ಸಿದ್ದರಾಮಯ್ಯನವರೆ, ನೀವೀಗೆ ಮಾಡಬಾರದಿತ್ತು.

ಮೊದಲನೇಯದಾಗಿ ಅಲೆಮಾರಿ ಸಮುದಾಯಗಳನ್ನು ಮಾದಿಗ ಸಂಬಂಧಿತ ಅಥವಾ ಹೊಲೆಯ ಸಂಬಂಧಿತ ಜಾತಿಗಳ ಪ್ರವರ್ಗದಲ್ಲಿ ಸೇರಿಸಬೇಡಿ ಎಂದು ಹಕ್ಕೊತ್ತಾಯ ಮಾಡಿದೆವು. ಏಕೆಂದರೆ ಅವರು ಅಲ್ಲಿ ಸ್ಪರ್ಧಿಸಿ ಏನನ್ನೂ ಪಡೆದುಕೊಳ್ಳಲಾರರು ಎಂದು..

ಈಗ ಸರ್ಕಾರ ಅವರನ್ನು ಸ್ಪೃಶ್ಯ ಜಾತಿಗಳ ವರ್ಷದಲ್ಲಿ ಸೇರಿಸಿಬಿಟ್ಟಿದೆ. ಅಲ್ಲಿ ಅವರು ಉಸಿರೆತ್ತಲೂ ಸಹ ಸಾಧ್ಯವಿಲ್ಲದ ಪರಿಸ್ಥಿತಿ ಎದುರಾಗಿದೆ. ಆ ಮೂಲಕ ಸಿದ್ದರಾಮಯ್ಯನವರ ಸರ್ಕಾರ ಅಲೆಮಾರಿಗಳಿಗೆ ಚಾರಿತ್ರಿಕ ದ್ರೋಹವೆಸಗಿದೆ.

ಇನ್ನು ಹೆಚ್ಚು ಮುಂದುವರೆದಿರುವ ಸ್ಪೃಶ್ಯ ಸಮುದಾಯಗಳಿಗೆ 5%, ಮಧ್ಯಮ ಮುಂದುವರಿದ ಹೊಲೆಯ ಸಂಬಂಧಿತ ಸಮುದಾಯಗಳಿಗೆ 6% ಹಾಗೂ 35 ವರ್ಷಗಳಿಂದ ನಿರಂತರವಾಗಿ ಹೋರಾಡಿದ ಹೆಚ್ಚು ಹಿಂದುಳಿದ ಮಾದಿಗ ಸಂಬಂಧಿತ ಸಮುದಾಯಗಳಿಗೂ ಕೇವಲ‌ 6% ನೀಡಿರುವುದು ಸಾಮಾಜಿಕ ನ್ಯಾಯವಲ್ಲ, ಅನ್ಯಾಯ.

ನ್ಯಾ.ದಾಸ್ ರವರ ವರದಿ ಮತ್ತು ಶಿಫಾರಸ್ಸು ವೈಜ್ಞಾನಿಕವಾಗಿತ್ತು. ಅದು ಸಂಬಂಧಿತ ಜಾತಿಗಳ ಗುಂಪು ಮಾಡದೇ ಹಿಂದುಳಿದಿರುವಿಕೆ ಆಧಾರದಲ್ಲಿ 5 ಗುಂಪು ಮಾಡಿ ಮೀಸಲಾತಿ ಹಂಚಿತ್ತು. ಅಲೆಮಾರಿಗಳಿಗೆ ಪ್ರತ್ಯೇಕ ಗುಂಪು ಮಾಡಿ 1% ಮೀಸಲಾತಿಯ ಜೊತೆಗೆ ಮೊದಲ ಆದ್ಯತೆ ನೀಡಲಾಗಿತ್ತು. ಆದರೆ ಈಗ ಅವರಿಗೆ ಕೊನೆಯ ಆದ್ಯತೆ.

