ವಲಸೆ ಕಾರ್ಮಿಕರನ್ನು ನಮ್ಮ ಈದ್ ಸಂಭ್ರಮದಲ್ಲಿ ಸೇರಿಸೋಣ…

 

ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯು.ಪಿ.ಬಿಹಾರ, ಜಾರ್ಖಂಡ್,ಅಸ್ಸಾಮ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಸಾವಿರಾರು ವಲಸೆ ಕಾರ್ಮಿಕರಿದ್ದಾರೆ.ಅವರಲ್ಲಿ ದೊಡ್ಡ ಸಂಖ್ಯೆಯ ಮುಸ್ಲಿಮರೂ ಇದ್ದಾರೆ.ಅವರಲ್ಲಿ ಕೆಲವರು ನಮಾಜ್,ಉಪವಾಸ ಆಚರಿಸುತ್ತಾರೆ.ಇನ್ನು ಕೆಲವರಿಗೆ ತೀರಾ ಆ ಬಗ್ಗೆ ಜ್ಞಾನವೂ ಇಲ್ಲ. ಏನೂ ಜ್ಞಾನವಿಲ್ಲದವನೂ ಶುಕ್ರವಾರದ ಜಮಾ ನಮಾಝ್ ಮತ್ತು ಎರಡು ಹಬ್ಬಗಳನ್ನು ಆಚರಿಸುತ್ತಾರೆ. ಅವರಲ್ಲಿ ಕೆಲವರು ತಂತಮ್ಮ ರೂಮುಗಳಲ್ಲೇ ಅನ್ನ ಸಾರು ಬೇಯಿಸಿ ತಿನ್ನುತ್ತಾರೆ.ಇನ್ನು ಕೆಲವರು ವರ್ಷಪೂರ್ತಿ ಮೂರೂ ಹೊತ್ತು ಹೋಟೆಲ್‌ಗಳಲ್ಲೇ ಉಣ್ಣುತ್ತಾರೆ.

ನಾವು ಮುಸ್ಲಿಮರು ಹಬ್ಬ ಹರಿದಿನಗಳಲ್ಲಿ ಮಾಂಸದಡುಗೆ ಮಾಡುತ್ತೇವೆ.ಮುಸಲ್ಮಾನರು ಎಲ್ಲಿಯವರೇ ಆದರೂ ಮಾಂಸ ಪ್ರಿಯರು.

ಹಬ್ಬದ ದಿನಗಳಲ್ಲಿ ಸಹಜವಾಗಿಯೇ ಮುಸಲ್ಮಾನರ ಹೋಟೆಲ್‌ಗಳು ಬಂದ್ ಇರುವುದರಿಂದ ಈ ವಲಸೆ ಕಾರ್ಮಿಕರಿಗೆ ತರಕಾರಿ ಅಥವಾ ಮೀನೂಟವೇ ಗತಿ.

 

ನಮ್ಮ ಹಬ್ಬ ಎಂದರೆ ನಾವು ಮಾತ್ರ ಸಂಭ್ರಮಿಸಬೇಕಾದುದಲ್ಲ.ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಒಳ್ಳೆಯ ಬಟ್ಟೆ ಧರಿಸಿ, ಒಳ್ಳೆಯ ಆಹಾರ ಉಂಡು ಸಂಭ್ರಮದಿಂದ ಕಳೆಯಬೇಕು. ಹಬ್ಬದ ದಿನ ಯಾರೂ ಹಸಿದು ಕೂರಬಾರದು ಎಂಬ ಉದಾತ್ತ ಉದ್ದೇಶದಿಂದ ” ಇಸ್ಲಾಂ ಫಿತ್ರ್ ಝಕಾತ್ ಎಂಬ ದಾನ ಕಡ್ಡಾಯಗೊಳಿಸಿದೆ”.

365 ದಿನಗಳೂ ಹೋಟೇಲಲ್ಲೇ ತಿನ್ನುವವರಿಗೆ ಫಿತ್ರ್ ಝಕಾತ್ ಕೊಟ್ಟರೂ ಫಾಯಿದಾ ಆಗುವುದಿಲ್ಲ.

