02:37 am Tuesday, June 18, 2019
 • ನೇಪಾಳಿಗಳು ಎಡಪಂಥೀಯರಿಗೆ ಮತನೀಡಿದ್ದಾರೆ.

  By admin - Sat Dec 23, 3:46 am

  • Comments Off on ನೇಪಾಳಿಗಳು ಎಡಪಂಥೀಯರಿಗೆ ಮತನೀಡಿದ್ದಾರೆ.
  • 0 views

  ಸ್ಥಿರತೆಗಾಗಿ ನೀಡಿದ ಮತ
  ಸಮಾನತೆ ಮತ್ತು ನ್ಯಾಯಗಳಿಂದ ಕೂಡಿದ ಸಮೃದ್ಧಿಯನ್ನು ಕೋರಿ ನೇಪಾಳಿಗಳು ಎಡಪಂಥೀಯರಿಗೆ ಮತನೀಡಿದ್ದಾರೆ.

  ೨೦೧೫ರಲ್ಲಿ ಅಳವಡಿಸಿಕೊಂಡ ಹೊಸ ಸಂವಿಧಾನದಡಿಯಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ನೇಪಾಳಿ ಜನರು ನೇಪಾಳಿ ಕಾಂಗ್ರೆಸ್‌ನ ನೇತೃತ್ವದ ಮಿತ್ರಕೂಟವನ್ನು ತಿರಸ್ಕರಿಸಿ ಎಡ ಮೈತ್ರಿಕೂಟವನ್ನು ಆಯ್ಕೆಮಾಡಿದ್ದಾರೆ. ಇದು ೧೯೯೦ರ ನಂತರದಲ್ಲಿ ಎಡಪಕ್ಷಗಳಿಗೆ ದೊರೆತಿರುವ ಅತಿ ದೊಡ್ಡ ಬಹುಮತವಾಗಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ್ (ಯೂನಿಫೈಡ್ ಮಾರ್ಕ್ಸಿಸ್ಟ್-ಲೆನಿನಿಸ್ಟ್) ಅಥವಾ ಯುಎಂಎಲ್ ಹಾಗೂ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ್ (ಮಾವೋಯಿಸ್ಟ್- ಸೆಂಟರ್) ಅಥವಾ ಸಿಪಿಎನ್ (ಎಂಸಿ)ಗಳ ಮೈತ್ರಿಕೂಟವು ಫರ್ಸ್ಟ್ ಪಾಸ್ಟ್ ದಿ ಫೋಲ್ ಸಿಸ್ಟಮ್- ಎಫ್‌ಪಿಟಿಪಿ (ಹಲವು ಪಕ್ಷಗಳಿಂದ ಸ್ಪರ್ದಿಸಿದ ಉಮೇದುವಾರರಲ್ಲಿ ಚಲಾಯಿತ ಮತದಾನದಲ್ಲಿ ಯಾರಿಗೆ ಹೆಚ್ಚು ಮತಗಳು ಬಿದ್ದಿರುತ್ತೋ ಅವರು ಗೆಲ್ಲುವ ಪದ್ಧತಿ- ಅನು)ಪದ್ಧತಿಯಲ್ಲಿ ೧೬೫ ಸೀಟುಗಳ ನೇಪಾಳ ಒಕ್ಕೂಟದ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಶೇ.೭೦ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿಕೊಂಡಿದೆ. ಹಾಗೆಯೇ ಪ್ರೋಪೋರ್ಷನೇಟ್ ವೋಟಿಂಗ್-ಪಾಲುವಾರು ಪ್ರಾತಿನಿಧ್ಯ (ಪಕ್ಷಗಳು ಒಟ್ಟಾರೆ ಎಷ್ಟು ಮತಗಳು ಪಡೆದಿರುತ್ತವೋ ಅದರ ಆಧಾರದಲ್ಲಿ ಇಂತಿಷ್ಟು ಮತಗಳಿಗೆ ಒಬ್ಬ ಪ್ರತಿನಿಧಿ ಎಂಬ ಪದ್ಧತಿಯಲ್ಲಿ ಆಯ್ಕೆ- ಅನು) ಪದ್ಧತಿಯಲ್ಲಿ ನಡೆದ ಮತದಾನದಲ್ಲೂ ಹೆಚ್ಚಿನ ಮತಗಳನ್ನು ಪಡೆದುಕೊಂಡಿದೆ.
