ಮಾದರೀ ಕ್ರಾಂತಿ ಪುರುಷ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್

 

ದಕ್ಷಿಣ ಕನ್ನಡದ ನನ್ನ ವಿಧಾನಸಭಾ ವ್ಯಾಪ್ತಿಯ ನರಿಂಗಾನ ಗ್ರಾಮದಲ್ಲಿ ವಿಶಾಲವಾದ ಸ್ಥಳದಲ್ಲಿ ತಲೆಯೆತ್ತಿರುವ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಎಂಬ ಶೈಕ್ಷಣಿಕ ಸಂಸ್ಥೆ ನಮಗೆಲ್ಲ ಸುಪರಿಚಿತ. ಮೂರು ದಶಕಗಳ ಹಿಂದೆ ದ. ಕ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳು ಆರ್ಥಿಕವಾಗಿಯೂ ಶೈಕ್ಷಣಿಕವಾಗಿಯೂ ತೀರಾ ಹಿಂದುಳಿದಿದ್ದ ಕಾಲ. ಪ್ರಾಥಮಿಕ ಅಥವಾ ಪ್ರೌಢ ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿ ಕೂಲಿ ಕೆಲಸ, ಸಣ್ಣಪುಟ್ಟ ವ್ಯಾಪಾರಗಳಿಗೆ ಧುಮುಕುತ್ತಿದ್ದ ಯುವ ಸಮೂಹ. ಧಾರ್ಮಿಕ ಶಿಕ್ಷಣ ಸಂಸ್ಥೆಗಳು ಕೂಡ ವಿರಳವಾಗಿದ್ದ ಕಾಲ. ಮುಸ್ಲಿಂ ಹೆಣ್ಣು ಮಕ್ಕಳಂತೂ ಎರಡೂ ವಿದ್ಯಾಭ್ಯಾಸದ ಪ್ರಾಥಮಿಕ ಹಂತಗಳನ್ನು ದಾಟುವುದು ಬಹಳ ಅಪರೂಪದ ಸಂಗತಿಯಾಗಿತ್ತು. ಮೂರು ದಶಕಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಇಂದು ಸಮುದಾಯದಲ್ಲಿ ಬಹಳ ಬದಲಾವಣೆಗಳಾಗಿರುವುದನ್ನು ನಾವು ಗಮನಿಸಬಹುದು. ಧಾರ್ಮಿಕ ಮುಖಂಡರಾದ ಉಲಮಾ -ಉಮರಾಗಳು, ಅವರ ನೇತೃತ್ವದಲ್ಲಿರುವ ಸಂಘಟನೆಗಳು ಹಾಗೂ ಸಂಸ್ಥೆಗಳು ಮೂಡಿಸುತ್ತಿರುವ ಶೈಕ್ಷಣಿಕ ಜಾಗೃತಿಯಿಂದಾಗಿ ಪ್ರತಿಯೊಬ್ಬರೂ ವಿದ್ಯಾಭಾಸಕ್ಕೆ ಮಹತ್ವ ನೀಡತೊಡಗಿದ್ದಾರೆ. ಪ್ರತಿ ಮೊಹಲ್ಲಾಗಳಲ್ಲೂ ಶೈಕ್ಷಣಿಕ ಸಂಸ್ಥೆಗಳು ತಲೆಯೆತ್ತತೊಡಗಿವೆ. ಮುಸ್ಲಿಂ ಹೆಣ್ಣು ಮಕ್ಕಳು ಕೂಡ ಸುರಕ್ಷಿತವಾಗಿ ಉನ್ನತ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಉಲಮಾಗಳ ನೇತೃತ್ವದಲ್ಲಿ ಮಹಿಳೆಯರಿಗಾಗಿಯೇ ಸ್ಥಾಪನೆಗೊಂಡಿರುವ ಧಾರ್ಮಿಕ ಶಿಕ್ಷಣ ಸಂಸ್ಥೆಗಳ ಮೂಲಕ ನಮ್ಮ ಹೆಣ್ಣು ಮಕ್ಕಳು ಕುರ್ಆನ್ ಹಾಫಿಲ್ ಗಳಾಗಲು, ಧಾರ್ಮಿಕ ವಿದ್ವಾಂಸರಾಗಲು ಸಾಧ್ಯವಾಗುತ್ತಿದೆ.

