07:15 pm Tuesday, June 25, 2019
 • 12 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ;ಮುಖ್ಯಮಂತ್ರಿ ಸಿದ್ದರಾಮಯ್ಯ

  By admin - Sat Nov 18, 2:52 am

  • Comments Off on 12 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ;ಮುಖ್ಯಮಂತ್ರಿ ಸಿದ್ದರಾಮಯ್ಯ
  • 0 views

  ಸಿಹಿ ಸುದ್ದಿ : ಅಕ್ರಮ-ಸಕ್ರಮ ಯೋಜನೆ: ಮೂರು ತಿಂಗಳೊಳಗೆ ಎಲ್ಲಾ ಅಕ್ರಮ ಕಟ್ಟಡಗಳ ಸಕ್ರಮಕ್ಕೆ ಸಿ.ಎಂ ಸೂಚನೆ

  Nov, 2017

  *ಬೆಂಗಳೂರು: ಅಕ್ರಮ – ಸಕ್ರಮ ಯೋಜನೆಯಡಿ ಕರ್ನಾಟಕ ರಾಜ್ಯ ಭೂ ಕಂದಾಯ ಕಾಯಿದೆಯನ್ವಯ ಗ್ರಾಮೀಣ ಪ್ರದೇಶದಲ್ಲಿ ಪರಿಚ್ಛೇಧ 94 (ಸಿ) ನಂತೆ ಹಾಗೂ ನಗರ ಪ್ರದೇಶದಲ್ಲಿ ಪರಿಚ್ಛೇಧ 94 (ಸಿ) (ಸಿ) ನಂತೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸಮಗ್ರವಾಗಿ ಪರಿಶೀಲಿಸಿ ಮುಂದಿನ ಮೂರು ತಿಂಗಳೊಳಗೆ ಎಲ್ಲಾ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿ ಇಂದು ಅಧಿಕಾರಿಗಳಿಗೆ ಸೂಚಿಸಿದರು.*

  *ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.*

  *ಅದೇ ರೀತಿ, ಅರಣ್ಯ ಹಕ್ಕು ಸಮಿತಿಯ ಶಿಫಾರಸ್ಸಿನನ್ವಯ ಅರಣ್ಯ ವಾಸಿಗಳಿಗೂ ಸ್ವಾಧೀನ ಪತ್ರ ಕೊಡುವ ಕ್ರಮ ವೇಗವಾಗಿ ಆಗಬೇಕು ಪ್ರಸಕ್ತ ಆರ್ಥಿಕ ವರ್ಷದ ಏಳು ತಿಂಗಳು ಕಳೆದು ಇನ್ನೂ ಐದು ತಿಂಗಳು ಉಳಿದಿದೆ. ಚುನಾವಣೆಗಳು ಸಮೀಪಿಸುತ್ತಿದ್ದರೂ, ಈ ಆರ್ಥಿಕ ವರ್ಷ ಪೂರ್ಣವಾಗಿ ಕಾರ್ಯ ನಿರ್ವಹಿಸಬಹುದಾಗಿದೆ. ಇನ್ನೂ ಬಾಕಿ ಇರುವ ಕಾರ್ಯಗಳನ್ನು ಕಳಕಳಿ, ಕಾಳಜಿ, ದಕ್ಷತೆ, ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯಿಂದ ನಿರ್ವಹಿಸಿ ಪೂರ್ಣಗೊಳಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿ ಎಂದು ಮುಖ್ಯಮಂತ್ರಿ ಅಧಿಕಾರಿಗಳಿಗೆ ತಾಕೀತು ಮಾಡಿದರು.*

  *ಸರ್ಕಾರ ನಿರೀಕ್ಷಿಸಿದ ಮಟ್ಟದಲ್ಲಿ ಕಾರ್ಯಗಳು ಜಾರಿ ಆಗಬೇಕು. ನಿವೇಶನ-ರಹಿತ ಹಾಗೂ ವಸತಿ-ರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದಲ್ಲಿ ಮನೆ, ನಿವೇಶನ ಕೊಡುವುದಾಗಿ ಈಗಾಗಲೇ ಘೋಷಿಸಿದ್ದೇವೆ.*

