ಗಾಂಧೀಜಿಯವರ ಮಂಗಳೂರು ಭೇಟಿಗಳು
————————————————-

ಗಾಂಧೀಜಿಯವರು ಒಟ್ಟು ಮೂರು ಬಾರಿ ಮಂಗಳೂರಿಗೆ ಭೇಟಿ ಕೊಟ್ಟಿದ್ದರು.
1.1920
2.1927
3.1934.

ಮೊದಲ ಭೇಟಿ :
——————-

1920ರಲ್ಲಿ ಖಿಲಾಫತ್ ಚಳುವಳಿಯನ್ನು ರಾಷ್ಟ್ರವ್ಯಾಪಿ ಹಬ್ಬಿಸಿ ಆ ಮೂಲಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಶಕ್ತಿ ತುಂಬುವ ಸಲುವಾಗಿ ಗಾಂಧೀಜಿ ಮೌಲಾನಾ ಮುಹಮ್ಮದ್ ಅಲೀ ಜೌಹರ್ ಮತ್ತು ಅವರ ಸಹೋದರ ಮೌಲಾನಾ ಶೌಕತ್ ಅಲೀಯವರ ಜೊತೆಗೂಡಿ ರಾಷ್ಟ್ರವ್ಯಾಪಿ ಪ್ರವಾಸ ಕೈ ಗೊಂಡಿದ್ದರು.
ಆ ಪ್ರವಾಸ ಖಿಲಾಫತ್ ಪ್ರವಾಸ ಎಂದೇ ಜನಪ್ರಿಯಗೊಂಡಿತ್ತು.
1920ರ ಅಗಸ್ಟ್ ಹತ್ತೊಂಬತ್ತನೆಯ ತಾರೀಕು ಗಾಂಧೀಜಿ ತನ್ನ ಪತ್ನಿ ಕಸ್ತೂರ್ಬಾ, ಸ್ವಾತಂತ್ರ್ಯ ಸೇನಾನಿ ಮೌಲಾನಾ ಶೌಕತ್ ಅಲೀ ಮತ್ತವರ ತಾಯಿ ಜೀವಂತ ಭಾರತ ಮಾತೆ ಬೀ ಅಮ್ಮಾ ( ಆಬಾದಿ ಬಾನು) ಅವರ ಜೊತೆಗೂಡಿ ರೈಲಿನಲ್ಲಿ ಮಂಗಳೂರಿಗೆ ಬಂದಿಳಿದರು. ಆಗ ರೈಲ್ವೆ ನಿಲ್ದಾಣದಲ್ಲಿ ಗಾಂಧೀಜಿಯವರನ್ನು ಸ್ವಾಗತಿಸಲು ಅಪಾರ ಜನಸ್ತೋಮ ಸೇರಿತ್ತು.ಅವರೆಲ್ಲಾ ಗಾಂಧೀಜಿ ಕಿ ಜೈ, ಶೌಕತ್ ಅಲೀಜೀ ಕಿ ಜೈ ಎಂದು ಮುಗಿಲು ಮುಟ್ಟುವಂತೆ ಜಯ ಘೋಷ ಕೂಗಿದರು.
ಮಂಗಳೂರು ಕೇಂದ್ರ ಮೈದಾನದಲ್ಲಿ‌(ಆಗಿನ್ನೂ ಅದು ನೆಹರೂ ಮೈದಾನವಾಗಿರಲಿಲ್ಲ) ಅವರ ಭಾಷಣ ಆಲಿಸಲು ಹತ್ತು ಸಾವಿರದಷ್ಟು ಬೃಹತ್ ಜನಸ್ತೋಮ ಸೇರಿತ್ತು.ಗಾಂಧೀಜಿಯವರನ್ನು ಕಾಣಲು ಅವಿಭಜಿತ ಸೌತ್ ಕೆನರಾ ಜಿಲ್ಲೆಯ ಉಡುಪಿ,ಮಂಗಳೂರು, ಸುಳ್ಯ, ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ವಿಟ್ಲ, ಮುಂತಾದೆಡೆಯಿಂದ ಜನ ಪಾದಯಾತ್ರೆಯ ಮೂಲಕ, ಎತ್ತಿನ ಗಾಡಿಯ ಮೂಲಕ ಬಂದು ಮಂಗಳೂರಿಗೆ ತಲುಪಿದ್ದರು. ಅಷ್ಟು ದೊಡ್ಡ ಸಂಖ್ಯೆಯ ಜನ ಪ್ರವಾಹ ಒಂದೆಡೆ ಸೇರಿದ್ದು ಸೌತ್ ಕೆನರಾ ಜಿಲ್ಲೆಯ ಇತಿಹಾಸದಲ್ಲಿ ಅದೇ ಪ್ರಥಮ.ಅಂದು ಆ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಗಾಂಧೀಜಿ ಮತ್ತು ಶೌಕತ್ ಅಲೀ ಮಾತನಾಡಿದರು.
ಗಾಂಧೀಜಿಯವರು ಕೊಡಿಯಾಲ್‌ಬೈಲ್‌‌ನ ಇಗರ್ಜಿಯ ಎದುರು ಭಾಗದ ಮನೆಯೊಂದರಲ್ಲಿ ತಂಗಿದ್ದರು.ಅವರು ಮೇಕೆಯ ಹಾಲು ಕುಡಿಯುತ್ತಿದ್ದುದರಿಂದ ಅವರು ತನ್ನೊಂದಿಗೆ ಮೇಕೆಯೊಂದನ್ನು ತಂದಿದ್ದರು.
ಶೌಕತ್ ಅಲೀ ಮತ್ತವರ ಮಾತೆ ಬೀ ಅಮ್ಮಾ ಗೋಳಿಕಟ್ಟೆ ಬಜಾರಿನ ಮುಸ್ಲಿಮರ ಮನೆಯೊಂದರಲ್ಲಿ ತಂಗಿದ್ದರು.

