ಬಸವಲಿಂಗಪ್ಪ ಸೈಕಲ್ ಏರಿ ದಲಿತರ ಕೇರಿಗೆ ಬರೋದು ಸ್ತ್ರೀ ಸಂಘಕ್ಕಾ? ಅಂತ ಡೌಟ್ ಪಟ್ಟಿದ್ದ ಯಜಮಾನ!

 

ಅದು 1948ರ ಸಮಯ. ಈಗಷ್ಟೇ ಕಾನೂನು ಪದವಿ ಮುಗಿಸಿ ಹರಿಹರದಲ್ಲಿ ವಕೀಲ ವೃತ್ತಿ ಆರಂಭಿಸುವ ಹೊಸ್ತಿಲಲ್ಲಿದ್ದ ಯುವ ವಕೀಲರು ಅವರು. ಡಾ. ಬಿ.ಆರ್. ಅಂಬೇಡ್ಕರ್ ಅವರ ‘ಶಿಕ್ಷಣದಿಂದ ಮಾತ್ರ ದಲಿತರು ಪ್ರಜ್ಞಾವಂತರಾಗಲು ಸಾಧ್ಯ’ ಎಂಬ ಮಾತು ಅವರ ತಲೆಯಲ್ಲಿ ಅಚ್ಚೊತ್ತಿತ್ತು. ಬಿಡುವಿನ ವೇಳೆಯಲ್ಲಿ ಆ ಯುವ ವಕೀಲರು ಮಾಡಿದ್ದೇನು ಗೊತ್ತೇ?

 

ದಿನವೂ ಒಂದು ಸೈಕಲ್ ಏರಿ, ಹರಿಹರದ ಪಕ್ಕದ ‘ರಾಜನಹಳ್ಳಿ’ಗೆ ಹೋಗುತ್ತಿದ್ದರು. ನೇರವಾಗಿ ದಲಿತರ ಕೇರಿಗೆ ಹೋಗಿ ದಲಿತ ಮಕ್ಕಳನ್ನು ಶಾಲೆಗೆ ಸೇರಿಸಲು ಮನವೊಲಿಸುತ್ತಿದ್ದರು. ಆದರೆ, ಯಾವೊಬ್ಬ ದಲಿತನೂ ಇವರ ಮಾತಿಗೆ ಬೆಲೆ ಕೊಡುತ್ತಿರಲಿಲ್ಲ. ಆದರೂ ಅವರು ಛಲ ಬಿಡದೆ ದಿನವೂ ಸೈಕಲ್ ತುಳಿಯುತ್ತಾ ಕೇರಿಗೆ ಎಡತಾಕುತ್ತಿದ್ದರು.

 

ಹೀಗೆ ದಿನವೂ ಬಂದು ಹೋಗುತ್ತಿದ್ದ ಈ ಸುಂದರಾಂಗ ಯುವಕನನ್ನು ಗಮನಿಸಿದ ಆ ಹಳ್ಳಿಯ ಯಜಮಾನನಿಗೆ ಅನುಮಾನ ಶುರುವಾಯಿತು. “ಈ ಸುಂದರ ಯುವಕ ದಿನವೂ ರಾಜನಹಳ್ಳಿಯ ದಲಿತ ಕೇರಿಗೆ ಭೇಟಿ ಕೊಡುವುದು ಸ್ತ್ರೀ ಸಂಗಕ್ಕಾಗಿಯೇ ಇರಬೇಕು” ಎಂದು ಬಲವಾಗಿ ಶಂಕಿಸಿದ ಯಜಮಾನ, ಒಂದು ದಿನ ಅವರನ್ನು ಮರದ ಕಟ್ಟೆಯ ಬಳಿ ಕರೆದು ಖಡಕ್ ಆಗಿ ಪ್ರಶ್ನಿಸಿದ.

