07:16 pm Tuesday, June 25, 2019
 • ಗೌರಿ ಲಂಕೇಶರ ಕೊಂದವರು ಯಾರು?

  By admin - Thu Sep 07, 2:43 am

  • Comments Off on ಗೌರಿ ಲಂಕೇಶರ ಕೊಂದವರು ಯಾರು?
  • 0 views

  *ಕೊಂದವರು ಯಾರು?*

  ಗೌರಿ ಲಂಕೇಶರ ಹತ್ಯೆಯ ನಂತರದಲ್ಲಿ ಅವರ ಕೊಲೆ ನಡೆಸಿದವರು ಯಾರಿರರಬಹುದು ಎಂಬ ಬಗ್ಗೆ ಜಿಜ್ಞಾಸೆ ನಡೆದಿದೆ. ಎರಡು ವರ್ಷಗಳ ಹಿಂದೆ ಕೊಲೆಯಾದ ಪ್ರೊ. ಎಂ.ಎಂ.ಕಲಬುರ್ಗಿಯವರ ಕೊಲೆಗೂ ಗೌರಿ ಲಂಕೇಶರ ಕೊಲೆಗೂ ಮೇಲ್ನೋಟದ ಸಾಮ್ಯತೆ ಕಂಡು ಬಂದಿರುವುದರಿಂದ ಈ ಎರಡೂ ಕೊಲೆಗಳನ್ನು ಸೈದ್ಧಾಂತಿಕ ವಿರೋಧಿಗಳೇ ನಡೆಸಿರಲು ಸಾಧ್ಯ ಎಂಬ ಗುಮಾನಿ‌ ಗಟ್ಟಿಯಾಗತೊಡಗಿದೆ. ಕಲ್ಬುರ್ಗಿಯವರನ್ನು ಕೊಂದಾಗ ‘ದುಡುಕಬೇಡಿ, ತನಿಖಾ ಸಂಸ್ಥೆಗಳ ಮೇಲೆ ಒತ್ತಡ ತರಬೇಡಿ’ ಎಂದ ಕೆಲ ಪ್ರಗತಿಪರರೂ ಸಹ ಈಗ ಗೌರಿಯವರ ಹತ್ಯೆಯ ನಂತರ ಈ ಎರಡೂ ಹತ್ಯೆಗಳ ಹಿಂದೆ ಒಂದೇ ಕಾರಣ ಇದೆಯೆಂಬ ಅಭಿಪ್ರಾಯಕ್ಕೆ ಬರುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕೆಲವು ಟಿವಿ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಈ ಸೈದ್ಧಾಂತಿಕ ಕಾರಣವನ್ನು ಹೊರತು ಪಡಿಸಿದ ಎಲ್ಲಾ ಕಾರಣಗಳನ್ನು ಪಟ್ಟಿ ಮಾಡಿ ಉದ್ದೇಶಪೂರ್ವಕವಾಗಿ ಅಪರಾಧಿಗಳನ್ನು ರಕ್ಷಿಸುವ ಹುನ್ನಾರವೊಂದು ನಡೆಯುತ್ತಿದೆ. ಅವರ ವಾದಗಳು ಸುಮ್ಮನೇ ಚರ್ಚೆಗೂ ಯೋಗ್ಯವೆನಿಸಿವುದಿಲ್ಲವಾದರೂ ಅದರಲ್ಲಿ ಹುರುಳೇನಿದೆ ಎಂದು ನೋಡೋಣ. ಮೊದಲನೆಯದಾಗಿ ಯಾರು ಗೌರಿಯವರನ್ನು ನಕ್ಸಲ್ ಹಿತೈಷಿ ಎಂದು ಅಪಪ್ರಚಾರ ಮಾಡುತ್ತಿದ್ದಾರೋ ಅವರೇ ನಕ್ಸಲರೇ ಗೌರಿಯವರನ್ನು ಕೊಲೆ ಮಾಡಿರಬಹುದೆಂಬ ಗುಲ್ಲು ಹಬ್ಬಿಸಲು ಯತ್ನಿಸುತ್ತಿದ್ದಾರೆ.‌ ಇಂತಹ ಜನರಿಗೆ ನಕ್ಸಲರೂ ಸರಿಯಾಗಿ ಗೊತ್ತಿಲ್ಲ ಗೌರಿ ಲಂಕೇಶ್ ಕೂಡಾ ಸರಿಯಾಗಿ ಗೊತ್ತಿಲ್ಲ ಎಂದು ಹೇಳಬೇಕಾಗುತ್ತದೆ. 2005 ನೇ ಇಸವಿಯಲ್ಲಿ ಸಾಕೇತ್ ರಾಜನ್ ಅವರ ಭೇಟಿಯೊಂದಿಗೆ ಆರಂಭವಾದ ಗೌರಿ ಲಂಕೇಶರ ನಕ್ಸಲ್ ಒಡನಾಟ ಒಂದಿಲ್ಲೊಂದು ಬಗೆಯಲ್ಲಿ ಈ ವರೆಗೂ ಮುಂದುವರೆದಿತ್ತು. ಹಾಗಾದರೆ ನಕ್ಸಲರ ಜೊತೆಗೆ ಒಡನಾಟ ಇತ್ತೆಂದ ಮಾತ್ರಕ್ಕೆ ಗೌರಿ ಲಂಕೇಶ್ ನಕ್ಸಲರ ಬಂದೂಕಿನ ಸಿದ್ಧಾಂತದ ಹಿತೈಷಿ ಆಗಿದ್ದರೇ? ಖಂಡಿತಾ ಇಲ್ಲ. ಈ ಒಡನಾಟದಲ್ಲಿ ಅಂದಿನಿಂದಲೂ ಗೌರಿ ಲಂಕೇಶರ ಚಿತ್ತ ಇದ್ದದ್ದು ನಕ್ಸಲ್ – ಪೊಲೀಸರ ಸಂಘರ್ಷದಲ್ಲಿ ಅನ್ಯಾಯವಾಗಿ ನಡೆಯುವ ನಕ್ಸಲ್ ಯುವಕರ ಹಾಗೂ ಅಮಾಯಕ ಪೊಲೀಸರ ಬಲಿದಾನಗಳನ್ನು ತಡೆಯಬೇಕು, ಕನ್ನಡ ನೆಲದಲ್ಲಿ ರಕ್ತ ಹರಿಯುವುದು ನಿಲ್ಲಬೇಕು, ಸರ್ಕಾರಗಳು ನಕ್ಸಲರು ಎತ್ತುವ ಆದಿವಾಸಿ, ಬಡಜನರ ಬೇಡಿಕೆಗಳನ್ನು ಕೇಳಿಸಿಕೊಂಡು ಪರಿಹರಿಸಬೇಕು, ನಕ್ಸಲರು ಹಿಂಸಾ ದಾರಿಯನ್ನು ಬಿಟ್ಟು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರಿಸಿ ಕಾಡು ತೊರೆದು ಬರಬೇಕು… ಹಾಗೂ ನಾಡಿನಲ್ಲಿ ಶಾಂತಿ ನೆಲೆಸಬೇಕು. ಇಷ್ಟಕ್ಕಾಗಿ ಗೌರಿ ಲಂಕೇಶ್ ಶ್ರಮಿಸಿದರು. ‌ ಇದಕ್ಕಾಗಿಯೇ ಶಾಂತಿಗಾಗಿ ನಾಗರಿಕರ ವೇದಿಕೆ ರಚಿಸಿಕೊಂಡು ದೊರೆಸ್ವಾಮಿಯವರಂತಹ ಗಾಂಧಿವಾದಿಗಳನ್ನು, ದೇವನೂರು ಮಹಾದೇವರಂತಹ ಹಿರಿಯರನ್ನು ಜೊತೆ ಮಾಡಿಕೊಂಡು ಅವಿರತ ಶ್ರಮಿಸಿದ್ದಲ್ಲದೇ ಇದುವರೆಗೆ ಏಳೆಂಟು ನಕ್ಸಲರನ್ನು ಸಹ ಸರ್ಕಾರದ ಮುಂದೆ ಮಾತುಕತೆಗೆ ಕರೆತಂದು ಅವರನ್ನು ಮುಖ್ಯವಾಹಿನಿ ಜೊತೆ ಸೇರಿಸಿದ್ದರು. ಹೀಗಾಗಿ ಗೌರಿ ಲಂಕೇಶರ ನಕ್ಸಲ್ ಒಡನಾಟ ಶಾಂತಿಯ ಉದ್ದೇಶ ಹೊಂದಿತ್ತೇ ವಿನಃ ನಕ್ಸಲರ ಹಿಂಸೆಯ ದಾರಿಗೆ ಪ್ರೇರೇಪಿಸುವುದಾಗಿರಲಿಲ್ಲ. ಹಾಗಾದರೆ ಈ ಕೆಲಸದಿಂದ ನಕ್ಸಲರಿಗೆ ಸಿಟ್ಟು ಬಂದಿತ್ತೇ? ಹೀಗೆ ಯೋಚಿಸುವುದು ಸಹ ಬಾಲಿಶಃತನವಾಗುತ್ತದೆ. ನಕ್ಸಲರಾಗಿ ಕಾಡು ಸೇರಿಕೊಂಡವರು ಸಮಾಜ ಬದಲಾವಣೆಗಾಗಿ ಬಂದೂಕು ಹಿಡಿಯುವ ದುಸ್ಸಾಹಸ ಮಾಡಿದ್ದರೂ ಗೌರಿ ಲಂಕೇಶ್ ರಂತಹ ತಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಆದರೆ, ತಮ್ಮ ಜೀವಗಳ ಬಗ್ಗೆ ಕಾಳಜಿ ಇರುವ, ಅಪ್ಪಟ ಪ್ರಜಾಪ್ರಭುತ್ವವಾದಿಯ ಹತ್ಯೆ ಮಾಡುವ ಕೀಳು ಮಟ್ಟದ ಚಿಂತನೆ ಹೊಂದಿರುವವರಲ್ಲ. ಹಾಗೆ ತಮ್ಮೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿರುವವರನ್ನೆಲ್ಲಾ ಕೊಲೆ ಮಾಡುವ ಜನ ನಕ್ಸಲರಾಗಿದ್ದರೆ ಇಷ್ಟೊತ್ತಿಗೆ ಹತ್ತಾರು ಸಂಘ ಪರಿವಾರದ ಜನರ ಕೊಲೆಯಾಗಿರುತ್ತಿತ್ತು. ಶೃಂಗೇರಿಯಲ್ಲೇ ಇದ್ದುಕೊಂಡು ವರ್ಷಗಟ್ಟಲೆ ನಕ್ಸಲರ ವಿರುದ್ಧ ಅಪ್ಪಟ ಸುಳ್ಳುಗಳನ್ನೇ ಆರೆಸ್ಸೆಸ್ಸಿನ ವಿಕ್ರಮ ಪತ್ರಿಕೆಗೆ ಬರೆದ ಪತ್ರಕರ್ತರೇ ಆರಾಮಾಗಿದ್ದಾರೆಂದ ಮೇಲೆ ನಕ್ಸಲರು ಗೌರಿ ಲಂಕೇಶರಂತವರ‌ ಬಗ್ಗೆ ದ್ವೇಷ ಸಾಧಿಸುತ್ತಾರೆನ್ನುವುದು ಮತಿಹೀನ ತರ್ಕವಾಗುತ್ತದೆ‌. ಅದಲ್ಲದೇ ದೇಶದಲ್ಲಿ ನಕ್ಸಲರ ಹಿಂಸಾತ್ಮಕ ಕೃತ್ಯಗಳನ್ನು ಗಮನಿಸಿದಾಗ ಅವರು ತಮ್ಮ ಕೃತ್ಯಗಳನ್ನು ಬಹಿರಂಗವಾಗಿ ಘೊಷಣೆ ಮಾಡದೆಯೇ ಇಲ್ಲ. ಇಡೀ ನಾಡು ಮರುಗಿ ನಕ್ಸಲರನ್ನು ಶಪಿಸಿದ ವೆಂಕಟಮ್ಮನಹಳ್ಳಿಯ ಅಮಾಯಕ ಪೊಲೀಸರ ಹತ್ಯೆಯನ್ನೂ ಸಹ ನಕ್ಸಲರು ತಾವೇ ಮಾಡಿದ್ದೆಂದು ಘೋಷಿಸಿದ್ದರು.
  ಇನ್ನು ಲಂಕೇಶರ ನಿಧನದ ನಂತರದಲ್ಲಿ ಪತ್ರಿಕೆ ನಡೆಸುವ ವಿಷಯದಲ್ಲಿ ಸೋದರ ಇಂದ್ರಜಿತ್ ಲಂಕೇಶರ ಜೊತೆಗೆ ವೈಮನಸ್ಯ ಬಂದು ಇಬ್ಬರೂ ತಮ್ಮ ತಮ್ಮ ದಾರಿ ನೋಡಿಕೊಂಡಿದ್ದರಾದರೂ ಅವರ ನಡುವಿನ ಕೌಟುಂಬಿಕ ಸಂಬಂಧ ಯಾವತ್ತೂ ಹಾಳಾಗಲು ಗೌರಿ ಲಂಕೇಶ್ ಬಿಟ್ಟಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಹಿಂದಿನ ಎಲ್ಲಾ ಕಹಿಗಳನ್ನು ಮರೆತು ಅನ್ಯೋನ್ಯತೆಯಿಂದ ಇದ್ದರು ಎಂಬುದು ಎಲ್ಲರಿಗೂ ತಿಳಿದ ವಿಷಯ.
  ಇನ್ಯಾವ ದ್ವೇಷ ಯಾರೊಂದಿಗೆ ಇದ್ದಿರಲು ಸಾಧ್ಯ? ‘ನನ್ನ ಸಾವನ್ನು ಸಂಭ್ರಮಿಸುವ ಹುಡುಗರನ್ನು ಸಹ ನನ್ನ ದಾರಿ ತಪ್ಪಿದ ಮಕ್ಕಳೆಂದೇ ನಾನು ಭಾವಿಸುತ್ತೇನೆ’ ಎಂದು ಒಮ್ಮೆ ಫೇಸ್ ಬುಕ್ಕಿನಲ್ಲಿ ಬರೆದುಕೊಂಡಿದ್ದ ಗೌರಿ ಲಂಕೇಶ್ ಎಂಬ ಮಹಾತಾಯಿಯೊಂದಿಗೆ ವೈಯಕ್ತಿಕವಾಗಿ ಯಾರೂ ದ್ವೇಷ ಸಾಧಿಸಲು ಸಾಧ್ಯವಿರಲಿಲ್ಲ…
  ಹಾಗಾದರೆ ಗೌರಿಯವರನ್ನು ನಖಶಿಖಾಂತ ದ್ವೇಷಿಸುತ್ತಿದ್ದವರು ಯಾರು? ಸಂಶಯವೇ ಇಲ್ಲ ಅವರು ಸಂಘಪರಿವಾರದ ಉನ್ನತ ಮಟ್ಟದ ಸಿದ್ಧಾಂತಿಗಳು ಮಾತ್ರ. ಹಿಂದುತ್ವದ ವಿಷ ನೆತ್ತಿಗೇರಿಸಿಕೊಂಡವರು ಮಾತ್ರವೇ ಕೊಲೆ ಮಾಡುವ ಮಟ್ಟಿಗೆ ಗೌರಿ ಲಂಕೇಶರ ಮೇಲೆ ದ್ವೇಷ ಇಟ್ಟುಕೊಂಡಿರಲು‌ ಸಾಧ್ಯ.
  ಪಿ ಲಂಕೇಶರು ಲಂಕೇಶ್ ಪತ್ರಿಕೆಯನ್ನು ದಿಟ್ಟ ವಿರೋಧ ಪಕ್ಷದ ರೀತಿಯಲ್ಲಿ ನಡೆಸಿ ದೇಶದ ಪತ್ರಿಕೋದ್ಯಮದಲ್ಲಿ ಚಿರಿತ್ರೆಯನ್ನೇ ಸೃಷ್ಟಿಸಿದ್ದರು. ಅವರು ನಿಧನರಾದ ಮೇಲೆ ಲಂಕೇಶ್ ಪತ್ರಿಕೆ ತನ್ನ ಮೊದಲಿನ ಬದ್ಧತೆ ಉಳಿಸಿಕೊಳ್ಳುತ್ತದೆಯಾ ಎಂಬ ಅನುಮಾನ ಎಲ್ಲರಲ್ಲಿತ್ತು. ಈ ಅನುಮಾನವನ್ನು ಸುಳ್ಳಾಗಿಸಿ ಸಾಮಾಜಿಕ ಬದ್ಧತೆಯನ್ನು ಉಳಿಸಿ ಬೆಳೆಸಿದವರು ಗೌರಿ ಲಂಕೇಶ್. ಪಿ ಲಂಕೇಶ್ ತಮ್ಮ ಪತ್ರಿಕೋದ್ಯಮದ ಮೂಲಕ ನಿರಂತರವಾಗಿ ಕಾಪಾಡಿಕೊಂಡಿದ್ದ ಒಂದು ನಿಲುವೆಂದರೆ ಸಂಘಪರಿವಾರದ ಕೋಮು ರಾಜಕಾರಣದ ವಿರೋಧ. ಈ ಪರಂಪರೆಯನ್ನು ಕೊನೆಯವರೆಗೂ ರಾಜಿರಹಿತವಾಗಿ ಗೌರಿ ಲಂಕೇಶ್ ಮುಂದುವರೆಸಿದ್ದಲ್ಲದೇ ಇತ್ತೀಚಿನ ವರ್ಷಗಳಲ್ಲಿ ಎಡಪಂಥೀಯ, ದಲಿತ ಬಹುಜನ, ಆದಿವಾಸಿಗಳ ಭೂಮಿ ಚಳವಳಿಗಳೊಂದಿಗೆ ಬೆರೆತು ಹೋಗಿದ್ದರು. ಇತ್ತೀಚೆಗೆ ತೀವ್ರಗೊಂಡಿದ್ದ ಲಿಂಗಾಯತ ಪ್ರತ್ಯೇಕ ಧರ್ಮದ ಚಳುಚಳಿಯನ್ನೂ ಬೆಂಬಲಿಸಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದರು. ತಾವು ಬಸವಾನುಯಾಯಿ ಲಿಂಗಾಯತ ಧರ್ಮಿಯೇ ಹೊರತು ಅಸಮಾನತೆಯ ಹಿಂದೂ ಅಲ್ಲ ಎಂದು ನಿರ್ಭಿಡೆಯಿಂದ ಮಾತಾಡಿದ್ದರು.
