*ದಾವಣಗೆರೆ ದಕ್ಷಿಣ ಉಪಚುನಾವಣೆ: ನಿರೀಕ್ಷೆ ಮೀರಿ ಜನಬೆಂಬಲ: ಎಸ್‌ಡಿಪಿಐ ಅವಲೋಕನ ಸಭೆಯಲ್ಲಿ ವಿಶ್ವಾಸ ವ್ಯಕ್ತ*

 

*ದಾವಣಗೆರೆ: ಏಪ್ರಿಲ್ 23, 2026*

 

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ವತಿಯಿಂದ ಸಮಗ್ರ ಅವಲೋಕನ ಸಭೆ ನಡೆಯಿತು.

 

ಸಭೆಯಲ್ಲಿ ಎಸ್‌ಡಿಪಿಐ ಪಕ್ಷದ ರಾಜ್ಯ ಉಪಾಧ್ಯಕ್ಷರು ಹಾಗೂ ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿದ್ದ ಅಬ್ದುಲ್ ಹನ್ನನ್ ಅವರ ಸಮ್ಮುಖದಲ್ಲಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮುಜಾಹಿದ್ ಪಾಷಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಅಭ್ಯರ್ಥಿಯಾಗಿದ್ದ ಅಪ್ಸರ್ ಕೊಡ್ಲಿಪೇಟೆ, ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಕಾರ್ಯದರ್ಶಿಗಳಾದ ಸೈಯದ್ ಅಕ್ರಮ್ ಮೌಲಾನ, ರಾಜ್ಯ ಕಾರ್ಯದರ್ಶಿಗಳಾದ ರಂಜಾನ್ ಕಡಿವಾಳ್, ರಿಯಾಜ್ ಕಡಂಬು, ಅಪ್ಸರ್ ಕೆ.ಆರ್. ನಗರ, ರಾಜ್ಯ ಸಮಿತಿ ಸದಸ್ಯರಾದ ಫಯಾಜ್ ಅಹಮದ್, ಮಕ್ಸುದ್ ಮಕಾನ್ದಾರ್, ಅಬ್ರಾರ್ ಅಹಮದ್, ಉಬೇದುಲ್ಲಾ ಕೆರೆ ಬಿಲ್ಚಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷರಾದ ಎ.ಆರ್. ತಾಹಿರ್ ವಹಿಸಿದ್ದರು. ಸಭೆಯಲ್ಲಿ ಉಪಚುನಾವಣೆಯ ಆಗುಹೋಗುಗಳ ಕುರಿತು ಸಮಗ್ರ ಚರ್ಚೆ ನಡೆಯಿತು. ಈ ಬಾರಿ ನಡೆದ ಚುನಾವಣೆ ಐತಿಹಾಸಿಕವಾಗಿದ್ದು, ಸ್ವಾಭಿಮಾನ ಆಧಾರಿತ ಚುನಾವಣೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

 

ತಳವರ್ಗದವರು ಹಾಗೂ ರಾಜಕೀಯವಾಗಿ ಅವಕಾಶವಂಚಿತ ಸಮುದಾಯಗಳು, ವಿಶೇಷವಾಗಿ ಅಹಿಂದ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಎಸ್‌ಡಿಪಿಐ ಪರವಾಗಿ ಒಲವು ತೋರಿರುವುದು ಸಭೆಯಲ್ಲಿ ಗಮನಿಸಲಾಯಿತು. ಜಾತಿ, ಧರ್ಮ, ಪಂಥ ಭೇದಗಳನ್ನು ಮೀರಿ ಪಕ್ಷದ ಅಭ್ಯರ್ಥಿಗೆ ಜನಬೆಂಬಲ ವ್ಯಕ್ತವಾಗಿರುವುದು ಗಮನಾರ್ಹವಾಗಿದೆ ಎಂದು ನಾಯಕರು ತಿಳಿಸಿದ್ದಾರೆ.

 

ಪಕ್ಷದ ನಿರೀಕ್ಷೆಗೂ ಮೀರಿ ವ್ಯಕ್ತವಾದ ಈ ಜನಬೆಂಬಲವು ಮುಂದಿನ ಫಲಿತಾಂಶದಲ್ಲಿ ಪ್ರತಿಫಲಿಸಿ, ಸ್ವಾಭಿಮಾನದ ಗೆಲುವು ಸಾಧಿಸಲಾಗುವುದು ಎಂಬ ವಿಶ್ವಾಸವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.

 

ಸಭೆಯಲ್ಲಿ ಪಕ್ಷದ ಹಲವಾರು ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು.