ಹೈದರಾಬಾದಿನ ನಿಜಾಂ ಇವರ ಸೌಂದರ್ಯಕ್ಕೆ ಮಾರು ಹೋಗಿ 62 ಲಕ್ಷ ರೂಪಾಯಿ ಮೆಹರ್ ಹಣವಾಗಿ ನೀಡಿದ್ದ ಕ್ರಿ.ಶ 1931ರಲ್ಲಿ.
ಆಕೆ ಪಾನ್ (ಎಲೆ) ಅಗೆದು ನುಂಗಿದಾಗ ಆಕೆಯ ಗಂಟಲು ಕೆಂಪು ಕೆಂಪಾಗಿ ಪಾರದರ್ಶಕವಾಗಿ ಕಾಣಿಸುತ್ತಿತ್ತು. ಎಂದು ಆ ಮಟ್ಟಿಗೆ ಆಕೆಯ ಮೈಬಣ್ಣ ಬಿಳುಪಾಗಿತ್ತೆಂದು ಹೈದರಾಬಾದಿನ ಹಿರಿ ತಲೆಗಳು ವರ್ಣಿಸುವರು.
ಅಂದಿನ ಕಾಲದ ವಿಶ್ವದ 10 ಸುಂದರಿಯರಲ್ಲಿ ಇಬ್ಬರು ಹೈದರಾಬಾದಿನ ನಿಜಾಮನ ಸೊಸೆಯಂದಿರು.
ಆ ರಾಣಿಯರು ಬೇರಾರೂ ಅಲ್ಲ ತುರ್ಕಿಯ ಕೊನೆಯ ಸುಲ್ತಾನ್ ಅಬ್ದುಲ್ ಮಝೀದ್ ರವರ ಸುಪುತ್ರಿಯರು.
ಸುದೀರ್ಘ 800 ವರ್ಷಗಳ ಕಾಲ ಐರೋಪ್ಯ ರಾಷ್ಟ್ರಗಳಿಗೆ ಸೆಡ್ಡು ಹೊಡೆದು ಆಳ್ವಿಕೆ ಮಾಡಿದ ಉಸ್ಮಾನಿಯಾ ಖಿಲಾಫತ್ತಿನ ಮನೆಮಕ್ಕಳು.

ಬನ್ನಿ ಎತ್ತಣ ತುರ್ಕಿ ಎತ್ತಣ ಹೈದ್ರಾಬಾದ್ ಇತಿಹಾಸದ ಕನ್ನಡಕ ಧರಿಸಿ ನೋಡೋಣ.
ದೇಶ ಯಾವುದಾದರೂ ಎಷ್ಟು ದೊಡ್ಡ ಹಿನ್ನಲೆ ಇದ್ದರೂ ಹೆಣ್ಣು, ಹೆಣ್ಣೇ ಬಡವರ ಪಾಲಿನ ತಾಯಿ ಕರುಣಾಮಯಿ ಮೊಹತರಮಾ ದುರ್ರೇ ಶವಾರ್ ಸಾಹಿಬಾ ರವರ ಜೀವನದ ಘಟನಾವಳಿಗಳನ್ನು ನೋಡೋಣ….

ದೀರ್ಘ ಇತಿಹಾಸವುಳ್ಳ ಉಸ್ಮಾನಿಯ ಖಿಲಾಫತ್ ದುಷ್ಟ ಕಮಾಲ್ ಪಾಷಾನ ಕುತಂತ್ರಕ್ಕೆ ಕೊನೆಗೊಂಡಿತು.ಗತ್ತಿನಿಂದ ನ್ಯಾಯ ನಿಷ್ಠೆಯಲ್ಲಿ ಆಳ್ವಿಕೆ ಮಾಡಿದ ಸುಲ್ತಾನನ್ನೇ ತುರ್ಕಿಯಿಂದ ಗಡಿಪಾರು ಮಾಡಲಾಯಿತು.
ಭಾರತ ಸೇರಿದಂತೆ ಹಲವೆಡೆ ಖಿಲಾಫತ್ ಚಳುವಳಿಯೂ ನಡೆಯಿತು. ಗಾಂಧೀಜಿಯವರು ಸಹ ಇದಕ್ಕೆ ಕರೆ ನೀಡಿದರು. ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಾದ ಶೌಕತ್ ಅಲಿ ಝೌಹರ್ ಸಹೋದರರು ಈ ಚಳುವಳಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೊಡಗಿಸಿಕೊಂಡಿದ್ದರು.
