ಇರಾನ್ ಯುದ್ಧ ಬಹಳ ಗಂಭೀರ ಪರಿಸ್ಥಿತಿಯನ್ನು ತಲುಪುತ್ತಿದೆ. ಇಲ್ಲಿ ಪೆಟ್ಟು ತಿನ್ನುವ ಇರಾನ್, ಪೆಟ್ಟು ಹೊಡೆಯುವ ಇಸ್ರೇಲ್, ಅಮೇರಿಕಾಕ್ಕೂ ಸುಖ ಇಲ್ಲ. ಒಟ್ಟಾರೆ ಈ ಯುದ್ಧ ಒಂದು ಮಹಾ ವಿನಾಶದ ಕಡೆಗೆ ಸಾಗುತ್ತಿದೆ.
ಭಾರತದ ಖ್ಯಾತ ಮಿಲಿಟರಿ ಇತಿಹಾಸಕಾರ, ನಿವೃತ್ತ ಯೋಧ, ಲೇಖಕ ಕರ್ನಲ್ ಅಜಯ್ ರೈನಾ ಅವರು ಈಗಿನ ಯುದ್ಧದ ಕುರಿತುಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ವಿಶ್ಲೇಷಣೆಯ ಕನ್ನಡ ಅನುವಾದ ಹೀಗಿದೆ.
1. ಇಸ್ರೇಲ್‌ಗೆ ದೊಡ್ಡ ಮಟ್ಟದಲ್ಲಿ ಹಾನಿಯಾಗಿದೆ. ಕೆಲವು ಕಡೆ ಅವಶೇಷಗಳ ಕೆಳಗೆ ಮೃತದೇಹಗಳಿವೆ; ಅವುಗಳನ್ನು ಹೊರತೆಗೆಯಲು ಕೂಡ ಜನರಿಲ್ಲದ ಸ್ಥಿತಿ ಇದೆ.
2. ತೆಹ್ರಾನ್ ನಗರದಲ್ಲಿ ಭಾರಿ ನಾಶವಾಗಿದೆ. ನಾಗರಿಕ ಮೂಲಸೌಕರ್ಯಗಳು ಬಹುತೇಕ ನಿರ್ನಾಮವಾಗಿದೆ.
3. ಮೂರು ದಿನಗಳಲ್ಲಿ ಅಮೇರಿಕಾದಲ್ಲಿ ಪೆಟ್ರೋಲ್ ಬೆಲೆ ಗ್ಯಾಲನ್‌ಗೆ 2.45 ಡಾಲರ್‌ನಿಂದ 3.64 ಡಾಲರ್‌ಗೆ ಏರಿದೆ.
4. ಅರಬ್ ದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದ್ದರೂ, ನಾಗರೀಕ ಜನ ಜೀವನ ದೊಡ್ಡ ಮಟ್ಟದಲ್ಲಿ ಹಾನಿಯಾಗಿದೆ.
5. “ಅಮೇರಿಕಾ ನಮ್ಮನ್ನು ರಕ್ಷಿಸುತ್ತದೆ” ಎಂಬ ಭರವಸೆ ತಪ್ಪಾಗಿದೆ ಎಂಬ ಭಾವನೆ ಅರಬ್ ಜಗತ್ತಿನಲ್ಲಿ ಮೂಡುತ್ತಿದೆ.
—
ಇದರ ಅರ್ಥ ಏನು?
1. ಅಮೇರಿಕಾ ಈಗ ತನ್ನ ದೇಶದೊಳಗೂ ಸಮಸ್ಯೆಗಳನ್ನು ಎದುರಿಸುತ್ತಿದೆ ಮತ್ತು ದೂರದ ದೇಶಗಳಲ್ಲಿ ಯುದ್ಧದಲ್ಲಿ ಸಿಲುಕಿಕೊಂಡಿದೆ.
2. ಯುದ್ಧ ದೀರ್ಘಕಾಲ ಮುಂದುವರಿದರೆ, ಇಸ್ರೇಲ್‌ಗೆ ಪುನರ್‌ನಿರ್ಮಾಣ ಮಾಡಿಕೊಳ್ಳುವುದು ಕಷ್ಟವಾಗಬಹುದು. ಆ ಪ್ರಮಾಣದಲ್ಲಿ ಇಸ್ರೇಲಿನ ಮೂಲಭೂತ ಸೌಕರ್ಯಗಳು ಹಾಳಾಗಿವೆ.
3. ಅಮೇರಿಕಾ ಮತ್ತು ಅರಬ್ ದೇಶಗಳ ನಡುವಿನ ಸಂಬಂಧಗಳಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ.
