆ ದಾಸಿನ ಕೆಲಸದಿಂದ ಓಡಿಸಿದ್ಲು. ಇಲ್ಲಿ ರಾಣಿಗೆ ತನ್ನ ಮಗುವೇನೂ ಸಿಕ್ತು. ಆದರೆ ಸಾಮರ್ಥ್ಯಶಾಲಿ ದೇವರನ್ನು ಕಳೆದುಕೊಂಡಳು. ಅಂದರೆ ಬೆಂಕಿಯಲಿ ಸುಟ್ಟರೆ ದೈವತ್ವ ಬರಲ್ಲ. ನಾವು ಎಷ್ಟೇ ಕಷ್ಟ ಬಂದರೂ ಹೋರಾಟದ ಹಾದಿ ಬಿಡಬಾರದು. ತ್ಯಾಗ ಮಾಡದೆ ನಮ್ಮ ಉದ್ಧಾರ ಸಾಧ್ಯವಿಲ್ಲ ‘ ಅಂತ ಮಾತು ಮುಗಿಸುತ್ತಾರೆ.

  ಈ ತಾಯಿ ನಮಗೆ ಈ ದೇಶಕೋಸ್ಕರ ಮಾಡಿದ ತ್ಯಾಗವನ್ನು ನಾವು ನಮ್ಮ ಅಕ್ಕ ತಂಗಿಯರಿಗೆ, ಮಕ್ಕಳಿಗೆ ಮತ್ತು ಮಡದಿ, ಗೆಳತಿ ಎಲ್ಲರಿಗೂ ತಿಳಿಸಬೇಕಾಗಿದೆ. ನಮ್ಮ ಮಕ್ಕಳಿಗೆ ನೆಗಡಿಯಾದರೂ ರೇಗಾಡುವ, ಸೀರೆ ಕೊಡಿಸಲಿಲ್ಲವೆಂದರೆ ಮುನಿಸಿಕೊಳ್ಳುವ, ಈ ದಿನಕ್ಕೆ ಇಂತದ್ದೆ ಬೇಕೆಂದು ಕೇಳುವ, ಇಂದಿನ ನಮ್ಮವರಿಗೆ ಈ ತಾಯಿ ಕುರಿತು ತಿಳಿಸಬೇಕಾಗಿದೆ. ಹಾಗೆಯೇ ನಮಗೆ ಈ ತಾಯಿಯ ಮಾತೃತ್ವದ ಗುಣ ಬರಬೇಕಾಗಿದೆ. ಈ ತಾಯಿಯ ತ್ಯಾಗದಿಂದಲೇ ನಮಗೆ ಪ್ರಬುದ್ಧ ಭಾರತ ನಿರ್ಮಾತೃ ಅಂಬೇಡ್ಕರ್ ಸಿಕ್ಕಿದ್ದು. ಹಾಗಾಗಿಯೇ ರಮಾಬಾಯಿಯ ತ್ಯಾಗವೆ ಅಂಬೇಡ್ಕರ್ ರವರ ಶಕ್ತಿ.

  ದಿನಾಂಕ 7, ಫೆಬ್ರವರಿ ಈ ಮಹಾಮಾತೆಯ ಜನ್ಮದಿನ. ಈ ನೆನಪಲ್ಲಿ ಈ ಮಹಾತಾಯಿಯ ಚೇತನ ನಮ್ಮನ್ನು ಆವರಿಸಲಿ. ನಮಗೆ ದಾರಿದೀಪವಾಗಲಿ.

  ಸಂಗ್ರಹ
  #ಕಾದಲ್ ಸಿದ್ದಪ್ಪ, ಎಂ.ಎಸ್. ಹಳ್ಳಿ,ಮಂಡ್ಯ

  • Comments Off on ಅಂಬೇಡ್ಕರರ ಯಶಸ್ಸನಿನ ಬೆನ್ನೆಲುಬು ಮಹಾಮಾತೆ ರಮಾಬಾಯಿ
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.