ಸ್ಟ್ಯಾಟಜಿಕ್ ಹುದ್ದೆಗಳಲ್ಲಿ ನಮ್ಮ ಪರಿಸ್ಥಿತಿ
2020-2024 ರ ನಡುವಿನ ಅವಧಿಯಲ್ಲಿ ಭಾರತೀಯ ಆಡಳಿತ ಸೇವೆ (ಐಎಎಸ್) 92%, ಭಾರತೀಯ ಪೊಲೀಸ್ ಸೇವೆ (ಐಪಿಎಸ್) 90% ಮತ್ತು ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್) ಯ ಸುಮಾರು 82% ಅಧಿಕಾರಿಗಳು ಸಾಮಾನ್ಯ ವರ್ಗಕ್ಕೆ ಸೇರಿದವರು ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ. ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ಸದಸ್ಯರು ಈ ಹುದ್ದೆಗಳಲ್ಲಿ ಕೇವಲ 8.01%, 10.16% ಮತ್ತು 17.28% ರಷ್ಟಿದ್ದಾರೆ.
15,169 ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್‌ಗಳ ಒಟ್ಟು ಅಧಿಕೃತ ಸಂಖ್ಯೆಯಲ್ಲಿ 2,834 (18.6%) ಖಾಲಿ ಹುದ್ದೆಗಳಿವೆ ಎಂದು ಸರ್ಕಾರ ಸಂಸತ್ತಿಗೆ ತಿಳಿಸಿದೆ.
ಫೆಬ್ರವರಿ 12 ರಂದು ರಾಜ್ಯಸಭೆಯಲ್ಲಿ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ) ಜಿತೇಂದ್ರ ಸಿಂಗ್ ಮಂಡಿಸಿದ ದತ್ತಾಂಶವು ಪ್ರಸ್ತುತ ಒಟ್ಟು 5,577 ಐಎಎಸ್, 4,594 ಐಪಿಎಸ್ ಮತ್ತು 2,164 ಐಎಫ್‌ಎಸ್ ಅಧಿಕಾರಿಗಳಿದ್ದಾರೆ ಎಂದು ತೋರಿಸುತ್ತದೆ.
ಐಎಎಸ್‌ನಲ್ಲಿ, ಕೇವಲ 2.42% ಜನರು ಎಸ್‌ಸಿ ಸಮುದಾಯಗಳಿಂದ, 1.2% ಜನರು ಎಸ್‌ಟಿ ಮತ್ತು 4.39% ಜನರು ಒಬಿಸಿ ಸಮುದಾಯಗಳಿಂದ ಬಂದಿದ್ದಾರೆ. ಐಪಿಎಸ್‌ನಲ್ಲಿ, 3.06% ಜನರು ಎಸ್‌ಸಿ ಸಮುದಾಯಗಳಿಂದ, 1.54% ಜನರು ಎಸ್‌ಟಿ ಮತ್ತು 5.5% ಜನರು ಒಬಿಸಿ ಸಮುದಾಯಗಳಿಂದ ಬಂದಿದ್ದಾರೆ. ಐಎಫ್‌ಎಸ್‌ನಲ್ಲಿ, 4.39% ಜನರು ಎಸ್‌ಸಿ ಸಮುದಾಯಗಳಿಂದ, 2.21% ಜನರು ಎಸ್‌ಟಿ ಮತ್ತು 10.67% ಜನರು ಒಬಿಸಿ ಸಮುದಾಯಗಳಿಂದ ಬಂದಿದ್ದಾರೆ.
ಐಎಎಸ್‌ನಲ್ಲಿ 135 ಎಸ್‌ಸಿ, 67 ಎಸ್‌ಟಿ ಮತ್ತು 245 ಒಬಿಸಿ ಸಮುದಾಯದ ಅಧಿಕಾರಿಗಳಿದ್ದಾರೆ. ಐಪಿಎಸ್‌ನಲ್ಲಿ 141 ಎಸ್‌ಸಿ, 71 ಎಸ್‌ಟಿ ಮತ್ತು 231 ಒಬಿಸಿ ಸಮುದಾಯದವರಿದ್ದಾರೆ. ಮತ್ತೊಂದೆಡೆ, 95 ಎಸ್‌ಸಿ, 48 ಎಸ್‌ಟಿ ಮತ್ತು 231 ಒಬಿಸಿ ಸಮುದಾಯದವರಿದ್ದಾರೆ.