ಸಮುದಾಯದಲ್ಲಿ ಉಂಟಾಗಿರುವ ಧಾರ್ಮಿಕ -ಶೈಕ್ಷಣಿಕ ಕ್ರಾಂತಿಗೆ ಶರಫುಲ್ ಉಲಮಾ ಅಬ್ಬಾಸ್ಉಸ್ತಾದರರಂತಹ ಧಾರ್ಮಿಕ ಮುಖಂಡರ ಪಾತ್ರ, ಕೊಡುಗೆ ಬಹಳಷ್ಟಿದೆ. ಉಸ್ತಾದರು ಕೇವಲ ಬೋಧನೆ, ಅಧ್ಯಾಪನಕ್ಕೆ ಮಾತ್ರ ತನ್ನನ್ನು ಸೀಮಿತಗೊಳಿಸದೆ, ತುಸು ಭಿನ್ನವಾಗಿ ಯೋಚಿಸಿ, ಸಮಾಜಮುಖಿಯಾಗಿ ಸೇವೆಮಾಡುವ ಕಾರ್ಯಕ್ಕಿಳಿದರು. ಯತೀಂ ಖಾನ- ಅನಾಥಾಲಯಗಳನ್ನು ಸ್ಥಾಪಿಸಿ ಯತೀಂ ಮಕ್ಕಳ ಪೋಷಣೆ ಮತ್ತು ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊತ್ತುಕೊಂಡರು. ಧಾರ್ಮಿಕ ಮತ್ತು ಭೌತಿಕವಾದ ಎರಡೂ ಶಿಕ್ಷಣದ ಅನಿವಾರ್ಯತೆಯನ್ನು ಅರಿತ ಅವರು ವಿದ್ಯಾರ್ಥಿಗಳು ದಾರಿ ತಪ್ಪಿ ಸಮಾಜಕ್ಕೆ ಘಾತುಕರಾಗದೆ, ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಬೆಳೆಯುವ ಪ್ರಜೆಗಳಾಗಬೇಕೆಂಬ ಕನಸು ಅವರದ್ದಾಗಿತ್ತು. ಅಲ್ ಮದೀನವೆಂಬುದು ಇತರ ಶೈಕ್ಷಣಿಕ ಸಂಸ್ಥೆಗಳಿಗಿಂತ ಭಿನ್ನವಾಗಿ ಕಾಣುವುದು ಈ ಕಾರಣಕ್ಕೆ. ಉಸ್ತಾದರಿಂದ ಸ್ಫೂರ್ತಿ ಪಡೆದ ಅನೇಕ ಯುವ ವಿದ್ವಾಂಸರು ಇದೇ ರೀತಿಯ ಸಂಸ್ಥೆಗಳನ್ನು ಕಟ್ಟಿ ಮುನ್ನಡೆಸುತ್ತಿರುವುದು ಸಂತೋಷದ ಸಂಗತಿ. ಅಲ್ ಮದೀನ ಶಾಲಾ ಕಾಲೇಜುಗಳು ಕೇವಲ ಮುಸಲ್ಮಾನರಿಗೆ ಮಾತ್ರ ಸೀಮಿತವಾಗದೆ ಎಲ್ಲ ಸಮುದಾಯದವರಿಗೂ ಜ್ಞಾನಕ್ಕಾಗಿ ತೆರೆದ ಬಾಗಿಲಾಗಿದೆ ಎನ್ನುವುದು ಕೂಡ ಗಮನಾರ್ಹ. ಒಂದು ಕಾಲದಲ್ಲಿ ಯಾರಿಗೂ ಬೇಡವಾಗಿದ್ದ ಬರಡು ಬಂಜರು ನೆಲವಿಂದು ವಿದ್ಯೆಯೆಂಬ ಹಸಿರಿನಿಂದ ಕಂಗೊಳಿಸುತ್ತಿರುವುದರ ಹಿಂದೆಯಿರುವ ಶರಫುಲ್ ಉಲಮಾರ ಅಪಾರ ಶ್ರಮವನ್ನು ಮರೆಯಲು ಅಸಾಧ್ಯ.ಉಸ್ತಾದರ ಇನ್ನೊಂದು ಪ್ರಶಂಸಾರ್ಹ ಕಾರ್ಯವೆಂದರೆ ಅವರು ಏರ್ಪಡಿಸುತ್ತಿದ್ದ ಅನಾಥ-ಬಡ ಹೆಣ್ಣು ಮಕ್ಕಳ ಸರಳ ಸಾಮೂಹಿಕ ವಿವಾಹ. ವರದಕ್ಷಿಣೆ ಸಮಸ್ಯೆಯಿಂದ ವಿವಾಹ ಕಷ್ಟ ವಾಗಿದ್ದ ನೂರಾರು ಹೆಣ್ಣು ಮಕ್ಕಳು ದಾಂಪತ್ಯ ಬದುಕನ್ನು ಕಟ್ಟಿಕೊಳ್ಳಲು ಇದರಿಂದ ಸಾಧ್ಯವಾಯಿತು. ಸಮುದಾಯದಲ್ಲಿ ವರದಕ್ಷಿಣೆ ಬೇಡಿಕೆಯ ಪ್ರಮಾಣ ತಗ್ಗಲು ಇಂತಹ ವಿವಾಹಗಳು ಪ್ರೇರಣೆಯಾಗಿವೆ.

