08:05 pm Tuesday, June 25, 2019
 • ಟಿಪ್ಪು ಕುಟುಂಬ ಈಗ ಎಲ್ಲಿದೆ?

  By admin - Mon Nov 06, 1:18 am

  • Comments Off on ಟಿಪ್ಪು ಕುಟುಂಬ ಈಗ ಎಲ್ಲಿದೆ?
  • 0 views

  ಟಿಪ್ಪು ಕುಟುಂಬ ಈಗ ಎಲ್ಲಿದೆ?

  ಮೈಸೂರಿನ ಒಡೆಯರು ವರ್ಷಗಳ ಹಿಂದೆ ವಿಧಿವಶರಾದರು.ಲಕ್ಷಾಂತರ ರುಪಾಯಿಗಳನ್ನು ಸುರಿದು ಅಂತ್ಯಕ್ರೀಯೆ ನೆರವೇರಿಸಲಾಯಿತು. 1500 ಕೋಟಿಗಳ ಒಡೆಯರಾದ ಒಡೆಯರ ಆಸ್ತಿ ನ್ಯಾಲಯದಲ್ಲಿರುವುದೆಲ್ಲ ಇತ್ಯರ್ಥವಾದರೆ 40 ಸಾವಿರ ಕೋಟಿಗಳನ್ನು ದಾಟುತ್ತದೆ. ರಾಜಸ್ತಾನದಲ್ಲಿ ಮುಖ್ಯಮಂತ್ರಿಯಾದ ವಸುಂದರಾ ರಾಜೆ ಕೂಡ ರಾಜ ಮನೆತನದ ಗತ್ತಿನಲ್ಲಿಯೇ ಬೆಳೆದವರು. ಹೀಗೆ ಭಾರತದಲ್ಲಿ ಹಲವಾರು ರಾಜ ಮನೆತನದವರು ಮುಖ್ಯಧಾರೆಯಲ್ಲಿ ಪ್ರಮುಖರಾಗಿ ಮೆರೆಯುತ್ತಿದ್ದಾರೆ. ಆದರೆ ಭಾರತಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿದ ಪ್ರಥಮ ರಾಜರಾದ ಟಿಪ್ಪುರವರ ಕುಟುಂಬ, ಮನೆತನ ಈಗ ಎಲ್ಲಿದೆ? ಆ ಮಹಾನ್ ತ್ಯಾಗಿಗೆ ನಾವು ನೀಡಿದ ಗೌರವ ಏನು? ಕ್ರೂರಿ ಬ್ರಿಟೀಷರು ನೀಡಿದ ಗೌರವವನ್ನಾದರೂ ನಾವು ಅವರಿಗೆ ನೀಡಿದ್ದೇವೆಯೇ? ಬನ್ನಿ ಪ್ರವಾದಿ ಪರಂಪರೆಯಲ್ಲಿ ಸೇರುವ ಟಿಪ್ಪು ಸಂತತಿಯನ್ನು ಒಮ್ಮೆ ಭೇಟಿಯಗೋಣ…

  ಕಲ್ಕತ್ತಾ ಮಹಾನಗರಿಯ ಟೊಲ್ಲಿ ಗಂಝ್ ಕೊಳಗೇರಿ ಪ್ರದೇಶದಲ್ಲಿ ಟಿಪ್ಪು ಸುಲ್ತಾನರ ಮಗ ಫತಹ್ ಹೈದರವರ 6ನೇ ತಲೆಮಾರಿನ ಸುಲ್ತಾನ್ ಅಕ್ಬರ್ ಶಾ ರವರ ವಿಧವೆ ತಮನ್ನಾ ಬೇವ ಗುಡಿಸಿಲೊಂದರಲ್ಲಿ ವಾಸವಾಗಿದ್ದಾರೆ. ಬೀದಿಯಲ್ಲಿ ಪಾನ್ ಮಸಾಲಾ, ಸಿಗರೇಟ್ ಮಾರುವುದೇ ಇವರ ಕೆಲಸ. ನಾಲ್ಕು ಮಕ್ಕಳಲ್ಲಿ ಹಿರಿಯ ಮಗ ಅನ್ವರ್ ಶಾ ಹಾಗು ಸನ್ವರ್ ಶಾ ಇಬ್ಬರಿಗೂ ಬಾಡಿಗೆಗೆ ಪಡೆದಿರುವ ಸೈಕಲ್ ರಿಕ್ಷಾವೇ ಬದುಕಿಗಿರುವ ಏಕೈಕ ಆಸರೆ. ತಾತನ ಹೆಸರಲ್ಲಿರುವ ರೋಡಿನಲ್ಲಿ ಸೈಕಲ್ ತುಳಿದು ಬದುಕುತ್ತಿದ್ದಾರೆ ಈ ಅನಕ್ಷರಸ್ತ ಯುವರಾಜರು! ಅನ್ವರ್ ಶಾನ ಮಾತಿನಲ್ಲೇ ಹೇಳಬೇಕಾದರೆ “ಈ ಸೈಕಲ್ ನಿಂದ ದಿನಕ್ಕೆ ನೂರು ರೂಪಾಯಿ ಆದಾಯ ಬರುತ್ತದೆ. 20 ರೂ ಮಾಲೀಕನಿಗೆ ಬಾಡಿಗೆ ನೀಡಬೇಕು. ಸ್ವಂತ ಖರೀದಿಸಲು ಹಣವಿಲ್ಲ, ಸಾಲ ಪಡೆಯುವ ಧೈರ್ಯವೂ ಇಲ್ಲದಾಗಿದೆ. ಸಾಲ ಮರಳಿಸಲಾಗದಿದ್ದರೆ ತಾತ (ಟಿಪ್ಪು) ರವರ ಹೆಸರಿಗೆ ಕಳಂಕ ವಾದೀತು”.

