ನಾಡು ಕಂಡ ಶ್ರೇಷ್ಠವಾದ ಸಮಾಜ #ಸುಧಾರಕರು ಬಿ. #ಜನಾರ್ದನ #ಪೂಜಾರಿ.
ಇಂದವರ ( ಏಪ್ರಿಲ್ 27) ಹುಟ್ಟುಹಬ್ಬ. ನೂರು ವರ್ಷಗಳ ಕಾಲ ಬದುಕಬೇಕು ಅವರು.
————–
ಸರ್, ನಿಮ್ಮನ್ನು ನಾನು ಏನೆಂದು ಕರೆಯಲಿ?
#ಪ್ರಭಾವಿ ರಾಜಕೀಯ ಧುರೀಣನೆಂದೋ? #ಮುತ್ಸದ್ದಿ ಎಂದೋ? ಕಾಂಗ್ರೆಸ್ ಪಕ್ಷದ #ಶಕ್ತಿಶಾಲಿ ನಾಯಕ ಎಂದೋ? ಸರಣಿ ಸಾಲ ಮೇಳಗಳ #ಸರದಾರ ಎಂದೋ? ನಾಡಿನ ಶ್ರೇಷ್ಟ #ಕುದ್ರೋಳಿಯ ಗೋಕರ್ಣನಾಥ ದೇವಸ್ಥಾನದ ಜೀರ್ಣೋದ್ಧಾರದ #ಪ್ರೇರಕರು ಎಂದೋ? #ಮಂಗಳೂರು ವೈಭವದ #ದಸರಾ ಹಬ್ಬದ ರೂವಾರಿ ಎಂದೋ? ಪ್ರವಾಹದ ವಿರುದ್ಧವಾಗಿ ಧೈರ್ಯವಾಗಿ ಈಜುವ ಸಮಾಜದ ಸುಧಾರಕ ಎಂದೋ? ಈ ಎಲ್ಲವೂ #ಉಪಮೆಗಳನ್ನು ನೀವು ಮೀರಿ ನಿಂತಿದ್ದೀರಿ. ಆದರೂ ಕೊನೆಯದು ಹೆಚ್ಚು ಸರಿ ಎಂದು ನನಗನ್ನಿಸುತ್ತದೆ.
ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ
ರಾಜಕೀಯ ಬದುಕು!
45 ವರ್ಷಗಳ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೇ, #ಹಗರಣ ಇಲ್ಲದೇ ನಿಲ್ಲುವುದಿ
ದೆಯಲ್ಲ, ನೀವು ಆ ಕಾರಣಕ್ಕೆ ನಿಜವಾಗಿಯೂ #ಗ್ರೇಟ್! ಇಂದಿರಾ ಗಾಂಧಿ, ರಾಜೀವ ಗಾಂಧಿ, ಪಿವಿ ನರಸಿಂಹ ರಾವ್ ಅವರ ಸಂಪುಟಗಳಲ್ಲಿ ಅತ್ಯಂತ ಪ್ರಭಾವಿಯಾದ #ಕ್ಯಾಬಿನೆಟ್ ದರ್ಜೆಯ ಖಾತೆಗಳನ್ನು ಯಶಸ್ವಿ ಆಗಿ ನಿರ್ವಹಣೆಯನ್ನು ಮಾಡಿ ತನಗಾಗಿ ಏನನ್ನೂ ಮಾಡದೇ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಹಿತವನ್ನು ಕಾಯುವ ಕಾಯಕ ನಿಷ್ಟೆಯು ಇವತ್ತು ಎಷ್ಟು ಮಂದಿ ರಾಜಕಾರಣಿಗಳಿಗೆ ಇದೆ ಸರ್?
ನಾನು #ಸಾಯುವತನಕ ಕಾಂಗ್ರೆಸ್ಸಿಗ ಎಂದು ಗಟ್ಟಿಯಾಗಿ ಮತ್ತು #ಅಭಿಮಾನಪೂರ್ವಕವಾಗಿ ಘೋಷಿಸುವ ನಿಮ್ಮ #ಪಕ್ಷನಿಷ್ಠೆಯು ಎಲ್ಲರಿಗೂ ಮಾದರಿ ಸರ್.
