ಸೋನಿಯಾ ಗಾಂಧಿಯವರು ಯಾವಾಗೆಲ್ಲಾ ಯಾವೆಲ್ಲಾ ವಿಷಯದ ಬಗ್ಗೆ ಲೇಖನ ಬರೆಯುತ್ತಾರೋ ಆವಾಗೆಲ್ಲಾ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡುತ್ತದೆ. ಪ್ಯಾಲಿಸ್ತೇನ್ ಪರವಾಗಿ ಬಿಜೆಪಿ, ಆರ್​ಎಸ್​ಎಸ್ ಹೊರತಾಗಿ ಎಲ್ಲಾ ಸಂಘಟನೆಗಳು ಭಾರತದಲ್ಲಿ ಬೀದಿಗಿಳಿದಿದ್ದವು. ಆದಾಗ್ಯೂ ಗಾಜಾದಲ್ಲಿ “ಕದನ ವಿರಾಮ” ಕೋರಿ 27 ಅಕ್ಟೋಬರ್ 2023 ರಂದು ಯುಎನ್ ಸಾಮಾನ್ಯ ಸಭೆಯ ನಿರ್ಣಯದ ಮೇಲೆ ಭಾರತ ಮತದಾನ ಮಾಡಲಿಲ್ಲ. ಹಾಗಾಗಿ ಸೋನಿಯಾ ಗಾಂಧಿಯವರು 31ಅಕ್ಟೋಬರ್ 2023 ರಂದು ‘ಯುದ್ಧದಲ್ಲಿ ಮಾನವೀಯತೆ ಕಟಕಟೆಯಲ್ಲಿದೆ’ ಎಂದು ಲೇಖನ ಬರೆದರು. ಇದಾಗಿ ಕೇವಲ 9 ದಿನಗಳಲ್ಲಿ, ಅಂದರೆ 9 ನವೆಂಬರ್ 2023ರ ಯುಎನ್‌ನ ನಾಲ್ಕನೇ ಸಮಿತಿಯಲ್ಲಿ ಇಸ್ರೇಲ್‌ನ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ವಸಾಹತು ನಿರ್ಮಾಣವನ್ನು ಖಂಡಿಸುವ ನಿರ್ಣಯಕ್ಕೆ ಭಾರತ ಬೆಂಬಲವಾಗಿ ಮತ ಚಲಾಯಿಸಿತು. ಇದೀಗ ಇವತ್ತು ಅಂದರೆ, 25 ಜುಲೈ 2026 ರಂದು ಕೇಂದ್ರದ ಸಾರ್ವಜನಿಕ ಶಿಕ್ಷಣ ನೀತಿ ಮತ್ತು ವಿದ್ಯಾರ್ಥಿಗಳ ಜೊತೆ ನಾವೆಲ್ಲರೂ ನಿಲ್ಲಬೇಕಾದ ಸಾಂವಿಧಾನಿಕ ಕರ್ತವ್ಯದ ಬಗ್ಗೆ ಸೋನಿಯಾ ಗಾಂಧಿಯವರು ದ ಹಿಂದೂ ಪತ್ರಿಕೆಯಲ್ಲಿ ಲೇಖನ ಬರೆದಿದ್ದಾರೆ. ಅವರ ಲೇಖನ ಪ್ರಕಟಗೊಂಡ ಕೆಲವೇ ಗಂಟೆಗಳಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ರಾಜೀನಾಮೆಯ ಸಂಪೂರ್ಣ ಕ್ರೆಡಿಟ್ ಯುವ ಸಮುದಾಯದ ಕ್ರಾಂತಿಕಾರಿ ಹೋರಾಟಕ್ಕೆ ಸಲ್ಲಬೇಕು. ಆದರೆ ವಿಪಕ್ಷಗಳಿಗೆ ಈ ಬಗೆಗೆ ಇರಬೇಕಾದ ಕ್ಲಾರಿಟಿಗೆ ಸೋನಿಯಾಗಾಂಧಿ ಲೇಖನ ಒಂದು ಉದಾಹರಣೆ. ಹಾಗಾಗಿ ರಾಜ್ಯದಲ್ಲಿ ಅಧಿಕಾರದಲ್ಲಿರುವ, ಕೇಂದ್ರದಲ್ಲಿ ಆಧಿಕಾರಕ್ಕೆ ಬರುವ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ಸಿಗರು ಸೋನಿಯಾ ಗಾಂಧಿಯವರ ಲೇಖನ ಓದಲೇಬೇಕು.

