• ಮಕ್ಕಳಿಗೆ ಬೇಡವಾದ ವೃದ್ಧ ದಂಪತಿಗಳು ಸಾವಿಗೆ ಶರಣು…

ಹಾಸನ ನಗರದಲ್ಲಿ ಶನಿವಾರ ರಾತ್ರಿ 9.30 ರ ಸಮಯದಲ್ಲಿ ರೈಲ್ವೇ ಹಳಿ ಮೇಲೆ ಬರುತ್ತಿದ್ದ ಗೂಡ್ಸ್ ಗಾಡಿಗೆ ಅಡ್ಡ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೋಮವಾರಪೇಟೆ ತಾಲ್ಲೂಕಿನ ಚೌಡೇನಹಳ್ಳಿಯ ವಾಸಿಗಳಾದ ದಂಪತಿಗಳು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ವೃದ್ಧ ದಂಪತಿಗಳು ಪರಸ್ಪರ ಕೈಕೈಹಿಡಿದುಕೊಂಡು ಒಟ್ಟಿಗೆ ಹಳಿ ಮಧ್ಯೆ ನಿಂತು ರೈಲಿಗೆ ಎದೆಕೊಟ್ಟು ಸಾವನ್ನಪ್ಪಿದ್ದಾರೆ.

 ಡ್ಯಾನಿಯಲ್ (85) ಮತ್ತು ಅವರ ಪತ್ನಿ ಮೇರಿ ಡ್ಯಾನೀಯಲ್ ( 84) ಮೃತಪಟ್ಟ ದುರ್ದೈವಿಗಳು.

ವೃದ್ಧಾಪ್ಯದ ಸಹಜ ಕಾಯಿಲೆಗಳಿದ್ದು ಆರೈಕೆ ಕೊರತೆ ಹಾಗೂ ಇದ್ದ ಇಬ್ಬರು ಗಂಡು ಮಕ್ಕಳ ಉದಾಸೀನತೆ ಮತ್ತು ನಿರ್ಲಕ್ಷ್ಯಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದು ಸುದ್ದಿ.

ಇಂತಹ ಸುದ್ದಿಗಳೇ ನನ್ನ ಮನದ ಶಾಂತಿಯನ್ನು ಕದಡಿ ಬಿಡುತ್ತೆ. ಎಲ್ಲಿ ಹೋಯಿತು ಪ್ರೀತಿ-ಕರುಣೆ, ಎಲ್ಲಿ ಕಾಣೆಯಾಯಿತು ಮಾನವೀಯ ಸಂಬಂಧ, ಎಲ್ಲಿ ಕಳೆದು ಹೋಯಿತು ಸಂಸ್ಕಾರ ???

ಮಕ್ಕಳಿಗಾಗಿ ಹಂಬಲಿಸಿ, ಹತ್ತಾರು ದೇವರ ಹರಕೆ ಕಟ್ಟಿ, ನೂರಾರು ಕನಸು ಕಂಡು ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಪೋಷಿಸಿ, ರಕ್ಷಿಸಿ ಹೆತ್ತು, ಹೊತ್ತು. ಮಕ್ಕಳು ಎದೆಯ ಎತ್ತರಕ್ಕೆ ಬೆಳೆಯುವವರೆಗೆ ರಕ್ಷಕರಂತೆ ಕಾದುಕುಳಿತು ಅವರ ಭವಿಷ್ಯದ ಬಗ್ಗೆ ಸದಾ ಕನಸು ಕಾಣುತ್ತಾ, ಅವರ ಕಾಲಮೇಲೆ ನಿಲ್ಲುವವರೆಗೂ ತಮ್ಮ ಜೀವವನ್ನೇ ಪಣಕ್ಕಿಟ್ಟು ತಮ್ಮ ಸುಖ, ಸಂತೋಷವನ್ನೇ ತ್ಯಾಗ ಮಾಡುವ ಹೆತ್ತವರು ಸಾಗಿ ಬಂದ ಹತ್ತಾರು ವರ್ಷಗಳ ಕಷ್ಟ, ಶ್ರಮ, ನೋವು, ಸಂಕಟ ಅನುಭವಿಸಿದವರಿಗೇ ಗೊತ್ತು ಆ ನರಕ. ಆದರೂ ಮಕ್ಕಳ ನೋಡುತ್ತಾ ಎಲ್ಲಾ ಮರೆತುಬಿಡುವ ಹೆತ್ತವರ ಕಣ್ಣಲ್ಲಿ ಸದಾ ಮಕ್ಕಳ ಭವಿಷ್ಯವೇ ಇರುತ್ತದೆ. ಆದರೆ ಅವರ ಅಂತ್ಯದ ದಿನಗಳಲ್ಲಿ ರಕ್ತದ ಕಣ್ಣೀರು ಹರಿಸಬೇಕೆಂದರೆ ಇದು ಎಂತಹ ಸಮಾಜ, ಎಂತಹ ಜಗತ್ತು ??

