02:46 am Friday, June 21, 2019
 • ಭೂಮಿ-ವಸತಿ ಸಮಸ್ಯೆ ಜನವರಿ 10ರಿಂದ ಸತ್ಯಾಗ್ರಹ

  By admin - Tue Jan 09, 12:02 pm

  • Comments Off on ಭೂಮಿ-ವಸತಿ ಸಮಸ್ಯೆ ಜನವರಿ 10ರಿಂದ ಸತ್ಯಾಗ್ರಹ
  • 0 views

   

  File photo

  ಭೂಮಿ-ವಸತಿ ಸಮಸ್ಯೆಯ ಸಮಗ್ರ ಪರಿಹಾರ ಸೂತ್ರಕ್ಕಾಗಿ*

  *’ನಿತ್ಯ ನೂರು ಜನರ’ ನಿರಂತರ ಸತ್ಯಾಗ್ರಹ*

  *ಜನವರಿ 10ರಿಂದ, ಸರ್ಕಾರದ ತೃಪ್ತಿಕರ ತೀರ್ಮಾನ ಹೊರಬರುವ ತನಕ.*

  *ವಲ್ಲಭ ನಿಕೇತನ ಆಶ್ರಮ [ಗಾಂಧಿ ಭವನದ ಪಕ್ಕ], ಬೆಂಗಳೂರು.*

  ಹೋರಾಟದ ಒಡನಾಡಿಗಳೆ,

  ರಾಜ್ಯಾದ್ಯಂತದ ಬಡಜನರ ಭೂಮಿ ಮತ್ತು ವಸತಿ ಸಮಸ್ಯೆಯ ಪರಿಹಾರಕ್ಕಾಗಿ ಕಳೆದ 18 ತಿಂಗಳಿನಿಂದ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಎಂಬ ಅನೇಕ ಪ್ರಾಮಾಣಿಕ ಸಂಘಟನೆಗಳು ಸೇರಿ ರಚಿಸಿಕೊಂಡಿರುವ ಸಂಯುಕ್ತ ವೇದಿಕೆಯು ಹೋರಾಡುತ್ತಾ ಬರುತ್ತಿರುವುದನ್ನು ನೀವು ಗಮನಿಸಿರುತ್ತೀರಿ. ಕಮರಿ ಹೋಗುತ್ತಿದ್ದ ಬಡವರ ಬಹು ದಶಕಗಳ ಕನಸೊಂದು ಈ ಹೋರಾಟದಿಂದಾಗಿ ಮತ್ತೆ ಚಿಗುರಿದೆ. ಭೂಮಿ ಹೋರಾಟ ಹೊಸ ರೂಪದಲ್ಲಿ ಮತ್ತೆ ಸಮಾಜದ ಮುನ್ನೆಲೆಗೆ ಬಂದಿದೆ. ಸರ್ಕಾರವೂ ಇದಕ್ಕೆ ಒಂದಲ್ಲಾ ಒಂದು ಸ್ತರದಲ್ಲಿ ಸ್ಪಂದಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

  ಈ ಹೋರಾಟದ ಪರಿಣಾಮವಾಗಿ ಕತ್ತಲ ಕೋಣೆ ಸೇರಿದ್ದ ಲಕ್ಷಾಂತರ ಅರ್ಜಿಗಳು ಧೂಳು ಕೊಡವಿಕೊಂಡು ಮತ್ತೆ ಸಂಬಂಧಪಟ್ಟ ಸಮಿತಿಗಳ ಮುಂದೆ ಬಂದು ಕೂತಿವೆ; ಮನೆಗಳ ಅಕ್ರಮ ಸಕ್ರಮಕ್ಕಾಗಿ ನಿಗದಿಪಡಿಸಲಾಗಿದ್ದ 94ಸಿ, 94ಸಿಸಿ ಅರ್ಜಿಗಳನ್ನು ಸಲ್ಲಿಸುವ ಅವಕಾಶವನ್ನು ಮತ್ತೆ 2015ರವರೆಗೆ ವಿಸ್ತರಿಸಲಾಗಿದೆ; ಗೋಮಾಳ ಭೂಮಿಯನ್ನು ಹಂಚಿಕೆ ಮಾಡುವುದು, ಅನೇಕ ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಿರುವ ಜಾಗವನ್ನು ಖಾಸಗಿಯದೇ ಆದರೂ ಅವರಿಗೇ ಬಿಟ್ಟುಕೊಡುವುದು – ಈ ಕಾಯ್ದೆಗಳು ರೂಪಗೊಂಡಿವೆ; ಭೂನ್ಯಾಯ ಮಂಡಳಿಗಳಲ್ಲಿ ಶಾಸಕರ ಅನುಪಸ್ಥಿತಿಯಲ್ಲೂ ಅರ್ಜಿಗಳನ್ನು ವಿಲೇಮಾರಿ ಮಾಡುವಂತೆ ತಹಸೀಲ್ದಾರರುಗಳಿಗೆ ಆದೇಶ ಹೊರಬಿದ್ದಿದೆ; ಮುಖ್ಯ ಮಂತ್ರಿಗಳು ಮತ್ತು ಕಂದಾಯ ಮಂತ್ರಿಗಳು ಪೆಂಡಿಂಗ್ ಅರ್ಜಿಗಳನ್ನು ನಿರ್ದಿಷ್ಟ ಗಡುವು ನೀಡಿ ಅಷ್ಟರೊಳಗೆ ವಿಲೇಮಾರಿ ಮಾಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡುವುದೂ ಹೆಚ್ಚಾಗಿದೆ.