 

ಶಿಕ್ಷಣ ವ್ಯವಸ್ಥೆಯ ಕುಸಿತ, ಯುವ ಭಾರತದ ಆಘಾತ

ಸೋನಿಯಾ ಗಾಂಧಿ

 

ಕಳೆದ ಕೆಲವು ವಾರಗಳಿಂದ ದೇಶದಾದ್ಯಂತ ಯುವ ವಿದ್ಯಾರ್ಥಿಗಳು ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಶಿಕ್ಷಣ ವ್ಯವಸ್ಥೆಯ ಸಾಮಾನ್ಯ ಅವನತಿಯ ವಿರುದ್ಧ ಶಾಂತಿಯುತವಾಗಿ ನಡೆಸುತ್ತಿರುವ ಪ್ರತಿಭಟನೆಗಳು ದಿನದಿಂದ ದಿನಕ್ಕೆ ಬಲ ಪಡೆಯುತ್ತಿವೆ. ಅವರ ಬೇಡಿಕೆಗಳು ಅತ್ಯಂತ ಸ್ಪಷ್ಟ ಹಾಗೂ ನೇರವಾಗಿವೆ. ಭಾರತ ಸರ್ಕಾರದಿಂದ ಉತ್ತರದಾಯಿತ್ವ (Accountability) ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಮೂಲಭೂತ ಸುಧಾರಣೆಗಳ (Education Reform) ಬೇಡಿಕೆಯನ್ನು ವಿದ್ಯಾರ್ಥಿ ಸಮುದಾಯ ಮುಂದಿಟ್ಟಿದೆ.

 

ಆದರೆ, ನರೇಂದ್ರ ಮೋದಿ ಸರ್ಕಾರವು ಅವರ ಧೈರ್ಯಕ್ಕೆ ಸಂವಾದದ ಮೂಲಕ ಪ್ರತಿಕ್ರಿಯಿಸುವ ಬದಲು, ಹೇಡಿತನ ಮತ್ತು ಅಮಾನವೀಯ ದಮನದ ಮೂಲಕ ಉತ್ತರಿಸಿದೆ. ದೇಶದ ಭವಿಷ್ಯದ ವಾರಸುದಾರರಂತೆ ಅವರನ್ನು ಕಾಣಬೇಕಾಗಿದ್ದ ಸರ್ಕಾರ, ಅವರನ್ನು ರಾಷ್ಟ್ರದ ಶತ್ರುಗಳಂತೆ ನಡೆಸಿಕೊಂಡಿದೆ.

 

2026ರ ಜುಲೈ 20 ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಒಂದು ಕರಾಳ ದಿನವಾಗಿ ದಾಖಲಾಗಲಿದೆ. ಆ ದಿನ ದೆಹಲಿ ಪೊಲೀಸರು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CRPF) ಯಾವುದೇ ಸಮರ್ಥನೆಗೆ ಅವಕಾಶವಿಲ್ಲದ ರೀತಿಯಲ್ಲಿ ಕ್ರೂರ ಲಾಠಿಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗದ ಮೂಲಕ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಮುಂದಾದವು. ಅನೇಕ ಪ್ರತಿಭಟನಾಕಾರರು ಗಾಯಗೊಂಡರು. ಪ್ರತಿಭಟನೆ ಮುಗಿಸಿ ಮನೆಗೆ ಮರಳುತ್ತಿದ್ದ ವಿದ್ಯಾರ್ಥಿಗಳನ್ನೂ ಬಿಡದೆ, ಅವರ ಬೆನ್ನು ಮತ್ತು ತಲೆಯ ಮೇಲೆ ಲಾಠಿ ಬೀಸಲಾಯಿತು.

 

ಆ ದಿನದ ದೃಶ್ಯಗಳು ಇಡೀ ದೇಶವನ್ನು ಬೆಚ್ಚಿಬೀಳಿಸಿವೆ. ಪೆಲ್ಲೆಟ್‌ಗಳಿಂದ ಗಾಯಗೊಂಡ ವಿದ್ಯಾರ್ಥಿಗಳ ದೇಹಗಳು, ಅವರ ನೋವಿನ ಚಿತ್ರಣಗಳು ದೇಶದ ಜನರ ಮನಸ್ಸನ್ನು ಕಲುಕಿವೆ. ಇಂತಹ ಪೆಲ್ಲೆಟ್‌ಗಳ ಬಳಕೆಗೆ ಕೇಂದ್ರ ಗೃಹ ಸಚಿವರ ಅನುಮೋದನೆ ಇದ್ದಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ. ಆ ದಿನದ ವೀಡಿಯೊಗಳು ನಮ್ಮ ನೆನಪುಗಳಲ್ಲಿ ಅಚ್ಚೊತ್ತಿಕೊಂಡಿದ್ದು, ನಮ್ಮ ಸಮೂಹ ಅಂತಃಕರಣವನ್ನು ಎಚ್ಚರಿಸಿವೆ.

ಆದರೆ ಸರ್ಕಾರ ಮತ್ತು ಅದರ ಹಿಡಿತದಲ್ಲಿರುವ ಮಾಧ್ಯಮಗಳು ಮಾತ್ರ ಯುವ ಸಮುದಾಯದ ಈ ಸ್ವಯಂಸ್ಪೂರ್ತಿಯ ಪ್ರತಿಭಟನೆಯನ್ನು ಅಪಪ್ರಚಾರದ ಮೂಲಕ ತಿರುಚಲು ಪ್ರಯತ್ನಿಸುತ್ತಿವೆ. ಈ ಸಂದರ್ಭದಲ್ಲಿ ದೇಶವು ಸ್ಪಷ್ಟವಾಗಿ ಹೇಳಬೇಕಾದ ಸಮಯ ಬಂದಿದೆ: “ದೌರ್ಜನ್ಯ, ಅಪಪ್ರಚಾರ ನಿಲ್ಲಿಸಿ. ಇವರು ನಮ್ಮ ಮಕ್ಕಳು. ನಮ್ಮ ಯುವಕರು, ನಮ್ಮ ಹೆಣ್ಣುಮಕ್ಕಳು.” ಎಂದು ನಾವು ಒಕ್ಕೊರಲಿನಿಂದ ಹೇಳಬೇಕಿದೆ.

 

ಮೋದಿ ಸರ್ಕಾರವು ಸಂವಾದಕ್ಕಿಂತ ದಮನವನ್ನೇ ತನ್ನ ಮೊದಲ ಆಯ್ಕೆಯನ್ನಾಗಿ ಮಾಡಿಕೊಂಡಿದೆ. ರೈತರ ಹೋರಾಟದಿಂದ ಹಿಡಿದು ಸಾಮಾಜಿಕ ಹೋರಾಟಗಾರರ ತನಕ ಅದರ ಮಾದರಿ ಧಮನವೊಂದೇ ಆಗಿದೆ. ಆದರೆ ಈ ಬಾರಿ, ಈಗಾಗಲೇ ಸರ್ವಾಧಿಕಾರಿ ಆಡಳಿತದ ಹೊಸ ಮಾನದಂಡಗಳನ್ನು ನಿರ್ಮಿಸಿರುವ ಈ ಸರ್ಕಾರ ಮತ್ತೊಂದು ಹೊಸ ಕೆಳಮಟ್ಟಕ್ಕೆ ಇಳಿದಿದೆ.

 

ದೇಶದ ಭವಿಷ್ಯದ ವೈದ್ಯರು, ಇಂಜಿನಿಯರ್‌ಗಳು, ಶಿಕ್ಷಕರು, ನಾಗರಿಕ ಸೇವಾಧಿಕಾರಿಗಳು, ಉದ್ಯಮಿಗಳು ಮತ್ತು ರಾಷ್ಟ್ರ ನಿರ್ಮಾಪಕರಾಗಬೇಕಾದ ಯುವಕರನ್ನು ಅರ್ಥಮಾಡಿಕೊಳ್ಳುವ ಬದಲು, ಸರ್ಕಾರ ತನ್ನ ದಮನಕಾರಿ ರಾಜ್ಯಶಕ್ತಿಯನ್ನು ಅವರ ಮೇಲೆ ಪ್ರಯೋಗಿಸಿದೆ. ಈ ಕೃತ್ಯವನ್ನು ದೇಶ ಎಂದಿಗೂ ಕ್ಷಮಿಸುವುದಿಲ್ಲ, ಮರೆತುಬಿಡುವುದೂ ಇಲ್ಲ.

 

ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಪ್ರತಿಯೊಬ್ಬರನ್ನೂ “ರಾಷ್ಟ್ರವಿರೋಧಿ” ಎಂದು ಬಣ್ಣಿಸುವ ಹಳೆಯ ತಂತ್ರವನ್ನು ಈಗ ವಿದ್ಯಾರ್ಥಿಗಳ ಪ್ರತಿಭಟನೆಯ ಮೇಲೂ ಬಳಸಲಾಗುತ್ತಿದೆ. ಸರ್ಕಾರ ತನ್ನ ತಪ್ಪುಗಳನ್ನು ಆತ್ಮಾವಲೋಕನ ಮಾಡುವ ಬದಲು, ಸಂಚು ಸಿದ್ಧಾಂತಗಳನ್ನು ಹರಡಿ ವಿದ್ಯಾರ್ಥಿಗಳ ಚಳವಳಿಯನ್ನು ಅಪಖ್ಯಾತಿಗೊಳಿಸಲು ತನ್ನ ಎಲ್ಲಾ ರಾಜಕೀಯ ತಂತ್ರಗಳನ್ನು ಬಳಸುತ್ತಿದೆ.

