ಜನಹಿತಕ್ಕಾಗಿ ಮಂತ್ರಿ ಆಗುವವರಿಗೆ ಬಿ.ಬಸವಲಿಂಗಪ್ಪ ಅವರಂತೆ ಖದರ್ ಇರಬೇಕು! – ಪ್ರಜ್ವಲ್ ಶಶಿ ತಗಡೂರು
(ಕರುನಾಡ ಕ್ರಾಂತಿಕಿಡಿ ಬಿ.ಬಸವಲಿಂಗಪ್ಪನವರ 33ನೇ ವಷ೯ದ ಪರಿನಿಬ್ಬಾಣ ದಿನವಿಂದು..)
ಅವತ್ತು ಬಿ.ಬಸವಲಿಂಗಪ್ಪ ಕುದಿಯುತ್ತಿದ್ದರು!
ಈ ಘಟನೆ ನಡೆದಾಗ ಅವರು ರಾಜ್ಯದ ಪರಿಸರ ಖಾತೆಯ ಮಂತ್ರಿ ವೀರೇಂದ್ರ ಪಾಟೀಲರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ 179 ಶಾಸಕರ ಬೆಂಬಲದೊಂದಿಗೆ ಅಧಿಕಾರ ಹಿಡಿದಿತ್ತು. ಸಹಜವಾಗಿಯೇ ಬಿ.ಬಸವಲಿಂಗಪ್ಪ ಮಂತ್ರಿಯಾಗಿದ್ದರು. ಹಾಗೆ ನೋಡಿದರೆ ಅವರು ಎಂದೋ ಈ ರಾಜ್ಯದ ಮುಖ್ಯಮಂತ್ರಿಯಾಗಬೇಕಿತ್ತು ಆದರೆ ನಮ್ಮ ಸಂಕೀರ್ಣ ಜಾತಿವ್ಯವಸ್ಥೆ ಅವರಿಗೆ ಅಂತಹ ಅವಕಾಶ ಸಿಗದಂತೆ ಮಾಡಿತ್ತು. ಅನ್ನಿಸಿದ್ದನ್ನು ನೇರವಾಗಿ ಹೇಳುತ್ತಿದ್ದ,ಕನ್ನಡ ಸಾಹಿತ್ಯದಲ್ಲಿರುವುದು ಬರೀ ‘ಬೂಸಾ’ ಅನ್ನುವ ಮೂಲಕ ಇಡೀ ರಾಜ್ಯಾದ್ಯಂತ ವಿವಾದದ ಕಿಡಿ ಹತ್ತಿಸಿ ಭುಗಿಲೇಳುವಂತೆ ಮಾಡಿದ್ದ ರಾಜಕಾರಣಿ ಅಂತವರು 1989 ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದಲ್ಲಿ ಮಂತ್ರಿಯಾಗಿದ್ದರು. ಅನ್ನಿಸಿದ್ದನ್ನು ನೇರವಾಗಿಯೇ ಹೇಳುವ, ಕೆಲಸವಾಗುತ್ತದೆ ಎಂದರೆ ಆಗುತ್ತದೆ ಎಂದು ಆಗುವುದಿಲ್ಲ ಎಂದರೆ ಖಚಿತ ಧ್ವನಿಯಲ್ಲಿ ಆಗುವುದಿಲ್ಲ ಎಂದು ಮುಖಕ್ಕೆ ರಾಚಿದಂತೆ ಹೇಳುತ್ತಿದ್ದ ಬಿ.ಬಸವಲಿಂಗಪ್ಪನವರು ಅವತ್ತು ಕುದಿಯುತ್ತಿದ್ದುದಕ್ಕೆ ಒಂದು ಕಾರಣವಿತ್ತು. ಅದೇನೆಂದರೆ, ಅವರು ‘ಪರಿಸರಖಾತೆಯ ಮಂತ್ರಿ’ಯಾಗಿ ನಿರ್ದೇಶನ ನೀಡಿದ ನಂತರವೂ, ನೀವು ಹೇಳಿದ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಮುಖಾಮುಖಿಯಾಗಿ ಹೇಳಲು ಒಬ್ಬ ಕೈಗಾರಿಕೋದ್ಯಮಿ ಅವರನ್ನು ಭೇಟಿಯಾಗಲು ಬಂದಿದ್ದ ಅಂತವನು ಬಂದು