 

ಆಗ ಆ ಯುವ ವಕೀಲರು, ತಾವು ಮಾಡುತ್ತಿರುವ ‘ಶಿಕ್ಷಣದ ಜಾಗೃತಿ’ಯ ಕೆಲಸವನ್ನು ವಿವರಿಸಿದರು. ಇದನ್ನು ಕೇಳಿದ ಯಜಮಾನನಿಗೆ ಅವರ ಮೇಲಿದ್ದ ಅನುಮಾನ ದೂರವಾಗಿ, ಎಲ್ಲಿಲ್ಲದ ಅಭಿಮಾನ ಮೂಡಿತು. “ನೋಡು ಹೀಗೆ ತಿರುಗಾಡಿದರೆ ಪ್ರಯೋಜನವಿಲ್ಲ. ನಾಳೆ ಬೇಗನೇ ಬಾ, ನೇರವಾಗಿ ದಲಿತ ಕೇರಿಗೆ ಹೋಗಬೇಡ. ಸೀದಾ ನನ್ನಲ್ಲಿಗೆ ಬಾ” ಎಂದು ಹೇಳಿದನು.

 

ಮರುದಿನ ಬೆಳಿಗ್ಗೆ ಯುವ ವಕೀಲರು ಹರಿಹರದಿಂದ ಬೇಗನೇ ಎದ್ದು ರಾಜನಹಳ್ಳಿಗೆ ತೆರಳಿ ಯಜಮಾನರು ಕುಳಿತ ಕಟ್ಟೆಗೆ ತಲುಪಿದರು. ಆ ಮರದ ಕಟ್ಟೆ ಹೇಗಿತ್ತೆಂದರೆ, ದಲಿತರು ತಮ್ಮ ಕೇರಿಯಿಂದ ಹೊಲ ಗದ್ದೆಗೆ ಹೋಗಬೇಕಾದರೆ ಆ ಕಟ್ಟೆಯ ಪಕ್ಕದಲ್ಲಿಯೇ ಸಾಗಿ ಹೋಗಬೇಕು.

ಸಮಯ ಸರಿಯಿತು, ದಲಿತರು ಒಬ್ಬೊಬ್ಬರಾಗಿ ಕೈಯಲ್ಲಿ ಮೇಕೆಗೆ ಕಟ್ಟಿದ ಹಗ್ಗ ಹಿಡಿದು, ಬಗಲಲ್ಲಿ ಕುರುಪಿ ಹಿಡಿದು, ಹೊಲಗದ್ದೆಗಳಿಗೆ ಕೂಲಿನಾಲಿ ಮಾಡಲು ಸಾಗುತ್ತಿದ್ದರು.

 

ತಕ್ಷಣವೇ ತನ್ನ ಪಾಳೇಗಾರಿಕೆಯ ದನಿಯಲ್ಲಿ ಆ ದಲಿತರ ಹೆಸರನ್ನು ಹೇಳಿ “ಲೋ ಸೂಳೆ ಮಗನೇ ಬಾ ಇಲ್ಲಿ, ಕಟ್ಟು ಆ ಮೇಕೆ ಅಲ್ಲಿ ಒದ್ದಾಕಿ ಬಿಡ್ತೇನೆ, ಸೂಳೆ ಮಕ್ಕಳಾ” ಎಂದು ಪ್ರತಿಯೊಬ್ಬ ದಲಿತನನ್ನೂ ಕರೆದನು.

ಅವರು “ಸ್ವಾಮಿ ನಾವೇನು ತಪ್ಪು ಮಾಡಿಲ್ಲ ನಮ್ಮನ್ಯಾಕೆ ಬೈತೀರಿ ಸ್ವಾಮೇರಾ?” ಎಂದಾಗ ಆ ಯಜಮಾನ “ಬೋಳಿ ಮಗನೇ ತಿಕದ ಮ್ಯಾಲೆ ಒದೀತೀನಿ ನೋಡು. ಬಾಯಿ ಬಿಟ್ರೆ” ಎಂದು ಗದರಿಸಿದ. ದಲಿತರು ತೆಪ್ಪಗಾದರು.

 

ಬಳಿಕ ಯುವವಕೀಲರತ್ತ ಬೆರಳು ತೋರಿಸಿದ ಯಜಮಾನ “ಯಾರಿವ, ನಿಮ್ಮ ಕೇರಿಗೆ ಯಾಕೆ ಬರ್ತಾ ಇದ್ದಾನೆ?” ಎಂದು ಪ್ರಶ್ನಿಸಿದ.

