06:25 am Wednesday, July 24, 2019
 • ಖಾಸಗಿ’ತನದ ವ್ಯವಸ್ಥೆ ಬದಲಾಗಬೇಕಾದರೆ ‘ಆರೋಗ್ಯ ಇಲಾಖೆ’ಗೆ ಸರ್ಜರಿಯಾಗಲಿ

  By admin - Sat Nov 18, 5:46 pm

  • Comments Off on ಖಾಸಗಿ’ತನದ ವ್ಯವಸ್ಥೆ ಬದಲಾಗಬೇಕಾದರೆ ‘ಆರೋಗ್ಯ ಇಲಾಖೆ’ಗೆ ಸರ್ಜರಿಯಾಗಲಿ
  • 0 views

  ‘ಖಾಸಗಿ’ತನದ ವ್ಯವಸ್ಥೆ ಬದಲಾಗಬೇಕಾದರೆ ‘ಆರೋಗ್ಯ ಇಲಾಖೆ’ಗೆ ಸರ್ಜರಿಯಾಗಲಿ
  ~~~~~~~~~~~~~~~~~~~~~~~

  ರಶೀದ್ ವಿಟ್ಲ.

  ಒಂದು ಕಾಲವಿತ್ತು. ಕೆಎಸ್ಸಾರ್ಟಿಸಿ ಬಸ್ಸು ಅಂದ್ರೆ ಜನ ಮಾರುದ್ದ ದೂರ ಸರಿಯುತ್ತಿದ್ದ ಸಮಯವದು. ಅದರ ಪ್ರಯಾಣದ ನರಕಯಾತನೆ ಜನರನ್ನು ರೇಜಿಗೆ ಸಿಲುಕಿಸುತ್ತಿತ್ತು. ಅಂತಹ ಕೆಎಸ್ಸಾರ್ಟಿಸಿ ಸಂಸ್ಥೆಗೆ ಕಾಯಕಲ್ಪ ಮಾಡಿ ದೇಶದಲ್ಲೇ ನಂಬರ್ ವನ್ ಸಂಸ್ಥೆಯಾಗಿ ಪರಿವರ್ತಿಸಿದ ಕೀರ್ತಿ ಕರ್ನಾಟಕ ಸರಕಾರದ ಸಾರಿಗೆ ಇಲಾಖೆಗೆ ಸಲ್ಲುತ್ತದೆ. ಹಿಂದೆ ಮಂಗಳೂರಿನಿಂದ ಬೆಂಗಳೂರಿಗೆ ಕಾರಿನಲ್ಲೇ ಸಂಚರಿಸುತ್ತಿದ್ದ ಉದ್ಯಮಿಗಳು, ವ್ಯಾಪಾರಿಗಳು, ಅಧಿಕಾರಿಗಳು ಕೂಡಾ ಇಂದು ತಮ್ಮ ಬೆನ್ಝ್, ಬಿಎಮ್ಡಬ್ಲ್ಯು, ಆಡಿ ಮೊದಲಾದ ಕಾರುಗಳನ್ನು ಮನೆಯ ಶೆಡ್’ನಲ್ಲೇ ಇರಿಸಿ ಕರ್ನಾಟಕ ಸಾರಿಗೆ ಇಲಾಖೆಯ ಕೆಎಸ್ಸಾರ್ಟಿಸಿ ಬಸ್ಸಿಗೆ ಹತ್ತುತ್ತಾರೆಂದರೆ ಅದರ ಗುಣಮಟ್ಟ ಹೇಗಿರಬೇಡ? ಈಗಲೂ ಕೂಡಾ ಸಾರಿಗೆ ಇಲಾಖೆಯ ಬಸ್ಸು ಖಾಸಗಿ ಬಸ್ಸುಗಳಿಗೆ ಸವಾಲೊಡ್ಡುತ್ತಾ, ಉತ್ತಮ ಸೇವೆ ನೀಡುತ್ತಾ, ದರದಲ್ಲಿ ಸ್ಪರ್ಧೆ ನೀಡುತ್ತಾ ರಸ್ತೆಯಲ್ಲಿ ಸ್ವಚ್ಛಂದವಾಗಿ ಓಡಾಡುತ್ತಿರುವುದಕ್ಕೆ ರಾಜ್ಯ ಸರಕಾರಕ್ಕೆ ಹ್ಯಾಟ್ಸಾಫ್ ಮಾಡಲೇಬೇಕು.

