ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾದ ಶ್ರೀ ರಾಮದಾಸ್ ಅಠಾವಳೆ ಅವರಿಂದ ಸುದ್ದಿಗೋಷ್ಠಿ
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸೆಪ್ಟೆಂಬರ್ 5 ರಿಂದ 14 ರ ವರೆಗೆ ನಡೆಯಲಿರುವ ಶಿಲ್ಪ ಸಮಾಗಮ ಮೇಳ 2025
ವಿವಿಧ ರಾಜ್ಯಗಳ ಕುಶಲಕರ್ಮಿಗಳ ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳ ಪ್ರದರ್ಶನ
TULIP ಉಪಕ್ರಮದಲ್ಲಿ ಇ-ಪ್ಲಾಟ್‌ಫಾರ್ಮ್‌ಗಳ ಮೂಲಕ ಕುಶಲಕರ್ಮಿಗಳ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ವೇದಿಕೆ
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾದ ಶ್ರೀ ರಾಮದಾಸ್ ಅಠಾವಳೆ ಅವರು ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸೆಪ್ಟೆಂಬರ್ 5 ರಿಂದ 14ರ ವರೆಗೆ ನಡೆಯಲಿರುವ ಶಿಲ್ಪ ಸಮಾಗಮ ಮೇಳ 2025 ಹಾಗೂ ಸರ್ಕಾರದ ಜನಪರ ಯೋಜನೆಗಳ ಕುರಿತು ಬೆಂಗಳೂರಿನ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವರು, ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 10 ದಿನಗಳ ಕಾಲ ನಡೆಯಲಿರುವ ಶಿಲ್ಪ ಸಮಾಗಮ ಮೇಳ 2025 ಕಾರ್ಯಕ್ರಮವು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಒಂದು ವಿಶೇಷ ಕಾರ್ಯಕ್ರಮವಾಗಿದ್ದು, ಇದರ ಮುಖ್ಯ ಉದ್ದೇಶ, ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂರು ರಾಷ್ಟ್ರೀಯ ನಿಗಮಗಳಿಂದ (ಎನ್ ಎಸ್ ಎಫ್ ಡಿ ಸಿ, ಎನ್ ಎಸ್ ಕೆ ಎಫ್ ಡಿ ಸಿ & ಎನ್ ಬಿ ಸಿ ಎಫ್ ಡಿ ಸಿ) ಹಣಕಾಸು ಪಡೆದ ಸಮುದಾಯಗಳಾದ ಪರಿಶಿಷ್ಟ ಜಾತಿಗಳು, ಹಿಂದುಳಿದ ವರ್ಗಗಳು, ಸಫಾಯಿ ಕರ್ಮಚಾರಿಗಳು ಮತ್ತು ಕುಶಲಕರ್ಮಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ವೇದಿಕೆಯನ್ನು ಒದಗಿಸುವುದು ಎಂದು ಹೇಳಿದರು.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 2022 ರಿಂದ ಶಿಲ್ಪ ಸಮಾಗಮ ಮೇಳಗಳನ್ನು ನಡೆಸುತ್ತಾ ಬಂದಿದ್ದು, ಇಲ್ಲಿಯವರೆಗೆ, ಇಂತಹ 11 ಮೇಳಗಳ ಮೂಲಕ ಪರಿಶಿಷ್ಟ ಜಾತಿಗಳು, ಇತರೆ ಹಿಂದುಳಿದ ವರ್ಗಗಳು ಮತ್ತು ಸಫಾಯಿ ಕರ್ಮಚಾರಿಗಳ 825 ಕುಶಲಕರ್ಮಿಗಳು ಪ್ರಯೋಜನ ಪಡೆದಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರುವ ಶಿಲ್ಪ ಸಮಾಗಮ ಮೇಳವು, ಭುವನೇಶ್ವರದ ನಂತರ 2025-26ರ ವರ್ಷದ ಎರಡನೇ ಮೇಳವಾಗಿದೆ. ಇದರ ಜೊತೆಗೆ, ಈ ವರ್ಷ ನವ ದೆಹಲಿ, ಅಹಮದಾಬಾದ್ ಮತ್ತು ಗುವಾಹಟಿಯಲ್ಲಿ ಇನ್ನೂ ಮೂರು ಮೇಳಗಳನ್ನು ಆಯೋಜಿಸಲು ಪ್ರಸ್ತಾಪಿಸಲಾಗಿದೆ. ಇವುಗಳ ಜೊತೆಗೆ, ಸಚಿವಾಲಯ ಮತ್ತು ಮೂರು ರಾಷ್ಟ್ರೀಯ ನಿಗಮಗಳು ಐಐಟಿಎಫ಼್-2025 ಮತ್ತು ಸೂರಜ್‌ಕುಂಡ್ ಮೇಳ, ಫರಿದಾಬಾದ್‌ನಂತಹ ಅಂತಾರಾಷ್ಟ್ರೀಯ ಮೇಳಗಳಲ್ಲೂ ಭಾಗವಹಿಸಲಿವೆ ಎಂದು ಮಾಹಿತಿ ನೀಡಿದರು.