  ಕಳೆದ ಕೆಲವಾರು ವರ್ಷಗಳಿಂದ ಶಿವಮೊಗ್ಗ ಜಿಲ್ಲೆಯ ರಾಮಚಂದ್ರಾಪುರ ಮಠದಲ್ಲಿ ರಾಘವೇಶ್ವರ ಸ್ವಾಮೀಜಿ ನಡೆಸುತ್ತಿದ್ದ ಅನೇಕ ಅನಾಚಾರ, ಅವಿಚಾರಗಳನ್ನು ಯಾವ ಅಳುಕಿಲ್ಲದೇ ಬರೆದರು. ಕರಾವಳಿಯಲ್ಲಿ ಅಮಾಯಕ ಹಿಂದುಳಿದ ಸಮುದಾಯಗಳ ಯುವಕರನ್ನು ಹಿಂಸೆಗೆ ತಳ್ಳಿ ಮುಸ್ಲಿಮರ ಮೇಲೆ ಛೂ ಬಿಟ್ಟು ಕೋಮು ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುವ ಕಲ್ಲಡ್ಕ ಭಟ್ಟನಂತವನನ್ನು ಬಯಲಾಗಿಸಿದರು, ಗೋಹತ್ಯಾ ರಾಜಕಾರಣದ ಮಗ್ಗುಲುಗಳನ್ನು ಬಿಚ್ಚಿಟ್ಟರು, ಬಲಿಯಾದ ಪ್ರವೀಣ್ ಪೂಜಾರಿಯಂತವರ ಪರವಾಗಿ ನಿಂತರು. ತಮ್ಮ ಲಂಕೇಶ್ ಪ್ರಕಾಶನದಿಂದ ಅವರು ಹೊರತಂದ ಪ್ರತಿಯೊಂದು ಕೃತಿಯೂ ಸಂಘ ಪರಿವಾರದ ಹುನ್ನಾರಗಳಿಗೆ ಕೊಟ್ಟ ಬಲವಾದ ಪೆಟ್ಟೇ ಆಗಿತ್ತು. ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ಸಂಘಪರಿವಾರದ ದೌರ್ಜನ್ಯದಿಂದಾಗಿ ಆತ್ಮಹತ್ಯೆ ಮಾಡಿಕೊಂಡ *ದಲಿತ ವಿದ್ಯಾರ್ಥಿ ರೋಹಿತ್ ವೇಮುಲ*ನಿಗೆ ನ್ಯಾಯ ಕೊಡಿಸಲು ಬೀದಿಗಿಳಿದರು. ಗೌರಿ ಲಂಕೇಶ್ ಅಂದು ತಮ್ಮ ಫೇಸ್ಬುಕ್ ಮುಖಚಿತ್ರ (ಡಿಪಿ)ಯನ್ನು ರೋಹಿತ್ ವೇಮುಲನ ಫೋಟೋ ಇಟ್ಟುಕೊಂಡವರು ಈ ವರೆಗೂ ಬದಲಿಸಿಲ್ಲ ಎಂಬುದನ್ನು ನೋಡಬಹುದು. ಜೆ ಎನ್ ಯು ನಲ್ಲಿ ಕನ್ಹಯ್ಯ ಕುಮಾರ್ ಶೆಹ್ಲಾ ಉಮರ್ ರಂತಹ ಯುವ ನಾಯಕರು ಮೋದಿಯ ದರ್ಪದೆದುರು ಸೆಡ್ಡು ಹೊಡೆದಾಗ ಹೊಸಕಾಲದ ಯುವಕರ ಹೋರಾಟದಲ್ಲಿ ಹುಮ್ಮಸ್ಸು ಪಡೆದರು ಗೌರಿ ಅಮ್ಮ. ಕಳೆದ ವರ್ಷ ಗುಜರಾತಿನಲ್ಲಿ ಜಿಗ್ನೇಶ್ ಮೆವಾನಿ ಹಾಗೂ ಈ ವರ್ಷ ಉತ್ತರ ಪ್ರದೇಶದಲ್ಲಿ ಭೀಮ್ ಆರ್ಮಿಯ ಯುವಕರು ದಲಿತ ಅಸ್ಮಿಯ ಸಂಘರ್ಷಕ್ಕೆ ಮುನ್ನುಡಿ ಬರೆದಾಗ ಇವರೆಲ್ಲ ನನ್ನ ಮಕ್ಕಳು ಎಂದು ತಮ್ಮನ್ನು ತಾವು ತಾಯಾಗಿಸಿಕೊಂಡು ಈ ಎಲ್ಲರಿಗೂ ಆ ಪ್ರೀತಿಯನ್ನು ಧಾರೆಯೆರೆದ ಅವರ ತಾಯ್ತನಕ್ಕೆ ಎಣೆಯಿರಲಿಲ್ಲ.
  ಪ್ರೊ. ಎಂ ಎಂ ಕಲಬುರ್ಗಿ ಅವರ ಕೊಲೆಯಾದಾಗ ನಾಡಿನ ಎಲ್ಲಾ ಪ್ರಜ್ಞಾವಂತರ ಹೋರಾಟದಲ್ಲಿ ಜೊತೆಯಾದ ಗೌರಿ ಲಂಕೇಶ್ ಗೆ ತಮಗೂ ಮುಂದೊಂದು ದಿನ ಇಂತಹ ಪಾಡು ಬರಬಹುದು ಎಂದು ಊಹೆಯಿರಲಿಲ್ಲ ಎಂದುಕೊಂಡರೆ ತಪ್ಪಾಗುತ್ತದೆ. ಆದರೆ ಅವರ ಸಾಮಾಜಿಕ ಬದ್ಧತೆಯ ಗಟ್ಟಿತನ ಎಷ್ಟಿತ್ತೆಂದರೆ ಅದಕ್ಕಾಗಿ ಹೆದರಿ ಮೂಲೆ ಸೇರುವ ಅಥವಾ ಹಲವಾರು ಬುದ್ಧಿಜೀವಿಗಳಂತೆ ಸದಾಕಾಲವೂ ಕಂಫರ್ಟ್ ಜೋನ್ ನಲ್ಲಿದ್ದುಕೊಂಡು ಎಲ್ಲಾ ನಾಶವಾದ ಮೇಲೆ ಲೊಚಗುಡವ ಮನೋಭಾವ ತೋರಲಿಲ್ಲ. ಸೈದ್ಧಾಂತಿಕ ರಣರಂಗದಲ್ಲಿ ವೀರಾಗ್ರಣಿಯಾಗಿಯೇ ಹೋರಾಡಿದರು. ತಮ್ಮ ಪತ್ರಿಕೆ ಮಾತ್ರವಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಹೋರಾಟ ನಡೆಸಿದರು. ಇದು ಫ್ಯಾಸಿಸ್ಟ್ ನಾಯಕರ ನೆಮ್ಮದಿ ಕೆಡಿಸಿತ್ತು. ಅವರ ಪಾಲಿಗೆ ಗೌರಿ ಬೆಂಕಿಯುಂಡೆಯೇ ಆಗಿದ್ದರು.‌
  ಗೌರಿ ಲಂಕೇಶರ ಒಂದು ಕನಸೇನಾಗಿತ್ತೆಂದರೆ ಕರ್ನಾಟಕದ ನಾನಾ ಬಣ್ಣಗಳ ಹೋರಾಟಗಾರರು, ಪ್ರಗತಿಪರರ‌ ನಡುವೆ, ನೀಲಿ ಕೆಂಪು ಹಸಿರು ಎಲ್ಲಾ ನಮೂನೆಯವರ ನಡುವೆ ಬೆಸುಗೆಯಾಗಿ ಮನುಷ್ಯ ವಿರೋಧಿ ಸಂಘ ಪರಿವಾರದ ಸಿದ್ಧಾಂತವನ್ನು ಸೋಲಿಸಬೇಕು ಎಂಬುದು.
  ಇದೆಷ್ಟರ ಮಟ್ಟಿಗೆ ಈಡೇರುವುದೋ ಗೊತ್ತಿಲ್ಲ ಆದರೆ ಗೌರಿ ಲಂಕೇಶರ ಹತ್ಯೆ ಮಾಡಿದವರಿಗೆ ಶಿಕ್ಷೆ ಆಗುವವರೆಗೂ ನಾಡಿನ ಎಲ್ಲಾ ಬಣ್ಣಗಳ ಜನರು, ಹೋರಾಟಗಾರರು, ಚಿಂತಕರು ಒಗ್ಗೂಡಬೇಕಿದೆ, ಬೀದಿಗಿಳಿದು ಹೋರಾಡಬೇಕಿದೆ.