ಇದೆಲ್ಲ ನಡೆಯುವ ವೇಳೆಗೆ ಕಾಲ ಮಿಂಚಿ ಹೋಗಿತ್ತು. ಸುಲ್ತಾನ ತನ್ನ ಪೂರ್ತಿ ಕುಟುಂಬದೊಂದಿಗೆ ತುರ್ಕಿಯಿಂದ ಹೊರದೊಬ್ಬಲ್ಪಟ್ಟ. ಪ್ಯಾರೀಸ್ ನಗರದಲ್ಲಿ ಜನಸಾಮಾನ್ಯರಂತೆ ದಿನಗಳು ದೂಡುವ ದಾರುಣ ಸ್ಥಿತಿ ಕಂಡು ಹೈದರಾಬಾದಿನ 8ನೇ ನಿಜಾಂ ಮೀರ್ ಉಸ್ಮಾನ್ ಅಲೀ ಖಾನ್ 300 ಪೌಂಡ್ಸ್ ಗಳ ಮಾಶಾಸನ ಕೊಡಲು ಮುಂದೆ ಬಂದರು.
ಖಲೀಫಾ ಅಬ್ದುಲ್ ಮಜೀದ್ ರವರ ಮಗಳಾದ ದುರ್ರೇ ಶಾವಾರ್ ರವರಿಗೆ ವರ ನೋಡುತ್ತಿರುವ ಸುದ್ದಿ ಕೇಳಿ ಜಗತ್ತಿನ ಹಲವೆಡೆಯಿಂದ ದೊಡ್ಡ ದೊಡ್ದ ಸಿರಿವಂತ ಸಂಸ್ಥಾನದಿಂದ ಪೈಪೋಟಿ ಆರಂಭವಾಯಿತು.ತುರ್ಕಿಯ ಸುಲ್ತಾನ ಈಗ ಬಡತನದ ದಿನಗಳನ್ನು ದೂಡಿದರು ಸಹ ಮುಸ್ಲಿಂ ಜಗತ್ತಿನಲ್ಲಿ ಹೆಮ್ಮೆಯ ಮನೆತನ ಎಂಬ ಹೆಗ್ಗಳಿಕೆ ಇನ್ನೂ ಶ್ರೀಮಂತವಾಗಿಯೇ ಇತ್ತು.
ಬಿಳಿ ತೊಗಲಿನ ಗೊಂಬೆ ಅಂತಹ ರೂಪವಂತೆಯಾದ ಸುಲ್ತಾನನ ಮಗಳ ಸೌಂದರ್ಯಕ್ಕೆ ಮಾರುಹೋದ ಜಗತ್ತಿನ ಹಲವು ಷಾಹಿ ಮನೆತನಗಳ ಪೈಕಿ ಇರಾನಿನ ಶಾಹಿ ಮತ್ತು ಈಜಿಪ್ಟಿನ ಶಾಹಿ ಸುಲ್ತಾನರು ಮುಂದೆ ಬಂದರು.
ಸುಲ್ತಾನ್ ಅಬ್ದುಲ್ ಮಜೀದ್ ರವರಿಗೆ ಹೈದರಾಬಾದಿನ ನಿಜಾಂನ ಕಡೆಯಿಂದಲೂ ವಧು ಅನ್ವೇಷಣೆ ಬಂದಿದೆ ಎಂಬ ಸುದ್ದಿ ಬಂದಿತ್ತು. ಸುಲ್ತಾನನಿಗೆ ಈ ಹಿಂದೆ ನಿಜಾಂರಿಂದ ಪಡೆದ ಮಾಶಾಷನದ ಹಂಗು ಕಟ್ಟಿ ಹಾಕಿತು. ಬೇರೆ ವಿಧಿ ಇಲ್ಲ ಎಂದಾಗ ಸುಲ್ತಾನ ಅತೀ ಹೆಚ್ಚು ಮಹರ್ ಹಣದ ಬೇಡಿಕೆ ಇಟ್ಟ. ಇದರಿಂದಾದಲೂ ಹಿಂದೆ ಸರಿಯಬಹುದು ಎಂದು ಆತನ ಅಂದಾಜಾಗಿತ್ತು.ವಾಸ್ತವವಾಗಿ ದೂರದ ಹೈದರಾಬಾದಿಗೆ ತನ್ನ ಮಗಳನ್ನು ಕೊಡಲು ಈತನ ಮನಸ್ಸು ಒಪ್ಪದಿದ್ದರೂ, ನಿಜಾಂನ ಹಂಗು ತೊರೆಯುವುದೆಂದರೆ ಒಂದು ತರಹದ ಧರ್ಮ ಸಂಕಟ!!.