ಹೊರಗೆ ಕಾಯುತ್ತಿದ್ದಾನೆ ಎಂಬುದು ಗೊತ್ತಾದ ಕೂಡಲೇ ಅವರ ಹೊಟ್ಟೆಯಲ್ಲಿದ್ದ ಆಕ್ರೋಶ ಜ್ವಾಲಾಮುಖಿಯಂತೆ ಉರಿಯತೊಡಗಿತು. ಹಾಗಂತಲೇ ತಮ್ಮ ಆಪ್ತ ಸಿಬ್ಬಂದಿಯನ್ನು ಕರೆದು ವಿಧಾನಸೌಧದ ಮೂರನೇ ಅಂತಸ್ತಿನಲ್ಲಿದ್ದ ತಮ್ಮ ಕಛೇರಿಯಲ್ಲಿನ ಖುರ್ಚಿಯನ್ನು ತೆಗೆಸಿದರು. ಆನಂತರವೇ ಆತನನ್ನು ಒಳಕ್ಕೆ ಬಿಟ್ಟುಕೊಂಡರು ಗತ್ತಿನಲ್ಲೇ ಒಳಗೆ ಬಂದ ಕೈಗಾರಿಕೋದ್ಯಮಿ ಬಂದವನೇ ತನಗೆ ಕೂರಲು ಖುರ್ಚಿ ಇಲ್ಲದ್ದನ್ನು ಕಂಡು ಸಿಟ್ಟಿಗೆದ್ದಿದ್ದ ಆದರೂ ತಾನು ನೋಡಲು ಬಂದಿರುವುದು ಪಕ್ಕಾ ‘ದೂರ್ವಾಸ ಮುನಿ’ ಎಂದೇ ಹೆಸರಾಗಿದ್ದ ಬಿ.ಬಸವಲಿಂಗಪ್ಪ ಅವರನ್ನು ಹಾಗಂತಲೇ ನೇರವಾಗಿ ಮಾತಿಗಿಳಿದು: ನೀವೇನು ಮಾಡುತ್ತಿದ್ದೀರಿ ಅನ್ನೋದು ನಿಮಗೆ ಗೊತ್ತಾ ಸಾರ್? ನಿಮ್ಮ ಒಂದು ನಿರ್ಣಯದಿಂದ ಆರು ಸಾವಿರ ಜನರ ಉದ್ಯೋಗ ಹೋಗುತ್ತದೆ ನಾಳೆ ಅವರೆಲ್ಲ ಬೀದಿಗೆ ಬಂದು ನಿಮ್ಮ ವಿರುದ್ಧ ಧರಣಿ ಮಾಡುತ್ತಾರೆ ನೀವು ಹೇಳಿದಂತೆ ವಾಟರ್ ಫ್ಯೂರಿಫೈ ಘಟಕ ಮಾಡಿಸಲು ಸಧ್ಯಕ್ಕೆ ನಮಗೆ ಸಾಧ್ಯವಿಲ್ಲ. ಹೀಗಾಗಿ ಕಾರ್ಖಾನೆಯನ್ನು ಮುಚ್ಚುತ್ತೇವೆ. ಹಾಗಂತ ನಿರ್ಧಾರ ಮಾಡಿಯೇ ಇಲ್ಲಿಗೆ ಬಂದಿದ್ದೇನೆ ಎಂದನು ಜೊತೆಯಲ್ಲೇ ಕಾರ್ಖಾನೆ ಮುಚ್ಚುವ ಸಂಬಂಧ ಒಂದು ಪತ್ರವನ್ನೂ ಕೊಟ್ಟನು, ಆತ ಕೊಟ್ಟ ಪತ್ರವನ್ನು ಕೈಲಿ ಹಿಡಿದುಕೊಂಡ ಬಿ.ಬಸವಲಿಂಗಪ್ಪನವರು ಕಾರ್ಖಾನೆ ಮುಚ್ಚಬೇಕು ಎಂದು ತೀರ್ಮಾನಿಸಿದವನು ಇಲ್ಲಿಗೇಕಯ್ಯ ಬಂದೆ? ಹೋಗಿ ಮೊದಲು ಕಾರ್ಖಾನೆ ಮುಚ್ಚು, ಮುಚ್ಚುತ್ತೇನೆ ಅಂತ ಹೇಳಲು ಅಷ್ಟು ದೂರದಿಂದ ಬರಬೇಕಿತ್ತಾ?ಮೊದಲು ಹೋಗಿ ಆ ಕೆಲಸ ಮಾಡು ಧರಣಿ ಕೂರುವವರಿಗೆ ಶಾಮಿಯಾನ ಹಾಕಿಸುತ್ತೇನೆ. ಯಾಕೆಂದರೆ ಇದು ಪ್ರಜಾಪ್ರಭುತ್ವ ಧರಣಿ ಮಾಡುವವರನ್ನು ನಾನು ಯಾವತ್ತೂ ತಡೆದಿಲ್ಲ ಅವರಿಗೂ ಸತ್ಯ ಗೊತ್ತಾಗಬೇಕು ಎಂದವರೇ ತಮ್ಮ ಆಪ್ತ ಸಿಬ್ಬಂದಿಯನ್ನು ಕರೆದರು. ಏಯ್!