ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಪುತ್ತೂರು ಕಮ್ಯೂನಿಟಿ ಸೆಂಟರ*
*ಅಲ್ ಮುಝೈನ್, ಭಾರತ್ ಇನ್ಪ್ರಾಟೆಕ್, ಡೆಲ್ಟಾ ಗ್ರೂಪ್, ಪ್ರೊಸೆರ್ವ್ ಸೌದಿ ಅರೇಬಿಯಾ ಕಂಪೆನಿಯಿಂದ ಮೆಡಿಕಲ್ ಕೋರ್ಸ್ ನಲ್ಲಿರುವ ಸೆಂಟರ್ ನ ಎಲ್ಲಾ ವಿದ್ಯಾರ್ಥಿಗಳಿಗೆ 60 ಲಕ್ಷ ರುಪಾಯಿ ವಿದ್ಯಾರ್ಥಿ ವೇತನ*
2026 ರ ನೀಟ್ ಪರೀಕ್ಷೆಯಲ್ಲಿ ಅಮೋಘ ಸಾಧನೆ ಮಾಡಿದ ಪುತ್ತೂರು ಕಮ್ಯೂನಿಟಿ ಸೆಂಟರ್ ವಿದ್ಯಾರ್ಥಿಗಳನ್ನು ನಿನ್ನೆ ನಡೆದ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೆ ನಿರಂತರ ಪ್ರೋತ್ಸಾಹ ನೀಡುವ ಭರವಸೆಯನ್ನು ನೀಡಲಾಯಿತು. ನೀಟ್ ನಲ್ಲಿ ಸಾಧನೆ ಮಾಡಿ ಸರಕಾರಿ ಕೋಟಾದ ಮೂಲಕ MBBS ಮಾಡುವ ವಿದ್ಯಾರ್ಥಿಗಳಿಗೆ ಐವತ್ತು ಸಾವಿರದಿಂದ ಒಂದು ಲಕ್ಷದವರೆಗೆ ವಿದ್ಯಾರ್ಥಿ ವೇತನ, BDS ಮತ್ತು BAMS ಮಾಡಲಿರುವ ವಿಧ್ಯಾರ್ಥಿಗಳಿಗೆ 25 ಸಾವಿರ ರೂಪಾಯಿ ವಿದ್ಯಾರ್ಥಿ ವೇತನವನ್ನು ಅಲ್ ಮುಝೈನ್ ಮಾಲಕರಾದ ಝಕಾರಿಯಾ ಹಾಜಿ ಜೋಕಟ್ಟೆ ಘೋಷಿಸಿದರು. ಉಳಿದಂತೆ ಈಗಾಗಲೇ ಸೆಂಟರ್ ಮೂಲಕ ರಾಜ್ಯದ ವಿವಿಧ ಮೆಡಿಕಲ್, ಡೆಂಟಲ್, ಆಯುರ್ವೇದ ಕಾಲೇಜಿನಲ್ಲಿ ಕಲಿಯುತ್ತಿರುವ ಸುಮಾರು 238 ವಿದ್ಯಾರ್ಥಿಗಳ ಪೈಕಿ ಅರ್ಹರಿಗೆ 60 ಲಕ್ಷ ರುಪಾಯಿ ವಿದ್ಯಾರ್ಥಿ ವೇತನವನ್ನು ನೀಡುವ ತೀರ್ಮಾನ ಮಾಡಲಾಯಿತು. ಭಾರತ್ ಇನ್ಪ್ರಾಟೆಕ್ ನ ಮಾಲಕರಾದ ಎಸ್ ಎಂ ಮುಸ್ತಫಾ, ಡೆಲ್ಟಾ ಗ್ರೂಪ್ ನ ಅಹ್ಮದ್ ಮೊಹಿದ್ದೀನ್, ಪ್ರೊಸೆರ್ವ್ ಸೌದಿ ಅರೇಬಿಯಾದ ಅಬ್ದುಲ್ ಸತ್ತಾರ್ ರವರು ತಮ್ಮ ಸಂಸ್ಥೆಯ ಮೂಲಕ ಈ ವಿದ್ಯಾರ್ಥಿ ವೇತನ ನೀಡುವುದಾಗಿ ತಿಳಿಸಿದರು.