  ನೇಪಾಳಿಗಳು ಯುಎಂಲ್-ಸಿಪಿಎನ್ ಮೈತ್ರಿಕೂಟವು ಒಂದಷ್ಟು ನಿರಂತರೆಯನ್ನು ಮತ್ತು ಹೆಚ್ಚಿನ ಕಾಲ ಬಿಕ್ಕಟ್ಟಿಲ್ಲದ ಅಳ್ವಿಕೆಯನ್ನು ಕೊಟ್ಟು ಆ ಮೂಲಕ ದೇಶದ ಗಮನವನ್ನು ಆಡಳಿತದ ಮೇಲೆ ಹಾಗೂ ಜನರ ಜೀವನದ ಮೇಲೆ ಹರಿಸುವಂತೆ ಮಾಡಬಹುದೆಂದು ಭರವಸೆ ಇಟ್ಟಿದ್ದಾರೆ. ಹೀಗಾಗಿಯೇ ನೇಪಾಳಿ ಕಾಂಗ್ರೆಸ್ ಮತ್ತು ಅದರ ಜೊತೆ ರಾಜನಿಷ್ಟ ಪಕ್ಷಗಳು ಮತ್ತು ಮಾದೇಶಿ ಪಕ್ಷಗಳು ಮಾಡಿಕೊಂಡ ತೇಪೆಹಾಕಿದಂಥ ಮೈತ್ರಿಕೂಟವು ಜನರಲ್ಲಿ ಭರವಸೆ ಹುಟ್ಟಿಸಲು ವಿಫಲವಾಯಿತು. ನೇಪಾಳಿ ಕಾಂಗ್ರೆಸ್ಸಿನ ಪ್ರಚಾರವು ನಕಾರಾತ್ಮಕವಾಗಿತ್ತು ಮತ್ತು ಜನರಲ್ಲಿ ಗಾಬರಿಯನ್ನು ಮಾತ್ರ ಕೆರಳಿಸುವಂತಿತ್ತು.
  ಸ್ಥಿರತೆಯ ಬಗೆಗಿನ ಭರವಸೆಯು ನೇಪಾಳಕ್ಕೆ ಅತ್ಯಂತ ಮುಖ್ಯವಾಗಿತ್ತು. ಏಕೆಂದರೆ ೧೯೯೦ರಲ್ಲಿ ನೇಪಾಳವು ಒಂದು ಪ್ರಜಾತಂತ್ರವಾಗಿ ಬದಲಾದಾಗಿನಿಂದ ರಾಜಕೀಯ ಪಕ್ಷಗಳ ನಡುವೆ ಅಧಿಕಾರಕ್ಕಾಗಿ ಒಳಜಗಳವು ನಡೆಯುತ್ತಲೇ ಬರುತ್ತಿತ್ತು ಮತ್ತು ನೇಪಾಳದ ರಾಜಕಾರಣದಲ್ಲಿ ಅನಿಶ್ಚತೆಯೆಂಬುದು ಶಾಶ್ವತ ಗುಣಲಕ್ಷಣವಾಗಿಬಿಟ್ಟಿತ್ತು. ಕಳೆದ ೨೭ ವರ್ಷಗಳಲ್ಲಿ ೨೩ ಅವಧಿಗಳಲ್ಲಿ ೧೩ ಪ್ರಧಾನಿಗಳು ದೇಶವನ್ನಾಳಿದ್ದಾರೆ. ಈ ಕಾಲಾವಧಿಯಲ್ಲಿ ಒಂದು ದಶಕದಷ್ಟು ಕಾಲ ದೇಶವು ಅಂತರ್ಯುದ್ಧವನ್ನು ಅನುಭವಿಸಿತು. ಹಾಗೂ ಸ್ವಲ್ಪ ಕಾಲ ರಾಜಪ್ರಭುತ್ವದ ಹೇರಿಕೆಯನ್ನು ಕಂಡಿತು. ಆ ನಂತರದಲ್ಲಿ ಸಶಸ್ತ್ರ ಮಾವೋವಾದಿಗಳು ಮತ್ತು ಮುಖ್ಯವಾಹಿನಿ ಪಕ್ಷಗಳ ನಡುವೆ ಶಾಂತಿ ಪ್ರಕ್ರಿಯೆಗಳು ನಡೆದು ಹೊಸ ಸಾಂವಿಧಾನಿಕ ಸಭೆಯ ರಚನೆಗೂ, ರಾಜಪ್ರಭುತ್ವ ಕೊನೆಗೊಂಡು ಗಣರಾಜ್ಯದ ಸ್ಥಾಪನೆಗೂ ಕಾರಣವಾಯಿತು. ಕಳೆದ ದಶಕುದ್ದದ್ದಕ್ಕೂ ಸಂವಿಧಾನ ರಚನೆಯ ಬಗ್ಗೆ ಒಂದು ಬಗೆಯ ರಾಜಕೀಯ ಸ್ಥಗಿತತೆ ಉಂಟಾಗಿತ್ತು. ಆದರೆ ಇಡೀ ದೇಶವನ್ನೇ ಅಲುಗಾಡಿಸಿದ ಭೂಕಂಪ ಮತ್ತು ಅದರಿಂದ ದೇಶವು ಅಪಾರ ಹಾನಿ ಮತ್ತು ನಷ್ಟಗಳನ್ನು ಅನುಭವಿಸಿದ ತರುವಾಯ ರಾಜಕಾರಣಿಗಳು ತಮ್ಮಗಳ ನಡುವಿನ ಭಿನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಹೊಸ ಸಂವಿಧಾನವನ್ನು ರೂಪಿಸಿಕೊಂಡರು. ಆದರೆ ಈಗಲೂ ಹೊಸ ಸಂವಿಧಾನದ ಬಗ್ಗೆ ಕೆಲವು ಭಿನ್ನಾಭಿಪ್ರಾಯಗಳು ಉಳಿದುಕೊಂಡಿವೆ; ಉದಾಹರಣೆಗೆ ಪ್ರಭುತ್ವದ ಅಮೂಲಾಗ್ರ ಪುನರ್‌ರಚನೆಯ ಬಗ್ಗೆ ಮಾಧೇಶಿಗಳ ಮತ್ತು ಜನಜಾತಿಗಳ ಬೇಡಿಕೆಗಳು ಈಡೇರಿಲ್ಲ.
  ೧೯೯೦ರಲ್ಲಿ ಮದನ್ ಲಾಲ್ ಭಂಡಾರಿಯವರ ನಿಧನರಾದ ತರುವಾಯ ಯುಎಂಎಲ್ ಪಕ್ಷವು ತನ್ನ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಸ್ಥಾನಗಳನ್ನು ಗಳಿಸಿಕೊಂಡಿದೆ. ಆದರೆ ಅಂದಿನ ದಿನಗಳಿಗೆ ಹೋಲಿಸಿದಲ್ಲಿ ಯುಎಂಎಲ್ ಪಕ್ಷವೂ ಸಹ ಸಾಕಷ್ಟು ಹಾದಿಯನ್ನು ಕ್ರಮಿಸಿದೆ. ಅದು ಕಳೆದ ದಶಕದಲ್ಲಿ ಕೆ.ಪಿ. ಓಲಿಯವರ ನಾಯಕತ್ವದಲ್ಲಿ ರಾಜಕೀಯ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವ ರಾಜಕೀಯವನ್ನು ಪ್ರತಿಪಾದಿಸಿತ್ತು, ನೇಪಾಳಿ ರಾಷ್ಟ್ರೀಯವಾದದ ಪ್ರಮುಖ ವಕ್ತಾರನಾಗಿತ್ತು ಮತ್ತು ರಾಷ್ಟ್ರಪ್ರಭುತ್ವದ ವಿಕೇಂದ್ರೀಕರಣವನ್ನು ತಡೆಗಟ್ಟಿತ್ತು. ಅದರ ಆರ್ಥಿಕ ನೀತಿಗಳೂ ಸಹ ಜನರನ್ನು ಅವಲಂಬಿತರನ್ನಾಗಿ ಮಾಡುವ ವ್ಯವಸ್ಥೆಯ ಗಡಿಗಳನ್ನೇನೂ ದಾಟಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ನೇಪಾಳದ ಮಾಧೇಶಿ ಪ್ರಾಂತ್ಯದಲ್ಲಿ ನಡೆದ ಮಾಧೇಶಿ ಚಳವಳಿಯಲ್ಲಿ ಭಾರತದ ವಿಭೇಧಕಾರಿ ಹಸ್ತಕ್ಷೇಪದ ವಿರುದ್ಧ ಅದು ಗಟ್ಟಿ ಧ್ವನಿಯಲ್ಲಿ ಪ್ರತಿಪಾದಿಸಿದ ನೇಪಾಳಿ ರಾಷ್ಟ್ರವಾದವು ಸ್ವತಂತ್ರ ಮನೋಭಾವದ ನೇಪಾಳಿಗಳ ಬೆಂಬಲವನ್ನು ಗಳಿಸಿಕೊಂಡಿತು.
