03:26 am Friday, June 21, 2019
 • ನಮ್ಮ ಬಳಿ ಇರುವ ಅಹಿಂಸೆಯ ಬಂದೂಕನ್ನು ಸದಾ ಸನ್ನದ್ಧವಾಗಿ ಇಟ್ಟುಕೊಂಡಿರೋಣ.

  By admin - Mon Jun 19, 11:48 am

  ಆತುರ ಮಾಡಬೇಡಿ. ಆಗುತ್ತೆ. ಬೆಂಕಿ ಎಲ್ಲ ಕಡೆಯಿಂದ ಹಬ್ಬುತ್ತಿದೆ. ಕಿಡಿ ಜ್ವಾಲೆಯಾಗ್ತಿದೆ. ಸ್ವಾತಂತ್ರ್ಯ ಬಂದು 100 ವರ್ಷಗಳು  ಆಗ್ತಿದಾವೆ. ಜ್ವಾಲೆಗಳು ಅಲ್ಲಲ್ಲೇ ಹರಡುತ್ತಿವೆ. ಎಲ್ಲಾ ಜಿಲ್ಲೆಗಳಲ್ಲಿ ಕಿಡಿ ಹತ್ತಿಸೋ ಕೆಲಸ ಆಗಬೇಕು. ನಾವು ಗಾಬರಿ ಆಗಬಾರದು. ಸತ್ಯಾಗ್ರಹಿಗಳಿಗೆ ಆಗ್ರಹ ಇರುತ್ತೆ, ಆವೇಶ ಇರಲ್ಲ, ನಾವು ಆವೇಶ ಮಾಡಬಾರದು. ಆವೇಶಗೊಳ್ಳಬಾರದು.

  ನಾವೆಲ್ಲಾ ಯಾರು ? ಈ ದೇಶಕ್ಕೆ, ಈ ಸರ್ಕಾರಕ್ಕೆ ಬಂದಿರೋ ಜ್ವರ ಕಂಡಿಡಿಯೋ ಜನ ನಾವು, ಕಾಯಿಲೆಯನ್ನು ವಾಸಿ ಮಾಡೋ ಜನ ನಾವು ನಮಗೇ ಜ್ವರ ಬಂದ್ಬಿಟ್ರೆ ಹೇಗೆ. ಥರ್ಮಾಮೀಟರ್ ಇದ್ದಾಗೆ ಇರಬೇಕು ನಾವೆಲ್ಲ. ಜ್ವರ ಕಂಡಿಡಿದು ರೋಗ ವಾಸಿ ಮಾಡೋಣ.

  ನಾವು ಹೋ ಅಂತ ಕೂಗಬಾರದು.. ನಮ್ಮದು ನ್ಯಾಯವಾದ ಕೂಗು ಎಲ್ಲ ಕಡೆ ಹಬ್ಬುತ್ತಿದೆ.

  ಈ ಸರ್ಕಾರ ಭೂಮಿ ಕೊಡ್ತೀವಿ ಅಂತ ಹೇಳಿ ಹಿಂದಕ್ಕೆ ಹೋಗಕ್ಕೆ ಸಾಧ್ಯವಾ? ಅವರೆನಿದ್ರೂ ಮುಂದಕ್ಕೆ ಹೋಗಬೇಕು ಅಷ್ಟೇ? ಸರ್ಕಾರ ಹಿಂದಕ್ಕೆ ಹೋಗೋ ಮಾತೇ ಇಲ್ಲ.