ಭಾರತ್ ಇನ್ಪ್ರಾಟೆಕ್ ಸಂಸ್ಥೆಯ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಒಟ್ಟು 23 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಅಡ್ಡೂರು ಸೆಂಟ್ರಲ್ ಕಮಿಟಿಯ ಇಬ್ಬರು ವಿದ್ಯಾರ್ಥಿಗಳನ್ನು ಇದೇ ವೇದಿಕೆಯಲ್ಲಿ ಅಭಿನಂದಿಸಿ ಗೌರವಿಸಲಾಯಿತು. ಈ ಎಲ್ಲಾ ವಿದ್ಯಾರ್ಥಿಗಳ ಮುಂದಿನ ವಿಧ್ಯಾಭ್ಯಾಸಕ್ಕೆ ಅಗತ್ಯ ನೆರವನ್ನು ನೀಡುವುದಾಗಿ ಭರವಸೆ ನೀಡಲಾಯಿತು.
ಕಮ್ಯೂನಿಟಿ ಸೆಂಟರ್ ಮೂಲಕ ಈ ವರ್ಷ 108 ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದಾರೆ. ಅವರ ಪೈಕಿ 15 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಈ ಬಾರಿ MBBS ಸರಕಾರಿ ಕೋಟಾದ ಮೂಲಕ ದಾಖಲಾತಿ ಪಡೆಯಲಿದ್ದಾರೆ. ಕೌನ್ಸಿಲಿಂಗ್ ನಂತರ ವಿವಿಧ ಕೆಟಗರಿ ಮತ್ತು ಮೀಸಲಾತಿ ಮೂಲಕ ಹಲವು ವಿದ್ಯಾರ್ಥಿಗಳು MBBS ಅರ್ಹತೆಯ ಅವಕಾಶ ಪಡೆಯಲಿದ್ದಾರೆ. ಉಳಿದಂತೆ ಹೆಚ್ಚಿನ ವಿದ್ಯಾರ್ಥಿಗಳು BDS, BAMS ಪ್ರವೇಶ ಪಡೆಯಲಿದ್ದಾರೆ. ಕಳೆದ ಐದು ವರ್ಷದ ಅವಧಿಯಲ್ಲಿ ಸೆಂಟರ್ ನ 238 ವಿದ್ಯಾರ್ಥಿಗಳು ಮೆಡಿಕಲ್ ವಿಭಾಗದಲ್ಲಿ ಕಲಿಯುತ್ತಿದ್ದಾರೆ. ಅವರಲ್ಲಿ 79 ವಿದ್ಯಾರ್ಥಿಗಳು MBBS ಅಧ್ಯಯನ ಮಾಡುತ್ತಿದ್ದಾರೆ. ಈ ಬಾರಿ 21 ವಿದ್ಯಾರ್ಥಿಗಳು MBBS ಗೆ ದಾಖಲಾತಿ ಪಡೆದರೆ ಸೆಂಟರ್ 100 MBBS ವಿದ್ಯಾರ್ಥಿಗಳನ್ನು ಸೃಷ್ಟಿಸಿದ ಹೆಮ್ಮೆಗೆ ಪಾತ್ರವಾಗಲಿದೆ. ಈಗಾಗಲೇ ಸೆಂಟರ್ ಈ ವರ್ಷದ ಅವಧಿಗೆ ಒಂದು ಸಾವಿರ ವೃತ್ತಿಪರರನ್ನು ರೂಪಿಸಿದ ಹೆಗ್ಗಳಿಗೆ ಪಾತ್ರವಾಗಲಿದ್ದು ಅದರಲ್ಲಿ ಕಾನೂನು, ಸಿಎ, ಎಂಜಿನಿಯರಿಂಗ್, ರಿಸರ್ಚ್, UG ಮತ್ತು PG ಕೋರ್ಸ್ ಗಳ ವಿದ್ಯಾರ್ಥಿಗಳು ಸೇರಿದ್ದಾರೆ.