 

ಸಾರ್ವಜನಿಕ ಶಿಕ್ಷಣದ ಅವನತಿ

ಈ ಬಿಕ್ಕಟ್ಟಿನ ಮೂಲ ಕಾರಣಗಳಲ್ಲಿ ಮೊದಲನೆಯದು, ಮೋದಿ ಸರ್ಕಾರವು ಸಾರ್ವಜನಿಕ ಶಿಕ್ಷಣ ನೀತಿಯಿಂದ ಹಿಂದೆ ಸರಿದಿರುವುದು. ತನ್ನ ಒಟ್ಟು ಬಜೆಟ್‌ನಲ್ಲಿ ಶಾಲಾ ಶಿಕ್ಷಣಕ್ಕೆ ಮೀಸಲಿಟ್ಟಿರುವ ಪಾಲನ್ನು 50 ಶೇಕಡಾ ಮತ್ತು ಉನ್ನತ ಶಿಕ್ಷಣಕ್ಕೆ ನೀಡುವ ಪಾಲನ್ನು 33 ಶೇಕಡಾ ಕಡಿಮೆ ಮಾಡಿದೆ. ಇಂತಹ ಹಿಂಜರಿತಕ್ಕೆ ಯಾವುದೇ ಸಮಂಜಸವಾದ ಕಾರಣವಿದೆಯೇ?

 

ಕಳೆದ 12 ವರ್ಷಗಳಲ್ಲಿ, ಮೋದಿ ಸರ್ಕಾರವು ಸುಮಾರು ಒಂದು ಲಕ್ಷ ಸರ್ಕಾರಿ ಶಾಲೆಗಳನ್ನು ಮುಚ್ಚಿದ್ದು, ಅದೇ ಅವಧಿಯಲ್ಲಿ 43,000 ಖಾಸಗಿ ಶಾಲೆಗಳು ಆರಂಭವಾಗಿವೆ. ಅವುಗಳಲ್ಲಿ ಗಮನಾರ್ಹ ಸಂಖ್ಯೆಯ ಶಾಲೆಗಳು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನಡೆಸುವ ಅಥವಾ ಅದರ ಅಂಗಸಂಸ್ಥೆಗಳಿಗೆ ಸೇರಿದವುಗಳಾಗಿವೆ. ಆರ್‌ಎಸ್‌ಎಸ್ ಮತ್ತು ಅದರ ಅಂಗಸಂಸ್ಥೆಗಳು ದೇಶದಲ್ಲೇ ಅತಿದೊಡ್ಡ ಖಾಸಗಿ ಶಾಲಾ ಜಾಲವನ್ನು ನಡೆಸುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.

 

ಉನ್ನತ ಶಿಕ್ಷಣ ಕ್ಷೇತ್ರದಲ್ಲಿಯೂ ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ವಿಶ್ವವಿದ್ಯಾಲಯಗಳಿಗೆ ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸಿ, ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆಯುವಂತೆ ಒತ್ತಾಯಿಸಿದೆ. ಆ ಸಾಲವನ್ನು ತೀರಿಸಲು ಸಾರ್ವಜನಿಕ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಶುಲ್ಕವನ್ನು ಹೆಚ್ಚಿಸುವ ಅನಿವಾರ್ಯತೆಗೆ ಸಿಲುಕಿವೆ.

ಗುಣಮಟ್ಟದ ಮತ್ತು ಕೈಗೆಟುಕುವ ಸಾರ್ವಜನಿಕ ಶಿಕ್ಷಣ ಲಭ್ಯವಾಗದ ಕಾರಣ, ಭಾರತದಲ್ಲಿನ ಕುಟುಂಬಗಳು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಭಾರೀ ಪ್ರಮಾಣದಲ್ಲಿ ಸ್ವಂತ ಹಣವನ್ನು ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

 