ಆದುದರಿಂದ ನಮ್ಮ ನಾಡಿಗೆ ದುಡಿಯಲು ಬಂದ ಮುಸ್ಲಿಂ ಸಮುದಾಯದ ವಲಸೆ ಕಾರ್ಮಿಕರ ಹಬ್ಬದೂಟದ ಜವಾಬ್ದಾರಿ ಈ ನಾಡಿನ ಮುಸ್ಲಿಮರಾದ ನಮ್ಮದು.

-ಮುಸ್ಲಿಂ ಗುತ್ತಿಗೆದಾರನ ಅಧೀನ ದುಡಿಯುವವರಾದರೆ ಗುತ್ತಿಗೆದಾರನು ಅವರಿಗೆ ಹಬ್ಬದೂಟ ನೀಡಲು ಬಾಧ್ಯಸ್ಥನಾಗಿರುತ್ತಾನೆ.

ವಲಸೆ ಕಾರ್ಮಿಕರು ವಾಸಿಸುವ ಊರುಗಳ ಮುಸ್ಲಿಮ್ ಜ‌ಮಾ‌ಅತ್‌ಗಳು, ಎಸ್ಸೆಸ್ಸೆಫ್, ಎಸ್ಕೆ‌ಎಸ್ಸೆಸ್ಸೆಫ್ ಮುಂತಾದ ಸಂಘ ಸಂಸ್ಥೆಗಳು ತಂತಮ್ಮ ಊರಲ್ಲಿ ಹಬ್ಬ ಆಚರಿಸದ ಪರವೂರ ಮುಸ್ಲಿಮರ ಬಳಿಗೆ ಹೋಗಿ ಅವರನ್ನು ಮಸೀದಿಗೆ ಆಹ್ವಾನಿಸಿ. ನಮ್ಮೂರಿನ ವರನ್ನು ಹೇಗೆ ಈದ್ ದಿನ ಆಲಿಂಗಿಸಿ ಪ್ರೀತಿ ಹಂಚುತ್ತೇವೋ ಹಾಗೆಯೇ ಅವರನ್ನು ಆಲಿಂಗಿಸಿ ಪ್ರೀತಿ ಹಂಚಿ. ಸಾಧ್ಯವಾದರೆ ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಅವರಿಗೆ ಒಳ್ಳೆಯ ತಿಂಡಿ, ಪಾನೀಯ,ಬಿರಿಯಾನಿ ಉಣಿಸಿ. ತುಂಬಾ ಜನ ವಲಸೆ ಕಾರ್ಮಿಕರಿದ್ದರೆ ಒಬ್ಬನೇ ಎಲ್ಲರನ್ನೂ ತನ್ನ ಮನೆಗೆ ಕರೆದೊಯ್ದು ಹಬ್ಬದೂಟ ಉಣ್ಣಿಸುವುದು ಕಷ್ಟವಾಗಬಹುದು. ಗೆಳೆಯರು ಸೇರಿಕೊಂಡು ಶೇರ್ ಮಾಡ್ಕೊಂಡು ಒಬ್ಬೊಬ್ಬರನ್ನೋ, ಇಬ್ಬಿಬ್ಬರನ್ನೋ ನಿಮ್ಮ ನಿಮ್ಮ ಮನೆಗೆ ಕರೆದೊಯ್ದು ಅವರಿಗೂ ಹಬ್ಬದೂಟ ಬಡಿಸಿ.ಅಥವಾ ಊರ ಮುಸ್ಲಿಮ್ ಯುವಕರು ಒಂದಿಷ್ಟು ದುಡ್ಡು ಸಂಗ್ರಹಿಸಿ ಮಸೀದಿಯಲ್ಲೇ ವಲಸೆ ಕಾರ್ಮಿಕರಿಗೆ ಹಬ್ಬದೂಟದ ವ್ಯವಸ್ಥೆ ಮಾಡಿ..

ಹೊಟ್ಟೆಪಾಡಿಗಾಗಿ ದುಡಿಯಲು ಬಂದ ನಮ್ಮ ಸಹೋದರನಿಗೆ ಹಬ್ಬದ ಸಂಭ್ರಮವಿಲ್ಲದಿದ್ದರೆ ನಮ್ಮ ಸಂಭ್ರಮ ಅಲ್ಲಾಹನು ಮೆಚ್ಚಿಯಾನೇ..?

 

-ಇಸ್ಮತ್ ಪಜೀರ್