  ಗೌರಿ ಲಂಕೇಶ್ ಕನಸಿದ ಶಾಂತಿ- ಸೌಹಾರ್ದತೆ- ಸಮೃದ್ದಿಗಳ ನಾಡಿನ ಸಾಕಾರಕ್ಕಾಗಿ ದುಡಿಯಬೇಕಾಗಿದೆ. ಇಲ್ಲವಾದರೆ ನಮ್ಮ ಮುಂದಿನ ಪೀಳಿಗೆ ಎದುರಿಸುವ ಕೊಲೆ ಸುಲಿಗೆ ದೌರ್ಜನ್ಯ ದಬ್ಬಾಳಿಕೆ ಅನ್ಯಾಯ ಅಸಮಾನತೆ ಲೂಟಿಗಳನ್ನು ನಾವಿಂದು ಊಹಿಸಲೂ ಸಾಧ್ಯವಿಲ್ಲ.
  ಇದು ಗೌರಿ ಲಂಕೇಶ್, ಕಲಬುರ್ಗಿ, ಪಾನ್ಸರೆ, ದಾಬೋಲ್ಕರ್ ವಿಷಯವಷ್ಟೇ ಅಲ್ಲ. ಭಾರತದಲ್ಲಿ ನಾಗರೀಕತೆ, ಮಾನವೀಯತೆ, ತಳಸ್ತರದ ಜನಸಂಸ್ಕೃತಿ ಈ ಎಲ್ಲವುಗಳ ಉಳಿವು ಅಳಿವಿನ ಪ್ರಶ್ನೆ.