  *ಜಿಲ್ಲಾ, ತಾಲ್ಲೂಕು ಹಾಗೂ ಪಂಚಾಯಿತಿ ಮಟ್ಟದಲ್ಲಿ ನಿವೇಶನ ಹಂಚಿಕೆಗೆ ಲಭ್ಯವಿರುವ ಭೂಮಿಯನ್ನು ಗುರುತಿಸದಿದ್ದರೆ ಸರ್ಕಾರದ ಸದುದ್ದೇಶ ಸಾಕಾರಗೊಳಸಲು ಸಾಧ್ಯವಿಲ್ಲ. ಆದಕಾರಣ ಈ ನಿಟ್ಟಿನಲ್ಲಿ ಈ ಕೂಡಲೇ ಕಾರ್ಯೋನ್ಮುಖರಾಗಿ ಎಂದು ಮುಖ್ಯಮಂತ್ರಿ ಆದೇಶಿಸಿದರು.*

  *ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಿ: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಎ. ಟಿ. ರಾಮಸ್ವಾಮಿ ವರದಿಯಲ್ಲಿ 34,111 ಎಕರೆ ಸರ್ಕಾರಿ ಭೂ ಒತ್ತುವರಿಯಾಗಿದೆ ಎಂದೂ ಹಾಗೂ ಅದರಲ್ಲಿ 7781 ಎಕರೆ ಭೂ ಒತ್ತುವರಿ ಸಾರ್ವಜನಿಕ ಉದ್ದೇಶಿಗಳಿಗೆ ಆಗಿದೆ ಎಂದೂ ವಿವರಗಳನ್ನು ನೀಡಿದ್ದಾರೆ. ಅಂತೆಯೇ, ಒತ್ತುವರಿಯಾಗಿರುವ 11,960 ಎಕರೆ ಸರ್ಕಾರಿ ಜಮೀನಿನಲ್ಲಿ 11,660 ಎಕರೆ ಸರ್ಕಾರಿ ಭೂಮಿಯನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ತೆರವುಗೊಳಿಸಿದ್ದಾರೆ. ಇದಲ್ಲದೆ, ವರದಿಯಲ್ಲಿ ನಮೂದಿತವಾಗದ ಸುಮಾರು 6000 ಎಕರೆ ಸರ್ಕಾರಿ ಭೂಮಿಯನ್ನೂ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ತೆರವುಗೊಳಿಸಿದ್ದಾರೆ.*

  *ಇದೇ ಮಾದರಿಯಲ್ಲಿ ವಿ ಬಾಲಸುಬ್ರಮಣ್ಯಂ ವರದಿಯಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಪರಿಶೀಲಿಸಿ ರಾಜ್ಯದ ಇತರೆಡೆಗಳಲ್ಲಿಯೂ ಒತ್ತುವರಿಯಾಗಿರುವ ಸರ್ಕಾರಿ ಜಮೀನುಗಳನ್ನು ಆಧ್ಯತೆಯ ಮೇರೆಗೆ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಿ. ಇದರಿಂದ ರೈಲ್ವೆ, ರಸ್ತೆ, ಶಾಲಾ ಕಟ್ಟಡ ಹಾಗೂ ವಸತಿ ನಿಲಯಗಳಂತಹ ಸಾರ್ವಜನಿಕ ಹಿತದೃಷ್ಠಿ ಹೊತ್ತ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಗತ್ಯವಿರುವ ಜಮೀನು ಹಂಚಿಕೆ ಮಾಡಲು ಸುಲಭವಾಗುತ್ತದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.*

  ಮೊದಲು ಜಿಲ್ಲಾಧಿಕಾರಿಗಳೇ ನಿರ್ವಹಿಸುತ್ತಿದ್ದ ಹಲವು ಕಾರ್ಯಗಳು ಅಪರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಹಂಚಿಕೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಮೇಲಿನ ಕಾರ್ಯ ಒತ್ತಡ ಗಣನೀಯವಾಗಿ ಕಡಿಮೆಯಾಗಿದೆ.

