07:16 pm Tuesday, June 25, 2019
 • ನ್ಯಾಯಕ್ಕಾಗಿ ಸಿಡಿದೆದ್ದ ಬನಾರಸ್ ಹಿಂದೂ ವಿವಿ ವಿದ್ಯಾರ್ಥಿನಿಯರು

  By admin - Mon Sep 25, 2:19 pm

  • Comments Off on ನ್ಯಾಯಕ್ಕಾಗಿ ಸಿಡಿದೆದ್ದ ಬನಾರಸ್ ಹಿಂದೂ ವಿವಿ ವಿದ್ಯಾರ್ಥಿನಿಯರು
  • 0 views

   

   

   

   

   

   

  By ಸಿರಿಮನೆ ನಾಗರಾಜ್

   

  ಸಿಡಿದೆದ್ದ ಬನಾರಸ್ ಹಿಂದೂ ವಿವಿ ವಿದ್ಯಾರ್ಥಿನಿಯರು: ಎಲ್ಲೆಡೆಯೂ ವಿದ್ಯಾರ್ಥಿ ಚಳವಳಿಗೆ ಸ್ಫೂರ್ತಿ*

  2016 ಸೆಪ್ಟೆಂಬರ್ 21ರ ರಾತ್ರಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಬೀದಿ ದೀಪಗಳಿಲ್ಲದೆ ಕತ್ತಲೆಯಿಂದ ತುಂಬಿದ್ದ ರಸ್ತೆಯೊಂದರಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಮೋಟಾರ್ ಸೈಕಲ್ ಮೇಲೆ ಹೋಗುತ್ತಿದ್ದ ಗಂಡಸರು ಮೈಕೈ ಸವರಿ ಲೈಂಗಿಕ ದೌರ್ಜನ್ಯ ಎಸಗಿದರು. ವಿವಿ ಆವರಣದಲ್ಲಿ ಕರ್ತವ್ಯದ ಮೇಲಿದ್ದ ಗಾರ್ಡ್‍‍ಗಳನ್ನು ಕೂಗಿದರೂ ಅವರು ನೆರವಿಗೆ ಬರಲಿಲ್ಲ. ಅಷ್ಟೇಕೆ, ಆಕೆ ಇತರ ಕೆಲವು ವಿದ್ಯಾರ್ಥಿನಿಯರೊಂದಿಗೆ ವಿವಿಯ ಪ್ರಾಕ್ಟರ್ ಮತ್ತು ಆಡಳಿತಾಧಿಕಾರಿಗಳ ಬಳಿ ತೆರಳಿ, ಸಿಸಿಟಿವಿ ಚಿತ್ರಗಳನ್ನು ನೋಡಿ ಅಪರಾಧಿಗಳನ್ನು ಪತ್ತೆಹಚ್ಚಲು ನೆರವಾಗಬೇಕೆಂದು ಕೇಳಿದರೆ ಅವರ ಉತ್ತರ, “ನಾಳೆ ಪ್ರಧಾನಿ ಮೋದೀಜಿ ವಾರಣಾಶಿಗೆ ಬರುತ್ತಿರುವುದು ನಿಮಗೆ ಗೊತ್ತಿಲ್ವ? ಅವರು ಬಂದುಹೋಗುವ ವರೆಗೂ ಇನ್ನೊಂದೆರಡು ದಿನ ನಮಗೆ ಬಿಡುವಿಲ್ಲ. ಅದಿರಲಿ, ನೀನೇಕೆ ಸಂಜೆ ಹೊತ್ತು ಹೊರಗೆ ಹೋಗಬೇಕಿತ್ತು?” ಎಂಬುದಾಗಿತ್ತು.