  ಪುಷ್ಪ ಕಮಾಲ್ ದಹಾಲ್ ಪ್ರಚಂಡ ಅವರ ನೇತೃತ್ವದ ಸಿಪಿಎನ್ (ಎಂಸಿ) ಪಕ್ಷವೂ ಸಹ ೧೯೯೦ ಮತ್ತು ೨೦೦೦ ದಶಕದ ಪ್ರಜಾಯುದ್ಧದ ಅವಧಿಯಲ್ಲಿ ಬದ್ಧವಾಗಿದ್ದ ಗುರಿಗಳು ಮತ್ತು ಕ್ರಾಂತಿಕಾರಿ ಸ್ವರೂಪಗಳಿಗೂ ಹೋಲಿಸಿದಲ್ಲಿ ಸಾಕಷ್ಟು ರೂಪಾಂತರವಾಗಿದೆ. ಒಂದೆಡೆ ಆ ಪಕ್ಷವು ಜನರಿಂದ ಆಯ್ಕೆಯಾದ ಸಾಂವಿಧಾನ ರಚನೆ ಸಭೆಯನ್ನು ರಚಿಸುವ ತನ್ನ ಅಲ್ಪಕಾಲೀನ ಗುರಿಂiiನ್ನು ಸಾಧಿಸಲು ಸಾಕಷ್ಟು ಶ್ರಮಿಸಿತು. ಮತ್ತೊಂದೆಡೆ ಪ್ರಚಂಡ ಅವರು ತಮ್ಮ ಹಿಂದಿನ ಕ್ರಾಂತಿಕಾರಿ ಭರವಸೆಗಳಾದ ಭೂ ಸುಧಾರಣೆ ಮತ್ತು ಅಮೂಲಾಗ್ರ ವಿಕೇಂದ್ರೀಕರಣಗಳನ್ನು ಜಾರಿ ಮಾಡುವುದಕ್ಕಿಂತ ರಾಜಧಾನಿ ಕಠ್ಮಂಡುವಿನಲ್ಲಿ ಅಧಿಕಾರಕ್ಕೆ ಸಮೀಪವಾಗಿರುವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರು. ಮಾವೋವಾದಿಗಳ ಈ ಬಗೆಯ ಮಾರ್ಪಾಡುಗಳು ಆ ಪಕ್ಷದಲ್ಲಿ ಒಡಕನ್ನುಂಟು ಮಾಡಿದರೂ ಪ್ರಚಂಡರವರು ಯುಎಂಎಲ್‌ನೊಂದಿಗೆ ಎಡ ಮೈತ್ರಿಕೂಟವನ್ನು ಮಾಡಿಕೊಳ್ಳುವುದರ ಮೂಲಕ ಪ್ರಸ್ತುತರಾಗುಳಿದರು.
