06:12 am Wednesday, July 24, 2019
  • ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರಲು ಆಂದೋಲನ-ಸಚಿವ ತನ್ವೀರ್ ಸೇಠ್

    By admin - Wed Jun 07, 5:34 am

    ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರಲು ವಿಶೇಷ ದಾಖಲಾತಿ ಆಂದೋಲನ-ಸಚಿವ ತನ್ವೀರ್ ಸೇಠ್
    6 ರಿಂದ 14 ವರ್ಷ ವಯೋಮಾನದ ಎಲ್ಲಾ ಮಕ್ಕಳಿಗೆ ಕಡ್ಡಾಯ ಮತ್ತು ಉಚಿತ ಪ್ರಾಥಮಿಕ ಶಿಕ್ಷಣ ಒದಗಿಸುವುದು ಶಿಕ್ಷಣ ಹಕ್ಕು ಕಾಯ್ದೆಯ ಮುಖ್ಯ ಉದ್ದೇಶವಾಗದಿದು, ಈ ಹಿನ್ನೆಲೆಯಲ್ಲಿ 2017-18 ನೇ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ಶಿಕ್ಷಣದ ಮುಖ್ಯವಾಹಿನಿಗೆ ತರಲು ವಿಶೇಷ ದಾಖಲಾತಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದರು. ಸರ್ವಶಿಕ್ಷಣ ಅಭಿಯಾನ ಕಟ್ಟಡದ ಸಭಾಂಗಣದಲ್ಲಿ ಇಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು 5 ವರ್ಷ 10 ತಿಂಗಳು ಪೂರೈಸಿದ ಎಲ್ಲಾ ಮಕ್ಕಳನ್ನು ಅವರ ಹತ್ತಿರದ ಶಾಲೆಯ 1 ನೇ ತರಗತಿ ದಾಖಲು ಮಾಡಿಕೊಳ್ಳುವುದು 5 ನೇ ತರಗತಿ ಪೂರೈಸಿದ ಎಲ್ಲಾ ಮಕ್ಕಳು 6 ನೇ ತರಗತಿಗೆ ದಾಖಲಾಗುವುದು, 7/8 ನೇ ತರಗತಿ ಪೂರೈಸಿದ ಎಲ್ಲಾ ಮಕ್ಕಳು 8/9 ನೇ ತರಗತಿ ದಾಖಲಾಗಲು ಪ್ರೇರೇಪಿಸುವುದು, ಶಾಲೆಗೆ ಬರುತ್ತಿರುವ ಎಲ್ಲಾ ಮಕ್ಕಳು ಪ್ರಾರಂಭದ ದಿನದಿಂದಲೇ ಶಾಲೆಗೆ ನಿರಂತರವಾಗಿ ಹಾಜರಾಗುವುದು ಮತ್ತು ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣ ಮುಂದುವರೆಸಲು ಸಹಕರಿಸುವುದು ಈ ಆಂದೋಲನದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು. ಈ ಉದ್ದೇಶಗಳನ್ನು ಈಡೇರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಎಲ್ಲಾ ಜಿಲ್ಲೆಗಳ ಉಪ ನಿರ್ದೇಶಕರೊಂದಿಗೆ ಈಗಾಗಲೇ ವಿಡಿಯೋ ಕಾನ್ಪರೆನ್ಸ್ ಮೂಲಕ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ಸರ್ಕಾರ ಒದಗಿಸುತ್ತಿರುವ ಉಚಿತ ಪಠ್ಯ ಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಉಪಹಾರ, ಕ್ಷೀರಭಾಗ್ಯ ಶೂ ಸಾಕ್ಸ್, ಬೈಸಿಕಲ್ ವಿತರಣೆ, ವಿದ್ಯಾರ್ಥಿವೇತನ ಮುಂತಾದ ಸೌಲಭ್ಯಗಳ ಬಗ್ಗೆ ಕರಪತ್ರ, ಭಿತ್ತಿಪತ್ರ, ಡೋರ್ ಸ್ಟಿಕರ್ಸ್ , ಬ್ರೋಷರ್ಗಳನ್ನು ಸಿದ್ದಪಡಿಸಿ ಶಾಲೆ, ಗ್ರಾಮ ಕ್ಲಸ್ಟರ್, ಬ್ಲಾಕ್, ಜಿಲ್ಲೆಯ ಜನಸಂದಣಿ ಪ್ರದೇಶಗಳಲ್ಲಿ ಪ್ರಕಟಿಸಲಾಗುವುದು ಎಂದರು. 16 ಮೇ 2017 ರಿಂದ 31-5-2017 ರ ವರೆಗೆ ವಿಶೇಷ ದಾಖಲಾತಿ ಆಂದೋಲನ ಪ್ರಯುಕ್ತ ಶಾಲಾ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು, ಶಿಕ್ಷಣಾಸಕ್ತರು ಮತ್ತು ಶಾಲಾ ಮಕ್ಕಳೊಂದಿಗೆ ಗ್ರಾಮದಲ್ಲಿ ಬ್ಯಾನರ್ದೊಂದಿಗೆ ಜಾಥಾ ನಡೆಸಿ, ಘೋಷಣೆಗಳ ಮೂಲಕ ಸಮುದಾಯದಲ್ಲಿ ಅರಿವು ಮೂಡಿಸಲಾಗುವುದು ಎಂದರು. ಇದಲ್ಲದೆ, ಪೋಷಕರೊಂದಿಗೆ ಸಮಾಲೋಚನೆ, ವಲಸೆ ಬಂದಂತಹ ಕುಟುಂಬಗಳ ಮುಖ್ಯಸ್ಥರೊಂದಿಗೆ ಸಮಾಲೋಚಿಸಿ ಮಕ್ಕಳನ್ನು ಶಾಲೆಗೆ ಸೇರಿಸಲು ಮನವೊಲಿಕೆ, ದಿನಗೂಲಿ ಮಾಡುತ್ತಿರುವ ಮಕ್ಕಳ ಮಾಲೀಕರನ್ನು ಭೇಟಿಯಾಗಿ ಮಕ್ಕಳನ್ನು ಶಾಲೆಗೆ ಸೇರಿಸಲು ಮನವೊಲಿಸುವುದು, ಬಾಲ್ಯವಿವಾಹ ಅಥವಾ ಇನ್ನಿತರೆ ಕಾರಣಗಳಿಂದ ಮಕ್ಕಳು ಶಾಲೆ ಬಿಟ್ಟಿದ್ದಲ್ಲಿ ಅವರನ್ನು ಗುರುತಿಸಿ ಶಾಲಾ ವ್ಯಾಪ್ತಿಗೆ ತರಲಾಗುವುದು ಎಂದು ಸಚಿವರು ವಿವರಿಸಿದರು. ಇದಲ್ಲದೆ ಜೂನ್ 1, 2017 ರಿಂದ ಜೂನ್ 30, 2017 ರವರೆಗೆ ಸಾಮಾನ್ಯ ದಾಖಲಾತಿ ಆಂದೋಲನ ಹಮ್ಮಿಕೊಳ್ಳಲಾಗಿದ್ದು 6 ರಿಂದ 14 ವಯೋಮಾನದ ಎಲ್ಲಾ ಮಕ್ಕಳು ಶಾಲೆಗೆ ಹಾಜರಾಗುವುದನ್ನು ಖಚಿತಪಡಿಸಿಕೊಳ್ಳಲಾಗುವುದು ಮತ್ತು ಸರ್ಕಾರದ ವತಿಯಿಂದ ನೀಡಲಾಗುವ ಪಠ್ಯಪುಸ್ತಕ, ಸಮವಸ್ತ್ರ, ಶಾಲಾಬ್ಯಾಗ್, ಶೂ, ಲೇಖನಸಾಮಗ್ರಿ ಒದಗಿಸಲಾಗುವುದು ಎಂದರು. ಶಾಲಾ ಪ್ರಾರಂಭದ ನಂತರ ವಿವಿಧ ಕಾರಣಗಳಿಂದ ಶಾಲೆಗೆ ಗೈರುಹಾಜರಾಗುವ ಮಕ್ಕಳನ್ನು ಕೂಡಲೇ ಶಾಲೆ ಕರೆತರಲು ಶಾಲಾ ಶಿಕ್ಷಕರ, ಎಸ್ಡಿಎಂಸಿ ಸದಸ್ಯರು, ಪೋಷಕರು/ಗ್ರಾಮಸ್ಥರು, ಗ್ರಾಮಪಂಚಾಯತಿ, ಕಾರ್ಪೋರೇಷನ್ ಸದಸ್ಯರನ್ನೊಳಗೊಂಡ ಟಾಸ್ಕ್ಪೋರ್ಸ್ ರಚಿಸಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ ಎಂದರು. ಈ ಕಾರ್ಯಕ್ರಮವು ಜೂನ್ ಮಾಹೆಗೆ ಮಾತ್ರ ಸೀಮಿತವಾಗಿರದೆ ಇಡೀ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಮುಖ್ಯವಾಹಿನಿಯಿಂದ ಹೊರಗುಳಿಯುವಂತೆ ಕಣ್ಗಾವಲಿಗೆ ಕಾರ್ಯನಿರ್ವಹಿಸಲಿದ್ದು ಪ್ರತಿ ಗ್ರಾಮ ಪಂಚಾಯತಿಗೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುವಂತೆ ಎಲ್ಲಾ ಜಿಲ್ಲೆಯ ಜಿಲ್ಲಾದಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಸಚಿವರು ತಿಳಿಸಿದರು. 1 ರಿಂದ 10 ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳು ಸಮಯಕ್ಕೆ ಸರಿಯಾಗಿ ಶಾಲೆಗಳಿಗೆ ತಲುಪಿಸಲು ಸಕಲ ಸಿದ್ದತೆ ಮಾಡಲಾಗಿದೆ. ರಾಜ್ಯದ 72 ಆದರ್ಶ ವಿದ್ಯಾಲಯಗಳಲ್ಲಿ ಗುಣಮಟ್ಟ ಕಾಯ್ದಿರಿಸಿದ ಪರಿಣಾಮ ಉತ್ತಮ ಫಲಿತಾಂಶ ಪಡೆದಿದ್ದೇವೆ ಎಂದರು. ಹೋಬಳಿಗೊಂದು ಆದರ್ಶ ಶಾಲೆ ಸ್ಥಾಪಿಸಿ ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ. ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆ ಮುಚ್ಚುವ ಅಥವಾ ಖಾಸಗೀಕರಣಗೊಳಿಸುವ ಉದ್ದೇಶ ತಮಗಿಲ್ಲ, ಆದರೆ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸರ್ಕಾರದ ಜೊತೆ ಸಹಕರಿಸಲು ಖಾಸಗಿ ಸಂಸ್ಥೆಗಳು ಮುಂದೆ ಬಂದಲ್ಲಿ ಅದಕ್ಕೆ ಸ್ವಾಗತವಿದೆ ಎಂದರು. ಶಿಥಿಲಗೊಂಡಿರುವ, ಅಪಾಯಕಾರಿ ಅಂಚಿನಲ್ಲಿರುವ ಕಟ್ಟಡಗಳನ್ನು ನೆಲಸಮಗೊಳಿಸಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು. ಆರ್.ಟಿ.ಇ. ಕಾಯಿದೆ ಉಲ್ಲಂಘಿಸಿ ಅನರ್ಹರು ಸೌಲಭ್ಯ ಪಡೆದಿರುವ ಬಗ್ಗೆ ದೂರು ಬಂದಲ್ಲಿ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದರು. ಇದಲ್ಲದೆ 2017-18 ನೇ ಸಾಲಿಗೆ 10 ಸಾವಿರ ಶಿಕ್ಷಕರು, 2018-19 ನೇ ಸಾಲಿಗೆ 4 ಸಾವಿರ ಸೇರಿದಂತೆ ಒಟ್ಟು 18 ಸಾವಿರ ಶಿಕ್ಷಕರ ನೇಮಕಾತಿಗೆ ಇಂದು ಸಚಿವ ಸಂಪುಟ ಒಪ್ಪಿಗೆ ದೊರಕಿದೆ ಎಂದು ಸಚಿವರು ತಿಳಿಸಿದರು.

    Leave a Reply