  – *ಹರ್ಷಕುಮಾರ್ ಕುಗ್ವೆ*

  #iamgauri

  ==================================

   

  ಗೌರಿ ಲಂಕೇಶ್ ಎಂಬ ಎಂದೂ ಮುಳುಗದ ನಕ್ಷತ್ರ ನಡೆದು ಬಂದ ಹಾದಿ!

  ಕನ್ನಡದ ಸಾಕ್ಷಿ ಪ್ರಜ್ಞೆ ಪಿ.ಲಂಕೇಶ್‍ರವರ ಹಿರಿಯ ಪುತ್ರಿ ಗೌರಿ ಲಂಕೇಶ್. ಲಂಕೇಶ್‍ರವರಿಂದ ಪ್ರಜಾತಾಂತ್ರಿಕ ಬದ್ಧತೆ ಮತ್ತು ಜಾತ್ಯತೀತತೆಯನ್ನು ಕಲಿತು, ಅದನ್ನೇ ಬದುಕಿನಲ್ಲಿ ಅಳವಡಿಸಿಕೊಂಡರು. ಅವೇ ಮೌಲ್ಯಗಳಿಗಾಗಿ ಬದುಕಿದರು; ಅವೇ ಮೌಲ್ಯಗಳಿಗಾಗಿ ಕೊಲೆಯಾದರು!

  ಶಿಕ್ಷಣ ಮತ್ತು ವೃತ್ತಿ:
  ಶಿಕ್ಷಣ ಪದವಿಯವರೆಗೆ ಸಾಗಿದ್ದು ಬೆಂಗಳೂರಿನಲ್ಲಿಯೇ. ನ್ಯಾಷನಲ್ ಕಾಲೇಜಿನ ವಿಚಾರವಂತಿಕೆಯ ವಾತಾವರಣದಲ್ಲಿ ಪದವಿ ಪಡೆದು ಉನ್ನತ ಶಿಕ್ಷಣಕ್ಕಾಗಿ ದೆಹಲಿಯ ಜೆಎನ್‍ಯು ವಿಶ್ವವಿದ್ಯಾಲಯಕ್ಕೆ ಹೋದವರು, ಅಲ್ಲೆ ಸಕ್ರಿಯ ಪತ್ರಿಕೋದ್ಯಮಕ್ಕೆ ಇಳಿದರು.
  ಟೈಮ್ಸ್ ಆಫ್ ಇಂಡಿಯಾದಿಂದ ವೃತ್ತಿ ಜೀವನ ಆರಂಭ. ನಂತರ ದ ಸಂಡೆ, ಈ ಟಿ.ವಿ ಮೊದಲಾದವುಗಳಲ್ಲಿ ಕೆಲಸ ಮಾಡುತ್ತಾ, ಉತ್ತಮ ತನಿಖಾ ಪತ್ರಿಕೋದ್ಯಮವನ್ನು ರೂಢಿಸಿಕೊಂಡರು. ಆ ಅವಧಿಯಲ್ಲಿ ಅವರ ಪತ್ರಕರ್ತೆಯ ಕೌಶಲ್ಯ ಸಾಬೀತಾಗುವಂತಹ ಅನೇಕ ವರದಿಗಾರಿಕೆ ಮಾಡಿದರು. ಕಾರ್ಗಿಲ್ ಯುದ್ಧದ ಯಥಾವತ್ ವರದಿಯು ಅವುಗಳಲ್ಲೊಂದು!

  ಲಂಕೇಶ್ ಪತ್ರಿಕೆಯೊಂದಿಗೆ ಯಾನ: 2000ದಲ್ಲಿ ಪಿ.ಲಂಕೇಶ್‍ರವರು ತೀರಿಕೊಂಡ ನಂತರ, ಇಂಗ್ಲೀಷ್ ಪತ್ರಿಕೋದ್ಯಮದಲ್ಲಿ ಇದ್ದ ಉಜ್ವಲ ಭವಿಷ್ಯವನ್ನು ಕೊಡವಿಕೊಂಡು, ಲಂಕೇಶ್ ಹೊಣೆಗೆ ಹೆಗಲು ನೀಡಿದರು. ಸಹೋದರ ಇಂದ್ರಜಿತ್ ಜೊತೆ ಜಂಟಿ ಜವಾಬ್ದಾರಿಯಲ್ಲಿ ನಡೆಯುತ್ತಿದ್ದ ಆ ಪ್ರಯಾಣದಲ್ಲಿ ನಡೆದ ಸಂಘರ್ಷಗಳು ಹಲವಾರು. ಜೊತೆಗೆ ಕನ್ನಡ ಭಾಷೆಯಲ್ಲಿ ಬರವಣಿಗೆಯೂ ಕಷ್ಟವಾಗುತ್ತಿತ್ತು. ಆದರೆ, ಒಬ್ಬ ನಿಜವಾದ ತುಡಿತವುಳ್ಳ ಪತ್ರಕರ್ತೆಯೆಂಬುದನ್ನು ಸಾಬೀತುಪಡಿಸುವಂತೆ ಕನ್ನಡ ಭಾಷೆ ಮತ್ತು ಭಾವ ಎರಡರ ಮೇಲೂ ಬಹುಬೇಗ ಹಿಡಿತ ಸಂಪಾದಿಸಿದರು.