ಮುಸ್ಲಿಂರಲ್ಲಿ ವಧುವಿಗೆ ಕೊಡುವ ಮೆಹರ್ ಹಣಕ್ಕೆ ಬಹಳ ಪ್ರಾಮುಖ್ಯತೆ ಇದೆ.
ಸ್ವಲ್ಪ ಬುದ್ಧಿ ಓಡಿಸಿದ ಸುಲ್ತಾನ ಹೆಚ್ಚಿನ ಮೆಹರ್ ಕೇಳಿದರಾಯಿತು ಆಗ ನಿಜಾಂ ಹಿಂದೆ ಸರಿಯಬಹುದು ಎಂದು ಯೋಚಿಸಿದ. ಸುಮಾರು 50 ಸಾವಿರ ಪೌಂಡ್ಸ್ ಗಳ ಬೇಡಿಕೆ ಇಟ್ಟನು. ಇಂದಿನ ಮೌಲ್ಯ ಸುಮಾರು 62 ಲಕ್ಷ ರೂಪಾಯಿ. ಆದರೆ ಮೀರ್ ಉಸ್ಮಾನ್ ಅಲೀ ಖಾನ್ ರವರಿಗೆ ಈ ಮೊತ್ತ ಲೆಕ್ಕವೇ ಅಲ್ಲ ಎಂಬುದು ಸುಲ್ತಾನನಿಗೆ ತಿಳಿದಿರಲಿಲ್ಲ. ನಿಜಾಮನು ಪೇಪರ್ ವೆಟ್ ಆಗಿ ಬಳಸುವ ವಜ್ರದ ಬೆಲೆಯೇ ಸುಮಾರು 100 ಕೋಟಿಯಷ್ಟು ಮೌಲ್ಯದಾಗಿತ್ತು. ರೋಲ್ಸ್ ರಾಯ್ ಕಾರುಗಳು ಸೇರಿದಂತೆ ಹೈದರಾಬಾದ್ ತುಂಬೆಲ್ಲ ಅರಮನೆಗಳೇ ತುಂಬಿಹೋಗಿದ್ದವು.
ನಿಜಾಮ ಕೂಡಲೇ ಆ ಮೆಹರ್ ಕೊಡಲು ಒಪ್ಪಿದ. ಸುಲ್ತಾನ ಅನಿವಾರ್ಯವಾಗಿ ಮಗಳನ್ನು ಕೊಡಲು ಒಪ್ಪಲೇ ಬೇಕಾಯಿತು.ದೂರದ ನಾಡಿನಲ್ಲಿ ತನ್ನ ಪ್ರೀತಿಯ ಮಗಳು ಒಬ್ಬಳೇ ಇರುವುದು ಕಷ್ಟ. ಅದೇ ತನ್ನ ಸಹೋದರನ ಮಗಳು ಮತ್ತು ತನ್ನ ಮಗಳು ಜೊತೆಗೆ ಹೈದರಾಬಾದ್ ಸಂಸ್ಥಾನದ ಸೋಸೆಯಾದರೆ ಜೊತೆಜೊತೆಗೆ ಇರುವರು ಎಂದು ಯೋಚಿಸಿ. ಸಹೋದರನ ಮಗಳು ನಿಲೋಫರ್ ಸಾಹಿಬಾ ರವರನ್ನು ನಿಜಾಂನ ಕಿರಿಯ ಪುತ್ರನಿಗೆ ಮತ್ತು ತನ್ನ ಮಗಳಾದ ದುರ್ರೇ ಶಾವಾರ್ ರವರನ್ನು ನಿಜಾಂನ ಹಿರಿಯ ಪುತ್ರ ಶಹಜಾದಾ ಆಜಂ ಜಹಾ ರಿಗೆ ಕೊಡುವುದೆಂದು ನಿಶ್ಚಿಯವಾಯಿತು. ಈ ಮೂಲಕ ಮುಸ್ಲಿಂ ಜಗತ್ತಿನ ಎರಡು ದೊಡ್ಡ ಷಾಹಿ ಮನೆತನಗಳ ನಡುವೆ ವೈವಾಹಿಕ ಸಂಬಂಧ ಏರ್ಪಟ್ಟಿತು. ಆ ಕಾಲಕ್ಕೆ ಇವರು ಪಾಶ್ಚಾತ್ಯ ಶಿಕ್ಷಣ ಪಡೆದು ಯಾವ ಗಂಡಸಿಗೂ ಕಮ್ಮಿ ಇಲ್ಲ ಎಂಬಂತೆ ಪೈಲೆಟ್ ಆಗಿ ಸಾಧನೆ ಮಾಡಿದ್ದರು.