ಇಂದು ದೇವರಾಜ ಅರಸುರವರ ಜನ್ಮದಿನ. ಜನರು ಸಾಮಾಜಿಕ ನ್ಯಾಯದ ಜೊತೆಗೆ ಅವರನ್ನು ಗುರುತಿಸುತ್ತಾರೆ. ಹಿಂದುಳಿದ ವರ್ಗಗಳಿಗೆ ರಾಜಕೀಯ ದನಿ ಕೊಟ್ಟ ಹಿರಿಮೆ ಅವರದು. ಅವರ ಬಗ್ಗೆ ಇಂದು ಸಿದ್ದರಾಮಯ್ಯನವರು ಲೇಖನ ಬರೆದಿದ್ದಾರೆ. ಆದರೆ ನಿನ್ನೆಯ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಬಲಾಢ್ಯರ ಒತ್ತಡಕ್ಕೆ ಮಣಿದು ಸಾಮಾಜಿಕ ಅನ್ಯಾಯವೆಸಗಿದ್ದಾರೆ. ಮತ್ತೊಬ್ಬ ದೇವರಾಜ ಅರಸು ಆಗುವುದನ್ನು ತಮ್ಮ ಕೈಯಾರೆ ಹಾಳು ಮಾಡಿಕೊಂಡಿದ್ದಾರೆ.

ಈಗಲೂ ಅವರು ಎಚ್ಚೆತ್ತುಕೊಂಡು ಅಲೆಮಾರಿಗಳಿಗೆ ಪ್ರತ್ಯೇಕ ಗುಂಪು ಮಾಡಿ ಸ್ಪೃಶ್ಯ ಸಮುದಾಯಕ್ಕೆ ಕೊಟ್ಟ ಮೀಸಲಾತಿಯಲ್ಲಿ ಹಂಚಿಕೆ ಮಾಡುವ ಮೂಲಕ ತಮ್ಮ ಪ್ರಮಾದವನ್ನು ಸರಿಪಡಿಸಿಕೊಳ್ಳಬಹುದು. ಇಲ್ಲದಿದ್ದರೆ ಈ ಕಪ್ಪು ಚುಕ್ಕೆ ನಿಮ್ಮನ್ನು ಅಂಟಿಕೊಳ್ಳುತ್ತದೆ.

ನಮ್ಮ ಹಳ್ಳಿ ಕಡೆ ಒಂದು ಗಾದೆ ಮಾತಿದೆ. “ಮಾಡೋಗಂಟ ಮಾಡಿ, ಮಾರ್ನಾಮಿಯಲ್ಲಿ ಚೇ ಅನಿಸಿಕೊಂಡರು” ಅಂತ. ಇಷ್ಟು ದಿನ ತುಳಿತಕ್ಕೊಳಗಾದ ಸಮುದಾಯಗಳ ಪರ ಮಾತಾಡಿದ ಸಿದ್ದರಾಮಯ್ಯನವರು ಈಗ ಅವರಿಗೆ ದ್ರೋಹವೆಸಗಿದ್ದಾರೆ..

ಇನ್ನು ನಾವೆಲ್ಲರೂ ಅಲೆಮಾರಿಗಳ ಪರ ಹೋರಾಟ ಮುಂದುವರೆಸುತ್ತೇವೆ. ಬೀದಿ ಹೋರಾಟದ ಜೊತೆಗೆ ಕಾನೂನು ಹೋರಾಟದ ಸಾಧ್ಯತೆಯನ್ನು ಪ್ರಯತ್ನಿಸುತ್ತೇವೆ. ಇಲ್ಲದಿದ್ದಲ್ಲಿ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ.

ರಣರಂಗದಲ್ಲಿ ಎಲ್ಲಾ ಯುದ್ಧಗಳು ಗೆಲ್ಲುವುದಕ್ಕಾಗಿಯೇ ನಡೆಯುವುದಿಲ್ಲ. ಅನ್ಯಾಯದ ವಿರುದ್ಧ ಯುದ್ಧಭೂಮಿಯಲ್ಲಿ ನಮ್ಮವರು ಹೋರಾಡಿದರು ಎಂಬುದನ್ನು ಸಾರುವುದಕ್ಕಾಗಿಯಾದರೂ ನಾವು ಈ ಹೋರಾಟ ಮಾಡಲೇಬೇಕಿದೆ. ದಯವಿಟ್ಟು ಎಲ್ಲಾ ಸಮುದಾಯಗಳ ಪ್ರಜ್ಞಾವಂತರೂ ಈಗ ಅಲೆಮಾರಿಗಳ ಪರ ದನಿ ಎಂದು ಮನವಿ.
– ಮುತ್ತುರಾಜು