  ಇದೆಲ್ಲದರ ಪರಿಣಾಮವಾಗಿ ಅಲ್ಲಲ್ಲಿ, ಚೂರುಪಾರು ಭೂಮಿ ಮತ್ತು ಮನೆಯ ಹಕ್ಕುಪತ್ರಗಳು ಜನರಿಗೆ ಸಿಗುವಂತಾಗಿದೆ. ಆದರೆ ಬಹುಪಾಲು ಪ್ರಕರಣಗಳಲ್ಲಿ ‘ಕೈಗೆ ಬಂದಿದೆ, ಬಾಯಿಗೆ ಬಂದಿಲ್ಲ’ ಎನ್ನುವ ಪರಿಸ್ಥಿತಿ ಇದೆ. ಏಕೆಂದರೆ ಇಂದು ‘ಚಿನ್ನ’ವಾಗಿರುವ ಭೂಮಿಯ ಮೇಲೆ ಕಣ್ಣಿಟ್ಟಿರುವ ಆಯಾ ಪ್ರದೇಶದ ಬಲಾಢ್ಯ ಶಕ್ತಿಗಳು ಅದು ಬಡವರ ಪಾಲಾಗದಂತೆ ತಡೆಯುತ್ತಿವೆ. ಅದಕ್ಕೆ ನಾನಾ ರೀತಿಯ ತಂತ್ರ-ಕುತಂತ್ರಗಳನ್ನು ಬಳಸುತ್ತಿವೆ. ಇನ್ನೊಂದೆಡೆ ಭೂ ಕಬಳಿಕೆ ತಡೆ ಕಾಯ್ದೆಯ ಹೆಸರಿನಲ್ಲಿ ಬಲಾಢ್ಯರನ್ನು ಬಿಟ್ಟು ಬಡವರ ಬೇಟೆಯಾಡುವ ಕೆಲಸವನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ. ಇದ್ದಬದ್ದ ಭೂಮಿಯನ್ನೂ ಕಳೆದುಕೊಳ್ಳುವ ಅಪಾಯದಲ್ಲೇ ಜನ ಬದುಕುತ್ತಿದ್ದಾರೆ.