ಇಸವಿ 1931 ರಲ್ಲಿ ತನ್ನೆರಡು ಮಕ್ಕಳನ್ನು ನಿಜಾಂ ಮೀರ್ ಉಸ್ಮಾನ್ ಅಲೀ ಖಾನ್ ಪ್ರಾನ್ಸ್ ಗೆ ವಿವಾಹಕ್ಕೆಂದು ಕಳುಹಿಸಿದನು.
ಖಲೀಫಾ ಅಬ್ದುಲ್ ಮಜೀದ್ ನಿಖಾ ನೆರವೇರಿಸಿದರು.
ನವದಂಪತಿಗಳು ಪ್ರಾನ್ಸನಿಂದ ಭಾರತದತ್ತ ಹಡಗಿನ ಮೊದಲನೇ ಐಷಾರಾಮಿ ಕೊಠಡಿಯಲ್ಲಿ ಪಯಣ ಬೆಳೆಸಿದರು.
ಮಾರ್ಗ ಮಧ್ಯೆ ಷಹಜಾದಿಯಾ ಅರ್ಥಾತ್ ಯುವರಾಣಿಯರಿಗೆ ದಖ್ಖನ್ ಸಂಸ್ಕೃತಿ ಭಾರತೀಯ ಉಡುಗೆಯಾದ ಸೀರೆಯನ್ನು ತೊಡುವುದು ಮತ್ತು ನಿಜಾಂರ ಎದುರಿಗೆ ಬರುವಾಗ ಯಾವ ರೀತಿಯಾಗಿ ನಯ ವಿನಯದಿಂದ ಹಾಜರಾಗಬೇಕು,ಎಂಬೆಲ್ಲ ದಖ್ಖನ್ ರೀತಿ ರಿವಾಜುಗಳನ್ನು ಮಾರ್ಗದುದ್ದಕ್ಕೂ ಹೇಳಿ ಕೊಡಲಾಯಿತು.
ಹುಡಗು ಮುಂಬೈ ತಲುಪಿತು. ಅಲ್ಲಿಂದ ಟ್ರೈನಿನ ಮೂಲಕ ವಧುವರರು ಹೈದರಾಬಾದಿಗೆ ಆಗಮಿಸಿದರು.ನಿಜಾಂ ಕುಟುಂಬದ ನವದಂಪತಿಗಳನ್ನು ಸ್ವಾಗತಿಸಲು ಇಡೀ ಹೈದರಾಬಾದ್ ಸಜ್ಜುಗೊಂಡಿತ್ತು. ರಾಣಿಯರಿಗೆ ಸೀರೆ ತೊಟ್ಟು ನಡೆಯುವುದು ಬಹಳ ಕಷ್ಟಕರವಾಗಿತ್ತು ಆದರೂ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆಯಲಾರಂಭಿಸಿದರು.
ಖುಷಿ ಖುಷಿಯಾಗಿ ದಾಂಪತ್ಯ ಜೀವನ ಕಳೆದ ದುರ್ರೇ ಶಾವಾರ್ ರವರಿಗೆ ಇಬ್ಬರು ಗಂಡು ಮಕ್ಕಳು ಜನಿಸುವರು ಮುಖರ್ರಂ ಜಹಾಂ ಮತ್ತು ಮುಫಖಂ ಜಹಾಂ.
