07:46 pm Tuesday, June 25, 2019
 • ಅಧಿವೇಶನದಲ್ಲಿ ಭೂಮಿ ವಸತಿ ಹೋರಾಟದ ದನಿ ಎತ್ತುತ್ತೇನೆ: ಶಾಸಕ ಬಿ.ಆರ ಪಾಟೀಲ್

  By admin - Fri Jun 16, 10:48 am

  • ಅಧಿವೇಶನದಲ್ಲಿ ಭೂಮಿ ವಸತಿ ಹೋರಾಟದ ದನಿ ಎತ್ತುತ್ತೇನೆ: ಶಾಸಕ ಬಿ.ಆರ ಪಾಟೀಲ್

  ಕಳೆದ ವರ್ಷ ಬೆಳಗಾವಿ ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ ಇದೇ ಭೂಮಿ ಮತ್ತು ವಸತಿ ವಿಚಾರದಲ್ಲಿ ದೊರೆಸ್ವಾಮಿ ಮತ್ತು ಎಸ್.ಆರ್ ಹೀರೇಮಠ್‍ರವರ ನೇತೃತ್ವದಲ್ಲಿ ಹೋರಾಟ ನಡೆಸಿದ್ದೀರಿ. ಆಗ ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸಿ ಭರವಸೆ ನೀಡಿತ್ತು. ಆದಾದನಂತರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಕೂಡ ನಡೆದಿದೆ. ಆದರೆ ಕೆಲಸ ಮಾತ್ರ ಆಗಲ್ಲ. ಹಾಗಾಗಿ ನೀವು ಹೋರಾಟ ಮಾಡುತ್ತಿರುವದು ಸರಿಯಾಗಿದ್ದು ಇದನ್ನು ಅಧಿವೇಶನದಲ್ಲಿ ಚರ್ಚಿಸುತ್ತೇನೆ ಎಂದು ಬಿ.ಆರ್ ಪಾಟೀಲ್ ರವರು ತಿಳಿಸಿದರು.

  ಭೂಮಿ ಮತ್ತು ವಸತಿಗಾಗಿ ಬೆಂಗಳೂರಿನ ಫ್ರೀಡಂಪಾರ್ಕ್‍ನಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿಯ ಎರಡನೇ ದಿನದ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು ಭೂಸುಧಾರಣೆ ಜಾರಿಗೆ ತಂದಿರುವ ನಾವು ಅದನ್ನು ಸಮರ್ಪಕಗೊಳಿಸುವ ಹೊಣೆ ಹೊತ್ತಿದ್ದೇವೆ. ನಮ್ಮದು ಕಲ್ಯಾಣ ರಾಜ್ಯದ ಕಲ್ಪನೆಯಿಟ್ಟುಕೊಂಡಿರುವ ರಾಷ್ಟ್ರ. ಆದರೆ ಇಂದು ಬಡಜನರನ್ನು ನಿರ್ಲಕ್ಷಿಸಲಾಗುತ್ತಿದೆ. ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪನಿಗಳ ಹಿತಾಸಕ್ತಿಗಾಗಿ ಬಡ, ಮಧ್ಯಮ ರೈತರನ್ನು ಬಲಿಕೊಡಲಾಗುತ್ತಿದೆ. ಈಗ ಬಂದಿರುವ ಕೇಂದ್ರ ಸರ್ಕಾರ ಖಂಡಿತವಾಗಿ ರೈತವಿರೋಧಿಯಾಗಿದೆ. ನಮ್ಮ ಸಂವಿಧಾನದಲ್ಲಿ ಸಮಾನತೆಯನ್ನು ಹೇಳಿದ್ದೇವೆ. ಅದು ಆಸ್ತಿ, ಅಧಿಕಾರ ಮತ್ತು ಜೀವನದಲ್ಲಿ ಸಮಾನತೆ ಬರಬೇಕಾಗಿದೆ. ಆದರೆ ಸರ್ಕಾರಗಳ ಇದರ ತದ್ವಿರುದ್ಧವಾಗಿ ಹೋಗುತ್ತಿವೆ. ಇದರ ಕುರಿತು ನೀವು ಹೋರಾಟ ಮಾಡುತ್ತಿರುವುದು ಶ್ಲಾಘನೀಯ ಎಂದರು.