  ಆ ರಾತ್ರಿ ತ್ರಿವೇಣಿ ಹಾಸ್ಟೆಲಿನ ವಿದ್ಯಾರ್ಥಿನಿಯರು ಒಟ್ಟುಗೂಡಿ, ಹಾಸ್ಟೆಲ್ ವಾರ್ಡನ್ ಭೇಟಿಯಾಗಬೇಕೆಂದು ಕೇಳಿದಾಗ, ಮೋದಿ ಭೇಟಿ ಮುಗಿಯುವವರೆಗೂ ಏನೂ ಮಾಡಲು ಸಾಧ್ಯವಿಲ್ಲ ಎಂಬ ಉತ್ತರ ಬಂತು. ಕ್ಯಾಂಪಸ್ಸಿನ ಕತ್ತಲ ಬೀದಿಗಳಲ್ಲಿ ಬೀದಿ ದೀಪ ಅಳವಡಿಸುವಂತೆ ಆ ವಿದ್ಯಾರ್ಥಿನಿ ಆಗ್ರಹಿಸಿದಾಗ, “ನಿಮಗೆ ಕತ್ತಲಲ್ಲಿ ಹೊರಗೆ ಹೋಗುವ ಅಗತ್ಯವೇನಿದೆ? ಅನೇಕ ಹುಡುಗಿಯರು ತಡರಾತ್ರಿ 9 – 10 ಗಂಟೆಯವರೆಗೂ ಹೊರಗೆ ಇರುತ್ತೀರಿ ಹಾಗೂ ಪ್ರಚೋದಕವಾದ ಉಡುಗೆ ತೊಡುತ್ತೀರಿ. ಲೈಂಗಿಕ ದೌರ್ಜನ್ಯಗಳು ನಡೆಯುವಂಥ ವಾತಾವರಣ ಸೃಷ್ಟಿಯಾಗಲು ನೀವುಗಳೇ ಕಾರಣ…” ಮುಂತಾಗಿ ವಾರ್ಡನ್ ಗಳಹಿದ.

  ಸೆ. 22ರ ಬೆಳಗಿನ 5 ಗಂಟೆ ಚುಮುಚುಮು ನಸುಕಿನಲ್ಲೇ ವಿದ್ಯಾರ್ಥಿನಿಯರು ಬಹಿಂವಿವಿಯ ಮುಖ್ಯ ದ್ವಾರದ ಬಳಿ ಸೇರತೊಡಗಿದರು. ಸಮಯ ಸರಿದಂತೆ ಅವರ ಸಂಖ್ಯೆ ಏರುತ್ತಲೇ ಹೋಯಿತು, ರಾತ್ರಿವರೆಗೂ ಮುಂದುವರಿಯಿತು. ಅಂದೇ ವಾರಣಾಶಿಗೆ ಭೇಟಿ ನೀಡಲಿದ್ದ, ಆ ನಗರದ ಸಂಸದನೂ ಆಗಿರುವ ಪ್ರಧಾನಿ ಮೋದಿ ಅದೇ ಹಾದಿಯಲ್ಲಿ ಸಾಗಬೇಕಿತ್ತು. ವಿದ್ಯಾರ್ಥಿನಿಯರು ಮುಖ್ಯ ದ್ವಾರದ ಮೇಲೆ ಬೃಹತ್ ಬ್ಯಾನರೊಂದನ್ನು ತೂಗು ಹಾಕಿದರು. ಅದರಲ್ಲಿ “ಬಿಎಚ್‍ಯು ವಿಸಿ ವಾಪಸ್ ಹೋಗಲಿ” ಎಂಬುದರ ಜೊತೆಗೆ, ಮೋದಿಯ “ಬೇಟಿ ಬಚಾವೊ ಬೇಟಿ ಪಢಾವೊ” (ಮಗಳನ್ನು ರಕ್ಷಿಸಿ, ಮಗಳನ್ನು ಓದಿಸಿ) ಘೋಷಣೆಯನ್ನು ಗುರಿಯಾಗಿಸಿ, “ಮಗಳು ಸುರಕ್ಷಿತವಾಗಿದ್ದರಲ್ಲವೆ ಅವಳನ್ನು ಓದಿಸುವುದು!” (ಬಚೇಗೀ ಬೇಟಿ, ತಭೀತೋ ಪಢೇಗೀ ಬೇಟಿ) ಎಂದು ಬರೆದಿದ್ದರು. ಮಹಿಳೆಯರಿಗೆ ಲೈಂಗಿಕ ದೌರ್ಜನ್ಯದಿಂದ ರಕ್ಷಣೆ ಇದ್ದರೆ ಮಾತ್ರ ಶಿಕ್ಷಣ ಸಾಧ್ಯ ಎಂದು ಮೋದಿಗೆ ತಿಳಿಹೇಳುವುದು ಇದರ ಉದ್ದೇಶವಾಗಿತ್ತು. ಈ ಬ್ಯಾನರ್ ಮೂಲಕ ಸಾಗುವುದನ್ನು ತಪ್ಪಿಸಲಿಕ್ಕಾಗಿ ಮೋದಿಯ ಪ್ರಯಾಣದ ಮಾರ್ಗವನ್ನೇ ಬದಲಿಸಿದ್ದು ಬಿಎಚ್‍ಯು ವಿದ್ಯಾರ್ಥಿ ಸಮೂಹವನ್ನು ಕೆರಳಿಸಿತು.