  ಇನ್ನೋರ್ವ ಮಗ ಬಿಲಾವರ್ ಶಾ ಸೈಕಲ್ನಿಂದ ಸೆಕ್ಯೂರಿಟಿ ಗಾರ್ಡ್ಗೆ ಪ್ರಮೋಟ್ ಆಗಿದ್ದಾರೆ. ಇವರ ಮಗಳು ಕಲಿತು ಡಾಕ್ಟರ್ ಆಗಬೇಕೆಂದು ಕನಸು ಕಂಡು ಈಗ ಮಸುರೆ ತೊಳೆಯುತ್ತಿದ್ದಾಳೆ. ಬಹುಶಃ ಭಾರತೀಯ ರಾಜ ಕುಟುಂಬಸ್ಥರಲ್ಲಿ ಇಂತಹ ದುರ್ಗತಿ ಒದಗಿದ್ದು ಇವರಿಗೆ ಮಾತ್ರ.

  ಹಾಗೆ ನೋಡಿದರೆ ಟಿಪ್ಪು ಮತ್ತು ಮಕ್ಕಳು ಇವರೆನ್ನೇನು ದಿವಾಳಿಗಳಾಗಿ ಬಿಟ್ಟು ಹೋಗಿಲ್ಲ. ಕೋಟ್ಯಾಂತರ ಬೆಲೆಬಾಳುವ ಆಸ್ತಿಗಳು ಇವರಿಗಿದೆ. ಅದರೇನು ಫಲ ಹೇಳಿ, ಅದೆಲ್ಲವೂ ಪರರ ಪಾಲಾಗಿದೆ. ಆದರೂ “ನಾವು ಪ್ರಿನ್ಸಸ್ ಎಂದಿಗೂ ತಲೆ ತಗ್ಗಿಸಿಲ್ಲ” ಎನ್ನುತ್ತಾನೆ ಅನ್ವರ್ ಶಾ.

