ಕಿನ್ನಿಗೋಳಿ – ಮೂಡುಬಿದಿರೆ ನಡುವೆ ಸಂಚರಿಸುವರಿಗೆ ಸಂಪಿಗೆ ಎಂಬಲ್ಲಿ ರಸ್ತೆಯ ಬದಿಯಲ್ಲಿ ಬೃಹದಾಕಾರದ ಗುಡ್ಡವೊಂದರ ನೆಲಸಮ ಕಾರ್ಯಾಚರಣೆ ಗಮನ ಸೆಳೆಯುತ್ತದೆ.
ಎರಡು ತಿಂಗಳ ಈಚೆಗೆ ಹಲವು ಬಾರಿ ಈ ರಸ್ತೆಯಲ್ಲಿ ನಾನು ಓಡಾಡಿದ್ದೇನೆ. ಯಾವುದೊ ಬೃಹತ್ ಪ್ರಾಜೆಕ್ಟ್ ಮಾದರಿಯಲ್ಲಿ ಮುಂಭಾಗವನ್ನು ಎತ್ತರದ ತಗಡು ಶೀಟ್ ನಲ್ಲಿ ಬಂದ್ ಮಾಡಿ, ದೈತ್ಯಾಕಾರದ ಯಂತ್ರಗಳಿಂದ ಗುಡ್ಡದ ಮಣ್ಣು ತೆಗೆಯುವುದು ಬೃಹತ್ ಗಾತ್ರದ ಅಂದರೆ 12, 16 ಚಕ್ರದ ಟ್ರಕ್ ಗಳ ಮೂಲಕ ಮಣ್ಣು ಸಗಾಟ ಮಾಡುವುದು ಸಹಜವಾಗಿ ಕುತೂಹಲ ಮೂಡಿಸುತ್ತಿತ್ತು.
ಇಂದು ಆ ಭಾಗದಲ್ಲಿ ಸಂಚರಿಸುವಾಗ ಒಂದಿಷ್ಟು ಹೊತ್ತು ನಿಂತು ಪರಿಶೀಲಿಸಿದೆ, ಫೋಟೋ ಗಳನ್ನು ಹೊಡೆದೆ. ಈ ಕುರಿತು ಸ್ಥಳೀಯ ಕೆಲವರಲ್ಲಿ ವಿಚಾರಿಸಿದೆ.

ಅವರುಗಳು ತಿಳಿಸಿದ ಮಾಹಿತಿ ಪ್ರಕಾರ, ಇದು ಅಮೂಲ್ಯವಾದ ಬಾಕ್ಸೈಟ್ ಮಣ್ಣಿನ ಗಣಿಗಾರಿಕೆ. ನಿಯಮಗಳನ್ನು ಉಲ್ಲಂಘಿಸಿ ಕೆಂಪು ಮಣ್ಣು ಗಣಿಗಾರಿಕೆ ಇಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಬೆಲೆ ಬಾಳುವ ಈ ಮಣ್ಣು ದೂರದ ಆಂದ್ರ ಪ್ರದೇಶಕ್ಕೆ ರಕ್ಕಸ ಗಾತ್ರದ ಟ್ರಕ್ ಗಳ ಮೂಲಕ ರವಾನೆ ಆಗುತ್ತದೆ. ಯಾವುದೆ ಕಾನೂನುಗಳು ಈ ಲಾಬಿಗಳಿಗೆ ಅನ್ವಯ ಆಗುವುದಿಲ್ಲ. ಸಂಬಂಧ ಪಟ್ಟ ಇಲಾಖೆಗಳು ಕಣ್ಣುಮುಚ್ಚಿ ಕೂತಿವೆ. ಸ್ಥಳೀಯರು ಯಾರೂ ಧ್ವನಿ ಎತ್ತುವ ಧೈರ್ಯ ತೋರುವುದಿಲ್ಲ. ನಮ್ಮ ಕಣ್ಣ ಮುಂದೆಯೆ ಪ್ರಕೃತಿಯ ಮೇಲೆ ನಡೆಯುತ್ತಿರುವ ಅತ್ಯಾಚಾರವನ್ನು, ಲೂಟಿಯನ್ನು ಅಸಹಾಯಕವಾಗಿ ನೋಡುವುದಲ್ಲದೆ ಇನ್ನೇನು ಮಾಡಲು ಸಾಧ್ಯವಿಲ್ಲ, ಎಲ್ಲರೂ ಅವರೊಂದಿಗೆ ಇದ್ದಾರೆ. ಇದೊಂದು ಗುಡ್ಡ ಅಲ್ಲ, ಮೂಡುಬಿದಿರೆ ಸುತ್ತ ಮುತ್ತ ಹಲವು ಕಡೆ ಹಗಲು ರಾತ್ರಿ ಈ ದೋಚುವಿಕೆ ನಡೆಯುತ್ತಿದೆ ಎಂದು ಹೇಳಿದರು.
