ಕರ್ನಾಟಕ ವಿಧಾನಪರಿಷತ್ ಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಪಕ್ಷ ಆಯ್ಕೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಪಿ.ವಿ.ಮೋಹನ್ ಎನ್ನುವ ಹೆಸರು ನೋಡಿ ಯಾರಿವರು? ಎಂದು ಕೆಲವರ ಹುಬ್ಬು ಮೇಲೇರಿರಬಹುದು. ನನ್ನ ಪ್ರಕಾರ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಅತ್ಯುತ್ತಮ ಆಯ್ಕೆ- ಪಿ.ವಿ.ಮೋಹನ್.
ಇತ್ತೀಚಿಗೆ ಯಾರಾದರೂ ತಮ್ಮನ್ನು ಲಂಕೇಶ್ ಶಿಷ್ಯ ಎಂದು ಪರಿಚಯಿಸಿದ ಕೂಡಲೇ ಅನುಮಾನದಿಂದ ನೋಡುವಂತಾಗಿದೆ. ಆದರೆ ಪಿ.ವಿ.ಮೋಹನ್, ಲಂಕೇಶ್ ಕೂಡಾ ಹೆಮ್ಮೆ ಪಡುವಂತಹ ಅವರ ಶಿಷ್ಯ. ಲಂಕೇಶ್ ಅವರ ವಿಫಲ ಪ್ರಯೋಗವಾದ ಪ್ರಗತಿ ರಂಗದಲ್ಲಿ ಸಕ್ರಿಯರಾಗಿದ್ದ ಮೋಹನ್ ಚುನಾವಣೆಯಲ್ಲಿ ಮಂಗಳೂರಿನಿಂದ ಆ ಪಕ್ಷದ ಅಭ್ಯರ್ಥಿಯಾಗಿದ್ದರು.. ಸ್ವಲ್ಪ ಕಾಲ ಲಂಕೇಶ್ ಪತ್ರಿಕೆಗೂ ವರದಿಗಾರರಾಗಿದ್ದರು.
ಎಂಬತ್ತರ ದಶಕದಲ್ಲಿ ಕಾಲೇಜು ಸಂಘಗಳ ಚುನಾವಣೆಗಳೆಂದರೆ ಸಕ್ರಿಯ ರಾಜಕಾರಣದ ಮೊದಲ ಮೆಟ್ಟಿಲಾಗಿತ್ತು. ಮಂಗಳೂರಿನ ಪ್ರತಿಷ್ಠಿತ ಸರ್ಕಾರಿ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಮೋಹನ್ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸರ್ವಕಾಲೇಜು ಸಂಘಗಳ ಯೂನಿಯನ್ ನ ಅಧ್ಯಕ್ಷರಾಗಿದ್ದರು. ( ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರೂ ಇದೇ ಕಾಲೇಜಿನ ವಿದ್ಯಾರ್ಥಿ) ಸಾಮಾನ್ಯವಾಗಿ ಶ್ರೀಮಂತ ಬಂಟ ಕುಟುಂಬದ ವಿದ್ಯಾರ್ಥಿಗಳಿಗೆ ಮೀಸಲಾಗಿದ್ದ ಈ ಸ್ಥಾನವನ್ನು ಮೋಹನ್ ತನ್ನ ಯೋಗ್ಯತೆಯಿಂದ ಪಡೆದವರು.ಆ ಕಾಲದಲ್ಲಿ ಸಾಮಾನ್ಯವಾಗಿ ಕಾಲೇಜು ಯೂನಿಯನ್ ಅಧ್ಯಕ್ಷರಾದವರನ್ನು ಮೊದಲ ಸೆಳೆಯುವುದು ಭೂಗತ ಜಗತ್ತು ಇಲ್ಲವೇ ಮುಂಬೈನ ಹೊಟೇಲ್ ಉದ್ಯಮ. ಆದರೆ ಮೋಹನ್ ಹಿಡಿದದ್ದು ಬೇರೆ ದಾರಿ.