  ಕಾಗೋಡು ತಿಮ್ಮಪ್ಪ ನೆನ್ನೆ ಸುವರ್ಣ ಟಿವಿಲಿ ಮಾತಾಡ್ತಿದ್ರು,  ಫೋನ್ ಇನ್ ಕಾರ್ಯಕ್ರಮದಲ್ಲಿ ಜನಕ್ಕೆ  ಉತ್ತರ ಕೊಡ್ತಿದ್ರು. ಆ ಕಾರ್ಯಕ್ರಮದಲ್ಲಿ 10-15 ಜನ ಮಾತಾಡಿದ್ರು,  10 ಜನಕ್ಕೆ ಆಶ್ವಾಸನೆ ಕೊಟ್ರು. ಇಂತ ಕೇಸುಗಳು ರಾಜ್ಯದ ಪ್ರತಿ ಹಳ್ಳಿಲಿ 100 ಕೇಸುಗಳಿವೆ. ಫೋನ್ ಇನ್ ಕಾರ್ಯಕ್ರಮದಲ್ಲಿ 15 ಜನರ ಸಮಸ್ಯೆ ಬಗೆಹರಿಸಿದರೆ ಎಲ್ಲರ ಸಮಸ್ಯೆ ಬಗೆಹರಿಸದ ಹಾಗಾಯ್ತ ತಿಮ್ಮಪ್ಪನೋರೇ? 15 ಲಕ್ಷ ಹಳ್ಳಿಗರಲ್ಲಿ ಈ ಗೋಳಾಟ ಇದೆ. ಇದನ್ನೆಲ್ಲಾ ನೀವು ಟಿವಿಲಿ ಕೂತು ತೀರ್ಮಾನಿಸಲು ಎಷ್ಟು ವರ್ಷ ಅಧಿಕಾರದಲ್ಲಿ ಇರ್ಬೇಕು ನೀವು? ಸಾಧ್ಯವಿಲ್ಲ ಇದು  15 ಜನರ ಕೆಲಸವಲ್ಲ. ಲಕ್ಷಾಂತರ ಜನರ  ಕೆಲಸ ಇದು. ಈ ಸಮಸ್ಯೆಯನ್ನ  ಕೂತು ಮಾತಾಡಬೇಕು ಕಣ್ರೀ, ಸಮಿತಿ ಆಗಬೇಕು. ಸಮಸ್ಯೆ ಬಗೆಹರಿಯಬೇಕಾದರೆ ಕಮಿಟಿ ಆಗಬೇಕು. ಆಗ ಮಾತ್ರ ಸಮಸ್ಯೆ ಬಗೆಹರಿಯುತ್ತೆ.

  ಕೆಲವು ಜಿಲ್ಲಾಧಿಕಾರಿಗಳು ನನಗೆ ಲೆಟರ್ ಕಳಿಸಿದಾರೆ.

  ಮಂತ್ರಿಗಳತ್ರ ಮಾತಾಡಿದಾಗ ಲೆಕ್ಕ ಕೊಡಿ ಅಂತ ಕೇಳಿದ್ರು, ಕೊಡಗು ಒಂದರಲ್ಲೇ 36600 ಎಕರೆ ನುಂಗಿದಾರೆ. ಕೊಡಗಿನ ಮೂರು ಜಿಲ್ಲೆಗಳಲ್ಲಿ 48096 ಎಕರೆ ಜಮೀನಿದೆ. ಬಳ್ಳಾರಿಯಲ್ಲಿ 51913 ಎಕರೆ ಇದೆ. ಸಂಡೂರು, ಹೊಸಪೇಟೆ, ಹೆಚ್.ಬಿ.ಹಳ್ಳಿ, ಕೂಡ್ಲಿಗಿ, ಹಡಗಲಿ – 592683 ಎಕರೆ ಭೂಮಿ ಇದೆ ಅಂತೇಳಿ ಲೆಕ್ಕ ಸಿಕ್ಕಿದೆ. ಧಾರವಾಡದಲ್ಲಿ ಒಟ್ಟು ಕಬಳಿಸಿರುವುದು, ಉಳುಮೆ ಮಾಡದೇ ಇರುವ ಜಾಗ, ಅರಣ್ಯ, ಖರಾಬು ಎಲ್ಲ ಸೇರಿ ಸಾವಿರಾರು ಎಕರೆ ಇದೆ. ದ.ಕನ್ನಡ, ಬಂಟ್ವಾಳ ಜಿಲ್ಲೆಗಳಲ್ಲಿ 2631286 ಎಕರೆ ಭೂಮಿ ಇದೆ.