  *ಸರ್ಕಾರಿ ಭೂಮಿ ಮಂಜೂರಾಗಿರುವ ಸಂಘ-ಸಂಸ್ಥೆಗಳ ಬಗ್ಗೆಯೂ ನಿಗಾ ಇಡಿ.*

  *ಸರ್ಕಾರದಿಂದ ಮಂಜೂರಾದ ಜಮೀನು ಅದೇ ಉದ್ದೇಶಕ್ಕೆ ಬಳಸಲಾಗಿದೆಯೇ ? ಇಲ್ಲವೇ ? ಎಂಬುದನ್ನು ಪರಿಶೀಲಿಸಿ. ಜಮೀನು ಹಾಗೂ ವಕ್ಫ್ ಆಸ್ತಿಗಳ ಒತ್ತುವರಿ, ರಸ್ತೆಗಳು ಹಾಗೂ ಕೆರೆ-ಕುಂಟೆಗಳ ಅತಿಕ್ರಮಣದಂತಹ ಪ್ರಕರಣಗಳತ್ತ ಆಧ್ಯ ಗಮನ ಹರಿಸಿ ಜಿಲ್ಲಾಧಿಕಾರಿಗಳು ಸರ್ಕಾರ ಆಸ್ತಿ ರಕ್ಷಣೆಯತ್ತ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಲಹೆ ಮಾಡಿದರು.*

  ಬಾಪೂಜಿ ಸೇವಾ ಕೇಂದ್ರ: ರಾಜ್ಯದಲ್ಲಿ 6000 ಬಾಪೂಜಿ ಸೇವಾ ಕೇಂದ್ರ ನಿರ್ಮಿಸಲು ಗುರಿಗೆ ಪ್ರತಿಯಾಗಿ 5141 ಬಾಪೂಜಿ ಸೇವಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.

  ಒಂದು ನೂರಕ್ಕೂ ಹೆಚ್ಚು ಸೇವೆಗಳ ಒದಗಿಸುತ್ತಿರುವ ಈ ಕೇಂದ್ರಗಳು ಜನಸಾಮಾನ್ಯರಿಗೆ, ವಿಶೇಷವಾಗಿ ರೈತರಿಗೆ, ಉಪಯುಕ್ತವಾಗಿದೆ. ಉಳಿಕೆ 859 ಸೇವಾ ಕೇಂದ್ರಗಳನ್ನು ಮುಂದಿನ ಎರಡು ತಿಂಗಳೊಳಗೆ ಪ್ರಾರಂಭಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮುಖ್ಯಮಂತ್ರಿ ನಿರ್ದೇಶನ ನೀಡಿದರು.

  *ಬೆಂಗಳೂರು ನಗರದಲ್ಲಿ ಒಂದು ಲಕ್ಷ ಮನೆ ನಿರ್ಮಿಸಲು ಗುರಿ ಇದೆ. ಜಿಲ್ಲಾ ಮಟ್ಟದಲ್ಲಿ ಒಟ್ಟಾರೆ ಆರು ಲಕ್ಷ ಮನೆಗಳನ್ನು ನಿರ್ಮಿಸಲು ಈ ವರ್ಷ ಗುರಿ ಹೊಂದಲಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ ನಿವೇಶನ ದೊರಕಿಸಿಕೊಡುವ ಜವಾಬ್ದಾರಿ ತಮ್ಮ ಮೇಲಿದೆ. ರಾಜ್ಯದಲ್ಲಿ 15 ಲಕ್ಷ ಮನೆಗಳನ್ನು ಐದು ವರ್ಷಗಳಲ್ಲಿ ನಿರ್ಮಿಸಲು ಗುರಿ ಹೊಂದಲಾಗಿತ್ತು. ಇದೀಗ 12 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಇನ್ನೂ ಮೂರು ಲಕ್ಷ ಮನೆಗಳನ್ನು ಈ ವರ್ಷಾಂತ್ಯದೊಳಗೆ ನಿರ್ಮಿಸಬೇಕಾಗಿದೆ. ಈ ಕಾರ್ಯಕ್ಕೆ ಮತ್ತಷ್ಟು ವೇಗ ದೊರೆಯಬೇಕಾಗಿದೆ ಎಂದು ಸಿದ್ದರಾಮಯ್ಯ ಅವರು ತಮ್ಮ ಇಂಗಿತ ವ್ಯಕ್ತಪಡಿಸಿದರು.*