ಹೈದರಾಬಾದ್ ಸೋಸೆಯಾಗಿ ಬಂದ ದುರ್ರೇ ಶಾವಾರ್ ಅತ್ಯಂತ ಮುಂದಾಲೋಚನೆ ಮತ್ತು ಆಧುನಿಕತೆಗೆ ಪ್ರೋತ್ಸಾಹ ನೀಡುವ ಮಹಿಳೆಯಾಗಿದ್ದರು. ಯಾಕುತ್ ಪುರದಲ್ಲಿ ಬಾಲಕೀಯರ ಪಿಯು ಕಾಲೇಜು ಮತ್ತು ಹತ್ತು ಹಲವು ಮಹಿಳಾ ಸಬಲೀಕರಣದ ಸಂಘ ಸಂಸ್ಥೆಗಳ ಸ್ಥಾಪಿಸಿ ಸಾಮಾಜಿಕ ಕಾರ್ಯಗಳ ಮೂಲಕ ಹೈದರಾಬಾದಿನ ಮಹಿಳೆಯರಿಗೆ ಶಕ್ತಿ ತುಂಬುತ್ತಿದ್ದರು. ಪುರಾನೀ ಹವೇಲಿ ಹಳೆಯ ಅರಮನೆಯ ವಠಾರದಲ್ಲಿ ಸಾರ್ವಜನಿಕ ದುರ್ರೇ ಶಾವಾರ್ ಹಾಸ್ಪಿಟಲ್ ಸಹ ನಿರ್ಮಿಸಿದರು.
ಈಕೆಯ ಸಾಮಾಜಿಕ ಕಾರ್ಯಗಳ ನೆನೆದು ಹೈದರಾಬಾದ್ ಸಂಸ್ಥಾನದ ಜನತೆ ದುರ್ರೇ ಶಾವಾರ್ ಅಥವಾ ದುರ್ದಾನ ಬೇಗಂ ಸಾಹೀಬಾ ರವರಿಗೆ ಕೃತಜ್ಞರಾಗಿದ್ದರು.
ಇನ್ನು ವಿಶ್ವ ಸುಂದರಿಯಾಗಿ ನಿಜಾಮನಿಂದ ಕೋಹಿನೂರ್ ಎಂದು ಹೊಗಳಿಕೆ ಗಿಟ್ಟಿಸಿಕೊಂಡ ರಾಣಿ ನಿಲೋಫರ್ ಸಹ ತನ್ನ ಸಹೋದರಿ ದುರ್ರೇ ಶಾವಾರ್ ತರಹವೇ ಹತ್ತು ಹಲವು ಸಾಮಾಜಿಕ ಕಾರ್ಯಗಳ ಮೂಲಕ ಹೈದರಾಬಾದಿನ ಮಹಿಳೆಯರಿಗೆ ಶಕ್ತಿ ತುಂಬಿದರು. ತನಗೆ ಮಕ್ಕಳಿಲ್ಲ ಎಂಬ ಕೊರಗಿನ ನಡುವೆಯೂ ಹೆರಿಗೆ ಆಸ್ಪತ್ರೆ ನಿರ್ಮಿಸಿ ಹಲವಾರು ಮಕ್ಕಳ ತಾಯಿಯಾಗಿ ಮಾನವೀಯತೆ ಮೆರೆದರು. ಇವರು ಫ್ರಾನ್ಸ್ ಯಾತ್ರೆಯಲ್ಲಿದ್ದಾಗ ಹೈದರಾಬಾದ್ ಸಂಸ್ಥಾನ ಇನ್ನಿಲ್ಲ ಎಂಬ ಸುದ್ದಿ ಕೇಳಿ ಆಘಾತಗೊಂಡ ಮತ್ತೆಂದೂ ಹೈದರಾಬಾದಿಗೆ ಮರಳಲಿಲ್ಲ ಫ್ರಾನ್ಸ್ ನಲ್ಲೇ ನಿಧನ ಹೊಂದಿದರು.