4. ಇರಾನ್ ಈಗ ಒಂದು ಹಂತಕ್ಕೆ ಬಂದಿದೆ — ಅಲ್ಲಿ ನಷ್ಟಗಳ ಬಗ್ಗೆ ಹೆಚ್ಚು ಪರಿಗಣನೆ ಇಲ್ಲದ ಪರಿಸ್ಥಿತಿ.
—
ಮುಂದೆ ಏನಾಗಬಹುದು?
1. ಯುದ್ಧವನ್ನು ಅಚಾನಕ್ ಅಂತ್ಯಗೊಳಿಸುವ ಒಂದು ಸಾಧ್ಯತೆ ಎಂದರೆ — ಇಸ್ರೇಲ್ ಇರಾನ್ ಮೇಲೆ ಅಣು ಬಾಂಬ್ ಬಳಸುವುದು. ಅಮೇರಿಕಾ ಸ್ವತಃ ಬಳಸುವುದಿಲ್ಲ, ಆದರೆ ಇಸ್ರೇಲ್‌ಗೆ ಪ್ರೋತ್ಸಾಹ ನೀಡಬಹುದು. ಜೊತೆಗೆ ಇಸ್ರೇಲಿಗೆ ಅದರ ಅನಿವಾರ್ಯತೆ ಇದೆ. ಕಾರಣ ಈಗ ಇದು ಇಸ್ರೇಲಿನ ಅಸ್ತಿತ್ವದ ಪ್ರಶ್ನೆ.
2. ಇಸ್ರೇಲ್ ಅಮೇರಿಕಾದ ಮಾತು ಕೇಳದಿದ್ದರೆ, ಅಮೇರಿಕಾ ಅದನ್ನು ಬೆಂಬಲಿಸುವುದನ್ನು ಕಡಿಮೆ ಮಾಡಬಹುದು. ಯುದ್ಧದ ವೆಚ್ಚ ಅಮೇರಿಕಾಕ್ಕೂ ಸಹ ಈಗ ತುಂಬಾ ಹೆಚ್ಚಾಗಿದೆ.
3. ಇರಾನ್ ಒಪ್ಪಂದಕ್ಕೆ ಬಂದರೆ ಮಾತ್ರ ಯುದ್ಧ ನಿಲ್ಲಬಹುದು ಆದರೆ IRGC (ಇರಾನ್ ರೆವಲ್ಯೂಷನರಿ ಗಾರ್ಡ್) ವ್ಯವಸ್ಥೆ ವಿಭಜಿತವಾಗಿರುವುದರಿಂದ ಒಳಗೇ ಗೃಹಯುದ್ಧ ಪ್ರಾರಂಭವಾಗುವ ಸಾಧ್ಯತೆ ಇದೆ. ಅದರಿಂದ ಇರಾನ್ ವಿಭಜನೆಯಾಗಬಹುದು.
4. ಅಣುಬಾಂಬ್ ಬಳಸುವುದು ಅತಿಯಾದ ಕ್ರಮ ಎಂದು ಕಾಣಬಹುದು. ಆದರೆ ಈಗ ನಡೆಯುತ್ತಿರುವುದು ಕೂಡ ಬಹಳ ಭೀಕರವಾಗಿದೆ — ಇಂಧನ ಡಂಪ್‌ಗಳ ಮೇಲೆ ದಾಳಿ, ನೀರು ಶುದ್ಧೀಕರಣ ಘಟಕಗಳ ಮೇಲೆ ದಾಳಿ ಇತ್ಯಾದಿ. ಇವು ಮಾನವೀಯ ಸಂಕಷ್ಟ ಉಂಟುಮಾಡುವ ಕ್ರಮಗಳು. ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ವಿರುದ್ಧ ಇಸ್ರೇಲ್ ವೈಟ್ ಫಾಸ್ಫರಸ್ ಬಾಂಬ್ ಬಳಸಿದ ಆರೋಪಗಳೂ ಬಂದಿವೆ.
5. ಇರಾನ್ ಬಳಿ ಅಣುಬಾಂಬ್ ಇಲ್ಲದಿದ್ದರೂ “ಡರ್ಟಿ ಬಾಂಬ್” ತಯಾರಿಸುವ ಸಾಮರ್ಥ್ಯ ಇರುವ ಸಾಧ್ಯತೆ ಇದೆ.
—
ಒಟ್ಟಿನಲ್ಲಿ ಪರಿಸ್ಥಿತಿ ಬಹಳ ಗಂಭೀರವಾಗಿದ್ದು ಇದು ಇವತ್ತು ಯಾರ ನಿಯಂತ್ರಣದಲ್ಲೂ ಇಲ್ಲವಾಗಿದೆ.












