80 ಸಾವಿರಕ್ಕಿಂತಲೂ ಅಧಿಕ ಮುಸ್ಲಿಂ ಮತದಾರರಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಮುಸ್ಲಿಂ ಅಭ್ಯರ್ಥಿ ಸ್ಪರ್ಧಿಸಬೇಕು!

 

ಮುಸ್ಲಿಮರು ಬಿಜೆಪಿಯನ್ನು ಸೋಲಿಸಲು ಮತದಾನ ಮಾಡುತ್ತಾರೆ ಎಂದು ಮಾಜಿ ಸಚಿವ ರಾಜಣ್ಣರವರು ಹೇಳಿಕೆ ಕೊಟ್ಟಾಗ ಅವರನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸಲಾಯಿತು. ಅವರು ಕಟುಸತ್ಯವನ್ನು ಜನರ ಮುಂದಿಟ್ಟರು, ಅದು ಯಾರಿಗೂ ಇಷ್ಟವಾಗಲಿಲ್ಲ. ವಿಶೇಷವಾಗಿ ಮುಸ್ಲಿಮರಿಗೆ.

 

ಮೂಗಿಗೆ ತುಪ್ಪಸವರಿದ್ದರ ವಾಸನೆಯನ್ನೇ ತುಪ್ಪದ ರುಚಿ ಎಂದು ರಾಜಕೀಯದಲ್ಲಿ ನಂಬಿ ಕುಳಿತ ಅಪ್ರಭುದ್ದರು ಮುಸ್ಲಿಮರು. ರಾಜ್ಯದ 31 ಕ್ಷೇತ್ರದಲ್ಲಿ ಸ್ವಂತ ಸಂಖ್ಯಾಬಲದಿಂದ ಗೆಲ್ಲಬಲ್ಲ, 97 ಕ್ಷೇತ್ರದಲ್ಲಿ ಸೋಲು-ಗೆಲುವನ್ನು ನಿರ್ಧರಿಸಬಲ್ಲ 16% ಇರುವ ಸಮುದಾಯ ರಾಜ್ಯ ವಿಧಾನಸಭೆಯಲ್ಲಿ ಶಾಸಕರ ಸಂಖ್ಯೆ ಇರುವುದು ಕೇವಲ 10 ಮಾತ್ರ. ಅದರಲ್ಲಿ ಬಹುತೇಕ ಅನುಕಂಪದ ಆಧಾರದಲ್ಲಿ ಗಿಟ್ಟಿಸಿಕೊಂಡ ಅಸಮರ್ಥ ಪ್ರತಿನಿಧಿಗಳು.

 

ರಾಜ್ಯದಲ್ಲಿ ಜಾತಿ % ಮತ್ತು ಒಟ್ಟು ಶಾಸಕರ ಸಂಖ್ಯೆಯ ಸರಳ ಲೆಕ್ಕಾಚಾರ ನೋಡಿ. ಲಿಂಗಾಯಿತರು – ಜನಸಂಖ್ಯೆ – 11%, ಶಾಸಕರು – 56 (25%). ಒಕ್ಕಲಿಗರು – ಜನಸಂಖ್ಯೆ – 10.3%, ಶಾಸಕರು – 46 (20.6%). ಮುಸ್ಲಿಮರು – ಜನಸಂಖ್ಯೆ – 13% – ಶಾಸಕರು – 10 (4.5%). ಅತೀ ದೊಡ್ಡ ಸಮುದಾಯಕ್ಕೆ ಅತೀ ಕಡಿಮೆ ಶಾಸಕರು! ಆದರೂ ಮುಸ್ಲಿಂ ತುಷ್ಟಿಕರಣದಿಂದ ಬೇರೆ ಸಮುದಾಯಕ್ಕೆ ಯಾವುದೇ ಅಧಿಕಾರ, ಅನುಧಾನ, ಸವಲತ್ತು, ಸೌಲಭ್ಯ ಸಿಗದೆ ಅದೆಲ್ಲ ಮುಸ್ಲಿಮರು ಕಬಳಿಸಿ ಗುಡ್ಡೆ ಹಾಕಿದ್ದಾರೆ ಎಂಬ ಅವಮಾನವನ್ನು ಸಹಿಸುತ್ತಾ ಬಂದಿದ್ದಾರೆ.

 

ಈ ಆರೋಪಗಳಿಗೆ ಅಂಕಿ ಅಂಶದ ಮೂಲಕ ಉತ್ತರ ನೀಡಿ ಸತ್ಯಾಸತ್ಯತೆಯನ್ನು ಜನರ ಮುಂದಿಡುವಷ್ಟು ಬುದ್ದಿ ಮುಸ್ಲಿಂ ಜನಪ್ರತಿನಿಧಿಗಳಿಗೆ ಮತ್ತು ರಾಜಕಾರಣಿಗಳಿಗೆ ಇಲ್ಲ. ಅದರ ಬಗ್ಗೆ ಮಾತನಾಡಿ ತಮ್ಮ ಜಾತಿಯ ಅಧಿಕಾರ ಪಾಲನ್ನು ಕಳೆದುಕೊಳ್ಳುವ ಅಗತ್ಯ ಜಾತ್ಯತೀತ ನಾಯಕರಿಗೆ ಇಲ್ಲ.

 

ಇದೀಗ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಖಾಡ ಸಿದ್ಧಗೊಳ್ಳುತ್ತಿದೆ. ಲಿಂಗಾಯತ ನಾಯಕ ಶವನೂರು ಶಿವಸಂಕರಪ್ಪರವರ ಮರಣದಿಂದ ತೆರೆವಾದ ಈ ಕ್ಷೇತ್ರಕ್ಕೆ ಅವರ ಮೊಮ್ಮಗನ ಹೆಸರನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ. 80,000ಕ್ಕಿಂತಲೂ ಅಧಿಕ ಮುಸ್ಲಿಂ ಮತದಾರರಿರುವ ಈ ಕ್ಷೇತ್ರದಲ್ಲಿ ಮುಸ್ಲಿಮರೇ ಕಾಂಗ್ರಸ್ಸಿನ ಗೆಲುವಿನ ರೂವಾರಿಗಳು. ಎರಡು ತಲೆಮಾರಿಗೆ ರಾಜಕೀಯ ಅಧಿಕಾರ ನೀಡಿ ಕಾಲಾಳುಗಳಾಗಿ ದುಡಿದವರು ಮತ್ತೆ ಮೊಮ್ಮಗನನ್ನು ಗೆಲ್ಲಿಸಲು ಚಪ್ಪಲಿ ಸವಿಸಬೇಕು.

 

ಈ ವ್ಯವಸ್ಥೆಗೆ ಅಂತ್ಯ ಹಾಡುವ ಜವಾಬ್ದಾರಿ ದಾವಣಗೆರೆಯ ಮುಸ್ಲಿಂರ ಮೇಲಿದೆ. ರಾಜಕೀಯ ದ್ವೇಷ ಎಂಬ ಅಪ್ರಭುದ್ದ ಚಿಂತನೆಯಿಂದ ಹೊರಬಂದು  ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ತಾತ ನೆಟ್ಟ ಆಲದ ಮರಕ್ಕೆ ಸುತ್ತು ಬರುವುದನ್ನು, ಒಂದೇ ಪಕ್ಷದ ಮುಂದೆ ಕೈ ಚಾಚುವ ರಾಜಕೀಯ ಭಿಕ್ಷಾಟನೆಯನ್ನು ನಿಲ್ಲಿಸಬೇಕಾಗಿದೆ.