  ಎರಡು ಪಕ್ಷಗಳು ಪಡೆದ ಅಗಾಧ ಬಹುಮತ ಮತ್ತು ಬರಲಿರುವ ದಿನಗಳಲ್ಲಿ ಎರಡು ಪಕ್ಷಗಳು ವಿಲೀನವಾಗುವ ಬಗೆಗಿನ ಬದ್ಧತೆಗಳು ನಿಧಾನವಾಗಿಅ ಪಕ್ಷಗಳಲ್ಲಿ ಅಲ್ಪತೃಪ್ತಿಯನ್ನೂ ಉಂಟುಮಾಡಬಹುದು. ಎರಡು ಪಕ್ಷಗಳು ಇದರ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸಬೇಕು. ಅದಕ್ಕೆ ಬದಲಾಗಿ ದೇಶವು ಸಾಕಷ್ಟು ಕಾಲದಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವತ್ತ ಅವರು ಗಮನಹರಿಸಬೇಕು; ವಲಸೆ ಸಮಸ್ಯೆ, ಇನ್ನೂ ಪೂರ್ತಿಗೊಳ್ಳದಿರುವ ಭೂ ಕಂಪದ ಪರಿಹಾರ, ಹಾಗೂ ಆರ್ಥಿಕತೆ ಎದುರಿಸುತ್ತಿರುವ ದೀರ್ಘಕಾಲೀನ ಅನಭಿವೃದ್ಧಿ. ನೇಪಾಳವು ವಲಸೆ ಸಮಸ್ಯೆಯನ್ನು ಎದುರಿಸುತ್ತಿರಲು ಕಾರಣವಾದ ಅಂಶಗಳೆಂದರೆ ಕೃಷಿ ಆರ್ಥಿಕತೆಯಲ್ಲಿ ಬಂದಿರುವ ಸ್ಥಗಿತತೆ. ಹಾಗೂ ಒಟ್ಟಾರೆ ಆರ್ಥಿಕತೆಯು ವಿದೇಶಿ ಸಾಲ ಮತ್ತು ವಿದೇಶದಲ್ಲಿ ಕೆಲಸ ಮಾಡುವವರು ಕಳಿಸುವ ಹಣದ ಮೇಲೆ ಆಧಾರವಾಗಿದ್ದುಕೊಂಡು ಇತರ ಮಾರ್ಗಗಳನ್ನು ಕಂಡುಕೊಳ್ಳದಿರುವುದು.
  ನೇಪಾಳದ ಹಿಂದುಳಿದಿರುವಿಕೆಗೆ ಕಾರಣವಾಗಿರುವ ಈ ಅವಲಂಬನೆಯನ್ನು ಪೋಷಿಸುವ ಆರ್ಥಿಕ ನೀತಿಗಳನ್ನು ಈ ಎಡ ಮೈತ್ರಿಕೂಟ ಮುರಿದು ಹೊಸ ದಾರಿಯನ್ನು ತೋರುವುದೇ ಎಂಬುದನ್ನು ಕಾದುನೋಡಬೇಕಿದೆ. ಇದಾಗಬೇಕೆಂದರೆ ಯುಎಂಎಲ್ ಮತ್ತು ಸಿಪಿಎನ್ (ಎಂಸಿ) ಪಕ್ಷಗಳು ತಮ್ಮ ಮೂಲ ನಿಲುವುಗಳಾದ ಅಮೂಲಾಗ್ರ ಭೂ ಸುಧಾರಣೆ, ಜಲ ವಿದ್ಯುತ್‌ಗಳಂಥ ಉತ್ಪಾದಕ ಕ್ಷೇತ್ರಗಳಲ್ಲಿ ಸಾರ್ವಜನಿಕ ಬಂಡವಳವನ್ನು ತೊಡಗಿಸುವ ಮತ್ತು ವಿದೇಶಿ ಅವಲಂಬನೆಯನ್ನು ತಪ್ಪಿಸಲು ದೇಶೀಯ ಕೈಗಾರಿಕಾ ನೆಲೆಯನ್ನು ಬೆಳೆಸುವ ನೀತಿಗಳಿಗೆ ಮರಳಬೇಕು.