ತುಳಿತಕ್ಕೆ ಒಳಗಾದ ಬಾಲ್ಯ
ಮತ್ತು ಬಡತನ.
ಅತ್ಯಂತ #ತುಳಿತಕ್ಕೊಳಗಾದ ಬಡ ಕುಟುಂಬದಲ್ಲಿ ಹುಟ್ಟಿದ ನೀವು ನಿಮ್ಮ ಬಾಲ್ಯದ ಎಲ್ಲ #ಕಹಿನೆನಪುಗಳನ್ನು ಮೀರಿ ನಿಂತು ಎತ್ತರ ಬೆಳೆದವರು. 1960ರಿಂದ 1979ರವರೆಗೆ ನೀವು ಮಂಗಳೂರಲ್ಲಿ ವಕೀಲರಾಗಿ ವಾದಿಸಿದ್ದು ಬಡವರ ಮತ್ತು ಸಂತ್ರಸ್ತರ ಪರವಾಗಿ!
ಪ್ರಧಾನಿ ಇಂದಿರಾಗಾಂಧಿಯವರ #ಭೂಸುಧಾರಣೆಯ ಕಾನೂನಿನ ಮೂಲಕ ಕರಾವಳಿಯ ಭಾಗದಲ್ಲಿ ಬಡವರಿಗೆ ನೀವು ನ್ಯಾಯ ಕೊಡಿಸಿದ ನೂರಾರು ಉದಾಹರಣೆ ದೊರೆಯುತ್ತವೆ. ಮುಂದೆ ಕಾಂಗ್ರೆಸ್ ಪಕ್ಷದಿಂದ ಮಂಗಳೂರು ಲೋಕಸಭಾ ಕ್ಷೇತ್ರದಿಂದ ನೀವು ಸತತವಾಗಿ ಆಯ್ಕೆಯಾದಿರಿ.
ಮಂಗಳೂರಿನ ಸಂಸದರಾಗಿ,
ಕೇಂದ್ರ ಸಚಿವರಾಗಿ!
ನಿಮ್ಮ ಅಧಿಕಾರದ ಅವಧಿಯಲ್ಲಿ ಕುದುರೆಮುಖದ ಕಬ್ಬಿಣದ ಅದಿರು ಕಂಪೆನಿ, MRPL ಕಾರ್ಪೊರೇಟ್ ಕಂಪೆನಿ, ಬಜಪೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಸುರತ್ಕಲ್ಲಿನ NITK ಸಂಸ್ಥೆಯ ಉನ್ನತೀಕರಣ, ಬಂಟ್ವಾಳ ಮತ್ತು ಸುರತ್ಕಲ್ಲು ನಡುವೆ ಇರುವ ಚತುಷ್ಪಥ ರಸ್ತೆಯ ನಿರ್ಮಾಣ, ಮಂಗಳೂರು ಮತ್ತು ಬೆಂಗಳೂರು ನಡುವಿನ ರೈಲುಮಾರ್ಗ…… ಇಂತಹ ಅನೇಕ ಶ್ರೇಷ್ಟವಾದ ಜನಪರವಾದ ಯೋಜನೆಗಳು ನಿಮ್ಮಿಂದ ಜಾರಿ ಆಗಿರುವುದನ್ನು ನಾವೆಲ್ಲರೂ ಕಂಡಿದ್ದೇವೆ.
ಇದನ್ನು ನಾವು #ಕರಾವಳಿಯವರು ಮರೆಯುವುದು ಹೇಗೆ?
‘ಸಾಲ ಮೇಳಗಳ ಸರದಾರ’ ನಮ್ಮ ಪೂಜಾರಿ!