ಹೈದರಾಬಾದ್ ಸಂಸ್ಥಾನದ ಕೊನೆಯ ನಿಜಾಮನ ಗುರುಗಳ ಮರಿ ಮೊಮ್ಮಗ ನನ್ನ ಆತ್ಮೀಯ ಸ್ನೇಹಿತ ಡಾ.ಮುಬಸ್ಸಿರ್ ಅಲೀ ಖಾನ್ ರವರೊಂದಿಗೆ ಗಂಟೆಗಟ್ಟಲೆ ಸಮಯ ಸಿಕ್ಕಾಗ ಅವರ ಕುಟುಂಬ ಮತ್ತು ನಿಜಾಂರ ಸಂಬಂಧದ ಕುರಿತು ಮಾತನಾಡುತ್ತಿರುತ್ತೇವೆ.
*ನಿಜಾಮರ ಆ ಒಂದು ದೊಡ್ಡ ತಪ್ಪು ಜಾತ್ಯಾತೀತರಾಗಿ ಸುದೀರ್ಘ 200 ವರ್ಷಗಳ ಕಾಲ ಆಳ್ವಿಕೆ ಮಾಡಿದ ಅವರ ಇತಿಹಾಸವನ್ನೇ ಅಳಿಸಿ ಹಾಕಿತು.*

ಹೈದರಾಬಾದ್ ಸಂಸ್ಥಾನವು ಕ್ರಿ.ಶ 1724 ರಿಂದ 1948 ರವರೆಗೆ ಸುದೀರ್ಘ 200 ವರ್ಷಗಳ ಕಾಲ ಅಸ್ತಿತ್ವದಲ್ಲಿತ್ತು.
ಇವರು ಕಾಲಕ್ಕೆ ತಕ್ಕಂತೆ ಶಿಕ್ಷಣ ಕ್ಷೇತ್ರಕ್ಕೆ ಬಹಳ ಪ್ರಾಮುಖ್ಯತೆ ನೀಡಿದರು.ಹೈದರಬಾದಿನಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯ ಸೇರಿದಂತೆ ಪ್ರತಿ ಜಿಲ್ಲಾ ಕೇಂದ್ರಗಳಿಗೆ ಶಾಲೆಗಳನ್ನು ನಿರ್ಮಿಸಿದರು. ಹಾಗೂ ಆಧುನಿಕ ವೈದ್ಯಕೀಯ ಶಿಕ್ಷಣಕ್ಕೂ ಉತ್ತೇಜನ ನೀಡಿದರು. ರೈಲ್ವೆ, ಮೂಲಸೌಕರ್ಯ ಹಾಗೂ ಸಾರ್ವಜನಿಕ ಸೇವೆಗಳ ಅಭಿವೃದ್ಧಿಯಲ್ಲೂ ಪ್ರಮುಖ ಪಾತ್ರವಹಿಸಿದರು.
1908ರ ಮೂಸಿ ಪ್ರವಾಹದ ಸಂದರ್ಭದಲ್ಲಿ ತಮ್ಮ ಅರಮನೆಗಳನ್ನೇ ಸಾರ್ವಜನಿಕರ ಸೇವೆಗಾಗಿ ಮೀಸಲಿಟ್ಟರು.ದರ್ಗಾ ಮಸೀದಿಗಳಲ್ಲಿ ಪ್ರಾರ್ಥನೆಗೆ ಕರೆಕೊಟ್ಟಂತೆ ಕಟ್ಟಾ ಮೈಸಮ್ಮ ದೇವಸ್ಥಾನದಲ್ಲಿ ಪೂಜೆ ಹೋಮಗಳನ್ನು ಮಾಡಿಸಲು ಸುತ್ತೊಲೆ ಹೊರಡಿಸಿದ್ದರು.ಅವರ ಜಾತ್ಯಾತೀತ ಮನೋಭಾವಕ್ಕೆ ಇಂತಹ ಸಾವಿರಾರು ಉದಾಹರಣೆಗಳು ಕಾಣಬಹುದು. ಹೈದರಾಬಾದ್ ಸಂಸ್ಥಾನದ ವ್ಯಾಪ್ತಿಯಲ್ಲಿ ಬರುವ ಆಯಾ ಹಳ್ಳಿಗಳಿಗೆ ಪೋಲಿಸ್ ಪಾಟೀಲ್,ಮಾಲೀ ಪಾಟೀಲ್,ದೇಸಾಯಿ, ದೇಶಮುಖ್ ಮತ್ತು ಕುಲ್ಕರ್ಣಿಗಳಾಗಿ ಭಾಗಶಃ 80 ಪ್ರತಿಶತ ಮುಸ್ಲಿಮೇತರಿಗೆ ಆದ್ಯತೆ ಕೊಟ್ಟಿದ್ದರು.ಹಾಗೆಯೇ ತಮ್ಮ ಪ್ರಧಾನ ಮಂತ್ರಿಯಾಗಿ ಮಹಾರಾಜ್ ಕಿಶನ್ ಪ್ರಸಾದರನ್ನು ನೇಮಿಸಿದ್ದರು.ಇವರು ಚಲಾವಣೆಗೆ ತಂದ ಐದು ರೂಪಾಯಿ ನೋಟಿನಲ್ಲಿ ಕನ್ನಡ ಸೇರಿದಂತೆ ತೆಲುಗುವನ್ನು ಸೇರಿಸಿದರು. ಧರ್ಮ-ಭಾಷೆಗಳ ನಡುವೆ ಸಮಾನತೆ ಕಾಯ್ದುಕೊಂಡ ಆಡಳಿತ ನಡೆಸಿದರು.