ಮೊದಲು ಈತನನ್ನು ಹೊರಗೆ ಕಳಿಸಿ ಮತ್ತೆ ಒಳಗೆ ಬಿಡಬೇಡಿ ಎಂದು ಅಪ್ಪಣೆ ಕೊಟ್ಟರು. ಅವರ ಸಿಟ್ಟಿನ ಧ್ವನಿ ನೋಡಿ ಬಂದಿದ್ದ ಕೈಗಾರಿಕೋದ್ಯಮಿಯ ಧ್ವನಿ ಉಡುಗಿ ಹೋಗಿತ್ತು ಆದರೂ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಸಾರ್, ಮತ್ತೊಮ್ಮೆ ಯೋಚಿಸಿ ನೋಡಿ ಇದು ಆರು ಸಾವಿರ ಜನರ ಬದುಕಿನ ಪ್ರಶ್ನೆ ಎಂದ ಆಗ ನಖಶಿಖಾಂತ ಉರಿದು ಬಿದ್ದ ಬಸವಲಿಂಗಪ್ಪ,ಏಯ್, ಒಂದು ಸಲ ಹೇಳಿದ್ದು ನಿನಗೆ ಅರ್ಥ ಆಗಲ್ಲವೇನಯ್ಯ?ನೀನು ಆರು ಸಾವಿರ ಜನರಿಗೆ ಕೆಲಸ ಕೊಟ್ಟಿದ್ದೀಯ ನಿಜ ಆದರೆ ನಿನ್ನ ಕಾರ್ಖಾನೆಯಿಂದ ದಿನ ನಿತ್ಯ ಸಾವಿರಾರು ಲೀಟರ್ ಹೊಲಸು ನೀರನ್ನ ನದಿಗೆ ಬಿಡುತ್ತಿದ್ದೀಯ ಆ ಹೊಲಸು ಹರಡಿಕೊಂಡು ನದಿ ಪಾತ್ರದುದ್ದಕ್ಕೂ ನಾಲ್ಕು ಲಕ್ಷ ಜನರಿಗೆ ಕಷ್ಟ ಕೊಡುತ್ತಿದೆ. ನೀನ್ಯಾವತ್ತಾದರೂ ಮೈ ಕೈ ಕೆರೆದುಕೊಂಡಿದ್ದೀಯ?ತಿಂದ ಅನ್ನ ಮೈಗೆ ಹತ್ತದೆ ಕಾಯಿಲೆಯಿಂದ ನರಳಿದ್ದೀಯ?ನೀನು ಆರು ಸಾವಿರ ಜನರಿಗೆ ಕೆಲಸ ಕೊಟ್ಟು ನಾಲ್ಕು ಲಕ್ಷ ಜನರ ಬದುಕು ನರಕವಾಗುವಂತೆ ಮಾಡಿದ್ದೀಯ.ಈಗ ಕಾರ್ಖಾನೆ ಬೇರೆ ಮುಚ್ಚುತ್ತೇನೆ ಅಂತ ಹೆದರಿಸಲು ಬಂದಿದ್ದೀಯ?ನನ್ನನ್ನು ಯಾರೆಂದುಕೊಂಡೆ ಬಸವಲಿಂಗಪ್ಪ, ಬಸವಲಿಂಗಪ್ಪ, ನಿನಗೆ ಗೊತ್ತಿರಲಿ ಎಂದು ಗುಟುರು ಹಾಕಿದರು. ಆತ ಬಂದ ದಾರಿಗೆ ಸುಂಕವಿಲ್ಲದವನಂತೆ ಓಡಿ ಹೋದ.ಆಗ ಅಲ್ಲೇ ಇದ್ದ ಹಿರಿಯ ಪತ್ರಕರ್ತರೊಬ್ಬರು (ಸಾ.ಚಂದ್ರಶೇಖರರಾವ್) ಕೇಳಿದರು ಸಾರ್, ನಾನು ಕುತೂಹಲಕ್ಕೆ ಕೇಳುತ್ತಿದ್ದೇನೆ. ನೀವು ಮನಸ್ಸು ಮಾಡಿದ್ದರೆ ಆತ ದಂಡಿಯಾಗಿ ದುಡ್ಡು ಕೊಟ್ಟು ಹೋಗುತ್ತಿದ್ದ ಹಣ ತೆಗೆದುಕೊಳ್ಳಬಹುದಿತ್ತಲ್ಲವೇ?ಎಂದು ಕೆಣಕಿದರು. ಅದಕ್ಕೆ ಬಸವಲಿಂಗಪ್ಪ ನಗುತ್ತಾ ಹೇಳಿದರು:”ನೋಡು ಚಂದ್ರು, ರಾಜಕೀಯಕ್ಕೆ ಹಣ ಬೇಕು, ಜೀವನಕ್ಕೆ ಹಣ ಬೇಕು.