ಪ್ರಸ್ತುತ ರಾಜ್ಯ ರಾಜಕೀಯವನ್ನು ನೋಡಿದರೆ ಮೂರು ಹಿರಿತಲೆಗಳು ಕಾಣುತ್ತವೆ. ನಂ.1 ದೇವೇಗೌಡ. ನಂ.2 ಯಡಿಯೂರಪ್ಪ. ನಂ.3 ಸಿದ್ದರಾಮಯ್ಯ. ಮೂವರೂ ನಾಯಕರು ತಮ್ಮ ತಮ್ಮ ಲೈಫಿನಲ್ಲಿ ಒಂದು ಸ್ಯಾಚುರೇಷನ್ ಪಾಯಿಂಟ್ ರೀಚ್ ಆಗಿ ಆಗಿದೆ. ಆಸೆಗಳು ನೂರಾರು ಇರಬಹುದು.
ಆದರೆ ಇನ್ನು ಮುಂದಿನದ್ದೆಲ್ಲ ಬೋನಸ್ ಎನ್ನುವುದೇ ವಾಸ್ತವ.
ಯಡಿಯೂರಪ್ಪ ಅದ್ಭುತ ಭಾಷಣಕಾರರಲ್ಲ. ಹಾಗೆ ನೋಡಿದರೆ ದೇವೇಗೌಡರೂ ಅಲ್ಲ. ಆ ವಿಷಯದಲ್ಲಿ ಸಿದ್ದುಗೆ ಸಿದ್ದುನೇ ಸಾಟಿ. ದೇಶದಲ್ಲಿ ಮೋದಿಗೆ ಹೇಗೆ ಮಾತುಗಾರಿಕೆಯಲ್ಲಿ ಎದುರಾಳಿ ಇಲ್ಲವೋ.. ರಾಜ್ಯದಲ್ಲಿ ಸಿದ್ದುಗೂ ಹಾಗೆ. ಎದುರಾಳಿಗಳಿಲ್ಲ. ತಂತ್ರಗಾರಿಕೆಯಲ್ಲಿ, ದಾಖಲೆ ಇಟ್ಟುಕೊಂಡು ಮಾತನಾಡುವುದರಲ್ಲಿ ಮೂವರೂ ಸೇರಿಗೆ ಸವ್ವಾಸೇರು. ಒಬ್ಬರು ಹೆಚ್ಚು.. ಇನ್ನೊಬ್ಬರು ಕಡಿಮೆ ಎನ್ನವುದಕ್ಕೆ ಬರುವುದಿಲ್ಲ. ಆದರೂ.. ಒಂದು ಹೆಜ್ಜೆ ದೇವೇಗೌಡರು ಮುಂದೆ ಇರುತ್ತಾರೆ.
ಇನ್ನು ಸಂಘಟನೆ ವಿಷಯದಲ್ಲಿ ಸಿದ್ದರಾಮಯ್ಯ ಅವರು ಅಷ್ಟಕ್ಕಷ್ಟೇ. ಅವರೇನಿದ್ದರೂ ಉತ್ಸವ ಮೂರ್ತಿ. ಆದರೆ ಯಡಿಯೂರಪ್ಪ ಮತ್ತು ದೇವೇಗೌಡರು ಹಾಗಲ್ಲ.
ಈ ಮೂವರನ್ನು ಹೋಲಿಕೆ ಮಾಡುತ್ತಾ ಹೋದರೆ.. ಯಡಿಯೂರಪ್ಪ ಒಂದು ಕೈ ಮೇಲೇ ನಿಲ್ಲುತ್ತಾರೆ. ಮೂವರೂ ಹೆಚ್ಚೂ ಕಡಿಮೆ ಒಂದೇ ಕಾಲಕ್ಕೆ ಬಂದವರು. ಆದರೆ ಯಡಿಯೂರಪ್ಪ ಅವರಿಗೆ ಈ ಇಬ್ಬರಿಗೂ ಸಿಕ್ಕಂತಹ ಒಂದು ಹಂತದ ಲಕ್ಷುರಿ ಸಿಗಲಿಲ್ಲ. ಯಡಿಯೂರಪ್ಪ ಅವರು ಅಧಿಕಾರದ ಮೊದಲ ರುಚಿ ನೋಡುವಷ್ಟರ ಹೊತ್ತಿಗೆ ಕಾಲು ಶತಮಾನದ ಹೋರಾಟ ಕಾಲ ಕೆಳಗೆ ಸರಿದು ಹೋಗಿತ್ತು.