ಸ್ನೇಹಿತರೇ,

ಇಂದು ಇಡೀ ಜಗತ್ತಿನ ಜನ ಕೊಡುತ್ತಿರುವ ಮೊದಲ ಆದ್ಯತೆ ಮೊಬೈಲ್, ಎರಡನೇ ಆದ್ಯತೆ ಹಣ, ಮೂರನೇ ಆದ್ಯತೆ ಹೆಂಡತಿ ಅಥವಾ ಗಂಡ, ನಾಲ್ಕನೇ ಆದ್ಯತೆ ಮಕ್ಕಳು, ಅವಶ್ಯಕತೆಗಳು..

ಆಸೆ, ದುರಾಸೆಗಳ ಹಿಂದೆ ಓಡುತ್ತಿರುವವರಿಗೆ ಯಾವುದೂ ಕಾಣುತ್ತಿಲ್ಲ…

ಈ ಜಗತ್ತಿಗೆ ತಮ್ಮನ್ನು ತಂದು ಹುಟ್ಟು, ಬೆಳವಣಿಗೆ, ಅಭಿವೃದ್ಧಿಗೆ ಕಾರಣರಾದ ಹೆತ್ತವರ ಬಗ್ಗೆ ಇಂದಿನ ಸಮಾಜ ತೀರಾ ಕಡೆಗಣಿಸಿದೆ. ಕಾರಣ : ಸಂಬಂಧಗಳು ಸತ್ತು ಹೋಗಿದೆ.

ಶೇ. 80-90 ರಷ್ಟು ವೃದ್ಧರ ಪರಿಸ್ಥಿತಿ ಇದೇ ಆಗಿದೆ. ಕೆಲವೇ ಕೆಲವು ಮಂದಿ ಮಾತ್ರ ಹೆತ್ತವರ ಬಗ್ಗೆ ಪ್ರೀತಿ ಇಟ್ಟು ಕೃತಜ್ಞತಾ ಪೂರ್ವಕವಾಗಿ ಸೇವೆ ಮಾಡಿದ್ದು ಗಮನಿಸಿದ್ದೇವೆ‌. ಕೈ ಕಾಲು ಗಟ್ಟಿಯಾಗಿದ್ದು, ಆರೋಗ್ಯವಾಗಿ ಮನೆಯವರು ಹೇಳುವ ಕೆಲಸ ಮಾಡಿಕೊಂಡಿರದ್ದಷ್ಟೇ ಬೆಲೆ. ಊಟ, ತಿಂಡಿ. ಉಳಿದಂತೆ ಎಲ್ಲಾ ನಿರ್ಲಕ್ಷ್ಯ. ಅನಾರೋಗ್ಯ, ಸ್ವಚ್ಚತೆ, ಬಟ್ಟೆ, ಸ್ವಾನದ ವಿಚಾರದಲ್ಲಿ ಗಮನಿಸುವವರು ಇಲ್ಲವೇ ಇಲ್ಲ.