ನೀಟ್ (NEET) ಪರೀಕ್ಷೆಯ ಕೋಚಿಂಗ್‌ಗಾಗಿ ಕುಟುಂಬಗಳು ಖರ್ಚು ಮಾಡುವ ಒಟ್ಟು ಮೊತ್ತವೇ, ಮೋದಿ ಸರ್ಕಾರವು ದೇಶದ ಸಾರ್ವಜನಿಕ ಶಿಕ್ಷಣಕ್ಕೆ ಮಾಡುವ ಒಟ್ಟು ಹೂಡಿಕೆಯಷ್ಟಿದೆ. ಖಾಸಗಿ ಶಿಕ್ಷಣದ ದುಬಾರಿ ವೆಚ್ಚವು ಅಪಾರ ಪ್ರತಿಭೆ ಹೊಂದಿದ್ದರೂ ಬಡ ಮತ್ತು ಮಧ್ಯಮ ವರ್ಗದ ಸಾವಿರಾರು ವಿದ್ಯಾರ್ಥಿಗಳ ಕನಸುಗಳನ್ನು ನುಚ್ಚುನೂರಾಗಿಸುತ್ತದೆ. ಇದಕ್ಕಿಂತಲೂ ಗಂಭೀರವಾದ ಸಂಗತಿ ಏನೆಂದರೆ, ಈ ಭಾರೀ ವೆಚ್ಚವು ವಿದ್ಯಾರ್ಥಿಗಳ ಮೇಲೆ ಅಸಾಧ್ಯವಾದ ನಿರೀಕ್ಷೆಗಳ ಮೇಲೆ ಒತ್ತಡವನ್ನು ಹೇರುತ್ತದೆ. ತಮ್ಮ ಶಿಕ್ಷಣಕ್ಕಾಗಿ ತಮ್ಮ ಕುಟುಂಬಗಳು ಎಷ್ಟು ದೊಡ್ಡ ತ್ಯಾಗ ಮಾಡಿವೆ ಎಂಬ ಅರಿವು ಭಾರತದ ಯುವಜನತೆಗೆ ಸ್ಪಷ್ಟವಾಗಿದೆ. ಅವರಲ್ಲಿ ಕಾಣುತ್ತಿರುವ ತೀವ್ರ ಆತಂಕ ಮತ್ತು ಹತಾಶೆ, ಶಿಕ್ಷಣದ ಖಾಸಗೀಕರಣ ಮತ್ತು ವಾಣಿಜ್ಯೀಕರಣದ ನೇರ ಪರಿಣಾಮವಾಗಿದೆ.

 

ಕುಸಿದ ಪರೀಕ್ಷಾ ವ್ಯವಸ್ಥೆ ಮತ್ತು ಯಶಸ್ಸಿನ ಸಂಕಷ್ಟ

ಎರಡನೇ ಪ್ರಮುಖ ಸಮಸ್ಯೆ ಎಂದರೆ ಭಾರತದ ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯ ಕುಸಿತ. ಈ ವ್ಯವಸ್ಥೆ ಕಳೆದ ಕೆಲವು ವರ್ಷಗಳಲ್ಲಿ ಕೇಂದ್ರೀಕರಣ (Centralisation), ಖಾಸಗೀಕರಣ (Privatisation) ಮತ್ತು ರಾಜಕೀಕರಣ (Politicisation) ಎಂಬ ಮೂರು ಪ್ರಕ್ರಿಯೆಗಳ ಮೂಲಕ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡಿದೆ.

 

ಹಿಂದೆ ವಿಶ್ವವಿದ್ಯಾಲಯಗಳು ಹಾಗೂ ರಾಜ್ಯಗಳು ತಮ್ಮದೇ ಆದ ಅಗತ್ಯಗಳಿಗೆ ಅನುಗುಣವಾಗಿ ಸ್ವತಂತ್ರವಾಗಿ ಪರೀಕ್ಷೆಗಳನ್ನು ನಡೆಸುತ್ತಿದ್ದವು. ಆದರೆ ಈಗ ಆ ವ್ಯವಸ್ಥೆಯನ್ನು ತೆಗೆದುಹಾಕಿ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency / NTA) ನಡೆಸುವ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ ಮೊದಲಾದ ಕೇಂದ್ರೀಕೃತ ಪರೀಕ್ಷೆಗಳ ಮೂಲಕ ಬದಲಾಯಿಸಲಾಗಿದೆ.

 

ಆದರೆ ಎನ್‌ಟಿಎ ಸ್ವತಃ ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವ, ಅಸಮರ್ಥ ಸಂಸ್ಥೆಯಾಗಿದೆ. ಪರೀಕ್ಷೆಗಳನ್ನು ನಡೆಸಲು ಅದು ಸಂಪೂರ್ಣವಾಗಿ ಖಾಸಗಿ ಗುತ್ತಿಗೆದಾರರ ಮೇಲೆಯೇ ಅವಲಂಬಿತವಾಗಿದೆ. ಅಲ್ಲದೆ, ಎನ್‌ಟಿಎ ನೇಮಿಸುವ ಪ್ರಶ್ನೆಪತ್ರಿಕೆ ತಯಾರಕರು, ಅನುವಾದಕರು ಹಾಗೂ ತಜ್ಞರು ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಖ್ಯಾತ ಶಿಕ್ಷಣತಜ್ಞರಲ್ಲ. ಅವರಲ್ಲಿ ಬಹುತೇಕರು ರಾಜಕೀಯ ಸಂಪರ್ಕ ಹೊಂದಿರುವ ಸಾಧಾರಣ ವ್ಯಕ್ತಿಗಳಾಗಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ.

 

ಈ ವ್ಯವಸ್ಥೆಯ ಪರಿಣಾಮ ಅತ್ಯಂತ ಗಂಭೀರವಾಗಿದೆ. ಕಳೆದ 12 ವರ್ಷಗಳಲ್ಲಿ ದೇಶದಾದ್ಯಂತ 152 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿದ್ದು, ಅವುಗಳಲ್ಲಿ 2017ರಲ್ಲಿ ಸ್ಥಾಪನೆಯಾದ ನಂತರ ಎನ್‌ಟಿಎ ನಡೆಸಿದ ಪರೀಕ್ಷೆಗಳಲ್ಲೇ 9 ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ.

