06:23 am Wednesday, July 24, 2019
 • ಹತ್ತು ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ – ಸಚಿವ ತನ್ವೀರ್ ಸೇಠ್

  By admin - Sat Jul 22, 6:22 pm

  ಹತ್ತು ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ – ಸಚಿವ ತನ್ವೀರ್ ಸೇಠ್

  ಶೀಘ್ರದಲ್ಲಿ ಹತ್ತು ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಕ್ಕೆ ಚಾಲನೆ ಸಿಗಲಿದೆ. ಸಚಿವ ಸಂಪುಟ ಹತ್ತು ಸಾವಿರ ಶಿಕ್ಷಕರ ನೇಮಕಕ್ಕೆ ಒಪ್ಪಿಗೆ ನೀಡಿದ್ದು, ತಿಂಗಳಾಂತ್ಯದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಪ್ರಾಥಮಿಕ ಪ್ರೌಢ ಶಿಕ್ಷಣ ಹಾಗೂ ವಕ್ಫ್ ಖಾತೆ ಸಚಿವರಾದ ತನ್ವೀರ್ ಸೇಠ್ ತಿಳಿಸಿದರು. ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರವ ಮೌಲಾನಾ ಆಜಾದ್ ಅಲ್ಪಸಂಖ್ಯಾತರ ಭವನ ಉದ್ಘಾಟನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ, ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಪದವೀಧರ ಶಿಕ್ಷಕರ ಜೊತೆಗೆ ಟಿಇಟಿಯಲ್ಲಿ ನೇಮಕವಾಗುವ ಅಭ್ಯರ್ಥಿಯ ಭಾಷಾ ವಿಷಯದೊಂದಿಗೆ ಒಂದು ವಿಷಯವನ್ನು ಬೋಧಿಸಬೇಕಾಗುತ್ತದೆ ಹಾಗೂ ವೃಂದ ನೇಮಕಾತಿ ನಿಯಮಗಳಡಿ ತಿದ್ದುಪಡಿ ಮಾಡಿ 2 ವಿಷಯಗಳನ್ನು ಒಬ್ಬ ಉಪಾಧ್ಯಾಯ ಕಲಿಸುವುದನ್ನು ಕಡ್ಡಾಯ ಮಾಡಲಾಗಿದೆ ಎಂದರು. ಅಲ್ಪಸಂಖ್ಯಾತ ಕೋಟಾದಡಿ ಸುಮಾರು 13 ಸಾವಿರ ಮಕ್ಕಳು ವಿದ್ಯಾರ್ಥಿವೇತನ ಪಡೆಯುತ್ತಿದ್ದಾರೆ. ಹಿಂದುಳಿದ ವರ್ಗಗಳ ಇಲಾಖೆ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮಗಳು ನೀಡುತ್ತಿರುವಂತೆ ಅಲ್ಪಸಂಖ್ಯಾತ ಮಕ್ಕಳಿಗೂ ಅರಿವು ಕಾರ್ಯಕ್ರಮ ಹಾಗೂ ಶೈಕ್ಷಣಿಕ ಸಾಲ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು. ಈ ಯೋಜನೆಯಡಿ ಫಲಾನುಭವಿಗಳಾದ ವಿದ್ಯಾರ್ಥಿಗಳು ಹೆಚ್ಚಾಗಿ ಎಂಬಿಎ, ಇಂಜಿನಿಯರಿಂಗ್ ಓದುವತ್ತ ಹೆಚ್ಚು ಗಮನಹರಿಸುತ್ತಿದ್ದಾರೆ. ಹಾಗೂ ನೀಟ್ ಪರೀಕ್ಷೆಯಲ್ಲಿ ಪಾಸಾದ ಸೀಟು ಸಿಗದೇ ಇರುವ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಮಾಡಲಾಗುತ್ತಿದೆ ಎಂದರು. ರಾಜ್ಯದಲ್ಲಿ 4100 ಉರ್ದು ಶಾಲೆಗಳಿದ್ದು, ಅವುಗಳಲ್ಲಿ ಕಳೆದ ಸಾಲಿನಲ್ಲಿ 256 ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ಈ ವರ್ಷದಲ್ಲಿ 250 ಶಾಲೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಮೂಲಕ ಉರ್ದು ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಗುವಂತೆ ಕಾರ್ಯೋನ್ಮುಖವಾಗಲಿದೆ ಎಂದರು. ಶಾಲೆಗಳಿಗೆ ಉಪಯೋಗಿಸುತ್ತಿದ್ದ ವಿದ್ಯುತ್ಚ್ಛಕ್ತಿ ಬಿಲ್ಲನ್ನು ಪಾವತಿಸುವಂತೆ ಇಂಧನ ಇಲಾಖೆಯಿಂದ ಕೇಳಲಾಗಿದ್ದು, ಈ ಕುರಿತು ಪರಿಶೀಲಿಸುವಂತೆ ಸರ್ಕಾರಕ್ಕೆ ಕೇಳಿದ್ದೇವೆ. ಒಂದು ವೇಳೆ ಪಾವತಿಸಬೇಕು ಎಂದಾದಲ್ಲಿ ಶಾಲಾ ನಿರ್ವಹಣಾ ವೆಚ್ಚದಲ್ಲಿ ಈ ಬಿಲ್ಲುಗಳನ್ನು ಪಾವತಿಸಲಾಗುವುದು ಎಂದರು. ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಸರ್ಕಾರ ಮುಂದಾಗಿದ್ದು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಹಾಗೂ 2 ಜಿಲ್ಲೆಗೆ ಒಬ್ಬರಂತೆ ನಿವೃತ್ತ ಅಧಿಕಾರಿಗಳನ್ನು ನೇಮಿಸಿ ವಕ್ಫ ಆಸ್ತಿಗಳ ಸಂರಕ್ಷಣೆ ದಾಖಲಾತಿ ಸರ್ವೆ ಕಾರ್ಯ ಕೈಗೊಳ್ಳಲಾಗಿದೆ ಹಾಗೂ ರಾಜ್ಯ ಮಟ್ಟದಲ್ಲಿ ಮುಖ್ಯ ಕಾರ್ಯದರ್ಶಿಗಳು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಶಾಲಾ ಮಕ್ಕಳಿಗೆ 2 ಜೊತೆ ಸಮವಸ್ತ್ರ ವಿತರಿಸಲಾಗುತ್ತಿದ್ದು, 1 ಜೊತೆ ಸರ್ಕಾರದಿಂದ ಹಾಗೂ 1 ಜೊತೆ ಎಸ್ಡಿಎಂಸಿ ಸಮಿತಿಯಿಂದ ನೀಡಲಾಗುತ್ತಿದೆ. ಕೆಲವು ಕಡೆ ಎಸ್ಡಿಎಂಸಿ ಖರೀದಿಸಿರುವ ಬಟ್ಟೆಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ. ಹಾವೇರಿಯ ಶಿಗ್ಗಾವ್ನಲ್ಲಿ ಇಬ್ಬರನ್ನು ಅಮಾನತು ಮಾಡಲಾಗಿದೆ. ಎಸ್ಡಿಎಂಸಿ ಸಮಿತಿಯಲ್ಲಿ ಮಕ್ಕಳ ಪೋಷಕರೆ ಇರುತ್ತಾರೆ. ಅವರೇ ಹೀಗೆ ಮಾಡಿದರೆ ಹೇಗೆ ಎಂದರು. ಈ ಹಿನ್ನೆಲೆಯಲ್ಲಿ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದಿಂದ 2 ಜೊತೆ ಬಟ್ಟೆ ಖರೀದಿಸಲು ಚಿಂತಿಸಲಾಗಿದೆ ಎಂದರು. ನಮ್ಮ ಸರ್ಕಾರ ಶಾಂತಿ ಸೌಹಾರ್ಧತೆಗೆ ಬದ್ದವಾಗಿ ಕೆಲಸ ಮಾಡುತ್ತಿದ್ದು, ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ. ವಕ್ಫ್ ಆಸ್ತಿಗಳ ಸಂರಕ್ಷಣೆ ಜೊತೆಗೆ ಅವುಗಳಿಗೆ ಸುತ್ತಲೂ ತಡೆಗೋಡೆ ತಂತಿಬೇಲಿ ಮುಂತಾದವುಗಳನ್ನು ನಿರ್ಮಿಸಲು 79 ಕೋಟಿ ವೆಚ್ಚ ಮಾಡಲಾಗುತ್ತಿದೆ. ಸೂಕ್ಷ್ಮತೆ ಇರುವ ಪ್ರದೇಶಗಳ ಸುತ್ತಲೂ ಕಾಂಪೌಂಡ್ ನಿರ್ಮಿಸಲಾಗುತ್ತಿದೆ ಎಂದರು. ಉಳಿದ ಆಸ್ತಿಗಳ ಸಂರಕ್ಷಣೆಗಾಗಿ ಜಿಲ್ಲಾ ಸಲಹಾ ಸಮಿತಿ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಎಲ್ಲಾ ಆಸ್ತಿಗಳ ಸಂರಕ್ಷಣೆ ಮಾಡಲಾಗುತ್ತದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಮಾಜಿ ಸಚಿವರೂ ಹಾಗೂ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ, ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್, ಮಹಾಪೌರರಾದ ಅನಿತಾಬಾಯಿ ಮಾಲತೇಶ್, ಮಾಜಿ ಮಹಾಪೌರರಾದ ಅಶ್ವಿನಿ ಪ್ರಶಾಂತ್, ಮಾಜಿ ದೂಡಾ ಅಧ್ಯಕ್ಷರಾದ ಅಯೂಬ್ ಪೈಲ್ವಾನ್, ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಅಧ್ಯಕ್ಷರಾದ ಮೊಹಮ್ಮದ್ ಸಿರಾಜ್ ಮತ್ತಿತರಿದ್ದರು.

  Leave a Reply

  Comments are closed on this post.