 

ಉಸ್ತಾದರೊಂದಿಗೆ ನನಗಿದ್ದ ಬಾಂಧವ್ಯ ಅನುಪಮವಾದುದು. ನಮ್ಮ ತಂದೆ ಮರ್ಹೂಂ ಯು. ಟಿ. ಫರೀದ್ ರವರ ಕಾಲದಿಂದಲೇ ನಮಗೆ ಪರಸ್ಪರ ನಿಕಟ ಸಂಪರ್ಕವಿತ್ತು. ಶಾಸಕರಾಗಿದ್ದ ತಂದೆಯವರನ್ನು ಆಗಾಗ ಭೇಟಿಮಾಡಲು ಉಸ್ತಾದರು ಬರುತ್ತಿದ್ದರು. ತಂದೆಯವರು ಕೂಡ ಉಸ್ತಾದರ ಸೇವಾಚಟುವಟಿಕೆಗಳಿಗೆ ತಮ್ಮಿಂದಾದ ಸಹಾಯ ಸಹಕಾರವನ್ನು ನೀಡುತ್ತಿದ್ದರು. ನನಗೂ ಕೂಡ ಅಬ್ಬಾಸ್ ಉಸ್ತಾದ್ ಎಂದರೆ ತುಂಬಾ ಗೌರವ, ಪ್ರೀತಿ. ನನ್ನ ರಾಜಕೀಯ ಬೆಳವಣಿಗೆಯಲ್ಲಿ ಅವರ ಮಾರ್ಗದರ್ಶನ, ದುಆ-ಆಶೀರ್ವಾದವೂ ಇದೆ ಎಂದು ಅಭಿಮಾನಪೂರ್ವಕವಾಗಿ ಹೇಳುತ್ತೇನೆ. ಅವರು ಕಟ್ಟಿ ಬೆಳೆಸಿದ ಅಲ್ ಮದೀನ ನನ್ನ ವಿಧಾನಸಭಾ ವ್ಯಾಪ್ತಿಯಲ್ಲಿಯೇ ಇರುವುದರಿಂದ ಅದರ ಅಭಿವೃದ್ಧಿಗಾಗಿ ಎಲ್ಲ ರೀತಿಯಲ್ಲಿ ಸಹಕರಿಸುವುದು ನನ್ನ ಜವಾಬ್ದಾರಿಯೆಂದು ತಿಳಿದಿದ್ದೇನೆ. ಅಲ್ ಮದೀನದ ಅನೇಕ ಅಭಿವೃದ್ಧಿ ಕಾರ್ಯಗಳಲ್ಲಿ ಕೈಜೋಡಿಸಿ ಉಸ್ತಾದರ ತೃಪ್ತಿಗಳಿಸಿರುವ ಸಂತೋಷ ನನಗಿದೆ.ಆಧುನಿಕ ಕಾಲಕ್ಕೆ ಹಾಗೂ ಭವಿಷ್ಯದ ಸವಾಲುಗಳಿಗೆ ತಕ್ಕಂತೆ ಅಲ್ ಮದೀನ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕಾಗಿದೆ. ಇದಕ್ಕಾಗಿ ನಾನು ಸಹಿತ ಸಮುದಾಯದ ಪ್ರತಿಯೊಬ್ಬರೂ ತಮ್ಮ ತಮ್ಮ ಕೊಡುಗೆಗಳನ್ನು ನೀಡಬೇಕಾಗಿದೆ. ದೇಶದ ಅಭಿವೃದ್ಧಿ ಎಂದರೆ ಎಲ್ಲ ಸಮುದಾಯದ ಅಭಿವೃದ್ದಿಯಾಗಿದೆ. ಶೈಕ್ಷಣಿಕ ಸಂಸ್ಥೆಗಳನ್ನು ಕಟ್ಟುವ ಮೂಲಕ ದೇಶದ ಪ್ರಗತಿಗೂ ಒಂದು ಪಾಲನ್ನು ಉಸ್ತಾದರು ನೀಡಿ ಮಾದರಿಗಳಾಗಿದ್ದಾರೆ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಯಾಗಲಿ.