  ಕೋಮು ಸೌಹಾರ್ದದ ಸ್ಥಾಪನೆಯ ಪ್ರಯತ್ನಗಳು:
  2002ರ ಗುಜರಾತ್ ಗಲಭೆಯಿಂದ ಆಳವಾಗಿ ಆಘಾತ ಅನುಭವಿಸಿದ್ದ ಗೌರಿ ಲಂಕೇಶ್, ಗುಜರಾತ್ ಪ್ರಯೋಗದ ಪ್ರಯೋಗಶಾಲೆಯೆಂದು ಸಂಘಪರಿವಾರದಿಂದ ಘೋಷಿಸಲ್ಪಟ್ಟ ಚಿಕ್ಕಮಗಳೂರಿನ ಬಾಬಾಬುಡನ್‍ಗಿರಿಯ ವಿಚಾರದಲ್ಲಿ ಅಪಾರ ಕಾಳಜಿ ಹೊಂದಿದ್ದರು. ಬಾಬಾಬುಡನ್‍ಗಿರಿ ಸೌಹಾರ್ದ ವೇದಿಕೆಯ ಸಕ್ರಿಯ ಭಾಗವಾದರು. 2003ರಲ್ಲಿ ಇದೇ ಹೋರಾಟದಲ್ಲಿ ಜೈಲು ವಾದವನ್ನೂ ಅನುಭವಿಸಿದರು. ಇಂತಹ ಕೋಮುವಾದೀಕರಣದ ಪ್ರಯತ್ನಗಳನ್ನು ತಡೆದು ಕರ್ನಾಟಕದ ಸೌಹಾರ್ದ ಪರಂಪರೆಯನ್ನು ರಕ್ಷಿಸುವ ಆಶಯ ಹೊತ್ತು 2004ರಲ್ಲಿ ರಚಿತವಾದ ‘ಕರ್ನಾಟಕ ಕೋಮು ಸೌಹಾರ್ದ ವೇದಿಕೆ’ಯ ಸ್ಥಾಪಕ ಸದಸ್ಯರಲ್ಲೊಬ್ಬರು. ಅಲ್ಲಿಂದ ಕರ್ನಾಟಕದ ಕೋಮು ಸೌಹಾರ್ದ ಚಳವಳಿಯ ಮುಂಚೂಣಿ ನಾಯಕಿಯಾಗಿ ನಿರಂತರವಾಗಿ ಅದಕ್ಕಾಗಿ ಪತ್ರಿಕೆ ಮತ್ತು ವ್ಯಕ್ತಿಗತ ನೆಲೆಗಳಲ್ಲಿ ದುಡಿದರು.

  * ಜನರಿಗೆ ಸೆಕ್ಯುಲರ್ ಆಶಯಗಳನ್ನು ತಲುಪಿಸುವುದು, ಸರ್ಕಾರದೊಂದಿಗೆ ಸಂಘರ್ಷ ನಡೆಸುವುದು ಮತ್ತು ಅಭದ್ರತೆಯಲ್ಲಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಒತ್ತಾಸೆಯಾಗುವುದನ್ನು ಬಹಳ ಕಾಳಜಿಯಿಂದ ಮಾಡಿದರು.

  2006-ಸುರತ್ಕಲ್ ಗಲಭೆ
  2006-ಹಾಜಬ್ಬ ಹಸನಬ್ಬ ಅವರನ್ನು ಬೆತ್ತಲೆ ಮಾಡಿ ಹಲ್ಲೆ ನಡೆಸಿದ ಪ್ರಕರಣ
  2008-ಚರ್ಚ್ ದಾಳಿ
  2011 & 2012- ಹೆಣ್ಣುಮಕ್ಕಳ ಮೇಲೆ ಅನೈತಿಕ ಗೂಂಡಾಗಿರಿ, ಮುಧೋಳ ಗಲಭೆ, ಮೈಸೂರು ಗಲಭೆ
  ಇವೇ ಮೊದಲಾದ ಪ್ರತೀ ಘಟನೆಯಲ್ಲೂ ಪ್ರತಿರೋಧದ ದನಿ ಎತ್ತಲು ಎಲ್ಲೂ ಹಿಂಜರಿಯಲಿಲ್ಲ. .
  * ಇಂಡಿಯಲ್ಲಿ ಭಜರಂಗದಳ ಪಾಕಿಸ್ಥಾನ ಬಾವುಟ ಹಾರಿಸಿದ ಪ್ರಕರಣ, ಮಾಲೆಗಾಂವ್ ಸ್ಫೋಟದಂತಹ ಪ್ರಕರಣಗಳಲ್ಲಿ ಸಂಘಪರಿವಾರದ ಭಯೋತ್ಪಾದನೆಯನ್ನು ಬಹಿರಂಗಪಡಿಸಿ, ಖಂಡತುಂಡವಾಗಿ ಖಂಡಿಸಿದ್ದರು.
  * 2008ರಲ್ಲಿ ಸಾಲುಸಾಲಾಗಿ ಅಮಾಯಕ ಮುಸ್ಲಿಂ ಯುವಕರ ಬಂಧನಗಳಾದಾಗ ಅವರ ಪರವಾಗಿ ನೇರವಾಗಿ ಬರೆದ ಕೆಲವೇ ಪತ್ರಕರ್ತರಲ್ಲಿ ಗೌರಿ ಲಂಕೇಶ್ ಒಬ್ಬರು.
  * 2014ರ ನಂತರ ಜನರಿಗೆ ತಪ್ಪು ಮಾಹಿತಿ ನೀಡಿ ಮರುಳು ಮಾಡುವ ಆರ್‍ಎಸ್‍ಎಸ್‍ ಮತ್ತು ಸಂಘಿಗಳ ಪ್ರಯತ್ನಗಳನ್ನು ಬಯಲುಗೊಳಿಸಲೆಂದೇ ವಿಶೇಷ ಅಂಕಣಗಳನ್ನು ಆರಂಭಿಸಿದರು. ಸಂಪಾದಕೀಯ ಅಂಕಣ ‘ಕಂಡ ಹಾಗೆ’ಯಲ್ಲಿ ನಿರಂತರವಾಗಿ ಬರೆದರು.

