02:49 am Friday, June 21, 2019
 • ಯಾಕೆ ಈ ಕಣ್ಣೀರು ?!

  By admin - Wed Jun 07, 5:17 am

  ಯಾಕೆ ಈ ಕಣ್ಣೀರು ?!

  ಡಾ. ಹಸೀನಾ ಹೆಚ್.ಕೆ.

  ಒಂದೆರಡು ದಿನಗಳ ಹಿಂದೆ ಪ್ರತಿದಿನದಂತೆ ಬಸ್ಸಿನಲ್ಲಿ ಕುಳಿತಾಗ ಒಬ್ಬರು 55 ವಯಸ್ಸಿನ ಯಜಮಾನರು ಬಸ್ಸು ಹತ್ತಿ ನನ್ನ ಪಕ್ಕದಲ್ಲಿ ಇದ್ದ ಖಾಲಿ ಸೀಟಿನಲ್ಲಿ ಕುಳಿತುಕೊಂಡರು. ಕುಳಿತಾಗಲೇ ಉಸ್ಸಪ್ಪ ಎಂದು ಆಚೀಚೆ ನೋಡಿ ಮತ್ತೆ ಸುಸ್ತಾದವರಂತೆ ಕುಳಿತುಕೊಂಡರು. ಬಸ್ಸು ಚಲಿಸಿತು. ಆ ಯಜಮಾನರು ತುಂಬಾ ಹೊತ್ತು ಸುಮ್ಮನೆ ಕುಳಿತಿರಲಾರದೆ ನನ್ನನ್ನು ಕೇಳಿಯೇ ಬಿಟ್ಟರು, “ತಾಯಿ ಎಲ್ಲಿಗೆ ಹೋಗುತ್ತಾ ಇರುವೆ?” ನಾನು ಹೇಳಿದೆ, ಶಂಕರಘಟ್ಟಕ್ಕೆ ಹೋಗ್ತಾ ಇದಿನಿ, ನಾವು ಇರುವುದು ಶಿವಮೊಗ್ಗದಲ್ಲಿ”ಎಂದೆ. ಬೆಳಗಿನ ಸಮಯ ಆಗಿದ್ದರಿಂದ ನಾನು ಸಹಜವಾಗಿ ಆ ಯಜಮಾನರಿಗೆ ಕೇಳಿದೆ “ತಿಂಡಿ ಆಯ್ತಾ?” ನಾನು ಕೇಳಿದ ಆ ಪ್ರಶ್ನೆ ತಿಂಡಿ ಆಯ್ತಾ? ಎನ್ನುವುದು ನನಗೆ ಸಹಜವಾಗಿಯೇ ಇತ್ತು. ಆದರೆ ಆ ವಯಸ್ಸಾದ ಜೀವಕ್ಕೆ ಏನನಿಸಿತೋ ಎನೋ ಗೊತ್ತಿಲ್ಲ. ಎರಡು ನಿಮಿಷ ಸುಮ್ಮನೆ ಕುಳಿತುಕೊಂಡವರ ಕಣ್ಣಾಲಿಗಳು ಕಣ್ಣೀರಿನಿಂದ ತುಂಬಿದ್ದವು. ಅವರು ಆ ದುಃಖವನ್ನು ಯಾರಿಗೂ ಗೊತ್ತಾಗದ ರಈತಿಯಲ್ಲಿ ಅದುಮಿ ಸ್ವಲ್ಪ ಹೊತ್ತಿನ ನಂತರ ಸುಮ್ಮನಾದರು.