ಸಚಿವಾಲಯದ ಉನ್ನತ ರಾಷ್ಟ್ರೀಯ ನಿಗಮಗಳ ಫಲಾನುಭವಿಗಳಿಗೆ ತಮ್ಮ ಕರಕುಶಲ/ಕೈಮಗ್ಗ ಉತ್ಪನ್ನಗಳನ್ನು ಪ್ರದರ್ಶಿಸಲು ಆಹ್ವಾನಿಸಲಾಗಿದೆ. ಒಟ್ಟು 100 ಮಳಿಗೆಗಳು ಪ್ರದರ್ಶನಕ್ಕಿದ್ದು, ಅದರಲ್ಲಿ 75-80 ಮಳಿಗೆಗಳನ್ನು ಫಲಾನುಭವಿಗಳಿಗೆ ಹಂಚಲಾಗಿದ್ದು, ಇವುಗಳ ಜೊತೆಗೆ, ಸಂದರ್ಶಕರಿಗೆ ಸಾಂಪ್ರದಾಯಿಕ ಆಹಾರವನ್ನು ಒದಗಿಸುವ ಆಹಾರ ಮಳಿಗೆಗಳೂ ಸೇರಿದೆ. ಬೆಂಗಳೂರಿನ ಶಿಲ್ಪ ಸಮಾಗಮ ಮೇಳವು ಉತ್ತರ ಪ್ರದೇಶ, ಕೇರಳ, ದೆಹಲಿ, ಹರಿಯಾಣ, ರಾಜಸ್ಥಾನ, ಬಿಹಾರ, ಕರ್ನಾಟಕ, ಪುದುಚೇರಿ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಅಸ್ಸಾಂ ಸೇರಿದಂತೆ ಮುಂತಾದ ರಾಜ್ಯಗಳನ್ನು ಪ್ರತಿನಿಧಿಸುವ ಕುಶಲಕರ್ಮಿಗಳ ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದೆ. ಹಾಗೆಯೇ ಈ ಶಿಲ್ಪ ಸಮಾಗಮ ಮೇಳವು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ವಿವಿಧ ಯೋಜನೆಗಳ ಪ್ರಚಾರ ಮತ್ತು ಪ್ರಸಿದ್ಧಿಗೆ, ಹಾಗೆಯೇ ಮೂರು ರಾಷ್ಟ್ರೀಯ ನಿಗಮಗಳ (ಎನ್ ಎಸ್ ಎಫ್ ಡಿ ಸಿ, ಎನ್ ಎಸ್ ಕೆ ಎಫ್ ಡಿ ಸಿ & ಎನ್ ಬಿ ಸಿ ಎಫ್ ಡಿ ಸಿ) ಯೋಜನೆಗಳ ಬಗ್ಗೆ ಮಾಹಿತಿಯನ್ನು ಸಾರ್ವನಿಕರಿಗೆ ನೀಡಲು ವೇದಿಕೆ ಕಲ್ಪಿಸಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರು TULIP ಉಪಕ್ರಮದ ಕುರಿತು ಮಾತನಾಡಿ, ಒಂದು ನೂತನ ಉಪಕ್ರಮವಾಗಿದ್ದು, ನಿರ್ದಿಷ್ಟ ಗುಂಪುಗಳ ಉತ್ಕೃಷ್ಟ ಉತ್ಪನ್ನಗಳನ್ನು ಭಾರತ ಮತ್ತು ವಿದೇಶಗಳಲ್ಲಿನ ಸಾರ್ವಜನಿಕರಿಗೆ ವಿವಿಧ ಇ-ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟ ಮಾಡುವ ಉದ್ದೇಶ ಹೊಂದಿದೆ. ಈ ಉತ್ಪನ್ನಗಳಿಗೆ ಸಾಂಪ್ರದಾಯಿಕ ಕುಶಲಕರ್ಮಿಗಳ ಉನ್ನತಿ ಜೀವನೋಪಾಯ ಕಾರ್ಯಕ್ರಮ (TULIP) ಎಂಬ ಬ್ರಾಂಡ್ ಹೆಸರು ನೀಡಲಾಗಿದೆ. ‘TULIP’ ಬ್ರಾಂಡ್ ನಿರ್ದಿಷ್ಟ ಗುಂಪಿನ ಕುಶಲಕರ್ಮಿಗಳಿಗೆ ತಮ್ಮ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ವೇದಿಕೆಯನ್ನು ಒದಗಿಸುತ್ತದೆ. ಈ ಉಪಕ್ರಮವು ಈ ಗುಂಪುಗಳಿಗೆ ಆರ್ಥಿಕವಾಗಿ ಸಬಲೀಕರಣ ನೀಡುವುದು ಮಾತ್ರವಲ್ಲದೆ, ಸಾಂಪ್ರದಾಯಿಕ ಕಲೆಗಳನ್ನು ಸಂರಕ್ಷಿಸುವುದು ಮತ್ತು ಅದರ ಮಹತ್ವವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಸರ್ಕಾರದ ಜನಪರ ಯೋಜನೆಗಳ ಕುರಿತು ಮಾತನಾಡಿ, ಕೇಂದ್ರ ಸರ್ಕಾರವು ಹಲವಾರು ಹಿಂದುಳಿದ ಹಾಗೂ ಬಡವರ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸಿದ್ದು ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಮುದ್ರಾ ಸಾಲ ಯೋಜನೆ, ಪ್ರಧಾನಮಂತ್ರಿ ಉಜ್ವಲ ಯೋಜನೆಯಂತಹ ಹಲವಾರು ಯೋಜನೆಗಳು ಜನರ ಜೀವನ ಮಟ್ಟವನ್ನು ಸುಧಾರಿಸಿದೆ. ಪ್ರಸ್ತುತ ಭಾರತವು ಆರ್ಥಿಕತೆಯಲ್ಲಿ 4ನೇ ಸ್ಥಾನದಲ್ಲಿದ್ದು, ಮುಂಬರುವ ದಿನಗಳಲ್ಲಿ 1 ಸ್ಥಾನಕ್ಕೆ ಜಿಗಿಯಲಿದೆ, ಹೊಸ ಉದ್ಯಮಗಳು, ಅಭಿವೃದ್ಧಿಯೊಂದಿಗೆ ವಿಕಸಿತ ಭಾರತವಾಗಲಿದೆ ಎಂದು ಅವರು ಹೇಳಿದರು.
ಶಿಲ್ಪ ಸಮಾಗಮ ಮೇಳದಲ್ಲಿ ಭಾಗವಹಿಸುವ ಫಲಾನುಭವಿಗಳಿಗೆ ಉಚಿತ ಮಳಿಗೆಗಳು ಮತ್ತು ಪ್ರಯಾಣ ವೆಚ್ಚ, ದೈನಂದಿನ ಭತ್ಯೆ, ಸರಕುಗಳ ಸಾಗಣೆ, ಊಟ ಮತ್ತು ರಾತ್ರಿಯ ಊಟದಂತಹ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.