ಇಂದಿರಾಗಾಂಧಿ ಅವರು ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದ ಬೆನ್ನಿಗೇ ನಿಮ್ಮ ಮೇಲೆ ವಿಶ್ವಾಸವಿರಿಸಿ ಕೇಂದ್ರದ ಹಣಕಾಸು ಮಂತ್ರಿ ಮಾಡಿದರು. ಆಗ ನೀವು ದೇಶದಾದ್ಯಂತ ನಡೆಸಿದ ಸರಣಿ ಸಾಲಮೇಳಗಳ ಯಶಸ್ಸು ಅದು ಕೇವಲ ನಿಮಗೇ ಸಲ್ಲಬೇಕು.
ಅದುವರೆಗೆ ಕೇವಲ #ಶ್ರೀಮಂತರ ಪರವಾಗಿದ್ದ ಬ್ಯಾಂಕುಗಳನ್ನು #ಬಡವರ ಪರವಾಗಿ ನಿಲ್ಲಿಸಿದ್ದು ನೀವು! #ಬ್ಯಾಂಕುಗಳನ್ನು ಬೀದಿಗೆ ತರುತ್ತಿದ್ದಾರೆ ಎಂಬ ಶ್ರೀಮಂತರ ಟೀಕೆಗಳಿಗೆ ಕಿವಿಗೊಡದೆ #ಬಂಡೆ ಆಗಿ ನಿಂತವರು ನೀವು. ಜೀವ ಬೆದರಿಕೆಗೆ #ಸೊಪ್ಪು ಹಾಕದವರು ನೀವು.
ನಿಮ್ಮ ಮೇಲೆ ಅನೇಕ ದೈಹಿಕ ಹಲ್ಲೆಗಳು ನಡೆದರೂ, ಹಲವು ಬಾರಿ ಇರಿತಗಳಾದರೂ ಒಂದಿಷ್ಟೂ ವಿಚಲಿತರಾಗದೆ ನಿಂತ ನಿಮಗೆ ಖಂಡಿತವಾಗಿ ಅಭಿನಂದನೆ ಸರ್!
#ಪ್ರವಾಹದ ವಿರುದ್ಧವಾಗಿ ಈಜುವ, #ಆತ್ಮಸಾಕ್ಷಿಗೆ ಸರಿಯಾಗಿ ನಡೆವ, ನಿಮ್ಮ ಈ ಗುಣವೇ ನಿಮ್ಮನ್ನು #ಐಕಾನ್ ಮಾಡಿದ್ದು.
ಗೋಕರ್ಣನಾಥ ಕಾಲೇಜಿನ ಹುಟ್ಟು
———————————————–
ಎಪ್ಪತ್ತರ ದಶಕದಲ್ಲಿ ನಿಮ್ಮ ಬಳಿ ಕಾಲೇಜು ಸೀಟು ಕೊಡಿಸಿ ಎಂದು ಅನೇಕ ಬಡವರು ಕೇಳಿಕೊಂಡು ಬರುತ್ತಿದ್ದರು. ಆಗ ನೀವು ಶಿಫಾರಸು ಪತ್ರ ಬರೆದುಕೊಟ್ಟು ಅವರನ್ನು ಮಂಗಳೂರಿನ ಶ್ರೀಮಂತವಾದ ಕಾಲೇಜುಗಳಿಗೆ ಕಳುಹಿಸಿಕೊಡುತ್ತಿದ್ದೀರಿ.
ಆಗ ಶ್ರೀಮಂತ ಕಾಲೇಜುಗಳು ನಿಮ್ಮ ವಿನಂತಿಗೆ ಸೊಪ್ಪು ಹಾಕದೆ ಬಡವರಿಗೆ ಸೀಟ್ ನಿರಾಕರಿಸಿದಾಗ ನೀವು ತುಂಬಾ ನೊಂದಿರಿ. ಆದರೆ ಯಾವ #ಧರಣಿಯನ್ನೂ ನಡೆಸಲಿಲ್ಲ. #ಪ್ರತಿಭಟನೆಯನ್ನೂ ಮಾಡಲಿಲ್ಲ.
ತನ್ನ ಗೆಳೆಯರನ್ನು ಒಗ್ಗೂಡಿಸಿ ಸ್ವಾಭಿಮಾನದ ಮತ್ತು ಬಡ ಮಕ್ಕಳ ಗೋಕರ್ಣನಾಥೇಶ್ವರ ಕಾಲೇಜನ್ನು ಸ್ಥಾಪನೆ ಮಾಡಿದಿರಿ. ನಿಮಗೆ ಹ್ಯಾಟ್ಸಪ್ ಸರ್! ಅದು ಇಂದು ನಿಜವಾದ ಬಡವರ ಕಾಲೇಜು ಆಗಿದೆ.
ಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿ ನೀವೇ ಸರ್!
———————————————————————–
ಸರ್,ಇಂದು ಬಹಳ ಜನ ನಿಮ್ಮನ್ನು ನೆನೆಯುವುದು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ನವೀಕರಣದ ರೂವಾರಿ ಎಂದು. ಅದು ನೂರಕ್ಕೆ ನೂರು ನಿಜ. ಬಹಳ ಕಷ್ಟದಿಂದ ಹಣ ಸಂಗ್ರಹಿಸಿ, ನಾಡಿನ ಶ್ರೇಷ್ಟ ಶಿಲ್ಪಿಗಳನ್ನು ಒಂದೆಡೆಯಲ್ಲಿ ಸೇರಿಸಿ, ಆಧುನಿಕತೆಯ ಎರಕದಿಂದ ಆ ಕ್ಷೇತ್ರವನ್ನು ಎದ್ದು ನಿಲ್ಲಿಸಿದವರು ಖಂಡಿತವಾಗಿ ನೀವು. ನೀವು ಆರಂಭ ಮಾಡಿರುವ ಮಂಗಳೂರು ದಸರಾ ಉತ್ಸವವು ಇಂದು ನಾಡಿನಾದ್ಯಂತ ದೊಡ್ಡ ಹೆಸರು ಮಾಡಿದೆ. ಅದಕ್ಕೆ ಕೂಡ ಸ್ಫೂರ್ತಿ ನೀವು.
ಅದೇ ರೀತಿ ಕನ್ಯಾಡಿಯ ರಾಮ ಮಂದಿರ, ಕಂಕನಾಡಿಯ ಗರಡಿ, ಕಟಪಾಡಿಯ ವಿಶ್ವನಾಥ ಕ್ಷೇತ್ರ, ನೂರಾರು ಗರಡಿಗಳು, ಹಲವು ಗುರುಮಂದಿರಗಳು, ಕಲ್ಯಾಣ ಮಂಟಪಗಳ ಅಭಿವೃದ್ಧಿಯಲ್ಲಿ ನೀವು ಮುಂದೆ ನಿಂತವರು ಎನ್ನುವುದು ನಿಮ್ಮ ಹೆಗ್ಗಳಿಕೆ.
ಬ್ರಹ್ಮಶ್ರೀ ನಾರಾಯಣ ಗುರು ತೋರಿದ ದಾರಿಯಲ್ಲಿ ನಡೆದವರು ನೀವು.
——————————————————————————
ನೂರಾರು ಜನರು ಇಂದು ನಾರಾಯಣ ಗುರುಗಳ ಆದರ್ಶಗಳ ಬಗ್ಗೆ ಮಾತಾಡುತ್ತಾರೆ. ಆದರೆ ನೀವು ಬ್ರಹ್ಮಶ್ರೀ ನಾರಾಯಣ ಗುರುಗಳು ತೋರಿದ ದಾರಿಯಲ್ಲಿ, ಅವರ ತತ್ವಗಳ ಬೆಳಕಲ್ಲಿ ಧೈರ್ಯವಾಗಿ ನಡೆದಿರಿ. ಸಾಕಷ್ಟು ಪ್ರತಿಭಟನೆಗಳು ನಡೆದರೂ ವಿಚಲಿತರಾಗದೆ ವಿಧವೆಯರನ್ನು ಆ ದೇವಳದ ಅರ್ಚಕರಾಗಿ ನೇಮಿಸಿದಿರಿ. ಅಲ್ಲಿ ವಿಧವೆಯರಿಗೆ ಸೀರೆ, ಬಳೆ, ಹೂವುಗಳನ್ನು ನೀಡಿದ್ದು, ಅವರ ಕೈಗಳಿಂದ ರಥವನ್ನು ಎಳೆದದ್ದು, ಯಜ್ಞಕ್ಕೆ ಪೂರ್ಣಾಹುತಿಯನ್ನು ಕೊಡಿಸಿದ್ದು……ಓಹ್! ಅದಕ್ಕೆ ನಾನು ನಿಮ್ಮನ್ನು ನಾಡಿನ ಶ್ರೇಷ್ಠ ಸಮಾಜ ಸುಧಾರಕ ಎಂದು ಪ್ರೀತಿ ಮತ್ತು ಅಭಿಮಾನದಿಂದ ಕರೆದದ್ದು!