ಮಗ ಕೆಲಸ, ಇತರೆ ಒತ್ತಡದಲ್ಲಿ ಹೆತ್ತವರ ಬಗ್ಗೆ ಗಮನಿಸಲು ಸಾಧ್ಯವಾಗದ ಒಂದು ಕಾರಣವಾದರೆ, ಮನೆಯಲ್ಲಿ ನಾನಾ ಸಮಸ್ಯೆಗೆ ಅವರೇ ಕಾರಣ ಎಂಬ ಆರೋಪದಲ್ಲಿ ಬೇಸತ್ತು ಹೋಗಿರಲು ಬಹುದು.

ಸೊಸೆಯ ನಿರ್ಲಕ್ಷ್ಯ, ಬೈಗುಳ, ಹಿಂಸೆ, ಹಲ್ಲೆಯಿಂದ ಬೇಸತ್ತ ಎಷ್ಟೋ ವೃದ್ಧರು ಮನೆ ಬಿಟ್ಟು ದೂರ ಹೋಗಿ ಸತ್ತು ಕೆಟ್ಟು ಹೋಗಿರುವ ನಾನಾ ಉದಾಹರಣೆಗಳು ಇವೆ. ಮೊಮ್ಮಕ್ಕಳ ಪ್ರೀತಿಗೆ ಗಂಟು ಬಿದ್ದ ಎಷ್ಟೋ ವೃದ್ಧರು ನರಕ ಹಿಂಸೆಯಲ್ಲಿ ಕೊನೆಯ ದಿನಗಳ ಬದುಕು ನಡೆಸಿ, ಕೊನೆಗೆ ದೇಹದ ಕಂತೆ ಒಗೆದ ಘಟನೆಗಳು ಸದಾ ನಡೆಯುತ್ತಲೇ ಇವೆ.

ಕೆಲವು ಸ್ಥಿತಿವಂತ, ವಿದೇಶಿ ವಾಸಿಗಳು ಹೆತ್ತವರನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಕೈತೊಳೆದುಕೊಂಡ ಉದಾಹರಣೆಗಳಿಗೆ ಕಮ್ಮಿ ಇಲ್ಲ.

ಘಟನೆ ಬಗ್ಗೆ :

ವಯಸ್ಸಾದ ಎರಡು ಜೀವಗಳು ಒಟ್ಟಿಗೆ ಸಾಯಲು ನಿರ್ಧರಿಸಿದ್ದು, ಧೈರ್ಯವಾಗಿ ಕೈ ಕೈ ಹಿಡಿದು ಸಾವಿಗೆ ತಲೆ ಕೊಟ್ಟಿದ್ದು, ಸಾವು ಎದುರಿಗೆ ಇರುವಾಗ ಅವರು ಆ ಕ್ಷಣ ಅನುಭವಿಸಿದ ನೋವು…

ನಿಜಕ್ಕೂ ನನ್ನ ಕಣ್ಣಲ್ಲಿ ನೀರು ತಡೆಯಿಲ್ಲದೇ ಹರಿದು, ಕೆನ್ನೆಗಳ ಮೇಲೆ ಉರುಳಿ ಎದೆ ಮೇಲೆ ಬಿದ್ದು ಬಾರವಾಗತೊಡಗಿತು. ಒಂದೆರಡು ಅಕ್ಷರ ಬರೆದು ಬಿಡುವ ಎಂದು ಅಕ್ಷರ ಟೈಪು ಮಾಡಿ ಮುಗಿಸುವ ಹೊತ್ತಲ್ಲೂ ಅವರ ಆ ನೋವು ಕಣ್ಣಾ ಮುಂದೆ ಕಂಡಂತೆ ಪುನಃ ಅತ್ತು ಬಿಟ್ಟೆ…..