  ಜಾತಿವಾದದ ವಿರುದ್ಧದ ದನಿ:
  ಪ್ರಜಾತಾಂತ್ರಿಕ ಮೌಲ್ಯಗಳ ಮೇಲಿದ್ದ ಆಳವಾದ ನಂಬಿಕೆ ಮತ್ತು ಚಳವಳಿಗಳ ಒಡನಾಟದಿಂದಾಗಿ ಗೌರಿ ಲಂಕೇಶ್ ಅವರಲ್ಲಿ ಜಾತಿವಾದದ ವಿರುದ್ಧ ಸಂವೇದನಾಶೀಲತೆ ಸಹಜವಾಗಿ ಬೆಳೆದಿತ್ತು. ಜಾತಿ ದೌರ್ಜನ್ಯದ ಘಟನೆಗಳಾದಾಗ ತಕ್ಷಣದ ಸ್ಪಂದನೆ, ರೋಹಿತ್ ವೇಮುಲ ಪ್ರಕರಣದ ಸಂದರ್ಭದಲ್ಲಿ ನೇರ ದಿಟ್ಟ ನಿಲುವುಗಳು, ಅಂಬೇಡ್ಕರ್ ಕುರಿತ ಓದು, ಜಾತಿವಿರೋಧದ ಕುರಿತ ಪುಸ್ತಕಗಳ ಪ್ರಕಟಣೆ, ಖೈರ್ಲಾಂಜಿ ಘಟನೆಯ ಕುರಿತ ಪುಸ್ತಕದ ಕನ್ನಡಾನುವಾದ ಪ್ರಕಟ, ಯುವ ದಲಿತ ಬರಹಗಾರರಿಗೆ ಪತ್ರಿಕೆಯಲ್ಲಿ ಅವಕಾಶ, ಉಡುಪಿ ಚಲೋದಂತಹ ಹೋರಾಟಗಳಿಗೆ ಸದಾ ಬೆಂಬಲ……….ಇವೆಲ್ಲ ಪತ್ರಿಕೋದ್ಯಮದ ಜೊತೆಯಲ್ಲೇ ಸಾಗಿಬಂದವು.

  ನಾಗರೀಕ ಹಕ್ಕುಗಳ ಹೋರಾಟ:
  ನಾಗರೀಕ ಹಕ್ಕುಗಳಿಗಾಗಿ ದನಿ ಎತ್ತುವುದನ್ನು ಗೌರಿ ಲಂಕೇಶ್ ಎಂದೂ ನಿಲ್ಲಿಸಲೇ ಇಲ್ಲ. ವೀರಪ್ಪನ್ ಹೆಸರಿನಲ್ಲಿ ಎಸ್‍ಟಿಎಫ್ ಆದಿವಾಸಿ ಹೆಣ್ಣುಮಕ್ಕಳ ಮೇಲೆ ನಡೆಸಿದ ದೌರ್ಜನ್ಯವನ್ನು ವಿರೋಧಿಸಿದರು. ಮರಣದಂಡನೆ ಶಿಕ್ಷೆಯನ್ನು ಖಂಡಿಸಿದರು. ಪೊಳ್ಳು ರಾಷ್ಟ್ರೀಯವಾದವನ್ನು ಪ್ರಚಾರ ಮಾಡುತ್ತಾ ಅಮಾಯಕರನ್ನು ಅಪರಾಧಿಗಳನ್ನಾಗಿಸಿದಾಗ ವಿರೋಧಿಸಿದರು. ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಬರೆಯುತ್ತಾ, ಧಾಬೋಲ್ಕರ್, ಪನ್ಸಾರೆ, ಕಲ್ಬುರ್ಗಿ ಹತ್ಯೆ ವಿರೋಧಿ ಚಳವಳಿಯಲ್ಲಿ ಪಾಲ್ಗೊಂಡರು.

  ಈ ಎಲ್ಲಾ ಪ್ರಯತ್ನಗಳ ಭಾಗವಾಗಿ, 2004ರಿಂದ ಶಾಂತಿಗಾಗಿ ನಾಗರೀಕರು ವೇದಿಕೆಯಡಿಯಲ್ಲಿ, ನಕ್ಸಲ್ ಚಳವಳಿ ಕರ್ನಾಟಕದಲ್ಲಿ ರಕ್ತಸಿಕ್ತ ಅಧ್ಯಾಯ ಬರೆಯಬಾರದು ಎಂದು ಪ್ರಯತ್ನ ಆರಂಭಿಸಿದರು. ಸರ್ಕಾರ ಮತ್ತು ಮಾವೋವಾದಿ ನಾಯಕರೊಂದಿಗೆ ಸಂಧಾನದ ಮಾತುಕತೆ ನಡೆಸುತ್ತಿದ್ದಾಗಲೇ ಮಾವೋವಾದಿ ನಾಯಕ ಸಾಕೇತ್ ರಾಜನ್‍ರ ಎನ್‍ಕೌಂಟರ್ ಸಂಭವಿಸಿತು. ಅದನ್ನು ದೃಢವಾಗಿ ವಿರೋಧಿಸುತ್ತಾ, ಅದೇ ಸಮಯದಲ್ಲಿ ನಕ್ಸಲ್ ಚಳವಳಿಗಾರರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನವನ್ನು ಮುಂದುವರೆಸಿದ್ದರು.

  ಗೌರಿ ಲಂಕೇಶ್ ಅವರ ಈ ದಿಟ್ಟ ನಿಲುವುಗಳಿಂದಾಗಿ ಪತ್ರಿಕೆಯೊಳಗೂ ಬಿಕ್ಕಟ್ಟು ತೀವ್ರವಾದಾಗ ಅದನ್ನು ಬಿಟ್ಟು ಹೊರಬಂದು ಒಂದೇ ತಿಂಗಳಿನಲ್ಲಿ ‘ಗೌರಿ ಲಂಕೇಶ್ ಪತ್ರಿಕೆ’ ತಂದರು.

  2016ರಲ್ಲಿ ಈ ಎಲ್ಲ ಪ್ರಯತ್ನಗಳಿಂದಾಗಿ, ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್ ಹಾಗೂ ಆ ನಂತರ ಅನೇಕ ಯುವಕ ಯುವತಿಯರು ಮುಖ್ಯವಾಹಿನಿಗೆ ಮರಳಿದರು.

  ಮಮತೆಯ ಸ್ತ್ರೀವಾದಿ:
  ಗೌರಿ ಲಂಕೇಶ್ ಅವರಿಗಿದ್ದ ಆಕ್ಟಿವಿಸ್ಟ್ ಗುಣಗಳಲ್ಲಿ ಮತ್ತೊಂದು ಮುಖ್ಯವಾದ ಆಯಾಮ ಅವರ ಸ್ತ್ರೀವಾದಿ ಅಸ್ಮಿತೆಗೆ ಸಂಬಂಧಿಸಿದ್ದು. ಎಂದಿಗೂ ಮಹಿಳೆ ಎಂಬ ಕಾರಣಕ್ಕಾಗಿ ಯಾವ ರೀತಿಯ ಸವಾಲುಗಳನ್ನೂ ಬಿಟ್ಟುಕೊಟ್ಟು ಹಿಂದೆ ಸರಿದವರೇ ಅಲ್ಲ. ಮದುವೆ ತನ್ನ ಅಸ್ಮಿತೆಗೆ ಅಡ್ಡಿಯೆನಿಸಿದಾಗ ಅತ್ಯಂತ ಪ್ರಬುದ್ಧವಾದ ರೀತಿಯಲ್ಲಿ ಅದರಿಂದ ಹೊರಬಂದರು. ಪತ್ರಿಕೆಯಲ್ಲಿ ‘ಪಾಂಚಾಲಿ’, ‘ಸಾವಂತ್ರಿ’ ಹೆಸರುಗಳಲ್ಲಿ ಗಟ್ಟಿಯಾದ ಮಹಿಳಾಪರ ಬರಹಗಳನ್ನು ಬರೆದರು.
  ಮಹಿಳಾ ಕಾರ್ಯಕರ್ತೆಯರ ಕಷ್ಟಗಳಿಗೆ ಅತ್ಯಂತ ಸಹಜವಾಗಿ ಕುಡಿಯುತ್ತಿದ್ದರು. ನೆರವಾಗುತ್ತಿದ್ದರು.