ಎರಡನೇ ಭೇಟಿ :

ಖಾದಿ ಪ್ರಚಾರ ಪ್ರವಾಸದ ಭಾಗವಾಗಿ 1927 ಅಕ್ಟೋಬರ್ 26ರಂದು ಮಂಗಳೂರಿಗೆ ಭೇಟಿ ನೀಡಿದರು.ಇದು ಮಂಗಳೂರಿಗೆ ಗಾಂಧೀಜಿಯವರ ಎರಡನೇ ಭೇಟಿ.ಮಂಗಳೂರಿನ ಕೆನರಾ ಶಾಲೆಯ ಭುವನೇಂದ್ರ ಸಭಾಭವನದಲ್ಲಿ ಅವರು ಲೋಕಮಾನ್ಯ ತಿಲಕರ ಭಾವಚಿತ್ರವನ್ನು ಅನಾವರಣಗೊಳಿಸಿದರು.ಅವರ ಭಾಷಣದಲ್ಲಿ ಚರಕ ಮತ್ತು ಖಾದಿಯ ಮಹತ್ವವನ್ನು ಒತ್ತಿ ಹೇಳಿದರು.
ಮಂಗಳೂರು ಮುನ್ಸಿಪಲ್ ಬೋರ್ಡ್ ಅಧೀನದ ಶಾಲೆಯಲ್ಲಿ ಚರಕದಿಂದ ನೂಲು ತೆಗೆಯುವುದು ಪಠ್ಯದ ಭಾಗವಾಗಿದೆ ಎನ್ನುವುದನ್ನು ತಿಳಿದು ಸಂತಸಗೊಂಡರು.ಬಡವರಿಗೆ ಸಹಾಯ ನೀಡುವ ಸಲುವಾಗಿ ಗಾಂಧೀಜಿ ಜನರಿಂದ ದೇಣಿಗೆ ಸ್ವೀಕರಿಸಿದರು.

ಮೂರನೇ ಭೇಟಿ :
——————–
1934ರ ಫೆಬ್ರವರಿ ಇಪ್ಪತ್ತನಾಲ್ಕರಂದು ಮೂರನೇ ಬಾರಿಗೆ ಗಾಂಧೀಜಿ ಮಂಗಳೂರಿಗೆ ಭೇಟಿ ನೀಡಿದರು.1933-34ರ ಅವಧಿಯಲ್ಲಿ ಹರಿಜನೋದ್ಧಾರ, ಅಸ್ಪೃಶ್ಯತೆ ನಿವಾರಣೆಯ ಉದ್ದೇಶ ಇಟ್ಟುಕೊಂಡು ಅವರ ದೇಶವ್ಯಾಪಿ 12500 ಮೈಲಿಗೂ ಹೆಚ್ಚಿನ ಪ್ರವಾಸ ಕೈ ಗೊಂಡಿದ್ದರು.ಅದರ ಭಾಗವಾಗಿ ಮಂಗಳೂರಿಗೆ ಬಂದಿದ್ದ ಗಾಂಧೀಜಿ ಇಲ್ಲಿ ಹರಿಜನೋದ್ಧಾರಕ್ಕಾಗಿ ನಿಧಿ ಸಂಗ್ರಹಿಸಿದ್ದರು.ಈ ಭೇಟಿಯಲ್ಲಿ ದಲಿತರ. ಪ್ರತ್ಯೇಕ ಭೇಟಿಯೂ ನಡೆಯಿತು.ಈ ಭೇಟಿಯಲ್ಲಿ ಪುತ್ತೂರಿಗೆ ಹೋಗಿದ್ದ ಗಾಂಧೀಜಿ ಈಗಿನ ಪುತ್ತೂರು ಬಸ್ ನಿಲ್ದಾಣದ ಬಳಿಯ ಮರವೊಂದರ ನೆರಳಲ್ಲಿ ಸ್ವಲ್ಪ ಹೊತ್ತು ತಂಗಿದ್ದರು.ಆ ನೆನಪಿಗಾಗಿ ಪುತ್ತೂರು ಬಸ್ ನಿಲ್ದಾಣದ ಪಕ್ಕ ಇಂದಿಗೂ ಗಾಂಧಿ ಪ್ರತಿಮೆಯಿರುವ ಕಟ್ಟೆಯೊಂದಿದೆ.ಅದೇ ಪುತ್ತೂರಿನ ಗಾಂಧಿ ಕಟ್ಟೆ. ಆ ಸಂದರ್ಭದಲ್ಲಿ ಅಲ್ಲಿಂದ ತುಸು ದೂರವಿದ್ದ ರಾಗಿ ಕುಮೇರಿ ಹರಿಜನ ಕಾಲನಿಗೆ ಭೇಟಿ ಕೊಟ್ಟಿದ್ದರು.

ಗಾಂಧೀಜಿಯವರ ಮೂರೂ ಮಂಗಳೂರು ಭೇಟಿಗಳು ಮಂಗಳೂರಿನ ಇತಿಹಾಸದ ಅವಿಸ್ಮರಣೀಯ ಘಟನೆಗಳಾಗಿವೆ.

-ಇಸ್ಮತ್ ಪಜೀರ್