  ಸರ್ಕಾರ ತಾನು ಕಳಿಸುತ್ತಿರುವ ಸುತ್ತೋಲೆ ಮತ್ತು ಬಾಯಿಮಾತಿನ ಆದೇಶಗಳಿಂದಲೇ ಎಲ್ಲ ಆಗುತ್ತಿದೆ ಎಂದು ಹೇಳುತ್ತಿದೆ; ಮಾಡಬೇಕಾದದ್ದನ್ನೆಲ್ಲಾ ಮಾಡಿದ್ದೇವೆ ಎಂದು ತೃಪ್ತಗೊಳ್ಳುತ್ತಿದೆ. ಆದರೆ ಅನ್ನದ ತುತ್ತನ್ನು ಎತ್ತಿಕೊಂಡಿರುವ ಬಡವರ ಕೈಯನ್ನು ತುತ್ತು ಅವರ ಬಾಯಿಗೆ ಹೋಗದಂತೆ ಹಿಡಿದುಕೊಂಡಿರುವ ಬಲಾಢ್ಯರ ಹಿಡಿತವನ್ನು ತಪ್ಪಿಸಿ ಕೈಯಲ್ಲಿರುವ ತುತ್ತು ಬಡವರ ಬಾಯಿಗೆ ಬರುವಂತೆ ಮಾಡಬೇಕಾದರೆ ಸೂಕ್ತ ಸರ್ಕಾರಿ ಆದೇಶಗಳು ಹೊರಡಬೇಕಿದೆ, ಅದಕ್ಕೆ ಕಾಲ ಮಿತಿ ನಿಗದಿಯಾಗಬೇಕಿದೆ ಹಾಗೂ ಈ ಪ್ರಕ್ರಿಯೆಯನ್ನು ಜನರ ಪರವಾಗಿ ನಿರಂತರವಾಗಿ ಮೇಲ್ವಿಚಾರಣೆ ನಡೆಸುವ [ನಾಗರೀಕ ಸಮಾಜದ ಪ್ರತಿನಿಧಿಗಳನ್ನು ಸಹ ಒಳಗೊಂಡಿರುವ] ಮೇಲ್ವಿಚಾರಣಾ ಸಮಿತಿಯೊಂದನ್ನು ಸರ್ಕಾರ ರಚಿಸಬೇಕಿದೆ. ಇದಾಗಬೇಕಿದ್ದರೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಮಂತ್ರಿಗಳನ್ನೊಳಗೊಂಡ ಉನ್ನತ ಮಟ್ಟದ ಸಭೆ ನಡೆಯಲೇಬೇಕಿದೆ. ಇದಾಗದಿದ್ದರೆ ಇಷ್ಟು ದಿನ ಮಾಡಿದ ಕೆಲಸ ಹೊಳೆಯಲ್ಲಿ ಹುಣಿಸೇ ಹಣ್ಣು ತೊಳೆದಂತೆ ಆಗುತ್ತದೆ. ಯಾವುದೂ ಬಡವರ ಕೈಗೆ ಎಟುಕದೆ ಕರಗಿ, ಕೊಚ್ಚಿ ಹೋಗಲಿದೆ.

  ಇಂತಹ ಉನ್ನತ ಮಟ್ಟದ ಸಭೆ ಕರೆಯಬೇಕೆಂಬ ಏಕೈಕ ಆಗ್ರಹದ ಮೇಲೆಯೇ ಮೊನ್ನೆ ನವೆಂಬರಿನ ವಿಧಾನ ಸಭೆ ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಬೃಹತ್ ತಮಟೆ ಚಳವಳಿ ನಡೆಯಿತು. ಮುಖ್ಯಮಂತ್ರಿಗಳು ಒಪ್ಪಿ ವಿಧಾನ ಸೌಧದಲ್ಲಿ ಡಿಸೆಂಬರ್ 2ಕ್ಕೆ ಸಭೆಯನ್ನು ನಿಗದಿ ಸಹ ಮಾಡಿದರು. ಆದರೆ ಈದ್ ಮಿಲಾದ್ ಹಬ್ಬದ ರಜೆ ಒಂದು ದಿನ ಮುಂದಕ್ಕೆ ಹೋದ ಕಾರಣ ಆ ದಿನ ಸಭೆ ನಡೆದಿಲ್ಲ. ಪರ್ಯಾಯ ದಿನ ನಿಗದಿಪಡಿಸಿ ಹೇಳುತ್ತೇವೆ ಎಂದು ಅಧಿಕಾರಿಗಳು ಸಂದೇಶಗಳು ಕಳಿಸಿದರಾದರೂ, ಒಂದು ತಿಂಗಳ ಮೇಲಾದರೂ ಸಭೆ ನಡೆಯುವ ಯಾವ ಕುರುಹೂ ಇಲ್ಲ. ಮತ್ತೊಮ್ಮೆ ಬೀದಿಗಿಳಿಯದೆ ಈ ಕೆಲಸವೂ ಆಗುವುದಿಲ್ಲ; ಗುದ್ದಿಗುದ್ದಿಯೇ ಕಾಯನ್ನು ಹಣ್ಣು ಮಾಡುವ ಪರಿಸ್ಥಿತಿ ಇದೆ. ಹಾಗಾಗಿಯೇ ಈ ಸಭೆಗಾಗಿ ಒತ್ತಾಯಿಸಿ ಮತ್ತು ಸಭೆಯಲ್ಲಿ ಸಮರ್ಪಕವಾದ ತೀರ್ಮಾನ ಕೈಗೊಳ್ಳುವುದಕ್ಕಾಗಿ ಆಗ್ರಹಿಸಿ ೨೦೧೮ ಜನವರಿ 10ರಿಂದ ‘ನಿತ್ಯ ನೂರು ಜನರ ಧರಣಿ ಸತ್ಯಾಗ್ರಹ’ವನ್ನು ಆರಂಭಿಸಲಾಗುತ್ತಿದೆ.