ಮೈಸೂರು ರಾಜ್ಯದಲ್ಲಿ ಅಮೀನುಲ್ ಉಲ್ ಮುಲ್ಕ್ ಎಂದು ನಾಲ್ವಡಿ ಕೃಷ್ಣರಾಜ ಒಡೆಯರ್ ರವರಿಂದ ಬಿರುದು ಪಡೆದಿದ್ದ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ರವರು ಒಡೆಯರ್ ನಿಧನದ ನಂತರ ಜಯಪುರದಲ್ಲೂ ಮತ್ತು 1946ರಿಂದ1947 ರವರೆಗೆ ಹೈದರಾಬಾದ್ ಸಂಸ್ಥಾನದಲ್ಲೂ ದಿವಾನರಾಗಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಅವರು ಕೊನೆಯ ನಿಜಾಮ ಮತ್ತು ಭಾರತ ಸರ್ಕಾರದ ನಡುವೆ ಸೌಹಾರ್ದ ಸಂಬಂಧ ಬೆಳೆಸಲು ಪ್ರಯತ್ನಿಸಿದರು.
ಆದರೆ ನಿಜಾಮನು ತನ್ನ ಕೊನೆ ಅವಧಿಯಲ್ಲಿ ಸಂಪೂರ್ಣ ಅಶಕ್ತನಾಗಿದ್ದ. ಆತನ ಹಿಡಿತ ಕೇವಲ ಹೈದರಾಬಾದ್ ಪಟ್ಟಣಕ್ಕೆ ಮಾತ್ರ ಸೀಮಿತವಾಗಿತ್ತು. ಇದನ್ನೇ ಲಾಭವಾಗಿ ಪಡೆದ ದುಷ್ಟ ಕಾಸಿಂ ರಿಜ್ವೀ ತನ್ನದೇ ಸ್ವತಂತ್ರ ಸೇನೆಯಾದ ರಝಾಕರರ ಪಡೆ ಕಟ್ಟಿ ಪ್ರಜೆಗಳ ಮೇಲೆ ದೌರ್ಜನ್ಯ ಎಸಗಿದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವವರನ್ನು ಬಂಧಿಸಿ ಸೆರೆಮನೆಗೆ ತಳ್ಳಿದ.ಈ ರಝಾಕರ ಪಡೆ ಸ್ವತಃ ನಿಜಾಂನನ್ನೇ ಲೆಕ್ಕಕ್ಕೆ ಇಟ್ಟಿರಲಿಲ್ಲ. ಇತ್ತ ನಿಜಾಮನು ಖುರ್ಚಿಮೇಲಿನ ಆಸೆಗಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದ.ಸರ್ ಮಿರ್ಜಾ ಇಸ್ಮಾಯಿಲ್ ರವರು ಭಾರತದ ಒಕ್ಕೂಟಕ್ಕೆ ಸೇರಿಸಲು ಬಹಳ ಪ್ರಯತ್ನ ಪಟ್ಟರು. ಕೊನೆಗೆ ಮಿರ್ಜಾ ರವರು ಬೇಸತ್ತು 1947ರ ಮೇ ತಿಂಗಳಲ್ಲಿ ತಮ್ಮ ದಿವಾನ್ ಹುದ್ದೆಗೆ ರಾಜೀನಾಮೆ ನೀಡಿದರು.