ಆದರೆ ಅದು ನ್ಯಾಯಯುತ ಮಾರ್ಗದಿಂದ ಬರಬೇಕು. ಹಾಗೆ ನ್ಯಾಯಯುತ ಮಾರ್ಗದಿಂದ ಹಣ ಬರುವಂತೆ ನಾನು ಮಾಡಿಕೊಂಡಿದ್ದೇನೆ. ನನಗೆ ಆ ಕುರಿತು ಚಿಂತೆಯಿಲ್ಲ. ಇವತ್ತು ಮಂತ್ರಿಯಾಗಿ ಇಲ್ಲಿ ಜನರ ಕೆಲಸ ಮಾಡಲು ಬಂದಿದ್ದೇನೆ. ಸಾಯುವ ಮುನ್ನ ಜನರಿಗಾಗಿ ಕೆಲಸ ಮಾಡಿದೆ ಎಂಬ ನೆಮ್ಮದಿಯಿಂದ ಸಾಯಬೇಕು, ಹಣ ಮಾಡಲಿಲ್ಲ ಎಂದು ಕೊರಗುತ್ತಾ ಸಾಯಬಾರದು. ಅದು ಎಷ್ಟೇ ಇದ್ದರೂ ನಾವು ತಿನ್ನುವುದು ಅಷ್ಟೇ. ಆದರೆ ಜನರ ಕೆಲಸ ಮಾಡಿ ಸುಖ ಪಡುತ್ತೇವಲ್ಲ?ಹಲವು ತಲೆಮಾರುಗಳು ಅದಕ್ಕಾಗಿ ಖುಷಿ ಪಡುತ್ತವೆ.ಅದಕ್ಕಿಂತ ಖುಷಿ ಯಾವುದಿರುತ್ತೇ ಹೇಳು ಚಂದ್ರು?ಎಂದು ಕೇಳಿದರು. ಅವರ ಮಾತು ಕೇಳಿದ ಸಾ.ಚಂದ್ರಶೇಖರರಾವ್(ಸಾ.ಚ) ಮುಖದಲ್ಲಿ ಸಂತೃಪ್ತಿಯ ನಗುವಿತ್ತು. ಕುತೂಹಲದ ಸಂಗತಿ ಎಂದರೆ ಬಿ.ಬಸವಲಿಂಗಪ್ಪ ಅವರ ಕೈಲಿ ಮಹಾಮಂಗಳಾರತಿ ಮಾಡಿಸಿಕೊಂಡು ಹೋಗಿದ್ದ ಕೈಗಾರಿಕೋದ್ಯಮಿ, ತನ್ನಕೈಗಾರಿಕೆಯಲ್ಲಿ ಜಲಸಂಸ್ಕರಣಾ ಘಟಕ ಸ್ಥಾಪಿಸುವುದೂ ಸೇರಿದಂತೆ ಇಲಾಖೆ ಯಾವ್ಯಾವ ಷರತ್ತುಗಳನ್ನು ವಿಧಿಸಿತ್ತೋ? ಅವುಗಳನ್ನು ಪೂರೈಸಲು ನಿರ್ಧರಿಸಿದ್ದೇನೆ ಎಂದು ಮುಂದಿನ ಮೂರು ದಿನಗಳಲ್ಲೇ ಲಿಖಿತವಾಗಿ ತಿಳಿಸಿದ್ದ. ಮಂತ್ರಿಯ ಖದರ್ ಎಂದರೆ ಹಾಗಿರಬೇಕು. ಅದು ವೈಯಕ್ತಿಕ ಹಿತಶಕ್ತಿಗೆ ಬಳಕೆಯಾಗುವ ಬದಲು ಜನರಿಗಾಗಿ ಬಳಕೆಯಾಗುವಂತಿರಬೇಕು ಆಗ ಖದರ್ ಗೂ ಒಂದು ತೂಕ ಬರುತ್ತದೆ ಅಲ್ಲವೇ?? ಇಂದು ಅಂತಹ ‘ಕರುನಾಡಿನ ಕ್ರಾಂತಿಕಿಡಿ ಬಿ.ಬಸವಲಿಂಗಪ್ಪ’ನವರ 32ನೇ ವಷ೯ದ ಚಿರಸ್ಮರಣೆಯ ಇಂತಹ ಸಂದಭ೯ದಲ್ಲಿ ಅವರನ್ನ ನೆನೆಯಬೇಕಿರುವುದು ಯುವ ತಲೆಮಾರಿನ ಕತ೯ವ್ಯ.
#bbasavalingappa #DalithLeader #politics #ambedkarites #selfrespect #dalithpolitics