 

ಉಸ್ತಾದರು ನಿಧನ ಹೊಂದಿ 7 ವರ್ಷ ತುಂಬುತ್ತಿರುವ ಹೊತ್ತಲ್ಲಿ, ಅವರ ಪಾರತ್ರಿಕ ಸ್ಥಾನೋನ್ನತಿಗಾಗಿ ಪ್ರಾರ್ಥಿಸುತ್ತೇನೆ. ಅವರನ್ನೂ ನಮ್ಮನ್ನೂ ಅಲ್ಲಾಹು ಸ್ವರ್ಗದಲ್ಲಿ ಒಗ್ಗೂಡಿಸಲಿ ಎಂದು ಪ್ರಾರ್ಥಿಸುತ್ತಾ, ಇದೀಗ ಸಂಸ್ಥೆಯ ಸಾರಥ್ಯ ವಹಿಸಿ ಮುನ್ನಡೆಸುತ್ತಿರುವ ಉಸ್ತಾದರ ಪುತ್ರ ಅಬ್ದುಲ್ ಖಾದರ್ ಸಖಾಫಿಯವರಿಗೆ ಸರ್ವವಿಧ ಶುಭ, ಯಶಸ್ಸನ್ನು ಹಾರೈಸುತ್ತೇನೆ. ಉಸ್ತಾದರ ಸ್ಮರಣಾರ್ಥ ಮೇ 13-14 ರಂದು ನಡೆಯುವ ಕಾರ್ಯಕ್ರಮಗಳು ಯಶಸ್ವಿಯಾಗಲಿ, ಹೊಸ ತಲೆಮಾರು ಅವರ ಸೇವೆ ಮತ್ತು ಸಾಧನೆಗಳನ್ನು ತಿಳಿದುಕೊಳ್ಳಬೇಕು. ಅವರ ಬೋಧನೆ ಮತ್ತು ಸಂದೇಶಗಳಿಂದ ಪ್ರೇರಣೆ ಪಡೆದು ಜೀವನದಲ್ಲಿ ಒಳಿತು ಮಾಡುವ ಮೂಲಕ ಬದುಕನ್ನು ಸಾರ್ಥಕಗೊಳಿಸಬೇಕು. ಅಲ್ಲಾಹು ಅನುಗ್ರಹಿಸಲಿ-

 

ಆಮೀನ್