07:50 pm Tuesday, June 25, 2019
  • ಪರಿಶಿಷ್ಟ ಜಾತಿ/ಪಂಗಡಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್ ವಿತರಣೆ- ಹೆಚ್. ಆಂಜನೇಯ

    By admin - Wed Jun 07, 6:47 am

    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಉಚಿತ ಬಸ್ಪಾಸ್ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಅವರು ತಿಳಿಸಿದರು. ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ ಕುರಿತ ಉನ್ನತಮಟ್ಟದ ಸಭೆಯ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವರು ನಮ್ಮ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣದಿಂದ ಅವರಿಗೆ ಉಚಿತ ಬಸ್ಪಾಸ್ ನೀಡಲು ತೀರ್ಮಾನ ಕೈಗೊಳ್ಳಲಾಯಿತು ಎಂದರು. ಕಳೆದ ನಾಲ್ಕು ವರ್ಷಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಉಪಯೋಜನೆಯಡಿ ಎಲ್ಲಾ ಇಲಾಖೆಗಳು ಗಣನೀಯ ಸಾಧನೆ ಮಾಡಿದ್ದು, ಈ ಯೋಜನೆಯಡಿ ಗುರಿ ಸಾಧಿಸದ ಕೆಲವು ಇಲಾಖೆಗಳಿಗೆ ನೊಟೀಸ್ ಜಾರಿ ಮಾಡಿ ಕಾರಣ ಕೇಳಲಾಗುವುದು, ಯಾವುದೇ ಕಾರಣಕ್ಕೂ ಈ ಯೋಜನೆಯಡಿ ಇಲಾಖೆಗಳಿಗೆ ನೀಡಿರುವ ಹಣ ಆ ವರ್ಷದಲ್ಲೇ ಖರ್ಚು ಮಾಡಬೇಕು ಇಲ್ಲದಿದ್ದಲ್ಲಿ ಅಂತಹ ಇಲಾಖೆಗಳ ಮುಖ್ಯಸ್ಥರ ಮೇಲೆ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿಯವರು ಸಭೆಯಲ್ಲಿ ತಿಳಿಸಿದರು ಎಂದು ಹೇಳಿದರು.. ಕಳೆದ ನಾಲ್ಕು ವರ್ಷಗಳಲ್ಲಿ ಈ ಯೋಜನೆಯಡಿ 58,855 ಕೋಟಿ ರೂ. ಹಣವನ್ನು 33 ಸರ್ಕಾರಿ ಇಲಾಖೆಗಳಿಗೆ ಬಿಡುಗಡೆ ಮಾಡಿದ್ದು ಈವರೆಗೆ 54,896 ಕೋಟಿ ರೂ. ಹಣವನ್ನು ಖರ್ಚು ಮಾಡಲಾಗಿದ್ದು ಶೇ 93 ರಷ್ಟು ಗುರಿ ಸಾಧಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ 27,703 ಕೋಟಿ ರೂ. ಹಣ ಮೀಸಲಿಟ್ಟಿದ್ದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸರ್ವಾಂಗೀಣ ಪ್ರಗತಿಗೆ ಈ ಹಣವನ್ನು ಖರ್ಚು ಮಾಡುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶ ನೀಡಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಮುದಾಯದ ಜನರು ಟ್ಯಾಕ್ಸಿ ಹಾಗೂ ಟ್ರಾಕ್ಟರ್ ಖರೀದಿಸಲು ಈ ಹಿಂದೆ ನೀಡುತ್ತಿದ್ದ ಸಬ್ಸಿಡಿ ಹಣವನ್ನು 2 ಲಕ್ಷದಿಂದ 3 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ವಸತಿ ಯೋಜನೆಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು 1.75 ಲಕ್ಷದಿಂದ 3.5 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. ಒಂದು ಸಾವಿರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕೃಷಿ ಕಾರ್ಮಿಕರನ್ನು ಈ ವರ್ಷ ವಿದೇಶ ಪ್ರವಾಸಕ್ಕೆ ಕಳುಹಿಸಲಾಗುವುದು. ಹೊರ ಗುತ್ತಿಗೆ ಪೌರಕಾರ್ಮಿಕರಿಗೆ ಮನೆ ನಿರ್ಮಿಸಿಕೊಳ್ಳಲು 2 ಲಕ್ಷ ರೂ. ನಿಂದ 4 ಲಕ್ಷ ರೂ. ನೀಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು ಎಂದು ಸಚಿವರು ತಿಳಿಸಿದರು. ತುಂಗಭದ್ರ ಹಿನ್ನೀರನ್ನು ಬಳಸಿಕೊಂಡು ಪಾವಗಡ, ಚಳ್ಳ್ಳಿಕೆರೆ ಹಾಗೂ ಮೊಳಕಾಲ್ಮೂರುಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜಿಗೂ ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು, ಈ ಮೂರು ತಾಲ್ಲೂಕುಗಳಲ್ಲಿ ಶೇ. 50 ಕ್ಕಿಂತ ಹೆಚ್ಚು ಜನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನಸಂಖ್ಯೆಯಿದ್ದು ಈ ಯೋಜನೆಗೆ ತಗಲಬಹುದಾದ ವೆಚ್ಚದಲ್ಲಿ ಶೇ. 50 ರಷ್ಟು ಹಣವನ್ನು ಈ ಉಪಯೋಜನೆಯಡಿ ಭರಿಸಲಾಗುವುದು ಎಂದು ಸಚಿವರು ತಿಳಿಸಿದರು.

    Leave a Reply