ಅಸ್ಥಿತ್ವದಲ್ಲೇ ಇಲ್ಲದ, ಜನರಿಗೆ ಹೆಸರೇ ಗೊತ್ತಿಲ್ಲದ ಪಕ್ಷವನ್ನು ಕಟ್ಟಿದವರು ಯಡಿಯೂರಪ್ಪ. ಈ ವಿಷಯದಲ್ಲಿ ದೇವೇಗೌಡರಿಗಿಂತ ಸಿದ್ದರಾಮಯ್ಯ ಅವರದ್ದು ಹೆಚ್ಚು ಲಕ್ಷುರಿ. ಆರಂಭದಲ್ಲೇ ಅಧಿಕಾರ ಸಿಕ್ಕಿತ್ತು. ಅಧಿಕಾರವೂ ಸಿಕ್ಕಿತ್ತು. ಹಾಗೆ ನೋಡಿದರೆ ಸಿದ್ದರಾಮಯ್ಯ ಅವರಿಗೆ ಪೆಂಡಾಲು ಹಾಕಿಸುವ, ಜನರನ್ನು ಸೇರಿಸುವ, ಖರ್ಚು ಮಾಡುವ ಹೊಣೆಗಾರಿಕೆ ಬೀಳಲೇ ಇಲ್ಲ. ದೇವೇಗೌಡರಿಗೆ ಒಂದು ಹಂತದವರೆಗೆ ಇತ್ತು. ಆದರೆ ಯಡಿಯೂರಪ್ಪ ಅವರದ್ದು ಬೇರೆ. ಓಂಕಾರದಿಂದ ಶುಭಂವರೆಗೆ ಅವರದ್ದೇ ಎಲ್ಲ ಕೆಲಸ. ಭಾಷಣ ಮುಗಿಸಿದ ಮೇಲೆ, ಜನರೆಲ್ಲ ಹೋದ ಮೇಲೆ ಮೇಜು, ಕುರ್ಚಿ ಎತ್ತಿಟ್ಟು, ಕಟ್ಟಿದ್ದ ಪೆಂಡಾಲು ಬಿಚ್ಚಿ ಹೋದ ದಿನಗಳೂ ಇವೆ.
ಇನ್ನು ತಂತ್ರಗಾರಿಕೆ ವಿಷಯವೂ ಅಷ್ಟೇ. ಸಿದ್ದು ಅವರದ್ದು ಸೂಪರ್ ಲಕ್ಷುರಿ. ಅವರಿಗೆ ರಾಜಕೀಯ ತಂತ್ರಗಾರಿಕೆ ಕಲಿಸುವುದಕ್ಕೆ ಹೆಗಡೆ, ಗೌಡರಂತಹ ಸೂಪರ್ ಲೀಡರ್ಸ್ ಇದ್ದರು. ಹೋರಾಟಕ್ಕೆ ರೈತ ಸಂಘ, ಪ್ರೊ.ನಂಜುಂಡ ಸ್ವಾಮಿಯಂತಹ ಗುರುಗಳೂ ಬೆನ್ನಿಗೆ ಇದ್ದರು. ಪತ್ರಕರ್ತರಲ್ಲೂ ಮಿತ್ರರಿದ್ದರು. ಇಂತಹವು ದೇವೇಗೌಡರಿಗೆ ಆಮೇಲಾಮೇಲೆ ಸಿಕ್ಕಿತಾದರೂ, ಅದು ಅವರೇ ಗಳಿಸಿಕೊಂಡಿದ್ದು.
ಆದರೆ ಯಡಿಯೂರಪ್ಪ ಇಲ್ಲಿಯೂ ಶಾಪಗ್ರಸ್ಥ ನಾಯಕ. ತಂತ್ರಗಾರಿಕೆ, ಮೀಡಿಯಾ ನಿಭಾಯಿಸುವುದು, ಹಣ ಹೊಂದಿಸುವುದು, ಜನರನ್ನು ಸಂಘಟಿಸುವುದು.. ಎಲ್ಲವನ್ನೂ ಮಾಡುತ್ತ ಮಾಡುತ್ತಲೇ ಕಲಿಯುತ್ತಾ ಹೋದರು. ಎಲ್ಲವೂ ಸ್ವಯಂ ಕೃಷಿ. ಕೊನೆಗೆ ಅಭ್ಯರ್ಥಿಗಳನ್ನು ಗುರುತಿಸಿ, ಅವರನ್ನು ಗೆಲ್ಲಿಸುವುದಷ್ಟೇ ಅಲ್ಲ, ಸರಕಾರ ಮಾಡುವ ಅವಕಾಶ ಬಂದಾಗಲೂ ತಲೆ ಕೆಡಿಸಿಕೊಂಡವರು ಅವರೊಬ್ಬರೇ. ಸಿದ್ದು, ದೇವೇಗೌಡರಿಗೆ ಇದ್ದಂತೆ ಹೆಗಲು ಕೊಡುವವರು ಆಗಲೂ ಅವರಿಗೆ ಸಿಗಲಿಲ್ಲ. ಅವರ ಪಕ್ಷದಲ್ಲೂ ಅಷ್ಟೇ. ಅವರದ್ದೇನಿದ್ದರೂ ಅಡುಗೆ ರೆಡಿ ಆಗಿ, ಎಲೆ ಹಾಕಿದ ಮೇಲೆ ಊಟಕ್ಕೆ ಬಂದು ಉಪ್ಪು-ಹುಳಿ-ಖಾರ ಜಾಸ್ತಿಯಿದೆಯೋ. ಕಡಿಮೆ ಇದೆಯೋ.. ಎಂದು ಹೇಳಿ ಹೋಗುವ ನೆಂಟರ ಪಾತ್ರ.