 

ಇದರ ಪರಿಣಾಮವಾಗಿ, ಅತ್ಯಂತ ಪ್ರತಿಭಾವಂತ ಮತ್ತು ಶ್ರಮಶೀಲ ವಿದ್ಯಾರ್ಥಿಗಳೂ ಸಹ ತಮ್ಮ ತಪ್ಪಿನಿಂದಲ್ಲ, ಪರೀಕ್ಷಾ ವ್ಯವಸ್ಥೆಯ ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯದ ಕಾರಣದಿಂದ ವಿಫಲರಾಗುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಪರೀಕ್ಷಾ ವ್ಯವಸ್ಥೆಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಿಕೊಂಡಿರುವವರು ತಮ್ಮ ಅಪರಾಧಗಳಿಗೆ ಯಾವುದೇ ಗಂಭೀರ ಪರಿಣಾಮ ಎದುರಿಸದೇ ಲಾಭ ಪಡೆಯುತ್ತಿದ್ದಾರೆ.

 

ಮೂರನೇ ಪ್ರಮುಖ ಸಮಸ್ಯೆ ಎಂದರೆ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಯಶಸ್ಸು ಸಾಧಿಸುವುದು ದಿನೇದಿನೇ ಕಷ್ಟಕರವಾಗುತ್ತಿದೆ. ಇಂದು ಪದವಿ ಪಡೆದ ನಂತರ ಉತ್ತಮ ಗುಣಮಟ್ಟದ ಹಾಗೂ ಉತ್ತಮ ಸಂಬಳದ ಉದ್ಯೋಗಗಳು ಅಪರೂಪವಾಗಿವೆ. ಇದಕ್ಕೆ ದೇಶದ ಆರ್ಥಿಕತೆಯಲ್ಲಿ ಹೆಚ್ಚುತ್ತಿರುವ ಏಕಸ್ವಾಮ್ಯ (Monopolisation) ಒಂದು ಪ್ರಮುಖ ಕಾರಣವಾಗಿದೆ.

 

ಕಳೆದ ಕೆಲವು ವರ್ಷಗಳಿಂದ ಯುವ ಪದವೀಧರರ ನಿರುದ್ಯೋಗ ಪ್ರಮಾಣ ಸರಾಸರಿ ಶೇ.40ರಷ್ಟಿದೆ. ಉಳಿದಿರುವ ಕೆಲವೇ ಉದ್ಯೋಗಗಳಿಗಾಗಿ ಸ್ಪರ್ಧೆ ಅತ್ಯಂತ ತೀವ್ರವಾಗಿದೆ. ಆದರೆ ಆ ಸ್ಪರ್ಧೆಗೆ ಅಗತ್ಯವಾದ ಕೌಶಲ್ಯ ಮತ್ತು ಗುಣಮಟ್ಟದ ಶಿಕ್ಷಣವನ್ನು ನಮ್ಮ ವಿದ್ಯಾರ್ಥಿಗಳು ಪಡೆಯುವಂತಿಲ್ಲ.

 

ಪಕ್ಷನಿಷ್ಠೆಯ ಆಧಾರದ ಮೇಲೆ ಅಸಮರ್ಥ ಕುಲಪತಿಗಳನ್ನು ನೇಮಿಸುವುದು ಹಾಗೂ ಅವರ ಮೂಲಕ ರಾಜಕೀಯ ಸಂಪರ್ಕ ಹೊಂದಿರುವ ಅರ್ಹತೆಯಿಲ್ಲದ ಬೋಧಕರನ್ನು ನೇಮಕ ಮಾಡುವುದು, ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಬೋಧನೆಯ ಗುಣಮಟ್ಟವನ್ನು ಗಂಭೀರ ಸಂಕಷ್ಟಕ್ಕೆ ತಳ್ಳಿದೆ.

 

ಇಂದು ಉದ್ಯೋಗ ಕ್ಷೇತ್ರದಲ್ಲಿ ಕೌಶಲ್ಯಗಳ ಬೇಡಿಕೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಆದರೆ ಭಾರತದ ಉನ್ನತ ಶಿಕ್ಷಣ ವ್ಯವಸ್ಥೆ ಇನ್ನೂ ಹಳೆಯದಾದ, ಬಳಕೆಗೆ ಅಸಮರ್ಥವಾದ ವಿಧಾನಗಳಿಗೆ ಮತ್ತು ರಾಜಕೀಯ ಉದ್ದೇಶಗಳಿಂದ ರೂಪಿಸಲಾದ ಪಠ್ಯಕ್ರಮಗಳಿಗೆ ಸೀಮಿತವಾಗಿದೆ.