ಮಗುವಿನ ಮುಗ್ಧತೆಯ ನಗು.
—————————————-
ನಾರಾಯಣಗುರು ಹೇಳಿದ್ದನ್ನು ಮಾತ್ರ ನಾನು ಮಾಡುತ್ತಿದ್ದೇನೆ ಎಂದು ನುಡಿಯುವ, ಅದರಂತೆ ನಡೆಯುವ ನೀವು ನಿಜವಾದ ಅರ್ಥದಲ್ಲಿ ಲೆಜೆಂಡ್ ಸರ್! ಇಂದು ಎಲ್ಲ ರಾಜಕೀಯ ಪಕ್ಷಗಳ ಧುರೀಣರು ನಿಮ್ಮ ಮನೆಗೆ ಬಂದು ನಿಮ್ಮ ಕಾಲಿಗೆ ಎರಗಿದಾಗ ಎಲ್ಲ ಪಕ್ಷದವರನ್ನು ಆಶೀರ್ವಾದ ಮಾಡಿ ಕಳುಹಿಸುವುದು ನಿಮ್ಮ ದೊಡ್ಡತನ ಸರ್! ಈ ಹರೆಯದಲ್ಲಿಯೂ ನೀವು ಮುಗ್ಧತೆಯನ್ನು ಕಾಪಾಡಿಕೊಂಡು ನಗುತ್ತಿರುವ ನೀವು ನಿಜವಾಗಿ ಗ್ರೇಟ್ ಸರ್!
ಅರ್ಧ ಶತಮಾನವನ್ನು ಪ್ರಭಾವಶಾಲಿಯಾದ ರಾಜಕೀಯದಲ್ಲಿ ಕಳೆದರೂ ಇಂದಿಗೂ ಸರಳವಾಗಿ ಒಂದು ಸಣ್ಣ ಮನೆಯಲ್ಲಿ ವಾಸ ಮಾಡುವ, ಒಂದು ಹಳೆಯ ಕಾರಿನಲ್ಲಿ ನಿತ್ಯವೂ ಓಡಾಡುವ, ತನ್ನ ಪಿಂಚಣಿಯ ಹಣವನ್ನು ಕೂಡ ಬಡವರಿಗೆ ಹಂಚುವ, ತನ್ನ ಹುಟ್ಟುಹಬ್ಬವನ್ನು ಯಾರೂ ಆಚರಿಸುವುದು ಬೇಡ ಎಂದು ಬಹಿರಂಗವಾಗಿಯೇ ಹೇಳುವ, ನೊಂದವರ, ಆಶಕ್ತರ ಮತ್ತು ತುಳಿತಕ್ಕೆ ಒಳಗಾದವರ ಪರವಾಗಿ ಸಿಡಿದು ನಿಲ್ಲುವ ನಿಮಗೆ ಇಂದು ಹುಟ್ಟಿದ ಹಬ್ಬ ಸರ್! ದೇವರು ನಿಮಗೆ ಇನ್ನಷ್ಟು ಶಕ್ತಿ ಮತ್ತು ಆಯಸ್ಸು ಕೊಡಲಿ.
✍️ ರಾಜೇಂದ್ರ ಭಟ್ ಕೆ.












