ಭಾರತವು ವಿಶ್ವದ ಆಹಾರ ಬುಟ್ಟಿಯಾಗಲಿದೆ: ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಭಾರತವನ್ನು ವಿಶ್ವದ ಆಹಾರ ಬುಟ್ಟಿಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಿದ್ದಾರೆ. ದೇಶದ 145 ಕೋಟಿ ನಾಗರಿಕರಿಗೆ ಆಹಾರವನ್ನು ನೀಡುವುದರ ಜೊತೆಗೆ, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳು, ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆಗಳು), ರೈತರು ಮತ್ತು ವಿಜ್ಞಾನಿಗಳೊಂದಿಗೆ ಸಹಯೋಗದೊಂದಿಗೆ ಈ ಗುರಿಯನ್ನು ಸಾಧಿಸಲು ಸಮಗ್ರ ಮಾರ್ಗಸೂಚಿಯನ್ನು ರೂಪಿಸುತ್ತದೆ ಎಂದು ಅವರು ಒತ್ತಿ ಹೇಳಿದರು.

 

ಬೆಂಗಳೂರಿನ ಐಸಿಎಆರ್-ಐಐಎಚ್‌ಆರ್ ಆವರಣದಲ್ಲಿ ಇಂದು ರೈತರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, 2047ರ ವೇಳೆಗೆ ವಿಕಸಿತ ಭಾರತ (ಅಭಿವೃದ್ಧಿ ಹೊಂದಿದ ಭಾರತ) ಎಂಬ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ ಈ ಉಪಕ್ರಮವನ್ನು ರೂಪಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಈ ಅಭಿಯಾನದ ಧ್ಯೇಯವಾಕ್ಯ “ವಿಕಸಿತ ಕೃಷಿ ಭಾರತ”. ಈ ಕಾರ್ಯಕ್ರಮದ ಭಾಗವಾಗಿ, “ಪ್ರಯೋಗಾಲಯದಿಂದ ಭೂಮಿಗೆ” ಉಪಕ್ರಮವನ್ನು ಪ್ರಾರಂಭಿಸಲಾಗಿದ್ದು, ವೈಜ್ಞಾನಿಕ ಜ್ಞಾನ ಮತ್ತು ಬೆಂಬಲವನ್ನು ಒದಗಿಸಲು ದೇಶಾದ್ಯಂತ 16,000 ಕ್ಕೂ ಹೆಚ್ಚು ವಿಜ್ಞಾನಿಗಳು ರೈತರೊಂದಿಗೆ  ತೊಡಗಿಸಿಕೊಂಡಿದ್ದಾರೆ. ಕಳೆದ ಹತ್ತು ದಿನಗಳಲ್ಲಿ, 1,896 ತಂಡಗಳು 8,188 ಹಳ್ಳಿಗಳಲ್ಲಿ ಸುಮಾರು 9 ಲಕ್ಷ ರೈತರೊಂದಿಗೆ ಸಂವಾದ ನಡೆಸಿವೆ.

ಕರ್ನಾಟಕದಲ್ಲಿಯೇ, ಕೃಷಿ ಮತ್ತು ಸಂಬಂಧಿತ ಇಲಾಖೆಗಳ ವಿಜ್ಞಾನಿಗಳು ಮತ್ತು ಅಧಿಕಾರಿಗಳನ್ನು ಒಳಗೊಂಡ 70ಕ್ಕೂ ಹೆಚ್ಚು ಅಂತರಶಿಸ್ತೀಯ ತಂಡಗಳು ಪ್ರತಿದಿನ ತೋಟಗಳಿಗೆ ಭೇಟಿ ನೀಡುತ್ತಿವೆ. ಅವಶ್ಯಕತೆ ಆಧಾರಿತ, ಸಮಸ್ಯೆ ಆಧಾರಿತ ಕೃಷಿ ಸಂಶೋಧನಾ ಕಾರ್ಯಕ್ರಮಗಳನ್ನು ರೂಪಿಸಲು ಈ ತಂಡಗಳು ರೈತರಿಂದ ನೇರವಾಗಿ ಹಿಮ್ಮಾಹಿತಿಯನ್ನು ಪಡೆದುಕೊಂಡು ದಾಖಲಿಸುತ್ತಿವೆ. ಇಲ್ಲಿಯವರೆಗೆ, 639 ತಂಡಗಳು 2,495 ಹಳ್ಳಿಗಳಿಗೆ ಭೇಟಿ ನೀಡಿ, 2,77,264 ರೈತರೊಂದಿಗೆ ತೊಡಗಿಸಿಕೊಂಡಿವೆ.

“ಒಂದು ರಾಷ್ಟ್ರ, ಒಂದು ಕೃಷಿ, ಒಂದು ತಂಡ” ಎಂಬ ಪರಿಕಲ್ಪನೆಯನ್ನು ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಹೊಂದಿದೆ ಎಂದು ಶ್ರೀ ಚೌಹಾಣ್ ಹೇಳಿದರು. ರೈತರು ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ (ಎಂ.ಐ.ಎಸ್.) ಅಡಿಯಲ್ಲಿ ಕೇಂದ್ರ ಸರ್ಕಾರವು ಸಾರಿಗೆ ವೆಚ್ಚವನ್ನು ಭರಿಸುತ್ತದೆ ಮತ್ತು ಆ ಮೂಲಕ ಮಾರುಕಟ್ಟೆಗಳಿಗೆ ಪ್ರವೇಶವನ್ನು ಬೆಂಬಲಿಸುತ್ತದೆ. ಕಲಬೆರಕೆ ಕೀಟನಾಶಕಗಳ ಮಾರಾಟದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಎಚ್ಚರಿಕೆಯನ್ನು ನೀಡಿದ ಅವರು, ಅಂತಹ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಿದರು.

ಈ ಕಾರ್ಯಕ್ರಮದ ಸಂದರ್ಭದಲ್ಲಿ, ಕರ್ನಾಟಕದ ಏಳು ಮಂದಿ ಅತ್ಯುತ್ತಮ ರೈತರಾದ ರತ್ನಮ್ಮ, ಗೋಪಾಲಗೌಡ, ಪದ್ಮಿನಿ ಗೌಡ, ಎಚ್.ಕೆ. ರಘು, ಮಂಗಳಮ್ಮ, ಮಹೇಶ್ ಎಚ್.ಎನ್. ಮತ್ತು ಶ್ರೀನಿವಾಸ್ ಅವರನ್ನು ಕೃಷಿಗೆ ನೀಡಿದ ಗಣನೀಯ ಕೊಡುಗೆಗಳಿಗಾಗಿ ಸಚಿವರು ಸನ್ಮಾನಿಸಿದರು.