  ನಮ್ಮಲ್ಲಿ ಭೂಮೀನೆ ಇಲ್ಲ ಅಂತ ಬರೆದವರು ಇಬ್ಬರಿದಾರೆ. ಒಬ್ಬರು ಬೆಳಗಾವಿಯವರು ಇನ್ನೊಬ್ಬರು ಹಾವೇರಿಯವರು. ಮಿಕ್ಕ ಜಿಲ್ಲೆಯವರೆಲ್ಲ ನಮ್ಮ ಬಳಿ ಲ್ಯಾಂಡ್ ಬ್ಯಾಂಕ್ ಇದೆ ಎಂದು ಪತ್ರ ಬರೆದಿದ್ದಾರೆ.

  ನೋಡಿ ಇಷ್ಟು ಭೂಮಿ ಇದೆ. ಭೂಮಿಗಾಗಿ ಕಾಯ್ತಿರೋ ಜನಾನೂ ಇದಾರೆ. ಒಬ್ಬರಿಗೆ 2 ಎಕರೆ ಕೊಡ್ರಯ್ಯ  ಜೀವನ ಮಾಡಕ್ಕೆ. 1 ಎಕರೆ ಇರೋರಿಗೆ 2 ಎಕರೆ ಕೊಡ್ರಯ್ಯ. ಆದರೆ ಒಂದು ಕಂಡೀಷನ್, ತೆಗೆದುಕೊಂಡ ಜಮೀನು ಮಾರಂಗೇ ಇಲ್ಲ. ಈ ದುವ್ರ್ಯವಹಾರಕ್ಕೆ ಅಲ್ಲ ನಾವು ಹೋರಾಟ ಮಾಡ್ತಿರೋದು. ಬದುಕಿ, ದುಡಿದು ಬದುಕನ್ನ ಹಸನು ಮಾಡಿಕೊಳ್ಳಲು ಭೂಮಿಗಾಗಿ ಹೋರಾಟ ಮಾಡ್ತಿದೀವಿ.

  ನಿಮ್ಮತ್ರ ಲೆಕ್ಕ ಇದ್ಯಾ ಅಂತ ಕೇಳಿದ್ರಲ್ಲ ಸಿದ್ದರಾಮಯ್ಯನೋರೇ ತಗೋಳಿ, ನೀವೇನು ಧರ್ಮಕ್ಕೆ ಕೊಡ್ತಿಲ್ಲ, ಭಿಕ್ಷಕ್ಕೆ ಕೊಡ್ತಿಲ್ಲ. ಇರೋದನ್ನು ಹಂಚಿ ಅಂತ ಕೇಳ್ತಿದೀವಿ. ಸರಿಯಾಗಿ ತಿಳಿದುಕೊಳ್ಳಿ ನಮ್ಮ ಸಮಾಧಿ ಮೇಲೆ ಇದನ್ನು ಜಾರಿ ಮಾಡದೇ ಮುಂದೆ ಹೋಗಬೇಕು ಅಷ್ಟೇ ನೀವು.

  ಬಡವನಿಗೂ ಏಟು, 50 ಎಕರೆ ಇರೋವವನೂ ಏಟು ಪಡೆದು ಸ್ವಾತಂತ್ರ್ಯ ಬಂದಿದೆ ಕಣ್ರಯ್ಯ. ತಮ್ಮ ಜೀವಮಾನವನ್ನೇ ತೇದಿದಾರೆ. ಅದೆಲ್ಲಾ ಸಾರ್ಥಕವಾಗಬೇಕಲ್ವ. ನಾನು ನೀವು ಸತ್ತೋಗಬೋದು ನಮ್ಮಕ್ಕಳಿಗೆ ಭೂಮಿ ಸಿಗಲಿ ಅವರು ಸುಖವಾಗಿರಲಿ ಅದಕ್ಕಾಗಿ ಹೋರಾಡೋಣ.