  *ಕಾಲ ಕಾಲಕ್ಕೆ ಸಭೆ ನಡೆಸಿ : ಕರ್ನಾಟಕ ಅಭಿವೃದ್ಧಿ ಮಂಡಳಿಯ ಸಭೆ, ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ ಹಾಗೂ ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ರೂಪಿಸಿರುವ 15-ಅಂಶಗಳ ಪ್ರಗತಿ ಪರಿಶೀಲನಾ ಸಭೆ ಎಲ್ಲವೂ ಕಾಲ ಕಾಲಕ್ಕೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಿ. ಹಠಾತ್ ಭೇಟಿ ನೀಡಿ ಪರಿಶೀಲಿಸಿ. ಕರ್ತವ್ಯ ಲೋಪ ಎಸಗಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಕರೆ ನೀಡಿದರು.*

  ಇಂದಿರಾ ಕ್ಯಾಂಟೀನ್ : ಸ್ಥಳ ಗುರುತಿಸಿ, ಇಲ್ಲವಾದಲ್ಲಿ ಮೊಬೈಲ್ ಕ್ಯಾಂಟೀನ್ ಪ್ರಾರಂಭಿಸಿ : ಬೆಂಗಳೂರು ನಗರದಲ್ಲಿ ಪ್ರಾರಂಭಿಸಿರುವ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿಯೇ, ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿಯೂ, ಒಂದು ಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆ ಇರುವ ನಗರ ಪಟ್ಟಣಗಳಲ್ಲಿ ಜನವರಿ 1 ರಿಂದ ಇಂದಿರಾ ಕ್ಯಾಂಟೀನ್‍ಗಳನ್ನು ಪ್ರಾರಂಭಿಸಬೇಕು ಎಂಬುದು ಸರ್ಕಾರದ ಸದಾಶಯ. ಜನಸಂಖ್ಯೆ ಒಂದು ಲಕ್ಷ ಇಲ್ಲ. ಕೇವಲ 75,000 ಇದೆ ಎಂದು ಕೈಕಟ್ಟಿ ಕುಳಿತು ಕೊಳ್ಳಬೇಡಿ.

  ಅವಶ್ಯಕತೆ ಕಂಡು ಬಂದಲ್ಲಿ ಅಂತಹ ಪ್ರದೇಶದಲ್ಲೂ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲು ಮುಂದಾಗಿ. ಅದೇ ರೀತಿ ಒಂದು ಲಕ್ಷ ಜನಸಂಖ್ಯೆಯ ಬದಲು ಎರಡು ಲಕ್ಷ ಜನಸಂಖ್ಯೆ ಇದ್ದಲ್ಲಿ ನಿಯಮಾನುಸಾರ ಒಂದೇ ಕ್ಯಾಂಟೀನ್ ಎಂಬ ತತ್ವಕ್ಕೆ ಬದ್ಧರಾಗುವುದು ಬೇಡ. ಮತ್ತೊಂದು ಕ್ಯಾಂಟೀನ್ ಪ್ರಾರಂಭಿಸುವ ಔದಾರ್ಯ ತೋರಿ.

  ಆಸ್ಪತ್ರೆಯ ಆವರಣ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣ, ಬಸ್ ನಿಲ್ದಾಣ ಹೀಗೆ ಜನ ಸಂದಣಿ ಇರುವ ಪ್ರದೇಶದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಿರಿ. ಸ್ಥಳದ ಕೊರತೆ ಎದುರಾದಲ್ಲಿ ಬಾಡಿಗೆಗೆ ಪಡೆಯಿರಿ ಅಥವಾ ಮೊಬೈಲ್ ಕ್ಯಾಂಟೀನ್‍ಗೆ ಚಾಲನೆ ನೀಡಿ.

  ಶ್ರಮಿಕ ವರ್ಗಕ್ಕೆ ಅನ್ನ ಒದಗಿಸುವ ಈ ಕಾರ್ಯಕ್ಕೆ ಅತ್ಯಾಧ್ಯತೆ ನೀಡಿ ಎಂದು ಸಿದ್ದರಾಮಯ್ಯ ಅವರು ಸೂಚನೆ ನೀಡಿದರು.