  ಟಿಪ್ಪುವಿನ ಎರಡನೇ ಮಗನಾದ ಗುಲಾಂ ಮುಹಮ್ಮದ್ ಶಾ 1872 ರಲ್ಲಿ ಕುಟುಂಬ ಟ್ರಸ್ಟ್ ಸ್ತಾಪಿಸಿ ಆಸ್ತಿಗಳೆಲ್ಲವನ್ನೂ ಕುಟುಂಬದ ಉನ್ನತಿಗಾಗಿ ವಖ್ಫ್ ಮಾಡಿದ್ದರು. ಟಿಪ್ಪು ಕುಟುಂಬದ ಹೆಸರಿನಲ್ಲಿ ಕಲ್ಕತ್ತಾದ ರಹ್ಮತ್ತ್ ಸ್ಟೀಟ್ ಮತ್ತು ಟೋಲಿಗಂಝ್ ಸ್ಟೀಟ್ಗಳಲ್ಲಿ ಎರಡು ಮಸೀದಿಗಳಿವೆ. ಇನ್ನು ಟೋಲ್ಲಿ ಗಂಝ್ ಕ್ಲಬ್, ಇದು ಎಕರೆಗಳ ವಿಸ್ತೀರ್ಣವಿರುವ ಅಂತರಾಷ್ಟ್ರೀಯ ವಿನೋದ ಕೇಂದ್ರವಾಗಿದ್ದು ಇದರಲ್ಲಿ ಕುದುರೆ ಸವಾರಿ, ಬಾರ್, ಗಾಲ್ಫ್ ಮುಂತಾದ ವ್ಯವಸ್ತೆಗಳಿವೆ. ಇದು ತಿಂಗಳಿಗೆ ಕೋಟ್ಯಾಂತರ ಆದಾಯ ನೀಡುತ್ತಿದೆ. ಹೆಸರಾಂತ ರೋಯಲ್ ಗಾಲ್ಫ್ ಕ್ಲಬ್ನ 26 ಎಕರೆ ಪ್ರದೇಶವು ಟಿಪ್ಪು ಕುಟುಂಬಕ್ಕೆ ಸೇರಿದ್ದಾಗಿದೆ. ಇನ್ನು ಬನ್ಸಾಲ್ ಸ್ಟ್ರೀಟಿನಲ್ಲಿ ರೈಟರ್ ಹೌಸಿಗಿಂತ 1 ಕಿಮೀ ದೂರದಲ್ಲಿರುವ ಶಾ ವಾಲಾಸ್ ಬಿಲ್ಡಿಂಗನ್ನು 1909 ರಲ್ಲಿ 75 ವರ್ಷಗಳ ಅವಧಿಗೆ ಬಾಡಿಗೆಗೆ ನೀಡಿದ್ದು ಈಗ ಮದ್ಯ ದೊರೆ ವಿಜಯ್ ಮಲ್ಯ ವಶದಲ್ಲಿದೆ.

  ವಲೀ ಅಹ್ಮದ್ ಶಾರವರ ಮಕ್ಕಳು ಹೇಳುವಂತೆ “ತಂದೆಯನ್ನು ನೆನಪಿಸುವಾಗ ಕೋರ್ಟ್ಗಳದ್ದೇ ನೆನಪಾಗುತ್ತದೆ. ಮರಣದವರೆಗೆ ತನ್ನ ಕುಟುಂಬದ ಆಸ್ತಿಗಾಗಿ ಕಾನೂನು ಹೋರಾಟ ನಡೆಸಿದ್ದರಾದರೂ ಫಲಕಾಣಲಿಲ್ಲ”. ಅಂತಿಮವಾಗಿ ಮಾಡಿಕೊಂಡ ಒಪ್ಪಂದದಂತೆ ಶಾವಾಲಾಸ್ 1 ಕೋಟಿ ಡೊನೇಶನ್ ಹಾಗು ವರ್ಷಕ್ಕೆ 10% ವೃದ್ಧಿ ದರದಲ್ಲಿ ತಿಂಗಳಿಗೆ 6 ಲಕ್ಷ ಬಾಡಿಗೆ ಕೊಡುತ್ತಿದೆ. ಟೋಲ್ಲಿ ಗಂಝ್ ಕ್ಲಬ್ ಮತ್ತು ರೋಯಲ್ ಗಾಲ್ಫ್ ಕ್ಲಬ್ 95 ಲಕ್ಷದಂತೆ ಡೊನೇಶನ್ ಹಾಗು 12% ವೃದ್ಧಿ ದರದಲ್ಲಿ 1 ಲಕ್ಷ ಬಾಡಿಗೆ ನೀಡುತ್ತಿದೆ. ಆದರೆ ಈ ಮೊತ್ತದಲ್ಲಿ ಒಂದು ನಾಣ್ಯವೂ ಕೂಡ ಅರ್ಹರಿಗೆ ಸೇರಿಲ್ಲ. ಟಿಪ್ಪು ಕುಟುಂಬದವರೆಲ್ಲ ಅದೇ ಸೂರಿನಲ್ಲಿ ಕೆಲವರು ವೆಲ್ಡಿಂಗ್ ಶಾಪ್ಗಳಲ್ಲಿ ಜೀವನ ಸವೆಯುತ್ತಿದ್ದಾರೆ.