  ಜಿಲ್ಲೆಗಳಲ್ಲಿ, ತಾಲ್ಲೂಕುಗಳಲ್ಲಿ ಒಂದು ಕಡೆಯಿಂದ ಜಾರಿ ಮಾಡ್ತಾ ಬನ್ನಿ. ಗಡುವಿನಲ್ಲಿ ಕೆಲಸ ಮುಗಿಸುವಂತೆ ಫಾಲೋ ಮಾಡಬೇಕು. ಜಮೀನು ಮಾರಾಟಕ್ಕಲ್ಲ ಅಂತ ಹೇಳಿ. ಕಮಿಟಿ ರಚಿಸಿ -ಕೆಲಸ ಶುರು ಮಾಡಿ.

  ದೇವರಲ್ಲಿ ನಂಬಿಕೆ ಇರಲಿ, ನಮ್ಮ ಬಳಿ ಇರುವ ಅಹಿಂಸೆಯ ಬಂದೂಕನ್ನು ಸದಾ ಸನ್ನದ್ಧವಾಗಿ ಇಟ್ಟುಕೊಂಡಿರೋಣ. ಸಾಧಿಸಲು ಪಣತೊಟ್ಟವರು ನಾವು. ನಾವೆಲ್ಲ ಸೆರೆಮನೆಗೆ ಹೋಗಲು ಸಿದ್ಧವಾಗಬೇಕು. ಅಲ್ಲಿ ಹೋದ ನಂತರ ನಾವು ಕುಗ್ಗಬಾರದು, ಜೈಲರ್‍ಗಳು ಕ್ಷಮಾಪಣೆ ಬರೆದುಕೊಡು ಅಂತ ಹೇಳ್ತಾರೆ. ಹೀಗೆಲ್ಲ ಹಿಂದೆ ನಡೆದಿದೆ. ಉತ್ಸಾಹದಿಂದ ಬಂದು ಕಷ್ಟ ಬಂದ್ರೆ ಓಡಿಹೋಗ್ತಾರೆ ಅಂತ ಸರ್ಕಾರ ಭಾವಿಸಬಾರದು, ನೀವು ಗಟ್ಟಿಯಾಗಿದ್ರೆ ಬನ್ನಿ. ಅಂತವರು ಬಂದು ಚಳವಳಿಗೆ ಧಕ್ಕೆ ಮಾಡಬೇಡಿ.

  ಜೈಲು ಒಂದು ಸೋಷಿಯಲಿಸ್ಟ್ ರಾಜ್ಯ, ಸೋಷಿಯಲಿಸ್ಟ್ ರಾಜ್ಯಕ್ಕೆ ಹೋಗಲು ತಯಾರಾಗೋಣ. ಅಲ್ಲಿ ಕೊಲೆ ಮಾಡಿದವರೂ ಮಾಡದೇ ಇರುವವರು ಎಲ್ಲರೂ ಸಮಾನರೂ. ಶಿಸ್ತಾಗಿ ಇರಲೇಬೇಕಾದ ಜಾಗ ಅದು. ಏನೂ ಯೋಚನೆ ಮಾಡಬೇಡಿ, ಮನಸ್ಸನ್ನು ಸಡಿಲ ಬಿಡಬೇಡಿ. ಒಗ್ಗಟ್ಟಾಗಿ ಇರೋಣ. ನಮ್ಮ ಹಕ್ಕೊತ್ತಾಯಗಳನ್ನು ಈಡೇರಿಸಿಕೊಳ್ಳೋಣ.

  –    ಸ್ವಾತಂತ್ರ್ಯ ಸೇನಾನಿ
  ಹೆಚ್.ಎಸ್.ದೊರೆಸ್ವಾಮಿ.

  Leave a Reply

  Comments are closed on this post.