ಥೂ, ನಾವು ಎಂತಹ ನಿರ್ಧಯಿ ಸಮಾಜದಲ್ಲಿ ಬದುಕುತ್ತಿದ್ದೇವೆ. ಎಂತಹ ಪಾಪಿಗಳ ಜಗತ್ತು ಸೃಷ್ಟಿಯಾಗಿದೆ…

 ” ವಿದ್ಯುದಾಲಿಂಗನಕ್ಕೆ ಸಿಕ್ಕಿ ಸತ್ತಿದೆ ಕಾಗೆ” ಎಂದು ನನ್ನ ಶಿಕ್ಷಕರು ಬಾಲ್ಯದಲ್ಲಿ ಮಾನವೀಯ ಕವಿಯ ಕವನ ಓದುವಾಗ ಕವಿಯ ಮನಸ್ಸು ಕಂಡು, ಕಾಗೆಯ ಸಾವ ಕಂಡು ನೊಂದುಕೊಂಡಿದ್ದ ನಮಗೆ ಇವತ್ತಿನ ಕರುಣೆಯಿಲ್ಲದ ಮನಸ್ಸುಗಳ ಜೊತೆಗೆ ಬದುಕುವುದಾದರೂ ಹೇಗೆ ? ಏಕೆ ? ಅನಿಸುತ್ತಿದೆ.

40-50 ವಯಸ್ಸಾದ ಮಕ್ಕಳ ಇಂದಿನ ದುರ್ವರ್ತನೆಯಾದರೆ, ಇವತ್ತಿನ ಅಂಕಾಧಾರಿತ, ಕೊಠಡಿಯ ಕೂಸುಗಳು, ಸಙಸ್ಕಾರ, ಪ್ರಕೃರ್ತಿ, ಮಾನವೀಯ ಸಂಬಙಧ ಅರಿಯದ ಇವತ್ತಿನ ಮಕ್ಕಳ ಮುಂದಿನ ದಿನಗಳು ಹೇಗಿರುತ್ತದೆ ಎಂದರೆ ಎದೆ ನಡುಗುತ್ತದೆ.

ಯಾರಾದರೂ ನೂರು ವರ್ಷಗಳ ಕಾಲ ಸುಖವಾಗಿ ಬಾಳಿ ಎಂದರೆ ನಮಗೆ ಗಾಬರಿಯಾಗುತ್ತದೆ, ಆ ನರಕ ನೆನಪಾಗಿ ತಕ್ಷಣ ನಾವು ” ದಯವಿಟ್ಟು ಆ ಆಶೀರ್ವಾದ, ಹಾರೈಕೆ ವಾಪಾಸ್ಸು ಪಡೆದು ಬಹುಬೇಗ ನೆಮ್ಮದಿಯ ಸಾವು ಪಡೆಯಿರಿ ” ಎಂದು ಹೇಳಿದರೆ ಅದರಷ್ಟು ಸಹಾಯ ಮತ್ತು ಪುಣ್ಯ ಬೇರೆ ಇಲ್ಲ ಎನಿಸುತ್ತೆ.

ಇದು ನನ್ನ ಮನದಾಳದ ಮೌನ ಆಕ್ರಂದನ. ಇದು ಹೊಸ ಸುದ್ದಿಯಲ್ಲ. ಇಂತಹ ಅನೇಕ ಸುದ್ದಿಗಳು ಆಗಾಗ ನನ್ನ ಮನಸ್ಸನ್ನು ಘಾಸಿಗೊಳಿಸಿದ್ದು ಇದೆ. ಮಕ್ಕಳೇ ಹೆತ್ತವರ ಬಡಿದ, ಹಿಂಸಿಸಿದ, ಸುಟ್ಟ, ಕೊಂದು ಹಾಕಿದ ನಾನಾ ಘಟನೆಗಳು ಕೇಳಿದಾಗ ಮೈ, ಮನ ನಡುಗಿ, ಹೃದಯ ನೊಂದುಕೊಂಡಿದ್ದೂ ಸಾಕಷ್ಟು ಬಾರಿ ಆಗಿದೆ…

ಸಾಕು…

. ತಿಪಟೂರು ಕೃಷ್ಣ.

ಪತ್ರಕರ್ತ.