  ವಲೀ ಅಹ್ಮದ್ ಶಾ ರವರ ಮಕ್ಕಳಲ್ಲಿ ಈ ಅಂತಿಮ ಒಪ್ಪಂದದ ಒಪ್ಪಂದದ ಕುರಿತು ಕೇಳುವಾಗ “ಇಲ್ಲಿನ ವಕ್ಫ್ ಬೋರ್ಡ್ಗೆ ಹೋದರೆ ಪತ್ರಗಳನ್ನು ತರಲು ಹೇಳುತ್ತದೆ. ಎಷ್ಟು ಬಾರಿ ಕೆಲಸ ತೊರೆದು ಅದರ ಹಿಂದೆ ಅಲೆಯಲಿ? ಅವರನ್ನು ನಂಬಿದರೆ ಇರುವ ಕೆಲಸವೂ ನಷ್ಟವಾದೀತು ಎನ್ನುತ್ತಾರೆ. ಅಂದರೆ ಈ ಕೋಟ್ಯಾಂತರ ರುಪಾಯಿಗಳು ಅದ್ಯಾವುದೋ ವಕ್ಫ್ ಬೋರ್ಡಿನ ಪುಡಾರಿಗಳ ಜೇಬು ಸೇರುತ್ತಿದೆ.

  ಪ. ಬಂಗಾಳದಲ್ಲಿ ವಕ್ಫ್ ಆಸ್ತಿಗಳು ವ್ಯಾಪಕವಾಗಿ ಕೊಳ್ಳೆ ಹೊಡೆಯಲ್ಪಟ್ಟಿದೆ. ಸರಕಾರ ನೇಮಿಸಿದ ಆಯೋಗದ ವರದಿಯಂತೆ ಕಳೆದ ಮೂವತ್ತು ವರ್ಷಗಳಲ್ಲಿ 700 ವಕ್ಫ್ ಆಸ್ತಿಗಳು ಅನ್ಯಾಧೀನವಾಗಿದೆ. 1000 ಕೋಟಿಗಳ ಅವ್ಯವಹಾರ ನಡೆದಿದೆ ಅದರಲ್ಲಿ 500 ಕೋಟಿಗಳು ಟಿಪ್ಪು ಕುಟುಂಬದ ಕ್ಷೇಮಕ್ಕಾಗಿ ಮೀಸಲಿರಿಸಿದ್ದಾಗಿತ್ತು. ಇವರ ಆಸ್ತಿಗಳೆಲ್ಲವೂ ಪರರ ಪಾಲಾಗಲು ಇವರ ಅಸಡ್ಡೆಯೇ ಕಾರಣವೆಂದು ವಾದಿಸಬಹುದಾದರೂ ಕಲ್ಕತ್ತಾದಲ್ಲಿರುವ ಟಿಪ್ಪುರವರ ಪುರಾತನ ನೆನಪುಗಳೆಲ್ಲವೂ ನಾಶವಾಗುತ್ತಿದೆ. ಮೆಟ್ರೋ ಕಾಮಗಾರಿ ಹೆಸರಲ್ಲಿ ಕೆಲವನ್ನು ಕಾರ್ಪೊರೇಶನ್ ನಾಶಮಾಡಿದೆ. ಅದರತ್ತ ತಿರುಗಿ ನೋಡುವ ಸೌಜನ್ಯ ತೋರದೆ ನಾಶಮಾಡುವವರನ್ನು ಸರಕಾರ ರಕ್ಷಿಸುತ್ತಿದೆ.