  ಮುಖ್ಯಮಂತ್ರಿಯವರ ಅನಿಲ ಭಾಗ್ಯ ಯೋಜನೆಯಡಿ 30 ಲಕ್ಷ ಕುಟುಂಬಗಳಿಗೆ ಸೌಲಭ್ಯ ಒದಗಿಸುವ ಗುರಿ ಇದೆ. ಇದನ್ನು ಈ ಕೂಡಲೇ ಕಾರ್ಯಗತಗೊಳಿಸಿ. ರಾಜ್ಯದಲ್ಲಿ ಬಡತನ ರೇಖೆಗಿಂತಲೂ ಕಡಿಮೆ ಇರುವ ಅರ್ಹ ಕುಟುಂಬಗಳಿಗೆ ಆಧ್ಯತೆಯ ಮೇರೆಗೆ ಕಾರ್ಡ್ ವಿತರಿಸಿ. ಮೈಸೂರು ಮತ್ತು ರಾಯಚೂರು ಜಿಲ್ಲೆಗಳಲ್ಲಿ ಶಾಲಾ ಮಕ್ಕಳಿಗೆ ಹಾಲು ನೀಡುವಲ್ಲಿ ಸುವಾಸಿತ ಹಾಲು ಒದಗಿಸುವ ಕಾರ್ಯ ಈಗಾಗಲೇ ಜಾರಿಯಾಗಿದೆ.

  ಇದರ ಯಶಸ್ಸು ಅಧ್ಯಯಿನಿಸಿ ತಿಳಿಸಿ ಎಂದು ಮುಖ್ಯಮಂತ್ರಿ ಹೇಳಿದರು.

  ರೈತರಿಂದಲೇ ಬೆಳೆ ಸಮೀಕ್ಷೆ !: ಬೆಳೆ ಸಮೀಕ್ಷಾ ಕಾರ್ಯವನ್ನು ನವೆಂಬರ್ 10 ರವರೆಗೆ ಅಧಿಕಾರಿಗಳು ಮಾಡಲಿ. ಬೆಳೆ ವಿಮೆ ಹಾಗೂ ಬೆಳೆ ಪರಿಹಾರಕ್ಕೆ ಅತ್ಯಾವಶ್ಯಕವೆನಿಸಿರುವ ತಮ್ಮ ಭೂಮಿಗೆ ಸಂಬಂಧಿತ ಮಾಹಿತಿಯನ್ನು ಬೆಳೆ ಸಮೀಕ್ಷಾ ಆಯಪ್ ಮೂಲಕ ರೈತರೇ ದಾಖಲಿಸಲು ಪ್ರೇರೇಪಿಸಿ. ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಿ ಎಂದು ಸಿದ್ದರಾಮಯ್ಯ ಅವರು ಸಲಹೆಯಿತ್ತರು.

  ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಲೋಕೋಪಯೋಗಿ ಸಚಿವ ಡಾ ಹೆಚ್. ಸಿ.ಮಹದೇವಪ್ಪ, ಗೃಹ ಸಚಿವ ರಾಮಲಿಂಗಾರೆಡ್ಡಿ, ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ. ಬಿ. ಜಯಚಂದ್ರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್. ಕೆ. ಪಾಟೀಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ. ಆರ್. ರಮೇಶ್ ಕುಮಾರ್, ಇಂಧನ ಸಚಿವ ಡಿ. ಕೆ. ಶಿವಕುಮಾರ್, ನಗರಾಭಿವೃದ್ಧಿ ಮತ್ತು ಹಜ್ ಸಚಿವ ಆರ್ ರೋಷನ್ ಬೇಗ್, ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಕೆ.ಜೆ. ಜಾರ್ಜ್, ಅರಣ್ಯ ಸಚಿವ ಬಿ. ರಮಾನಾಥ್ ರೈ, ಕೃಷಿ ಸಚಿವ ಕೃಷ್ಣಬೈರೇಗೌಡ, ಸಮಾಜ ಕಲ್ಯಾಣ ಸಚಿವ ಹೆಚ್ ಆಂಜನೇಯ, ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣ್ ಪ್ರಕಾಶ್ ಪಾಟೀಲ್ ಸೇರಿದಂತೆ ಹಲವು ಗಣ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

  ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಅ, ವಿವಿಧ ಇಲಾಖೆಗಳ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಸರ್ಕಾರದ ಪ್ರಧಾನ ಕಾಯದರ್ಶಿಗಳು, ಸರ್ಕಾರದ ಕಾರ್ಯದರ್ಶಿಗಳು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರೂ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು, ಮಾಹಿತಿ ಒದಗಿಸಿದರು.

  • Comments Off on 12 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ;ಮುಖ್ಯಮಂತ್ರಿ ಸಿದ್ದರಾಮಯ್ಯ
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.