  ಇದೇ ತತ್ವ ಇತರ ಇಲಾಖೆಗಳಲ್ಲಿ ಪ್ರಮುಖವಾಗಿ ಆರೋಗ್ಯ ಇಲಾಖೆಯಲ್ಲಿ ಕೈಗೊಂಡಿದ್ದೇ ಆದರೆ ಇಂದು ಇಂತಹ ರಾದ್ದಾಂತ ಸೃಷ್ಟಿಯಾಗುತ್ತಿತ್ತಾ? ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಸರಕಾರಿ ಆಸ್ಪತ್ರೆಗಳಿಗೆ ಭರ್ಜರಿ ಸರ್ಜರಿ ಮಾಡಿ ಸರಿದಾರಿಗೆ ತರುತ್ತಿದ್ದರೆ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ತನ್ನಿಂತಾನೇ ಕಡಿವಾಣ ಬೀಳುತ್ತಿರಲಿಲ್ಲವೇ? ಸರಕಾರಿ ಆಸ್ಪತ್ರೆಗಳ ದುಸ್ಥಿತಿ ನೋಡಿದರೆ, ಅಲ್ಲಿನ ಅವ್ಯವಸ್ಥೆಯನ್ನು ಅವಲೋಕಿಸಿ ಪರಿಹಾರ ಮಾಡುತ್ತಿದ್ದರೆ ಖಾಸಗಿಗಿಂತಲೂ ಉತ್ತಮ ಸೇವೆ ಸರಕಾರಕ್ಕೂ ನೀಡಬಹುದು. ರಾಜ್ಯದ ಮೂಲೆ ಮೂಲೆಗಳಲ್ಲಿ ಸರಕಾರಿ ಆಸ್ಪತ್ರೆಯ ಕಟ್ಟಡಗಳಿವೆ. ಬೇಕಾದಷ್ಟು ಔಷಧಿಯ ವಿತರಣೆಯೂ ಆಗುತ್ತದೆ. ವೈದ್ಯರುಗಳ ಉತ್ಪಾದನೆಯೂ ವರ್ಷದಿಂದ ವರ್ಷಕ್ಕೆ ಇಮ್ಮಡಿಯಾಗುತ್ತಿದೆ. ಆಸ್ಪತ್ರೆಗೆ ಬೇಕಾದ ಉಪಯುಕ್ತ ಸಲಕರಣೆಗಳು, ಸಿಬ್ಬಂದಿಗಳಿಗೆ ಕೊರತೆಯಿಲ್ಲ. ಇವೆಲ್ಲವೂ ಇದ್ದು ಕೂಡಾ ಸರಕಾರಿ ಆಸ್ಪತ್ರೆಗಳು ಯಥೇಚ್ಛವಾಗಿ ಕಾರ್ಯನಿರ್ವಹಿಸುವಲ್ಲಿ ಎಡವಿದೆ. ಆಡಳಿತ ಯಂತ್ರದ ನಿಗಾ ಇಲ್ಲದ ಕಾರಣ ಈ ರೀತಿಯಾಗಿದೆ ಎನ್ನಬಹುದು. ಸರಕಾರ ಮೊದಲು ತನ್ನ ಮನೆಯನ್ನು ಸರಿಮಾಡಲಿ. ಮತ್ತೆ ಇತರರ ಮನೆಗೆ ಇಣುಕಿ ನೋಡಲಿ. ತನ್ನ ತಟ್ಟೆಯ ಹೆಗ್ಗಣವನ್ನು ಗಮನಿಸದೆ ಇತರರ ತಟ್ಟೆಯ ನೊಣಕ್ಕೆ ಕೈ ತೋರಿಸುವುದು ಎಷ್ಟು ಸರಿ?