ಐಎಎಸ್‌ನ ಒಟ್ಟು ಅಧಿಕೃತ ಬಲ 6877 ರಲ್ಲಿ ಸುಮಾರು 18.9% ಹುದ್ದೆಗಳನ್ನು ಭರ್ತಿ ಮಾಡಲಾಗಿಲ್ಲ, ಇದರಿಂದಾಗಿ 1,300 ಹುದ್ದೆಗಳು ಖಾಲಿ ಉಳಿದಿವೆ ಎಂದು ಸಿಂಗ್ ತಮ್ಮ ಲಿಖಿತ ಉತ್ತರದಲ್ಲಿ ಸಂಸತ್ತಿಗೆ ತಿಳಿಸಿದ್ದಾರೆ.
ಐಪಿಎಸ್‌ನಲ್ಲಿ, ಒಟ್ಟು ಅಧಿಕೃತ ಬಲ 5099 ರಷ್ಟಿದ್ದು, 9.9% ಹುದ್ದೆಗಳನ್ನು ಭರ್ತಿ ಮಾಡಲಾಗಿಲ್ಲ, 505 ಹುದ್ದೆಗಳು ಖಾಲಿ ಇವೆ. ಐಎಫ್‌ಎಸ್‌ನಲ್ಲಿ ಅತಿ ಹೆಚ್ಚು ಅಂದರೆ 32.2% ಹುದ್ದೆಗಳಿದ್ದು, ಒಟ್ಟು ಅಧಿಕೃತ ಬಲ 3,193 ಮತ್ತು 1,029 ಹುದ್ದೆಗಳು ಖಾಲಿ ಇವೆ.
ಮೇಲಿನ ಅಂಕಿ ಅಂಶಗಳನ್ನು ಗಮನಿಸಿದರೆ ಭಾರತ ದೇಶದಲ್ಲಿ ಇಂದು ಮೀಸಲಾತಿಯು ಕೇವಲ ಘೋಷಣೆಯಾಗಿ ಉಳಿದ ಹೊರತು ಅದು ಯಥಾವತ್ತಾಗಿ ಇಂದಿಗೂ ಜಾರಿಯಾಗಿಲ್ಲಾ, ಮೀಸಲಾತಿಯು ಸಂವಿಧಾನಿಕವಾಗಿ ಹಾಗೂ ಕಾನೂನು ಬದ್ಧವಾಗಿದ್ದರೂ ಕೂಡ ನಮ್ಮ ಪ್ರಾತಿನಿಧ್ಯದ ಪರಿಸ್ಥಿತಿ ಹೀಗಾಗಿರ ಬೇಕಾದರೆ ಇನ್ನು ಮೀಸಲಾತಿಯೆ ಇಲ್ಲದಿದ್ದರೆ ನಮ್ಮ ಪ್ರಾತಿನಿತ್ಯದ ಕಥೆ ಏನಾಗಬಹುದು ಎಂದು ಒಮ್ಮೆ ಯೋಚಿಸಿ ?. ಮೆರಿಟ್ ಎಂಬ ಹಸಿ ಸುಳ್ಳನ್ನು ಬಳಸಿಕೊಂಡು ಈ ದೇಶದ ಇತರೆ ಸಮುದಾಯಗಳಿಗೆ ವ್ಯವಸ್ಥಿತವಾಗಿ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳನ್ನು ವಂಚಿಸುತ್ತಾ ಬಂದಿರುವುದನ್ನು ನಾವು ಇತಿಹಾಸದ ಉದ್ದಕ್ಕೂ ಕಾಣಬಹುದು ಆದರೆ ಅದು ಇಂದಿಗೂ ಮುಂದುವರಿದ ಎಂದರೆ ವ್ಯವಸ್ಥೆಯು ಯಾವ ಹಂತಕ್ಕೆ ತಲುಪಿರಬಹುದು ಎಂಬುದನ್ನು ನಾವು ಯೋಚಿಸಬೇಕಿದೆ.