ಲೋಹಿಯಾ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಮೋಹನ್ 1983ರಲ್ಲಿ ಮಾಜಿ ಪ್ರಧಾನಿ ಚಂದ್ರಶೇಖರ್ ಅವರು ಪ್ರಾರಂಭಿಸಿದ್ದ ಪಾದಯಾತ್ರೆಯಲ್ಲಿ ಸೇರಿಕೊಂಡಿದ್ದರು. ಜನತಾದಳದಲ್ಲಿಯೂ ಕೆಲಸಮಾಡಿದ್ದರು. ಮುಂಗಾರು ಪತ್ರಿಕೆ ಪ್ರಾರಂಭವಾದಾಗ ಒಂದು ಜಾಹೀರಾತು ಸಂಸ್ಥೆ ಪ್ರಾರಂಭಿಸಿ ವಡ್ಡರ್ಸೆ ರಘುರಾಮ ಶೆಟ್ಟಿಯವರ ಜೊತೆ ಸೇರಿಕೊಂಡರು. ಈ ನಡುವೆ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮಾಡಿ ಬಂದು ಮುಂಗಾರು ಪತ್ರಿಕೆಯಲ್ಲಿಯೂ ಒಂದಷ್ಟು ಕಾಲ ಕೆಲಸ ಮಾಡಿದ್ದರು. ವಡ್ಡರ್ಸೆಯವರಿಗೆ ಪ್ರೀತಿಯ ಶಿಷ್ಯರಾಗಿದ್ದರು.
ಮೋಹನ್ ಅವರ ರಾಜಕೀಯದ ಗುರಿ ಸ್ಪಷ್ಟವಾಗಿತ್ತು ಆದರೆ ಸಾಗುತ್ತಿದ್ದ ದಾರಿ ಅವರನ್ನು ಎಲ್ಲೆಲ್ಲೋ ಸುತ್ತಾಡಿಸಿ ಕೊನೆಗೂ ವಿಧಾನಪರಿಷತ್ ನ ಮೆಟ್ಟಿಲಲ್ಲಿ ತಂದು ನಿಲ್ಲಿಸಿದೆ. ಕಾಂಗ್ರೆಸ್ ಪಕ್ಷ ಮೋಹನ್ ಅವರನ್ನು ಆಯ್ಕೆ ಮಾಡಿ ಸ್ಪಷ್ಟವಾಗಿ ಎರಡು ಸಂದೇಶಗಳನ್ನು ನೀಡಿದೆ. ಒಮ್ಮೊಮ್ಮೆ ಹೋರಾಟಗಾರರನ್ನು ವಿಳಂಬವಾಗಿಯಾದರೂ ಗುರುತಿಸುತ್ತದೆ ಎನ್ನುವುದು ಮೊದಲನೆಯದು. ಒಮ್ಮೊಮ್ಮೆ ಜಾತಿ, ದುಡ್ಡು ಮತ್ತು ತೋಳ್ಬಲ ಇಲ್ಲದವರಿಗೆ ಕೂಡಾ ಅವಕಾಶ ನೀಡುತ್ತದೆ ಎನ್ನುವುದು ಎರಡನೆಯದು.
ಬಡಕುಟುಂಬದಿಂದ ಬಂದಿರುವ ಮೋಹನ್ ಅವರು ಸುಲಭದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಭ್ರಷ್ಟರಾಗಬಹುದಿತ್ತು ಇಲ್ಲದೆ ಇದ್ದರೆ ಅಡ್ಡ ಹಾದಿ ಹಿಡಿದು ದುಡ್ಡು ಮಾಡುವ ಬಗ್ಗೆ ಯೋಚಿಸಬಹುದಿತ್ತು. (ಮಂಗಳೂರಿನಲ್ಲಿ ಅಂತಹ ಅಡ್ಡದಾರಿಗಳಿಗೇನು ಕಡಿಮೆ ಇಲ್ಲ). ಮನೆಯ ಹೊರಗಡೆ ನುಂಗಲು ಹೊಂಚುಹಾಕಿ ಕೂತಿರುವ ಬಿಜೆಪಿಯ ಕೋಮುವಾದಿ ರಾಜಕಾರಣದ ಹೆಬ್ಬಾವು, ಇನ್ನೊಂದೆಡೆ ತಮ್ಮವರೊಲ್ಲಬ್ಬನನ್ನಾಗಿ ಮಾಡಲು ಮನೆಯೊಳಗೆ ಕಾಯುತ್ತಿರುವ ಕಾಂಗ್ರೆಸ್ ಪಕ್ಷದ ಜಾತಿ-ದುಡ್ಡು-ತೋಳ್ಬಲದ ದೊಡ್ಡ ದೊಡ್ಡ ಕುಳಗಳು. ಇಂತಹ ಸವಾಲುಗಳನ್ನು ಸಂಯಮದಿಂದಲೇ ಎದುರಿಸಿ ತತ್ವನಿಷ್ಠರಾಗಿ ಮೋಹನ್ ಸುರಕ್ಷಿತರಾಗಿ ಉಳಿದಿರುವುದು ಕಡಿಮೆ ಸಾಧನೆ ಅಲ್ಲ. ಮೋಹನ್ ಅವರದ್ದು ಅಂತರ ಧರ್ಮೀಯ ಮದುವೆ. ನನಗೆ ತಿಳಿದಹಾಗೆ ಅವರ ಪತ್ನಿಯೇ ಅವರ ಕುಟುಂಬವನ್ನು ಪೋಷಿಸುತ್ತಾ ಬಂದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯವನ್ನ ನಿರ್ಧರಿಸುತ್ತಿದ್ದ ತ್ರಿಮೂರ್ತಿಗಳಾದ ಜನಾರ್ದನ ಪೂಜಾರಿ, ವೀರಪ್ಪ ಮೊಯಿಲಿ ಮತ್ತು ಆಸ್ಕರ್ ಫರ್ನಾಂಡಿಸ್ ಅವರ ಗುದ್ದಾಟದಲ್ಲಿ ಸಿಕ್ಕಿಹಾಕಿಕೊಂಡು ನಜ್ಜುಗುಜ್ಜಾದವರಲ್ಲಿ ಮೋಹನ್ ಕೂಡಾ ಒಬ್ಬರು. ಕೊನೆ ದಿನಗಳಲ್ಲಿ ಆಸ್ಕರ್ ಫರ್ನಾಂಡಿಸ್ ಕೈ ಹಿಡಿದ ಕಾರಣಕ್ಕೆ ಮೋಹನ್ ರಾಜಕೀಯದಲ್ಲಿ ಉಳಿದಿದ್ದಾರೆ. ಬಹಳ ಮಂದಿಗೆ ಗೊತ್ತಿಲ್ಲದ ಇನ್ನೊಂದು ಸಂಗತಿ ಇದೆ. ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷಕ್ಕೆ ಸೇರುವ ಸಮಯದಲ್ಲಿ ಆಸ್ಕರ್ ಫರ್ನಾಂಡಿಸ್ ಮತ್ತು ಸಿದ್ದರಾಮಯ್ಯನವರ ನಡುವೆ ಮೋಹನ್ ಕೊಂಡಿಯಾಗಿ ಕೆಲಸಮಾಡಿದ್ದರು. ನಂತರದ ದಿನಗಳಲ್ಲಿ ಒಂದೊಂದಾಗಿ ಅವಕಾಶಗಳು ತಪ್ಪಿಹೋಗುತ್ತಿದ್ದಾಗ ಸಿದ್ದರಾಮಯ್ಯನವರ ಬಗ್ಗೆ ಮುನಿಸಿಕೊಂಡಿದ್ದರು. ಆಗೆಲ್ಲ ಆ ಸಿಟ್ಟನ್ನು ನನ್ನ ಮೇಲೆ ತೀರಿಸಿಕೊಂಡದ್ದೂ ಉಂಟು.
ಹೋರಾಟದ ರಾಜಕಾರಣದಿಂದ ಬಂದಿರುವ ಮೋಹನ್ ಅವರನ್ನು ಅಧಿಕಾರದ ರಾಜಕಾರಣ ಬದಲಾಯಿಸದಿರಲಿ ಎಂದು ಹಾರೈಸೋಣ.
ಕೆಲವೊಮ್ಮೆ ಇಂತಹ ವಿಚಿತ್ರಗಳು ಘಟಿಸುತ್ತವೆ. ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಪಡೆಯುವ ಮೂಲಕ ಕಾಂಗ್ರೆಸ್ ಪಕ್ಷದ ಬಗ್ಗೆ ಭರವಸೆ ಹುಟ್ಟಿಸಿರುವ ಬಿ.ಕೆ.ಹರಿಪ್ರಸಾದ್ ಅವರೂ ಮೋಹನ್ ಅವರಂತೆ ಲಂಕೇಶ್ ಮತ್ತು ವಡ್ಡರ್ಸೆಯವರನ್ನು ಗುರುಗಳೆಂದು ತಿಳಿದುಕೊಂಡವರು. ಹರಿಪ್ರಸಾದ್ ಅವರ ಬಗ್ಗೆಯೂ ಬರೆಯುವುದಿದೆ. ಅವರಿಗೂ ಒಳ್ಳೆಯದಾಗಲಿ.
ಬರಹ: ದಿನೇಶ್ ಅಮೀನ್ ಮಟ್ಟು