  ಆದರೆ ನನ್ನ ಮನಸ್ಸಿನಲ್ಲಿ ಅವರಿಗೆ ಪ್ರಶ್ನೆ ಕೇಳಿದಾಗಿನಿಂದ ಕೊರಿತಾ ಇದ್ದುದು, ‘ನಾನು ಕೇಳಿದ್ದು ತಿಂಡಿ ಆಯ್ತಾ ಅಂತ, ಅದರಲ್ಲಿ ಅವರ ಮನಸ್ಸಿಗೆ ನೋವಾದದ್ದು ಏನು?’ ಕುತೂಹಲ ತಾಳಲಾಗದೆ ಕೇಳಿಯೆ ಬಿಟ್ಟೆ. “ಯಜಮಾನರೆ, ನಾನು ನಿಮಗೆ ಕೇಳಿದ್ದು ತಿಂಡಿ ಆಯ್ತಾ ಅಂತ, ಆದರೆ ನೀವು ಅತ್ತಿದ್ದು ಯಾಕೆ?” ಆಗ ಯಜಮಾನರು “ಕಾರಣ ಬಹಳ ದೊಡ್ಡದು” ಎಂದರು, “ನನಗೆ ಹೇಳಿದ್ರೆ ನಿಮ್ಮ ನೋವು ನನಗೂ ಗೊತ್ತಾಗುತ್ತದೆ” ಎಂದೆ.
  “ನಾನು ರೈತ. ನನಗೆ ನಾಲ್ಕು ಜನ ಮಕ್ಕಳು. ಇಬ್ಬರು ಹೆಣ್ಣು, ಇಬ್ಬರು ಗಂಡು, ಆ ಮಕ್ಕಳಿಗೆಲ್ಲಾ ಒಳ್ಳೆ ವಿದ್ಯಾಭ್ಯಾಸ ಕೊಡಿಸಿದ್ದೇನೆ. ಒಬ್ಬ ಬ್ಯಾಂಕ್ ಕ್ಯಾಷಿಯರ್, ಉಜಿರೆಯಲ್ಲಿದ್ದಾನೆ. ಇನ್ನೊಬ್ಬನು ಇಂಜಿನಿಯರ್, ಬೆಂಗಳೂರಿನಲ್ಲಿದ್ದಾನೆ. ಹೆಣ್ಣು ಮಕ್ಕಳಲ್ಲಿ ಒಬ್ಬಳು ಪಿ.ಯು.ಸಿ.ವರೆಗೆ ಓದಿದ್ದಾಳೆ. ಒಳ್ಳೆ ಜಮೀನ್ದಾರನಿಗೆ ಮದುವೆ ಮಾಡಿದ್ದೇನೆ. ಇನ್ನೊಬ್ಬಳು ಬಿ.ಎ. ಮುಗಿಸಿದ್ದಾಳೆ. ಹೋದ ವರ್ಷ ಇಂಜಿನಿಯರ್ ಹುಡುಗನ್ನ ನೋಡಿ ಮದುವೆ ಮಾಡಿದ್ದೇನೆ. ಈಗ ಮನೆಯಲ್ಲಿ ಇರುವುದು ನಾನು ಮತ್ತು ನನ್ನ ಹೆಂಗಸ್ರು. ಅವಳಿಗೆ ಸಕ್ಕರೆ ಕಾಯಿಲೆ, ನನಗೆ ಬಿ.ಪಿ. ಗ್ಯಾಸ್ ಟ್ರಬಲ್, ಊತ. ಆಗ ತಿನ್ನೋ ವಯಸ್ಸಲ್ಲಿ ಮಕ್ಕಳು, ದುಡಿಮೆ, ಗದ್ದೆ, ತೋಟ ಅಂತ ಸಾಯವುದಾಯಿತು. ಈಗ ನೆಮ್ಮದಿಯಾಗಿ ಕೂತು ತಿನ್ನುವ ಯವಸ್ಸಲ್ಲಿ ಕಾಯಿಲೆಗಳು. ಏನು ಮಾಡುವುದು ತಾಯಿ? ಇದುವೇ ಜೀವನ? ಅಂದರು.