  ಖಾಸಗಿ ವೈದ್ಯಕೀಯ ಸಂಸ್ಥೆಗಳ ಮೇಲೆ ನಿರ್ಬಂಧ ಕ್ರಮ ತಪ್ಪೆಂದು ಹೇಳುತ್ತಿಲ್ಲ. ಬಹುತೇಕ ಖಾಸಗಿ ಆಸ್ಪತ್ರೆಗಳು ಕಬ್ಬಿಣದ ಕಡಲೆಕಾಯಿ ಆಗಿದೆ. ಸಾಮಾನ್ಯನಿಗೆ ಕೈಗೆಟುಕದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದಿನ ವೈದ್ಯರು ಕೇವಲ ನಾಡಿ ಹಿಡಿದು ಹೇಳುತ್ತಿದ್ದ ರೋಗ ಇಂದಿನ ಹಲವು ವೈದ್ಯರಿಗೆ ಆಧುನಿಕ ಯಂತ್ರೋಪಕರಣದ ಸಾಲು ಸಾಲು ಪರೀಕ್ಷೆ ನಡೆಸಿದರೂ ಸಾಕಾಗದ ಪ್ರಮೇಯ ಒದಗಿದೆ. ಎಲ್ಲವೂ ಕಮಿಷನ್’ಮಯವಾಗಿದೆ. ವೈದ್ಯರು ರೋಗಿಯನ್ನು ಮುಟ್ಟುವುದು ಬಿಡಿ ಒಂದ್ನಿಮಿಷದ ಮಾತುಕತೆಗೂ ಮೂರಂಕೆಯ ನೋಟುಗಳು ಬೇಕು. ಇಂತಹ ಪರಿಸ್ಥಿತಿಗೆ ಮುಖ್ಯಕಾರಣ ಆರೋಗ್ಯ ಇಲಾಖೆ. ಕೆಎಸ್ಸಾರ್ಟಿಸಿ ಬಸ್ಸಿನ ಒಟ್ಟು ವ್ಯವಸ್ಥೆಯನ್ನು ಸಾರಿಗೆ ಇಲಾಖೆ ಬದಲಿಸಿದಂತೆ ಸರಕಾರಿ ಆಸ್ಪತ್ರೆಯ ವ್ಯವಸ್ಥೆಗೂ ಆರೋಗ್ಯ ಇಲಾಖೆ ಸರಿಯಾದ ಕ್ರಮ ಕೈಗೊಳ್ಳಲಿ. ಸರಕಾರಿ ಯಂತ್ರ ಸುಸೂತ್ರವಾಗಿ ಚಲಿಸಲು ಪ್ರಾರಂಭವಾದರೆ ಖಾಸಗಿ ಯಂತ್ರ ಕೂಡಾ ಅದನ್ನು ಹಿಂಬಾಲಿಸುತ್ತದೆ. ಒಂದು ರೀತಿಯ ಆರೋಗ್ಯಕರ ಪೈಪೋಟಿ ನಿರ್ಮಾಣವಾಗುತ್ತದೆ. ಆ ದಿನ ಬೇಗ ಬರಲಿ.
  -ರಶೀದ್ ವಿಟ್ಲ.

  • Comments Off on ಖಾಸಗಿ’ತನದ ವ್ಯವಸ್ಥೆ ಬದಲಾಗಬೇಕಾದರೆ ‘ಆರೋಗ್ಯ ಇಲಾಖೆ’ಗೆ ಸರ್ಜರಿಯಾಗಲಿ
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.