 

ವೇಗವಾಗಿ ಬದಲಾಗುತ್ತಿರುವ ಜಾಗತಿಕ ಶಿಕ್ಷಣದ ಮಾನದಂಡಗಳು ಹಾಗೂ ಕೃತಕ ಬುದ್ಧಿಮತ್ತೆ (Artificial Intelligence/ AI) ಆಧಾರಿತ ಜಗತ್ತಿಗೆ ಹೊಂದಿಕೊಳ್ಳುವಲ್ಲಿ ಈ ಶಿಕ್ಷಣ ವ್ಯವಸ್ಥೆ ವಿಫಲವಾಗಿದೆ. ಇದರ ಪರಿಣಾಮವಾಗಿ, ಅಗತ್ಯ ಸಂಪನ್ಮೂಲಗಳಿಲ್ಲದೆ, ನಿರಂತರವಾಗಿ ಕಠಿಣವಾಗುತ್ತಿರುವ ಶಿಕ್ಷಣ ಮತ್ತು ಉದ್ಯೋಗ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಬದುಕು ಕಟ್ಟಿಕೊಳ್ಳಲು ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

 

ಇಂದು ಶಿಕ್ಷಣ ವ್ಯವಸ್ಥೆ ದುಬಾರಿಯಾಗಿದೆ, ಭ್ರಷ್ಟಾಚಾರದಿಂದ ಕಲುಷಿತವಾಗಿದೆ ಹಾಗೂ ಯಶಸ್ಸು ಸಾಧಿಸಲು ಅತ್ಯಂತ ಕಷ್ಟಕರವಾಗಿದೆ. ಮೋದಿ ಸರ್ಕಾರವು ಉತ್ತರದಾಯಿತ್ವದಿಂದ ತಪ್ಪಿಸಿಕೊಳ್ಳುವ ಹಾಗೂ ಶಿಕ್ಷಣದ ಕುರಿತು ಪ್ರಾಮಾಣಿಕ ಸಂವಾದವನ್ನು ನಿರಂತರವಾಗಿ ತಪ್ಪಿಸುವ ನೀತಿಯನ್ನು ಅನುಸರಿಸಿರುವುದು ದೇಶಕ್ಕೆ ನೀಡಿದ ದೊಡ್ಡ ಹೊಡೆತವಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ಯನ್ನು ಯಾವುದೇ ರಾಷ್ಟ್ರೀಯ ಒಮ್ಮತವನ್ನು ಪಡೆದುಕೊಳ್ಳದೇ ಹಾಗೂ ಸಂಸತ್ತಿನಲ್ಲಿ ಸಮಗ್ರ ಚರ್ಚೆಗೆ ಒಳಪಡಿಸದೆ ಜಾರಿಗೊಳಿಸಲಾಯಿತು.

 

ಎನ್‌ಟಿಎಯನ್ನೂ ಸಹ ಯಾವುದೇ ಸಂಸತ್ತಿನ ಕಾನೂನಿನ ಮೂಲಕ ಸ್ಥಾಪಿಸಲಾಗಲಿಲ್ಲ. ಅದು ಕೇವಲ ಕೇಂದ್ರ ಸಚಿವ ಸಂಪುಟದ ನಿರ್ಧಾರದ ಮೂಲಕ ರಚಿಸಲಾದ ಒಂದು “ಸೊಸೈಟಿ” ಆಗಿದ್ದು, ಅದಕ್ಕೆ ಪರಿಣಾಮಕಾರಿ ಉತ್ತರದಾಯಿತ್ವ ವ್ಯವಸ್ಥೆಯೇ ಇಲ್ಲ.

ಶಿಕ್ಷಣ ಸಚಿವರು ಕೂಡ ಉತ್ತರದಾಯಿತ್ವದ ಬಗ್ಗೆ ತಮ್ಮ ನಿರ್ಲಕ್ಷ್ಯವನ್ನು ಬಹಿರಂಗವಾಗಿ ಪ್ರದರ್ಶಿಸಿದರು. ಎನ್‌ಟಿಎಯನ್ನು ಬಲಪಡಿಸುವ ಕುರಿತು ಸಂಸತ್ತಿನ ಶಿಕ್ಷಣ ಸ್ಥಾಯಿ ಸಮಿತಿಯ ಶಿಫಾರಸುಗಳನ್ನು, ಅದರಲ್ಲಿ ವಿರೋಧ ಪಕ್ಷದ ಸದಸ್ಯರು ಇದ್ದಾರೆ ಎಂಬ ಕಾರಣಕ್ಕೆ ಸಾರ್ವಜನಿಕವಾಗಿಯೇ ತಿರಸ್ಕರಿಸಿದರು. ಈಗ ಇಷ್ಟೊಂದು ದೊಡ್ಡ ವೈಫಲ್ಯಗಳ ನಂತರವೂ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ನಿರಾಕರಿಸಿರುವುದು ಜನರ ಆಕ್ರೋಶವನ್ನು ಇನ್ನಷ್ಟು ಹೆಚ್ಚಿಸಿದೆ.