  ಕಳೆದ 18 ತಿಂಗಳಿನಲ್ಲಿ ಜನ 5 ಸುತ್ತಿನ ರಾಜ್ಯ ಮಟ್ಟದ ಹೋರಾಟಗಳನ್ನು ನಡೆಸಿದ್ದಾರೆ. ಅನೇಕ ಬಾರಿ ಸ್ಥಳೀಯ ಹೋರಾಟಗಳನ್ನು ಮಾಡಿದ್ದಾರೆ. ನಿತ್ಯ ಕೂಲಿಯ ಕೆಲಸ ಬಿಟ್ಟು, ಸಾಲಸೋಲ ಮಾಡಿ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಹಾಗಾಗಿ ಜನರಲ್ಲಿ ಸಹಜ ದಣಿವು ಮೂಡಿದೆ. ಇದು ಸಹ ವಾಸ್ತವದ ವಿಚಾರ. ಹೋರಾಟವೂ ಮುಂದುವರಿಯಬೇಕು, ಅದೇ ಸಂದರ್ಭದಲ್ಲಿ ಜನರ ಮೇಲೆ ಇನ್ನೂ ಹೆಚ್ಚಿನ ಹೊರೆಯೂ ಆಗಬಾರದು ಎಂಬ ದೃಷ್ಟಿಯಿಂದ ಈ ನಿರಂತರ ಧರಣಿ ಸತ್ಯಾಗ್ರಹವನ್ನು ನಿತ್ಯ ನೂರು ಜನರಿಗೆ ಮಿತಿಗೊಳಿಸಲಾಗಿದೆ. ಮುಂದೂಡಲ್ಪಟ್ಟಿರುವ ಸಭೆ ಮತ್ತೆ ನಿಗದಿಯಾಗುವಂತೆ ಮಾಡಲು ದೊಡ್ಡ ಸಂಖ್ಯೆಗಿಂತಲೂ ಗಟ್ಟಿತನದ ಇಷ್ಟು ಪ್ರಮಾಣದ ಹೋರಾಟ ಸಾಕು ಎಂದುಕೊಂಡಿದ್ದೇವೆ. ಸರ್ಕಾರದ ಮೇಲೆ ನಿರಂತರ ಒತ್ತಡ ಹೇರುವ ಉದ್ದೇಶ ಈ ಸತ್ಯಾಗ್ರಹದ್ದಾಗಿದೆ. ಸರ್ಕಾರ ಇದಕ್ಕೂ ಮಣಿಯದಿದ್ದಲ್ಲಿ ಅದನ್ನು ಬೇರೆ ಸ್ವರೂಪದ ಹೋರಾಟವಾಗಿ ಮಾರ್ಪಡಿಸುವುದು ಸಹ ಹೋರಾಟ ಸಮಿತಿಗೆ ಅನಿವಾರ್ಯವಾಗಲಿದೆ. ಸರ್ಕಾರ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಆಶಿಸುತ್ತೇವೆ.

  ಏನೇ ಬರಲಿ, ಎಷ್ಟು ದಿನವೇ ಆಗಲಿ, ಉನ್ನತ ಮಟ್ಟದ ಸಭೆ ನಡೆದು, ಸೂಕ್ತ ಪರಿಹಾರಸೂತ್ರ ಆಚರಣೆಗೆ ಬರುವ ತನಕ ನೆಲೆಯೂರಿ ಹೋರಾಟ ನಡೆಸುವ ಸಂಕಲ್ಪದೊಂದಿಗೆ, ಎಲ್ಲ ಕಡೆಯ ಆಯ್ದ ಕೆಲವೇ ಮಂದಿ ಬಡಜನರು ಬೆಂಗಳೂರಿಗೆ ಬರುತ್ತಿದ್ದಾರೆ. ನೀವೆಲ್ಲರೂ ಇದುವರೆಗೂ ಬಡಜನರ ಈ ಹೋರಾಟಕ್ಕೆ ಸಕ್ರಿಯ ರೂಪದಲ್ಲಿ ಹೆಗಲು ನೀಡುತ್ತಾ ಬಂದಿದ್ದೀರಿ. ಅದಕ್ಕಾಗಿ ನಿಮ್ಮನ್ನು ರಾಜ್ಯದ ಎಲ್ಲಾ ಬಡಜನರ ಪರವಾಗಿ ಅಭಿನಂದಿಸುತ್ತೇವೆ.

  • Comments Off on ಭೂಮಿ-ವಸತಿ ಸಮಸ್ಯೆ ಜನವರಿ 10ರಿಂದ ಸತ್ಯಾಗ್ರಹ
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.