  ಇಂದು ಬಹಳ ಜನರಿಗೆ ವಸತಿಯಿಲ್ಲ. ಅವರಿಗೆ ಹಕ್ಕುಪತ್ರ ಕೊಡಲಾಗಿಲ್ಲ. ಸರ್ಕಾರಗಳು ಈ ವಿಚಾರದಲ್ಲಿ ಆಲಸ್ಯ ಮಾಡುತ್ತಿವೆ. ಈ ಕೂಡಲೇ ಪ್ರತಿ ಹಳ್ಳಿಯಲ್ಲಿ ಭೂಬ್ಯಾಂಕ್‍ಗಳನ್ನು ರಚಿಸಬೇಕು. ಬಹಳಷ್ಟು ಕಡೆ ಶ್ಮಶಾನಗಳಿಲ್ಲ. ಅವುಗಳನ್ನು ಕೂಡಲೇ ಪರಿಹರಿಸಬೇಕಿದೆ ಎಂದರು. ಎಲ್ಲಾ ಕಡೆ ಸರ್ವೇ ಮಾಡಿಸಿ ನಂತರ ಮನೆ ಹಂಚುವ ಪದ್ಧತಿ ಜಾರಿಗೆ ಬರಬೇಕೆಂದು ಆಗ್ರಹಿಸಿದರು.

  ಸಿಪಿಎಂ ಎಂಎಲ್ ರೆಡ್‍ಸ್ಟಾರ್ ಪಕ್ಷದ ಕಾರ್ಯದರ್ಶಿಯಾದ ರುದ್ರಪ್ಪನವರು ಮಾತನಾಡಿ, ಕಾಂಗ್ರೇಸ್ 1935ರಲ್ಲೇ ಉಳುವವನಿಗೆ ಭೂಮಿ ಎಂದು ಘೋಷಿಸಿದರು. ಆದರೆ ಇಂದಿನವರೆಗೂ ಭೂ ಸಮಸ್ಯೆಗಳನ್ನು ಮಾತ್ರ ಬಗೆಹರಿಸಿಲ್ಲ, ಸಮಸ್ಯೆಗಳನ್ನು ಜೀವಂತವಾಗಿಟಿದ್ದಾರೆ ಎಂದು ದೂರಿದರು.

  ಈ ಕೂಡಲೇ ಬಗರ್‍ಹುಕುಂ ಸೇರಿದಂತೆ ಹಲವಾರು ಭೂ ಸಮಸ್ಯೆಗಳನ್ನು ಬಗೆಹರಿಸಿ, ನಿಜವಾದ ರೀತಿಯಲ್ಲಿ ಭೂ ಸುಧಾರಣೆ ಜಾರಿಗೆ ತರಬೇಕು, ಇಲ್ಲದಿದ್ದಲ್ಲಿ ಜನ ಖಂಡಿತ ಕಾಂಗ್ರೇಸ್‍ಗೆ ಬುದ್ದಿ ಕಲಿಸಿದ್ದಾರೆ ಎಂದು ಎಚ್ಚರಿಸಿದರು.

  ಕರ್ನಾಟಕ ಜನಶಕ್ತಿಯ ಕುಮಾರ್ ಸಮತಳ ಮಾತನಾಡಿ ಇನಾಂ ಭೂಮಿ ದಲಿತರಿಗೆ ನೀಡಿದ್ದರು ಸಹ ಅದರ ಒಡೆತನ ಈಗಲೂ ಮೇಲ್ವರ್ಗ, ಮೇಲ್ಜಾತಿಯ ಭೂಮಾಲೀಕರ ಕೈಲಿದೆ. ಇದನ್ನು ಕಂಡು ಕಾಣದಂತೆ ಸರ್ಕಾರ ವರ್ತಿಸುತ್ತಿದೆ. ಭೂಮಿ ಹಂಚುವುದಿರಲಿ ದಲಿತರ ಭೂಮಿಯನ್ನು ರಕ್ಷಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.

  ಧರಣಿಯು ಎಚ್.ಎಸ್ ದೊರೆಸ್ವಾಮಿಯವರ ನೇತೃತ್ವದಲ್ಲಿ ನಡೆಯಿತು. ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ನೂರ್ ಶ್ರೀಧರ್, ಸಿರಿಮನೆ ನಾಗರಾಜ್, ನಿರ್ವಾಣಪ್ಪ, ಸಿದ್ದರಾಜು, ಮರಿಯಪ್ಪ, ಗೌರಿ, ಭಾಗವಹಿಸಿದ್ದರು. ಸಮಾಜವಾದಿ ಪಕ್ಷದ ಬಾಬು, ಎಸ್‍ಡಿಪಿಐ ಮತ್ತು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಬೆಂಬಲ ನೀಡಿದ್ದವು.

  Leave a Reply

  Comments are closed on this post.