ಎಲ್ಲವೂ ಸರಿಯಾಗಿ ಆದಾಗ ನಾವೇ ಮಾಡಿದ್ದು ಎನ್ನುವುವು, ಸ್ವಲ್ಪ ಮಿಸ್ಟೇಕು ಹೊಡೆದಾಗ ಯಡಿಯೂರಪ್ಪನವರಿಂದಲೇ ಎಲ್ಲ ಆಗಿದ್ದು ಎನ್ನುವವರು. ಆರೋಪಗಳನ್ನೆಲ್ಲ ಹೊತ್ತಿಕೊಂಡು, ಅವಮಾನ ಅನುಭವಿಸಿದ್ದು ಯಡಿಯೂರಪ್ಪ ಒಬ್ಬರೇ.
ಆ ವಿಷಯದಲ್ಲಿ ಒನ್ಸ್ ಎಗೇನ್ ಸಿದ್ದರಾಮಯ್ಯ ಅವರದ್ದು ಲಕ್ಷುರಿ ಲೈಫು. ಆರೋಪಗಳು ಬಂದಾಗ ಸಿದ್ದುಗೆ ಹೆಗಲಷ್ಟೇ ಅಲ್ಲ, ಎದೆಗೆ ಎದೆ ಕೊಟ್ಟು ಹೋರಾಡುವವರಿದ್ದಾರೆ.
ದೇವೇಗೌಡರಿಗೆ ಈ ಹಿಂದೆ ಇದ್ದರು. ಈಗ ಇಲ್ಲ. ಅದಕ್ಕೆ ಕಾರಣ ಅವರೇ ಎನ್ನುವುದು ರಾಜಕೀಯ ಬಲ್ಲವರ ಮಾತು. ಈ ವಿಷಯದಲ್ಲೂ ಯಡಿಯೂರಪ್ಪ ದುರದೃಷ್ಟವಂತ.
ಯಡಿಯೂರಪ್ಪ 4 ಬಾರಿ ಸಿಎಂ ಎಂದ ಕೂಡಲೇ.. ವ್ಹಾವ್.. ವಾಟ್ ಎ ರೆಕಾರ್ಡ್ ಎನ್ನಬೇಡಿ. ಅವರೇನೂ 20 ವರ್ಷ ಅಧಿಕಾರ ಮಾಡಿಲ್ಲ. 7 ದಿನ, 6 ದಿನಗಳ ಸಿಎಂ ಆಗಿದ್ದು 2 ಬಾರಿ. ಇನ್ನೆರಡು ಬಾರಿ 3 ವರ್ಷ, 67 ದಿನ ಹಾಗೂ ಸರಿಯಾಗಿ 2 ವರ್ಷ ಸಿಎಂ ಆಗಿದ್ಧಾರೆ. ಅಷ್ಟೇ.
ಇನ್ನು ಮಕ್ಕಳ ಮಮಕಾರದ ವಿಚಾರಕ್ಕೆ ಬಂದರೆ.. ʻಮಕ್ಕಳ ಮೇಲಿನ ಮೋಹʼ ಮೂವರಿಗೂ ಇದೆ. ಇವರು ಹೆಚ್ಚು, ಇವರು ಕಡಿಮೆ ಎನ್ನುವುದಕ್ಕೆ ಆಗುವುದಿಲ್ಲ. ದೊಡ್ಡವರ ಮಕ್ಕಳು ಎಲ್ಲರೂ ದೊಡ್ಡವರ ರೀತಿಯಲ್ಲೇ ಆಗಬೇಕೆಂದೇನೂ ಇಲ್ಲ.
✍️mahesh Kumar