ದೇಶದ ಭವಿಷ್ಯ ಮತ್ತು ಸಮಾಜದ ಎಲ್ಲಾ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದಾದ ಈ ಸ್ಟ್ರಟಜಿಕ್ ಅಥವಾ ಡಿಸಿಷನ್ ಮೇಕಿಂಗ್ ಸ್ಥಳಗಳಲ್ಲಿ ಶೋಷಿತ ಸಮುದಾಯಗಳ ಪ್ರಾತಿನಿಧ್ಯವೂ ಇಲ್ಲದಿದ್ದರೆ ಆ ಸಮುದಾಯಗಳ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದಾದರೂ ಹೇಗೆ ಬಹುಶಃ ಇಂದಿಗೂ ನಮ್ಮ ದೇಶದಲ್ಲಿ ಜಾತಿ ಭಯೋತ್ಪಾದನೆ ಹಾಗೂ ಜಾತಿ ಆಧಾರಿತ ಆರ್ಥಿಕ ಭಯೋತ್ಪಾದನೆಯು ಜೀವಂತವಾಗಿರಲು ಈ ಮೇಲಿನ ಔದ್ಯೋಗಿಕ ಭಯೋತ್ಪಾದನೆಯ ಕಾರಣವಾಗಿದೆ. ಈ ದೇಶದಲ್ಲಿ ಶೋಷಿತರ ಅದರಲ್ಲೂ ದಲಿತರ ಹಕ್ಕುಗಳನ್ನು ಪ್ರತಿಪಾದಿಸಿ ಅವುಗಳನ್ನು ಸಂರಕ್ಷಿಸಲೆಂದೇ ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗವು ರಚಿಸಲ್ಪಟ್ಟಿದೆ ಆದರೆ ಆ ಆಯೋಗವು ಹಲ್ಲು ಕಿತ್ತ ಹಾವಿನ ಹಾಗೆ ಕೇವಲ ಬುಸುಗುಟ್ಟುತ್ತ ಜೀವಂತವಾಗಿರುವುದು ಮಾತ್ರ ಸತ್ಯ, ಜೊತೆಗೆ ಮಿನಿ ಪಾರ್ಲಿಮೆಂಟ್ ಎಂದು ಕರೆಯಲ್ಪಡುವ (ದಲಿತರ ರಕ್ಷಣೆಗಾಗಿ ರಚಿಸಲ್ಪಟ್ಟಿರುವ) ಸಂಸದೀಯ ಸಮಿತಿಯು ಕೂಡ ನಿಷ್ಪ್ರಯೋಜಕವಾಗಿದೆ ಎಂದರೆ ಇನ್ನು ಪ್ರಜಾಪ್ರಭುತ್ವವು ಈ ದೇಶದಲ್ಲಿ ಉಳಿದಿದೆಯೇ ಎಂಬ ಪ್ರಶ್ನೆಯು ಕೂಡ ಉದ್ಭವಿಸುತ್ತದೆ ?. ಈ ಎಲ್ಲಾ ಸಮಸ್ಯೆಗಳಿಗೂ ಮೂಲವನ್ನು ಹುಡುಕುತ್ತಾ ಹೋದರೆ ಅದು ಕೊನೆಗೆ ಬಂದು ನಿಲ್ಲುವುದೇ ಡಾ.ಅಂಬೇಡ್ಕರ್ ಮತ್ತು ಗಾಂಧಿಯ ನಡುವೆ ನಡೆದ ಪೂನಾ ಒಪ್ಪಂದ. ಈ ಒಂದು ಒಪ್ಪಂದವು ನಮ್ಮನ್ನು ಶಾಶ್ವತವಾಗಿ ಈ ದೇಶದಲ್ಲಿ ಗುಲಾಮರಾಗಿ ಉಳಿಯುವಂತೆ ಮಾಡುವ Vicious cycle ರೀತಿಯ ವ್ಯವಸ್ಥೆಯನ್ನು ಸೃಷ್ಟಿ ಮಾಡಿ ನಮ್ಮ ಉನ್ನತಿಯನ್ನು ತಡೆಯ ಬಲ್ಲಂತಹ ದೊಡ್ಡ ಅಡ್ಡಗೋಡೆಯನ್ನೇ ಕಟ್ಟಿ ನಿಲ್ಲಿಸಿದೆ.
– ಹರಿರಾಮ್.ಎ –
ವಕೀಲರು ಹಾಗು ರಾಜ್ಯಾಧ್ಯಕ್ಷರು BPS