  ಮತ್ತೆ ಮುಂದುವರಿಸಿ ಹೇಳಿದ್ರು, “ಗಂಡು ಮಕ್ಕಳು ಒಳ್ಳೆ ವಿದ್ಯಾವಂತರಾಗಿದ್ದರಿಂದ ಒಳ್ಳೊಳ್ಳೆ ಕಡೆ ಕೆಲಸ ಸಿಕ್ಕು ಅವರವರ ಹೆಂಡ್ತಿ ಮಕ್ಕಳನ್ನು ನೋಡಿಕೊಂಡು ಅವರಷ್ಟಕ್ಕೇ ಅವರು ಚೆನ್ನಾಗಿದ್ದಾರೆ. ಇನ್ನು ಹೆಣ್ಣು ಮಕ್ಕಳಿಗೆ ಒಳ್ಳೆ ಸ್ಥಿತಿವಂತರಿಗೆ ಮದುವೆ ಮಾಡಿರುವುದರಿಂದ ಅವರು ಅವರ ಗಂಡ, ಮಕ್ಕಳ ಜೊತೆ ಚೆನ್ನಾಗಿದ್ದಾರೆ. ಇನ್ನು ನನಗೆ ಅವಳು, ಅವಳಿಗೆ ನಾನು. ಎನೋ ಒಂದು ಸಪ್ಪೆ ಬೇಯಿಸಿಕೊಂಡು ತಿನ್ನೋದು. ಹಳ್ಳಿ ಮನೆ ಆಗಿರುವುದರಿಂದ ತೋಟಕ್ಕೆ, ಕೆಲಸಕ್ಕೆ ಸಣ್ಣಯ್ಯ ಅಂತ ಬರುತ್ತಾನೆ. ಏನಾದ್ರು ಹೆಚ್ಚು ಕಮ್ಮಿ ಆದ್ರೆ ಎಲ್ಲರಿಗೆ ಫೋನ್ ಮಾಡಿ ತಿಳಿಸಲಿ ಅಂತ ಎಲ್ಲರ ಮೊಬೈಲ್ ನಂಬರನ್ನು ದೊಡ್ಡದಾಗಿ ಬರೆದು ಗೋಡೆಯಲ್ಲಿ ನೇತು ಹಾಕಿದ್ದೇನೆ. ಯಾರಿಗೆ ಗೊತ್ತು, ಯಾವಾಗ ದೇವರಿಗೆ ಪ್ರಿಯರಾಗುತ್ತೇವೋ ಗೊತ್ತಿಲ್ಲ ಎಂದು ನಿಟ್ಟುಸಿರು ಬಿಟ್ಟರು.
  ಅವರು ಇಷ್ಟೆಲ್ಲಾ ಮಾತಾಡಿದ್ರೂ ನನಗೆ ಒಂದು ಸಂಶಯದ ಎಳೆ ಕಾಡುತ್ತಾ ಇತ್ತು. ನಾನು ತಿಂಡಿ ಆಯ್ತಾ ಅಂತ ಕೇಳಿದ್ದಕ್ಕೆ, ಯಜಮಾನರು ಅತ್ತಿದ್ದು ಯಾಕೆ? ಜಂಕ್ಷನ್ ಸ್ಟಾಪ್ ಬಂದಿದ್ದರಿಂದ ಕೇಳಿಯೇ ಬಿಟ್ಟೆ, “ಸರಿ ಯಜಮಾನರೇ ಎಲ್ಲಾ ಹೇಳಿದ್ರಿ, ಅತ್ತಿದ್ದು ಯಾಕೆ ಅಂತ ಹೇಳಿಲ್ಲವಲ್ಲ? ಅದು ಅತ್ತಿದ್ದು ಅಲ್ಲ ತಾಯಿ, ಅದು ಸಂತೋಷದ ಕಣ್ಣೀರು. ನೀನು ಯಾರೋ ಏನೋ, ಕುಲ, ಗೋತ್ರ ಗೊತ್ತಿಲ್ಲ, ನನಗೆ ತಿಂಡಿ ಆಯ್ತ ಅಂತ ಕೇಳಿದ್ದಿಯಲ್ಲ? ಅದು. ಆ ಪ್ರೀತಿಗೆ ಸಂತೋಷ ಆಗಿ ಕಣ್ಣೀರು ಬಂತು ಅಷ್ಟೆ” ಎಂದರವರು.