1948ರಲ್ಲಿ Operation Polo (ಪೊಲೀಸ್ ಕಾರ್ಯಾಚರಣೆ) ನಡೆಯಿತು ಮತ್ತು ಹೈದರಾಬಾದ್ ಭಾರತಕ್ಕೆ ಸೇರಿತು .
ಕೊನೆಗೂ ಮಣಿದ ಮೀರ್ ಉಸ್ಮಾನ್ ಅಲೀ ಖಾನ್ ತಮ್ಮ ಅವಧಿಯಲ್ಲಿ ನಿರ್ಮಿಸಲಾದ
ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಹೈದರಾಬಾದ್ ರೈಲ್ವೆ, ಹೈದರಾಬಾದ್ ಏರ್ಪೋರ್ಟ್, ಉಸ್ಮಾನಿಯಾ ವಿಶ್ವವಿದ್ಯಾಲಯ ಮತ್ತು ಅರಮನೆಗಳನ್ನು ಭಾರತ ಸರ್ಕಾರಕ್ಕೆ ಒಪ್ಪಿಸಿ ಶರಣಾದ.

ನಿಜಾಮನಿಗೆ ಭಾರತ ಸರ್ಕಾರ ರಾಜ್ ಪ್ರಮುಖ ಹುದ್ದೆ ನೀಡಿತು. ಇದು ಆತನ ಮರಣದ ತನಕ ಮುಂದುವರೆಯಿತು.
ದುರ್ರೇ ಶವಾರ್ ರವರ ಹಿರಿಯ ಪುತ್ರನನ್ನು 8ನೇ ನಿಜಾಮನಾಗಿ ನಿಜಾಂ ಕುಟುಂಬ ಸರ್ವಾನುಮತದಿಂದ ಆಯ್ಕೆ ಮಾಡಿದರು. ಈತ 2023 ರಲ್ಲಿ ತುರ್ಕಿಯ ರಾಜಧಾನಿ ಇಸ್ತಾಂಬುಲನಲ್ಲಿ ನಿಧನ ಹೊಂದಿದನು.ಆತನ ಪಾರ್ಥಿವ ಶರೀರವನ್ನು ಭಾರತಕ್ಕೆ ತಂದು ಹೈದರಾಬಾದಿನ ಮಕ್ಕಾ ಮಸೀದಿ ಆವರಣದಲ್ಲಿ ಅವರ ಪೂರ್ವಜರ ಸಮಾಧಿಗಳ ಪಕ್ಕ ದಫನ್ ಮಾಡಲಾಯಿತು.ಈಗ ದುರ್ರೇ ಶವಾರ್ ರವರ ಮೊಮ್ಮಗ ನಿಜಾಂ ಮನೆತನದ 9ನೇ ದೊರೆಯಾಗಿ ಅಜ್ಮತ್ ಜಹಾಂ ಬಹದ್ದೂರ್ ರವರಿಗೆ ಪಟ್ಟಾಭಿಷೇಕ ಮಾಡಲಾಗಿದೆ. ಇವರು ಪ್ರಸ್ತುತ ಹೊರದೇಶದಲ್ಲಿ ಇರುವರು.ವರ್ಷಕ್ಕೊಮ್ಮೆ ಮೊಹರಂ ಮಾಸದಲ್ಲಿಯೂ ಮತ್ತು ಆಸ್ಥಾನಕ್ಕೆ ಸಂಭಂದಪಟ್ಟ ವಿಶೇಷ ಸಂದರ್ಭಗಳಲ್ಲೂ ಹೈದರಾಬಾದ್ ಬರುವರು. ಇವರ ಮನೆತನದ ಇತರೆ ಸದಸ್ಯರು ಹೈದರಾಬಾದ್ ನಗರದಲ್ಲೇ ವಾಸವಾಗಿದ್ದಾರೆ.
~ Sayyed G S Patel
*BBC Urdu
*The Beloved Turkish Princess
*Azeeb wa gareeb Tareeq page london












