07:51 pm Tuesday, June 25, 2019
 • ಬಡ್ತಿ ಮೀಸಲಾತಿ: ಆತಂಕ ಬೇಡ- ಮುಖ್ಯಮಂತ್ರಿ ಸಿದ್ದರಾಮಯ್ಯ

  By admin - Mon Jul 24, 2:42 am

  ಮೀಸಲಾತಿ: ಆತಂಕ ಬೇಡ- ಮುಖ್ಯಮಂತ್ರಿ ಸಿದ್ದರಾಮಯ್ಯ
  ಬೆಂಗಳೂರು, ಜುಲೈ 23 (ಕರ್ನಾಟಕ ವಾರ್ತೆ)-
  ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರಿಗೆ ಬಡ್ತಿ ಮೀಸಲಾತಿಯಲ್ಲಿ ಬಿಕ್ಕಟ್ಟು ಉಂಟಾಗಿರುವ ಬಗ್ಗೆ ಸುಪ್ರೀಂ ಕೋರ್ಟಿನ ನಿವೃತ್ಯ ನ್ಯಾಯಮೂರ್ತಿ ಠಾಕೂರ್ ಹಾಗೂ ನ್ಯಾಯಮೂರ್ತಿ ಗೋಪಾಲಗೌಡ ಅವರ ನೇತೃತ್ವದಲ್ಲಿ ರಚಿಸಿದ ಸಮಿತಿಯು ಈಗಾಗಲೇ ತನ್ನ ವರದಿಯನ್ನು ಸಲ್ಲಿಸಿದ್ದು, ವರದಿಯಲ್ಲಿರುವ ಅಂಶಗಳನ್ನು ಆಧರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು

  ಅವರು ಇಂದು ಜಿಕೆವಿಕೆಯಲ್ಲಿ ಏರ್ಪಡಿಸಿದ್ದ ಮೂರು ದಿನಗಳ ಡಾ. ಬಿ.ಆರ್. ಅಂಬೇಡ್ಕರ್ ಅಂತರರಾಷ್ಟ್ರೀಯ ಸಮಾವೇಶದ ಸಮಾರೋಪ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಈ ಭರವಸೆ ನೀಡಿದರು.
  ಅಂಬೇಡ್ಕರ್ ವಾದಿಗಳು ಅವರ ತತ್ವ ಸಿದ್ಧಾಂತಗಳನ್ನು ಪುನರ್‍ಮನನ ಮಾಡಿಕೊಳ್ಳುತ್ತಲೇ ಇರಬೇಕು, ಬದ್ಧತೆಯನ್ನು ದೃಢಪಡಿಸುತ್ತಲೇ ಇರಬೇಕು ಎಂದ ಮುಖ್ಯಮಂತ್ರಿಗಳು,  ಅಂಬೇಡ್ಕರ್ ಅವರು ಇಡೀ ಮನುಕುಲದ ಉದ್ಧಾರ ಬಯಸಿದರು. ಅಂಬೇಡ್ಕರ್ ನಮ್ಮ ಭಾರತಕ್ಕಷ್ಟೇ ನಾಯಕರಲ್ಲ. ಇಡೀ ವಿಶ್ವದ ನಾಯಕರು. ಸಾಮಾಜಿಕ ಚಿಂತನೆಯಲ್ಲಿ ಅಂಬೇಡ್ಕರ್ ಅವರಿಗೆ ಯಾರೂ ಸಾಟಿ ಇಲ್ಲ. ಅವರಿಗೆ ಅವರೇ ಸಾಟಿ ಎಂದು ಅಭಿಪ್ರಾಯಪಟ್ಟರು.
  ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ, ನಮ್ಮ ಸರ್ಕಾರವು ಪೌರಕಾರ್ಮಿಕರನ್ನು ಹಂತ ಹಂತವಾಗಿ ಕಾಯಂಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ 11 ಸಾವಿರ ಪೌರ ಕಾರ್ಮಿಕರನ್ನು ಕಾಯಂ ಗೊಳಿಸಲಾಗುತ್ತಿದೆ. ಒಟ್ಟಾರೆಯಾಗಿ, ಎಲ್ಲಾ ಪೌರಕಾರ್ಮಿಕರನ್ನು  ಕಾಯಂಗೊಳಿಸುವುದಲ್ಲದೆ, ಗುತ್ತಿಗೆ ಮತ್ತು ಹಂಗಾಮಿಯಾಗಿ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕರನ್ನೂ ಕಾಯಂಗೊಳಿಸಲಾಗುವುದು. ಇವರೆಲ್ಲರಿಗೂ ಕನಿಷ್ಠ ವೇತನವಾದ 14 ಸಾವಿರ ರೂ. ಗಳ ಸಂಬಳ ಸೇರಿದಂತೆ ಸರ್ಕಾರದ ಇತರ ಸವಲತ್ತು ಮತ್ತು ಸೌಲಭ್ಯಗಳಳು ದೊರೆಯಲಿದೆ ಎಂದು ತಿಳಿಸಿದರು.
  ಇಡೀ ದೇಶದಲ್ಲೇ ಮೊದಲ ಬಾರಿಗೆ ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶೀಷ್ಟ ಪಂಗಡದವರಿಗೆ ಶೇ. 24.1 ರಷ್ಟು ಅನುದಾನವನ್ನು ಬಜೆಟ್‍ನಲ್ಲಿ ಮೀಸಲಾಗಿಟ್ಟು ಈ ಅನುದಾನವನ್ನು ಬಳಸದೇ ಇದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಶಿಕ್ಷೆ ವಿಧಿಸುವ ಕಾಯಿದೆಯನ್ನು ಜಾರಿಗೆ ತಂದ ರಾಜ್ಯ ನಮ್ಮದು. ಹಾಗೆಯೇ ಯಾವುದೇ 50 ಲಕ್ಷ ರೂ. ವರೆಗಿನ ಗುತ್ತಿಗೆ ಕಾಮಗಾರಿಯ ಮೊತ್ತದ ಪೈಕಿ ಶೇ. 24..1ರಷ್ಟನ್ನು ಟೆಂಡರ್ ಕರೆಯದೇ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದ ಗುತ್ತಿಗೆದಾರರಿಗೆ ನೀಡಲಾಗುವುದು. ಇಂತಹ ಕ್ರಮ ಕೈಗೊಂಡ ದೇಶದ ಮೊದಲ ರಾಜ್ಯ ಎನ್ನುವ ಹಿರಿಮೆ ನಮ್ಮದು.
  ಗ್ರಾಮ ಪಂಚಾಯತ್ ಮತ್ತು ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಶೇ. 50 ರಷ್ಟು ಮಹಿಳಾ ಮೀಸಲಾತಿಯನ್ನು ಜಾರಿಗೆ ತಂದ ಮೊದಲ ಸರ್ಕಾರ ನಮ್ಮದು. ಹಾಗೆಯೇ ರಾಜ್ಯದಲ್ಲೂ ಉದ್ಯೋಗದಲ್ಲಿ ಶೇ. 33 ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ನೀಡಿದೆ.
  ಸಾಮಾಜಿಕ ಕಾರ್ಯಕರ್ತ, ಮ್ಯಾಗ್‍ಸೇಸೇ ಪ್ರಶಸ್ತಿ ಪುರಸ್ಕøತ ವಿಲ್ಸನ್ ಬೆಜವಾಡ ಅವರು ಮಾತನಾಡಿ, ರಾಜ್ಯದ ಪ್ರತಿ ಹಳ್ಳಿಯನ್ನು ಮಲ ಹೊರುವ ಪದ್ಧತಿಯಿಂದ ಮುಕ್ತವಾಗಿದೆ ಎಂದು ಸರ್ಕಾರ ಘೋಷಿಸುವಂತಾಗಬೇಕು ಎಂದು ನುಡಿದರು.
  ಕವಿ ಡಾ. ಸಿದ್ದಲಿಂಗಯ್ಯ ಅವರು ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಕರ್ನಾಟಕ ಸರ್ಕಾರವು ಅಂಬೇಡ್ಕರ್ ಅವರ ಮೂಲ ಆಶಯಗಳನ್ನು ಸಾಕಾರಗೊಳಿಸುವ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
  ದಲಿತರ ನೋವು ಇಂದು ದೇಶಕ್ಕೆ, ಜನರಿಗೆ ಅರ್ಥವಾಗುತ್ತಿದೆ. ಈ ನೋವನ್ನು ಅರ್ಥಮಾಡಿಕೊಂಡವರು ಬಾಬಾಸಾಹೇಬ್ ಅಂಬೇಢ್ಕರ್ ಎಂದು ಅವರು ವಿವರಿಸಿದರು.
  ಸಂಸದ ಕೆ.ಎಚ್. ಮುನಿಯಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ ಬೆಂಗಳೂರು ಘೋಷಣೆಯನ್ನು ಸಮ್ಮೇಳನದ ಸಂಚಾಲಕ ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು
  ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಸ್ವಾಗತಿಸಿದರು. ಅರಣ್ಯ ಸಚಿವ ರಮಾನಾಥ ರೈ, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಶ್ರೀ ಯು.ಟಿ. ಖಾದರ್, ಕೃಷಿ ಸಚಿವ ಕೃಷ್ಣ ಬೈರೇಗೌಡ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಮೊದಲಾದವರು ಉಪಸ್ಥಿತರಿದ್ದರು.

  Leave a Reply

  Comments are closed on this post.