  “ನನಗೆ ಎಷ್ಟು ಜನ ಇದ್ದಾರೆ. ಆದರೆ ಯಾರೂ ದಿನಕ್ಕೊಮ್ಮೆ ಫೋನ್ ಮಾಡಿ ಹೇಗೆ ಇದ್ದೀರಾ? ಊಟ ಮಾಡಿದ್ರ? ತಿಂಡಿ ತಿಂದ್ರಾ? ಅಂತ ಕೇಳೊಲ್ಲ. ಯಾವಾಗಲೋ ಆಗೋಮ್ಮೆ, ಈಗೊಮ್ಮೆ ಮಾತಾಡುತ್ತಾರೆ ಅಷ್ಟೆ. ಆದರೆ ನೀನು, ನಿನ್ನ ಪಕ್ಕ ಕೂತ ತಕ್ಷಣ ತಿಂಡಿ ಮಾಡಿದ್ರ ಅಂತ ಕೇಳ್ದೆ ನೋಡು. ಆ ಮಮತೆಗೆ ಅತ್ತಿದ್ದು. ಅದು ಸಂತೋಷದ ನೀರು, ನನ್ನಂತವರು ಎಷ್ಟೋ ಜನ ಬೇಡುತ್ತಿರುವುದೇ ಅದನ್ನು. ಇವತ್ತು ತುಂಬಾ ಮಾತಾಡಿಬಿಟ್ಟೆ ತಾಯಿ. ಬಹಳ ದಿನಗಳ ಮೇಲೆ ಇಷ್ಟೊಂದು ಮಾತಾಡಿದ್ದೇನೆ. ಏನು ತಿಳಿದುಕೊಳ್ಳಬೇಡ ತಾಯಿ. ನಿನಗೆ ದೇವರು ಒಳ್ಳೆಯದು ಮಾಡಲಿ” ಎಂದರು. ಅಷ್ಟೊತ್ತಿಗೆ ಅವರು ಇಳಿಯುವ ಬಸ್ ಸ್ಟಾಪ್ ಬಂತು. ‘ಬರ್ಲಾ ತಾಯಿ’ ಅಂತ ಬಸ್ಸಿಳಿದು ನಿಧಾನಕ್ಕೆ ಹೆಜ್ಜೆ ಹಾಕಿದರು.
  ಇದು ಕೇವಲ ಒಬ್ಬಿಬ್ಬರು ಹಿರಿಯ ನಾಗರೀಕರ, ವಯಸ್ಸಾದವರ ಕತೆಯಲ್ಲ, ಸಾವಿರಾರು ಹಿರಿಯ ಜೀವಗಳ ಕತೆ. ಪ್ರೀತಿ ತೋರಲು, ಪ್ರೀತಿ ವಿಶ್ವಾಸವನ್ನು ಪಡೆಯಲು ಆ ಜೀವಗಳು ಹಾತೋರೆಯುತ್ತಿರುತ್ತವೆ. ಆದರೆ ಪ್ರೀತಿ ತೋರಲು ಜನವಿರುವುದಿಲ್ಲ. ಇದ್ದರು ಸಮಯವಿರುವುದಿಲ್ಲ, ಸಮಯ ಇದ್ದರು ಮನಸ್ಸಿರುವುದಿಲ್ಲ.
  ಇಂದು ಹಳ್ಳಿ, ದಿಲ್ಲಿ ಎನ್ನುವ ಭೇದ ಭಾವವಿಲ್ಲದೆ ಮಾರ್ಗದರ್ಶಿ ಕೇಂದ್ರಗಳು, ಆಪ್ತ ಸಲಹಾ ಕೇಂದ್ರಗಳು, ವೃದ್ದಾಶ್ರಮಗಳು ಬೀದಿಗೊಂದು ಹುಟ್ಟಿಕೊಳ್ಳಲು ಇದೂ ಒಂದು ಕಾರಣವಿರಬಹುದಲ್ವಾ?

  Leave a Reply