  ಧುರವಸ್ಥೆಗೊಂದು ಪ್ರತ್ಯಕ್ಷ ಸಾಕ್ಷಿಯೆಂಬತೆ ಸತೀಶ್ ಮುಖರ್ಜಿ ರೋಡಿನಲ್ಲಿರುವ ಸಾಹಿಬ್ ಬಗಾನ್ ಎಂಬ ಗಲ್ಲಿಯಲ್ಲಿ ಟಿಪ್ಪು ಕಟ್ಟಿಸಿದ ಮಸೀದಿಯೊಂದಿದೆ. ಇದರ ಪರಿಸರದಲ್ಲಿಯೇ ಟಿಪ್ಪು ರವರ ಸಹೋದರ ಬಕ್ತಿಯಾರ್ ಶಾ, ಸುಲ್ತಾನ್ ಆಲಂ, ಅಳಿಯ ನಿಝಾಮುದ್ದೀನ್ ಮುಂತಾದವರ ಖಬರುಸ್ತಾನಗಳಿವೆ. ಪ್ರಸ್ತುತ ಪ್ರದೇಶವೀಗ ಅಕ್ರಮ ನಿವಾಸಿಗಳ ಕೇಂದ್ರವಾಗಿದೆ. ನಾಲ್ಕು ಗೂಂಡಾಗಳು ಇಡೀ ಕೇರಿಯನ್ನು ನಿಯಂತ್ರಿಸುತ್ತಿದ್ದಾರೆ ಮತ್ತು ಇದರ ಆದಾಯಗಳೆಲ್ಲವೂ ಇವರ ಪಾಲಾಗುತ್ತಿದೆ. ಅಲ್ಲಿಗೆ ಸಂದರ್ಶಿಸಲು ಹೋದವರನ್ನು ಹೊಡೆದು ಓಡಿಸುತ್ತಾರೆ. ದುರಂತ ನೋಡಿ, ಅಲ್ಲಿರುವ ಮಸೀದಿಯ ಒಳಗೆ ಇಸ್ಪೀಟ್ ಆಡುತ್ತಾರೆ, ಮದ್ಯಪಾನ ಮಾಡುತ್ತಾರೆ. ಪ.ಬಂಗಾಳ ಸರಕಾರ ಈ ಪ್ರದೇಶವನ್ನು ‘ಫಸ್ಟ್ ಗ್ರೇಡ್ ಪವಿತ್ರ ಕೇಂದ್ರ’ವೆಂದು ಘೋಷಿಸಿ ಬೃಂದಾವನಗಳು, ಲೈಬ್ರೆರಿಗಳನ್ನು ಸ್ಥಾಪಿಸುತ್ತೇವೆಂದು ಹೇಳಿ ವರ್ಷಗಳು ಕಳೆದಿವೆ. ಕಾರ್ಪೋರೇಶನ್ ಅನಧಿಕೃತ ನಿವಾಸಿಗಳಿಗೆ ಬೇಕಾದ ಸೌಕರ್ಯ ನೀಡುತ್ತಿದೆ.

  1832 ಪ್ರಿನ್ಸ್ ಗುಲಾಂ ಮುಹಮ್ಮದ್ ಶಾ ನಿರ್ಮಿದ ಲೆನಿನ್ ಸರಣಿಯಲ್ಲಿರುವ ಶಹೀದ್ ಟಿಪ್ಪು ಸುಲ್ತಾನ್ ಮಸೀದಿಯನ್ನು ನವೀಕರಿಸಲಿಲ್ಲ ಎಂದಲ್ಲ ಮೆಟ್ರೋ ಕಾಮಗಾರಿಯಿಂದಾದ ಹಾನಿಯನ್ನು ಕೂಡ ಸರಿಪಡಿಸಲಿಲ್ಲ. ಟಿಪ್ಪುವಿನ ಎರಡು ಮಕ್ಕಳು ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಟೊಲ್ಲಿ ಗಂಝ್ನಲ್ಲಿರುವ ಮಸೀದಿ ಕೂಡ ಅವನತಿಯ ಅಂಚಿನಲ್ಲಿದೆ. ಎಸ್ಪಿ ಮುಖರ್ಜಿ ರಸ್ತೆಯ ಅಂಚಿನಲ್ಲಿ ಸುಮಾರು 100 ಮೀ ರಸ್ತೆಗೆ ಟಿಪ್ಪುವಿನ ಹೆಸರಿದೆ. ದೇಶಕ್ಕಾಗಿ ಹೋರಾಡಿ ವೀರ ಮರಣ ಹೊಂದಿದ ಈ ಮಹಾನ್ ನಾಯಕರಿಗೆ ನಾವು ನೀಡಿದ ಗೌವರವವಾದರೂ ಇಷ್ಟೇನಾ..?

  ಈ ವೀರ ಕನ್ನಡಿಗನ ಬಗ್ಗೆ ಅಭಿಮಾನ ಪಡಬೇಕಿದ್ದ ನಮ್ಮ ಸಾಹಿತಿಗಳು ಅವರನ್ನು ದೇಶದ್ರೋಹಿಯಾಗಿಸಿದ್ದಾರೆ. 2009 ರಲ್ಲಿ ಟಿಪ್ಪು 200 ನೇ ಜನ್ಮದಿನ ಆಚರಿಸುವಾಗ ಅಂದಿನ ಕರ್ನಾಟಕ ಸರಕಾರ ಕಲ್ಕತ್ತಾಗೆ ನಿಯೋಗ ಕಳುಹಿಸಿ ಅವರ ಕುಟುಂಬದ ವಿವರ ಪಡೆದಿತ್ತು. ವಲೀ ಅಹ್ಮದ್ ಶಾರವರ ಮಕ್ಕಳು ಹೇಳುವಂತೆ ಅವರು ನಮ್ಮ ವಿಳಾಸ ದೂರವಾಣಿ ಪಡೆದು ಹೋಗಿದ್ದಾರೆ. ನಂತರ ಅವರ್ಯಾರೂ ನಮ್ಮನ್ನು ಸಂಪರ್ಕಿಸಿಲ್ಲ.