 

ಪ್ರತಿಭಟನೆಯ ಬೇರುಗಳು

ಇಂದಿನ ವಿದ್ಯಾರ್ಥಿ ಪ್ರತಿಭಟನೆಗಳು ಈ ಎಲ್ಲಾ ಸಮಸ್ಯೆಗಳ ಸಹಜ ಪರಿಣಾಮವಾಗಿದೆ. ಒಂದೆಡೆ ನಿರಾಶೆಯನ್ನಷ್ಟೇ ಉಂಟುಮಾಡುವ ಶಿಕ್ಷಣ ವ್ಯವಸ್ಥೆ, ಮತ್ತೊಂದೆಡೆ ಮೋದಿ ಸರ್ಕಾರದ ಅಹಂಕಾರ, ಉತ್ತರದಾಯಿತ್ವದ ಕೊರತೆ ಹಾಗೂ ರಚನಾತ್ಮಕ ಸಂವಾದಕ್ಕೆ ತೋರಿದ ನಿರಾಸಕ್ತಿ—ಈ ಎರಡರ ಸಂಯೋಜನೆಯೇ ವಿದ್ಯಾರ್ಥಿಗಳನ್ನು ಬೀದಿಗಿಳಿಯುವಂತೆ ಮಾಡಿದೆ. ಕೇಂದ್ರ ಗೃಹ ಸಚಿವರ ನೇರ ಆಡಳಿತ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿ ವಿದ್ಯಾರ್ಥಿಗಳ ಮೇಲೆ ನಡೆಸಿದ ಕ್ರೌರ್ಯವೂ ಈ ಸರ್ಕಾರಕ್ಕೆ ಹೊಸದೇನಲ್ಲ.

 

2020ರ ಪೌರತ್ವ ತಿದ್ದುಪಡಿ ಕಾಯ್ದೆ (CAA) ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ (NRC) ವಿರುದ್ಧ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಶಸ್ತ್ರಸಜ್ಜಿತ ಪೊಲೀಸರು ಹಾಗೂ ಅರೆಸೈನಿಕ ಪಡೆಗಳು ವಿಶ್ವವಿದ್ಯಾಲಯ ಆವರಣಗಳ ಮೇಲೆ ನಡೆಸಿದ ದಾಳಿಯನ್ನು ದೇಶ ಇನ್ನೂ ಮರೆತಿಲ್ಲ. ಹಾಗೆಯೇ ಭಾರತದ ಮಹಿಳಾ ಕುಸ್ತಿಪಟುಗಳ ವಿರುದ್ಧ ನಡೆದ ಅಮಾನವೀಯ ವರ್ತನೆಯೂ ನಮ್ಮ ನೆನಪುಗಳಿಂದ ಎಂದಿಗೂ ಅಳಿಸಿಹೋಗುವುದಿಲ್ಲ.

 

ಮೋದಿ ಸರ್ಕಾರವು ಭಾರತದ ಶಿಕ್ಷಣ ವ್ಯವಸ್ಥೆಯನ್ನು ಮಾತ್ರ ಹಾಳುಮಾಡಿದ್ದಲ್ಲ, ಯಾವುದೇ ಉತ್ತರದಾಯಿತ್ವವಿಲ್ಲದೆ ನಡೆದುಕೊಳ್ಳುವುದು, ತನ್ನದೇ ಭ್ರಮೆಯಲ್ಲಿ ಬದುಕುವುದು ಹಾಗೂ ಜನರ ನೋವಿನ ಬಗ್ಗೆ ಸಂಪೂರ್ಣ ಅಸಂವೇದನಾಶೀಲವಾಗಿರುವುದು ಅದರ ಆಡಳಿತದ ಶೈಲಿಯಾಗಿದೆ. ಆದರೆ ಭಾರತದ ವಿದ್ಯಾರ್ಥಿಗಳು ಈ ಆಡಳಿತದ ನಿಜಸ್ವರೂಪವನ್ನು ದೇಶದ ಮುಂದೆ ಬಯಲು ಮಾಡಿದ್ದಾರೆ. ಈ ವಿದ್ಯಾರ್ಥಿಗಳ ಜೊತೆ ನಿಲ್ಲುವುದು, ಅವರ ಭವಿಷ್ಯವನ್ನು ರಕ್ಷಿಸುವುದು ನಮ್ಮ ನೈತಿಕ, ರಾಜಕೀಯ ಮತ್ತು ಸಾಂವಿಧಾನಿಕ ಕರ್ತವ್ಯವಾಗಿದೆ.