ಆಗ ದಲಿತರು, “ಈತನ ಹೆಸರು ಬಸವಲಿಂಗಪ್ಪ ಅಂತ ಹೇಳಿ. ಈತ ಹರಿಹರದವ, ನಮ್ಮತ್ರಕ್ಕೆ ಬಂದು ನಮ್ಮ ಮಕ್ಕಳನ್ನು ಸ್ಕೂಲಿಗೆ ಕಳುಹಿಸಿ ಕೊಡಿ ಅಂತ ಗಂಟು ಬಿದ್ದಾನೇ. ಸ್ವಾಮೇರ ಸ್ಕೂಲು ಪಾಲು ನಮಗ್ಯಾಕೆ ನೀವೇ ಹೇಳಿ” ಎಂದರು.

 

ಆಗ ಯಜಮಾನ ಮತ್ತೆ ಗುಡುಗಿದ, “ಸೂಳೆಮಕ್ಕಳಾ ತಿಕ ಮುಚ್ಚಿಕೊಂಡು ಈ ಯಪ್ಪನನ್ನ ನಿಮ್ಮ ಓಣಿಗೆ ಕರೆದುಕೊಂಡು ಹೋಗಿ ಅವನು ಹೇಳಿದಾಂಗೆ ಕೇಳ್ರೀ ಇಲ್ಲಾ ಅಂದ್ರ ಒಬ್ಬೊಬ್ಬನ ಚರ್ಮ ಸಿಗಿದು ಹಾಕಿ ಬಿಡ್ತೇನೆ” ಎಂದನು.

 

ಯಜಮಾನನ ಆ ಬೆಂಕಿಯಂತ ಬೆದರಿಕೆಯನ್ನು ಕೇಳಿ ದಲಿತರು, ವಕೀಲರನ್ನು ಅವರನ್ನು ತಮ್ಮ ಕೇರಿಗೆ ಕರೆದುಕೊಂಡು ಬಂದರು.

 

ಅಂದು ಆ ಯುವ ವಕೀಲರ ಮನಸ್ಸಿನಲ್ಲಿ ಒಂದು ಆಲೋಚನೆ ಮೊಳಕೆಯೊಡೆಯಿತು: “ಬದಲಾವಣೆ, ತಿಳುವಳಿಕೆ ಅಥವಾ ನಮ್ರತೆಯಿಂದ ತರುವಂತಹದ್ದಲ್ಲ. ಒತ್ತಾಯದಿಂದಲೇ ತರುವಂತಹದ್ದು!” ಎಂದು ನಿರ್ಧರಿಸಿದರು. ಹೀಗೆಯೇ ಅವರು ತಮ್ಮ ವಿದ್ಯಾಭ್ಯಾಸ ಪೂರೈಸಿ ದಲಿತರ ಶಿಕ್ಷಣದತ್ತ ಗಮನ ಹರಿಸಿದರು.

 

ಹೌದು, ಅಂದು ಸೈಕಲ್ ಏರಿ ಹೋಗಿ ಶಿಕ್ಷಣದ ಕ್ರಾಂತಿಗೆ ಮುನ್ನುಡಿ ಬರೆದ ಆ ಯುವ ವಕೀಲರು ಮತ್ಯಾರೂ ಅಲ್ಲ, ಕರ್ನಾಟಕದ ಇತಿಹಾಸದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ, ಮಾಜಿ ಸಚಿವರಾದ ಶ್ರೀ ಬಿ. ಬಸವಲಿಂಗಪ್ಪನವರು!

 

ಶಿಕ್ಷಣಕ್ಕಾಗಿ ಅವರು ಪಟ್ಟ ಶ್ರಮ ಮತ್ತು ಅವರು ಕಲಿತ ಆ ಜೀವನ ಪಾಠ ಇಂದಿಗೂ ನಮಗೆಲ್ಲರಿಗೂ ಆದರ್ಶ.

~ವಿ.ಆರ್.ಸಿ.

 

ಮಾಹಿತಿ ಕೃಪೆ: ಬಿ. ಬಸವಲಿಂಗಪ್ಪ, ಪ್ರತಿಭಾವಂತ ಸಂಸದೀಯ ಪಟುಗಳ ಬದುಕು-ಬರೆಹ ಮಾಲಿಕೆ. (2016) ಲೇಖಕರು: ಡಾ. ಎಸ್ ನಾಗರಾಜು. ಪುಟ: 5, 6 ಮತ್ತು 7

 

#BBasavalingappa #DalitHistory #EducationRevolution #DrBRAmbedkar #KarnatakaHistory #InspirationalStory #SocialJustice #KannadaBooks #KannadaLiterature #Equality #SocialReform