  1971 ಆಕ್ಟ್ ಪ್ರಕಾರ ಲಭಿಸಬೇಕಾದ ಅನುಕೂಲಗಳೂ ಕೂಡ ಇವರಿಗೆ ಲಭಿಸುತ್ತಿಲ್ಲ. 1799 ರಲ್ಲಿ ಬ್ರಟೀಷರು ಟಿಪ್ಪುರವರನ್ನು ಕೊಂದು ಅವರ ಕುಟುಂಬದ ಸುಮಾರು 300 ಸದಸ್ಯರನ್ನು ಬಲವಂತವಾಗಿ ಕಲ್ಕತ್ತಾಗೆ ಸ್ತಳಾಂತರಿಸಿದರಾದರೂ ಅವರಿಗೆ ರಾಜ ಗೌರವ ನೀಡಿದ್ದರು. ಅಧಿಕಾರವಿಲ್ಲದಿದ್ದದರೂ ರಾಜರಂತೆ ಅವರು ನೋಡಿಕೊಂಡಿದ್ದರು. ಆದರೆ ನಮ್ಮದೇ ಸರಕಾರ ಅವರಿಗಿದ್ದ ಆಸ್ತಿಗಳೆಲ್ಲವನ್ನೂ ಅಕ್ರಮಿಸಿದೆ.

  ನಮ್ಮ ರಾಜ್ಯ ಸರಕಾರ ಟಿಪ್ಪು ಜಯಂತಿಯನ್ನು ಆಚರಿಸಲು ತೀರ್ಮಾನಿಸಿದ್ದು ಸಂತಸದ ವಿಚಾರ. ಅದರೊಂದಿಗೆ ಅವರ ಕುಟುಂಬದ ಕುರಿತು ತಿಳಿದು ಅವರಿಗೆ ಬೇಕಾದ ವ್ಯವಸ್ಥೆ ಮಾಡಲು ಸಜ್ಜಾದರೆ ಅದೊಂದು ಅವಿಸ್ಮರಣೀಯ ಇತಿಹಾಸವಾದೀತು.

  ಪ್ರಖ್ಯಾತ ಚಿಂತಕ ಜ್ಷಾನಪೀಟ ವಿಜೇತ ಕೆ.ಕೆ ಕುರುಪ್ಪು ಇತ್ತೀಚೆಗೆ ಟಿಪ್ಪು ಕುಟುಂಬದ ಕುರಿತು ಡಾಕ್ಯುಮೆಂಟರಿಯೊಂದನ್ನು ಸಮರ್ಪಿಸಿದ್ದರು.

  ಪ್ರವಾದಿ ಕುಟುಂಬ ಪರಂಪರೆಯಲ್ಲಿ ಜನಿಸಿದ ಇವರ ಗೌರವ ಕಾಪಾಡಬೇಕಾದ ಜವಬ್ದಾರಿ ನಮಗೂ ಇಲ್ಲವೇ?

  ಕಳೆದ ವರ್ಷ ಕೆ.ಕೆ ಕುರುಪ್ಪ್ ದೇರಳಕಟ್ಟೆ ಯೆನೆಪೋಯ ಯೂನಿವರ್ಸಿಟಿ ಯಲ್ಲಿ ಟಿಪ್ಪು ರ.ಅ ರವರ ಡಾಕ್ಯುಮೆಂಟರಿ ಬಿಡುಗಡೆ ಮಾಡಿ ಉಪನ್ಯಾಸವನ್ನೂ ನೀಡಿದ್ದರು. ಅದರ ಆಯ್ದ ಭಾಗಗಳನ್ನು ಸೇರಿಸಿ ಈ ಲೇಖನ ಬರೆದಿದ್ದೇನೆ.

  📝 ಅನೀಸ್ ಕೌಸರಿ ಕೆ.ಐ.ಸಿ ಕುಂಬ್ರ
  ಪ್ರ.ಕಾ SKSSF ಪುತ್ತೂರು ವಲಯ

  • Comments Off on ಟಿಪ್ಪು ಕುಟುಂಬ ಈಗ ಎಲ್ಲಿದೆ?
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.