  ಪ್ರತಿಭಟನೆಯು 22ರ ರಾತ್ರಿಯೂ ಮರುದಿನ ಹಗಲೂ ಮುಂದುವರಿಯಿತು. ವಿದ್ಯಾರ್ಥಿನಿಯರ ಹೋರಾಟಕ್ಕೆ ಹಾಗೂ ಅವರ ಆಗ್ರಹಗಳಿಗೆ ಬೆಂಬಲ ಸೂಚಿಸಿ ವಿವಿಯ ಪುರುಷ ವಿದ್ಯಾರ್ಥಿಗಳೂ ಪ್ರತಿಭಟನೆಯಲ್ಲಿ ಸೇರಿದರು.

  ವಿವಿಯಲ್ಲಿರುವ ಲೈಂಗಿಕ ದೌರ್ಜನ್ಯ ವಿರೋಧಿ ಮಂಡಳಿ GSCASH ಅನ್ನು ಕ್ರಿಯಾಶೀಲಗೊಳಿಸಿ ಜೆಂಡರ್-ಸೂಕ್ಷ್ಮವಾಗಿಸಬೇಕು; ಕ್ಯಾಂಪಸ್ಸಿನ ಎಲ್ಲಾ ಆಡಳಿತ ಸಿಬ್ಬಂದಿಯನ್ನೂ ಜೆಂಡರ್-ಸೂಕ್ಷ್ಮವಾಗಿಸಬೇಕು; ಎಲ್ಲಾ ತಾರತಮ್ಯಕಾರಿ ನಿಬಂಧನೆಗಳನ್ನು (ವಿದ್ಯಾರ್ಥಿನಿಯರಿಗೆ ವೈಫೈ ಲಭ್ಯತೆಗೆ ನಿರ್ಬಂಧಗಳು, ಸಂಜೆ ಹಾಸ್ಟೆಲ್ ಒಳಕ್ಕೆ ಸೇರಿಕೊಳ್ಳಬೇಕಾದ ಅವಧಿಯಲ್ಲಿ – ‘ಕರ್ಫ್ಯೂ ಕಾಲಾವಧಿ’ಯಲ್ಲಿ – ತಾರತಮ್ಯ, ಮಹಿಳಾ ಹಾಸ್ಟೆಲ್‍ಗಳಲ್ಲಿ ಮಾಂಸಾಹಾರಕ್ಕೆ ನಿಷೇಧ ಮುಂತಾದವನ್ನು) ರದ್ದುಗೊಳಿಸಬೇಕು; ಕ್ಯಾಂಪಸ್ಸಿನಲ್ಲಿ ಬೀದಿ ದೀಪಗಳನ್ನು ಅಳವಡಿಸಬೇಕು; ವಿದ್ಯಾರ್ಥಿನಿಯರು ಕ್ಯಾಂಪಸ್ಸಿನಲ್ಲಿ ಮುಕ್ತವಾಗಿ ನಿರ್ಭಯವಾಗಿ ಓಡಾಡುವಂಥ ಇನ್ನಿತರ ಎಲ್ಲ ಅಗತ್ಯ ಕ್ರಮಗಳನ್ನೂ ಕೈಗೊಳ್ಳಬೇಕು – ಇವು ವಿದ್ಯಾರ್ಥಿನಿಯರ ಆಗ್ರಹಗಳಾಗಿದ್ದವು.

  ‘ಸುರಕ್ಷಿತವಲ್ಲದ BHU’ ಎನ್ನುವುದು ಬಹಿಂವಿವಿ ವಿದ್ಯಾರ್ಥಿನೀ ಸಮೂಹದ ಬಹುಮುಖ್ಯ ಘೋಷಣೆಗಳಲ್ಲೊಂದು. ‘ಪುರುಷಾಧಿಪತ್ಯದಿಂದ ಸ್ವಾತಂತ್ರ್ಯ’ ಎನ್ನುವುದು ಇನ್ನೊಂದು. ಇವು ‘ರಾಷ್ಟ್ರ ವಿರೋಧಿ’ ಘೋಷಣೆಗಳೆಂದು ಸಾರಿದ ಬಹಿಂವಿವಿಯ ಎಬಿವಿಪಿ ಘಟಕವು ಇವುಗಳನ್ನು ಕೈಬಿಡುವಂತೆ ಒತ್ತಾಯಿಸಿತು. ‘ವಾರಣಾಶಿಯು ಭಗವಾನ್ ಭೋಲೇನಾಥ ಶಿವನ ನಗರಿ. ಇದನ್ನು ಅಸುರಕ್ಷಿತ ಎನ್ನುವುದು ತಪ್ಪು.’ “ನಾವು ನಮ್ಮ ಸೋದರಿಯರಿಗೆ ಬೆಂಬಲ ನೀಡುತ್ತೇವೆ, ಅವರ ರಕ್ಷಣೆ ಮಾಡುತ್ತೇವೆ.” ‘ಆದರೆ ಕ್ಯಾಂಪಸ್ಸನ್ನು ಅಸುರಕ್ಷಿತ ಎಂದು ಕರೆಯಬಾರದು; ಸ್ವಾತಂತ್ರ್ಯದ ಘೋಷಣೆ ಕೂಗಬಾರದು. ಇವು ಎಡಪಂಥೀಯರ ಘೋಷಣೆಗಳು, ಬಿಎಚ್‍ಯುವನ್ನು ಜೆಎನ್‍ಯು ಮಾಡುವ ಉದ್ದೇಶದವು’ ಎಂದು ಎಬಿವಿಪಿ ವಾದಿಸಿತು. ಆದರೆ ಈ ವಾದವನ್ನು ಸಾರಾಸಗಟು ತಿರಸ್ಕರಿಸಿದ ವಿದ್ಯಾರ್ಥಿನಿಯರು, “ಬಿಎಚ್‍ಯು ಖಂಡಿತವಾಗಿಯೂ ಅಸುರಕ್ಷಿತವಾಗಿದೆ, ನಾವೇಕೆ ಅದನ್ನು ಹಾಗೆಂದು ಕರೆಯಬಾರದು?” ಎಂದು ಸವಾಲು ಹಾಕಿದರು. ‘ಲೈಂಗಿಕ ದೌರ್ಜನ್ಯಗಳ ವಿರುದ್ಧ ಮೌನವಾಗಿದ್ದರೆ ನಾವು ರಕ್ಷಣೆ ನೀಡುತ್ತೇವೆ’ ಎಂದು ಎಬಿವಿಪಿಯವರು ನೀಡಲು ಬಂದ ಪುರುಷಪ್ರಧಾನ ‘ದೊಡ್ಡಣ್ಣನ ರಕ್ಷಣೆ’ ಅವರಿಗೆ ಸರ್ವಥಾ ಬೇಕಿರಲಿಲ್ಲ. ಅವರಿಗೆ ವಿವಿಯ ನೂರಾರು ಮಂದಿ ಪುರುಷ ವಿದ್ಯಾರ್ಥಿಗಳು ಸೌಹಾರ್ದ ಬೆಂಬಲ ನೀಡಿದರು. ಎಬಿವಿಪಿ ಮಾತ್ರ ಇಂತಹ ಮನಃಪೂರ್ವಕ ಬೇಶರತ್ ಬೆಂಬಲ ನೀಡಲು ನಿರಾಕರಿಸಿತು, ಬದಲು ವಿದ್ಯಾರ್ಥಿನಿಯರ ಘೋಷಣೆಗಳನ್ನು ನಿರ್ಬಂಧಿಸಲು ಯತ್ನಿಸಿತು. ಒಂದು ಸನ್ನಿವೇಶದಲ್ಲಂತೂ ಎಬಿವಿಪಿಯ ಮನುಷ್ಯನೊಬ್ಬನು ವಿದ್ಯಾರ್ಥಿನಿಯರ ಕೈಯಿಂದ ಮೈಕನ್ನು ಬಲವಂತವಾಗಿ ಕಿತ್ತುಕೊಳ್ಳಲೂ ಯತ್ನಿಸಿದನು….
  …………..

  ಪೊಲೀಸರ ಪೈಶಾಚಿಕ ದಾಳಿಯನ್ನೂ, ಎಬಿವಿಪಿಯ ನಯವಂಚಕ ತಂತ್ರಗಳನ್ನೂ ಎದುರಿಸುತ್ತ
  ಬಿಎಚ್‍ಯು ವಿದ್ಯಾರ್ಥಿನಿಯರು ನಡೆಸಿರುವ ಈ ಹೋರಾಟ ದೇಶದ ಎಲ್ಲೆಡೆಯ ವಿದ್ಯಾರ್ಥಿ ಸಮೂಹಕ್ಕೆ ಸ್ಫೂರ್ತಿದಾಯಕವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.
  (ಮೂಲ : sabrang.com. ಕನ್ನಡಾನುವಾದ: ಸಿರಿಮನೆ ನಾಗರಾಜ್.)

  • Comments Off on ನ್ಯಾಯಕ್ಕಾಗಿ ಸಿಡಿದೆದ್ದ ಬನಾರಸ್ ಹಿಂದೂ ವಿವಿ ವಿದ್ಯಾರ್ಥಿನಿಯರು
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.