ನನಗೆ ಅಚ್ಚರಿಯೇನೂ ಆಗಲಿಲ್ಲ. ಉಳ್ಳಾಲ ತಾಲೂಕಿನ ಮುಡಿಪು ಭಾಗದಲ್ಲಿ ಈ ಬಾಕ್ಸೈಟ್ ಮಾಫಿಯಾದ ಕಾರ್ಯಾಚರಣೆ, ಆರ್ಭಟವನ್ನು ನಾನು ಕಂಡಿದ್ದೇನೆ. ಒಂದೆರಡು ಬಾರಿ ಈ ಅಕ್ರಮ ಗಣಿಗಾರಿಕೆ ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ನಮ್ಮ ಭೇಟಿಯ ಸಂದರ್ಭ ಒಂದಿಷ್ಟು ದಿನ ಸ್ಥಗಿತಗೊಂಡು ಮತ್ತೆ ಚಾಲೂ ಆಗುತ್ತದೆ. ಇದೇ ದಂಧೆ ಮೂಡುಬಿದಿರೆಯ ಚಿನ್ನದಂತಹ ಮಣ್ಣಿನ ನೆಲದಲ್ಲೂ ಅಗಾಧ ಪ್ರಮಾಣದಲ್ಲಿ ನಡೆಯುತ್ತಿರುವುದು, ಎಲ್ಲರ ಬಾಯಿಯನ್ನು ಮುಚ್ವಿಸಿರುವುದು ಇಂದು ತಿಳಿಯಿತು.
ಈ ರೀತಿ ಗುಡ್ಡ, ಬೆಟ್ಟಗಳನ್ನು ಎಲ್ಲಾ ಶಕ್ತಿ ಬಳಸಿ ನೆಲಸಮ ಗೊಳಿಸುತ್ತಾ ಹೋದರೆ ಪ್ರಕೃತಿಯ ಸಮತೋಲನ ಏನಾಗಬೇಕು ? ತುಳುನಾಡು, ತುಳುಭಾಷೆ, ಸಂಸ್ಕೃತಿ, ಕಂಬಳ, ಕೋಳಿ ಅಂಕ, ಹುಲಿ ಕುಣಿತ ಎಂದು ತುಳುನಾಡಿನ ರಕ್ಷಣೆಯ ಗುತ್ತಿಗೆ ಪಡೆದವರಂತೆ ಗೋಳಾಡುವವರೆಲ್ಲ ಈ ಅಮೂಲ್ಯವಾದ ಬಾಕ್ಸೈಟ್ ಗಣಿಗಾರಿಕೆ, ತುಳು ಮಣ್ಣಿನ ಮೇಲಿನ ಅತ್ಯಾಚಾರ, ಲೂಟಿಯ ಕುರಿತು ಬಾಯಿ ತೆರೆಯುವುದಿಲ್ಲ. ಇಲ್ಲಿ ಎಲ್ಲರೂ ಅಣ್ಣ ತಮ್ಮಂದಿರೆ ಆಗಿರುತ್ತಾರೆ.
ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದ್ದ ಚರ್ಚೆಯೊಂದು ಗಮನ ಸೆಳೆಯಿತು. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ಅಡ್ಡ ಮತದಾನ ಮಾಡಿದವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರೊಬ್ಬರು ಇದ್ದಾರೆ. ಅವರನ್ನು ಅಡ್ಡ ಮತದಾನ ಮಾಡಿಸಿದ್ದು ಇದೇ ಬಾಕ್ಸೈಟ್ ಮಣ್ಣು ಗಣಿಗಾರಿಕೆ ಮಾಫಿಯಾದ ಹಿತಾಸಕ್ತಿ ಎಂದು. ಇದು ಸತ್ಯ ಆಗಿದ್ದರೂ ಅಚ್ಚರಿ ಏನಿಲ್ಲ. ಬೃಹತ್ ಗುಡ್ಡ ಬೀಳಿಸುವ ಶಕ್ತಿ ಇರುವ ಬಾಕ್ಸೈಟ್ ಮಣ್ಣು ಲಾಬಿಗೆ ಶಾಸಕೊಬ್ಬರನ್ನು ಅಡ್ಡ ಬೀಳಿಸುವುದು ಅಸಾಧ್ಯ ಏನಲ್ಲ.
ಮುನೀರ್ ಕಾಟಿಪಳ್ಳ