  ಹೋರಾಟಗಾರ್ತಿಯಾಗಿ ಲಂಕೇಶರಿಗಿಂತ ವಿಸ್ತಾರದ ಹರಹನ್ನು ಪಡೆದವರು ಗೌರಿ ಲಂಕೇಶ್. ಸಿದ್ಧಾಂತ, ಚಿಂತನೆ ಬರಹಗಳನ್ನು ಮೀರಿದ ಮಾನವೀಯ ತುಡಿತ, ಅವರನ್ನು ಅನೇಕ ಯುವ ಬರಹಗಾರರು ಮತ್ತು ಹೋರಾಟಗಾರರಿಗೆ ‘ಅಮ್ಮ’ನನ್ನಾಗಿಸಿತ್ತು.

  ಕೊನೆಯವರೆಗೂ ಪತ್ರಿಕೆಗೆ ಯಾವುದೇ ಜಾಹೀರಾತು ಪಡೆಯದೆ, ಕೇವಲ ಓದುಗರಿಗಾಗಿ ಓದುಗರಿಂದ ಬರುತ್ತಿದ್ದ ವಾರದ ಅಚ್ಚರಿ ಗೌರಿ ಲಂಕೇಶ್ ಪತ್ರಿಕೆ.

  ಪ್ರಜಾತಂತ್ರದ ಕುರಿತ ಬದ್ಧತೆಗಾಗಿ ದಾಳಿಗೊಳಗಾದವರು:
  ಸಂಘಪರಿವಾರದ ವಿರುದ್ಧದ ಅವರ ರಾಜಿರಹಿತವಾದ ನಿಲುವುಗಳಿಂದಾಗಿ ಕೋಮುವಾದಿಗಳಿಂದ ಅನೇಕ ರೀತಿಯಲ್ಲಿ ದಾಳಿಗೊಳಗಾದರು. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅತಿಥಿಯಾಗಿ ಆಹ್ವಾನಿತರಾಗಿದ್ದ ಅವರ ಮೇಲೆ ಕೋಮುವಾದಿ ಎಬಿವಿಪಿ ಮತ್ತು ಭಜರಂಗದಳದ ಸದಸ್ಯರು ಹಲ್ಲೆ ನಡೆಸಲು ಪ್ರಯತ್ನಿಸಿದರು. ಹಾಗೆಯೇ ಶಾಂತಿಗಾಗಿ ನಾಗರೀಕ ವೇದಿಕೆಯ ತಂಡವನ್ನೂ ಸಹಾ ಇದೇ ಸಂಘಟನೆಗಳು ದಾಳಿ ಮಾಡಿದ್ದವು. ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಲಂಕೇಶ್ ಸಂಸ್ಕರಣೆ ಕಾರ್ಯಕ್ರಮದಲ್ಲಿ ಪತ್ರಿಕೆಯ ಅಂಕಣಕಾರ ಮತ್ತು ಸಾಹಿತಿಗಳಾದ ಯೋಗೀಶ್ ಮಾಸ್ತರರ ಮೇಲೆ ಹಲ್ಲೆ ನಡೆಯಿತು. ಇದಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕ ಪತ್ರಗಳ ಮೂಲಕ ಅವರಿಗೆ ಬೆದರಿಸುತ್ತಿದ್ದವರಿಗೇನು ಕಡಿಮೆಯಿರಲಿಲ್ಲ. ಆದರೆ, ಕೆಚ್ಚೆದೆಯ ಹೋರಾಟಗಾರ್ತಿ ಗೌರಿ ಇದ್ಯಾವುದನ್ನೂ ಲೆಕ್ಕಿಸಲಿಲ್ಲ. ಪೊಲೀಸ್ ಭದ್ರತೆ ತೆಗೆದುಕೊಳ್ಳಲು ಹಿತೈಶಿಗಳು ಸಲಹೆ ನೀಡಿದರೆ, ನಾಡಿನ ಪ್ರಜಾತಂತ್ರ ಪ್ರೇಮಿಗಳೇ ನನಗೆ ರಕ್ಷಣೆ, ಇನ್ಯಾರೂ ನನ್ನನ್ನು ರಕ್ಷಿಸಲಾರರು ಎನ್ನುತ್ತಿದ್ದರು. ಈಗ, ನಾಡಿನ ಜನಪರ ಮನಸ್ಸುಗಳು ಅವರನ್ನು ಕಳೆದುಕೊಂಡು ತಬ್ಬಲಿಯಾಗಿವೆ. ಸಂಘಪರಿವಾರದ ಉಗ್ರಗಾಮಿಗಳು ಈ ನಾಡಿನ ಎಲ್ಲ ಸೌಹಾರ್ದ ಪ್ರೇಮಿಗಳ ಪಾಲಿನ ಬೆಳ್ಳಿಚುಕ್ಕಿಯೊಂದನ್ನು ಅತ್ಯಂತ ಕ್ರೂರವಾಗಿ ಕಸಿದುಕೊಂಡಿದ್ದಾರೆ!

  ಗೌರಿ ಲಂಕೇಶ್ ಇಲ್ಲದೆ ಖಾಲಿಯಾಗಿರುವ ಈ ಶೂನ್ಯವು ಶಾಶ್ವತ ಶೂನ್ಯವಾಗಲು ನಾವು ಬಿಡಲಾರೆವು. ಜೀವಪ್ರೀತಿ ಮತ್ತು ಜೀವವಿರೋಧದ ಈ ಯುದ್ಧದಲ್ಲಿ, ಪ್ರೀತಿ, ಕರುಣೆ ಮತ್ತು ಶಾಂತಿ ಕೊನೆಗಾದರೂ ಗೆಲ್ಲಲೇಬೇಕು.

  ಗೌರಿ, ನಾವು ಮುನ್ನಡೆಯುತ್ತೇವೆ, ನೀವಿಟ್ಟ ಹೆಜ್ಜೆಜಾಡಿನಲ್ಲಿ…..ನಾವು ಬೆಳೆಯುತ್ತೇವೆ, ನಮ್ಮೊಂದಿಗೆ ನೀವು ಬೆಳೆಯುತ್ತೀರಿ. ನಾವು ಗೆಲ್ಲುತ್ತೇವೆ, ನಮ್ಮೊಳಗೆ ನೀವು ಗೆಲ್ಲುತ್ತೀರಿ!

  #IAmGauri

  • Comments Off on ಗೌರಿ ಲಂಕೇಶರ ಕೊಂದವರು ಯಾರು?
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.