  ಇದಲ್ಲದೆ ಮಾಧೇಶಿಗಳನ್ನು ಮತ್ತು ಜನಜಾತಿಗಳನ್ನು ಅತೃಪ್ತರನ್ನಾಗಿಸಿರುವ ಪ್ರಭುತ್ವದ ಸಂಸ್ಥೆಗಳ ಪುನರ್‌ರಚನೆಯ ವಿಷಯವು ಇನ್ನೂ ಬಗೆಹರಿದಿಲ್ಲ. ತೆರಾಯ್ ಪ್ರಾಂತ್ಯದ ಜನರ ಈ ಜನಪ್ರಿಯ ಬೇಡಿಕೆಗಳನ್ನು ನಿರಾಕರಿಸಿದ ಕಾರಣದಿಂದಲೇ ಯುಎಂಎಲ್ ಪಕ್ಷಕೆ ಗಿರಿಪ್ರಾಂತ್ಯದಲ್ಲಿ ಹೆಚ್ಚಿನ ಬೆಂಬಲವು ದೊರಕಿದೆ. ಆದರೆ ಇದಕ್ಕೆ ಸೂಕ್ತವಾದ ಪರಿಹಾರವನ್ನು ಕಂಡುಕೊಳ್ಳದಿದ್ದರೆ ನಿಧಾನವಾಗಿ ಆ ಪ್ರಾಂತ್ಯದಲ್ಲಿ ಪ್ರತ್ಯೇಕತಾವಾದಿ ರಾಜಕಿಯಕ್ಕೆ ಹೆಚ್ಚಿನ ಮಾನ್ಯತೆ ಸಿಗುತ್ತಾ ಹೋಗಬಹುದು. ತಮಗೆ ಸಿಕ್ಕಿರುವ ಜನಮಾನ್ಯತೆಯನ್ನು ಎಡ ಒಕ್ಕೂಟವು ಪ್ರಭುತ್ವ ಹಾಗೂ ಒಕ್ಕೂಟ ಪುನರ್‌ರಚನೆಯ ವಿಷಯದಲ್ಲಿ ಯಥಾಸ್ಥಿತಿಯನ್ನು ಮುಂದುವರೆಸಲು ಸಿಕ್ಕಿರುವ ಆದೇಶವೆಂದು ತಪ್ಪಾಗಿ ವ್ಯಾಖ್ಯಾನಿಸಿಕೊಳ್ಳಬಾರದು.
  ಆಡಳಿತ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆ ಮತ್ತು ಜನರ ಕೈಗೆ ಸಾರ್ವಭೌಮಿ ಅಧಿಕಾರದ ಹಸ್ತಾಂತರದ ಭರವಸೆಗಳ ಕಾರಣದಿಂದಲೇ ನೇಪಾಳಿಗಳು ರಾಜಪ್ರಭುತ್ವವನ್ನು ಕೊನೆಗೊಳಿಸಿ ಗಣರಾಜ್ಯವಾಗಿ ಪರಿವರ್ತನೆಯಾಗುವ ಹೋರಾಟವನ್ನು ಬೆಂಬಲಿಸಿದರು. ಆದರೆ ರಾಜಕೀಯ ನಾಯಕತ್ವವು ಈವರೆಗೆ ಆ ಆಶಯಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. ಆದರೆ ನಿಜವಾದ ಪ್ರಜಾಸತ್ತೆಗಾಗಿ ನೇಪಾಳಿಗಳ ಉತ್ಸಾಹ ಈಗಲೂ ಬತ್ತಿಲ್ಲ. ಈಗ ಎಡ ಮೈತ್ರಿಕೂಟಕ್ಕೆ ಆ ಆಶಯಗಳನ್ನು ಈಡೇರಿಸುವ ಸಮಯ ಬಂದಿದೆ.

  ಕೃಪೆ: Economic and Political Weekly Dec 16, 2017. Vol. 52. No. 50
  ಅನು: ಶಿವಸುಂದರ್
  (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )

  • Comments Off on ನೇಪಾಳಿಗಳು ಎಡಪಂಥೀಯರಿಗೆ ಮತನೀಡಿದ್ದಾರೆ.
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.